ಅಕಾಲಿಕ ಮಳೆ ತಂದ ಆಪತ್ತಿನಿಂದ ರೈತರಿಗೆ ಅತಂತ್ರ ಸ್ಥಿತಿ

ಸೆಪ್ಟಂಬರ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ವಾಡಿಕೆ ಮಳೆ 223 ಮಿ.ಮೀ. ಆಗಿದ್ದು, ಈ ಬಾರಿ 251 ಮಿ.ಮೀ. ಮಳೆಯಾಗಿದೆ. ಹಾಗೆಯೇ ಅಕ್ಟೋಬರ್ ತಿಂಗಳಲ್ಲಿ ವಾಡಿಕೆ ಮಳೆ 197 ಮಿ.ಮೀ. ಆಗಿದ್ದು, ಈ ಬಾರಿ 166 ಮಿ.ಮೀ. ಮಳೆಯಾಗಿದೆ. ನವೆಂಬರ್ ತಿಂಗಳಲ್ಲಿ ವಾಡಿಕೆ ಮಳೆ 74 ಮಿ,ಮೀ. ಆಗಿದ್ದು, ಈ ಬಾರಿ ನವೆಂಬರ್ ಮೊದಲ ವಾರದಲ್ಲಿ 45 ಮಿ.ಮೀ. ಮಳೆಯಾಗಿದೆ.

Update: 2023-11-16 06:39 GMT

ಮಡಿಕೇರಿ, ನ.16: ಮಳೆಗಾಲ ಮುಗಿದರೂ, ಪ್ರಸ್ತುತ ಅಕಾಲಿಕ ಮಳೆಯಿಂದ ಕಾಫಿ ಬೆಳೆಯುವ ರೈತರು ಗಿಡಗಳಲ್ಲಿ ಉಳಿದಿರುವ ಬೆಳೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಜನವರಿಯಲ್ಲಿ ಸುರಿದ ಮಳೆಯಿಂದಾಗಿ ಅರೆಬಿಕಾ ಕಾಫಿ ಹಣ್ಣಾಗಿದೆ. ಅದನ್ನು ಕೊಯ್ಲು ಮಾಡಲೇಬೇಕಾದ ಸ್ಥಿತಿಯಲ್ಲಿ ಬೆಳೆಗಾರರು ಇದ್ದಾರೆ. ಈಗಾಗಲೇ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅರೆಬಿಕಾ ಕಾಫಿ ಕೊಯ್ಲು ಪ್ರಾರಂಭಗೊಂಡಿದೆ. ಕೊಯ್ಲು ಮಾಡದೇ ಗಿಡದಲ್ಲೇ ಹಾಗೇ ಬಿಟ್ಟರೆ ಮಳೆಯಿಂದ ಒಡೆದು ಕಾಫಿ ಉದುರಿ ಮಣ್ಣು ಪಾಲಾಗುತ್ತದೆ. ಹಾಗೆಂದು ಕಾರ್ಮಿಕರಿಂದ ಕೊಯ್ಲು ಮಾಡಿಸುವುದು ಕಷ್ಟಸಾಧ್ಯ. ಆದರೂ ಕೊಯ್ಲು ಮಾಡಲೇಬೇಕಾದ ಸ್ಥಿತಿ ಇದೆ. ಮಧ್ಯೆ ಮಧ್ಯೆ ಹಣ್ಣಾಗಿರುವ ಗಿಡಗಳಿಂದ ಕಾಫಿ ಕೊಯ್ಲು ಮಾಡಿಸುದರಿಂದ ಬೆಳೆಗಾರರಿಗೆ ಪ್ರಯೋಜನವೂ ಇಲ್ಲ. ಆದರೂ ಕಾರ್ಮಿಕರಿಗೆ ವೇತನ ನೀಡಲೇಬೇಕಾದ ಸ್ಥಿತಿಯೂ ನಿರ್ಮಾಣವಾಗಿದ್ದು, ಕಾಫಿ ಬೆಳೆಗಾರ ಮಾತ್ರ ಅತಂತ್ರ ಸ್ಥಿತಿಗೆ ತಲುಪಿದ್ದಾನೆ.

ಸದ್ಯದ ಮಳೆಯಿಂದಾಗಿ ರೋಬಾಸ್ಟಗೆ ತೊಂದರೆ ಇಲ್ಲ. ಆದರೆ ಅರೆಬಿಕಾ ಕಾಫಿ ಗುಣಮಟ್ಟ ಕಡಿಮೆಯಾಗಲಿದೆ. ಸೋಮವಾರಪೇಟೆ, ಶನಿವಾರಸಂತೆ, ಸುಂಟಿಕೊಪ್ಪ, ಚೆಟ್ಟಳ್ಳಿ ಭಾಗದಲ್ಲಿ ಹೆಚ್ಚು ಅರೆಬಿಕಾ ಬೆಳೆಯಲಾಗುತ್ತಿದ್ದು, ನಷ್ಟದ ನಡುವೆಯೂ ಕಾಫಿ ಕೊಯ್ಲಿನಲ್ಲಿ ತೊಡಗಿಕೊಂಡಿದ್ದಾರೆ.

ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಪರಿಣಾಮ, ಇರುವ ಕಾಫಿ ಮತ್ತು ಮೆಣಸಿನ ಫಸಲು ನಷ್ಟವಾಯಿತು. ಕೆಲವು ಗಿಡಗಳಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಕೆಲವರು ಹಣ್ಣು ಕಾಫಿಯನ್ನು ಕೊಯ್ಲು ಮಾಡಿಸುತ್ತಿದ್ದಾರೆ. ಆದರೆ, ಕಳೆದ ಒಂದು ವಾರಗಳಿಂದ ಕೊಡಗು ಜಿಲ್ಲೆಯ ಕೆಲವೆಡೆಗಳಲ್ಲಿ ಮಳೆಯಾಗುತ್ತಿದ್ದು, ಕಾಫಿ ಗಿಡದಲ್ಲಿಯೇ ಕೊಳೆಯುತ್ತಿದೆ. ತಕ್ಷಣ ಕೊಯ್ಲು ಮಾಡಬೇಕು. ತಪ್ಪಿದಲ್ಲಿ ಇದು, ಒಡೆದು ಮಣ್ಣು ಸೇರುವುದು ಮತ್ತು ಪಕ್ಷಿಗಳ ಪಾಲಾಗುವುದು ನಿಶ್ಚಿತ.

ಜಿಲ್ಲೆಯ ವಿವಿಧೆಡೆ ಕೆಲವು ಕಾಫಿ ಬೆಳೆಗಾರರು ಕೊಯ್ಲು ಮಾಡುತ್ತಿದ್ದು, ಫಸಲನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿದೆ. ಬಿಸಿಲಿನಲ್ಲಿ ಕಾಫಿ ಬೀಜ ಒಣಗಿದರೆ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಇಲ್ಲದಿದ್ದರೆ ಕಾಫಿಯನ್ನು ಕೊಳ್ಳುವವರೆ ಇಲ್ಲದಂತಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಭಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಕಾಫಿ ಬೆಳೆಯಾಗಲಿಲ್ಲ. ಕಾಳು ಮೆಣಸಿನ ತೆನೆ ಸರಿಯಾಗಿ ಬರಲಿಲ್ಲ. ಬಿಸಿಲಿಗೆ ಕಾಳು ಕಟ್ಟದೆ ಉದುರಿಹೋಗಿದೆ. ಕಾಫಿ ಬೆಳೆಗಾರರಿಗೆ ನಿರಂತರ ನಷ್ಟದಿಂದಾಗಿ ಕಾಫಿ ತೋಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಳೆದ ಕೆಲವು ವರ್ಷಗಳಿಂದ ಹವಾಮಾನ ಸಮಸ್ಯೆಯಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲು ಸಿಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಭಾರಿ ಬರಗಾಲವಾಗಿರುವುದು ಅರೇಬಿಕಾ ಕಾಫಿ ತೋಟಗಳಿಗೆ ಹೆಚ್ಚಿನ ನಷ್ಟವಾಗಿದೆ. ಮುಂದೆ ಬೇಸಿಗೆಯಲ್ಲಿ ಬಿಳಿಕಾಂಡ ಕೊರಕದ ಹಾವಳಿ ಹೆಚ್ಚಾಗಲಿದ್ದು, ಗಿಡಗಳನ್ನು ಕಾಪಾಡಿಕೊಳ್ಳುವುದು ಕಾಫಿ ಬೆಳೆಗಾರರಿಗೆ ಕಷ್ಟವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಇನ್ನು ಸದ್ಯ ನವಂಬರ್ ಕೊನೆ ಹಾಗೂ ಡಿಸೆಂಬರ್‌ನಲ್ಲಿ ಭತ್ತದ ಕಟಾವು ಮಾಡಲಾಗುತ್ತದೆ. ಆದರಿಂದ ಸದ್ಯದ ಮಳೆಯಿಂದಾಗಿ ಭತ್ತದ ಬೆಳೆಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಈ ಬಾರಿ ಮಳೆ ಕೊರತೆಯಿಂದಾಗಿ ಸುಮಾರು 9,791 ಹೆಕ್ಟೇರ್ ಪ್ರದೇಶದಲ್ಲಿ (ಭತ್ತ ಮತ್ತು ಮುಸುಕಿನ ಜೋಳ ಪ್ರದೇಶ) ಬೆಳೆ ಹಾನಿಯಾಗಿದ್ದು, ಅಂದಾಜು 838 ಲಕ್ಷ ರೂ.ನಷ್ಟವಾಗಿದೆ. ಪರಿಹಾರ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

- ಸೋಮಸುಂದರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News