ಮತ್ಸ್ಯ ಕ್ಷಾಮ: ಸಂಕಷ್ಟದಲ್ಲಿ ಮೀನುಗಾರರು

Update: 2023-12-09 08:09 GMT

ಕಾರವಾರ,ಡಿ.8: ಮಳೆಗಾಲ ಮುಕ್ತಾಯದ ಬಳಿಕ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಈ ಸಲ ಸಾಕಷ್ಟು ನಷ್ಟವಾಗಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದರೂ ಖಾಲಿ ಕೈಯಲ್ಲಿ ಬರುವಂತಾಗಿದೆ.

ಆಳಸಮುದ್ರ ಹಾಗೂ ಒಳನಾಡು ಮೀನುಗಾರಿಕೆ ಸರಿಯಾಗಿ ಆಗದ ಕಾರಣ ಮೀನುಗಾರರು ಕೆಲಸವಿಲ್ಲದೆ ಖಾಲಿ ಇದ್ದಾರೆ. ರಾಜ್ಯದಲ್ಲಿ ಕೆರೆ, ಕೊಳ, ಜಲಾಶಯ ಸೇರಿ 5.74 ಲಕ್ಷ ಹೆಕ್ಟೇರ್ ನಷ್ಟು ಒಳನಾಡು ಜಲಸಂಪನ್ಮೂಲ ಹೊಂದಿದೆ. 320 ಕಿ.ಮೀ. ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು ಸುಮಾರು 9.84 ಲಕ್ಷದಷ್ಟು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ಕಳೆದ ಬಾರಿ ಹಂಗಾಮಿನಲ್ಲಿ 1,962.16 ಕೋಟಿ ರೂ. ಮೌಲ್ಯದ 7.30 ಲಕ್ಷ ಟನ್ ಮೀನು ಉತ್ಪಾದನೆಯಾಗಿತ್ತು. 2021-22ರಲ್ಲಿ 1,17,266 ಮೆಟ್ರಿಕ್ ಟನ್, 2020-21 ರಲ್ಲಿ 1,02,800 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಆದರೆ ಈ ಬಾರಿ ಆರಂಭದಿಂದಲೂ ಹೇಳಿಕೊಳ್ಳುವಂತಹ ಮೀನುಗಾರಿಕೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಆರಂಭದಲ್ಲಿ ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣಕ್ಕೆ ಒಂದಿಷ್ಟು ಬೋಟ್‌ಗಳು ತಡವಾಗಿ ಮೀನುಗಾರಿಕೆಗೆ ತೆರಳಿದ್ದವಾದರೂ ಬಹುತೇಕರು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿ ತೆರಳಿದ್ದರು. ಆದರೆ ಇದೀಗ ಮೀನುಗಾರಿಕಾ ಹಂಗಾಮು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಮೀನುಗಾರಿಕೆ ಚೇತರಿಸಿಕೊಂಡಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳ ಖರ್ಚು ಕೂಡ ಸಿಗದ ಕಾರಣಕ್ಕೆ ಮತ್ತು ಬಲೆಗಳಿಗೆ ಜೆಲ್ಲಿ ಫಿಶ್‌ಗಳೇ ಹೆಚ್ಚಾಗಿ ಸಿಗುವ ಕಾರಣಕ್ಕೆ ಮೀನುಗಾರಿಕೆ ಬಂದ್ ಮಾಡಲಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೃಷಿ ಕ್ಷೇತ್ರ ಬರದಿಂದ ತತ್ತರಿಸಿದಂತೆ ಮೀನುಗಾರಿಕಾ ಕ್ಷೇತ್ರ ಮೀನಿಲ್ಲದೆ ಮತ್ಸ್ಯ ಕ್ಷಾಮ ಎದುರಿಸುತ್ತಿದೆ. ಕಳೆದ ವರ್ಷ ಉತ್ತಮ ಮೀನುಗಾರಿಕೆ ನಡೆಸಿದ್ದ ಪರ್ಷಿಯನ್ ಬೋಟ್‌ಗಳಿಗೂ ಇದೀಗ ಮೀನು ಸಿಗದಂತಾಗಿದೆ. ಇದರಿಂದ ಬಹುತೇಕರು ಬೋಟ್‌ಗಳನ್ನು ಬಂದರುಗಳಲ್ಲಿ ಲಂಗರು ಹಾಕುತ್ತಿದ್ದಾರೆ. ಬಹುತೇಕ ಮೀನುಗಾರರು ಸಾಲ ಮಾಡಿಕೊಂಡಿದ್ದು ತುಂಬಲು ಸಾಧ್ಯವಾಗದ ಸ್ಥಿತಿ. ಇದೀಗ ಮೀನುಗಾರರು ಮತ್ತೆ ಸಾಲ ಕೇಳಿದರೆ ಬ್ಯಾಂಕುಗಳು ನೀಡುತ್ತಿಲ್ಲ. ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಬಹುತೇಕ ಮೀನುಗಾರರ ಮನೆ ಇರುವ ಕಾರಣ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಕೃಷಿ ಕ್ಷೇತ್ರವನ್ನು ಬರ ಎಂದು ಘೋಷಣೆ ಮಾಡಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿಯೂ ಎದುರಾಗಿರುವ ಬರಕ್ಕೆ ಪರಿಹಾರವಾಗಿ ಮೀನುಗಾರರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಉತ್ತರಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.

ಮಳೆ ಕೊರತೆಯಿಂದ ಬಹುತೇಕ ಕೆರೆಗಳಲ್ಲಿ ನೀರು ಕಡಿಮೆ ಇದೆ. ಇದರಿಂದ ಒಳನಾಡು ಮೀನು ಮರಿಗಳಿಗೂ ಬೇಡಿಕೆ ಕಡಿಮೆ ಇದೆ. ಮೀನು ಮರಿ ಉತ್ಪಾದನೆಗೆ ತಾಯಿ ಮೀನುಗಳನ್ನು ಉತ್ಪಾದನಾ ಕೇಂದ್ರದಲ್ಲಿ ಪಾಲನೆ ಮಾಡಲಾಗುತ್ತಿದೆ. ಬೇಡಿಕೆ ಕೊರತೆಯಿಂದಾಗಿ ಈ ವರ್ಷ ತಾಯಿ ಮೀನುಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮೀನುಗಾರಿಕಾ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿರುವ ಆಯ್ದ ಜಲಾಶಯಗಳಲ್ಲಿ ಮೀನು ಬಿತ್ತನೆ ಮಾಡಲು ಮೀನುಗಾರಿಕಾ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಸ್ಟಾನ್ ಹಂತದ ವಿವಿಧ ತಳಿಯ 87.86 ಕೋಟಿ ಮೀನು ಮರಿಗಳನ್ನು ದಾಸ್ತಾನು ಮಾಡಲಾಗಿದೆ. ಸಮುದ್ರದಲ್ಲಿ ಮೀನು ಉತ್ಪಾದನೆ ಹೆಚ್ಚಿಸುವ ಸಂಬಂಧ ಭವಿಷ್ಯದಲ್ಲಿ ಸೂಕ್ತ ತಳಿಯ ಮೀನು ಮರಿ ಉತ್ಪಾದನೆ ಮಾಡಿ ಸಮುದ್ರ, ನದಿ ಹಾಗೂ ಜಲಾಶಯಗಳಿಗೆ ಬಿತ್ತನೆ ಮಾಡಲು ಇಲಾಖೆ ಮುಂದಾಗಿದೆ.

ಮೀನುಗಾರಿಕೆ ಇಲ್ಲದ ಕಾರಣ ಕಾರ್ಮಿಕರಿಗೂ ದುಡಿಮೆ ಇಲ್ಲದಂತಾಗಿದೆ. ಇದರಿಂದ ಕಾರ್ಮಿಕರು ಬೋಟ್ ಬಿಟ್ಟು ತೆರಳುತ್ತಿದ್ದು ಬೋಟ್‌ಗಳನ್ನು ಲಂಗರು ಹಾಕಲಾಗುತ್ತಿದೆ. ಈ ಬಾರಿ ಅವಧಿಗೂ ಮೊದಲೇ ಮತ್ಸ್ಯಕ್ಷಾಮದಿಂದಾಗಿ ಮೀನು ಸಿಗದೆ ಮೀನುಗಾರರು ನಷ್ಟದಲ್ಲಿದ್ದಾರೆ ಎನ್ನುತ್ತಾರೆ ಪ್ರಶಾಂತ ಹರಿಕಂತ್ರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶ್ರೀನಿವಾಸ್ ಬಾಡ್ಕರ್

contributor

Similar News