ಪಂಚರಾಜ್ಯ ಚುನಾವಣೆ: ರಾಜಸ್ಥಾನದ ಸಂಪ್ರದಾಯ ಕಾಂಗ್ರೆಸ್ ಮುರಿಯುವುದೇ?
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜಸ್ಥಾನದಲ್ಲಿ ನವೆಂಬರ್ 25ರಂದು ಚುನಾವಣೆ ನಡೆಯಲಿದೆ. ಪಕ್ಷವೊಂದು ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದದ್ದು ಬಹು ಕಾಲದಿಂದ ರಾಜಸ್ಥಾನದ ರಾಜಕೀಯದಲ್ಲಿ ಇಲ್ಲವೇ ಇಲ್ಲ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಯುವುದೇ ಅಥವಾ ಅದನ್ನು ಕಾಂಗ್ರೆಸ್ ಮುರಿಯಲಿದೆಯೆ ಎಂಬುದು ಒಂದು ಕೂತೂಹಲ. ಬಿಜೆಪಿಯೊಳಗಿರುವ ಅದರದ್ದೇ ಆದ ಬಿಕ್ಕಟ್ಟುಗಳು, ರಾಜ್ಯ ನಾಯಕತ್ವವನ್ನು ದಮನಿಸುವ ಬಿಜೆಪಿ ಹೈಕಮಾಂಡ್ ವರಸೆ ಇವೆಲ್ಲವೂ ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಬಹುದೆ ಎಂಬ ಮತ್ತೊಂದು ಕುತೂಹಲವೂ ಮೂಡಿದೆ.
ಉತ್ತರ ಭಾರತದ ರಾಜ್ಯ ರಾಜಸ್ಥಾನ. ಭಾರತದ ವಾಯವ್ಯ ಭಾಗದಲ್ಲಿರುವ ರಾಜಸ್ಥಾನ, ಭಾರತದ ಇತರ ಐದು ರಾಜ್ಯಗಳ ಗಡಿಯನ್ನು ಹೊಂದಿದೆ. ಉತ್ತರಕ್ಕೆ ಪಂಜಾಬ್, ಈಶಾನ್ಯಕ್ಕೆ ಹರ್ಯಾಣ ಮತ್ತು ಉತ್ತರ ಪ್ರದೇಶ, ಆಗ್ನೇಯಕ್ಕೆ ಮಧ್ಯಪ್ರದೇಶ ಮತ್ತು ನೈಋತ್ಯಕ್ಕೆ ಗುಜರಾತ್ ಇವೆ.
ವಿಸ್ತೀರ್ಣದಲ್ಲಿ ದೇಶದ ಮೊದಲನೇ ಅತಿ ದೊಡ್ಡ ರಾಜ್ಯ. ಜನಸಂಖ್ಯೆಯ ದೃಷ್ಟಿಯಿಂದ ದೇಶದ ರಾಜ್ಯಗಳಲ್ಲಿ ಇದಕ್ಕೆ 7ನೇ ಸ್ಥಾನ. ಇದರ ರಾಜಧಾನಿ ಮತ್ತು ದೊಡ್ಡ ನಗರ ಜೈಪುರ. ಇತರ ಪ್ರಮುಖ ನಗರಗಳೆಂದರೆ, ಜೋಧ್‌ಪುರ, ಕೋಟಾ, ಬಿಕಾನೇರ್, ಅಜ್ಮೀರ್ ಮತ್ತು ಉದಯಪುರ. ಕಾಳಿಬಂಗಾನ್ ಮತ್ತು ಬಲಥಲ್‌ನಲ್ಲಿನ ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳು ರಾಜಸ್ಥಾನದ ವಿಶೇಷತೆಗಳಲ್ಲಿ ಒಂದು. ಪ್ರಾಚೀನ ಅರಾವಳಿ ಪರ್ವತಶ್ರೇಣಿಯಲ್ಲಿರುವ ರಾಜಸ್ಥಾನದ ಏಕೈಕ ಗಿರಿಧಾಮ ಮೌಂಟ್ ಅಬು ಜೈನ ಯಾತ್ರಾ ಸ್ಥಳವಾಗಿದೆ. ಭರತ್ಪುರ ಸಮೀಪವಿರುವ ಕಿಯೊಲಾಡಿಯೊ ರಾಷ್ಟ್ರೀಯ ಉದ್ಯಾನವನ ವಿಶ್ವ ಪಾರಂಪರಿಕ ತಾಣವಾಗಿದ್ದು, ಹಕ್ಕಿಗಳ ಜೀವಜಾಲಕ್ಕೆ ಹೆಸರಾಗಿದೆ.
ರಾಜಸ್ಥಾನದಲ್ಲಿ ಮೂರು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಅವೆಂದರೆ, ಸವಾಯಿ ಮಾಧೋಪುರದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಆಲ್ವಾರ್‌ನಲ್ಲಿರುವ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೋಟಾದ ಮುಕುಂದ್ರ ಹಿಲ್ಸ್ ಟೈಗರ್ ರಿಸರ್ವ್. ಹಿಂದಿನ ರಜಪೂತಾನ ಏಜೆನ್ಸಿ ರಾಜ್ಯಗಳನ್ನು ಹೊಸ ಭಾರತೀಯ ಒಕ್ಕೂಟಕ್ಕೆ ವಿಲೀನಗೊಳಿಸುವುದರೊಂದಿಗೆ 1949ರ ಮಾರ್ಚ್ 30ರಂದು ರಾಜಸ್ಥಾನ ರಾಜ್ಯವನ್ನು ರಚಿಸಲಾಯಿತು. ಆಧುನಿಕ ರಾಜಸ್ಥಾನವು ರಜಪೂತಾನದ ಬಹುಭಾಗವನ್ನು ಒಳಗೊಂಡಿದೆ. ಹಿಂದಿನ ಹತ್ತೊಂಬತ್ತು ರಾಜಪ್ರಭುತ್ವದ ರಾಜ್ಯಗಳು, ಮೂರು ಸಂಸ್ಥಾನಗಳು ಮತ್ತು ಬ್ರಿಟಿಷ್ ಜಿಲ್ಲೆ ಅಜ್ಮೀರ್-ಮೇರ್ವಾರಾಗಳು ಇದರೊಳಗೆ ಸೇರಿವೆ.
ಜೈಸಲ್ಮೇರ್, ಜೋಧ್‌ಪುರ, ಬಿಕಾನೇರ್, ಮೇವಾರ್, ಅಲ್ವಾರ್ ಮತ್ತು ಜೈಪುರ ರಜಪೂತ ರಾಜಪ್ರಭುತ್ವದ ಕೆಲವು ಪ್ರಮುಖ ರಾಜ್ಯಗಳಾಗಿವೆ. ಭರತ್ಪುರ ಮತ್ತು ಧೋಲ್ಪುರ್ ಜಾಟ್ ರಾಜರ ರಾಜ್ಯಗಳಾಗಿದ್ದರೆ, ಟೋಂಕ್ ಪಠಾಣರ ಅಡಿಯಲ್ಲಿ ರಾಜಪ್ರಭುತ್ವದ ರಾಜ್ಯವಾಗಿತ್ತು. ಮೂರು ಸಂಸ್ಥಾನಗಳೆಂದರೆ, ಲಾವಾ, ನೀಮ್ರಾನಾ ಮತ್ತು ಕುಶಾಲ್‌ಘಡ. ರಾಜಸ್ಥಾನ 50 ಜಿಲ್ಲೆಗಳನ್ನು ಹೊಂದಿದ್ದು, ಹತ್ತು ವಿಭಾಗಗಳಲ್ಲಿವೆ. ಆ ವಿಭಾಗಗಳು ಜೈಪುರ್, ಜೋಧ್‌ಪುರ, ಅಜ್ಮೀರ್, ಉದಯಪುರ, ಬಿಕಾನೇರ್, ಕೋಟಾ, ಭರತ್ಪುರ, ಸಿಕಾರ್, ಪಾಲಿ, ಬನ್ಸ್ವಾರಾ.
2011ರ ಭಾರತದ ಜನಗಣತಿಯ ಪ್ರಕಾರ, ರಾಜಸ್ಥಾನದ ಒಟ್ಟು ಜನಸಂಖ್ಯೆ 6 ಕೋಟಿ 85 ಲಕ್ಷ 48 ಸಾವಿರದ 437. ಅಂದರೆ ಭಾರತದ ಜನಸಂಖ್ಯೆಯ ಶೇ.5.66ರಷ್ಟು. ಪ್ರತೀ ಚದರ ಕಿ.ಮೀ.ಗೆ 200 ಜನರಂತೆ ಈ ರಾಜ್ಯದ ಜನಸಾಂದ್ರತೆ ಇದೆ. 2011ರಲ್ಲಿ ಇದ್ದ ಲಿಂಗ ಅನುಪಾತ 928 ಮಹಿಳೆಯರಿಗೆ 1,000 ಪುರುಷರು. ರಾಜ್ಯದ ಜನಸಂಖ್ಯೆಯ ಬಹುಪಾಲು ಸ್ಥಳೀಯ ರಾಜಸ್ಥಾನಿ ಜನರೇ ಆಗಿದ್ದಾರೆ.
1947ರಲ್ಲಿ ಭಾರತ-ಪಾಕಿಸ್ತಾನದ ಪ್ರತ್ಯೇಕತೆಯ ಸಮಯದಲ್ಲಿ ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತದಿಂದ ರಾಜಸ್ಥಾನಕ್ಕೆ ಬಂದ ಸಿಂಧಿಗಳೇ ರಾಜಸ್ಥಾನದ ಜನಸಂಖ್ಯೆಯ ಬಹುಪಾಲು ಇದ್ದಾರೆ.
ಧಾರ್ಮಿಕವಾಗಿ ನೋಡುವುದಾದರೆ, ರಾಜಸ್ಥಾನದ ನಿವಾಸಿಗಳು ಮುಖ್ಯವಾಗಿ ಹಿಂದೂಗಳು, ಅವರು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.88.49ರಷ್ಟು ಇದ್ದಾರೆ. ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇ.9.07ರಷ್ಟು, ಸಿಖ್ಖರು ಶೇ.1.27ರಷ್ಟು ಮತ್ತು ಜೈನರು ಶೇ.0.91ರಷ್ಟು ಇದ್ದಾರೆ.
‘ಔಟ್‌ಲುಕ್’ ಪ್ರಕಾರ, 2003ರ ವರದಿಯಂತೆ ಬ್ರಾಹ್ಮಣರು ರಾಜಸ್ಥಾನದ ಜನಸಂಖ್ಯೆಯಲ್ಲಿ ಶೇ.8ರಿಂದ ಶೇ.10 ರಷ್ಟಿದ್ದಾರೆ, ಆದರೆ 2007ರ ವರದಿಯ ಪ್ರಕಾರ, ಇವರ ಪ್ರಮಾಣ ಕೇವಲ ಶೇ.7 ಎನ್ನಲಾಗಿದೆ. ಮತ್ತೊಂದೆಡೆ, 2007ರ DNA ಇಂಡಿಯಾ ವರದಿಯ ಪ್ರಕಾರ, ರಾಜ್ಯದ ಜನಸಂಖ್ಯೆಯ ಶೇ.12.5ರಷ್ಟು ಬ್ರಾಹ್ಮಣರಿದ್ದಾರೆ.
2018ರ ರಾಜಸ್ಥಾನ ವಿಧಾನಸಭೆ ಚುನಾವಣೆಯ ಸಮಯದಲ್ಲಿ Moneycontrol.com ವರದಿಯ ಪ್ರಕಾರ, ಪರಿಶಿಷ್ಟ ಜಾತಿ ಜನಸಂಖ್ಯೆ ಶೇ.18, ಪರಿಶಿಷ್ಟ ಪಂಗಡದವರು ಶೇ.13, ಜಾಟ್‌ಗಳು ಶೇ.12, ಗುರ್ಜರರು ಮತ್ತು ರಜಪೂತರು ತಲಾ ಶೇ.9, ಬ್ರಾಹ್ಮಣರು ಮತ್ತು ಮೀನಾಗಳು ತಲಾ ಶೇ.7 ಇದ್ದರು.
ಮತ್ತೊಂದು ವರದಿಯ ಪ್ರಕಾರ, ಜಾಟ್‌ಗಳು ರಾಜಸ್ಥಾನದ ಜನಸಂಖ್ಯೆಯಲ್ಲಿ ಶೇ.12ರಿಂದ 15ರಷ್ಟಿದ್ದಾರೆ, ನಂತರದ ಸ್ಥಾನದಲ್ಲಿ ಬರುವ ಮೀನಾಗಳು ಶೇ.10ರಷ್ಟು ಮತ್ತು ಗುರ್ಜರರು ಶೇ.6ರಷ್ಟು ಇದ್ದಾರೆ. ರಾಜಸ್ಥಾನದ ಅಧಿಕೃತ ಭಾಷೆ ಹಿಂದಿ. ರಾಜಸ್ಥಾನದ ಇತರ ಭಾಷೆಗಳು ಪ್ರಾಥಮಿಕವಾಗಿ ಇಂಡೋ-ಆರ್ಯನ್ ಭಾಷೆಗಳ ರಾಜಸ್ಥಾನಿ ಗುಂಪಿಗೆ ಸೇರಿವೆ.
ಉತ್ತರದಲ್ಲಿ ಪಂಜಾಬಿ ಮತ್ತು ಬಾಗ್ರಿ ಉಪಭಾಷೆಗಳಿವೆ, ಇದು ರಾಜಸ್ಥಾನಿ ಮತ್ತು ಪಂಜಾಬಿ ಎರಡೂ ಬೆರೆತ ಭಾಷೆಯಾಗಿದೆ. ಈಶಾನ್ಯದಲ್ಲಿ ಶೇಖಾವತಿ ಮತ್ತು ಧುಂಡರಿ ಮಾತನಾಡುತ್ತಾರೆ. ಇವೆರಡೂ ನಿಧಾನವಾಗಿ ಹರ್ಯಾನ್ವಿ ಎಂಬ ಮತ್ತೊಂದು ಭಾಷೆಯೊಂದಿಗೆ ಸೇರಿಹೋಗುತ್ತಿವೆ.
ಪೂರ್ವದಲ್ಲಿ ಮೇವತ್ ಪ್ರದೇಶದಲ್ಲಿ ಮೇವಾಟಿ ಮಾತನಾಡುತ್ತಾರೆ, ಆದರೆ ದೂರದ ಪೂರ್ವದಲ್ಲಿ ಬ್ರಜ್ ಮಾತನಾಡುತ್ತಾರೆ. ಆಗ್ನೇಯಕ್ಕೆ ಹರ್ಯಾನ್ವಿ ಮಾತನಾಡುತ್ತಾರೆ. ಥಾರ್ ಮರುಭೂಮಿಯ ಹೃದಯಭಾಗದಲ್ಲಿ ಪಶ್ಚಿಮದಲ್ಲಿ ಮಾರ್ವಾಡಿ, ನೈಋತ್ಯದಲ್ಲಿ ಗುಜರಾತಿ, ದಕ್ಷಿಣದಲ್ಲಿ, ಮೇವಾರ್ ಪ್ರದೇಶದಲ್ಲಿ ಮೇವಾರಿ ಮಾತನಾಡುತ್ತಾರೆ, ಆದರೆ ವಾಗಡ್ ಬೆಟ್ಟಗಳಲ್ಲಿ ಭಿಲ್ ಭಾಷೆಯಾದ ವಾಗ್ಡಿ ಮಾತನಾಡುತ್ತಾರೆ.
ರಾಜಸ್ಥಾನಿ ಭಾಷೆಗಳನ್ನು ಮಾತನಾಡುವವರು ತಮ್ಮ ಭಾಷೆಯನ್ನು ಹಿಂದಿ ಎಂದು ಉಲ್ಲೇಖಿಸುತ್ತಾರೆ. ನಗರ ಪ್ರದೇಶಗಳಲ್ಲಿ ಹಿಂದಿ, ಉರ್ದು ಮಾತನಾಡುವುದು ಸಾಮಾನ್ಯ. ಆದಾಗ್ಯೂ ಬಹುಪಾಲು ಮುಸ್ಲಿಮರು ರಾಜಸ್ಥಾನಿ ಭಾಷೆಗಳಲ್ಲಿ ಒಂದನ್ನು ತಮ್ಮ ಮೊದಲ ಭಾಷೆಯಾಗಿ ಮಾತನಾಡುತ್ತಾರೆ. ಸಿಂಧಿ ಭಾಷೆ ನಗರಗಳಲ್ಲಿ ಮತ್ತು ಪಾಕಿಸ್ತಾನದ ಸಿಂಧ್‌ನ ಗಡಿಯುದ್ದಕ್ಕೂ ಸಾಮಾನ್ಯವಾಗಿದೆ.
ರಾಜಸ್ಥಾನ ವಿಧಾನಸಭೆ ಮೊದಲು ರಚನೆಯಾದದ್ದು 1952ರ ಮಾರ್ಚ್ 31ರಂದು. ಆಗ 160 ಸದಸ್ಯರ ಬಲವನ್ನು ಹೊಂದಿತ್ತು. 1956 ರಲ್ಲಿ ಹಿಂದಿನ ಅಜ್ಮೀರ್ ರಾಜ್ಯ ರಾಜಸ್ಥಾನದೊಂದಿಗೆ ವಿಲೀನಗೊಂಡ ನಂತರ ಸದಸ್ಯ ಬಲ 190ಕ್ಕೆ ಹೆಚ್ಚಿತು.
ಎರಡು ಮತ್ತು ಮೂರನೇ ವಿಧಾನಸಭೆಗಳ ಸದಸ್ಯ ಬಲ 176 ಇತ್ತು. ನಾಲ್ಕು ಮತ್ತು ಐದನೇ ವಿಧಾನಸಭೆಯ ಸದಸ್ಯ ಬಲ ತಲಾ 184 ಇತ್ತು. ಆರನೇ ವಿಧಾನಸಭೆಯಿಂದ ಸಂಖ್ಯಾಬಲ 200 ಆಯಿತು. ಪ್ರಸಕ್ತ ರಾಜಸ್ಥಾನದಲ್ಲಿ 200 ವಿಧಾನಸಭೆ ಕ್ಷೇತ್ರಗಳಿವೆ. 5 ಕೋಟಿ 26 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದೆ.
ಪಕ್ಷಗಳ ಬಲಾಬಲ
2018ರ ಚುನಾವಣೆಯಲ್ಲಿನ ಬಲಾಬಲ ನೋಡುವುದಾದರೆ, ಕಾಂಗ್ರೆಸ್100, ಬಿಜೆಪಿ 73, ಬಿಎಸ್‌ಪಿ 6, ಆರ್‌ಎಲ್‌ಪಿ 3, ಸಿಪಿಐಎಂ 2, ಬಿಟಿಪಿ 2, ಆರ್‌ಎಲ್‌ಡಿ 1 ಹಾಗೂ ಪಕ್ಷೇತರರು 13 ಮಂದಿ. ಸರಕಾರ ರಚಿಸಲು ಕಾಂಗ್ರೆಸ್‌ಗೆ ಕೇವಲ ಒಂದು ಮತದ ಕೊರತೆ ಎದುರಾಗಿತ್ತು. ಅದು ಬಿಎಸ್‌ಪಿ ಮತ್ತು ಇತರ ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸಿತ್ತು. 2013ರ ಚುನಾವಣೆಯಲ್ಲಿ 163 ಸೀಟುಗಳ ಭರ್ಜರಿ ಬಹುಮತ ಪಡೆದಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಗೆದ್ದಿದ್ದು 73 ಸೀಟುಗಳನ್ನು ಮಾತ್ರ.
ರಾಜಸ್ಥಾನದಲ್ಲಿ ಬಹು ಹಿಂದಿನಿಂದಲೂ ಒಮ್ಮೆ ಗೆದ್ದ ಪಕ್ಷ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದದ್ದಿಲ್ಲ. ಐದು ದಶಕಗಳಿಂದಲೂ ಪರ್ಯಾಯ ಸರಕಾರಗಳನ್ನೇ ಆಯ್ಕೆ ಮಾಡುತ್ತ ಬಂದಿರುವ ಈ ರಾಜ್ಯದಲ್ಲಿ ಪೈಪೋಟಿ ಇರುವುದು ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ.
2018ರಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿದ್ದು ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜಂಟಿ ನಾಯಕತ್ವದಲ್ಲಿ. ಬಿಜೆಪಿ ಚುನಾವಣೆ ಎದುರಿಸಿದ್ದು ವಸುಂಧರಾ ರಾಜೇ ಮತ್ತು ಮೋದಿ ನೇತೃತ್ವದಲ್ಲಿ. 2018ರಲ್ಲಿ ಬಿಜೆಪಿಯನ್ನು ಮಣಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ಸರಕಾರಕ್ಕೆ ಹಲವು ಬಾರಿ ವಿಪತ್ತು ಎದುರಾಗಿದ್ದು ಸಚಿನ್ ಪೈಲಟ್ ಅವರ ಬಂಡಾಯದಿಂದಾಗಿ. ಅವರ ಈ ಬಂಡಾಯದ ಹಿನ್ನೆಲೆಯಲ್ಲಿದ್ದದ್ದು ಮುಖ್ಯಮಂತ್ರಿ ಪದವಿಯ ಮೇಲಿನ ಆಕಾಂಕ್ಷೆ. ಫಲಿತಾಂಶ ಬಂದಾಗಲೇ, ಅದಕ್ಕಾಗಿ ಅವರು ನಡೆಸಿದ್ದ ತೀವ್ರ ಪ್ರಯತ್ನ ಫಲಿಸಿರಲಿಲ್ಲ. ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ಸಚಿನ್ ಪೈಲಟ್ ಡಿಸಿಎಂ ಆದರು. ಆದರೆ ಅವರ ಅಸಮಾಧಾನ ಮಾತ್ರ ವಿವಿಧ ರೂಪಗಳಲ್ಲಿ ಹೊರಬೀಳುತ್ತಲೇ ಇತ್ತು. ಮೊದಲು ಅವರು ಸರಕಾರದ ವಿರುದ್ಧವೇ ಬಂಡೆದ್ದರು. ಪರಿಣಾಮವಾಗಿ ಡಿಸಿಎಂ ಹುದ್ದೆ ಕಳೆದುಕೊಂಡರು. ಬಿಜೆಪಿಗೆ ಹೋಗುತ್ತಾರೆಂಬ ಮಾತುಗಳಿದ್ದರೂ, ಪಕ್ಷದಲ್ಲಿಯೇ ಉಳಿದರು. ಆದರೆ ಗೆಹ್ಲೋಟ್ ಸರಕಾರಕ್ಕೆ ಅವರಿಂದ ಅಪಾಯ ಎದುರಾಗುವುದು ಮಾತ್ರ ತಪ್ಪಲಿಲ್ಲ. ತಮ್ಮದೇ ಸರಕಾರದ ವಿರುದ್ಧ ಪೈಲಟ್ ಪ್ರತಿಭಟನೆಗೆ ಇಳಿದರು. ವಸುಂಧರಾ ರಾಜೇ ಸರಕಾರದ ಭ್ರಷ್ಟಾಚಾರಗಳ ಬಗ್ಗೆ ಮೃದು ಧೋರಣೆ ಆರೋಪವನ್ನೂ ಗೆಹ್ಲೋಟ್ ಸರಕಾರ ಎದುರಿಸಬೇಕಾಯಿತು.
ಜನಸಂಖ್ಯಾ ದೃಷ್ಟಿಯಿಂದ ರಾಜಸ್ಥಾನದ ದೊಡ್ಡ ನಗರಗಳು
ಜೈಪುರ -30,73,349ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜಸ್ಥಾನದಲ್ಲಿ ನವೆಂಬರ್ ೨೫ರಂದು ಚುನಾವಣೆ ನಡೆಯಲಿದೆ. ಪಕ್ಷವೊಂದು ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದದ್ದು ಬಹು ಕಾಲದಿಂದ ರಾಜಸ್ಥಾನದ ರಾಜಕೀಯದಲ್ಲಿ ಇಲ್ಲವೇ ಇಲ್ಲ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಯುವುದೇ ಅಥವಾ ಅದನ್ನು ಕಾಂಗ್ರೆಸ್ ಮುರಿಯಲಿದೆಯೆ ಎಂಬುದು ಒಂದು ಕೂತೂಹಲ. ಬಿಜೆಪಿಯೊಳಗಿರುವ ಅದರದ್ದೇ ಆದ ಬಿಕ್ಕಟ್ಟುಗಳು, ರಾಜ್ಯ ನಾಯಕತ್ವವನ್ನು ದಮನಿಸುವ ಬಿಜೆಪಿ ಹೈಕಮಾಂಡ್ ವರಸೆ ಇವೆಲ್ಲವೂ ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಬಹುದೆ ಎಂಬ ಮತ್ತೊಂದು ಕುತೂಹಲವೂ ಮೂಡಿದೆ.
ಕೋಟಾ -10,01,694
ಬಿಕಾನೇರ್ -6,47,804
ಅಜ್ಮೀರ್ -5,51,101
ಉದಯಪುರ -4,74,531
ಭಿಲ್ವಾರ -3,60,009
ಆಲ್ವಾರ್ -3,41,422
ಭರತಪುರ -2,52,838
ಶ್ರೀ ಗಂಗಾನಗರ -2,49,914
ಎಲ್ಲ ಸಂದರ್ಭದಲ್ಲಿಯೂ ಗೆಹ್ಲೋಟ್ ಸರಕಾರವನ್ನು ಹೈಕಮಾಂಡ್ ತನ್ನದೇ ಆದ ರೀತಿಯ ಕಸರತ್ತುಗಳ ಮೂಲಕ ಕಾಪಾಡಿದೆ. ಈಗ ಇಬ್ಬರೂ ನಾಯಕರು ತಾವು ಒಟ್ಟಿಗಿದ್ದೇವೆ ಎಂದು ಘೋಷಿಸಿಕೊಂಡಿದ್ದು, ಮತ್ತೊಂದು ಚುನಾವಣೆಗಾಗಿ ಜಂಟಿ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ, ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಸಂಪುಟದಿಂದ ವಜಾಗೊಂಡಿರುವ ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್ ಗುಢಾ ಈಗ ಸರಕಾರಕ್ಕೆ ಬೆದರಿಕೆಯಾಗಿದ್ದಾರೆ.
ಕೆಂಪು ಡೈರಿ ವಿಚಾರವೊಂದನ್ನು ಎತ್ತಿರುವ ಗುಢಾ, ಅಶೋಕ್ ಗೆಹ್ಲೋಟ್ ಅವರ ಹಣಕಾಸು ವಹಿವಾಟು ಕುರಿತ ವಿವರಗಳೂ ಸೇರಿದಂತೆ ಸ್ಫೋಟಕ ಮಾಹಿತಿಗಳು ಅದರಲ್ಲಿವೆ ಎಂದು ಹೇಳಿದ್ದಾರೆ.
ಆದರೆ, ಇದಕ್ಕೆ ಗೆಹ್ಲೋಟ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ರಾಜಸ್ಥಾನ ಸರಕಾರವನ್ನು ಬೀಳಿಸಲು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಲೇ ಬಂದಿದ್ದು, ಈಗ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೆಂಪು ಡೈರಿ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೆಲ್ಲದರ ನಡುವೆ, ಆಡಳಿತ ವಿರೋಧಿ ಅಲೆಯೂ ಕಾಂಗ್ರೆಸ್ ಎದುರಿನ ಒಂದು ಆತಂಕವಾಗಿದೆ. ವಿವಿಧ ಶಾಸಕರು ಮತ್ತು ಸಚಿವರ ಬಗ್ಗೆ ಅಸಮಾಧಾನಗಳಿರುವುದು ವರದಿಯಾಗಿದೆ. ಅಂಥವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಅನುಸರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಹಿಳೆಯರ ಮೇಲೆ ರಾಜ್ಯದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ ಎಂಬ ವಿಚಾರವನ್ನೂ ಬಿಜೆಪಿ ಎತ್ತಿಹೇಳುತ್ತಿದೆ. ಮಣಿಪುರದಲ್ಲಿನ ಆಘಾತಕಾರಿ ಮತ್ತು ಅಮಾನವೀಯ ಘಟನೆಗಳನ್ನು ಮರೆಮಾಚಲು ಅದು ರಾಜಸ್ಥಾನದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಆರೋಪಿಸುತ್ತ, ಅದನ್ನು ಚುನಾವಣಾ ವಿಷಯವನ್ನಾಗಿಸುತ್ತಿದೆ. ಹಾಗೆಂದು ಕಾಂಗ್ರೆಸ್ ಸುಮ್ಮನೆ ಕುಳಿತಿಲ್ಲ.
ಕಾಂಗ್ರೆಸ್ ಮುಖ್ಯವಾಗಿ ಚುನಾವಣೆ ಎದುರಿಸಲು ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ಮುಂದೆ ಮಾಡಿದೆ. ಬೆಲೆಯೇರಿಕೆ ವಿರುದ್ಧದ ಗೆಹ್ಲೋಟ್ ಸರಕಾರದ ಕ್ರಮಗಳೂ ಜನರಲ್ಲಿ ಭರವಸೆ ಮೂಡಿಸಿವೆ. ರಾಹುಲ್ ಅವರ ಭಾರತ್ ಜೋಡೊ ಯಾತ್ರೆಯ ಲಾಭ ಆಗಬಹುದೆಂಬ ನಿರೀಕ್ಷೆಯೂ ಪಕ್ಷಕ್ಕಿದೆ. ಜಾತಿಗಣತಿ ವಿಚಾರವನ್ನೂ ಅದು ಮುಂದಿಟ್ಟಿದೆ. ಸಾಫ್ಟ್ ಹಿಂದುತ್ವದ ಪ್ರಯೋಗವೂ ನಡೆದಿದೆ.
ಇನ್ನು ಬಿಜೆಪಿಯೆದುರಿನ ಬಿಕ್ಕಟ್ಟುಗಳೂ ಕಡಿಮೆಯೇನಿಲ್ಲ. ಕಾಂಗ್ರೆಸ್ ಕೈಯಿಂದ ಅಧಿಕಾರ ಕಸಿದುಕೊಳ್ಳುವ ತಯಾರಿಯಲ್ಲಿ ಬಿಜೆಪಿ ಇದೆಯಾದರೂ, ಯಥಾ ಪ್ರಕಾರ ರಾಜ್ಯದ ಪ್ರಭಾವಿ ನಾಯಕರನ್ನು ಮೂಲೆಗುಂಪು ಮಾಡುವ ಹೈಕಮಾಂಡ್ ವರಸೆ ರಾಜಸ್ಥಾನದಲ್ಲಿಯೂ ಮುಂದುವರಿದಿದೆ.
ಮಾಜಿ ಮುಖ್ಯಮಂತ್ರಿಯಾಗಿರುವ, ಪಕ್ಷದೊಳಗೆ ತಮ್ಮದೇ ಆದ ಪ್ರಭಾವ ಹೊಂದಿರುವ ವಸುಂಧರಾ ರಾಜೇ ಅವರನ್ನು ದಿಲ್ಲಿ ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿಯೇ ಇದೆ. ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕೆಂಬ ರಾಜೇ ಒತ್ತಾಯಕ್ಕೂ ಹೈಕಮಾಂಡ್ ಸೊಪ್ಪುಹಾಕಿಲ್ಲ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿಬಿಟ್ಟಿದ್ದಾರೆ.
ರಾಜೇ ಹಾಗೂ ಅವರ ಬೆಂಬಲಿಗರನ್ನು ಮಣಿಸುವ ಕೆಲಸ ನಡೆದೇ ಬಂದಿದೆ. ಪ್ರಣಾಳಿಕೆ ಹಾಗೂ ಚುನಾವಣೆ ನಿರ್ವಹಣಾ ಸಮಿತಿಗಳಿಂದಲೂ ರಾಜೇ ಅವರನ್ನು ದೂರ ಇಡಲಾಗಿದೆ. ಮಧ್ಯಪ್ರದೇಶದಲ್ಲಿ ಚೌಹಾಣ್ ಅವರನ್ನು ಸತಾಯಿಸಿದಂತೆಯೇ ಇಲ್ಲಿಯೂ ಮೊದಲ ಪಟ್ಟಿಯಲ್ಲಿ ರಾಜೇ ಹೆಸರು ಇರಲಿಲ್ಲ. ಜೈಪುರದ ಹಿಂದಿನ ರಾಜಕುಮಾರಿ ದಿಯಾ ಕುಮಾರಿ ಅವರನ್ನು ಮುನ್ನೆಲೆಗೆ ತರುವ ಮೂಲಕ ರಾಜೇ ಅವರನ್ನು ನೇಪಥ್ಯಕ್ಕೆ ಸರಿಸುವ ಯತ್ನಗಳಾಗುತ್ತಿವೆ ಎನ್ನಲಾಗಿದೆ.
ಇಲ್ಲಿಯೂ ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದ್ದು, ಸಂಸದರನ್ನೂ ಹಲವೆಡೆ ಕಣಕ್ಕಿಳಿಸಲಾಗಿದೆ. ಆದರೆ, ಸಾಮೂಹಿಕ ನಾಯಕತ್ವ ಎಂದು ಹೇಳಿದ್ದರೂ ಮೋದಿ ಮುಖ ಮುಂದೆ ಮಾಡಿ ಚುನಾವಣೆ ಎದುರಿಸಲಿರುವ ಬಿಜೆಪಿಗೆ ಆಂತರಿಕ ಅಸಮಾಧಾನಗಳೇ ಕಂಟಕವಾದರೂ ಆಶ್ಚರ್ಯವೇನಿಲ್ಲ.
ಆದರೆ, ಪ್ರತೀ ಚುನಾವಣೆಯಲ್ಲಿಯೂ ಪರ್ಯಾಯ ಸರಕಾರವನ್ನೇ ಆರಿಸಿಕೊಳ್ಳುತ್ತ ಬಂದಿರುವ ರಾಜಸ್ಥಾನದ ಮತದಾರರು ಅದನ್ನೇ ಮುಂದುವರಿಸಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ. ಅಂತಹ ಸಂಪ್ರದಾಯವೊಂದನ್ನು ಮುರಿಯುವುದು ಕಾಂಗ್ರೆಸ್‌ಗೆ ಸಾಧ್ಯವಾಗಬಲ್ಲುದೆ, ಅಂತಹ ಹೆಗ್ಗಳಿಕೆಗೆ ಕಾಂಗ್ರೆಸ್ ಪಾತ್ರವಾಗಬಲ್ಲುದೆ ಎಂಬುದನ್ನು ಕಾದು ನೋಡಬೇಕಿದೆ. ಸಮೀಕ್ಷೆಗಳು ಭವಿಷ್ಯ ನುಡಿದಿರುವ ಪ್ರಕಾರ, ಬಿಜೆಪಿಯೇ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದು 127ರಿಂದ 137 ಸೀಟುಗಳನ್ನು ಗೆಲ್ಲಬಹುದು ಎಂದಿರುವ ಸಮೀಕ್ಷೆಗಳು, ಕಾಂಗ್ರೆಸ್ 59ರಿಂದ 69 ಸ್ಥಾನಗಳಲ್ಲಿ ಮಾತ್ರವೇ ಗೆಲ್ಲಲಿದೆ ಎಂಬ ಭವಿಷ್ಯ ನುಡಿದಿವೆ.
ಚುನಾವಣೆ ಘೋಷಿಸುವಾಗ ನವೆಂಬರ್ 23ರಂದು ಮತದಾನ ಎಂದು ನಿಗದಿಪಡಿಸಲಾಗಿತ್ತು. ಆದರೆ ಆ ದಿನ ವ್ಯಾಪಕ ಮದುವೆ ಸಮಾರಂಭಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಇರುವ ಕಾರಣವನ್ನು ನೀಡಿ ಚುನಾವಣಾ ಆಯೋಗ ನವೆಂಬರ್ 25ಕ್ಕೆ ಮತದಾನ ಮುಂದೂಡಿದೆ.