ಮಧ್ಯಪ್ರದೇಶ-ಛತ್ತೀಸ್‌ಗಡ ಕಾಂಗ್ರೆಸ್ ತಂತ್ರಗಳು ಬದಲಾಗಬೇಕಿದೆಯೇ?

ಮಧ್ಯಪ್ರದೇಶ ಲೋಕಸಭಾ ಚುನಾವಣೆಗೆ ಒಂದೆಡೆ ಬಿಜೆಪಿ ತಯಾರಿ ಜೋರಾಗಿರುವಾಗಲೇ, ವಿಧಾನಸಭೆ ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್ ತನ್ನೆದುರಿನ ಕಠಿಣ ಹಾದಿಯ ಬಗ್ಗೆ ಕಂಗಾಲಾಗಿರುವಂತಿದೆ. ಕಾಂಗ್ರೆಸ್ ತಂತ್ರಗಳು ಕೂಡ ಗೆಲುವಿಗೆ ಪೂರಕವಾಗಿಲ್ಲದ ಹಿನ್ನೆಲೆಯಲ್ಲಿ ಅದು ಪೂರ್ತಿಯಾಗಿ ತನ್ನ ರಣತಂತ್ರಗಳನ್ನು ಬದಲಿಸಿಕೊಳ್ಳಬೇಕಾದ ಸವಾಲನ್ನೂ ಎದುರಿಸುತ್ತಿದೆ. ಇನ್ನೊಂದೆಡೆ, ಛತ್ತೀಸ್‌ಗಡದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಸಜ್ಜಾಗುವ ಹಂತದಲ್ಲೇ ಆತ್ಮವಿಶ್ವಾಸ ಕಳೆದುಕೊಂಡಂತಾಗಿದೆ.

Update: 2024-01-09 05:53 GMT

Photo: PTI 

ಸರಣಿ- 7

ಮಧ್ಯಪ್ರದೇಶದ ಜನಸಂಖ್ಯೆ 8.77 ಕೋಟಿ. ಒಟ್ಟು ಲೋಕಸಭಾ ಕ್ಷೇತ್ರಗಳು 29.

2014ರ ಚುನಾವಣೆಯಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಗಳಿಸಿದ್ದು 2 ಸ್ಥಾನಗಳು. 2019ರ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 1 ಸ್ಥಾನದಲ್ಲಿ ಮಾತ್ರ ಜಯ ಗಳಿಸಿತ್ತು.

ಈಗ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಯೂ ಭಾರೀ ಬಹುಮತದ ಜಯ ದಾಖಲಿಸಿರುವ ಬಿಜೆಪಿ, ಲೋಕಸಭೆ ಚುನಾವಣೆಗೆ ಹುಮ್ಮಸ್ಸಿನ ತಯಾರಿ ನಡೆಸಿದೆ.

ವಿಧಾನಸಭೆ ಚುನಾವಣೆಯಲ್ಲಿನ ಬಿಜೆಪಿ ಪ್ರಚಂಡ ಗೆಲುವಿಗೆ 5 ಕಾರಣಗಳು ಮುಖ್ಯವೆಂದು ವಿಶ್ಲೇಷಿಸಲಾಗಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವನ್ನು ಒಮ್ಮೆ ಗಮನಿಸಬಹುದು.

ಮೊದಲನೆಯದಾಗಿ, ಕಲ್ಯಾಣ ಕಾರ್ಯಕ್ರಮಗಳು ಎರಡನೆಯದಾಗಿ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ತೋರಿಸಿದ ಚಾಣಾಕ್ಷತನ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚುನಾವಣೆಗೆ 3 ತಿಂಗಳು ಮೊದಲೇ ಪ್ರಕಟಿಸಲಾಗಿತ್ತು.

ನಿರ್ಣಾಯಕ 39 ಕ್ಷೇತ್ರಗಳ ಪಟ್ಟಿಯನ್ನು ಕಡೆಯಲ್ಲಿ ಪ್ರಕಟಿಸಿ, 24ರಲ್ಲಿ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.

ಮೂರನೆಯದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೆ, ಸಾಮೂಹಿಕ ನಾಯಕತ್ವ ಎಂದು ಹೇಳಿಕೊಂಡದ್ದು. ಕೇಂದ್ರ ಮಂತ್ರಿಗಳೂ ಸೇರಿದಂತೆ ಹಲವಾರು ಪ್ರಮುಖ ರಾಷ್ಟ್ರೀಯ ನಾಯಕರನ್ನು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ, ಸಿಎಂ ಆಗಬಹುದಾದ ಹಲವು ಮುಖಗಳನ್ನು ಬಿಂಬಿಸಿದ ತಂತ್ರ ಪರಿಣಾಮ ಬೀರಿತು.

ನಾಲ್ಕನೆಯದಾಗಿ, ಬುಡಕಟ್ಟು ಮತ್ತು ದಲಿತ ಮತಗಳು ಬಿಜೆಪಿಯ ಬಲವಾದವು.

ಐದನೆಯದಾಗಿ, ಚುನಾವಣೆಯನ್ನು ಅದು ನಿಭಾಯಿಸಿದ ರೀತಿ. ಬೂತ್ ಮಟ್ಟದಲ್ಲಿ ಅದು ಪಕ್ಷದ ಬಲವನ್ನು ಖಾತ್ರಿಪಡಿಸಿಕೊಂಡಿತ್ತು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಇಂಥದೇ ಬಲ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ.

ಹಿಂದಿ ಭಾಷಿಕ ರಾಜ್ಯಗಳ ಮನಃಸ್ಥಿತಿ ಬಿಜೆಪಿಯ ಬಗೆಗೇ ಒಲವು ಹೊಂದಿರುವುದೂ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪಷ್ಟವಾಗಿದ್ದು, ಲೋಕಸಭೆ ಚುನಾವಣೆಯಲ್ಲೂ ಅದು ಮುಂದುವರಿಯಲಿದೆ ಎಂಬಂತೆ ಕಾಣಿಸುತ್ತದೆ.

ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲಿ ‘ಕಾರವಾನ್’ ಮಾಡಿದ ವಿಶ್ಲೇಷಣೆಯೊಂದರಲ್ಲಿನ ಕೆಲವು ಮಾತುಗಳು ಕಾಂಗ್ರೆಸ್ ಸ್ಥಿತಿ ಮಧ್ಯಪ್ರದೇಶದಲ್ಲಿ ಏನು ಎಂಬುದನ್ನು ಹೇಳುತ್ತವೆ. ಬಿಜೆಪಿ ಯಶಸ್ಸಿಗೆ ಕಾಂಗ್ರೆಸ್‌ನ ವೈಫಲ್ಯ, ಅದರ ಹೊಂದಾಣಿಕೆಗಳು ಮತ್ತು ಅದರ ಬೂಟಾಟಿಕೆಗಳು ಕಾರಣ ಎನ್ನುವ ಆ ವಿಶ್ಲೇಷಣೆ, ತನ್ನ ಸತತ ಸೋಲಿನಿಂದ ಪಕ್ಷ ಏನಾದರೂ ಕಲಿತಿದೆಯೇ? ಎಂದು ಕೇಳಿದೆ.

ಪಕ್ಷ ಒಂದು ಕಾಲದ ಘಟಾನುಘಟಿ ನಾಯಕರ ನಂತರ ಬದಲಾವಣೆಗೆ ಅನುಗುಣವಾದ ನಾಯಕತ್ವವನ್ನು ಪಡೆಯದೇ ಹೋದದ್ದರ ಕಡೆ ಅದು ಬೆರಳು ಮಾಡಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ವೈಫಲ್ಯ ಬಹುಶಃ ಅದರ ರಾಷ್ಟ್ರೀಯ ವೈಫಲ್ಯದ್ದೇ ಕಥೆಯನ್ನು ಹೇಳುತ್ತದೆ. ತನ್ನ ಶಕ್ತಿಯನ್ನು ಬೆಳೆಸಿಕೊಳ್ಳದ ಸ್ಥಿತಿಯಿಂದ ಶುರುವಾಗುವ ಅದರ ವೈಫಲ್ಯ, ಬಿಜೆಪಿಯ ಆಲೋಚನಾ ವಿಧಾನಕ್ಕೆ ಶರಣಾಗುವುದರೊಂದಿಗೆ ಕೊನೆಗೊಳ್ಳುತ್ತದೆ ಎಂದು ಆ ವಿಶ್ಲೇಷಣೆಯಲ್ಲಿ ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಬಿಜೆಪಿ ತೆಗೆದುಕೊಂಡ ನಾಯಕತ್ವದ ಕುರಿತ ತೀರ್ಮಾನಗಳು ಕೂಡ ಅದರ ಲೋಕಸಭಾ ರಣತಂತ್ರದ ಭಾಗವಾಗಿವೆ ಎಂಬುದನ್ನು ಗಮನಿಸಬೇಕು.

ಮಧ್ಯಪ್ರದೇಶದಲ್ಲಿ ಯಾದವರೇ ಬಹುಸಂಖ್ಯಾತರು. ಇದನ್ನು ಗಮನದಲ್ಲಿಟ್ಟುಕೊಂಡು ನೂತನ ಸಿಎಂ ಆಯ್ಕೆ ಮಾಡುವಾಗಲೂ ಆ ಸಮುದಾಯದ ನಾಯಕ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಗೆಯೇ ದಲಿತ ಹಾಗೂ ಬ್ರಾಹ್ಮಣ ಸಮುದಾಯದ ಇಬ್ಬರು ನಾಯಕರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡಲಾಗಿದೆ.

ಈ ಮೂಲಕ ಮಧ್ಯ ಪ್ರದೇಶದ ಜಾತಿ ಸಮೀಕರಣ ಹಾಗೂ ಬಿಜೆಪಿ ನಾಯಕರ ಪ್ರಾಬಲ್ಯದ ಆಧಾರದ ಮೇಲೆ ಬಿಜೆಪಿ ಅಧಿಕಾರ ಹಂಚಿಕೆ ಮಾಡಲಾಗಿದೆ.

ಈ ನಡೆ, ಜಾತಿ ಸಮೀಕರಣದ ಕಾರಣಕ್ಕಾಗಿ ಮಾತ್ರವಲ್ಲ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲೂ ಮಹತ್ವ ಪಡೆದುಕೊಂಡಿದೆ.

ಹಿಂದಿ ಬೆಲ್ಟ್‌ನ ರಾಜ್ಯಗಳಲ್ಲಿ ಯಾದವ ಸಮುದಾಯದ ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ, ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಹಾಗೂ ಬಿಹಾರದ ತೇಜಸ್ವಿ ಯಾದವ್‌ಗೂ ತಿರುಗೇಟು ನೀಡಲು ಮೋಹನ್ ಯಾದವ್ ಅವರನ್ನು ಸಿಎಂ ಮಾಡಿದೆ ಎಂದೇ ಹೇಳಲಾಗುತ್ತಿದೆ.

ಜಾತಿ ಜನಗಣತಿ ವಿಷಯವನ್ನು ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಪ್ರತಿಪಕ್ಷ ಮೈತ್ರಿಕೂಟ ಪ್ರಬಲ ಅಸ್ತ್ರವನ್ನಾಗಿಸುವ ಸಾಧ್ಯತೆ ಇರುವುದರಿಂದ, ಆ ಕಾರಣದಿಂದಲೂ ಹಿಂದುಳಿದ ವರ್ಗಕ್ಕೆ ಸಿಎಂ ಪಟ್ಟ ನೀಡಿರುವುದು ಸ್ಪಷ್ಟವಾಗಿದೆ.

ಬಿಜೆಪಿಯ ಈ ತಂತ್ರಕ್ಕೆ ಪ್ರತಿಯಾಗಿ ಎಂಬಂತೆ ಕಾಂಗ್ರೆಸ್ ಕೂಡ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿನ ಕಳಪೆ ಸಾಧನೆ ಬಳಿಕ ಇದೀಗ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಿದೆ.

ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಹಿಂದುಳಿದ ವರ್ಗಗಳ ನಾಯಕ ಜಿತು ಪಟ್ವಾರಿ ಅವರನ್ನು ನೇಮಕ ಮಾಡಲಾಗಿದೆ.

ಇದಲ್ಲದೆ ಬುಡಕಟ್ಟು ಸಮುದಾಯದ ಉಮಂಗ್ ಸಿಂಘರ್ ಅವರನ್ನು ಸಿಎಲ್‌ಪಿ ನಾಯಕರನ್ನಾಗಿ ಮತ್ತು ಬ್ರಾಹ್ಮಣ ಸಮುದಾಯದ ಹೇಮಂತ್ ಕಟಾರೆ ಅವರನ್ನು ಮಧ್ಯಪ್ರದೇಶದ ಉಪ ನಾಯಕರನ್ನಾಗಿ ನೇಮಿಸಲಾಗಿದೆ.

ಆದರೆ ಕಾಂಗ್ರೆಸ್ ತಂತ್ರಗಾರಿಕೆ ಎಷ್ಟು ಪರಿಣಾಮ ಬೀರಲಿದೆಯೋ ಗೊತ್ತಿಲ್ಲ.

ಇಂಡಿಯಾ ಮೈತ್ರಿಕೂಟ ಜಾತಿ ಜನಗಣತಿ ವಿಚಾರವನ್ನು ಮುಂದೆ ಮಾಡುವುದು ಮಧ್ಯಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಫಲ ನೀಡಬಹುದು ಎಂಬುದು ಮತ್ತೊಂದು ಪ್ರಶ್ನೆ.ವಿಶ್ಲೇಷಣೆಗಳ ಪ್ರಕಾರ, ಯುಪಿ ಮತ್ತು ಬಿಹಾರದಲ್ಲಿ ಜಾತಿ ಗಣತಿ ಪರಿಣಾಮ ಬೀರುವ ರೀತಿಯಲ್ಲೇ ಮಧ್ಯಪ್ರದೇಶದಲ್ಲಿ ಬೀರಲಾರದು.

ಅಲ್ಲಿನ ಒಬಿಸಿ ಸಮುದಾಯ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷದಲ್ಲಿನ ಒಬಿಸಿ ಸಮುದಾಯದ ನಾಯಕರೇ ಕೈಗೆತ್ತಿಕೊಳ್ಳಬಹುದಾದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು ಮಾತ್ರವೇ ಕೊಂಚ ಪರಿಣಾಮ ಬೀರಬಲ್ಲವು.

ಕಾಂಗ್ರೆಸ್ ಪಾಲಿನ ಇನ್ನೊಂದು ದೊಡ್ಡ ತೊಡಕೆಂದರೆ, ಅದು ಮೇಲ್ಜಾತಿಯ ಬೆಂಬಲವನ್ನು ಗಳಿಸಲಾರದು. ಅದೇ ವೇಳೆ ಬಿಜೆಪಿಗೆ ಇರುವ ಒಬಿಸಿ ಬೆಂಬಲವನ್ನು ಒಡೆಯುವುದು ಕೂಡ ಅದಕ್ಕೆ ಸಾಧ್ಯವಿಲ್ಲ.

ಇನ್ನು ಛತ್ತೀಸ್‌ಗಡ ವಿಚಾರಕ್ಕೆ ಬರುವುದಾದರೆ,

ಇಲ್ಲಿನ ಜನಸಂಖ್ಯೆ 2.94 ಕೋಟಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.93ಕ್ಕೂ ಹೆಚ್ಚಿದ್ದಾರೆ.

2000ದಲ್ಲಿ ರಾಜ್ಯ ಸ್ಥಾಪನೆಯಾದಾಗಿ ನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿಗಳೇ ಇಲ್ಲಿನ ಪ್ರಮುಖ ಪಕ್ಷಗಳು. ಇತರ ರಾಜಕೀಯ ಪಕ್ಷಗಳೆಂದರೆ ಬಿಎಸ್‌ಪಿ ಮತ್ತು ಜೆಸಿಸಿ.

ಇಲ್ಲಿ 11 ಲೋಕಸಭಾ ಕ್ಷೇತ್ರಗಳಿವೆ. 2004ರ ಚುನಾವಣೆಯಿಂದಲೂ ಇಲ್ಲಿ ಬಿಜೆಪಿಯೇ ಪ್ರಾಬಲ್ಯ ಸಾಧಿಸಿಕೊಂಡು ಬಂದಿದೆ. ಲೋಕಸಭೆಯಲ್ಲಿ ಬಿಜೆಪಿಯೆದುರು ಕಾಂಗ್ರೆಸ್ ಗೆಲ್ಲುತ್ತ ಬಂದಿರುವುದು ಒಂದೊಂದೇ ಸ್ಥಾನ. 2019ರ ಚುನಾವಣೆಯಲ್ಲಿ ಮಾತ್ರವೇ 2 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿದ್ದ ತನ್ನ ಅಧಿಕಾರವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ.

ಛತ್ತೀಸ್‌ಗಡ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಆದಿವಾಸಿ ಸಮುದಾಯದ ಜನಸಂಖ್ಯೆಯೇ ಶೇ. 32ರಷ್ಟು ಇದೆ. 2023ರ ಚುನಾವಣೆಯಲ್ಲಿಯೂ ಬಿಜೆಪಿ ಆದಿವಾಸಿ ಪ್ರಾಬಲ್ಯದ ಸರ್ಗುಜಾ ಹಾಗೂ ಬಸ್ತಾರ್ ಜಿಲ್ಲೆಗಳ 26 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು ಛತ್ತೀಸ್‌ಗಡದ ಅಕ್ಕಪಕ್ಕದ ರಾಜ್ಯಗಳ ಬುಡಕಟ್ಟು ಸಮುದಾಯವನ್ನೂ ಸೇರಿಸಿಕೊಂಡರೆ ಅವರ ಸಂಖ್ಯಾ ಬಲ ದೊಡ್ಡದು.

ಇದೇ ಸಮುದಾಯದ ವಿಷ್ಣುದೇವ ಸಾಯ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆರಿಸುವ ಮೂಲಕ, ಆದಿವಾಸಿಗಳ ಮನಗೆಲ್ಲಲು ಬಿಜೆಪಿ ಬಲೆಬೀಸಿದೆ. ವಿಷ್ಣುದೇವ ಸಾಯ್ ಅವರನ್ನು ಸಿಎಂ ಮಾಡಿರುವುದರ ಹಿಂದೆ ಲೋಕಸಭಾ ಚುನಾವಣೆಯ ತಂತ್ರಗಾರಿಕೆಯೂ ಇದೆ. ಛತ್ತೀಸ್‌ಗಡ ಹಾಗೂ ಸುತ್ತಮುತ್ತಲ ರಾಜ್ಯಗಳಲ್ಲಿ ಆದಿವಾಸಿಗಳ ಪ್ರಾಬಲ್ಯದ ಒಟ್ಟು 75 ಲೋಕಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಆದಿವಾಸಿಗಳ ಬೆಂಬಲ ಗಳಿಸಲು ವಿಷ್ಣುದೇವ ಸಾಯ್ ಆಯ್ಕೆ ನೆರವಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿ ವಿಧಾನಸಭೆ ಸೋಲಿನ ಬಳಿಕ ರಾಜೀನಾಮೆ ಪರ್ವ ಮುಂದುವರಿದಿದೆ.

ಇಬ್ಬರ ಉಚ್ಚಾಟನೆ, ಕೆಲವರಿಗೆ ಶೋಕಾಸ್ ನೋಟಿಸ್ ನಡುವೆಯೇ ಕೆಲವರು ರಾಜೀನಾಮೆ ನೀಡಿದ್ದು, ಪಕ್ಷ ಲೋಕಸಭೆ ಚುನಾವಣೆಗೆ ಹಲವು ತೊಡಕುಗಳ ನಡುವೆಯೇ ಸಜ್ಜಾಗಬೇಕಿದೆ.

ತಾನು ಸೋತಿರುವ ರಾಜ್ಯದಲ್ಲಿ ಲೋಕಸಭೆ ಅಖಾಡದ ಕಡೆಗಿನ ಕಾಂಗ್ರೆಸ್ ಹಾದಿ ಸುಲಭವಂತೂ ಇಲ್ಲ ಎಂಬುದು ಸ್ಪಷ್ಟವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News