ಚುನಾವಣಾ ಫಲಿತಾಂಶಗಳು ಮತ್ತು ಯೋಗೇಂದ್ರ ಯಾದವರ ವಿಶ್ಲೇಷಣೆಯ ಸಮಸ್ಯೆಗಳು

Update: 2023-12-07 07:29 GMT
Editor : Thouheed | Byline : ಶಿವಸುಂದರ್

Photo: PTI 

ಭಾಗ- 2

5. ಇದೇ ಬಗೆಯ ಸಾಧನೆ ಲೋಕಸಭೆ ಚುನಾವಣೆಯಲ್ಲೂ ನಡೆದರೆ ಬಿಜೆಪಿಗೆ 19 ಸೀಟುಗಳು ನಷ್ಟವಾಗುತ್ತದೆಯೇ?

ಪ್ರಾಯಶಃ ಯೋಗೇಂದ್ರ ಯಾದವ್ ಅವರ ಒಟ್ಟಾರೆ ವಾದದ ಅಡಿಪಾಯದ ಬಗ್ಗೆ ಸಂದೇಹ ಬರುವುದು ಅವರ ಈ ಪ್ರತಿಪಾದನೆಯಿಂದಾಗಿ.

ಏಕೆಂದರೆ ರಾಜ್ಯ ಶಾಸನಸಭಾ ಚುನಾವಣೆಯಲ್ಲಿ ವೋಟು ಹಾಕಿದ ರೀತಿಯಲ್ಲೇ ಮತದಾರರು ರಾಷ್ಟ್ರೀಯ ಚುನಾವಣೆಗೆ ವೋಟು ಹಾಕುವುದಿಲ್ಲ ಎಂಬುದು ಈಗ ಕಾಮನ್ ಸೆನ್ಸ್. ಅದರಲ್ಲೂ ಹಿಂದುತ್ವ, ಹಿಂದೂ ರಾಷ್ಟ್ರ ರಾಜಕಾರಣ ಭಾರತೀಯ ಮತದಾರನ ತಲೆಯಲ್ಲಿ ಮೇಲುಗೈ ಪಡೆದ ಮೇಲೆ ರಾಜ್ಯ ಚುನಾವಣೆಗಳಲ್ಲಿ ಇತರ ಪಕ್ಷಗಳಿಗೆ ವೋಟು ಹಾಕಿದವರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿಗೆ ವೋಟು ಹಾಕುತ್ತಿರುವುದನ್ನು 2014, 2019ರ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಗಮನಿಸಿದ್ದೇವೆ.

ಉದಾಹರಣೆಗೆ 2018ರಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಸೋತಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ 25 ಸೀಟುಗಳು ಬಿಜೆಪಿ ಪಾಲು. ಛತ್ತೀಸ್‌ಗಡ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ 2019ರಲ್ಲಿ ಬಿಜೆಪಿಗೆ 9 ಸೀಟು, ಕಾಂಗ್ರೆಸ್‌ಗೆ ಕೇವಲ 2. ಮ.ಪ್ರದೇಶದಲ್ಲಿ 2019ರಲ್ಲಿ ಬಿಜೆಪಿಗೆ 28, ಕಾಂಗ್ರೆಸ್‌ಗೆ ಒಂದು. ಹೆಚ್ಚು ಕಡಿಮೆ 2014ರಲ್ಲೂ ಇದೇ ನಡೆದಿತ್ತು.

ಹೀಗಾಗಿ ರಾಜಕೀಯ ಗಣಿತವನ್ನು ಮತ್ತು ನಾವು ಎದುರಿಸುತ್ತಿರುವ ಫ್ಯಾಶಿಸ್ಟ್ ರಾಜಕಾರಣದ ಪಟ್ಟುಗಳನ್ನು ಮರೆತು ಕೇವಲ ಗಣಿತವನ್ನು ಮುಂದಿಟ್ಟು ಮಾಡಿಕೊಳ್ಳುವ ಸಮಾಧಾನ ವಾಸ್ತವವನ್ನು ಮರೆಮಾಚುತ್ತದೆ.

ಕಾಂಗ್ರೆಸ್ ಮತ್ತು ಬಿಜೆಪಿ- ಎದುರಾಳಿಗಳೋ? ಫ್ಯಾಶಿಸ್ಟ್ ರಥದ ಎರಡು ಗಾಲಿಗಳೋ?

ಮೋದಿ ಅಧಿಕಾರಕ್ಕೆ ಬಂದ ಮೇಲೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯ ಹಣ ಬಲ, ಅಧಿಕಾರ ಹಾಗೂ ಚುನಾವಣಾ ಆಯೋಗ-ಈ.ಡಿ.-ಸಿಬಿಐ- ಇತ್ಯಾದಿಗಳ ದುರ್ಬಳಕೆಗಳಿಗೆ ಒಂದು ಪ್ರಮುಖ ಪಾತ್ರ ಇದ್ದೇ ಇದೆ. ಇದಲ್ಲದೆ ಬಿಜೆಪಿಯ ಗೆಲುವಿಗೆ ಅದರ ನಾಯಕರ ಮತ್ತು ಪಕ್ಷ ಯಂತ್ರಾಂಗಗಳು ಮತ್ತು ಆರೆಸ್ಸೆಸ್ ಕಾರ್ಯಕರ್ತರ ಬೆಂಬಲ, ಸಹಕಾರ ಮತ್ತು ಸಹಯೋಗಗಳು ಒಂದು ಪ್ರಮುಖ ಪಾತ್ರ ವಹಿಸಿವೆ. ಅಷ್ಟೇ ಮುಖ್ಯವಾಗಿ ಮೋದಿಯ ಸುತ್ತ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿರುವ ಇಮೇಜುಗಳ ಪಾತ್ರವೂ, ತುತ್ತೂರಿ ಮಾಧ್ಯಮಗಳ ಪರಿಶ್ರಮಗಳೂ ಬಿಜೆಪಿಯ ಗೆಲುವಿಗೆ ಪೂರಕವಾಗಿಯೇ ಇದ್ದಿವೆ.

ಆದರೆ ಕಳೆದ ಹಲವಾರು ಚುನಾವಣೆಗಳಿಂದ ಬಿಜೆಪಿಯನ್ನು ಗೆಲ್ಲಿಸುತ್ತಿರುವುದು ಅದು ಸಮಾಜದಲ್ಲಿ ಮಾಡಿರುವ ಕೋಮು ಧ್ರುವೀಕರಣ. ಕಳೆದ ಇಪ್ಪತ್ತು-ಮೂವತ್ತು ವರ್ಷಗಳಿಂದ ಆರೆಸ್ಸೆಸ್-ಬಿಜೆಪಿಯ ಕಾರ್ಯಕರ್ತರು ಪ್ರತಿನಿತ್ಯ ‘‘ಹಿಂದೂ ಆತಂಕದಲ್ಲಿದ್ದಾನೆ’’, ‘‘ದೇಶದ ಭದ್ರತೆ ಗಂಡಾಂತರ ಎದುರಿಸುತ್ತಿದೆ’’, ‘‘ಹಿಂದೂ ಧರ್ಮ ಅಪಾಯದಲ್ಲಿದೆ’’, ‘‘ಮೋದಿ ಮತ್ತು ಬಿಜೆಪಿ ಮಾತ್ರ ಈ ದೇಶ-ಧರ್ಮ ಉಳಿಸಬಲ್ಲರು- ಉಳಿದ ಎಲ್ಲಾ ಪಕ್ಷಗಳು ಪಾಕಿಸ್ತಾನಿಗಳು’’ ಎಂದು ಮಾಡುತ್ತಿರುವ ಪ್ರಚಾರ ಮನೆ-ಮನಗಳನ್ನು ತಲುಪಿದೆ.

ಈ ಸುಳ್ಳು ಪ್ರಚಾರವನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಸೋಲಿಸುವ ಬದಲು ಕಾಂಗ್ರೆಸ್ ಪಕ್ಷ ತಾನು ಕೂಡ ಹಿಂದುತ್ವವಾದಿ ಎಂದು ತೋರಿಸಿಕೊಳ್ಳುವ ಪೈಪೋಟಿಗೆ ಬಿದ್ದಿದೆ. ಆ ಮೂಲಕ ಆರೆಸ್ಸೆಸ್-ಬಿಜೆಪಿಗಳ ಉಗ್ರ ಹಿಂದುತ್ವ ಹುಟ್ಟುಹಾಕುತ್ತಿರುವ ದ್ವೇಷಕ್ಕೆ ಪರೋಕ್ಷವಾಗಿ ಮಾನ್ಯತೆಯನ್ನು ತಂದುಕೊಟ್ಟಿದೆ.

ಅದರಲ್ಲೂ ಕಮಲ್‌ನಾಥ್ ನೇತೃತ್ವದಲ್ಲಿ ಮ.ಪ್ರದೇಶದ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿದರೂ, ಕಮಲ್‌ನಾಥರೇ ಖುದ್ದು ‘‘ಇದು ಹಿಂದೂ ರಾಷ್ಟ್ರ’’, ‘‘ಬಾಬರಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವುದರಲ್ಲಿ ಕಾಂಗ್ರೆಸ್‌ನ ದೊಡ್ಡ ಪಾತ್ರವಿದೆ’’ ಎಂದೆಲ್ಲಾ ಪ್ರಚಾರ ಮಾಡಿದರು. ಮೋದಿಯೇ ಈ ದೇಶದ ಭಾಗ್ಯ ವಿಧಾತ ಎನ್ನುವ ಭಾಗೇಶ್ವರ್ ಬಾಬಾ ಎಂಬ ಉಗ್ರ ಹಿಂದುತ್ವವಾದಿ ಬಾಯಿಬಡುಕನಿಲ್ಲದೆ ಕಮಲ್‌ನಾಥ್‌ರ ಯಾವ ಪ್ರಚಾರ ಸಭೆಗಳೂ ನಡೆಯಲಿಲ್ಲ. ಡಿಎಂಕೆ ನಾಯಕರು ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ ವಿವಾದ ಕಂಡು ಕಮಲ್‌ನಾಥ್ ಭೋಪಾಲ್‌ನಲ್ಲಿ ನಡೆಯಬೇಕಿದ್ದ ವಿರೋಧ ಪಕ್ಷಗಳ ಸಭೆಯೂ ನಡೆಯದಂತೆ ನೋಡಿಕೊಂಡರು.

ಛತ್ತೀಸ್‌ಗಡದ ಮುಖ್ಯಮಂತ್ರಿ ಬಘೇಲ್‌ರಂತೂ ಕ್ರಿಶ್ಚಿಯನ್ ಆದಿವಾಸಿಗಳ ಮೇಲೆ ಆರೆಸ್ಸೆಸ್ ನಡೆಸುತ್ತಿದ್ದ ನಿರಂತರ ದಾಳಿಗಳ ಬಗ್ಗೆ ಕಣ್ಣುಮುಚ್ಚಿಕೊಂಡು ಕೂತಿದ್ದರು. ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ ಆರೋಪದ ಮೇಲೆ ತನ್ನ ತಂದೆಯನ್ನೇ ಬಂಧಿಸಿ ತಾನೆಷ್ಟು ಸನಾತನವಾದಿ ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದರು. ಪುರಾಣವನ್ನು ಇತಿಹಾಸ ಮಾಡುವ ಆರೆಸ್ಸೆಸ್-ಬಿಜೆಪಿಯ ಅಜೆಂಡಾಗಳನ್ನು ತಾನೇ ಜಾರಿ ಮಾಡುತ್ತಾ ರಾಮ ವನವಾಸ ಮಾಡುವಾಗ ಛತ್ತೀಸ್‌ಗಡದಲ್ಲಿ ಹಾದುಹೋದ ಮಾರ್ಗಗಳೆಂದು ‘ರಾಮ ವನ ಗಮನ ಪಥ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದರು. ಚಂಪಾರಣ್‌ನಲ್ಲಿ ರಾಮನ ಬೃಹತ್ ಪ್ರತಿಮೆಯನ್ನು ಚುನಾವಣೆಗೆ ಮುನ್ನ ಅನಾವರಣಗೊಳಿಸಿ ಬಿಜೆಪಿಗಿಂತ ತಾವೇ ದೊಡ್ಡ ಹಿಂದುತ್ವವಾದಿಗಳು ಎಂದು ಜನರ ಬಳಿ ಹೋದರು.

ಹೀಗೆ ಇಂದು ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಯಾರು ನೈಜ ಹಿಂದೂವಾದಿಗಳೆಂಬ ಪೈಪೋಟಿ ನಡೆಯುತ್ತಿದೆಯೇ ವಿನಾ ಸಂವಿಧಾನ ವಿರೋಧಿ ದ್ವೇಷ ಸಿದ್ಧಾಂತಕ್ಕೆ ಒಂದು ನೈಜ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ಹೀಗಾಗಿ ಹಿಂದುತ್ವದ ದ್ವೇಷ ಸಿದ್ಧಾಂತ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಮಾನ್ಯತೆ ಪಡೆಯುತ್ತಾ ಸಮಾಜದಲ್ಲಿ ಸರ್ವಮಾನ್ಯಗೊಳ್ಳುತ್ತಿದೆ. ಇದರಿಂದಾಗಿ ಜನರು ಹಿಂದುತ್ವದ ಬ್ರಾಂಡಿನಲ್ಲಿ ಸಾಬೀತಾಗಿರುವ ಬಿಜೆಪಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಸಾರಾಂಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸೇರಿ ಹಿಂದುತ್ವವನ್ನು ಗೆಲ್ಲಿಸಿ ಭಾರತವನ್ನು ಮತ್ತು ಸಂವಿಧಾನವನ್ನು ಸೋಲಿಸುತ್ತಿದ್ದಾರೆ.

ಹಕ್ಕಿನ ಅನ್ನವೂ ರಾಮನ ಪ್ರಸಾದವಾಗುವ ಫ್ಯಾಶಿಸ್ಟ್ ವೆಲ್ಫೇರಿಸಂ

ಮತ್ತೊಂದು ಕಡೆ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಹೆಸರಿನ ಯಾವುದಾದರೂ ಯೋಜನೆಯಿಂದ ಬಡಜನರ ಅಕೌಂಟಿಗೆ ಒಂದಷ್ಟು ನಗದನ್ನು ನೇರ ಜಮೆ ಮಾಡುವ ಮೂಲಕ ಚುನಾವಣಾ ವರ್ಷಗಳಲ್ಲಿ ಹಿಂದುತ್ವವಾದಿ ರಾಜಕೀಯಕ್ಕೆ ಕಲ್ಯಾಣದ ಬಣ್ಣ ಬಳಿಯುವುದನ್ನು 2017ರ ಉತ್ತರ ಪ್ರದೇಶ ಚುನಾವಣೆಯಿಂದಲೂ ಬಿಜೆಪಿ ಮಾಡಿಕೊಂಡು ಬರುತ್ತಿದೆ. ಈ ಬಾರಿಯಂತೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ಪೈಪೋಟಿಯಾಗಿ ಮೋದಿಯೇ ಗ್ಯಾರಂಟಿ ಎಂಬ ಕಾಂಗ್ರೆಸ್ ಬಗೆಯ ಯೋಜನೆಗಳ ಪ್ರಚಾರಗಳು ಹಿಂದುತ್ವದ ಸಂದೇಶದೊಂದಿಗೆ ರಾಜ್ಯಗಳ ಮನೆಮನೆಯನ್ನು ಮುಟ್ಟಿತ್ತು. ಇದರ ಜೊತೆಜೊತೆಗೆ ಮೋದಿ ಸರಕಾರ ಚುನಾವಣೆ ನಡೆಯುತ್ತಿರುವಾಗಲೇ ಚುನಾವಣಾ ನಿಯಮಗಳಿಗೆ ವಿರುದ್ಧವಾಗಿ ‘ಗರೀಬ್ ಕಲ್ಯಾಣ ಅನ್ನ ಯೋಜನೆ’ಯನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸುವ ತೀರ್ಮಾನ ಘೋಷಿಸಿತು. ಆದರೆ ಅದನ್ನು ರಾಮಮಂದಿರದ ಬ್ಯಾಗಿನಲ್ಲಿ ತುಂಬಿ, ಮುಸ್ಲಿಮರು ಇಲ್ಲದಿದ್ದರೆ ನಿಮಗೆ ಇನ್ನು ಹೆಚ್ಚು ಅಕ್ಕಿ ಸಿಗುತ್ತಿತ್ತು ಎಂಬ ದ್ವೇಷ ರಾಜಕಾರಣದ ವಿಷದೊಂದಿಗೆ ಮನೆಮನೆಯನ್ನು ತಲುಪಿಸುತ್ತದೆ.

ದಮನಿತರಿಗೆ ಒಂದು ಬ್ರಾಹ್ಮಣೀಯ ಅಪ್ಪುಗೆ

ಇದರ ಜೊತೆಗೆ ಸಮಾಜಿಕ ನ್ಯಾಯ ರಾಜಕಾರಣಕ್ಕೆ ಪ್ರತಿಯಾಗಿ ಬ್ರಾಹ್ಮಣೀಯ ಚೌಕಟ್ಟಿನೊಳಗೆ ಒಬಿಸಿ ಮತ್ತು ದಲಿತ ಸಮುದಾಯವನ್ನು ಒಡೆದು ತಂದುಕೊಳ್ಳುವ ಜಾತಿ ಮುರುಕ, ಸಾಮಾಜಿಕ ಇಂಜಿನಿಯರಿಂಗ್ ಅನ್ನು ಅದು ಬಹಳ ಯಶಸ್ವಿಯಾಗಿ ದೇಶಾದ್ಯಂತ ಬಳಸುತ್ತಿದೆ. ಒಬಿಸಿ ಮತ್ತು ದಲಿತ ಸಮುದಾಯಗಳಲ್ಲಿ ಈಗಾಗಲೇ ಫಲಾನುಭವಿಗಳಾಗಿರುವ ಯಾದವ ಮತ್ತು ಜಾತವ ಸಮುದಾಯಗಳ ಬಗ್ಗೆ ಇರುವ ಅಸಮಾಧಾನವನ್ನು ಬಳಸಿಕೊಂಡು ಆ ವಂಚಿತ ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.

ಈವರೆಗೆ ಅವರಿಗೆ ಆಗಿರುವ ಅನ್ಯಾಯಕ್ಕೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳೇ ಕಾರಣವೆಂದು ಅವರ ವಿರುದ್ಧ ಎತ್ತಿ ಕಟ್ಟುತ್ತಿದೆ. ಆದರೆ ತಾನು ಕೂಡ ಸಾಮಾಜಿಕ ನ್ಯಾಯ ಒದಗಿಸುವ ಯಾವುದೇ ನೀತಿಗಳನ್ನು ವಿರೋಧಿಸುತ್ತಲೇ ಅವರಲ್ಲಿ ಕೆಲವರಿಗೆ ಮಂತ್ರಿ, ಶಾಸಕ, ನಿಗಮ-ಮಂಡಳಿಗಳ ಅಥವಾ ಮೊನ್ನೆ ಹೈದರಾಬಾದಿನಲ್ಲಿ ಕೃಷ್ಣ ಮಾದಿಗರಿಗೆ ಮಾಡಿದಂತೆ ಅಪ್ಪುಗೆ ಭಾಗ್ಯವನ್ನು ಕರುಣಿಸಿ ಮರುಳು ಮಾಡುತ್ತಿದೆ. ಹೀಗಾಗಿಯೇ ಜಾತಿ ಜನಗಣತಿ ಅಸ್ತ್ರವು ಮಂಡಲ್‌ನಷ್ಟು ಈಗ ಕಮಂಡಲವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನೇ ಈ ಚುನಾವಣೆ ಸಾಬೀತು ಮಾಡಿದೆ.

ಕಳೆದ ಚುನಾವಣೆಯಲ್ಲಿ ಮ.ಪ್ರದೇಶದ ಮಂಡಸುರಿನಲ್ಲಿ ಸೋಯ ಬೀನ್ ಬೆಲೆ ಕುಸಿದು ರೈತರ ಹೋರಾಟದ ಮೇಲೆ ಬಿಜೆಪಿ ಸರಕಾರವೇ ಗೋಲಿ ಬಾರ್ ಮಾಡಿತ್ತು. ಈ ಬಾರಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮೋದಿಯ ರೈತ ವಿರೋಧಿ ನೀತಿಗಳ ಬಗ್ಗೆ ವಿಸ್ತೃತವಾಗಿ ಪ್ರಚಾರ ಮಾಡಿ ಬಿಜೆಪಿಯನ್ನು ಸೋಲಿಸಲು ಕರೆ ನೀಡಿದರು. ಆದರೂ ಅದು ಆರೆಸ್ಸೆಸ್ ಅಂಗಸಂಸ್ಥೆಗಳು ಹುಟ್ಟುಹಾಕಿದ್ದ ಕಾಂಗ್ರೆಸ್ ವಿರೋಧಿ ಮತ್ತು ಹಿಂದುತ್ವವಾದಿ ಪ್ರಚಾರದೆದುರು ಸೋತಿರುವುದನ್ನೇ ಫಲಿತಾಂಶಗಳು ಹೇಳುತ್ತವೆ.

ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿ ತಾನು ಬಲಿಪಶುಗಳನ್ನಾಗಿಸುತ್ತಿರುವ ಆದಿವಾಸಿ, ದಲಿತ, ಮಹಿಳೆ ಮತ್ತು ಒಬಿಸಿಗಳ ನಡುವೆ ಕಾಂಗ್ರೆಸ್‌ಗಿಂತ ವೇಗವಾಗಿ ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅದೇ ಈ ಮೂರು ರಾಜ್ಯಗಳ ಚುನಾವಣೆಗಳಲ್ಲಿ ಒಂದು ಕೋಟಿಗೂ ಹೆಚ್ಚುವರಿ ವೋಟಾಗಿ ಪರಿಣಮಿಸಿ ಬಿಜೆಪಿಯನ್ನು ಗೆಲ್ಲಿಸಿದೆ.

ಕಾಂಗ್ರೆಸ್‌ನ ಬಳಿ ಅಥವಾ ಇತರ ಯಾವುದೇ ವಿರೋಧ ಪಕ್ಷದ ಬಳಿ ಇದನ್ನು ಸೋಲಿಸಬಲ್ಲ ರಾಜಕೀಯ, ಸೈದ್ಧಾಂತಿಕ ಸಂಘಟನಾತ್ಮಕ ಪರ್ಯಾಯಗಳಿವೆಯೇ? ಅದಿಲ್ಲದೆ ಬಿಜೆಪಿಯ ನಾಗಾಲೋಟ ನಿಲ್ಲುವುದಿಲ್ಲ. ಇದೇ ಸತ್ಯ. ಇದನ್ನು ಕಟ್ಟಿಕೊಳ್ಳದೆ ಈಗ ಕಾಂಗ್ರೆಸ್ ಉಳಿಸಿಕೊಂಡಿರುವ ಶೇ. 30-40ರಷ್ಟು ವೋಟು ಶೇರುಗಳು ಬರಲಿರುವ ವರ್ಷಗಳಲ್ಲಿ ಉಳಿಯುವುದಿಲ್ಲ. ಹೆಚ್ಚೆಂದರೆ ಹುಸಿ ಸಮಾಧಾನ ಮಾಡಿಕೊಂಡು ಉಸಿರಾಡುತ್ತಿರಬಹುದೇ ವಿನಾ ಆರೆಸ್ಸೆಸ್-ಬಿಜೆಪಿಯ ಮುನ್ನಡೆ ಮತ್ತು ಆಕ್ರಮಣವನ್ನು ಸೋಲಿಸಿ ಮೇಲೆದ್ದು ಬರಲು ಸಾಧ್ಯವಿಲ್ಲ.

ಆದ್ದರಿಂದ ಹುಸಿ ಸಮಾಧಾನಗಳಿಂದ ಹೊರಬಂದು ಸರ್ಜರಿಗೆ ಸಿದ್ಧವಾಗುವುದು ಇಂದಿನ ತುರ್ತು ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News