15 ಲಕ್ಷ ಲಂಚ ಪಡೆದ ಆರೋಪದ ಮೇಲೆ ಇ.ಡಿ ಅಧಿಕಾರಿ ಬಂಧನ

► ಭ್ರಷ್ಟರ ಹೆಡೆಮುರಿ ಕಟ್ಟಬೇಕಾದ ಸಂಸ್ಥೆಯೇ ಕಟಕಟೆಯಲ್ಲಿ ! ► ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತದೆಯೇ ಈ ಡಿ ?

Update: 2023-11-07 09:58 GMT
Editor : Thouheed | Byline : ಆರ್. ಜೀವಿ

Photo: PTI

ಮೋದಿ ಸರ್ಕಾರಕ್ಕೆ ಇ.ಡಿ ಎಂದರೆ, ಸಿಬಿಐ ಅಂದರೆ ಬಹಳ ಪ್ರೀತಿ. ಮೋದಿಯವರ ಅಂಥ ಅತ್ಯಂತ ಪ್ರೀತಿಯ ಇ.ಡಿ ಈಗ ಕೆಸರಲ್ಲಿ ಬಿದ್ದು ಕೈ ಗಲೀಜು ಮಾಡಿಕೊಂಡಿರುವ ಸುದ್ದಿ ಬಂದಿದೆ. ಯಾವಾಗ ಬೇಕೆಂದರೆ ಆವಾಗ ಮತ್ತು ಸರಿಯಾದ ಸಮಯ ನೋಡಿಕೊಂಡು ವಿಪಕ್ಷಗಳ ಕಡೆ ಮೋದಿ ಸರ್ಕಾರ ಬೆರಳು ತೋರಿಸಿದರೆ ಓಡಿ ​ಎಗರುತ್ತಿದ್ದ ಇ.ಡಿ, ಈಗ ಸ್ವತಃ ರಾಡಿ.

ಕೇಂದ್ರದ ಬಿಜೆಪಿ ಸರ್ಕಾರದ ಕೈಗೊಂಬೆಯೆಂಬ ಆರೋಪವನ್ನು ಈಗಾಗಲೇ ಹೊತ್ತಿರುವ ಇ.ಡಿಯಂಥ ಏಜನ್ಸಿ ಸ್ವತಃ ಭ್ರಷ್ಟರನ್ನು ಹೊಂದಿದೆಯೆ, ಲಂಚಕ್ಕಾಗಿ ಕೈಯೊಡ್ಡುವ ಲಂಚಾವತಾರಿಗಳು ​ಅದರೊಳಗೂ ಇದ್ದಾರೆಯೆ?. ಹಣಕಾಸು ಅಕ್ರಮಗಳ ವಿರುದ್ಧ ಹದ್ದಿನ ಕಣ್ಣಿಡುತ್ತದೆ ಎನ್ನಲಾಗುವ ಇ.ಡಿ, ಪರಮ ಶುದ್ಧ ಎಂಬಂತಿರುವ ಇ.ಡಿ, ಅಕ್ರಮದ ಆರೋಪ ಹೊತ್ತವರನ್ನು ಕಂಗೆಡಿಸುವಂತೆ ಪ್ರಶ್ನಿಸುವ ಇ.ಡಿ, ಈಗ ಸ್ವತಃ ತನ್ನ ಮುಖಕ್ಕೇ ರಾಚುವಂತೆ ಎದುರಾಗಲಿರುವ ಪ್ರಶ್ನೆಗಳನ್ನು ಉತ್ತರಿಸುವು​ದೇ ?

ಪ್ರೀತಿಪಾತ್ರ ಇ.ಡಿ ಪೇಚಿಗೆ ಸಿಲುಕಿರುವಾಗ, ನ ಖಾವೂಂಗಾ ನ ಖಾನೇ ದೂಂಗಾ ಎನ್ನುತ್ತ ಅಧಿಕಾರಕ್ಕೆ ಬಂದವರು ಏನು ಹೇಳುತ್ತಾರೆ?. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇ.ಡಿ , ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರ ಇಬ್ಬರು ಪುತ್ರರಿಗೆ ಸಮನ್ಸ್ ಜಾರಿ ಮಾಡಿತ್ತು. ವಿಪರ್ಯಾಸವೆಂದರೆ, ​ಇ.ಡಿ ಅಧಿಕಾರಿಯೇ ಲಂಚಕ್ಕೆ ಕೈಯೊಡ್ಡಿ ರಾಜಸ್ಥಾನದ​ ಭ್ರಷ್ಟಾಚಾರ ನಿಗ್ರಹ ದಳ​ (ಎಸಿಬಿ) ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು.

15 ಲಕ್ಷ ಲಂಚ ಪಡೆದ ಆರೋಪದ ಮೇಲೆ ​ಇ.ಡಿ​ ಅಧಿಕಾರಿಯನ್ನು ಆತನ ಸಹವರ್ತಿಯ ಜೊತೆ ಬಂಧಿಸಲಾಗಿದೆ. ಆರೋಪಿ ಅಧಿಕಾರಿಯ ಹೆಸರು ನವಲ್ ಕಿಶೋರ್ ಮೀನಾ ಎನ್ನಲಾಗಿದೆ. ಚಿಟ್ ಫಂಡ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳದಿರಲು ಇ.ಡಿ ಅಧಿಕಾರಿ 17 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಅಧಿಕಾರಿಯ ಸಹವರ್ತಿ ಬಾಬುಲಾಲ್ ಮೀನಾ ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಎಂದು ​ರಾಜಸ್ತಾನ ಎಸಿಬಿಯ ಹೆಚ್ಚುವರಿ ಮಹಾನಿರ್ದೇಶಕ ಹೇಮಂತ್ ಪ್ರಿಯದರ್ಶಿ ಹೇಳಿರುವುದು ವರದಿಯಾಗಿದೆ.

ಸಹವರ್ತಿ ಬಾಬುಲಾಲ್ ಮೀನಾ ರಾಜ್ಯ ಸರ್ಕಾರದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಕಿರಿಯ ಸಹಾಯಕನಾಗಿದ್ದಾನೆ. ಇಬ್ಬರೂ ಜೈಪುರ ಜಿಲ್ಲೆಯ ಬಸ್ಸಿ ಬ್ಲಾಕ್‌ನ ವಿಮಲಪುರ ಗ್ರಾಮಕ್ಕೆ ಸೇರಿದವರು. ಅಲ್ವಾರ್‌ನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಎಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರೂ ಆರೋಪಿಗಳು ದೂರುದಾರರಿಂದ 15 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಎಸಿಬಿಯ ಹಿರಿಯ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸಿಬಿ ಅಧಿಕಾರಿ ಪ್ರಿಯದರ್ಶಿ ತಿಳಿಸಿದ್ದಾರೆ.

ಇಬ್ಬರ ನಿವಾಸಗಳು ಮತ್ತು ಇತರ ಸಂಪರ್ಕಿತ ಸ್ಥಳಗಳ ಮೇಲೆಯೂ ದಾಳಿ ನಡೆಸಲಾಗುತ್ತಿದೆ ಎಂಬ ಮಾಹಿತಿಗಳಿವೆ. ವಿಪಕ್ಷಗಳ ಮೇಲೆ ನೆಪ ಹುಡುಕಿ ದಾಳಿ ನಡೆಸಲು ಇ.ಡಿಯಂಥ ಏಜನ್ಸಿಯನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರವಾಗಲೀ, ಕೇಂದ್ರ ಸರ್ಕಾರದ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತ ಘನತೆಯನ್ನೇ ಕಳೆದುಕೊಂಡಿರುವ ಏಜನ್ಸಿಗಳಾಗಲೀ ಈಗಿನ ವಿದ್ಯಮಾನಕ್ಕೆ ಯಾವ ರೀತಿ ಪ್ರತಿಕ್ರಿಯಿಸಬಹುದು?

ಚುನಾವಣೆ ನಡೆಯುವ ಹೊತ್ತಲ್ಲಿಯೇ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇ.ಡಿ ದಾಳಿ ನಡೆಸಲಾಗುತ್ತಲೇ ಇದೆ.​ ಈ ಹಿಂದೆಯೂ ಹಲವು ಕಡೆ ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ಹಾಗು ಇತರ ವಿಪಕ್ಷ ನಾಯಕರು ಹಾಗು ಅಭ್ಯರ್ಥಿಗಳ ಮೇಲೆ ಈ ಡಿ ಅಥವಾ ಐ ಟಿ ದಾಳಿ ನಡೆಸುವುದು ನಡೆದುಕೊಂಡೇ ಬಂದಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ನೀಡಲಾದ ಸಮನ್ಸ್ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ಇ.ಡಿ ಮುಂದೆ ಹಾಜರಾಗಿದ್ದರು. ಅದರ ಬೆನ್ನಲ್ಲೇ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರ ಪುತ್ರರಾದ ಅಭಿಲಾಷ್ ಮತ್ತು ಅವಿನಾಶ್ ಅವರಿಗೆ ಇಡಿ ಸಮನ್ಸ್ ನೀಡಿತ್ತು.

ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೆಹ್ಲೋಟ್ ತಿರುಗೇಟು ನೀಡಿದ್ದರು. ಹೀಗೆಲ್ಲ ಅಲ್ಲಿ ಕಾಂಗ್ರೆಸ್ಗೆ ಕಿರುಕುಳ ಕೊಡುತ್ತ, ಚುನಾವಣೆಯ ವೇಳೆ ತಬ್ಬಿಬ್ಬುಗೊಳಿಸಲು ಕೇಂದ್ರದ ಹುನ್ನಾರ ನಡೆದಿರುವಾಗಲೇ, ಸ್ವತಃ ಇ.ಡಿ ಅಧಿಕಾರಿಯೇ ಎಡವಿಬಿದ್ದಿರುವು​ದು ಮೋದಿ ಸರಕಾರಕ್ಕೆ ಭಾರೀ ಮುಜುಗರ ತಂದಿದೆ. ​

ಈಗ ಕೇಳಬೇಕಿರುವುದು ಏನೆಂದರೆ, ರಾಜಸ್ಥಾನದ ​ ಎಸಿಬಿ ಕಾರ್ಯಾಚರಣೆಯಲ್ಲಿ ಸಹವರ್ತಿಯ ಸಹಿತ ಇ.ಡಿ ಅಧಿಕಾರಿ​ ಸ್ವತಃ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೇಲೂ, ವಿಪಕ್ಷದವರ ಮೇಲೆ ಮತ್ತೆ ಮತ್ತೆ ಮುಗಿಬೀಳುವ ಇ.ಡಿ ತಾನು ಪರಮ ಶುದ್ಧ ಎಂದು ತೋರಿಸಿಕೊಳ್ಳಲು ಸಾಧ್ಯವೆ?

ಲಂಚ ಕೊಡುವವರ​, ಆರೋಪಿ ಸ್ಥಾನದಲ್ಲಿರುವವರ ಮಾತನ್ನೇ ಇ.ಡಿ ಕೇಳುತ್ತದೆ ಎಂದ ಮೇಲೆ, ಇನ್ನು ತನ್ನ ಸ್ವಾಯತ್ತ ಲಕ್ಷಣಗಳನ್ನೆಲ್ಲ ಯಾವತ್ತೋ ಮರೆತಿರುವ ಅದು ಕೇಂದ್ರ ಸರ್ಕಾರದ ಆದೇಶಗಳನ್ನು ಚಾಚೂ ತಪ್ಪದೆ ​ಪಾಲಿಸುತ್ತದೆ ಎಂದಾಯಿತಲ್ಲವೆ?

ಕೇಂದ್ರದ ಮಾತು ಕೇಳಿಕೊಂಡು ಅದು ಆಡಿಸಿದಂತೆ ಆಡುವ ಇ.ಡಿ ಯಾವ ಥರದ​​ ಭ್ರಷ್ಟಾಚಾರ ನಿಗ್ರಹ ಮಾಡಬಲ್ಲದು, ಯಾವ ರೀತಿ ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬಲ್ಲದು, ಹೇಗೆ ನ್ಯಾಯ ಕೊಡಬಲ್ಲುದು ಎಂಬ ಪ್ರಶ್ನೆಯೂ ಸಹಜ. ತನಗಾಗದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಕೇಂದ್ರದ ಅಸ್ತ್ರ ಮಾತ್ರವಾಗಿ ಇ​ ಡಿ ಬಳಕೆಯಾಗುತ್ತದೆ ಎಂದಾದರೆ, ಅದು ಯಾವ ಥರದ ಆರ್ಥಿಕ ಪಾವಿತ್ರ್ಯವನ್ನು ಕಾಯಲು ಸಾಧ್ಯ?

ಈಗಂತೂ ಸ್ವತಃ ಇ.ಡಿ ಅಧಿಕಾರಿಯೇ ಲಂಚದ ಕಳಂಕ ಮೆತ್ತಿಕೊಂಡಿರುವಾಗ ಇ.ಡಿ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕಾಗಿದೆ ಅಲ್ಲವೆ?. ಲಂಚಕ್ಕಾಗಿ ಕೈಯೊಡ್ಡುವವರು, ಯಾರದೋ ಮಾತು ಕೇಳಿ ಇನ್ನಾರನ್ನೋ ಆರೋಪಿ ಸ್ಥಾನದಲ್ಲಿ ಕೂರಿಸಿ ಪ್ರಶ್ನಿಸುವವರು ಈಗ ಸ್ವತಃ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ.

​ಅತ್ತ ರಾಜಸ್ತಾನದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಚುನಾವಣೆ ಹೊತ್ತಲ್ಲಿ ನಿರಂತರ ಈ ಡಿ ಹಾಗು ಐ ಟಿ ದಾಳಿ ಆಗುತ್ತಿರುವುದರ ಬಗ್ಗೆ ಸ್ವತಃ ಬಿಜೆಪಿ ಮುಖಂಡರೇ ಕಸಿವಿಸಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಅಲ್ಲಿನ ಬಿಜೆಪಿ ನಾಯಕರು " ಈ ದಾಳಿಗಳಲ್ಲಿ ಆರೋಪ ಮಾಡಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿದರೆ ಸರಿ. ಇಲ್ಲದಿದ್ದರೆ ಇದು ನಮಗೆ ತಿರುಗುಬಾಣವಾಗುವ ಸಾಧ್ಯತೆಯೇ ಹೆಚ್ಚು. ಜನರಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಅನುಕಂಪ ಉಂಟಾಗಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಮಗೂ ಕಾಂಗ್ರೆಸ್ ಗೂ ಸಣ್ಣ ಅಂತರ ಇರುವ ಕ್ಷೇತ್ರಗಳಲ್ಲಿ ಇದು ಸಮಸ್ಯೆಯಾಗಲಿದೆ " ಎಂದು ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ ನಡೆದಿರುವ ಈ ಡಿ ಹಾಗು ಐಟಿ ದಾಳಿಗಳಲ್ಲಿ ಬಹುತೇಕ ದಾಳಿಗಳು ನಡೆದಿರುವುದು ವಿಪಕ್ಷ ನಾಯಕರ ಮೇಲೆಯೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಪ್ರಪಂಚದಲ್ಲೇ ಅತಿ ದೊಡ್ಡ, ಅತ್ಯಂತ ಶ್ರೀಮಂತ ಪಕ್ಷ ಹಾಗು ಕೋಟಿ ಕೋಟಿ ವಹಿವಾಟಿನ ಆಪರೇಷನ್ ಕಮಲದ ಮೂಲಕ ದೇಶಾದ್ಯಂತ ಇತರ ಪಕ್ಷಗಳ ಶಾಸಕರನ್ನು ಸೆಳೆಯುವ ಬಿಜೆಪಿ ಮೇಲೆ , ಅದರ ನಾಯಕರ ಮೇಲೆ ಈ ಡಿ , ಐ ಟಿ ದಾಳಿ ನಡೆಯೋದೆ ಇಲ್ಲ. ಈ ದೇಶದಲ್ಲಿ ಇನ್ನೂ ಏನೇನು ಆಗುವುದಿದೆಯೊ ಗೊತ್ತಿಲ್ಲ. ಆದರೆ, ವಿಪಕ್ಷಗಳ ಮೇಲೆ ಎಗರಿ ಎಗರಿ ಬೀಳುವವರು ಈಗ ಉತ್ತರಿಸಲೇಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News