ಇನ್ನು ಪಾವತಿಯಾಗದ ಏಳು ತಿಂಗಳ ವೇತನ: ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿರುವ ಎಫ್‌ಎಂಸಿ ಕಾಲೇಜಿನ ಅತಿಥಿ ಉಪನ್ಯಾಸಕರು

Update: 2024-03-07 05:03 GMT

ಮಡಿಕೇರಿ, ಮಾ.6: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ 43 ಹಾಗೂ ಚಿಕ್ಕಾಳುವಾರದ 18 ಅತಿಥಿ ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳು ಮತ್ತು ಕೋವಿಡ್ ಸಂದರ್ಭದಲ್ಲಿ 3 ತಿಂಗಳ ವೇತನ ಪಾವತಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಕಳೆದ ಐದು ದಿನಗಳಿಂದ ವೇತನ ಬಿಡುಗಡೆಗೆ ಒತ್ತಾಯಿಸಿ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಮಂಗಳೂರು ವಿವಿಯು ಕೊಡಗಿನ ಅತಿಥಿ ಉಪನ್ಯಾಸಕರಿಗೆ ಕೇವಲ ಅಕ್ಟೋಬರ್ ತಿಂಗಳ ವೇತನವನ್ನು ಪಾವತಿಸಿ, ತರಗತಿಗೆ ಹಾಜರಾಗಲು ಸೂಚಿಸಿದೆ. ಆದರೆ, ಮಂಗಳೂರು ವ್ಯಾಪ್ತಿಯ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಡಿಸೆಂಬರ್‌ವರೆಗೆ ವೇತನವನ್ನು ಪಾವತಿ ಮಾಡಿದ್ದು, ನಮಗೂ ಡಿಸೆಂಬರ್‌ವರೆಗಿನ ವೇತನವನ್ನು ಪಾವತಿಸಿದರೆ ಮಾತ್ರ ತರಗತಿಗೆ ಹಾಜರಾಗುವುದೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಧರಣಿ ನಡೆಸುತ್ತಿದ್ದಾರೆ.

ಕೋವಿಡ್ ಅವಧಿಯ ಸಂಬಳವೂ ಬಾಕಿ!

ಮಂಗಳೂರು ವಿವಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ 400 ಅತಿಥಿ ಉಪನ್ಯಾಸಕರಿಗೆ ಕೋವಿಡ್ ಕಾಲದಲ್ಲಿ ತರಗತಿ ನಡೆಸಿದ ವೇತನ ಇದುವರೆಗೂ ಪಾವತಿಯಾಗಿಲ್ಲ.ಮೂರು ಬಾರಿ ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ವೇತನವನ್ನು ಪಾವತಿಸುವಂತೆ ನಿರ್ಣಯ ಮಾಡಿದ್ದರೂ ವೇತನವನ್ನು ಮಂಗಳೂರು ವಿವಿ ಪಾವತಿಸಿಲ್ಲ ಎಂದು ಉಪನ್ಯಾಸಕರು ಆರೋಪಿಸುತ್ತಿದ್ದಾರೆ. ಕೋವಿಡ್ ಅವಧಿಯ ವೇತನ ಸೇರಿ ಒಟ್ಟು ಏಳು ತಿಂಗಳ ವೇತನವನ್ನು ವಿವಿ ಪಾವತಿಸಬೇಕಾಗಿದೆ ಎಂದು ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಹಂತ-ಹಂತವಾಗಿ ವೇತನ ಬಿಡುಗಡೆ’

ತರಗತಿಯನ್ನು ಬಹಿಷ್ಕರಿಸಿ ನಡೆಸುತ್ತಿರುವ ಧರಣಿಯನ್ನು ಹಿಂಪಡೆಯಲು ಮನವಿ ಮಾಡಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಈ ಹಿಂದಿನಂತೆ ಹಂತ ಹಂತವಾಗಿ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆಗೊಳಿಸುವ ಭರವಸೆ ನೀಡಲಾ ಗಿದೆ ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರೊ.ಜಯರಾಜ್ ಅಮೀನ್ ಮಾಹಿತಿ ನೀಡಿದ್ದಾರೆ.

ಮಕ್ಕಳ ಹಿತದೃಷ್ಟಿಯಿಂದ ನಾವು ಕಳೆದ ಸೆಮಿಸ್ಟರ್ ಪೂರ್ಣ ಮೌಲ್ಯಮಾಪನ ಮಾಡಿದ್ದೇವೆ. ಪರೀಕ್ಷಾ ಮೇಲ್ವಿಚಾರಣಾ ಕಾರ್ಯ ಮಾಡಿದ್ದೇವೆ. ಪಾಠ ಪ್ರವಚನ ಮುಗಿಸಿದ್ದೇವೆ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದರೂ ನಮಗೆ ವೇತನ ನೀಡಿಲ್ಲ. ನಿರಂತರವಾಗಿ ಒಟ್ಟು 4 ತಿಂಗಳ ವೇತನವನ್ನು ನೀಡದೇ ಇರುವುದರಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ಮಂಗಳೂರು ವಿವಿ ವ್ಯಾಪ್ತಿಗೆ ಸೇರುವ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿ ಮಾಡಲಾಗಿದೆ. ಆದರೆ, ಕೊಡಗಿನ ಎಫ್‌ಎಂಸಿ ಕಾಲೇಜಿನ ಉಪನ್ಯಾಸಕರಿಗೆ ಮಾತ್ರ ವೇತನ ಪಾವತಿಸಿಲ್ಲ. ಇದು ವಿವಿ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ. ನಾವು ನಮ್ಮ ನ್ಯಾಯಬದ್ಧವಾದ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ. ಬಾಕಿ ವೇತನ ಪಾವತಿಸಿದ ತಕ್ಷಣವೇ ನಮ್ಮ ಕರ್ತವ್ಯವನ್ನು ನಾವು ಮುಂದುವರಿಸುತ್ತೇವೆ.

-ಅತಿಥಿ ಉಪನ್ಯಾಸಕ, ಎಫ್‌ಎಂಸಿ ಕಾಲೇಜು ಮಡಿಕೇರಿ

ನಾಲ್ಕು ವರ್ಷ ಕಳೆದರೂ ಇದುವರೆಗೆ ಕೋವಿಡ್ ಕಾಲದ ಮೂರು ತಿಂಗಳ ವೇತನವನ್ನು ಅತಿಥಿ ಉಪನ್ಯಾಸಕರಿಗೆ ಮಂಗಳೂರು ವಿವಿ ನೀಡಿಲ್ಲ. ಕೇವಲ 25ರಿಂದ 30 ಸಾವಿರ ರೂ. ಸಂಬಳ ಮಾತ್ರ ಅತಿಥಿ ಉಪನ್ಯಾಸಕರಿಗೆ ಬರುವುದು. ಈ ಸಂಬಳ ಕಳೆದ ನಾಲ್ಕು ತಿಂಗಳಿನಿಂದ ಬಂದಿಲ್ಲ. ವೇತನ ಬಾರದೆ ಅತಿಥಿ ಉಪನ್ಯಾಸಕರು ಬದುಕು ಸಾಗಿಸುವುದು ಹೇಗೆ? ಮಂಗಳೂರು ವಿವಿ ವೇತನ ನೀಡದೆ ನಿರ್ಲಕ್ಷ್ಯ ತೋರಿದೆ.

-ಅಚ್ಚಾಂಡಿರ ಪವನ್ ಪೆಮ್ಮಯ್ಯ,

ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News