‘ಗ್ಯಾರಂಟಿ’ ಘನತೆಗೆ ವಿರುದ್ಧವಾದ ಅಬಕಾರಿ ನೀತಿ?

Update: 2023-09-26 05:04 GMT

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಯೋಜನೆಗಳಿಂದಾಗಿಯೇ ದೇಶಾದ್ಯಂತ ಹೆಸರು ಗಳಿಸಿದೆ. ಇತರ ರಾಜ್ಯಗಳು ಮಾದರಿಯಾಗಿ ತೆಗೆದುಕೊಳ್ಳುವ ಮಟ್ಟಿಗೆ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರಭಾವಶಾಲಿಯಾಗಿವೆ. ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಳ್ಳಬೇಕಾದ ಭಾರವೂ ಸರಕಾರದ ಮೇಲಿದೆ ಎಂಬುದು ನಿಜ. ಆದರೆ, ಆ ವೆಚ್ಚ ಸರಿದೂಗಿಸಲು ಅನಪೇಕ್ಷಿತ ಮಾರ್ಗವೊಂದನ್ನು ಹಿಡಿಯಲು ಸರಕಾರ ಯೋಚಿಸಿದೆಯೇ? ಬಡವರ ಮನೆ ಬೆಳಗುವ ಯೋಜನೆಗಳನ್ನು ಕೊಟ್ಟಿರುವ ಸರಕಾರ, ಅದೇ ಬಡವರ ಮನೆಯೊಳಗೆ ಅಲ್ಲೋಲ ಕಲ್ಲೋಲ ಉಂಟುಮಾಡಬಲ್ಲ ತಪ್ಪು ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆಯೇ?

ರಾಜ್ಯದಲ್ಲಿ ಇನ್ನಷ್ಟು ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಕುರಿತ ಅಬಕಾರಿ ಇಲಾಖೆ ಪ್ರಸ್ತಾವನೆ ಇಂತಹ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯದಲ್ಲಿ, ಅದರಲ್ಲಿಯೂ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ಕೊಡುವ ಪ್ರಸ್ತಾವನೆ ನಿಜಕ್ಕೂ ಆತಂಕ ಹುಟ್ಟಿಸುವಂತಿದೆ.

ಪ್ರಸ್ತಾವನೆಯಲ್ಲಿ ಏನಿದೆ?

389 ಹೆಚ್ಚುವರಿ ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ತೆರೆಯುವ ಪ್ರಸ್ತಾವನೆ ಇದಾಗಿದೆ. ಈ 389ರ ಪೈಕಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿಯಲ್ಲಿ 20, ಕಲಬುರಗಿಯಲ್ಲಿ 20, ಹೊಸಪೇಟೆಯಲ್ಲಿ 22, ಮಂಗಳೂರಿನಲ್ಲಿ 51, ಮೈಸೂರು ನಗರದಲ್ಲಿ 43 ಪರವಾನಿಗೆ ನೀಡಬಹುದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಪ್ರಸ್ತಾವನೆಯಲ್ಲಿನ ಅಪಾಯಕಾರಿ ಅಂಶವೆಂದರೆ, 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಿಗೆ, ಅಲ್ಲದೆ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎನ್ನುವುದು. ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಹೊಸ ಸನ್ನದು ಮಂಜೂರು ಹಾಗೂ ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆಗೆ ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬೇಕೆಂಬ ವಿಚಾರ ಪ್ರಸ್ತಾವನೆಯಲ್ಲಿದೆ.

ದಶಕಕ್ಕೂ ಹಿಂದೆ ಸ್ಥಗಿತಗೊಂಡಿದ್ದ ರೀಟೆಲ್ ವೆಂಡ್ ಆಫ್ ಬಿಯರ್ (ಆರ್.ವಿ.ಬಿ.) ಪರವಾನಿಗೆಗಳ ಪುನರ್ ವಿತರಣೆ ಪ್ರಸ್ತಾವನೆಯೂ ಇದೆ. ಹೊಸದಾಗಿ ಸ್ವತಂತ್ರ ಆರ್.ವಿ.ಬಿ. ಲೈಸೆನ್ಸ್ ನೀಡಿ ಸನ್ನದು ಶುಲ್ಕವನ್ನು 2 ಲಕ್ಷ ರೂ.ಗಳಿಗೆ ನಿಗದಿ ಮಾಡುವ ಪ್ರಸ್ತಾಪವಿದೆ. ಕೇವಲ ಬಿಯರ್‌ನ್ನು ಚಿಲ್ಲರೆಯಾಗಿ ಮಾರಾಟ ಮಾಡಲು ನೀಡುವ ಪರವಾನಿಗೆಯನ್ನು ಸ್ವತಂತ್ರವಾಗಿ 71 ಮಂದಿ ಪಡೆದಿದ್ದಾರೆ. ಉಳಿದಂತೆ ಸ್ಟಾರ್ ಹೊಟೇಲ್ ಮತ್ತಿತರ ಕಡೆ ಹೆಚ್ಚುವರಿಯಾಗಿ ಟ್ಯಾಪ್ ಮೂಲಕ ಬಿಯರ್ ನೀಡುವ ಅವಕಾಶ ಇರುತ್ತದೆ. ಇಂಥವುಗಳನ್ನು ಪ್ರತ್ಯೇಕವಾಗಿ ಆರಂಭಿಸುವುದಕ್ಕೂ ಪರವಾನಿಗೆ ನೀಡುವ ಪ್ರಸ್ತಾವನೆ ಇದೆ.

ಬೇನಾಮಿ ಗುತ್ತಿಗೆ ಸಕ್ರಮಕ್ಕೂ ಅವಕಾಶ ನೀಡುವುದು ಮತ್ತೊಂದು ಪ್ರಸ್ತಾಪ. ರಾಜ್ಯದಲ್ಲಿ ಪರವಾನಗಿದಾರರ ಅಥವಾ ಸನ್ನದುದಾರರ ಬದಲಿಗೆ ಬೇನಾಮಿ ವ್ಯಕ್ತಿಗೆ ಗುತ್ತಿಗೆ ನೀಡಿ ಸುಮಾರು ಶೇ.40ರಷ್ಟು ಮಳಿಗೆಗಳು ನಡೆಯುತ್ತಿವೆ. ಇವುಗಳನ್ನು ಸನ್ನದು ಶುಲ್ಕ ಹಾಗೂ ಹೆಚ್ಚುವರಿ ಶೇ.25ರಷ್ಟು ಶುಲ್ಕ ಪಾವತಿಸಿ ಸಕ್ರಮಗೊಳಿಸಬಹುದು. ಇನ್ನು ಸನ್ನದು ವರ್ಗಾವಣೆ ಶುಲ್ಕ ನಾಲ್ಕು ಪಟ್ಟು ಹೆಚ್ಚಳ ಮಾಡಬಹುದು. ಪ್ರಸ್ತುತ ಸ್ಥಗಿತಗೊಂಡ ಸನ್ನದುದಾರರಿಗೆ ಒಂದು ತಿಂಗಳ ನೋಟಿಸ್ ನೀಡಿ ಮತ್ತೆ ಸಕ್ರಿಯಗೊಳಿಸಲು ಬಾರದಿದ್ದರೆ ಹರಾಜು ಮಾಡಬಹುದು ಎಂದೂ ಪ್ರಸ್ತಾವನೆ ಹೇಳಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಡೀಕರಣ ಎಂಬ ಕಾರಣ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಭಾಗವಾಗಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಲೈಸೆನ್ಸ್ ವಿತರಣೆ ಬಗ್ಗೆ ಪ್ರಸ್ತಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈಗಾಗಲೇ ಒಟ್ಟು 12,593 ವಿವಿಧ ಪರವಾನಿಗೆಗಳ ಮದ್ಯ ಮಾರಾಟ ಮಳಿಗೆಗಳಿವೆ. ಇದೀಗ ಹೊಸದಾಗಿ 389 ಎಂಎಸ್‌ಐಎಲ್ ಮದ್ಯದಂಗಡಿಗಳು ಬಂದರೆ ಏನಾದೀತು ಎಂಬ ಪ್ರಶ್ನೆಯೆದ್ದಿದೆ.

ರಾಜ್ಯವನ್ನು ಕುಡುಕರ ತೋಟವನ್ನಾಗಿ ಮಾಡಲು ಸರಕಾರ ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

‘‘ನಾರಿಯರಿಗೆ ಶಕ್ತಿ ತುಂಬುತ್ತೇವೆ ಎಂದಿದ್ದ ಸರಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ಗೃಹಲಕ್ಷ್ಮೀ ಎಂದ ಸರಕಾರ ಅವರ ಬಾಳಿಗೆ ಗ್ರಹಣವಾಗಿದೆ. ಗೃಹಜ್ಯೋತಿ ಎಂದ ಸರಕಾರ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ. ಅನ್ನಭಾಗ್ಯ ಎಂದ ಸರಕಾರ, ಈಗ ಮದ್ಯಭಾಗ್ಯ ಎನ್ನುತ್ತಿದೆ. ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಸರಕಾರ ಮದ್ಯ ಸಮಾರಾಧನೆಗೆ ಮುಂದಾಗಿದೆ.’’ ಎಂದು ಕುಮಾರಸ್ವಾಮಿ ಸರಕಾರವನ್ನು ಟೀಕಿಸಿದ್ದಾರೆ.


ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ನಿಜವಾಗಿಯೂ ಮನೆ ಬೆಳಗುವ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಿರುವ ಯೋಜನೆಗಳಾಗಿವೆ. ಈ ಯೋಜನೆಗಳು ಸರಕಾರಕ್ಕೆ ನಿಜವಾಗಿಯೂ ಒಂದು ಘನತೆಯನ್ನು ತಂದುಕೊಟ್ಟಿವೆ. ಲಕ್ಷಾಂತರ ಜನರ ಬಾಯಲ್ಲಿ ಸರಕಾರದ ಈ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು, ಪಕ್ಷಗಳು ಇದೇ ಮಾದರಿಯಲ್ಲಿ ಜನರಿಗೆ ಗ್ಯಾರಂಟಿ ಘೋಷಿಸುತ್ತಿವೆ.

ಹೀಗಿರುವಾಗಲೇ ಮತ್ತೊಂದು ದಿಕ್ಕಿನಿಂದ ಸರಕಾರ ಅನಾಹುತಕಾರಿ ನಿರ್ಧಾರವೊಂದನ್ನು ತೆಗೆದುಕೊಂಡು, ಇದೆಲ್ಲದರಿಂದ ಸಿಕ್ಕಿದ ಘನತೆಯನ್ನು ಹಾಳು ಮಾಡಿಕೊಳ್ಳಲಿದೆಯೇ? ಬಡವರ ಪರವಾಗಿರುವ ಸರಕಾರ, ಬಡವರಿಗಾಗಿ ಯೋಜನೆಗಳನ್ನು ಜಾರಿಗೊಳಿಸಿರುವ ಸರಕಾರ, ಮಹಿಳೆಯರ ಹೊರೆ ಕಡಿಮೆ ಮಾಡಿ ಮೆಚ್ಚುಗೆ ಪಡೆದ ಸರಕಾರ, ಈಗ ಅದೇ ಬಡವರು ಹೆಂಡದ ದಾಸರಾಗಲು ಸುಲಭದ ದಾರಿಯನ್ನು ತಾನೇ ತೆರೆದುಬಿಡಲಿದೆಯೆ? ಬಡವರ ಮನೆಯ ಹೆಣ್ಣು ಮಕ್ಕಳ ಬಾಳನ್ನು ನರಕವಾಗಿಸಲಿದೆಯೇ?

ಒಂದು ವೇಳೆ ಹಳ್ಳಿ ಹಳ್ಳಿಗಳಲ್ಲೆಲ್ಲ ಮದ್ಯದಂಗಡಿಗಳು ಬಂದರೆ, ಅದರಿಂದ ಸರಕಾರಕ್ಕೆ ಆದಾಯವೇನೊ ಬರಬಹುದು. ಆದರೆ, ಹಳ್ಳಿಗಳ ಜನ ಹೆಂಡದಾಸೆಗೆ ಬಿದ್ದರೆ, ಮನೆಯ ಯಜಮಾನಿಗೆ ಸರಕಾರದಿಂದ ಬರುವ ದುಡ್ಡಿನ ಮೇಲೆ ಕಣ್ಣಿಡುವುದಿಲ್ಲವೆ? ಅದನ್ನು ಹೆಂಡಕ್ಕಾಗಿ ಕೊಡುವಂತೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಪೀಡಿಸಲು ಶುರು ಮಾಡುವುದಿಲ್ಲವೆ? ಹೇಗೂ ಸರಕಾರ ಕೊಟ್ಟಿರುವ ದುಡ್ಡು ಎಂಬ ಭಾವನೆ ಬಂದುಬಿಟ್ಟರೆ ಇಂಥದೊಂದು ಅನಾಹುತಕ್ಕೂ ಎಡೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಯಾಕೆ ಸರಕಾರ ಇಂಥದೊಂದು ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳಲು ಹೊರಟಿದೆ? ತನ್ನ ಗ್ಯಾರಂಟಿಗಳಿಗೆ ಸಂಪನ್ಮೂಲ ಹೊಂದಿಸಲು ಸರಕಾರ ಈ ಹೆಜ್ಜೆ ಇಡುತ್ತಿದೆ ಎಂದಾದರೆ ಅದು ನಿಜಕ್ಕೂ ದೊಡ್ಡ ವಿಪರ್ಯಾಸ ಮತ್ತು ದುರಂತ. ಗ್ಯಾರಂಟಿ ಯೋಜನೆಗಳಿಂದ ಬಂದ ಖ್ಯಾತಿ ಮತ್ತು ಆ ಯೋಜನೆಗಳ ಎಲ್ಲ ಒಳ್ಳೆಯ ಪರಿಣಾಮಗಳನ್ನು ಬಲು ಬೇಗ ಕೊಚ್ಚಿಕೊಂಡು ಹೋಗಬಲ್ಲ ಅತಿ ಕೆಟ್ಟ ತೀರ್ಮಾನ ಇದಾದೀತು. ಬಲಗೈಯಲ್ಲಿ ಗ್ಯಾರಂಟಿ ಕೊಟ್ಟು ಎಡಗೈಯಲ್ಲಿ ಅವರ ನೆಮ್ಮದಿ ಎಳೆದುಕೊಂಡಂತೆ ಆದೀತು. ಒಬ್ಬ ಸರಿಯಾಗಿರುವ ವ್ಯಕ್ತಿಗೆ ಸರಕಾರವೇ ಕರೆದು ಮದ್ಯ ಕುಡಿಸಿ ಅಮಲು ಬರಿಸಿ ಆಮೇಲೆ ಆ ಅಮಲಿನಲ್ಲಿ ಆತ ಅಪರಾಧ ಎಸಗಿದ್ದಕ್ಕೆ ಬಂಧಿಸುವುದು ಯಾವ ನ್ಯಾಯ ?

ನಿಜ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸವಾಲೇ ಇರಬಹುದು. ಹಾಗೆಂದು ಅಡ್ಡದಾರಿಯ ದುಡ್ಡಿನ ಮೂಲಕ ವೆಚ್ಚ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸರಕಾರ ಬಲಿಯಾದರೆ ಖಂಡಿತ ಬೆಲೆಯಿರುವುದಿಲ್ಲ. ಆದಾಯ ಹೆಚ್ಚಿಸಲು ಸರಕಾರ ಶ್ರೀಮಂತರಿಗೆ, ವಿಲಾಸಿ ವಸ್ತುಗಳಿಗೆ ತೆರಿಗೆ ಹೆಚ್ಚಿಸಲಿ. ಬಿಜೆಪಿಯಾಗಲೀ ಕಾಂಗ್ರೆಸ್ ಆಗಲೀ ಶ್ರೀಮಂತರಿಗೆ ತೆರಿಗೆ ಹೆಚ್ಚಿಸಲು ಯಾಕೆ ಸಿದ್ದವಿಲ್ಲ? ಏನಿದ್ದರೂ ಬಡವರ ಮೇಲೆ ಪರೋಕ್ಷ ಬರೆ ಎಳೆಯುವ ಕ್ರಮಗಳನ್ನೇ ಸರಕಾರಗಳು ಅನುಸರಿಸುವುದೇಕೆ?

ಅಬಕಾರಿ ಆದಾಯ ಎನ್ನುವುದು ಸೂಕ್ಷ್ಮವಾಗಿ, ಬಡವರ ಬಾಳುವೆಯನ್ನು, ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿನ ಜನರ, ಗೃಹಿಣಿಯರ ಬದುಕನ್ನು ಹಾಳು ಮಾಡುವ ಮೂಲಕ ಬರುವ ಹಣವೇ ಆಗಿದೆ. ಬಡವರಿಗಾಗಿ, ಈ ರಾಜ್ಯದ ಹೆಣ್ಣುಮಕ್ಕಳಿಗಾಗಿ ಅತ್ಯುತ್ತಮ ಯೋಜನೆಗಳನ್ನು ತಂದ ಸರಕಾರ, ಅದೇ ಬಡವರ ಮನೆಗಳಲ್ಲಿನ ಕಣ್ಣೀರಿನಿಂದ ಹಣ ತೆಗೆಯುತ್ತಿದೆಯೆಂಬ ದೂಷಣೆಗೆ ಖಂಡಿತ ತುತ್ತಾಗಕೂಡದು. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಬಕಾರಿ ಆದಾಯದ ಆಸೆಗೆ ಬಿದ್ದರೆ ಅದು ಬಹಳ ದೊಡ್ಡ ತಪ್ಪು ನಿರ್ಧಾರವಾದೀತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಚೇತನ್ ಎಸ್.

contributor

Similar News