ಸೌಹಾರ್ದ ಪರಂಪರೆಗಾಗಿ ಹಂಬಲಿಸಿ ಜೀವತೆತ್ತ ಗೌರಿ ಲಂಕೇಶ್

ದುಷ್ಕರ್ಮಿಗಳ ಗುಂಡಿನಿಂದ ಗೌರಿಯ ತಾಯ್ತನದ ನೆರಳು ನಾಡಿನ ಉದ್ದಗಲಕ್ಕೂ ಹರಡಿಕೊಂಡವು. ಇಂದಿಗೂ ನಾಡಿನ ಸೂಫಿ ಚಿಂತನೆಗಳು, ಬಸವಣ್ಣನ ತತ್ವಗಳು, ಗಾಂಧೀಜಿಯ ಅಹಿಂಸೆಯ ಸಂದೇಶವನ್ನು ಹರಡುತ್ತಾ ಗೌರಿ ಬೆಳೆಯುತ್ತಿದ್ದಾರೆ. ಯುವ ತಲೆಮಾರಿನ ಕೈಮರವಾಗಿ ಅವರನ್ನು ಮುನ್ನಡೆಸುತ್ತಿದ್ದಾರೆ.

Update: 2023-09-05 05:22 GMT

ಇವತ್ತು ಸೆಪ್ಟಂಬರ್ 5ನ್ನು ದೇಶ ಶಿಕ್ಷಕರ ದಿನವಾಗಿ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಕಳೆದ 6 ವರ್ಷಗಳಿಂದ ‘ಗೌರಿ ದಿನ’ವಾಗಿಯೂ ಆಚರಿಸಿಕೊಂಡು ಬರುತ್ತಿದೆ. ಸೆಪ್ಟಂಬರ್ 5, 2017ರಂದು ರಾತ್ರಿ ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶರನ್ನು ಅವರ ನಿವಾಸದ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು.

ಪತ್ರಕರ್ತೆ, ಮಾನವ ಹಕ್ಕು ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಗೌರಿಯ ಕಗ್ಗೊಲೆ ದೇಶ-ವಿದೇಶಗಳಲ್ಲಿ ಭಾರೀ ಸುದ್ದಿಯಾಯಿತು. ಬಳಿಕ ಮರಣೋತ್ತರವಾಗಿ ಹಲವು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಅವರಿಗೆ ನೀಡಲಾಯಿತು. ಅವರ ಹೆಸರಿನಲ್ಲೇ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು ಘೋಷಣೆಯಾದವು. ಹತ್ಯೆಗೊಳಗಾದ ಮರುವರ್ಷ ಫ್ರಾನ್ಸ್‌ನ ಪ್ರತಿಷ್ಠಿತ ಬಯು-ಕಾಲ್ವಡೋಸ್ ಗೌರವವನ್ನು ಅವರಿಗೆ ನೀಡಲಾಯಿತು. ಯುದ್ಧ ವರದಿಗಳನ್ನು ಮಾಡುವ ಸಂದರ್ಭದಲ್ಲಿ ಸಾವಿಗೀಡಾಗುವ ಪತ್ರಕರ್ತರಿಗೆ ಈ ಗೌರವ ನೀಡಲಾಗುತ್ತಿತ್ತು.

ಭಾರತದ ಇಂದಿನ ರಾಜಕೀಯ ಸನ್ನಿವೇಶ ಪ್ರಾಮಾಣಿಕ ಪತ್ರಕರ್ತರ ಪಾಲಿಗೆ ಯಾವುದೇ ಯುದ್ಧ ಭೂಮಿಗಿಂತ ಭಿನ್ನವಾಗಿಯೇನೂ ಉಳಿದಿಲ್ಲ ಎನ್ನುವುದನ್ನು ಗೌರಿ ಸಾವು ಜಗತ್ತಿಗೇ ಜಾಹೀರು ಪಡಿಸಿತು.

ಸುಮಾರು ಎರಡು ದಶಕಗಳ ಕಾಲ ಪಿ. ಲಂಕೇಶ್ ನೇತೃತ್ವದ ಲಂಕೇಶ್ ಪತ್ರಿಕೆ ಈ ನಾಡಿನ ಸಾಂಸ್ಕೃತಿಕ ಕಟ್ಟುವಿಕೆಯ ಕೆಲಸದಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು. ಇಲ್ಲಿನ ಜಾತ್ಯತೀತ ಪರಂಪರೆಗಳಿಗೆ ಧಕ್ಕೆಯಾದಾಗಲೆಲ್ಲ ದೊಡ್ಡ ಧ್ವನಿಯಲ್ಲಿ ಮಾತನಾಡಿ ನಾಡನ್ನು ಜಾಗೃತಿಗೊಳಿಸುವ ಕೆಲಸ ಮಾಡಿರುವುದು ಲಂಕೇಶ್ ಪತ್ರಿಕೆ.

ಪಿ. ಲಂಕೇಶರ ಕೊನೆಯ ದಿನಗಳಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಧ್ವನಿ ಕಳೆದುಕೊಳ್ಳುತ್ತಿದ್ದವು. ಅದೇ ಸಂದರ್ಭದಲ್ಲಿ ಸಂಘಪರಿವಾರದ ಕೂಗು ಮಾರಿಗಳು ಬೀದಿಯಲ್ಲಿ ವಿಜೃಂಭಿಸ ತೊಡಗಿದ್ದವು. ಜನವರಿ 25, 2000ದಂದು ಲಂಕೇಶರು ನಿಧನರಾದ ಹೊತ್ತಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಬೆಂಗಳೂರಿಗೆ ಮರಳಿದರು. ತಂದೆ ಬಿಟ್ಟು ಹೋದ ಹೊಣೆಗಾರಿಕೆಯನ್ನು ಹೆಗಲೇರಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಯಿತು.

ಅಥವಾ ಮುಂದಿನ ದಿನಗಳ ಬಗ್ಗೆ ಯೋಚಿಸಿ ಅವರೇ ಅದನ್ನು ಅನಿವಾರ್ಯ ಮಾಡಿಕೊಂಡರು. ಲಂಕೇಶರಂತೆ ಪ್ರಶ್ನೆ ಕೇಳುವ, ಸತ್ಯ ಹೇಳುವ, ಕುಟುಕುವ ಅಗತ್ಯ ಇನ್ನಷ್ಟು ಹೆಚ್ಚುತ್ತಲೇ ಹೋಗಲಿದೆ ಎಂದು ಗೌರಿ ಅಂದೇ ಸರಿಯಾಗಿ ತಿಳಿದುಕೊಂಡಿದ್ದರು.

ಇಂಗ್ಲಿಷ್ ಪತ್ರಿಕೋದ್ಯಮದಿಂದ ಬಂದ ಗೌರಿಗೆ ಕನ್ನಡ ಪತ್ರಿಕೋದ್ಯಮ ಸುಲಭದ ದಾರಿಯಾಗಿರಲಿಲ್ಲ. ಲಂಕೇಶರಿಗೆ ಕನ್ನಡದ ರೂಪಕ ಭಾಷೆ ಗೊತ್ತಿತ್ತು. ಗೌರಿ ಲಂಕೇಶರ ಬೊಗಸೆಯಲ್ಲಿದ್ದದ್ದು ಮುಗ್ಧ, ಸರಳ, ನವಜಾತ ಕನ್ನಡ ಭಾಷೆ ಮತ್ತು ಅಕ್ಷರಗಳು.

ಲಂಕೇಶ್‌ಗೆ ಹೋಲಿಸಿದರೆ ಗೌರಿ ಅವರದು ಹುಂಬ ಧೈರ್ಯ. ಒಬ್ಬ ಸಂಪಾದಕರಾಗಿ ಗೌರಿ ತನ್ನನ್ನು ಗರ್ಭಗುಡಿಗೆ ಸೀಮಿತರಾಗಿಸಿಕೊಂಡಿರಲಿಲ್ಲ. ಅವರು ಬೀದಿಗಿಳಿದು ಪತ್ರಿಕೆಯನ್ನು ಮುನ್ನಡೆಸಿದರು.

ಆವರೆಗೆ ಲಂಕೇಶ್ ಪತ್ರಿಕೆ ನಾಡಿನ ಬೇರೆ ಬೇರೆ ಸಾಂಸ್ಕೃತಿಕ ಚಳವಳಿಗೆ ಸ್ಫೂರ್ತಿಯಾಗಿದ್ದರೆ ಗೌರಿ ಲಂಕೇಶ್ ಪತ್ರಿಕೆ ಸ್ವತಃ ಒಂದು ಚಳವಳಿಯಾಗಿ ಬೀದಿಗಿಳಿಯಿತು. ಇರುವಷ್ಟು ಕಾಲ, ಸಂಘಪರಿವಾರ ಗುಂಪುಗಳ ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ ನಿಲುವುಗಳ ಜೊತೆಗೆ ಅದು ಗುದ್ದಾಡಿತು.

ಗೌರಿ ಲಂಕೇಶ್ ಅವರನ್ನು ಯಾಕೆ ಕೊಲ್ಲಲಾಯಿತು?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪೊಲೀಸರ ಕರ್ತವ್ಯ ಇನ್ನೂ ಪೂರ್ತಿಯಾಗಿ ಗುರಿ ತಲುಪಿಲ್ಲ. ಇಷ್ಟಾದರೂ ಗೌರಿ ಲಂಕೇಶ್‌ರನ್ನು ಯಾಕೆ ಸಾಯಿಸಲಾಯಿತು ಎನ್ನುವುದು ಕರ್ನಾಟಕದ ಪಾಲಿಗೆ ಗುಟ್ಟಾಗಿರುವ ಸಂಗತಿಯೇನೂ ಅಲ್ಲ. ಪೊಲೀಸರು ಕೊಲೆ ಆರೋಪಿಗಳೆಂದು ಯಾರನ್ನು ಬಂಧಿಸಿದ್ದಾರೆಯೋ ಅವರು ಒಂದು ಆಯುಧವಾಗಿ ಮಾತ್ರ ಬಳಸಲ್ಪಟ್ಟಿದ್ದಾರೆ.

ಅವರನ್ನು ಗೌರಿಯ ವಿರುದ್ಧ ಬಳಸಿರುವುದು ಒಂದು ಸಿದ್ಧಾಂತ. ಹಾಗೆ ನೋಡಿದರೆ ಅವರ ಗುರಿ ನೇರವಾಗಿ ಗೌರಿ ಲಂಕೇಶ್ ಆಗಿರಲಿಲ್ಲ. ಈ ನಾಡಿನ ಸೌಹಾರ್ದ ಪರಂಪರೆಯೇ ಅವರ ಅಂತಿಮವಾಗಿ ಗುರಿಯಾಗಿತ್ತು. ಕನ್ನಡದ ಜಾತ್ಯತೀತ ಸೌಹಾರ್ದ ಪರಂಪರೆಯ ಮೇಲೆ ನಡೆಸುವ ದಾಳಿಗೆ ತಡೆಯಾದ ಕಾರಣಕ್ಕೆ ಗೌರಿಯನ್ನು ಅವರು ಕೊಲ್ಲಿಸಿದರು. ಗೌರಿಯ ಜಾಗದಲ್ಲಿ ಯಾರೇ ಇದ್ದರೂ ಅವರು ಕೊಂದು ಹಾಕಿ ಬಿಡುತ್ತಿದ್ದರು. ಗೌರಿ ಹತ್ಯೆಗೆ ನ್ಯಾಯ ಸಿಗಬೇಕಾದರೆ, ಈ ನಾಡಿನ ಸೌಹಾರ್ದ ಪರಂಪರೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಶಕ್ತಿಗಳಿಗೆ ಶಿಕ್ಷೆಯಾಗಬೇಕು.

ಬದುಕಿನುದ್ದಕ್ಕೂ ಗೌರಿ ಲಂಕೇಶ್ ಕನ್ನಡ ಸೌಹಾರ್ದ ಪರಂಪರೆಯ ಕಾವಲುಗಾರರಾಗಿ ಕೆಲಸ ಮಾಡಿದರು. ಬಾಬಾ ಬುಡಾನ್‌ಗಿರಿ ಆಂದೋಲನದಲ್ಲಿ ಸಕ್ರಿಯರಾಗಿ ತೊಡಗಿಕೊಂಡದ್ದೂ ಈ ಕಾರಣಕ್ಕಾಗಿಯೇ. ಪ್ರಗತಿ ಪರ ಸಂಘಟನೆಗಳು ಬಾಬಾಬುಡಾನ್‌ಗಿರಿಯಲ್ಲಿ ಬೃಹತ್ ಆಂದೋಲನವನ್ನು ಹಮ್ಮಿಕೊಂಡಾಗ ಪೊಲೀಸರಿಂದ ತಲೆ ಮರೆಸಿಕೊಂಡು ಲಾರಿ ಹತ್ತಿ ಸ್ಥಳಕ್ಕೆ ತಲುಪಿದ್ದರು ಗೌರಿ ಲಂಕೇಶ್. ಅಲ್ಲಿ ಬಂಧನಕ್ಕೊಳಗಾಗಿದ್ದಾಗ ಜೈಲಿನಲ್ಲಿದ್ದು ಕೊಂಡೇ ಪತ್ರಿಕೆಯ ಸಂಪಾದಕೀಯವನ್ನು ಬರೆದಿದ್ದರು.

ಬಾಬಾಬುಡಾನ್‌ಗಿರಿಯಲ್ಲಿರುವ ಸೂಫಿ-ದತ್ತ ಪರಂಪರೆಯ ಕೊಡುಕೊಳ್ಳುವಿಕೆಯನ್ನು ಉಳಿಸಿಕೊಳ್ಳುವುದು ಅವರ ಕನಸಾಗಿತ್ತು. ಅದು ಈ ನಾಡಿನಲ್ಲಿ ಹಿಂದೂ - ಮುಸ್ಲಿಮರು ಎಂದೆಂದಿಗೂ ಸೌಹಾರ್ದದಿಂದ ಬದುಕಬೇಕೆನ್ನುವ ಕನಸೂ ಆಗಿತ್ತು,

ಎರಡನೆಯದಾಗಿ ಕರ್ನಾಟಕದ ಅಸ್ಮಿತೆಯಾಗಿರುವ ಲಿಂಗಾಯತ ಧರ್ಮದ ವಿಶ್ವಭ್ರಾತೃತ್ವ ಪರಿಕಲ್ಪನೆಯ ಬೆನ್ನಿಗೆ ಗೌರಿ ನಿಂತದ್ದು ಕೂಡ ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿತ್ತು. ಹೇಗೆ ಬಾಬಾಬುಡಾನ್‌ಗಿರಿಯ ಸೌಹಾರ್ದವನ್ನು ವೈದಿಕ ಶಕ್ತಿಗಳು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಅವರು ವಿರೋಧಿಸಿದರೋ, ಅಷ್ಟೇ ತೀವ್ರವಾಗಿ ಲಿಂಗಾಯತ ಧರ್ಮ ವೈದಿಕೀಕರಣಗೊಳ್ಳುವುದನ್ನು ಅವರು ವಿರೋಧಿಸಿದರು.

ಕಲಬುರ್ಗಿ ಹತ್ಯೆಯ ಹಿಂದೆ ಲಿಂಗಾಯತ ಧರ್ಮವನ್ನು ವಿರೋಧಿಸುವ ಶಕ್ತಿಗಳು ಇರುವುದನ್ನು ಗುರುತಿಸಿ ಲೇಖನವನ್ನು ಬರೆದರು. ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ, ಸಂಘಪರಿವಾರದ ಹಿಂದುತ್ವವಾದಕ್ಕೆ ಅತಿ ದೊಡ್ಡ ಸವಾಲಾಗುತ್ತಿರುವುದನ್ನು ಸಹಿಸುವುದೂ ಕನ್ನಡ ಪರಂಪರೆಯ ವಿರೋಧಿಗಳಿಗೆ ಕಷ್ಟವಾಗಿತ್ತು.

ಅಪ್ಪಟ ಮಹಿಳಾವಾದಿಯಾಗಿ ಬದುಕಿದವರು ಗೌರಿ ಲಂಕೇಶ್. ಮಹಿಳಾ ಹಕ್ಕುಗಳಿಗಾಗಿ ಸದಾ ಧ್ವನಿಯೆತ್ತುತ್ತಾ ಬಂದವರು ಅವರು. ಅದಕ್ಕಾಗಿ ತಮ್ಮ ಪತ್ರಿಕೆಯನ್ನೂ ಮೀಸಲಿಟ್ಟವರು.

ನಾಡಿನ ನೂರಾರು ಮುಸ್ಲಿಮ್, ದಲಿತ ಲೇಖಕಿಯರಿಗೆ ಒತ್ತಾಸೆಯಾಗಿ ನಿಂತವರು.

ಪ್ರಗತಿ ವಿರೋಧಿ ಶಕ್ತಿಗಳಿಗೆ ಮಹಿಳೆಯೊಬ್ಬಳ ಈ ಪ್ರತಿರೋಧ ಅಸಹನೆಗೆ ಕಾರಣವಾದರೆ ಅಚ್ಚರಿಯೇನೂ ಇಲ್ಲ. ಮಹಿಳಾ ಹಕ್ಕುಗಳಿಗಾಗಿ ಪ್ರಚಾರ ಮಾಡಿದ, ಜಾತಿ ಆಧರಿತ ತಾರತಮ್ಯವನ್ನು ವಿರೋಧಿಸಿದ್ದುದಕ್ಕಾಗಿ ಗೌರಿ ಲಂಕೇಶ್‌ಗೆ ರಶ್ಯದ ಅನ್ನಾ ಪೊಲೀಸ್ಕೋವಾಸ್ಕಿಯಾ ಪ್ರಶಸ್ತಿ ಮರಣೋತ್ತರವಾಗಿ ನೀಡಲಾಯಿತು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್.

ಎಲ್ಲಕ್ಕಿಂತ ಮುಖ್ಯವಾಗಿ ಸಂಘಪರಿವಾರವೂ ಸೇರಿದಂತೆ ಯಾವುದೇ ಉಗ್ರವಾದಿ ಸಂಘಟನೆಗಳು ಪ್ರತಿಪಾದಿಸುವ ಹಿಂಸೆಯ ಪರಮ ವೈರಿಯಾಗಿದ್ದರು ಗೌರಿ ಲಂಕೇಶ್ .

ಸಮತೆಯ ಸಮಾಜದ ಹೆಸರಿನಲ್ಲೂ ಹಿಂಸೆಯನ್ನು ಪೋಷಿಸುವುದನ್ನು ಅವರು ಸಹಿಸುತ್ತಿರಲಿಲ್ಲ. ಪಶ್ಚಿಮಘಟ್ಟದಲ್ಲಿ ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ನಕ್ಸಲ್ ಹಿಂಸೆಗೆ ಕಾರಣವಾಗುತ್ತಿರುವುದನ್ನು ಗ್ರಹಿಸಿದ ಅವರು, ಯುವಕರು ಹಿಂಸಾ ಮಾರ್ಗವನ್ನು ಹಿಡಿಯದಂತೆ ಗರಿಷ್ಠ ಹೋರಾಟ ಮಾಡಿದರು.

ಒಂದೆಡೆ ಪೊಲೀಸರ ಕೋವಿಗಳು ನಕ್ಸಲರನ್ನು ಬಗ್ಗು ಬಡಿಯುತ್ತಿರುವಾಗ ಸರಕಾರ ಮತ್ತು ಉಗ್ರವಾದಿಗಳ ನಡುವೆ ಮಾತುಕತೆಗೆ ಮುಂದಾದರು. ಹಿಂಸಾವಾದಿಗಳನ್ನು ಮನವೊಲಿಸಿ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಮುನ್ನಡೆಸಿದರು.

ಇದೇ ಸಂದರ್ಭದಲ್ಲಿ ಸಂಘಪರಿವಾರದೊಳಗಿರುವ ಯುವಕರ ಜೊತೆಗೂ ಅವರು ಸಂವಾದವನ್ನು ಮುಕ್ತವಾಗಿಟ್ಟಿದ್ದರು. ತನ್ನನ್ನು ನಿಂದಿಸಿದ ತರುಣರನ್ನೂ ‘ನನ್ನ ತಮ್ಮಂದಿರು’, ‘ನನ್ನ ಮಕ್ಕಳು’ ಎಂದು ಕರೆಯುವ ಹೃದಯವೈಶಾಲ್ಯತೆ ಅವರದಾಗಿತ್ತು.

ಗಾಂಧೀಜಿಯ ಈ ತಾಯ್ತನ ಗೋಡ್ಸೆವಾದಿಗಳಿಗೆ ಹತಾಶೆ ಸೃಷ್ಟಿಸುವುದು ಸಹಜವೇ ಆಗಿತ್ತು. ಗುಂಡಿನ ಮೂಲಕ ತಾಯ್ತನವನ್ನು ಕೊಂದು ಹಾಕಲಾಗುವುದಿಲ್ಲ ಎನ್ನುವುದು ಗೌರಿ ಹತ್ಯೆಯಿಂದ ಮತ್ತೊಮ್ಮೆ ಸಾಬೀತಾಯಿತು.

ದುಷ್ಕರ್ಮಿಗಳ ಗುಂಡಿನಿಂದ ಗೌರಿಯ ತಾಯ್ತನದ ನೆರಳು ನಾಡಿನ ಉದ್ದಗಲಕ್ಕೂ ಹರಡಿಕೊಂಡವು. ಇಂದಿಗೂ ನಾಡಿನ ಸೂಫಿ ಚಿಂತನೆಗಳು, ಬಸವಣ್ಣನ ತತ್ವಗಳು, ಗಾಂಧೀಜಿಯ ಅಹಿಂಸೆಯ ಸಂದೇಶವನ್ನು ಹರಡುತ್ತಾ ಗೌರಿ ಬೆಳೆಯುತ್ತಿದ್ದಾರೆ. ಯುವ ತಲೆಮಾರಿನ ಕೈಮರವಾಗಿ ಅವರನ್ನು ಮುನ್ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಅಕ್ಷಯ್ ಎಂ.

contributor

Similar News