ಕೇರಳದಲ್ಲಿ ಫೆಲೆಸ್ತೀನ್ ಪರ ಅಸಾಧಾರಣ ಒಗ್ಗಟ್ಟು: ಚರಿತ್ರೆಯ ಅರಿವಿನಿಂದ ಮೂಡಿದ ದೃಢತೆ

ಮುಖ್ಯವಾಗಿ ಕೇರಳದ ಸಮಾಜವು ಸಾಕ್ಷರ ಸಮಾಜವಾಗಿದೆ. ಕೇರಳದಿಂದ ಗಲ್ಫ್‌ಗೆ ವಲಸೆ ಶುರುವಾಗುವುದಕ್ಕೂ ಮೊದಲಿಂದಲೇ ಅರಬ್ ಜಗತ್ತಿನ ಸಾಮಾಜಿಕ ರಾಜಕೀಯ ವಿದ್ಯಮಾನಗಳನ್ನು ಜನಸಾಮಾನ್ಯರು ತಿಳಿಯುವ ಬೌದ್ಧಿಕ ವಾತಾವರಣವೊಂದು ಕೇರಳದಲ್ಲಿ ನಿರ್ಮಾಣವಾಗಿತ್ತು. 1930ರ ಹೊತ್ತಿಗೇ ಫೆಲೆಸ್ತೀನ್ ಕುರಿತು ಮೊದಲ ಮಲಯಾಳಂ ಪುಸ್ತಕ ‘ಫೆಲೆಸ್ತೀನ್ ಪ್ರಶ್ನಮ್’ ಪ್ರಕಟವಾಗಿತ್ತು.

Update: 2023-11-23 05:15 GMT

Photo: aljazeera.com 

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನರಮೇಧ ಶುರುವಾಗಿ ಒಂದೂವರೆ ತಿಂಗಳೇ ದಾಟಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 11,300ಕ್ಕೂ ಹೆಚ್ಚು ಫೆಲೆಸ್ತೀನಿಯರನ್ನು ಇಸ್ರೇಲ್ ಕೊಂದಿದೆ. ಬಲಿಯಾದವರಲ್ಲಿ ಅರ್ಧದಷ್ಟು ಮಕ್ಕಳೇ ಇದ್ದಾರೆ. ಇಸ್ರೇಲ್ ದಾಳಿ ಅತ್ಯಂತ ಕ್ರೂರವಾಗಿದೆ. ರೋಗಿಗಳು ಮತ್ತು ನಿರಾಶ್ರಿತರು ಪ್ರಾಣ ಉಳಿಸಿಕೊಳ್ಳಲು ಉಳಿದಿರುವ ಕಟ್ಟಕಡೆಯ ನೆಲೆಯಾಗಿರುವ ಆಸ್ಪತ್ರೆಗಳ ಮೇಲೆಯೂ ಇಸ್ರೇಲ್ ದಾಳಿ ನಡೆದಿದೆ. ಆಸ್ಪತ್ರೆಯೊಳಗೂ ನುಗ್ಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದನ್ನೂ ರಣರಂಗವಾಗಿಸಿದೆ.

ಇಸ್ರೇಲ್‌ನ ದಾಳಿಯನ್ನು ಖಂಡಿಸಿ ಜಗತ್ತಿನಾದ್ಯಂತ ನಡೆದಿರುವ ಪ್ರತಿಭಟನೆಗಳು ಲೆಕ್ಕವಿಲ್ಲದಷ್ಟು. ತಿಂಗಳಿನಿಂದಲೂ ಫೆಲೆಸ್ತೀನ್ ಪರವಾದ ಪ್ರತಿಭಟನೆಗಳು ನಡೆದಿವೆ. ಇದರ ನಡುವೆಯೇ ಗಮನ ಸೆಳೆದಿರುವುದು, ಗಾಝಾದಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರವಿರುವ ಕೇರಳದಲ್ಲಿ ಫೆಲೆಸ್ತೀನ್ ಪರ ನಡೆಯುತ್ತಿರುವ ರ್ಯಾಲಿಗಳು. ರಾಜಕೀಯ ಪಕ್ಷಗಳು, ಹೋರಾಟಗಾರರು, ಸಾಂಸ್ಕೃತಿಕ ಗುಂಪುಗಳು ಮತ್ತು ಮುಸ್ಲಿಮ್ ಸಂಘಟನೆಗಳು ಸತತವಾಗಿ ಕೇರಳದಲ್ಲಿ ಫೆಲೆಸ್ತೀನ್ ಪರ ರ್ಯಾಲಿಗಳನ್ನು ನಡೆಸಿವೆ. ಕದನ ವಿರಾಮಕ್ಕೆ ಒತ್ತಾಯಿಸಿವೆ. ಇಸ್ರೇಲನ್ನು ಅದರ ಯುದ್ಧಾಪರಾಧಕ್ಕಾಗಿ ಖಂಡಿಸಿವೆ.

ಕೇರಳದ ಆಡಳಿತಾರೂಢ ಸಿಪಿಐ (ಎಂ) ಆಯೋಜಿಸಿದ್ದ ಅಂತಹ ಒಂದು ರ್ಯಾಲಿಯಲ್ಲಿ 50,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ನಾಯಕ ಯಾಸರ್ ಅರಫಾತ್ ನಿಧನರಾಗಿ 19 ವರ್ಷಗಳಾದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದರು. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಆಯೋಜಿಸಿದ್ದ ಮತ್ತೊಂದು ರ್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಕಾಂಗ್ರೆಸ್ ಕೂಡ ನವೆಂಬರ್ 23ರಂದು ಫೆಲೆಸ್ತೀನ್ ಪರ ರ್ಯಾಲಿ ನಡೆಸಲಿದೆ.

ಕೇರಳದಲ್ಲಿನ ಈ ಪ್ರತಿಭಟನೆಗಳಲ್ಲಿ ಫೆಲೆಸ್ತೀನ್ ಪರ ಕಾಣಿಸುತ್ತಿರುವ ಅಸಾಧಾರಣ ಒಗ್ಗಟ್ಟು ಗಮನ ಸೆಳೆದಿದೆ. ಎಷ್ಟರ ಮಟ್ಟಿಗೆಂದರೆ, ಈ ಬಗ್ಗೆ ಅಲ್ ಜಝೀರಾ ಒಂದು ವರದಿಯನ್ನೇ ಮಾಡಿದೆ. ಕೇರಳದ ಸರ್ವಧರ್ಮೀಯರು ಫೆಲೆಸ್ತೀನ್ ಪರ ಯಾಕೆ ನಿಲ್ಲುತ್ತಾರೆ? ಫೆಲೆಸ್ತೀನ್ ಪರವಾದ ಕೇರಳದ ಈ ತೀವ್ರ ಸ್ಪಂದನೆಗೆ ಕಾರಣವೇನು? ಈ ವಿಚಾರಗಳನ್ನು ಅದರಲ್ಲಿ ಚರ್ಚಿಸಲಾಗಿದೆ. ಆ ಕೆಲವು ವಿಚಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಫೆಲೆಸ್ತೀನ್ ಪರ ಕೇರಳದ ಒಗ್ಗಟ್ಟಿಗೆ ಮುಖ್ಯ ಕಾರಣ, ಅರಬ್ ಜಗತ್ತಿನ ಕುರಿತ ಆಳವಾದ ಅರಿವನ್ನು ಕೇರಳ ಹೊಂದಿರುವುದು. ಹಾಗಾಗಿಯೇ ಫೆಲೆಸ್ತೀನ್ ಸಮಸ್ಯೆ, ಅದರ ಸಂಕಟಗಳನ್ನು ಕೇರಳದ ಮನಸ್ಸುಗಳು ಬಹಳ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಲ್ಲವು. 1980ರ ದಶಕದ ಆರಂಭದಲ್ಲಿ ಕೇರಳದಿಂದ ಗಲ್ಫ್‌ಗೆ ವಲಸೆ ಹೋಗುವುದು ಶುರುವಾಯಿತು. ಹೀಗಾಗಿ ಕೇರಳದವರಿಗೆ ಫೆಲೆಸ್ತೀನ್ ಜನರ ಹೋರಾಟಗಳು, ಅದರ ಹಿನ್ನೆಲೆ ಗೊತ್ತಿದೆ. ಅದು ಅವರಲ್ಲಿ ಸಹಜವಾಗಿಯೇ ಫೆಲೆಸ್ತೀನ್ ಪರ ಸಹಾನು ಭೂತಿಗೆ ಕಾರಣವಾಗುತ್ತದೆ. ಪರಿಣಿತರು ಹೇಳುವ ಪ್ರಕಾರ ಕೇರಳದ ಸುಮಾರು 35 ಲಕ್ಷ ಜನರು ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ ಫೆಲೆಸ್ತೀನ್ ಪರ ಕೇರಳದವರು ಒಗ್ಗಟ್ಟಾಗಲು ಇದೊಂದೇ ಕಾರಣವಲ್ಲ. ಮುಖ್ಯವಾಗಿ ಕೇರಳದ ಸಮಾಜವು ಸಾಕ್ಷರ ಸಮಾಜವಾಗಿದೆ. ಕೇರಳದಿಂದ ಗಲ್ಫ್‌ಗೆ ವಲಸೆ ಶುರುವಾಗುವುದಕ್ಕೂ ಮೊದಲಿಂದಲೇ ಅರಬ್ ಜಗತ್ತಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಜನಸಾಮಾನ್ಯರು ತಿಳಿಯುವ ಬೌದ್ಧಿಕ ವಾತಾವರಣವೊಂದು ಕೇರಳದಲ್ಲಿ ನಿರ್ಮಾಣವಾಗಿತ್ತು. ಇದಕ್ಕೆ ಕಾರಣರಾದವರು 1905ರಲ್ಲಿ ಸ್ವದೇಶಾಭಿಮಾನಿ ಪತ್ರಿಕೆಯನ್ನು ಆರಂಭಿಸಿದ್ದ ವಕ್ಕಂ ಮುಹಮ್ಮದ್ ಅಬ್ದುಲ್ ಖಾದರ್ ಮೌಲವಿ. ಪಶ್ಚಿಮ ಏಶ್ಯದ ರಾಜಕೀಯದಲ್ಲಿ ಪರಿಣಿತರಾಗಿದ್ದ ಅವರು, ಫೆಲೆಸ್ತೀನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳ ಬಗ್ಗೆ ಜನರಿಗೆ ತಿಳಿಸಲು ತಮ್ಮ ಪತ್ರಿಕೆಯನ್ನು ಬಳಸಿದರು.

1930ರ ಹೊತ್ತಿಗೇ ಫೆಲೆಸ್ತೀನ್ ಕುರಿತು ಮೊದಲ ಮಲಯಾಳಂ ಪುಸ್ತಕ ಪ್ರಕಟವಾಗಿತ್ತು. ಪತ್ರಕರ್ತ ಮತ್ತು ಸಾಮಾಜಿಕ ರಾಜಕೀಯ ವಿಶ್ಲೇಷಕರಾಗಿದ್ದ ಮುಹಮ್ಮದ್ ಕಣ್ಣು ಬರೆದ ಆ ಪುಸ್ತಕದ ಹೆಸರು ‘ಫೆಲೆಸ್ತೀನ್ ಪ್ರಶ್ನಮ್’. ಇಸ್ರೇಲ್ ದೇಶದ ರಚನೆಗೆ 18 ವರ್ಷಗಳ ಮೊದಲೇ ಪ್ರಕಟವಾಗಿದ್ದ ಪುಸ್ತಕ ಅದು. ಎಡ್ವರ್ಡ್ ಸೈದ್ 1979ರಲ್ಲಿ ‘ಫೆಲೆಸ್ತೀನ್ ಕ್ವೆಶ್ಚನ್’ ಎಂಬ ಪುಸ್ತಕ ಬರೆಯುವುದಕ್ಕೂ 49 ವರ್ಷಗಳಷ್ಟು ಮೊದಲು ಮಲಯಾಳಂನ ಈ ಪುಸ್ತಕ ಪ್ರಕಟವಾಗಿತ್ತೆಂಬುದು ವಿಶೇಷ. ಐತಿಹಾಸಿಕ ದಾಖಲೆಗಳನ್ನು ಬಳಸಿಕೊಂಡು ಬರೆಯಲಾಗಿದ್ದ ಫೆಲೆಸ್ತೀನ್ ಪ್ರಶ್ನಮ್, ಬ್ರಿಟನ್ ಹೇಗೆ ಫೆಲೆಸ್ತೀನ್ ಅನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು ಎಂಬುದನ್ನು ಬಹಿರಂಗಪಡಿಸುತ್ತದೆ.

ಕೇರಳದ ಇಂಥದೊಂದು ಆಳವಾದ ತಿಳಿವಳಿಕೆಯ ಸಮಾಜವೇ ಇಂದು ಫೆಲೆಸ್ತೀನ್ ಪರ ಅದು ಒಗ್ಗಟ್ಟನ್ನು ತೋರಿಸಲು ಕಾರಣ ಎನ್ನುತ್ತಾರೆ ವಿದ್ವಾಂಸರು.

ಮುಸ್ಲಿಮ್ ಗುಂಪುಗಳು ಪ್ರಕಟಿಸುವ ನಿಯತಕಾಲಿಕೆಗಳು ಕೂಡ ಫೆಲೆಸ್ತೀನ್ ಕುರಿತು ಕೇರಳದಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಈ ವಿವಿಧ ಸಂಘಟನೆಗಳು ಪರಸ್ಪರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದವುಗಳಾದರೂ, ಇಸ್ರೇಲ್ ದಾಳಿಯನ್ನು ಖಂಡಿಸುವಲ್ಲಿ, ಫೆಲೆಸ್ತೀನ್ ಪರ ನಿಲ್ಲುವಲ್ಲಿ ಒಂದಾಗಿವೆ. ಹಾಗೆಂದು ಆ ಯಾವ ಸಂಘಟನೆಗಳೂ ಫೆಲೆಸ್ತೀನ್ ವಿಚಾರವನ್ನು ಮುಸ್ಲಿಮ್ ವಿಚಾರವೆಂದು ನೋಡುತ್ತಿಲ್ಲ. ಫೆಲೆಸ್ತೀನ್ ವಿಮೋಚನೆ ಮಾತ್ರವೇ ಎಲ್ಲರ ಕಣ್ಣೆದುರು ಇರುವುದು.

ಫೆಲೆಸ್ತೀನ್ ಪರವಾದ ವಿಚಾರವಾಗಿ ಕೇರಳದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಸಿಪಿಐ (ಎಂ) ಇವುಗಳದ್ದು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದ ಸ್ಪಷ್ಟ ನಿಲುವು. ಈ ಎಲ್ಲಾ ಪಕ್ಷಗಳು ಕೇಂದ್ರದಲ್ಲಿನ ಮೋದಿ ಸರಕಾರವನ್ನು, ಅದು ಇಸ್ರೇಲ್ ಅನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ಇತ್ತೀಚಿನ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತದಾನದಿಂದ ದೂರವಿರುವುದಕ್ಕಾಗಿ ಟೀಕಿಸಿವೆ. ಗಾಂಧಿ, ನೆಹರೂ ಅವರ ಕಾಲದಿಂದಲೂ ಇದ್ದ ಫೆಲೆಸ್ತೀನ್ ಪರ ನಿಲುವಿನ ಕುರಿತ ಅರಿವು ಕೇರಳದ ಈ ರಾಜಕೀಯ ಪಕ್ಷಗಳ ನಿಲುವಿನ ಹಿಂದೆ ಇದೆ.

ಫೆಲೆಸ್ತೀನ್ ಹೋರಾಟವನ್ನು ಮುಸ್ಲಿಮ್ ವಿಚಾರವೆಂದು ಭಾವಿಸುತ್ತಿರುವುದು ಕೆಲವು ಕೆಟ್ಟ ಮನಃಸ್ಥಿತಿಗಳು. ಫೆಲೆಸ್ತೀನ್‌ನಲ್ಲಿ ವಿವಿಧ ನಂಬಿಕೆಗಳ ಜನರಿದ್ದಾರೆ. ಅವರು ತಮ್ಮ ಭೂಮಿಗಾಗಿ ಹೋರಾಡುತ್ತಿದ್ದಾರೆ. ಇಲ್ಲಿ ಧರ್ಮದ ಪ್ರಶ್ನೆಯೇ ಬರುವುದಿಲ್ಲ ಎಂಬ ಅಭಿಪ್ರಾಯವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ನಾಯಕರೊಬ್ಬರು ವ್ಯಕ್ತಪಡಿಸುತ್ತಾರೆ.

ಕೇರಳದ ಹೆಚ್ಚುಗಾರಿಕೆಯೇ ಇಂತಹ ಅಂತರ್‌ರಾಷ್ಟ್ರೀಯ ವಿಚಾರಗಳ ಕುರಿತ ಅದರ ಆಳವಾದ ತಿಳಿವಳಿಕೆಯಾಗಿದೆ. ಕಳೆದ ದಶಕಗಳಲ್ಲಿ, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಕೇರಳ ನೆಲ್ಸನ್ ಮಂಡೇಲಾ ಅವರನ್ನು ಬೆಂಬಲಿಸಿತ್ತು. 1990ರ ದಶಕದ ಆರಂಭದಲ್ಲಿ ಕ್ಯೂಬಾ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದಾಗ ಕ್ಯೂಬಾಕ್ಕೆ ಲಕ್ಷಾಂತರ ಟನ್ ಆಹಾರ ಮತ್ತು ಔಷಧಗಳನ್ನು ಕಳುಹಿಸುವ ಮುತ್ಸದ್ದಿತನ ತೋರಿದ್ದು ಇದೇ ಕೇರಳ. 2003ರಲ್ಲಿ ಇರಾಕ್ ಮೇಲೆ ಅಮೆರಿಕ ಆಕ್ರಮಣದ ಸಮಯದಲ್ಲಿಯೂ ಕೇರಳದಲ್ಲಿ ಹಲವಾರು ಯುದ್ಧ ವಿರೋಧಿ ರ್ಯಾಲಿಗಳು ನಡೆದಿದ್ದವು. ಫೆಲೆಸ್ತೀನ್ ನಾಯಕ ಅರಫಾತ್ ಬಗ್ಗೆ ಕೇರಳ ಬಹಳ ಗೌರವ ತೋರಿಸುತ್ತದೆ. 1970 ಮತ್ತು 1980ರ ದಶಕಗಳಲ್ಲಿ ಯಾಸರ್ ಅರಫಾತ್ ಅವರ ಫೋಟೊಗಳು ಮಾರ್ಕ್ಸ್ ಮತ್ತು ಎಂಗಲ್ಸ್ ಚಿತ್ರಗಳ ಜೊತೆಗೇ ಕೇರಳದ ಅನೇಕ ಕಮ್ಯುನಿಸ್ಟ್ ಪಕ್ಷದ ಕಚೇರಿಗಳ ಗೋಡೆಗಳ ಮೇಲೆ ಇರುತ್ತಿದ್ದವು. ಕೇರಳದ ಜನರು ಯಾವತ್ತೂ ಸಾಮ್ರಾಜ್ಯಶಾಹಿ ವಿರೋಧಿ ನಿಲುವನ್ನು ತೋರಿಸುತ್ತಲೇ ಬಂದಿರುವುದಕ್ಕೆ ಇದು ಉದಾಹರಣೆ ಎನ್ನುತ್ತಾರೆ ಚಿಂತಕರು.

(ಆಧಾರ: ಟಿ.ಎ.ಅಮೀರುದ್ದೀನ್ ಬರಹ, aljazeera.com)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಟಿ.ಎ.ಅಮೀರುದ್ದೀನ್ - aljazeera.com

contributor

Similar News