'ಎಮರ್ಜೆನ್ಸಿ ಪ್ಯಾನಿಕ್ ಬಟನ್ ಕಡ್ಡಾಯ' ಸೂಚನೆ: 1,200 ಕೋಟಿ ರೂ. ಹಗರಣಕ್ಕೆ ದಾರಿ
ಬೆಂಗಳೂರು, ಜ.16: ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ನೀಡಿರುವ ಸೂಚನೆಯು ಅಂದಾಜು 1,200 ಕೋಟಿ ರೂ. ಹಗರಣಕ್ಕೆ ದಾರಿ ಮಾಡಿಕೊಟ್ಟಿರುವುದು ಇದೀಗ ಬಹಿರಂಗವಾಗಿದೆ.
ದಿಲ್ಲಿಯ ಬಸ್ ಹಾಗೂ ಟ್ಯಾಕ್ಸಿಗಳಲ್ಲಿ ಅಳವಡಿಸಿರುವ ಪ್ಯಾನಿಕ್ ಬಟನ್‌ಗಳಲ್ಲಿ ಆಪ್ ಸರಕಾರ ದೊಡ್ಡ ಹಗರಣ ನಡೆಸಿದೆ ಎಂದು ಬಿಜೆಪಿಯು ಆರೋಪಿಸಿರುವ ನಡುವೆಯೇ ರಾಜ್ಯದಲ್ಲಿಯೂ ಇದೇ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನೀಡಿರುವ ನಿರ್ದೇಶನದ ಹಿಂದೆಯೂ ಹಗರಣ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್ ಸಂಘಟನೆಯೊಂದು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೀಡಿರುವ ದೂರು, ಹಗರಣ ನಡೆದಿದೆ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.
ಈ ಉಪಕರಣಗಳನ್ನು ಒಂದು ವರ್ಷದ ಅವಧಿಯೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರವು ನವೆಂಬರ್‌ನಲ್ಲಿಯೇ ಆದೇಶಿಸಿತ್ತು. ಅದರ ಪ್ರಕಾರ ಡಿ.1ರಿಂದ ಇದು ಅನ್ವಯವಾಗಬೇಕಿತ್ತು. ಆದರೆ ಸರಕಾರವು ದಿಢೀರ್ ಎಂದು ಆದೇಶವನ್ನು ಮುಂದೂಡಿತ್ತು.
ಆದರೆ ಈ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಸರಕಾರವು ಹೊರಡಿಸಿದ್ದ ತಿದ್ದುಪಡಿ ಆದೇಶದ ಹಿಂದೆ ಆಟೋ ರಿಕ್ಷಾ ಚಾಲಕರ ಯೂನಿಯನ್ ನೇರವಾಗಿ ಸಾರಿಗೆ ಸಚಿವರಿಗೆ ನೀಡಿದ್ದ ದೂರು ಮೂಲ ಕಾರಣ ಎಂದು ತಿಳಿದು ಬಂದಿದೆ.
ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಸಾಧನಕ್ಕೆ ಜಿಎಸ್‌ಟಿ ಹೊರತುಪಡಿಸಿ 8,000 ರೂ. ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಸಗಟು ಮೂಲಕ ಖರೀದಿಸಿದರೆ ತಲಾ ಉಪಕರಣವು 4,000 ರೂ. ದರದಲ್ಲಿ ಸಿಗಲಿದೆ. ಆದರೂ 8,000 ರೂ. ದರ ನಿಗದಿಯಾಗಿದೆ. ಈ ದರವನ್ನು ಸರಕಾರವು ನಿರ್ಧರಿಸಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಲ್ಲಿರುವ ಕಂಪೆನಿಗಳು ನಿಗದಿಪಡಿಸಿ ನೀಡಿದ್ದ ದರವನ್ನೇ ಸರಕಾರವು ಅನುಮೋದಿಸಿದೆ. ಎಲ್ಲಿಯೂ ಕಂಪೆನಿಗಳೊಂದಿಗೆ ದರ ಸಂಧಾನ ನಡೆಸಿಲ್ಲ ಎಂಬುದು ಗೊತ್ತಾಗಿದೆ.
ಈ ಸಾಧನಗಳನ್ನು ಸರಬರಾಜು ಮಾಡಲು ಮೇಲ್ನೋಟಕ್ಕೆ 13 ಕಂಪೆನಿಗಳು ಅರ್ಹವಾಗಿದೆಯಾದರೂ ಹುಬ್ಬಳ್ಳಿ ಮೂಲದ ನಿರ್ದಿಷ್ಟ ಕಂಪೆನಿ ಮೂಲಕವೇ ಈ ಸಾಧನಗಳು ಮಾರಾಟವಾಗಲಿವೆ ಎಂದು ಗೊತ್ತಾಗಿದೆ.
ಆದರೆ 13 ಕಂಪೆನಿಗಳು ನಿಗದಿಪಡಿಸಿದ್ದ ದರವನ್ನೇ ಸರಕಾರವು ಅನುಮೋದಿಸಿರುವುದರಿಂದ ರಾಜ್ಯದಲ್ಲಿರುವ ಅಂದಾಜು 30 ಲಕ್ಷ ವಾಹನಗಳ ಮಾಲಕರು ಹೆಚ್ಚುವರಿಯಾಗಿ 4,000 ರೂ. ತೆತ್ತಂತಾಗುತ್ತದೆ. ಇದರಿಂದ ಈ 13 ಕಂಪೆನಿಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆಯಾಗಿ 1,200 ಕೋಟಿ ರೂ. ಅಧಿಕ ಆರ್ಥಿಕ ಲಾಭವಾಗಲಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಅರ್ಹತೆ ಪಡೆದಿರುವ 13 ಕಂಪೆನಿಗಳ ಪಟ್ಟಿ: ಚೆನ್ನೈನ ಎಪಿಎಂ ಕಿಂಗ್ಸ್‌ಟ್ರಾಕ್ ಟೆಕ್ನಾಲಜೀಸ್, ಹೊಸದಿಲ್ಲಿಯ ಅಟ್ಲಾಂಟ ಸಿಸ್ಟಂ ಪ್ರೈವೇಟ್ ಲಿಮಿಟೆಡ್, ಉತ್ತರ ಪ್ರದೇಶದ ನಿಪ್ಪಾನ್ ಆಡಿಯೋಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಹರ್ಯಾಣದ ಆರ್‌ಡಿಎಂ ಎಂಟರ್‌ಪ್ರೈಸೆಸ್ ಪ್ರೈವೇಟ್ ಲಿಮಿಟೆಡ್, ಚಂಡಿಗಡದ ಬ್ಲಾಕ್ ಬಾಕ್ಸ್ ಜಿಪಿಎಸ್ ಟೆಕ್ನಾಲಜಿ ಒಪಿಸಿ ಪ್ರೈವೇಟ್ ಲಿಮಿಟೆಡ್, ಹರ್ಯಾಣದ ಇಕೋಗ್ಯಾಸ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಕೇರಳದ ಮರ್ಸಿಡ್ಯಾಜ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ಹೊಸ ದಿಲ್ಲಿಯ ರೋಡ್ ಪಾಯಿಂಟ್ ಲಿಮಿಟೆಡ್ ಮತ್ತು ರೋಸ್‌ಮೆರ್ಟಾ ಆಟೋ ಟೆಕ್ ಪ್ರೈವೇಟ್ ಲಿಮಿಟೆಡ್, ಟ್ರಾನ್‌ಸೈಟ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್, ವಾಲ್ಟಿ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡನ್ನು ಅರ್ಹ ಸಂಸ್ಥೆಗಳೆಂದು ಸರಕಾರವು ಅಂಗೀಕರಿಸಿರುವುದು ಗೊತ್ತಾಗಿದೆ.
ಸಾರ್ವಜನಿಕ ಸೇವಾ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುಪಾತದ ಸಹಭಾಗಿತ್ವದಲ್ಲಿ ಅನುಮೋದನೆ ನೀಡಿ ಆದೇಶಿಸಿದೆ. ಈ ಯೋಜನೆಯನ್ನು 2,035.90 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ 2022ರ ನವೆಂಬರ್ 5ರಂದೇ ಆದೇಶಿಸಿತ್ತು.
ಸಾರ್ವಜನಿಕ ಸೇವಾ ವಾಹನಗಳಿಗೆ ಜಿಪಿಎಸ್ ಮತ್ತು ತುರ್ತು ಪ್ಯಾನಿಕ್ ಬಟನ್ ಸಾಧನ ಅಳವಡಿಸಲು ಜಿಎಸ್‌ಟಿ ಹೊರತುಪಡಿಸಿ 7,900 ರೂ. 8,000ರವರೆಗೆ ದರಗಳನ್ನು ನಿಗದಿಪಡಿಸಲು 13 ಕಂಪೆನಿಗಳು ಕೋರಿದ್ದವು. ಈ ಕುರಿತು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅಧ್ಯಕ್ಷತೆಯಲ್ಲಿ 2023ರ ಅಕ್ಟೋಬರ್ 16ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಕಂಪೆನಿಗಳಿಂದ ಈ ಸಾಧನಗಳಿಗೆ ಸ್ಪರ್ಧಾತ್ಮಕ ದರವಾಗಿ 7,599 ರೂ. ನಿಗದಿಪಡಿಸಿರುವುದು ತಿಳಿದು ಬಂದಿದೆ.
ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಸಾರಿಗೆ ಇಲಾಖೆಯು ಹೇಳಿತ್ತು. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳನ್ನು ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಸಾಧನ ಅಳವಡಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಅರ್ಹತಾ ಪತ್ರ ನವೀಕರಿಸಬಹುದು ಎಂದು ತಿಳಿಸಿತ್ತು.
ರಾಜ್ಯದಲ್ಲಿ ಈ ಯೋಜನೆಯು ಪ್ರಾರಂಭವಾದಾಗಿನಿಂದ ಒಂದು ವರ್ಷದ ಅವಧಿಯಲ್ಲಿ ಅರ್ಹ ವಾಹನಗಳು ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಿತ್ತು. ಸ್ಪರ್ಧಾತ್ಮಕ ದರ, ಒಂದು ವರ್ಷದ ಕಾಲಮಿತಿ 2023ರ ಡಿಸೆಂಬರ್ 1ರಿಂದ ಪ್ರಾರಂಭಿಸುವ ಅಂಶಗಳು ಒಳಗೊಂಡಂತೆ ರಾಜ್ಯದಲ್ಲಿನ ಸರಕು ಸಾಗಣೆ ವಾನಗಳಿಗೆ ಜಿಪಿಎಸ್ ಪ್ಯಾನಿಕ್ ಅಳವಡಿಕೆ ಕಾರ್ಯದ ಯೋಜನೆಯನ್ನು ಪ್ರಾರಂಭಿಸಲು ಸೂಕ್ತ ಆದೇಶ ಹೊರಡಿಸಲು ಕೋರಿತ್ತು.
ಅದರಂತೆ ಸಾರಿಗೆ ಇಲಾಖೆಯು 2023ರ ನವೆಂಬರ್ 23ರಂದು ಆದೇಶ ಹೊರಡಿಸಲಾಗಿದೆ. (ಟಿಡಿ 57 ಟಿಡಿಒ 2019) ಒಂದು ವರ್ಷದ ಅವಧಿಯೊಳಗೆ ಅಂದರೆ 2024ರ ನವೆಂಬರ್ 30ರ ಒಳಗಾಗಿ ಸರಕು ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಪ್ಯಾನಿಕ್ ಬಟನ್ ಸಾಧನ ಅಳವಡಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗಳಿಗೆ ಒಳಪಡುವ ವಾಹನಗಳನ್ನು ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಜಿಪಿಎಸ್ ಪ್ಯಾನಿಕ್ ಬಟನ್ ಸಾಧನ ಅಳವಡಿಸಿರುವಬಗ್ಗೆ ಕಡ್ಡಾಯವಾಗಿ ಖಚಿತಪಡಿಸಿಕೊಂಡು ಅರ್ಹತಾ ಪತ್ರ ನವೀಕರಿಸಬೇಕು ಎಂದು ಆದೇಶದಲ್ಲಿ ನಿರ್ದೇಶಿಸಿದ್ದನ್ನು ಸ್ಮರಿಸಬಹುದು.