ಕರಾವಳಿಯಲ್ಲಿ ಮತ್ಸ್ಯ ಕ್ಷಾಮದ ಭೀತಿ

Update: 2023-11-23 06:00 GMT
Editor : Thouheed | Byline : ಸತ್ಯಾ ಕೆ.

ಮಂಗಳೂರು, ನ.22: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಮೀನುಗಾರರು ಸಮುದ್ರದಲ್ಲಿ ಮತ್ಸ್ಯಕ್ಷಾಮವನ್ನು ಎದುರಿಸುತ್ತಿದ್ದು, ಖರ್ಚುವೆಚ್ಚ ಸರಿದೂಗಿಸಲಾರದೆ ಪರ್ಸಿನ್ ಸೇರಿದಂತೆ ಬಹುತೇಕ ಮೀನುಗಾರಿಕಾ ದೋಣಿಗಳು ದಡ ಸೇರಿವೆ. ಗಂಗೊಳ್ಳಿ, ಮಲ್ಪೆ ಮಾತ್ರವಲ್ಲದೆ, ಮಂಗಳೂರು ಬಂದರಿನಲ್ಲೂ ಕಳೆದೊಂದು ತಿಂಗಳಿನಿಂದ ಬಹುತೇಕವಾಗಿ ಪರ್ಸೀನ್ ಬೋಟುಗಳು ಸಮುದ್ರಕ್ಕಿಳಿಯುತ್ತಿಲ್ಲ. ಇದರಿಂದಾಗಿ ಈ ದೋಣಿಗಳಲ್ಲಿ ದುಡಿಯುವ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರೂ ಕೂಡಾ ಕೆಲಸವಿಲ್ಲದ ಕಾರಣ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಹಬ್ಬದ ಕಾರಣಕ್ಕೆ ತೆರಳಿದವರೂ ದೋಣಿಗಳು ನೀರಿಗಿಳಿಯದ ಕಾರಣ ಹಿಂತಿರುಗುತ್ತಿಲ್ಲ ಎನ್ನಲಾಗುತ್ತಿದೆ.

ಹವಾಮಾನ ವೈಪರೀತ್ಯ, ಸಮುದ್ರವು ತೀರದ ಕೈಗಾರಿಕಗಳ ಕಲುಷಿತ ನೀರು ಸೇರಿದಂತೆ ಹಲವು ಕಾರಣಗಳಿಂದ ಮಲಿನವಾಗುತ್ತಿರುವುದು, ಅವೈಜ್ಞಾನಿಕ ಮಾದರಿಯ ಮೀನುಗಾರಿಕೆ, ಮರಿ ಮೀನುಗಳ ಹಿಡಿಯುವಿಕೆಯಲ್ಲಿ ನಿಯಂತ್ರಣ ಇಲ್ಲದಿರುವಿಕೆ, ಮಳೆಯ ಕೊರತೆ ಸೇರಿದಂತೆ ಹಲವಾರು ಕಾರಣಗಳು ಸಮುದ್ರದಲ್ಲಿ ಮತ್ಸ್ಯ ಕ್ಷಾಮಕ್ಕೆ ಕಾರಣವಾಗುತ್ತಿದೆ ಎಂಬ ಅಂಶಗಳನ್ನು ಮೀನುಗಾರರು ನೀಡುತ್ತಿದ್ದಾರೆ. ಮೀನುಗಾರಿಕೆಗೆ ತೆರಳುವ ದೋಣಿಗಳಿಗೆ ಸಾಕಷ್ಟು ಮೀನು ದೊರೆಯದ ಕಾರಣ ಮಾರುಕಟ್ಟೆಯಲ್ಲಿ ತಾಜಾ ಮೀನಿನ ದರವೂ ದುಪ್ಪಟ್ಟಾಗಿದೆ.

ಸಾಮಾನ್ಯವಾಗಿ ಜೂನ್ ಮತ್ತು ಜುಲೈನಲ್ಲಿ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕಾ ರಜೆಯ ಬಳಿಕ ಆಗಸ್ಟ್‌ನಿಂದ ಮೀನು ಹೇರಳವಾಗಿ ಸಿಗುವ ಸಮಯ. ಅದರಲ್ಲೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ. ಆದರೆ ಈ ಅವಧಿಯಲ್ಲೇ ಮತ್ಸ್ಯಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ. ಈ ಬಾರಿಯ ಮೀನುಗಾರಿಕಾ ಋತು ಆರಂಭಗೊಂಡಾಗ ಮೀನುಗಾರರು ಮಂಜುಗಡ್ಡೆ ಸಮಸ್ಯೆಯನ್ನು ಎದುರಿಸಿದ್ದರೆ, ಇದೀಗ ಕಳೆದ ಒಂದು ತಿಂಗಳಿನಿಂದೀಚೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಸಮುದ್ರಕ್ಕಿಳಿಯುವ ದೋಣಿಗಳು ಸಾಕಷ್ಟು ಇಳುವರಿ ಇಲ್ಲದೆ ವಾಪಸಾಗುತ್ತಿವೆ. ಇದರಿಂದ ದೋಣಿಗಳನ್ನು ಸಮುದ್ರಕ್ಕಿಳಿಸಲು ದೋಣಿ ಮಾಲಕರು ಹಿಂದೇಟು ಹಾಕುತ್ತಿರುವುದರಿಂದ ಮೀನುಗಾರಿಕಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಮಳೆಗಾಲದಲ್ಲಿ ಕರಾವಳಿಯಲ್ಲಿ ಭಾರೀ ಮಳೆಯ ಕೊರತೆಯೂ ಮತ್ಸ್ಯ ಕ್ಷಾಮಕ್ಕೆ ಹಲವು ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ. ಮಳೆಗಾಲದಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯ ಸಮಯ. ಆ ಸಮಯದಲ್ಲಿ ಮಳೆ ನೀರಿನ ಜೊತೆಗೆ ಮತ್ಸ್ಯ ಸಂಪತ್ತಿಗೆ ಆಹಾರವೂ ನೀರಿನ ಮೂಲಕ ಸಮುದ್ರ ಸೇರುತ್ತವೆ. ಆದರೆ ಈ ಬಾರಿ ಮುಂಗಾರು ಮಳೆ ಭಾರೀ ಕ್ಷೀಣವಾಗಿತ್ತು. ಇದಲ್ಲದೆ ಮಳೆಯ ಸಂದರ್ಭ ಹವಾಮಾನದಿಂದ ಉಂಟಾಗುವ ಸಮುದ್ರ ಮಂಥನ ಮೀನು ಸಂತತಿ ಒಂದೆಡೆಯಿಂದ ಇನ್ನೊಂದೆಡೆ ವಲಸೆ ಹೋಗಲು, ಸಮುದ್ರದ ದಡಕ್ಕೆ ಬರಲು ಕಾರಣವಾಗುತ್ತದೆ. ಆದರೆ ಈ ಬಾರಿ ಮೀನುಗಾರಿಕೆಗೆ ಪೂರಕವಾದ ರೀತಿಯಲ್ಲಿ ಆ ರೀತಿಯ ಸಮುದ್ರ ಮಂಥನವೂ ನಡೆದಿಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ.

ಮೀನುಗಾರಿಕೆ ಒಂದು ರೀತಿಯ ಕೃಷಿ. ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಮೀನುಗಾರಿಕೆ ಇಂದು ವ್ಯವಹಾರವಾಗಿ ಬದಲಾಗಿರುವುದರಿಂದ ಅವೈಜ್ಞಾನಿಕ ರೀತಿಯ ಮೀನುಗಾರಿಕೆ ಹೆಚ್ಚುತ್ತಿದ್ದು, ಮೀನಿನ ಮೀನುಗಾರಿಕೆಯ ಋತುವಿನಲ್ಲೇ ಮೀನಿನ ಕ್ಷಾಮಕ್ಕೆ ಕಾರಣ ಎಂಬ ವಾದವೂ ಮೀನುಗಾರರ ವಲಯದಲ್ಲಿದೆ.

ತೀವ್ರಗೊಳ್ಳುತ್ತಿರುವ ಸಮುದ್ರ ಮಾಲಿನ್ಯ: ಪೌಷ್ಟಿಕ ಆಹಾರವೆಂದೇ ಪರಿಗಣಿಸಲ್ಪಟ್ಟಿರುವ, ಯಾವುದೇ ರಾಸಾಯನಿಕ ಬಳಸದೆ ಉತ್ಪತ್ತಿಯಾ ಗುವ ಸಮುದ್ರದ ಸಂಪತ್ತಾದ ಮೀನಿನ ಸಂತತಿಗಳ ನಾಶಕ್ಕೆ ಪ್ರಸಕ್ತ ದಿನಗಳಲ್ಲಿ ಸಮುದ್ರ ತೀರದ ಕೈಗಾರಿಕೆಗಳಿಂದ ಸೇರುತ್ತಿರುವ ಮಲಿನ, ಕಲುಷಿತ ನೀರು ಕೂಡಾ ಕಾರಣವಾಗುತ್ತಿದೆ. ಮಾತ್ರವಲ್ಲದೆ, ಹಲವು ಮೂಲಗಳಿಂದ ಪ್ಲಾಸ್ಟಿಕ್, ತ್ಯಾಜ್ಯ ಸಮುದ್ರ ಸೇರುತ್ತಿರುವುದು ಕೂಡಾ ಮತ್ಸ್ಯ ಸಂಪತ್ತಿಗೆ ಬಾಧಕವಾಗಿ ಪರಿಣಮಿಸುತ್ತಿದೆ. ಬೇಸಿಗೆ, ಚಳಿಗಾಲ ಎನ್ನದೆ ಕಾಡುವ ವಿಪರೀತ ಉಷ್ಣತೆ, ಮಳೆ ನೀರಿನ ಕೊರತೆಯಿಂದ ಮತ್ಸ್ಯ ಸಂಪತ್ತಿಗೆ ಅಗತ್ಯವಾದ ಆಹಾರವೂ ಸಮುದ್ರ ತೀರಗಳಲ್ಲಿ ಲಭ್ಯವಾಗದ ಕಾರಣ ಮತ್ಸ್ಯ ರಾಶಿ ಸಮುದ್ರ ಮಧ್ಯಭಾಗದಿಂದ ಬೇರೆಕಡೆ ವಲಸೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ಅಂಶಗಳನ್ನೂ ತಲೆತಲಾಂತರಗಳಿಂದ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು ಅಭಿಪ್ರಾಯಿಸುತ್ತಾರೆ.

ಅವೈಜ್ಞಾನಿಕ ಮೀನುಗಾರಿಕೆಗೆ ಬಗ್ಗೆ ಇಲಾಖೆಗಳಿಂದ ಸೂಕ್ತ ಕ್ರಮ ಆಗದಿದ್ದರೆ ಮುಂದೊಂದು ದಿನ ಮೀನುಗಾರಿಕೆಯೇ ಸ್ಥಗಿತವಾಗಲಿದೆ. ಧಕ್ಕೆ ಪ್ರದೇಶದಲ್ಲಿ ಮೀನುಗಾರರು ಹಾಗೂ ಮೀನುಗಾರಿಕೆಗೆ ಅಗತ್ಯವಾದ ಸೂಕ್ತ ಸೌಲಭ್ಯಗಳ ಕೊರತೆಯಿಂದ ರಫ್ತಾಗುವ ಮೀನಿಗೆ ಸೂಕ್ತ ದರ ಸಿಗುತ್ತಿಲ್ಲ. ಈ ಬಗ್ಗೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ವಹಿಸಬೇಕು ಎನ್ನುವುದು ಕರಾವಳಿಯ ವಿವಿಧ ಮೀನುಗಾರಿಕಾ ಸಂಘಟನೆಗಳ ಮೀನುಗಾರರ ಒಟ್ಟು ಅಭಿಪ್ರಾಯ.

ಮಂಗಳೂರು ಧಕ್ಕೆಯಲ್ಲೂ ಮತ್ಸ್ಯ ಕ್ಷಾಮದಿಂದಾಗಿ ಕಳೆದೊಂದು ತಿಂಗಳಿನಿಂದ ಪರ್ಸೀನ್ ಬೋಟುಗಳು ಲಂಗರು ಹಾಕಿವೆ. ಇದಲ್ಲದೆ, ಮಂಗಳೂರು ಮೀನುಗಾರಿಕಾ ಧಕ್ಕೆ ಮೀನುಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬುಧವಾರ ಮೀನುಗಾರಿಕಾ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.

| ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ

ಮೀನುಗಾರ ಮುಖಂಡರು, ಮಂಗಳೂರು

ಕೆಲವೊಂದು ಸಮಯದಲ್ಲಿ ಮೀನುಗಾರಿಕೆಯಲ್ಲಿ ಏರುಪೇರಾಗುವುದು ಸಹಜ. ನಾನು ಕೆಲ ದಿನಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಹಿಂದಿನ ವರ್ಷಗಳ ಮಾಹಿತಿಯನ್ನು ಆಧರಿಸಿ ಮತ್ಸ್ಯಕ್ಷಾಮದ ಬಗ್ಗೆ ನಿರ್ಧರಿಸಲು ಸಾಧ್ಯವಾಗುತ್ತದೆ.

| ಸಿದ್ದಯ್ಯ,

ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.

ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರಿಕಾ ಬೋಟುಗಳು ಲಂಗರು ಹಾಕಿರುವುದು ನಿಜ. ಆದರೆ ಈ ಮತ್ಸ್ಯ ಕ್ಷಾಮಕ್ಕೆ ನಿಖರ ಕಾರಣವನ್ನು ಹೇಳಲಾಗದು. ಮೀನುಗಾರಿಕೆ ಪ್ರಕೃತಿಯನ್ನೇ ಅವಲಂಬಿಸಿ ನಡೆಯುವ ಕೃಷಿ ರೂಪದ ಕಸುಬು. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಸಮುದ್ರ ಮಾಲಿನ್ಯ ಸೇರಿದಂತೆ ಮೀನುಗಾರಿಕೆಗೆ ತೊಡಕಾಗಲು ಹಲವು ಕಾರಣಗಳಿವೆ. ಏರುತ್ತಿರುವ ಉಷ್ಣತೆ, ಮಳೆಯ ಕೊರತೆ ಮೀನುಗಾರಿಕೆಗೂ ತೊಡಕಾಗುತ್ತಿದೆ.

| ಶಶಿಕುಮಾರ್ ಮೆಂಡನ್,

ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸಂಘ, ಮಂಗಳೂರು-ಬಂದರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸತ್ಯಾ ಕೆ.

contributor

Similar News