ಕೇಂದ್ರ ಸರಕಾರದ ಕೈಗೊಂಬೆಯಾಗುವತ್ತ ಚುನಾವಣಾ ಆಯೋಗ?

ಈಗ ಮಾಡಲಾಗಿರುವ ತಿದ್ದುಪಡಿಗಳ ಪ್ರಕಾರ, ಚುನಾವಣಾ ಆಯುಕ್ತರ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಮಾನವಾಗಿಯೇ ಇರಿಸಲಾಗಿದೆ. ಅದೇ ವೇತನ, ತುಟ್ಟಿ ಭತ್ತೆ ಮತ್ತು ರಜೆ ನಗದೀಕರಣ ನಿಯಮಗಳು ಅನ್ವಯವಾಗಲಿವೆ. ಆದರೆ, ಆಯುಕ್ತರ ನೇಮಕಾತಿ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಡುವ ಮತ್ತು ಆ ಸ್ಥಾನದಲ್ಲಿ ಕೇಂದ್ರ ಮಂತ್ರಿಯನ್ನು ಒಳಗೊಳ್ಳುವ ನಿರ್ಧಾರದಿಂದ ಸರಕಾರ ಹಿಂದೆ ಸರಿದಿಲ್ಲ.

Update: 2023-12-15 05:29 GMT
Editor : Safwan | Byline : ವಿನಯ್ ಕೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಮತ್ತು ಸೇವಾವಧಿ) ಮಸೂದೆ 2023ನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ನಿರ್ಧಾರದಿಂದ ಕೇಂದ್ರ ಸರಕಾರ ಹಿಂದೆ ಸರಿದಿಲ್ಲ. ಅಲ್ಲಿಗೆ, ಪ್ರತಿಪಕ್ಷಗಳು ಟೀಕಿಸಿರುವಂತೆ ಹೌದಪ್ಪಗಳನ್ನು ನೇಮಿಸಿಕೊಳ್ಳಲು ಏನು ವ್ಯವಸ್ಥೆ ಬೇಕೋ ಅದನ್ನು ಕೇಂದ್ರ ಸರಕಾರ ಮಾಡಿಕೊಂಡಂತಾಗಿದೆ.

ಹಾಗಾದರೆ, ಹೆಸರಿಗಷ್ಟೇ ಸಾಂವಿಧಾನಿಕ ಸಂಸ್ಥೆಯಾಗಿ, ಇತ್ತೀಚಿನ ವರ್ಷಗಳಲ್ಲಿ ಸ್ವಾಯತ್ತತೆ ಕಳೆದುಕೊಂಡಂತಿದ್ದ ಚುನಾವಣಾ ಆಯೋಗ ಇನ್ನು ಪೂರ್ತಿಯಾಗಿ ಕೇಂದ್ರದ ನಿಯಂತ್ರಣಕ್ಕೆ ಬರಲಿದೆಯೆ?

ದೇಶದ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂಬ ಸುಪ್ರೀಂ ಕೋರ್ಟ್ ಕಳಕಳಿಗೆ ಪೂರ್ತಿ ವಿರುದ್ಧವಾಗಿ ಚುನಾವಣಾ ಆಯೋಗದ ಸ್ವರೂಪ ಮತ್ತು ಸ್ಥಿತಿ ಬದಲಾಗಲಿದೆಯೇ?

ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕೈಯಲ್ಲಿನ ಅಸ್ತ್ರಗಳನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸರಕಾರ, ಈಗ ಚುನಾವಣಾ ಆಯೋಗವನ್ನೂ ಸಂಪೂರ್ಣ ಸ್ವಾಧೀನ ಮಾಡಿಕೊಳ್ಳಲಿದೆಯೇ?

ಹೀಗಾದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಏನಾಗಲಿದೆ? ಪ್ರಜಾಪ್ರಭುತ್ವದ ಮಹತ್ವದ ವ್ಯವಸ್ಥೆಯೊಂದು ಅಲ್ಲೋಲ ಕಲ್ಲೋಲವಾಗಿಬಿಡಲಿದೆಯೇ? ಎದುರಲ್ಲಿಯೇ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಪೂರ್ತಿ ಲಾಭ ಪಡೆಯಲು ತನ್ನ ಅಧಿಕಾರ ಬಳಸಲಿದೆಯೇ?

ಇಂಥ ಪ್ರಶ್ನೆಗಳು ಮತ್ತು ಆತಂಕ ಮೂಡದೇ ಇರುವುದಿಲ್ಲ.

ಆಗಸ್ಟ್ 10ರಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮಸೂದೆಯಲ್ಲಿ, ಮುಖ್ಯ ಆಯುಕ್ತರು ಮತ್ತು ಇತರ ಆಯುಕ್ತರ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಕ್ಯಾಬಿನೆಟ್ ಕಾರ್ಯದರ್ಶಿಯ ಮಟ್ಟಕ್ಕೆ ಇಳಿಸಿದ್ದು ಟೀಕೆಗೊಳಗಾಗಿತ್ತು.

ಕೆಲ ಮಾಜಿ ಮುಖ್ಯ ಚುನಾವಣಾ ಆಯುಕ್ತರುಗಳು ಆಕ್ಷೇಪವೆತ್ತಿದ ಬಳಿಕ ಈಗ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ತಿದ್ದುಪಡಿಗಳು ಆಯುಕ್ತರ ಸ್ಥಾನಮಾನಕ್ಕೆ ಸಂಬಂಧಪಟ್ಟವುಗಳಾಗಿವೆ. ಅದು ಬಿಟ್ಟರೆ, ಆಯುಕ್ತರ ನೇಮಕದಲ್ಲಿ ಸರಕಾರದ್ದೇ ಅಧಿಕಾರ ಪ್ರಬಲವಾಗಿರುವಂತೆ ನೋಡಿಕೊಳ್ಳಲಾಗಿದೆ. ಮಸೂದೆ ಮಂಗಳವಾರ ಅಂಗೀಕಾರವಾಗಿದೆ.

ಈ ಮಸೂದೆ ಏನು ಹೇಳುತ್ತದೆ?

ಈ ವರ್ಷದ ಮಾರ್ಚ್ 2ರಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪೊಂದನ್ನು ಕೊಟ್ಟಿತ್ತು.

ಚುನಾವಣಾ ಆಯುಕ್ತರ ನೇಮಕಕ್ಕೆ ಕಾನೂನು ರಚನೆಯಾಗುವವರೆಗೂ ಆಯ್ಕೆ ಸಮಿತಿ ಅಸ್ತಿತ್ವದಲ್ಲಿರಲಿದ್ದು, ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆ ಸಮಿತಿಯಲ್ಲಿರುತ್ತಾರೆ ಎಂದು ಹೇಳಿತ್ತು.

ಅದಾಗಿ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸರಕಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಮತ್ತು ಸೇವಾವಧಿ) ಮಸೂದೆ, 2023ಯನ್ನು ರೂಪಿಸಿತು.

ಈ ಮಸೂದೆ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೇ ಬದಿಗಿಟ್ಟಿತು.

ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸಿಜೆಐ ಬದಲಿಗೆ ಕ್ಯಾಬಿನೆಟ್ ಮಂತ್ರಿಯನ್ನು ಒಳಗೊಂಡ ಸಮಿತಿಯನ್ನು ಈ ಮಸೂದೆಯಲ್ಲಿ ಸರಕಾರ ಪ್ರಸ್ತಾಪಿಸಿತು. ಈ ಮಸೂದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರಿಗೆ ಕ್ಯಾಬಿನೆಟ್ ಕಾರ್ಯದರ್ಶಿಯಷ್ಟೇ ವೇತನ, ಸವಲತ್ತುಗಳು ಮತ್ತು ಭತ್ತೆಗಳನ್ನು ನೀಡುವ ಪ್ರಸ್ತಾಪ ಹೊಂದಿತ್ತು.

ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವಾ ನಿಯಮಗಳು ಮತ್ತು ವ್ಯವಹಾರದ ವಹಿವಾಟು) ಕಾಯ್ದೆ 1991ರ ಪ್ರಕಾರ ಇದ್ದ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಮಾನವಾದ ವೇತನ ಮತ್ತು ಸೌಲಭ್ಯದ ನಿಯಮವನ್ನು ಈ ಮಸೂದೆ ಬದಲಿಸಿತ್ತು.

ಮಸೂದೆ ಟೀಕೆಗೆ ತುತ್ತಾದದ್ದು ಏಕೆ?

1. ಆಯ್ಕೆ ಸಮಿತಿಯಲ್ಲಿ ಸಿಜೆಐ ಬದಲಿಗೆ ಕ್ಯಾಬಿನೆಟ್ ಮಂತ್ರಿಯನ್ನು ನೇಮಿಸುವ ಪ್ರಸ್ತಾಪಕ್ಕೆ ಪ್ರತಿಪಕ್ಷಗಳ ನಾಯಕರು ಆಕ್ಷೇಪಿಸಿದ್ದಾರೆ.

2. ಕೇಂದ್ರ ಮಂತ್ರಿ ಸಮಿತಿಯಲ್ಲಿರುವುದರಿಂದ ಆಯುಕ್ತರ ಆಯ್ಕೆಯಲ್ಲಿ ಯಾವಾಗಲೂ ಸರಕಾರವೇ ಬಹುಮತ ಹೊಂದಿರಲಿದೆ ಎಂದು ಟೀಕಿಸಲಾಯಿತು.

3. ಆಯುಕ್ತರ ಸ್ಥಾನಮಾನವನ್ನು ಕ್ಯಾಬಿನೆಟ್ ಕಾರ್ಯದರ್ಶಿಯ ಮಟ್ಟಕ್ಕೆ ಇಳಿಸಿದ್ದು ಕೆಲ ಮಾಜಿ ಚುನಾವಣಾ ಆಯುಕ್ತರಿಂದ ಟೀಕೆಗೆ ಒಳಗಾಯಿತು.

4. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಕ್ಯಾಬಿನೆಟ್ ಕಾರ್ಯದರ್ಶಿಯ ವೇತನಗಳು ಒಂದೇ ಆಗಿದ್ದರೂ, ಭತ್ತೆಗಳು ಮತ್ತು ಸವಲತ್ತುಗಳಲ್ಲಿ ವ್ಯತ್ಯಾಸಗಳಿರುವುದರಿಂದ, ಮಾಜಿ ಚುನಾವಣಾ ಆಯುಕ್ತರುಗಳ ಗುಂಪೊಂದು ಸರಕಾರಕ್ಕೆ ಪತ್ರ ಬರೆದು, ಸ್ಥಾನಮಾನ ಕೆಳಮಟ್ಟಕ್ಕಿಳಿಸಿದ್ದಕ್ಕೆ ಆಕ್ಷೇಪಿಸಿತು.

5. ಆಯುಕ್ತರ ಹುದ್ದೆ ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ಹೊಂದಿದ್ದು, ಹಿರಿಯ ಅಧಿಕಾರಿಗಳು ಮತ್ತು ಮಂತ್ರಿಗಳನ್ನು ಸಹ ಅವರು ಕರೆಯಬಹುದು. ಆದರೆ ಈ ಸ್ಥಾನಮಾನವನ್ನು ಸರಕಾರಿ ಅಧಿಕಾರಿಯ ಮಟ್ಟಕ್ಕೆ ಬದಲಾಯಿಸಿದರೆ, ಅದು ಅವರ ಸಾಮರ್ಥ್ಯವನ್ನು ಕೆಳಮಟ್ಟಕ್ಕಿಳಿಸಿದಂತಾಗುತ್ತದೆ ಎಂದು ವಾದಿಸಿದರು.

ಈಗ ಬದಲಾಗಿರುವುದೇನು?

ಈಗ ಮಾಡಲಾಗಿರುವ ತಿದ್ದುಪಡಿಗಳ ಪ್ರಕಾರ, ಚುನಾವಣಾ ಆಯುಕ್ತರ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಮಾನವಾಗಿಯೇ ಇರಿಸಲಾಗಿದೆ. ಅದೇ ವೇತನ, ತುಟ್ಟಿ ಭತ್ತೆ ಮತ್ತು ರಜೆ ನಗದೀಕರಣ ನಿಯಮಗಳು ಅನ್ವಯವಾಗಲಿವೆ. ಆದರೆ, ಆಯುಕ್ತರ ನೇಮಕಾತಿ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಡುವ ಮತ್ತು ಆ ಸ್ಥಾನದಲ್ಲಿ ಕೇಂದ್ರ ಮಂತ್ರಿಯನ್ನು ಒಳಗೊಳ್ಳುವ ನಿರ್ಧಾರದಿಂದ ಸರಕಾರ ಹಿಂದೆ ಸರಿದಿಲ್ಲ.

ಇನ್ನೊಂದು ವಿಚಾರವನ್ನು ಗಮನಿಸಬೇಕು.

ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗದಲ್ಲಿ ಯಾವುದೇ ಹುದ್ದೆ ಖಾಲಿಯಾಗದ ಕಾರಣ, ನ್ಯಾಯಾಲಯ ನಿಗದಿಪಡಿಸಿದ್ದ ಸಮಿತಿಯ ಮೂಲಕ ಯಾವುದೇ ನೇಮಕಾತಿಗಳನ್ನು ಮಾಡಲಾಗಿಲ್ಲ. 2024ರ ಫೆಬ್ರವರಿಯಲ್ಲಿ ನೇಮಕಾತಿ ಸಂದರ್ಭ ಎದುರಾಗಲಿದೆ. ಆಗ ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನಿವೃತ್ತರಾಗಲಿದ್ದಾರೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರದ ಬಳಿಕ ಪ್ರತಿಪಕ್ಷಗಳ ಪ್ರಮುಖರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಸೂದೆ ಚುನಾವಣಾ ಆಯೋಗವನ್ನು ಕಾರ್ಯಾಂಗದ ವಶಕ್ಕೆ ಒಪ್ಪಿಸುವ ಹಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಇದು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತದೆ. ಈ ಮಸೂದೆ ಹುಟ್ಟುವಾಗಲೇ ಸತ್ತಿರುವ ಶಿಶುವಿನಂತೆ’’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ.

‘‘ಇದು ಕೋರ್ಟ್ಗೆ ಮಾಡುತ್ತಿರುವ ಅವಮಾನ. ಈ ಮಸೂದೆ ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವಾಗಿದೆ’’ ಎಂದು ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಆರೋಪಿಸಿದ್ದಾರೆ. ಆಡಳಿತ ಪಕ್ಷ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರನ್ನೂ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಬಹುದು. ಹಾಗಾಗಿಬಿಟ್ಟರೆ ಅದೆಷ್ಟು ಅಪಾಯಕಾರಿಯಾಗಬಹುದು ಎಂದೂ ಛಡ್ಡಾ ಕಳವಳ ವ್ಯಕ್ತಪಡಿಸಿದ್ದಾರೆ.

ನಿಜ. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೇಂದ್ರ ಸರಕಾರದ್ದೇ ಪರಮಾಧಿಕಾರವಾಗುವ ಹಾಗೆ ಈ ಮಸೂದೆ ಇದೆಯೆಂಬ ಕಾರಣಕ್ಕೇ ಪ್ರತಿಪಕ್ಷಗಳು ತಕರಾರು ಎತ್ತಿರುವುದು.

ಈಗ ಅಂಗೀಕಾರಗೊಂಡಿರುವ ಮಸೂದೆಯಲ್ಲಿ ಸರಕಾರದ ಪರವಾಗಿ ಇಬ್ಬರು ಇರಲು ಅವಕಾಶವಾಗಿದೆ. ಪ್ರತಿಪಕ್ಷದಿಂದ ಒಬ್ಬರು ಮಾತ್ರ ಇರಲಿದ್ದು, ಸಮಿತಿಯ ನಿರ್ಧಾರ ಸರಕಾರದ ಕಡೆಯೇ ಆಗುವುದು ಬಹುತೇಕ ಖಚಿತ. ಪ್ರತಿಪಕ್ಷ ನಾಯಕನ ಮಾತಿಗೆ ಮನ್ನಣೆ ಸಿಗದೆ ಹೋಗುವ ಸಾಧ್ಯತೆಯೇ ಹೆಚ್ಚು.

ಚುನಾವಣಾ ಆಯೋಗ ದುರ್ಬಲವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಶೇಷನ್ ಥರದವರು ಆ ಹುದ್ದೆಗೆ ಬರಬೇಕಾದುದರ ಅಗತ್ಯವನ್ನು ಅದು ಪ್ರತಿಪಾದಿಸಿತ್ತು.

ಆದರೆ, ಹೊಸ ಮಸೂದೆ ಅಂಥ ಯಾವ ಆಶಯಗಳನ್ನೂ ಪೂರೈಸುವುದಿಲ್ಲ ಮತ್ತು ಅವೆಲ್ಲವನ್ನೂ ಉಲ್ಲಂಘಿಸುತ್ತದೆ ಎಂಬುದು ಸ್ಪಷ್ಟ.

ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಮುಂದಿನ ಫೆಬ್ರವರಿಯಲ್ಲಿ ನಿವೃತ್ತರಾಗಲಿದ್ದಾರೆ. ಅದಾದ ಬಳಿಕ ಬಹಳ ಬೇಗ ಲೋಕಸಭೆ ಚುನಾವಣೆಯ ವೇಳಾಪಟ್ಟಿಯೂ ಪ್ರಕಟವಾಗುತ್ತದೆ.

ಇಂಥ ಹೊತ್ತಲ್ಲಿ ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗಲಿದೆಯೇ? ಅದರ ಕೈಯಲ್ಲಿನ ಅಸ್ತ್ರವಾಗಲಿದೆಯೇ?

೨೦೧೯ರ ಲೋಕಸಭಾ ಚುನಾವಣೆ ಹಾಗೂ ಇತ್ತೀಚಿನ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಭಾರೀ ಟೀಕೆಗೆ, ಕಳವಳಕ್ಕೆ ಕಾರಣವಾಗಿದೆ. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಸರ್ವೇ ಸಾಮಾನ್ಯವಾಗಿವೆ.

ಪ್ರಜಾಪ್ರಭುತ್ವದ ಬಗ್ಗೆ ಬರೀ ಭಾಷಣ ಮಾತ್ರ ಮಾಡುವವರು ನಿಜವಾಗಿಯೂ ಕಳಕಳಿ ಇದ್ದಿದ್ದರೆ, ಸುಪ್ರೀಂ ಕೋರ್ಟ್ ಸೂಚಿಸಿದ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬಹುದಿತ್ತು. ಆಯುಕ್ತರ ನೇಮಕದಲ್ಲಿ ಅದು ನಿಷ್ಪಕ್ಷಪಾತಿ ವ್ಯವಸ್ಥೆಯಾಗಿತ್ತು. ಆದರೆ ಮೋದಿ ಸರಕಾರಕ್ಕೆ ಅದು ಬೇಕಿಲ್ಲ. ಅದಕ್ಕೆ ಬೇಕಿರುವುದು ಸಿಜೆಐ ಅವರನ್ನು ಹೊರಗಿಟ್ಟು, ತನ್ನ ಅಧಿಕಾರ ಚಲಾಯಿಸುವ ವ್ಯವಸ್ಥೆ. ಹಾಗಾಗಿಯೇ ಇಂಥದೊಂದು ಮಸೂದೆಯನ್ನು ರೂಪಿಸಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದ್ದ ಸುಪ್ರೀಂ ಕೋರ್ಟ್ ಸೂಚಿಸಿದ ವ್ಯವಸ್ಥೆ, ಆಯೋಗವನ್ನು ಅರ್ಥಪೂರ್ಣ ಸಂಸ್ಥೆಯಾಗಿಸುವ ಸಾಧ್ಯತೆಯಿತ್ತು. ಆದರೆ, ಪ್ರಜಾಪ್ರಭುತ್ವದ ಬಗ್ಗೆಯೇ ಗೌರವವಿಲ್ಲದವರು ಅಂಥ ಅರ್ಥಪೂರ್ಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಕ್ಕೆ ಯಾಕಾದರೂ ಬಯಸಿಯಾರು?

ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದ್ದಂತೆ, ಚುನಾವಣಾ ಆಯೋಗ ಇನ್ನು ಮುಂದೆ ಹೌದಪ್ಪ ಮಾತ್ರ ಆಗಿಬಿಡಲಿದೆ ಎಂಬುದರಲ್ಲಿ ತೀರಾ ಅನುಮಾನವೇನೂ ಇಲ್ಲ.


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಿನಯ್ ಕೆ.

contributor

Similar News