ಹತ್ತು ಸಾವಿರಕ್ಕೆ ಮೂರು ಲಕ್ಷ ಕಟ್ಟಿದರೂ ಮುಗಿಯದ ಲೋನ್ !

► ಸಾಲ ಪಡೆದವರನ್ನು ಆತ್ಮಹತ್ಯೆಗೆ ದೂಡುವ ಲೋನ್ ಆ್ಯಪ್ ಗಳು ► ಬಿಬಿಸಿ ತನಿಖಾ ವರದಿಯಲ್ಲಿ ಬಯಲಾಯ್ತು ಭಾರೀ ಮೋಸದ ಜಾಲ

Update: 2023-10-19 18:24 GMT
Editor : Naufal | By : ಆರ್. ಜೀವಿ

ಕಿರ್ಣಿ ಮೌನಿಕಾ ಪಡೆದಿದ್ದು ಕೇವಲ ಹತ್ತು ಸಾವಿರ ರೂಪಾಯಿ ಸಾಲ . ಆಕೆ ಮರು ಪಾವತಿಸಿದ್ದು 3 ಲಕ್ಷಕ್ಕಿಂತ ಹೆಚ್ಚು ಹಣ. ಆದರೂ ಆಕೆಯ ಸಾಲ ಚುಕ್ತಾ ಆಗಲೇ ಇಲ್ಲ. ಜೊತೆಗೆ ಇನ್ನಿಲ್ಲದಂತೆ ಕಿರುಕುಳ ನೀಡುವ ಕಾಲ್ ಗಳು, ಕೊಳಕು ಮೆಸೇಜ್ ಗಳು. ಕೊನೆಗೆ ಆಕೆ ಕಂಗೆಟ್ಟು ಸಾವಿನ ದಾರಿ ಹಿಡಿದೇ ಬಿಟ್ಟಳು. ಆಕೆಯ ಕುಟುಂಬ ಇವತ್ತಿಗೂ ಅದನ್ನೊಂದು ದುಸ್ವಪ್ನದಂತೆ ನೆನಪಿಸುತ್ತದೆ.

ಮೊದಲು ತುರ್ತು ಸಾಲ ಕೊಡ್ತೀವಿ ಅಂತ ಆಮಿಷ ಹುಟ್ಟಿಸುವುದು. ಆಮೇಲೆ ಸಾಲದ ಸುಳಿಯಲ್ಲಿ ಸಿಲುಕಿಸುವುದು. ಅನಂತರ ನಕಲಿ ಬೆತ್ತಲೆ ಚಿತ್ರಗಳ ಮೂಲಕ ಬ್ಲ್ಯಾಕ್ಮೇಲ್ ಮಾಡುವುದು. ತುರ್ತು ಅಗತ್ಯಕ್ಕೆ ಸಾಲ ಪಡೆದವರ ಜೀವನ ಸರ್ವನಾಶ ಮಾಡಿಬಿಡೋದು. ಇದು ನಾಯಿಕೊಡೆಗಳಂತೆ ಹುಟ್ಟಿಕೊಂಡು ಆರ್ಥಿಕ ಅಸಹಾಕತೆಯಿರುವವರ ಸುತ್ತ ಆಕ್ಟೋಪಸ್ನಂತೆ ಬಿಗಿದುಕೊಳ್ಳುವ, ಬಹಳ ಸಲ, ಸಾಲ ಪಡೆದವರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ಮುಟ್ಟಿಸುವ ಲೋನ್ ​ಆ್ಯಪ್ಗಳ ಬೃಹತ್ ಜಾಲದ ಕಥೆ.

ಇಂಥ ಬ್ಲ್ಯಾಕ್‌ಮೇಲ್​ ನ ಬೃಹತ್ ಹಗರಣ ಭಾರತದಾದ್ಯಂತ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಇತರ ದೇಶಗಳಾದ್ಯಂತ ಜನರನ್ನು ವಿಚಿತ್ರ ದುಷ್ಟ ವ್ಯೂಹದಲ್ಲಿ ಸಿಲುಕಿಸು​ತ್ತಿದೆ​, ಅವಮಾನಿಸು​ತ್ತಿದೆ, ​ ಮತ್ತು​ ಕಿರುಕುಳ ನೀಡು​ತ್ತಿದೆ. ಈ ಸುಳಿಯಲ್ಲಿ ಸಿಲುಕಿ ನಿಂದನೆ ಮತ್ತು ಬೆದರಿಕೆಗೆ ತುತ್ತಾಗಿ, ಕಡೆಗೆ ಮಾನಕ್ಕಂಜಿ ಕನಿಷ್ಠ 60 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ​ಮೊನ್ನೆ ಬಿಡುಗಡೆಯಾಗಿರುವ ಬಿಬಿಸಿ ತನಿಖಾ ವರದಿ.

ಭಾರತ ಮತ್ತು ಚೀನಾದಲ್ಲಿ ಈ ಹಗರಣದಿಂದ ಲಾಭ ಗಳಿಸುತ್ತಿರುವವರನ್ನು ಬಿಬಿಸಿ ರಹಸ್ಯ ತನಿಖೆ​ ಮೂಲಕ ಬಯಲಿಗೆಳೆದಿದೆ. ಅದೇ ವೇಳೆ ಈ ಭಯಾನಕ ಬ್ಲ್ಯಾಕ್ಮೇಲ್ ಘಾತುಕತನಕ್ಕೆ ತುತ್ತಾಗಿ ನೆಮ್ಮದಿಯನ್ನೇ ಕಳೆದುಕೊಂಡ ಅದೆಷ್ಟೋ ಕುಟುಂಬಗಳ ಕಥೆಯನ್ನೂ ಈ ವರದಿ ಬಿಚ್ಚಿಟ್ಟಿದೆ.

ಕೊಡುವಾಗ ನಿಮಿಷದಲ್ಲೇ ಸಾಲ ಕೊಟ್ಟುಬಿಡುವ ಈ ಆ್ಯಪ್ಗಳು ಆ ಬಳಿಕವೇ ತಮ್ಮ ಅಸಲೀಯತ್ತು ತೋರಿಸು​ತ್ತವೆ. ಹಣ ವಸೂಲಿಗಾಗಿ ಎಂಥ ನೀಚಮಟ್ಟಕ್ಕೂ ಇಳಿಯಬಲ್ಲ ಇವು, ಸಾಲ ಪಡೆದವರ ಮಾನವನ್ನೇ ಅವರ ಸ್ನೇಹಿತರು ಮತ್ತು ಬಂಧುಬಳಗದ ವಲಯದಲ್ಲಿ ಹರಾಜಿಗಿ​ಡುತ್ತವೆ. ನಿರಂತರ ಮಾನಸಿಕ ಕಿರುಕುಳ ನೀಡಿ, ಸಾವಿನ ದಾರಿಯನ್ನೂ ತೋರಿಸಿಬಿಡುವಷ್ಟು ಅಪಾಯಕಾರಿಯಾ​ಗುತ್ತವೆ.

ಬಹಳ ಸಲ ಸುಶಿಕ್ಷಿತರೂ ಇವುಗಳ ಸುಳಿಯಲ್ಲಿ ಸಿಕ್ಕಿಬಿದ್ದಿರುವ​ ಬಹಳಷ್ಟು ಉದಾಹರಣೆಗಳಿವೆ. ಬಿಬಿಸಿ ವರದಿ ಹೇಳುವ ಪ್ರಕಾರ, ಇದೊಂದು ಜಾಗತಿಕ ಮಟ್ಟದಲ್ಲಿ ಸಕ್ರಿಯವಾಗಿರುವ​ ಬೃಹತ್ ಬ್ಯ್ಲಾಕ್ಮೇಲ್ ಜಾಲ. ಕನಿಷ್ಠ 14 ದೇಶಗಳಲ್ಲಿ ಇಂಥದೇ ತಂತ್ರ ಬಳಸಿ ಹಣ ಮಾಡಿಕೊಳ್ಳುವ ಖದೀಮರ ದೊಡ್ಡ ದಂಡೇ ಇದೆ. ಮತ್ತು ಅದು ತನ್ನ ಲಾಭಕ್ಕೋಸ್ಕರ ಎಷ್ಟೋ ಜೀವಗಳಿಗೇ ಸಂಚಕಾರ ತರುವಂಥ ಕ್ರೂರತನವನ್ನು ತೋರಿಸುವುದಕ್ಕೂ ಹೇಸುವುದಿಲ್ಲ.

ಹೀಗೆ ನಿಮಿಷಗಳಲ್ಲೇ ಸಾಲ ನೀಡುವ ಹಲವು​ ಮೊಬೈಲ್ ಅಪ್ಲಿಕೇಶನ್‌ಗಳಿವೆ. ಎಲ್ಲವೂ ಫೇಕ್ ಆ್ಯಪ್ಗಳಲ್ಲ. ಆದರೆ ಬಹಳಷ್ಟು ಆ್ಯಪ್ಗಳು ಇದೇ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡವುಗಳು. ಅಂಥವನ್ನು ಒಮ್ಮೆ​ ನಿಮ್ಮ ಮೊಬೈಲ್ ಗೆ ಡೌನ್‌ಲೋಡ್ ಮಾಡಿದರೆ ನಿಮ್ಮ ಕಾಂಟ್ಯಾಕ್ಟ್ಗಳು, ಫೋಟೋಗಳು ಮತ್ತು ನಿಮ್ಮ ಎಲ್ಲ ಮಾಹಿತಿಗಳನ್ನೂ ಜಾಲಾಡಿಕೊಂಡುಬಿಡುತ್ತವೆ. ಮತ್ತು ಅನಂತರ ನಿಮ್ಮನ್ನು ಸುಲಿಗೆ ಮಾಡಲು ​ನಿಮ್ಮದೇ ಮಾಹಿತಿಗಳನ್ನು ಬಳಸತೊಡಗುತ್ತವೆ.

​ಈ ಆ್ಯಪ್ಗಳ ಹಿಂದಿರುವವರ ದುಷ್ಟತನ ಅದೆಷ್ಟು ಅಂದ್ರೆ, ಅವರು ಕೇವಲ ಅವರ ಸಾಲ ಮರುಪಾವತಿ ಆಗದಿದ್ದಾಗ ಮಾತ್ರ ಕಿರುಕುಳ ನೀಡೋದಿಲ್ಲ. ಸರಿಯಾಗಿ ಪಾವತಿ ಮಾಡಿದ್ರೂ ಮತ್ತಷ್ಟು ದುಡ್ಡಿಗಾಗಿ ಬ್ಲ್ಯಾಕ್ ಮೇಲ್ ಮಾಡ್ತಾರೆ. ಹಲವು ಬಾರಿ ಸರಿಯಾಗಿಯೇ​ ಸಾಲ ಮರುಪಾವತಿ ಮಾಡಿದರೂ, ಅವ​ರು ಕಿರುಕುಳ ಕೊಡುವುದನ್ನೇ, ಮಾನಹಾನಿ ಮಾಡುವುದನ್ನೇ ಉದ್ದೇಶವಾಗಿಸಿಕೊಂಡಿರು​ತ್ತಾರೆ.

ಗ್ರಾಹಕರ ಮಾಹಿತಿಗಳನ್ನೆಲ್ಲ ಸಂಗ್ರಹಿಸಿಕೊಂಡಿರುವ ಕಾಲ್ ಸೆಂಟರ್‌ಗಳಿಂದ ಏಜೆಂಟ್‌ಗಳ ಕಾಟ ಶುರುವಾಗುತ್ತದೆ. ಸಾಲ ಪಡೆದವರಿಗೆ ಮರುಪಾವತಿ ಮಾಡುವಂತೆ ಕಿರುಕುಳ ನೀಡುವುದಕ್ಕೆ ಮತ್ತು ಅವಮಾನಿಸುವುದಕ್ಕೆಂದೇ ಅವರಿಗೆಲ್ಲ ಟ್ರೈನಿಂಗ್ ನೀಡಲಾಗಿರುತ್ತದೆ. ಮುಂಬೈ ಮೂಲದ ಭೂಮಿ ಸಿನ್ಹಾ ಎಂಬ ಮಹಿಳೆಯೊಬ್ಬರು ಕೂಡ ಇಂಥದೇ ಜಾಲದ ವ್ಯೂಹಕ್ಕೆ ಸಿಲುಕಿ ಹೈರಾಣಾಗಿ ಹೋಗಿದ್ದ ಕಥೆ ಬಿಬಿಸಿ ವರದಿಯಲ್ಲಿದೆ.

ಸ್ವತಃ ವಕೀಲೆ, ವಿಧವೆಯಾಗಿದ್ದು, ಮಗಳನ್ನು ಧೈರ್ಯದಿಂದ ಬೆಳೆಸುತ್ತಿರುವ ಗಟ್ಟಿಗಿತ್ತಿ ಮಹಿಳೆ ಅವರು. ಅಂಥವರು ಕೂಡ ಈ ಜಾಲದಿಂದ ಮಾನಸಿಕ ಕಿರುಕುಳಕ್ಕೆ ತುತ್ತಾಗಿ, ಪ್ರಾಣವನ್ನೇ ಕಳೆದುಕೊಳ್ಳಬೇಕು ಎನ್ನುವಂಥ ಹತಾಶ ಸ್ಥಿತಿ ಮುಟ್ಟಿದ್ದರೆರಂದರೆ, ಇನ್ನು ಜನಸಾಮಾನ್ಯರ ಪಾಡು ಎಂಥದಿರಬಹುದು ಎಂಬುದನ್ನು ಊಹಿಸಲೂ ಕಷ್ಟ.

2021ರ ಕೊನೆಯಲ್ಲಿ ಆರ್ಥಿಕ ಅಗತ್ಯ ಪೂರೈಸಿಕೊಳ್ಳಲು ಭೂಮಿ ಹಲವಾರು ಸಾಲದ ಅಪ್ಲಿಕೇಶನ್‌ಗಳಿಂದ ಸುಮಾರು 47,000 ರೂ. ಸಾಲ ಪಡೆದಿದ್ದರು. ಹಣವೇನೋ ತಕ್ಷಣ ಸಿಕ್ಕಿತ್ತು. ಆದರೆ ಬರುವಾಗಲೇ ಶುಲ್ಕದ ನೆಪದಲ್ಲಿ ದೊಡ್ಡ ಪಾಲನ್ನು ಕಡಿತ ಮಾಡಿಕೊಳ್ಳಲಾಗುತ್ತಿತ್ತು. ಸಾಲ ಪಡೆದ ಏಳು ದಿನಗಳಲ್ಲೇ ಮರುಪಾವತಿ ಮಾಡಬೇಕಿತ್ತು. ಆದರೆ ಆಗಿರಲಿಲ್ಲ. ಅದಕ್ಕಾಗಿ ಮತ್ತೊಂದು ಆ್ಯಪ್ನಿಂದ ಸಾಲ ಪಡೆಯುವುದು, ಆಮೇಲೆ ಇನ್ನೊಂದರಿಂದ ತೆಗೆದುಕೊಳ್ಳುವುದು ಇಂಥ ಅನಿವಾರ್ಯತೆ. ಕಡೆಗೆ ಅವರು 20 ಲಕ್ಷದಷ್ಟು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಕೊಂಡುಬಿಟ್ಟಿದ್ದರು.

ರಿಕವರಿ ಏಜೆಂಟ್‌ಗಳ ಕಾಟ ಆಗಲೇ ಶುರುವಾಗಿತ್ತು. ಅಸಹ್ಯಕರ ರೀತಿಯಲ್ಲಿ ಅವಮಾನಿಸುವುದು ಮತ್ತು ನಿಂದಿಸುವುದು ನಡೆದಿತ್ತು. ಹಣ ಪಾವತಿಸಿದಾಗಲೂ ಅದನ್ನು ಸುಳ್ಳು ಎಂದು ಹೇಳಿ ದೂಷಿಸಲಾಗುತ್ತಿತ್ತು. ದಿನಕ್ಕೆ 200 ಬಾರಿ ಕರೆಗಳು ಬರತೊಡಗಿದ್ದವು. ಅವರ ವಾಸದ ವಿಳಾಸವೂ ಗೊತ್ತೆಂದು ಬೆದರಿಸಲಾಗುತ್ತಿತ್ತು. ಮತ್ತೂ ಒಂದು ಬಗೆಯ ಎಚ್ಚರಿಕೆಯಾಗಿ ಮೃತದೇಹದ ಚಿತ್ರಗಳನ್ನು ಕಳುಹಿಸಲಾಗುತ್ತಿತ್ತು.

ನಿಂದನೆ ಇಷ್ಟಕ್ಕೇ ನಿಲ್ಲಲಿಲ್ಲ. ಆಕೆಯ ಫೋನ್‌ನಲ್ಲಿರುವ ಎಲ್ಲಾ 486 ಸಂಪರ್ಕಗಳಿಗೆ ಆಕೆ ಕಳ್ಳಿ ಮತ್ತು ವೇಶ್ಯೆ ಎಂಬ ಸಂದೇಶಗಳನ್ನು ಕಳಿಸಲಾಯಿತು. ಆಕೆಯ ಮಗಳ ಚಾರಿತ್ರ್ಯದ ಬಗ್ಗೆಯೂ ಬೆದರಿಕೆ ಬಂದಾಗ ಮಾತ್ರ ಆ ತಾಯಿ ನಲುಗಿಹೋದರು. ನಿದ್ದೆ ಕೂಡ ಹತ್ತಿರ ಸುಳಿಯದಂಥ ಸ್ಥಿತಿ ಅವರದಾಯಿತು.

ಆಕೆ ತಮ್ಮ ಸ್ನೇಹಿತರು, ಸಂಬಂಧಿಗಳಿಂದಲೂ ಸಾಲ ಪಡೆದಿದ್ದರು. ಆದರೆ ಹೆಚ್ಚಾಗಿ ಆ್ಯಪ್ಗಳಿಂದ ಪಡೆದಿದ್ದರು. ಸುಮಾರು 69 ಆ್ಯಪ್ಗಳಿಂದ ಸಾಲ ಪಡೆದಿದ್ದರು. ಯಾವ ಮಟ್ಟದ ಕಿರುಕುಳ ಇತ್ತೆಂದರೆ, ಬೆಳಗಾಗದಿದ್ದರೆ ಸಾಕು ಎಂದು ಪ್ರತಿ ರಾತ್ರಿ ಮಲಗುವಾಗ ಪ್ರಾರ್ಥಿಸುವ ಸ್ಥಿತಿ. ಆದರೆ ಬೆಳಗಾದರೆ ಸಾಕು, 7 ಗಂಟೆಗೇ ಫೋನ್ ಕರೆ ಶುರುವಾಗಿಬಿಡುತ್ತಿತ್ತು.

ಕಡೆಗೂ ಹೇಗೋ ಮಾಡಿ ಅವರು ಎಲ್ಲ ಸಾಲವನ್ನೂ ತೀರಿಸಿದರು. ಅಷ್ಟಾದರೂ ಅಸನ್ ಲೋನ್ ಎಂಬ ಒಂದು ಆ್ಯಪ್ ಕಡೆಯಿಂದ ಮಾತ್ರ ಕರೆ ಬರುವುದು ನಿಲ್ಲಲೇ ಇಲ್ಲ. ಅತ್ತ ಕಡೆಯಿಂದ ತೀವ್ರ ಬೆದರಿಕೆ ಬರುತ್ತಿತ್ತು. ಅವರು ಕಂಗೆಟ್ಟು ಹೋಗಿದ್ದರು. ಕೆಲಸದಲ್ಲಿ ಮನಸ್ಸು ತೊಡಗಿಸುವುದಕ್ಕೂ ಆಗುತ್ತಿರಲಿಲ್ಲ.

ಒಂದು ದಿನ ಆಕೆಯ ಸಹೋದ್ಯೋಗಿಯೊಬ್ಬ ಕರೆದು, ತನ್ನ ಫೋನ್ಗೆ ಆಕೆಯ ಬೆತ್ತಲೆ ಚಿತ್ರ ಬಂದಿರುವುದನ್ನು ತೋರಿಸಿದ ಮೇಲಂತೂ ದಿಕ್ಕೆಟ್ಟ ಸ್ಥಿತಿ ಅವರದಾಯಿತು. ಅದು ಯಾರದೋ ದೇಹದ ಚಿತ್ರಕ್ಕೆ ಅವರ ಮುಖವನ್ನು ಜೋಡಿಸಿ ಫೋಟೊಶಾಪ್ ಮೂಲಕ ಕ್ರಿಯೇಟ್ ಮಾಡಿದ್ದ ಚಿತ್ರವಾಗಿತ್ತು. ಅತ್ಯಂತ ಅಸಹ್ಯ ಮತ್ತು ಅವಮಾನದಿಂದ ಆಕೆ ತತ್ತರಿಸಿಬಿಟ್ಟರು. ಇದೇ ಚಿತ್ರವನ್ನು ಅಸನ್ ಲೋನ್ ಆ್ಯಪ್ ಆಕೆಯ ಎಲ್ಲಾ ಕಾಂಟ್ಯಾಕ್ಟ್ಗೂ ಕಳಿಸಿತ್ತು. ಆಗಲೇ ಭೂಮಿ ಆತ್ಮಹತ್ಯೆಯ ಯೋಚನೆ ಮಾಡಿದ್ದು. ಅವರ ಮಗಳಿಗೆ ಚಿಕ್ಕಮ್ಮ ಕರೆ ಮಾಡಿ, ಹುಷಾರು, ಎಲ್ಲೂ ಹೋಗಲು ಬಿಡಬೇಡ, ಬಿಟ್ಟರೆ ಅವರು ಬದುಕಿರುವುದಿಲ್ಲ ಎಂದು ಎಚ್ಚರಿಸಿದ್ದು.

ಪ್ರಪಂಚದಾದ್ಯಂತ ವಿವಿಧ ಕಂಪನಿಗಳು ಇಂಥದೇ ಬ್ಲ್ಯಾಕ್ಮೇಲ್ ಹಗರಣ ನಡೆಸುತ್ತಿರುವ ಬಗ್ಗೆ ಪುರಾವೆಗಳಿವೆ ಎನ್ನುವ ಬಿಬಿಸಿ ವರದಿ, ಭಾರತದಲ್ಲಿ ಮಾತ್ರ ಲೋನ್ ಆ್ಯಪ್ಗಳ ಕಿರುಕುಳಕ್ಕೆ ಒಳಗಾಗಿ ಕನಿಷ್ಠ 60 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತದೆ. ಹಾಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು 20 ಅಥವಾ 30ರ ಆಸುಪಾಸಿನವರೇ ಆಗಿದ್ದಾರೆ ಎನ್ನುತ್ತದೆ ವರದಿ. ಒಬ್ಬ ಅಗ್ನಿಶಾಮಕ ಸಿಬ್ಬಂದಿ, ಒಬ್ಬ ಪ್ರಶಸ್ತಿ ವಿಜೇತ ಸಂಗೀತಗಾರ, ತಮ್ಮ ಮೂರು ಮತ್ತು ಐದು ವರ್ಷದ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ -​ ಹೀಗೆ ಹಲವರ​ ದುರಂತ ಕಥೆಗಳನ್ನು ವರದಿ ಪರಿಶಿಲಿಸಿದೆ. ಸಾಲದ ವ್ಯೂಹಕ್ಕೆ ಬಲಿಯಾದವರಲ್ಲಿ ನಾಲ್ವರಂತೂ ಇನ್ನೂ ಹದಿಹರೆಯದವರಾಗಿದ್ದರು ಎಂಬುದನ್ನೂ ವರದಿ ಉಲ್ಲೇಖಿಸಿದೆ.

​ಕಿರುಕುಳ ನೀಡುವ​ ಈ ಆ್ಯಪ್ಗಳ ಏಜಂಟ​ರಲ್ಲಿ ಹೆಚ್ಚಿನವರು ಅನಾಮಧೇಯರಾಗಿರುತ್ತಾರೆ ಮತ್ತು ಎಲ್ಲಿಂದಲೋ ಕರೆ ಮಾಡುತ್ತಾರೆ. ಅಂಥವರನ್ನು ಹುಡುಕಲು ತಿಂಗಳಾನುಗಟ್ಟಲೆ ಯತ್ನಿಸಿದ ಬಿಬಿಸಿ ಕಡೆಗೂ ಅಂಥ ಒಬ್ಬ ಏಜಂಟ್ನನ್ನು ಪತ್ತೆ ಹಚ್ಚುತ್ತದೆ.

ಸಾಲಪಡೆದವರಿಗೆ ಸಾಯುವ ಯೋಚನೆಗೆ ಹೋಗುವ ಮಟ್ಟಕ್ಕೆ ಕಿರುಕುಳ ನೀಡುವುದು ಮತ್ತು ಕೆಟ್ಟದಾಗಿ ನಿಂದಿಸುವುದು ನಡೆಯುತ್ತದೆ ಎಂಬುದನ್ನು ಆತ ಹೇಳಿರುವುದಾಗಿ ವರದಿ ದಾಖಲಿಸಿದೆ. ಕಡೆಗೆ ಈ ಹಗರಣ ಬಯಲಿಗೆಳೆಯುವುದಕ್ಕೂ ಬಿಬಿಸಿಗೆ ಆತನೇ ನೆರವಾಗಿರುವುದನ್ನು ವರದಿ ಹೇಳಿದೆ. ಆತ ಮಾರುವೇಷದಲ್ಲಿ ಇಂಥ ಎರಡು ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು, ಗ್ರಾಹಕರನ್ನು ನಿಂದಿಸುವ, ಅವರಿಗೆ ಕಿರುಕುಳ ನೀಡುವ ಮತ್ತು ವ್ಯವಸ್ಥಿತ ಸುಲಿಗೆಯ ನೂರಾರು ಸನ್ನಿವೇಶಗಳನ್ನು ರೆಕಾರ್ಡ್ ಮಾಡುತ್ತಾನೆ.

ದೆಹಲಿಯ ಹೊರಗಿರುವ ಕಾಲ್ಫ್ಲೆಕ್ಸ್ ಕಾರ್ಪೋರೇಷನ್ ಎಂಬ ಒಂದು ಕಂಪನಿಯಂತೂ ಅಶ್ಲೀಲ ಮಾತುಗಳಿಂದ ಗ್ರಾಹಕರನ್ನು ನಿಂದಿಸುತ್ತಿದ್ದುದನ್ನು, ಅವಮಾನಿಸುತ್ತಿದ್ದುದನ್ನು ಆತ ಚಿತ್ರೀಕರಿಸಿದ್ದಾನೆ. ಕಡೆಗೆ ಆತನೇ ಆ ಕಂಪನಿಯವರ ಜೊತೆ ಹೂಡಿಕೆದಾರರಂತೆ ನಟಿಸಿದ ಪತ್ರಕರ್ತರ ಸಭೆಯನ್ನು ಏರ್ಪಡಿಸುವಲ್ಲೂ ಯಶಸ್ವಿಯಾಗುತ್ತಾನೆ.

ಇಡೀ ಲೋನ್ ಆ್ಯಪ್ಗಳ ಕಾರ್ಯನಿರ್ವಹಣೆ​ ಹೇಗಿರುತ್ತದೆ​, ಮತ್ತವರು ಹಣ ವಸೂಲಿ ಮಾಡುವ ಎಲ್ಲ ನೀಚ ಮಟ್ಟದ ತಂತ್ರಗಳ ಬಗ್ಗೆಯೂ ಕಾಲ್ ಸೆಂಟರ್ ಉಸ್ತುವಾರಿಯೊಬ್ಬ ಪತ್ರಕರ್ತರ ಎದುರೇ ಎಲ್ಲವನ್ನೂ ವಿವರಿಸುವುದು ಈ ಸಭೆಯಲ್ಲಿ ನಡೆಯುತ್ತದೆ.

ಆದರೆ ಅದೇ ಕಾಲ್ ಸೆಂಟರ್ ಉಸ್ತುವಾರಿಯಾಗಲೀ, ಕಂಪನಿಯ ಇತರರಾಗಲೀ ಬಿಬಿಸಿ ನೇರ​ವಾಗಿ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ ಎಂದು ವರದಿ ಹೇಳಿದೆ. ಈ ವ್ಯೂಹಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡ ​ಕಿರ್ಣಿ ಮೌನಿಕಾಳ ದುರಂತ ಕಥೆಯನ್ನೂ ಬಿಬಿಸಿ ವರದಿ ಉಲ್ಲೇಖಿಸಿದೆ.

24 ವರ್ಷದ ಆ ಸರ್ಕಾರಿ ಉದ್ಯೋಗಿ ಯುವತಿ ಮೂವರು ಅಣ್ಣಂದಿರ ಮುದ್ದಿನ ತಂಗಿಯಾಗಿದ್ದಳು. ರೈತನಾಗಿದ್ದ ಆಕೆಯ ತಂದೆ ಆಕೆ ಮುಂದೆ ಓದುವುದಕ್ಕೂ ಬೆಂಬಲವಾಗಿ ನಿಂತಿದ್ದರು. ಆಸ್ಟ್ರೇಲಿಯಾದಲ್ಲಿ ಓದಿಸಬೇಕೆಂದಿದ್ದರು. ಮೂರು ವರ್ಷಗಳ ಹಿಂದೆ ಆಕೆ ತನ್ನ ಪ್ರಾಣ ಕಳೆದುಕೊಂಡಳು. ತನ್ನ ಆಪ್ತ ಗೆಳತಿಯ ಮನೆಗೆ ಹೋಗಬೇಕೆಂದು ತಯಾರಾಗಿದ್ದವಳು ಬದುಕು ಮುಗಿಸಿಕೊಂಡಿದ್ದಳು. ಆಕೆಯ ಫೋನ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಪೊಲೀಸರು ಪರಿಶೀಲಿಸಿದಾಗಲೇ ಆಕೆ ವಿವಿಧ 55 ಲೋನ್ ಆ್ಯಪ್ಗಳಿಂದ 10 ಸಾವಿರ ರೂ. ಸಾಲ ಪಡೆದಿದ್ದುದು ತಿಳಿದಿತ್ತು. ಬರೀ 10 ಸಾವಿರ ಸಾಲ 30ಕ್ಕೂ ಹೆಚ್ಚು ಪಟ್ಟು ಬೆಳೆದಿತ್ತು. ಆತ್ಮಹತ್ಯೆ ಮಾಡಿಕೊಂಡ ಹೊತ್ತಲ್ಲಿ ಆಗಲೇ ಆಕೆ 3 ಲಕ್ಷಕ್ಕಿಂತ ಹೆಚ್ಚು ಹಣವನ್ನು ಮರುಪಾವತಿ ಮಾಡಿದ್ದಳು.

ಆ್ಯಪ್‌ಗಳು ನಿಂದನೆಯ ಕರೆ ಮತ್ತು ಅಸಭ್ಯ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದುದು ಮತ್ತು ಆಕೆಯ ಕಾಂಟ್ಯಾಕ್ಟ್ಗಳಿಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಆಕೆಯ ಕೋಣೆಯನ್ನು ಅವಳ ನೆನಪಾಗಿ ಹಾಗೇ ಇಡಲಾಗಿದೆ. ಬಾಗಿಲಿಗೆ ಆಕೆಯ ಸರ್ಕಾರಿ ಉದ್ಯೋಗದ ಐಡಿ ಕಾರ್ಡ್ ತೂಗುಹಾಕಲಾಗಿದೆ. ಅವತ್ತು ಗೆಳತಿಯ ಮದುವೆಗೆ ಹೋಗಲು ಆಕೆಯ ತಾಯಿ ತುಂಬಿಸಿದ್ದ ಬ್ಯಾಗ್ ಈಗಲೂ ಕೋಣೆಯಲ್ಲಿ ಹಾಗೆಯೇ ಇದೆ ಎಂದು ವರದಿ ದಾಖಲಿಸಿದೆ.

ಭೂಮಿ ಅವರು ಕೂಡ ಎಲ್ಲ ಬಗೆಯ ಕಿರುಕುಳವನ್ನೂ ಎದುರಿಸಿದರು. ಹೇಗೋ ಧೈರ್ಯ ತಂದುಕೊಂಡರು. ಆದರೆ, ಯಾವಾಗ ತಮ್ಮನ್ನು ಅಶ್ಲೀಲವಾಗಿ ಚಿತ್ರಿಸಿ ಎಲ್ಲರೆದುರು ಇಡಲಾಯಿತೊ ಆಗ ಮಾತ್ರ ಕನಲಿಹೋಗಿದ್ದರು. ಇನ್ನು ಬದುಕಿರಲಾಗದು ಎಂದು ನಿರ್ಧರಿಸಿದ ಆ ಹೊತ್ತಲ್ಲಿ ಅವರಿಗೆ ಅವರ ಸಹೋದರಿ, ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಮತ್ತು ಅಂಥದೇ ಮೋಸಕ್ಕೆ ಒಳಗಾಗಿದ್ದವರ ಸಂಘಟನೆ, ಅದೆಲ್ಲಕ್ಕಿಂತ ಹೆಚ್ಚಾಗಿ ಆಕೆಯ 17 ವರ್ಷದ ಮಗಳು ದೊಡ್ಡ ಧೈರ್ಯವಾಗಿ ನಿಂತರು.

ಬಿಬಿಸಿ ಇದರ ಬಗ್ಗೆಲ್ಲ ಸಂಬಂಧಿಸಿದ ಕಂಪನಿಗಳನ್ನು ಕೇಳಿದ್ದಕ್ಕೆ, ಒಂದೇ ಪ್ರತಿಕ್ರಿಯಿಸದೇ ಇರುವುದು ಅಥವಾ ನಿರಾಕರಿಸುವುದು ನಡೆದಿದೆ. ಹೀಗೆಲ್ಲ ಕಿರುಕುಳ ನೀಡಲಾಗುವುದಿಲ್ಲ. ಏಜಂಟುರುಗಳಿಗೂ ನಿಂದಿಸುವ ಮಾತಾಡದಂತೆ ಸೂಚನೆಯಿದೆ ಎಂದೇ ಉತ್ತರ ಬಂದಿರುವುದು ವರದಿಯಲ್ಲಿದೆ.

ಆದರೆ ಸತ್ಯ ಇದೆಲ್ಲದರ ಆಚೆಗಿದೆ ಎಂಬುದು ಕೂಡ ರಹಸ್ಯವಲ್ಲ. ತುರ್ತು ಸಾಲಕ್ಕಾಗಿ ಇಂಥ ​ಆ್ಯಪ್‌ಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳದಿರುವುದೊಂದೇ ಕ್ಷೇಮದ ದಾರಿ ಎಂದು ಮಾತ್ರ​ ಖಚಿತವಾಗಿ ಹೇಳಬಹುದು. ​ನೀವು ವಿದ್ಯಾರ್ಥಿಯಾಗಿರಬಹುದು, ಮನೆ ನಡೆಸುವ ಗೃಹಿಣಿಯಾಗಿರಬಹುದು, ಮನೆಯ ಜವಾಬ್ದಾರಿ ಹೊತ್ತ ಪತಿಯಾಗಿರಬಹುದು - ಯಾರೇ ಆಗಿರಬಹುದು. ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿಯೂ ಮೊಬೈಲ್ ಆ್ಯಪ್‌ಗಳ ಮೂಲಕ ಸಿಗುವ ತುರ್ತು ಸಾಲದ ಮೊರೆ ಹೋಗಲೇಬೇಡಿ.

ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಹಣದ ಅಗತ್ಯ ಬೀಳಬಹುದು. ಆದರೆ ಸುಲಭವಾಗಿ ಸಿಗುತ್ತೆ ಅಂತ ಆ್ಯಪ್‌ಗಳ ಮೂಲಕ ಲೋನ್ ತೆಗೆದುಕೊಳ್ಳಲೇಬೇಡಿ. ಅದರ ಬದಲು ನಿಮ್ಮ ಅಗತ್ಯಗಳನ್ನು, ಬಯಕೆಗಳನ್ನು ನಿಯಂತ್ರಿಸಿ. ತೀರಾ ಅನಿವಾರ್ಯವಾದರೆ ಬಂಧು, ಮಿತ್ರರಲ್ಲಿ ಕೇಳಿ. ಈ ಆ್ಯಪ್‌ಗಳ ಜಾಲದಲ್ಲಿ ಸಿಲುಕುವುದಕ್ಕಿಂತ ಅದು ಎಷ್ಟೋ ಉತ್ತಮ.

ಒಂದೊಮ್ಮೆ ನೀವು ಅಂತ ಜಾಲದಲ್ಲಿ ಈಗಾಗಲೇ ಸಿಲುಕಿದ್ದರೆ ಕಂಗೆಡಬೇಡಿ, ವಿಷಯವನ್ನು ಮುಚ್ಚಿಡಬೇಡಿ. ಒಂದು ಸಾಲವನ್ನು ಮುಗಿಸಲು ಇನ್ನೊಂದು ಸಾಲದ ಹಿಂದೆ ಹೋಗಬೇಡಿ. ಅದು ಎಂದೆಂದೂ ಮುಗಿಯದ ವಿಷ ವರ್ತುಲ. ನೇರವಾಗಿ ಪೋಲೀಸರ ಬಳಿ ಹೋಗಿ ಮಾಹಿತಿ ನೀಡಿ. ಬಂಧು ಮಿತ್ರರು, ಸಹೋದ್ಯೋಗಿಗಳ ಬಳಿ " ಹೀಗೆ ಆಗಿದೆ, ಏನು ಮಾಡಬೇಕು ?" ಎಂದು ಹೇಳಿ ಸಲಹೆ ಪಡೆಯಿರಿ. ಆ್ಯಪ್‌ಗಳ ಮೋಸಕ್ಕೆ, ಹಣದಾಸೆಗೆ ನಿಮ್ಮ ಅಮೂಲ್ಯ ಜೀವ ಕಳಕೊಳ್ಳಬೇಡಿ. ಸುರಕ್ಷಿತರಾಗಿರಿ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News