ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಕನಸು: ಪೂವಮ್ಮ

Dream of participating in Olympics: Poovamma

Update: 2023-11-29 07:17 GMT

ಮಂಗಳೂರು, ನ.29: ವಯಸ್ಸಿನ ಬಗ್ಗೆ ಆಲೋಚನೆ ಮಾಡುವುದಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಅಗತ್ಯ ತಯಾರಿಯೊಂದಿಗೆ ಎಲ್ಲವೂ ಸರಿಯಾದರೆ ಮುಂದಿನ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದು ತನ್ನ ಕನಸಾಗಿದೆ ಎಂದು ಏಶ್ಯನ್ ಗೇಮ್ಸ್ ಮತ್ತು ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಜಯಿಸಿದ್ದ ಓಟಗಾರ್ತಿ ಎಂ.ಆರ್.ಪೂವಮ್ಮ ತಮ್ಮ ಮನದ ಇಂಗಿತವನ್ನು ಬಿಚ್ಚಿಟ್ಟಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಪೊಲೀಸರ ಕ್ರೀಡಾಕೂಟಕ್ಕೆ ಚಾಲನೆ ನೀಡಲು ಆಗಮಿಸಿದ್ದ ಪೂವಮ್ಮ ‘ವಾರ್ತಾಭಾರತಿ’ಯೊಂದಿಗೆ ಮಾತನಾಡುತ್ತಿದ್ದರು.

ನಿವೃತ್ತಿಯ ಮೊದಲು ಚೆನ್ನಾಗಿ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ಹೋಗ ಬೇಕು ಎನ್ನುವುದು ನನ್ನ ಕನಸು. ಏಶ್ಯನ್ ಗೇಮ್ಸ್ ಕೈತಪ್ಪಿದೆ. 2020-21ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂಬ ನೋವು ನನಗಿದೆ ಎಂದರು.

ಸಾಧನೆಗೆ ವಯಸ್ಸು ಅಡ್ಡಿಯಾಗದು. ವಯಸ್ಸು ಆಗಿದೆ ಎಂಬ ಚಿಂತೆ ನನಗಿಲ್ಲ. ಅದನ್ನು ದಾಟಿ ನಾನು ನನಗೆ ಸಾಧ್ಯವಿರುವ ತನಕ ಕ್ರೀಡಾರಂಗದಲ್ಲಿ ಮುಂದುವರಿಯುವೆನು. ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು 33ರ ಹರೆಯದ ಓಟಗಾರ್ತಿ ಸ್ಪಷ್ಟಪಡಿಸಿದರು.

400 ಮೀಟರ್ ಓಟದಲ್ಲಿ ಗಮನ ಕೇಂದ್ರೀಕರಿಸಿ ತಯಾರಿ ನಡೆಸುತ್ತಿದ್ದೇನೆ. ಅದರಲ್ಲಿ ನನಗೆ ಭರವಸೆ ಇದೆ. ರಿಲೆ ರ್‍ಯಾಂಕಿಂಗ್‌ನಲ್ಲಿ ಬಂದರೆ ತಂಡದಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಗಬಹುದು. ಮುಂದಿನ ವರ್ಷ ವರ್ಲ್ಡ್ ರಿಲೆ ಸೇರಿದಂತೆ ಬಹಳಷ್ಟು ಸ್ಪರ್ಧೆಗಳಿವೆ. ಅವುಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇನೆ ಎಂದರು.

ಡೋಪಿಂಗ್ ಆರೋಪದಲ್ಲಿ 2021ರಲ್ಲಿ ಎರಡು ವರ್ಷಗಳ ಕಾಲ ಸ್ಪರ್ಧಾ ಕೂಟಗಳಿಂದ ಅಮಾನತುಗೊಂಡಿರುವ ಪೂವಮ್ಮ ಅವರಲ್ಲಿ ಈ ಬಗ್ಗೆ ಕೇಳಿದಾಗ, ‘ನನಗೆ ನಾಡಾ(ರಾಷ್ಟ್ರೀಯ ಉದ್ದೀಪನಾ ತಡೆ ಘಟಕ) ಮೊದಲು ಸ್ಪರ್ಧಿಸಬಹುದೆಂದು ಹೇಳಿತು. ಬಳಿಕ ನಿಷೇಧ ಹೇರಿತು. ಇದರಿಂದ ಗೊಂದಲಕ್ಕೆ ಒಳಗಾದ ನಾನು ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದೆ. ತೀರ್ಪು ತನ್ನ ಪರ ಬಂತು’ ಎಂದು ಪ್ರತಿಕ್ರಿಯೆ ನೀಡಿದರು.

ಶ್ರೀಲಂಕಾದಲ್ಲಿ ವರ್ಷಗಳ ಬಳಿಕ ಸ್ಪರ್ಧಿಸಿದ್ದೆ. ಜ್ವರದ ಕಾರಣದಿಂದಾಗಿ ನನಗೆ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ ಎಂದರು.

ಟ್ರ್ಯಾಕ್ ಆ್ಯಂಡ್ ಫಿಲ್ಡ್‌ನಲ್ಲಿ ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ಮೆಡ್ಲ್ ರಿಲೆ ಸೇರಿದಂತೆ ವಿವಿಧ ಹೊಸ ಹೊಸ ಈವೆಂಟ್ಗಳು ಉತ್ತಮ ಬೆಳವಣಿಗೆಯಾಗಿದೆ. ಯಾಕೆಂದರೆ ಇದರಿಂದ ಅವಕಾಶ ಹೆಚ್ಚು ಸಿಗುತ್ತಿದೆ. 100 ಮೀಟರ್ ಮತ್ತು 200 ಮೀ. ಓಟದಲ್ಲಿ ವೈಯಕ್ತಿಕ ಸಾಧನೆ ಮಾಡಲು ಸಾಧ್ಯವಾಗದವರಿಗೆ ದೊಡ್ಡ ಈವೆಂಟ್ಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂತಹ ಅವಕಾಶ ಅನುಕೂಲವಾಗುತ್ತದೆ ಎಂದರು.

ನನ್ನ ವೃತ್ತಿ ಬದುಕು ಚೆನ್ನಾಗಿದೆ. ನನಗೆ ಉದ್ಯೋಗ ನೀಡಿರುವ ಒಎನ್ಜಿಸಿ ಒಳ್ಳೆಯ ಬೆಂಬಲ ನೀಡುತ್ತಿದೆ. ಕ್ರೀಡಾ ರಂಗದಿಂದ ನಿವೃತ್ತಿ ಬಳಿಕ ಸಂಸ್ಥೆಯ ಕರ್ತವ್ಯದ ಕಡೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಈಗ ಅವರಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - -ಇಬ್ರಾಹಿಂ ಅಡ್ಕಸ್ಥಳ

contributor

Similar News