ದ್ರಾವಿಡ ನೆಲದಲ್ಲಿ ರಾಜಕೀಯ ಅಸ್ತ್ರವಾಗುತ್ತಿರುವ ಹಿಂದುತ್ವ

ತಮಿಳುನಾಡಿನ ಅಸ್ಮಿತೆಯ ಭಾಗವೇ ಆಗಿರುವ ಪೆರಿಯಾರ್ ಅವರನ್ನೇ ತೆಗೆದು ಹಾಕುತ್ತೇನೆ ಎಂದು ಹೊರಟಿರುವ ಅಣ್ಣಾಮಲೈ ಏನು ಮಾಡಲು ಬಯಸಿದ್ದಾರೆ? ಅವರ ಈ ನಡೆಯ ಹಿಂದಿರುವ ಲೆಕ್ಕಾಚಾರಗಳೇನು? ತಮಿಳುನಾಡಿನ ದ್ರಾವಿಡ ಸಂಸ್ಕೃತಿಯ ವಿರುದ್ಧವೇ ಈಜಲು ಹೊರಟಿರುವ ಬಿಜೆಪಿ ಹಾಗೂ ಅಣ್ಣಾಮಲೈ ನಡೆಯ ಹಿಂದಿನ ಧೈರ್ಯವೇನು? ಇದು ಬಿಜೆಪಿಗೆ ಸಂಪೂರ್ಣ ತಿರುಗುಬಾಣವಾಗಲಿದೆಯೇ? ಅಥವಾ ಇಂತಹ ಹಿಂದುತ್ವ ರಾಜಕೀಯಕ್ಕೂ ಅಲ್ಲಿ ಅವಕಾಶವೊಂದು ತೆರೆದಿದೆಯೇ?

Update: 2023-11-11 05:12 GMT

ತಮಿಳುನಾಡು ರಾಜಕೀಯದಲ್ಲಿ ತಮಿಳು ಅಸ್ಮಿತೆಯೊಂದಿಗಿರುವ ಆಡಳಿತಾರೂಢ ಡಿಎಂಕೆಗೂ, ಅಲ್ಲಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಹೊರಟಿರುವ ಬಿಜೆಪಿಗೂ ನಡುವಿನ ಸಂಘರ್ಷ ಮತ್ತು ಜಿದ್ದಾಜಿದ್ದಿ ತೀವ್ರ ಸ್ವರೂಪ ಪಡೆಯುತ್ತಿರುವಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಸ್ಥಾನಗಳ ಹೊರಗೆ ಇರುವ ಪೆರಿಯಾರ್ ಪ್ರತಿಮೆಗಳನ್ನು ತೆರವು ಮಾಡುವುದರ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಘೋಷಿಸಿರುವುದು ಮತ್ತೊಂದು ಬಗೆಯ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಹಾಗಿದೆ.

ತಮಿಳುನಾಡಿನ ಅಸ್ಮಿತೆಯ ಭಾಗವೇ ಆಗಿರುವ ಪೆರಿಯಾರ್ ಅವರನ್ನೇ ತೆಗೆದು ಹಾಕುತ್ತೇನೆ ಎಂದು ಹೊರಟಿರುವ ಅಣ್ಣಾಮಲೈ ಏನು ಮಾಡಲು ಬಯಸಿದ್ದಾರೆ? ಅವರ ಈ ನಡೆಯ ಹಿಂದಿರುವ ಲೆಕ್ಕಾಚಾರಗಳೇನು? ತಮಿಳುನಾಡಿನ ದ್ರಾವಿಡ ಸಂಸ್ಕೃತಿಯ ವಿರುದ್ಧವೇ ಈಜಲು ಹೊರಟಿರುವ ಬಿಜೆಪಿ ಹಾಗೂ ಅಣ್ಣಾಮಲೈ ನಡೆಯ ಹಿಂದಿನ ಧೈರ್ಯವೇನು? ಇದು ಬಿಜೆಪಿಗೆ ಸಂಪೂರ್ಣ ತಿರುಗುಬಾಣವಾಗಲಿದೆಯೇ? ಅಥವಾ ಇಂತಹ ಹಿಂದುತ್ವ ರಾಜಕೀಯಕ್ಕೂ ಅಲ್ಲಿ ಅವಕಾಶವೊಂದು ತೆರೆದಿದೆಯೇ?

ದೇವರಿಲ್ಲ, ದೇವರನ್ನು ನಂಬುವವರು ಮೂರ್ಖರು ಎಂದು ಹೇಳಿದ್ದ ಪೆರಿಯಾರ್ ಪ್ರತಿಮೆಗಳನ್ನು ತೆಗೆದುಹಾಕುವುದು, ನಾವು ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಕೆಲಸವಾಗಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯಾದ್ಯಂತ ಹಿಂದೂ ದೇವಾಲಯಗಳ ಮುಂದಿರುವ ಪ್ರಚೋದನಾಕಾರಿ ಘೋಷಣೆಗಳನ್ನು ಹೊಂದಿರುವ ಪ್ರತಿಮೆಗಳನ್ನು ತೆಗೆದುಹಾಕಲಾಗುವುದು. ಆಳ್ವಾರರು, ನಾಯನಾರ್ಗಳ ಪ್ರತಿಮೆ, ಸಂತ ತಿರುವಳ್ಳುವರ್ ಪ್ರತಿಮೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ೧೯೬೭ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ದೇವರ ಅಸ್ತಿತ್ವದ ವಿರುದ್ಧ ಮಾತನಾಡುವ ವ್ಯಕ್ತಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು ಎಂಬುದನ್ನು ಅಣ್ಣಾಮಲೈ ನೆನಪಿಸಿದ್ದಾರೆ.

ಇಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದೂ ಧರ್ಮದತ್ತಿ ಮತ್ತು ದತ್ತಿ ಇಲಾಖೆ (ಎಚ್ಆರ್ ಮತ್ತು ಸಿಇ) ಇರುವುದಿಲ್ಲ. ಆ ಇಲಾಖೆಯ ಕೊನೆಯ ದಿನ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲ ದಿನವಾಗಲಿದೆ ಎಂದೂ ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈಗೆ ತಿರುಗೇಟು ನೀಡಿರುವ ಹಿಂದೂ ದತ್ತಿ ವ್ಯವಹಾರಗಳ ಸಚಿವ ಶೇಖರ್ ಬಾಬು, ತಮಿಳುನಾಡಿನಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದಿಲ್ಲ. ಅವರು ಎಷ್ಟೇ ತಂತ್ರಗಳನ್ನು ಮಾಡಿದರೂ, ಎಷ್ಟೇ ಐಟಿ ದಾಳಿ, ಈ.ಡಿ. ದಾಳಿ ಮಾಡಿದರೂ ಬಿಜೆಪಿಗೆ ಅಧಿಕಾರ ಸಿಗುವುದಿಲ್ಲ. ಇದು ದ್ರಾವಿಡ ಮಣ್ಣು ಎಂದಿದ್ದಾರೆ. ಪೆರಿಯಾರ್ ಅವರ ತತ್ವಗಳೊಂದಿಗೆ ಹಿಂದೂ ಧರ್ಮವನ್ನು ಒಪ್ಪಿಕೊಳ್ಳುವ ಮೂಲಕ ಈ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಶೇಖರ್ ಬಾಬು ಪ್ರತಿಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸಂಸ್ಕೃತಿ ಮತ್ತು ರಾಜಕಾರಣವನ್ನು ನೋಡಿದರೆ ಹಲವು ಕುತೂಹಲಕಾರಿ ಅಂಶಗಳು ಗಮನಕ್ಕೆ ಬರುತ್ತವೆ.

ಸಚಿವ ಶೇಖರ್ ಬಾಬು ಹೇಳುವಂತೆ, ತಮಿಳು ನೆಲದಲ್ಲಿ ಪೆರಿಯಾರ್ ಬಗೆಗೆ ಅಪಾರ ಗೌರವವನ್ನಿಟ್ಟುಕೊಂಡೇ ದೇವರನ್ನೂ ಪೂಜಿಸುವ ಸಂಸ್ಕೃತಿಯೊಂದು ಬೆಳೆದುಬಂದಿರುವುದು ವಿಶಿಷ್ಟವೆನ್ನುವಂತಿದೆ. ತಮಿಳರು ದೇವಾಲಯದ ಹೊರಗಿನ ಪೆರಿಯಾರ್ ಪ್ರತಿಮೆಗೆ ನಮಸ್ಕರಿಸಿ, ಆನಂತರ ದೇವರಿಗೆ ನಮಸ್ಕರಿಸುವವರಾಗಿದ್ಧಾರೆ.

ತಮಿಳು ಹಿಂದೂಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಈ ದ್ರಾವಿಡ ನೆಲದಲ್ಲಿ ಅತಿ ಹೆಚ್ಚು ಹಿಂದೂ ದೇವಾಲಯಗಳಿವೆ. ಅಣ್ಣಾಮಲೈ ಯಾವ ದೇವಾಲಯದ ಬಗ್ಗೆ ಪ್ರಸ್ತಾಪಿಸಿದರೋ, ಆ ತಿರುಚ್ಚಿಯ ಶ್ರೀರಂಗಂ ದೇವಾಲಯ ಭಾರತದ ಅತಿದೊಡ್ಡ ಮತ್ತು ಹಳೆಯ ದೇವಾಲಯವಾಗಿದೆ. ದೇವರಿಲ್ಲ ಎಂದು ಪ್ರತಿಪಾದಿಸಿದ್ದ ಪೆರಿಯಾರ್ ಪ್ರತಿಮೆ ಈ ದೇವಾಲಯದ ಹೊರಗೆ ಇದೆ.

ಇನ್ನು ತಮಿಳು ರಾಷ್ಟ್ರೀಯತೆ ಮತ್ತು ಬ್ರಾಹ್ಮಣೇತರ ಚಳವಳಿಯ ಬಗ್ಗೆಯೂ ಒಂದು ಕುತೂಹಲಕಾರಿ ಸಂಗತಿ ಏನೆಂದರೆ, ಪೆರಿಯಾರ್ ಮೂಲತಃ ಕರ್ನಾಟಕದವರು, ಕರುಣಾನಿಧಿಯವರು ಆಂಧ್ರದವರು, ಎಂಜಿಆರ್ ಕೇರಳದವರು ಮತ್ತು ಜಯಲಲಿತಾ ಕರ್ನಾಟಕದ ಬ್ರಾಹ್ಮಣರಾಗಿದ್ದರು.

ತಮಿಳುನಾಡಿನಲ್ಲಿಯ ಮತ್ತೊಂದು ಪರಿಪಾಠವೇನೆಂದರೆ, ಅಲ್ಲಿನ ದೇವಾಲಯಗಳಲ್ಲಿ, ಒಬಿಸಿ ವರ್ಗಕ್ಕೆ ಒಳಪಟ್ಟಿರುವ ಆಚಾರಿ ಎಂಬ ಬ್ರಾಹ್ಮಣೇತರ ಕುಶಲಕರ್ಮಿ ಸಮುದಾಯದವರು ಬ್ರಾಹ್ಮಣೇತರರ ಹಿಡಿತದಲ್ಲಿರುವ ಸಣ್ಣ ದೇವಾಲಯಗಳಲ್ಲಿ ಶತಮಾನಗಳಿಂದಲೂ ಅರ್ಚಕರಾಗಿದ್ದಾರೆ. ಈ ಸಮುದಾಯದ ಕೆಲವರು ವಿಶ್ವ ಹಿಂದೂ ಪರಿಷತ್ ಘಟಕಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಹಿಂದೂ ಧರ್ಮದಲ್ಲಿರುವಂತೆ, ಎಲ್ಲಾ ಜಾತಿಗಳು ಮತ್ತು ವರ್ಣಗಳು, ಅವರ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಹಿಂದುತ್ವದಲ್ಲಿ ಸ್ಥಳವಿದೆ. ದ್ರಾವಿಡ ಪಕ್ಷಗಳೇ ಜಾತಿವಾದಿ ಪಕ್ಷಗಳಾಗಿದ್ದು, ಅವರೇ ಜನರನ್ನು ಜಾತಿಯ ಮೂಲಕ ಒಡೆಯುವವರು ಎಂಬ ತಕರಾರುಗಳನ್ನೂ ಇಂಥವರು ಎತ್ತುತ್ತಾರೆ.

ಇಂಥ ವಾದಗಳೂ ಸೇರಿದಂತೆ ಬಿಜೆಪಿಗೆ ಕೊಂಚ ಪೂರಕವಾದ ವಾತಾವರಣ ಈ ದ್ರಾವಿಡ ನೆಲದಲ್ಲಿ ನಿರ್ಮಾಣವಾಗುವುದಕ್ಕೆ ಜಯಲಲಿತಾ ಅವಧಿಯಿಂದಲೂ ವೇದಿಕೆ ರೂಪುಗೊಳ್ಳುತ್ತಾ ಬಂದಿದೆ. ಸದ್ಯ ಇಲ್ಲಿ ಕೇವಲ ನಾಲ್ಕು ಶಾಸಕರನ್ನು ಹೊಂದಿರುವ ಬಿಜೆಪಿ, ೨೦೨೪ರ ಲೋಕಸಭೆ ಚುನಾವಣೆಯನ್ನು ತಾನು ಎದುರಿಸಲಿರುವ ಮಹತ್ವದ ಪರೀಕ್ಷೆಯಾಗಿ ತೆಗೆದುಕೊಂಡಿರುವಂತಿದೆ. ಇದಕ್ಕೆ ಇನ್ನಷ್ಟು ತೀವ್ರತೆ ಕೊಡುವ ರೀತಿಯಲ್ಲಿ ಅಣ್ಣಾಮಲೈ ಈಚಿನ ದಿನಗಳಲ್ಲಿ ಕೊಡುತ್ತಿರುವ ಹೇಳಿಕೆಗಳಿವೆ.

ಕಳೆದ ಹಲವು ವರ್ಷಗಳಿಂದ ಎಐಎಡಿಎಂಕೆ ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ಕಳೆದ ಸೆಪ್ಟಂಬರ್ ೨೫ರಂದು ಅದು ಅಂತಿಮವಾಗಿ ಬಿಜೆಪಿಯೊಂದಿಗಿನ ಸಂಬಂಧ ಕಡಿದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಎಐಎಡಿಎಂಕೆಯ ಇಬ್ಬರು ದಿವಂಗತ ದಿಗ್ಗಜರಾದ ಜೆ. ಜಯಲಲಿತಾ ಮತ್ತು ಸಿ.ಎನ್. ಅಣ್ಣಾದೊರೈ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಬಳಿಕ ಬಿಜೆಪಿ ಮೈತ್ರಿಯನ್ನು ಎಐಎಡಿಎಂಕೆ ಕಡಿದುಕೊಂಡಿತು. ಅಣ್ಣಾಮಲೈ ತಮಿಳುನಾಡಿನ ಭ್ರಷ್ಟಾಚಾರದ ಕುರಿತು ಹೇಳುತ್ತ ಪರೋಕ್ಷವಾಗಿ ಜಯಲಲಿತಾ ಬಗ್ಗೆ ಪ್ರಸ್ತಾಪಿಸಿದ್ದು, ಅಣ್ಣಾದೊರೈ ೧೯೫೬ರಲ್ಲಿ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದರೆಂಬುದನ್ನು ಎತ್ತಿಹೇಳಿದ್ದು ಈ ಒಡಕಿಗೆ ಕಾರಣವಾಯಿತು.

ಆದರೆ, ಬಿಜೆಪಿ ಇದನ್ನು ತೀರಾ ಅನಿರೀಕ್ಷಿತ ಎಂದುಕೊಂಡಂತಿಲ್ಲ. ಎಐಎಡಿಎಂಕೆ ಇಲ್ಲದೆ ಬಿಜೆಪಿ ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಿದೆ ಎಂಬ ಮಾತುಗಳೂ ಇವೆ. ಅದು ತನ್ನ ನೆಲೆಯನ್ನು ಹಿಂದುತ್ವ ಮತ್ತು ರಾಷ್ಟ್ರೀಯವಾದಿ ನೆಲೆಗಳೊಂದಿಗೆ ಜೋಡಿಸಿಕೊಳ್ಳುವ ಎಲ್ಲ ತಂತ್ರಗಳನ್ನೂ ಮಾಡುತ್ತಿದೆ.

ಕಳೆದ ಆಗಸ್ಟ್ನಲ್ಲಿ ಅದು ಧರ್ಮಪುರಿಯಲ್ಲಿನ ಐತಿಹಾಸಿಕ ಪಂಚಾಯತ್ ಪಟ್ಟಣವಾದ ಪಪ್ಪರಪಟ್ಟಿಯಲ್ಲಿ ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ. ದೂರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಮತ್ತು ತಮಿಳು ರಾಷ್ಟ್ರೀಯವಾದಿ ಸುಬ್ರಮಣ್ಯ ಶಿವ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬ್ರಿಟಿಷರು ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ಈ ಶಿವ. ಅವರು ಆರಂಭಿಕ ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಒಬ್ಬರು. ರಾಜ್ಯದ ಮೊದಲ ತಮಿಳು ಆಧಾರಿತ ಹಿಂದುತ್ವ ಸಂಘಟನೆಗಳಲ್ಲಿ ಒಂದಾದ ಧರ್ಮ ಪರಿಪಾಲನಾ ಸಮಾಜವನ್ನು ೧೯೦೭ರಲ್ಲಿ ಅವರು ೨೩ನೇ ವಯಸ್ಸಿನಲ್ಲಿ ಪ್ರಾರಂಭಿಸಿದ್ದರು. ಅವರು ಭಾರತೀಯ ರಾಷ್ಟ್ರೀಯತಾವಾದಿ ಚಳವಳಿಯೊಂದಿಗೆ ತಮಿಳು ರಾಷ್ಟ್ರೀಯತೆಯನ್ನು ಬೆರೆಸಲು ಪ್ರಯತ್ನಿಸಿದ್ದವರು. ದೇವಾಲಯದ ಆಚರಣೆಗಳಲ್ಲಿ ಸಂಸ್ಕೃತದ ಬದಲು ತಮಿಳನ್ನು ತಂದ ರಾಜ್ಯದ ಬೆರಳೆಣಿಕೆಯ ಬ್ರಾಹ್ಮಣರಲ್ಲಿ ಅವರು ಒಬ್ಬರು.

ಡಿಎಂಕೆ ಮತ್ತು ಎಐಎಡಿಎಂಕೆ ತಮಿಳು ರಾಷ್ಟ್ರೀಯವಾದಿ ಎಂದು ಒಪ್ಪಿಕೊಂಡಿರುವ ಶಿವನನ್ನು ಈಗ ಸಂಘಪರಿವಾರ ಹಿಂದೂ ರಾಷ್ಟ್ರೀಯವಾದಿ ಎಂದು ತನ್ನ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಶಿವ ಅವರು ಪಪ್ಪರಪಟ್ಟಿಯಲ್ಲಿ ಭಾರತ ಮಾತೆಯ ಪ್ರತಿಮೆ ಸ್ಥಾಪಿಸಲು ಬಯಸಿ, ೧೯೨೩ರಲ್ಲಿ ಅದಕ್ಕೆ ಅಡಿಪಾಯ ಹಾಕಿದ್ದರೂ, ೧೯೨೫ರಲ್ಲಿ ಅವರು ತೀರಿಕೊಂಡರು. ಮುಂದೆ ೨೦೧೨ರಲ್ಲಿ, ಯಾವಾಗಲೂ ಹಿಂದುತ್ವ ಮತ್ತು ಸಂಘದ ವಿಚಾರದಲ್ಲಿ ಮೃದು ಧೋರಣೆ ಹೊಂದಿದ್ದ ಜಯಲಲಿತಾ ಪಪ್ಪರಪಟ್ಟಿ ಪಾರ್ಕ್ನಲ್ಲಿ ಸುಬ್ರಮಣ್ಯ ಶಿವನ ನವೀಕರಿಸಿದ ಸ್ಮಾರಕ ಉದ್ಘಾಟಿಸಿದರು. ಮಾತ್ರವಲ್ಲ, ಭಾರತ ಮಾತೆಯ ಪ್ರತಿಮೆಗೆ ಅಡಿಪಾಯ ಹಾಕಿದರು. ಜಯಲಲಿತಾ ಅವರ ಮರಣದ ನಂತರ, ಎಐಎಡಿಎಂಕೆ ಆಡಳಿತದ ಅಂತ್ಯದ ವೇಳೆಗೆ ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿನ್ನದ ಭಾರತ ಮಾತೆ ಪ್ರತಿಮೆ ಪೂರ್ಣಗೊಂಡಿತು.

೨೦೨೧ರಲ್ಲಿ ಮರಳಿ ಅಧಿಕಾರಕ್ಕೆ ಬಂದ ಡಿಎಂಕೆ, ಈ ಪ್ರತಿಮೆಯ ಮೇಲೆ ಹಕ್ಕು ಸಾಧಿಸುವ ಸಂಘಪರಿವಾರದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಪ್ರತಿಮೆಯ ಸುತ್ತಲೂ ಲೋಹದ ಶೆಲ್ಟರ್ ನಿರ್ಮಿಸಲಾಯಿತು ಮತ್ತು ಸ್ಥಳದಲ್ಲಿ ಸಂಘದ ಕಾರ್ಯಕರ್ತರು ಪೂಜೆ ನಡೆಸದಂತೆ ಬೀಗ ಹಾಕಲಾಯಿತು. ಆಗಸ್ಟ್ ೨೦೨೨ರಲ್ಲಿ ಬಿಜೆಪಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೀಗ ಒಡೆದು ಪ್ರತಿಮೆಗೆ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿತಾದರೂ ಸರಕಾರ ಅವಕಾಶ ಕೊಡಲಿಲ್ಲ. ಈ ನಡುವೆಯೇ, ಈಚೆಗೆ ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕ ಸೆಪ್ಟಂಬರ್ನಲ್ಲಿ ಪ್ರತಿಭಟನೆ ನಡೆಸಿತು.

ಆರೆಸ್ಸೆಸ್ ಅಜೆಂಡಾಕ್ಕೆ ಮನ್ನಣೆ ಸಿಕ್ಕಿದ್ದೇ ಜಯಲಲಿತಾ ಆಡಳಿತದಲ್ಲಿ ಎಂಬ ದೂಷಣೆಗಳನ್ನು ಮಾಡಲಾಗುತ್ತದೆ. ಅವರು ಬ್ರಾಹ್ಮಣರಾಗಿದ್ದರು ಮತ್ತು ರಾಜ್ಯದಲ್ಲಿ ಬ್ರಾಹ್ಮಣೇತರ ರಾಜಕೀಯವನ್ನು ದುರ್ಬಲಗೊಳಿಸಲು ಯತ್ನಿಸಿದರು ಎಂದು ಆರೋಪಿಸಲಾಗುತ್ತದೆ. ಗೋಹತ್ಯೆ, ಧಾರ್ಮಿಕ ಮತಾಂತರ ಮತ್ತು ರಾಮ ಸೇತು ಅಭಿಯಾನದಂತಹ ವಿಷಯಗಳಲ್ಲಿ ಹಿಂದುತ್ವ ಶಕ್ತಿಗಳನ್ನು ಜಯಲಲಿತಾ ಬೆಂಬಲಿಸಿದರು. ದೇವಸ್ಥಾನಗಳು ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಅರ್ಚಕರಿಗೆ ಭಡ್ತಿ ನೀಡಿದರು ಎಂಬ ಆರೋಪಗಳನ್ನು ಮಾಡಲಾಗುತ್ತದೆ.

ಹಿಂದುತ್ವ ಬೆಳೆಯುತ್ತಿದೆಯೋ ಇಲ್ಲವೋ, ಆದರೆ ತಮಿಳುನಾಡಿನಲ್ಲಿ ಬಿಜೆಪಿ ಬೆಳೆಯುತ್ತಿದೆ ಮತ್ತು ಹೆಚ್ಚು ಮುನ್ನೆಲೆಗೆ ಬರುತ್ತಿದೆ ಎಂಬ ವಾದಗಳು ಈಗ ಕೇಳಿಬರತೊಡಗಿವೆ. ಯುವಜನರಿಂದ ಅಣ್ಣಾಮಲೈಗೆ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿರುವುದು ಕೂಡ, ಆಡಳಿತ, ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರದಂತಹ ವಿಷಯಗಳಲ್ಲಿ ಅವರು ೫೦ ವರ್ಷಗಳ ದ್ರಾವಿಡ ಆಡಳಿತಕ್ಕೆ ಸವಾಲು ಹಾಕುವ ಧೈರ್ಯ ತೋರಿಸಲು ಕಾರಣವಾಗಿರಬಹುದು ಎನ್ನಲಾಗುತ್ತದೆ.

ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ, ಹಿಂದುತ್ವ ಸಂಘಟನೆಗಳು ವಿಶೇಷ ಪೂಜೆಗಳನ್ನು ನಡೆಸುವಲ್ಲಿ ಉತ್ಸಾಹದಿಂದ ಕೆಲಸ ಮಾಡಿದವು, ಮಹಿಳೆಯರಿಗೆ ಹೊಸ ಹಬ್ಬದ ಸಂಪ್ರದಾಯಗಳನ್ನು ಪರಿಚಯಿಸಿದವು ಮತ್ತು ದೇವಾಲಯಗಳಲ್ಲಿ ಹಿಂದೂ ಧರ್ಮಶಾಸ್ತ್ರದ ಕುರಿತು ಪ್ರವಚನಗಳನ್ನು ಆಯೋಜಿಸಿದವು.

ಇನ್ನು ತಮಿಳುನಾಡಿನ ಅನೇಕ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಹಿಂದುತ್ವವಾದಿಗಳೇ ನಡೆಸುತ್ತಿದ್ದಾರೆ. ಬಿಜೆಪಿ ಹೆಚ್ಚು ಪ್ರಭಾವಿಯಾಗುತ್ತಿರುವ ಧರ್ಮಪುರಿಯಲ್ಲೂ ಕೈಗಾರಿಕೋದ್ಯಮಿ ಮಣಿವಣ್ಣನ್ ಮಾಲಕತ್ವದ ಶಾಲಾ ಕಾಲೇಜುಗಳ ಸಮೂಹವೇ ಇದೆ. ಅಲ್ಲಿ ಆಗಾಗ ಆರೆಸ್ಸೆಸ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳಿಗೆ ಸಿದ್ಧಾಂತ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಸಿಬಿಎಸ್ಸಿ ಪಠ್ಯಕ್ರಮ, ಹಿಂದಿ ಮತ್ತು ಸಂಸ್ಕೃತಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಅದು ಸಂಘದ ಭದ್ರಕೋಟೆಯಾಗಿದೆ. ತಮಿಳುನಾಡು ನರ್ಸರಿ, ಪ್ರೈಮರಿ, ಮೆಟ್ರಿಕ್ಯುಲೇಷನ್, ಹೈಯರ್ ಸೆಕೆಂಡರಿ ಮತ್ತು ಸಿಬಿಎಸ್ಇ ಶಾಲೆಗಳ ಸಂಘದ ಕಾರ್ಯದರ್ಶಿ, ಧರ್ಮಪುರಿ ಮೂಲದ ಕೆ.ಆರ್. ನಂದಕುಮಾರ್ ರಾಜ್ಯ ಬಿಜೆಪಿಯ ಶೈಕ್ಷಣಿಕ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.

ಮತ್ತೂ ಒಂದು ವಿಚಾರ ಗಮನಿಸಬೇಕು. ಅದೇನೆಂದರೆ, ಈ ದ್ರಾವಿಡ ನೆಲದಲ್ಲಿ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದಾಳಿಗಳು. ೨೦೧೯ರಲ್ಲಿ, ಉತ್ತರ ಪ್ರದೇಶದ ನಂತರ ತಮಿಳುನಾಡಿನಲ್ಲಿಯೇ ಕ್ರಿಶ್ಚಿಯನ್ನರ ಮೇಲೆ ಅತಿ ಹೆಚ್ಚು ಪ್ರಮಾಣದಲ್ಲಿ ಹಿಂದುತ್ವದ ದಾಳಿಗಳಾದವು. ಈ ದಾಳಿಗಳಲ್ಲಿ ಹೆಚ್ಚಿನವು ಕೊಯಮತ್ತೂರು, ಈರೋಡ್, ಧರ್ಮಪುರಿ, ಕೃಷ್ಣಗಿರಿ, ಸೇಲಂ, ನಾಮಕ್ಕಲ್, ಕರೂರ್ ಮತ್ತು ತಿರುಪುರ್ಗಳಿಂದ ಕೂಡಿದ ಕೊಂಗು ಪ್ರದೇಶದಲ್ಲಿ ಸಂಭವಿಸಿವೆ. ದಿಂಡಿಗಲ್ ಮತ್ತು ಮಧುರೈ ಜಿಲ್ಲೆಯ ಭಾಗಗಳಲ್ಲಿಯೂ ಅಂಥ ಘಟನೆಗಳು ವರದಿಯಾಗಿವೆ. ಈ ಜಿಲ್ಲೆಗಳು ದಲಿತರ ಮೇಲೆ ದೌರ್ಜನ್ಯ ನಡೆಯುವ ಸ್ಥಳಗಳೂ ಹೌದು. ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಸಾಂಪ್ರದಾಯಿಕವಾಗಿ ವನ್ನಿಯಾರ್ ಸಮುದಾಯ ಆತಂಕಗೊಂಡಿದೆ ಎನ್ನಲಾಗುತ್ತದೆ. ದಲಿತರು ಮತಾಂತರಗೊಂಡರೆ, ಅಸ್ಪಶ್ಯರೆಂದು ಪರಿಗಣಿಸುವ ಆ ಸಮುದಾಯದ ಮೇಲೆ ತಮ್ಮ ಪ್ರಾಬಲ್ಯ ಇಲ್ಲವಾಗುತ್ತದೆ ಎಂಬುದು ವನ್ನಿಯಾರ್ಗಳ ಆತಂಕವಾಗಿದ್ದು, ಅವರ ಈ ಅಭದ್ರತೆಯ ಭಾವನೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತದೆ.

ಇನ್ನು, ಹಿಂದೂ ದೇವಾಲಯಗಳಲ್ಲಿ ಟ್ರಸ್ಟಿಗಳ ಬದಲಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಅಥವಾ ಸರಕಾರಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಡಿಎಂಕೆ ಸರಕಾರ ೩೮,೦೦೦ ದೇವಾಲಯಗಳ ನಿರ್ವಹಣೆಯ ಮೇಲೆ ಹಿಡಿತ ಸಾಧಿಸಿದೆ ಎಂಬ ಆರೋಪವೂ ಇದೆ. ದೇವಾಲಯದ ಟ್ರಸ್ಟಿಗಳು ಮತ್ತು ಆಡಳಿತ ಸಮಿತಿಗಳನ್ನು ನೇಮಿಸಲು ರಾಜ್ಯಾದ್ಯಂತ ಬೃಹತ್ ಅಭಿಯಾನವನ್ನು ಪ್ರಾರಂಭಿಸಲು ಒತ್ತಾಯಗಳಿವೆ. ಧರ್ಮಪುರಿಯಲ್ಲಿ ಸರಕಾರದ ನಿಯಂತ್ರಣದಲ್ಲಿ ೧,೧೫೦ ದೇವಾಲಯಗಳಿವೆ ಎನ್ನಲಾಗಿದ್ದು, ಹೆಚ್ಚಿನವುಗಳನ್ನು ಸರಕಾರಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ದೇವಾಲಯಗಳು ಹೆಚ್ಚಾಗಿ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಅಂಗಸಂಸ್ಥೆಗಳ ಮೂಲಕ ನಡೆಸಲ್ಪಡುತ್ತವೆ ಎಂಬ ತಕರಾರು ಎತ್ತಲಾಗಿದೆ.

ಇವೆಲ್ಲದರ ಜೊತೆಗೇ ಧರ್ಮಪುರಿಯಲ್ಲಿ ಭಾರತ ಮಾತೆ ಪ್ರತಿಮೆಯನ್ನು ಕೇಂದ್ರವಾಗಿಟ್ಟುಕೊಂಡ ರಾಜಕೀಯ ಹೆಚ್ಚು ತೀವ್ರತೆ ಪಡೆಯತೊಡಗಿದೆ. ಡಿಎಂಕೆ ವಿರುದ್ಧ ಬಿಜೆಪಿ ಇಲ್ಲಿ ಹೋರಾಟಕ್ಕಿಳಿದಿದೆ. ಕಳೆದ ಆಗಸ್ಟ್ನಲ್ಲಿ ಬಿಜೆಪಿ ನಾಯಕರು ಭಾರತ ಮಾತೆ ಪ್ರತಿಮೆ ಸ್ಥಾಪನೆಗಾಗಿ ಮಣ್ಣು ಸಂಗ್ರಹಿಸಿ ದಿಲ್ಲಿಗೆ ಕಳಿಸುವ ಅಭಿಯಾನವನ್ನು ನಡೆಸಿದ್ದರು.

ಡಿಎಂಕೆ ಹಾಕಿರುವ ಬೀಗ ತೆರವುಗೊಳಿಸಿ ಭಾರತಮಾತೆ ಪ್ರಾರ್ಥನೆಗೆ ಅವಕಾಶ ಕೊಡಬೇಕೆಂಬ ಆಗ್ರಹ ತೀವ್ರಗೊಳ್ಳುತ್ತಿದ್ದು, ರಾಜಕೀಯ ಸ್ವರೂಪ ಬಂದುಬಿಟ್ಟಿದೆ. ಈ ಆಗ್ರಹವನ್ನು ನಾವು ಮಾಡುತ್ತಿರುವುದು ಬಿಜೆಪಿಯ ಕಾರ್ಯಕರ್ತರಾಗಿ ಅಲ್ಲ. ಬದಲಿಗೆ ಭಾರತೀಯರಾಗಿ ಎಂದು ಹೇಳುವ ಮೂಲಕ ಈ ರಾಜಕೀಯ ಸ್ವರೂಪವನ್ನು ತೀವ್ರಗೊಳಿಸಲಾಗುತ್ತಿದೆ.

ಹೀಗೆ, ಬಿಜೆಪಿ ಒಂದೆಡೆ ಹಿಂದುತ್ವವನ್ನೂ ಮತ್ತೊಂದೆಡೆಯಿಂದ ರಾಷ್ಟ್ರೀಯತೆಯ ವಿಚಾರವನ್ನೂ ಮುಂದೆ ಮಾಡುತ್ತ, ಡಿಎಂಕೆ ವಿರುದ್ಧ ರಾಜಕೀಯ ಅಸ್ತ್ರ ಪ್ರಯೋಗಕ್ಕೆ ಬಲವಾದ ವೇದಿಕೆ ಸಜ್ಜುಗೊಳಿಸುತ್ತಿರುವಂತೆ ಕಾಣಿಸುತ್ತಿದೆ. ಧರ್ಮಪುರಿಯಂಥ ಪ್ರದೇಶಗಳಲ್ಲಿ ಸಂಘಪರಿವಾರದ್ದೇ ಪ್ರಭಾವಿಗಳ ಬಲವೂ ಇರುವುದು ಇದಕ್ಕೆ ಕಾರಣವಾಗಿರಬಹುದು.

ಇಂಥ ಎಲ್ಲ ಹಿನ್ನೆಲೆಗಳಿಂದ, ಅಣ್ಣಾಮಲೈ ಈಗ ತಮಿಳುನಾಡಿನ ಅಸ್ಮಿತೆಯೇ ಆಗಿರುವ ಪೆರಿಯಾರ್ ಅವರನ್ನು ತೆಗೆದುಹಾಕುವ ಮಾತನಾಡಿರಬಹುದೆ? ಇದು ಅವರೀಗ ರಾಜಕೀಯವಾಗಿ ಪ್ರಯೋಗಿಸುತ್ತಿರುವ ಅಸ್ತ್ರವೇ? ದ್ರಾವಿಡ ನೆಲದ ಅಂತರಾಳದಲ್ಲಿ ಏನು ನಡೆಯುತ್ತಿದೆ ಎಂಬುದು ಸದ್ಯಕ್ಕಂತೂ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

(thenewsminute.comನಲ್ಲಿ ಪ್ರಕಟವಾದ ಸುದೀಪ್ತೊ ಮಂಡಲ್ ವರದಿ ಆಧರಿತ)

Writer - ವಾರ್ತಾಭಾರತಿ

contributor

Editor - Safwan

contributor

Byline - ಹರೀಶ್ ಎಚ್.ಕೆ.

contributor

Similar News