ಮಾವಿನ ಹೂವಿಗೆ ಬಿಸಿಲಿನ ಕೊರತೆಯಿಂದ ಫಸಲು ಕ್ಷೀಣಿಸುವ ಸಾಧ್ಯತೆ
ಹೊಸಕೋಟೆ: ಕಾಲ ಪಕ್ವವಾಗಿದ್ದರೂ ಬಿಸಿಲಿನ ತಾಪ ಇಲ್ಲದಿರುವುದು ಸೇರಿದಂತೆ ನಾನಾ ಕಾರಣಗಳಿಂದ ಈ ವರ್ಷ ಮಾವು ಹೂವು ಅರಳುವುದು ತಡವಾಗಿದ್ದು ರೈತರು ಸೂರ್ಯನತ್ತ ಮುಖ ಮಾಡಿದ್ದಾರೆ.
ಮಾವಿನ ಕೃಷಿಗೆ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ೩೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಮಾವಿನ ಮರದಲ್ಲಿ ಹೂವು ಉತ್ತಮವಾಗಿ ಅರಳುತ್ತವೆ ಎಂದು ಬೆಳೆಗಾರರು ವಿವಿಧ ರೀತಿಯ ಔಷಧಗಳನ್ನು ಸಿಂಪಡಿಸಿದ್ದರು. ಆದರೆ, ಫೆಬ್ರವರಿ ಮುಗಿಯುತ್ತಾ ಬಂದರೂ ಮಾವಿನ ಹೂವು ಸಮರ್ಪಕವಾಗಿ ಅರಳದೆ ರೈತರು ಕಂಗಾಲಾಗಿದ್ದಾರೆ.
2 ವರ್ಷಗಳ ಹಿಂದೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಕೆರೆ ಕುಂಟೆಗಳು ತುಂಬಿ ಪರಿಸರದಲ್ಲಿ ತಾಪಮಾನ ಕ್ಷೀಣಿಸಿ ತಂಪೆರೆದಿರುವುದರಿಂದ ಬಿಸಿಲಿನ ತಾಪ ಇಲ್ಲದೆ ಹೂ ಅರಳುತ್ತಿಲ್ಲ. ತಡವಾದರೂ ಹೂವು ಬರುತ್ತದೆ ಎಂದು ಅನುಭವಿ ರೈತರು ಹೇಳುತ್ತಿದ್ದಾರೆ. ಸುಮಾರು ೧೦ ವರ್ಷಗಳಿಂದೀಚೆಗೆ ೨ನೇ ಬಾರಿ ಫೆಬ್ರವರಿ ತಿಂಗಳಲ್ಲಿ ಹೂ ಅರಳುತ್ತಿರುವುದು. ಮಾವನ್ನೇ ನಂಬಿ ಜೀವನ ಮಾಡುತ್ತಿರುವ ಶೇ.೭೦ರಷ್ಟು ರೈತರು ಸೂರ್ಯನೆಡೆ ಮುಖ ಮಾಡಿ ತಾಪಮಾನ ಹೆಚ್ಚಾದರೆ ಈಗಲು ಹೂ ಅರಳುತ್ತದೆ ಎನ್ನುವ ಆಶಾಭಾವನೆಯಲ್ಲಿದ್ದಾರೆ. ಒಂದೂವರೆ ದಶಕದಿಂದ ಪ್ರತೀ ವರ್ಷ ಹವಾಮಾನ ವೈಪರೀತ್ಯದಿಂದ ಮಾವಿನ ಫಸಲು ಕ್ಷೀಣವಾಗುತ್ತಿದೆ.
ಬಾದಾಮಿ, ತೋತಾಪುರಿ, ಮಲ್ಲಿಕಾ, ರಾಜಗೀರ ಮಾವಿನ ಮರಗಳು ಮಾತ್ರ ಹೂ ಬಿಡುತ್ತಿವೆ. ಉಳಿದಂತೆ ಬೇನಿಷಾ, ನೀಲಂ, ಮಲಗೋವ, ರಸಪೂರಿ ಸೇರಿ ಇನ್ನು ಕೆಲವು ತಳಿಗಳು ಹೂ ಬಿಡುತ್ತಿಲ್ಲ. ಹೂವು ಬಿಡುವ ಅವಧಿಯಲ್ಲಿ ಒಣ ಹವೆ ಹೆಚ್ಚಾದರೆ ಬೇಗ ಹೂವು ಬಿಡುತ್ತದೆ. ಚಳಿ ಇರುವುದರಿಂದ ಭಾಗಶಃ ಮಾವಿನ ತಳಿಗಳು ಮೊಗ್ಗರಳುತ್ತಿವೆ. ಈಗ ಬಂದಿರುವ ಮೊಗ್ಗು ಹೂವಾದರೆ ಕೇವಲ ೩೦ರಿಂದ ೪೦ ಪರ್ಸೆಂಟ್ ಫಸಲು ಕಟ್ಟುತ್ತದೆ ಎಂದು ರೈತರು ಹೇಳುತ್ತಿದ್ದಾರೆ.
ಸಂಕಷ್ಟ: ಹದಿನೈದು ವರ್ಷದಿಂದ ಮಳೆ ಕೊರತೆಯಿಂದ ಭೂಮಿ ಬರಡಾಗಿ ೫ ವರ್ಷಗಳ ಹಿಂದೆ ೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನಮರ ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ಯಾವುದೇ ಪರಿಹಾರ ನೀಡಲಿಲ್ಲ. ಆದರೂ ಮಾವಿನ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ರೈತರಿಗೆ ಪ್ರಕೃತಿ ವೈಫಲ್ಯಗಳು ಸಂಭವಿಸಿದ ಸಂದರ್ಭದಲ್ಲಿ ಸರಕಾರಗಳು ಪರಿಹಾರ ನೀಡಿ ನೆರವಾಗಬೇಕೆಂದು ಕೃಷಿಕರ ಅಂತರಾಳದ ಮಾತಾಗಿದೆ.
ಆಂಧ್ರದಲ್ಲಿ ಕರ್ನಾಟಕಕ್ಕಿಂತ ಮೊದಲು ಮಾವು ಹೂವು ಬಿಡುತ್ತಿತ್ತು. ಈ ವರ್ಷ ನಮ್ಮಲ್ಲಿ ಸಹ ಈ ಅವಧಿಗೆ ಬರುವ ಫಸಲಿಗೆ ಉತ್ತಮ ಬೆಲೆ ಬರಬಹುದು. ರಾಜ್ಯದ ರಾಮನಗರ ಸೇರಿದಂತೆ ಬೇರೆ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿಯಲ್ಲಿ ಹಳೇಯ ಮರಗಳಲ್ಲಿ ಸರಿಯಾಗಿ ಹೂವು ಅರಳುತ್ತಿಲ್ಲ. ಆಂಧ್ರದಲ್ಲಿ ಮಾವಿನ ಫಸಲು ಮೊದಲು ಬರುತ್ತಿತ್ತು. ಈ ಸಲ ಆ ಭಾಗದಲ್ಲಿ ತಡವಾಗಿ ಹೂವು ಬಿಡುತ್ತಿದೆ. ತೋಟಗಾರಿಕೆ ಇಲಾಖೆ, ಕೃಷಿ ಸಂಶೋಧಕರು ಮತ್ತು ಸರಕಾರ ರೈತರಿಗೆ ಫಸಲು ಕಡಿಮೆ ಆದರೂ ಮಾರುಕಟ್ಟೆ ಮಾಡುವ ವಿಧಾನ ತಿಳಿಸಿದರೆ ಇರುವುದರಲ್ಲೇ ಹೆಚ್ಚು ಹಣ ಗಳಿಸುತ್ತಾರೆ.
ಸಾದಿಕ್ ಪಾಷಾ, ಹೊಸಕೋಟೆ