ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪಾಲ್ಗೊಳ್ಳುವಿಕೆ ಎಷ್ಟು ಸಾಧ್ಯವಾಗಿದೆ?

ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ಸ್ವತಂತ್ರ ಭಾರತ ಕಂಡ ಪ್ರಥಮ ಶಿಕ್ಷಣ ಮಂತ್ರಿ. ಅವರು ಹತ್ತು ಹಲವು ಕನಸುಗಳನ್ನು ಕಂಡಿದ್ದರು. ಕೆಲವೊಂದನ್ನು ತಮ್ಮ ಕಾಲಾವಧಿಯಲ್ಲೇ ನನಸು ಮಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಜನ್ಮದಿನದಂದು ನಾವು ನಮ್ಮ ಪರಿಸ್ಥಿತಿಯನ್ನು ನೋಡಿಕೊಳ್ಳುವ ಕೆಲಸ ಆಗಬೇಕಲ್ಲವೆ?

Update: 2023-11-11 04:50 GMT

Photo: twitter

ಪ್ರಸಕ್ತ ಸ್ಥಿತಿ

ರಾಜ್ಯದ 30 ಕಂದಾಯ ಜಿಲ್ಲೆಗಳಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಲ್ಲಿ 23,400, ಸರಕಾರಿ ಮೆಟ್ರಿಕ್ ನಂಗತರದ ಹಾಸ್ಟೆಲ್‌ಗಳಲ್ಲಿ 8,500, ಮೌಲಾನಾ ಆಝಾದ್ ಮಾದರಿ ವಸತಿ ಶಾಲೆಗಳಲ್ಲಿ 60,000, ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ಪ.ಪೂರ್ವ ಕಾಲೇಜುಗಳಲ್ಲಿ 2,880, ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 12,380, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 21,600, ನಾಲ್ಕು ಜಿಲ್ಲೆಗಳಲ್ಲಿ (ವಿಜಯಪುರ, ದ.ಕನ್ನಡ, ಕಲಬುರಗಿ ಮತ್ತು ಮಂಡ್ಯ) ಇರುವ ಮುಸ್ಲಿಮ್ ವಸತಿ ಶಾಲೆಗಳಲ್ಲಿ 12250 ಹೀಗೆ ಒಟ್ಟು 1,41,010 ಮುಸ್ಲಿಮ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರಕಾರಿ ವಸತಿ ಶಾಲೆ/ಕಾಲೇಜುಗಳಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.

ಸರಕಾರವು 2022ರಲ್ಲಿ ಸಮೀಕ್ಷೆ ನಡೆಸಿ, ಎಲ್ಲಾ ಕಡೆಯಿಂದ ಮಾಹಿತಿ ಸಂಗ್ರಹ ಮಾಡಿ ದಾಖಲಿಸಿರುವಂತೆ ರಾಜ್ಯದಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ-ಕಾಲೇಜುಗಳಲ್ಲಿ ಒಟ್ಟು 17,39,472 ಮುಸ್ಲಿಮ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. (ಇವರಲ್ಲಿ ಸರಕಾರಿ ವಸತಿ ಶಾಲೆ/ಕಾಲೇಜುಗಳಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ 1,41,010 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸೇರಿದ್ದಾರೆ).

2011ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 78.94 ಲಕ್ಷ ಮುಸ್ಲಿಮರು ಇದ್ದಾರೆ. (ರಾಜ್ಯದ ಜನಸಂಖ್ಯೆಯಲ್ಲಿ ಇದು ಶೇ. 12.91ರಷ್ಟು ಆಗುತ್ತದೆ). ಈ ಅಂಕಿ-ಅಂಶಗಳ ಪ್ರಕಾರ ಮುಸ್ಲಿಮರಲ್ಲಿ ಶೇ. 22.03ರಷ್ಟು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ.; ಅರ್ಥಾತ್ 77.97ರಷ್ಟು ಮುಸ್ಲಿಮರಿಗೆ ಶಿಕ್ಷಣದ ಗಂಧ-ಗಾಳಿ ಸೋಂಕಿಲ್ಲ.

ವಾಸ್ತವವು ನಮ್ಮ ಕಣ್ಣ ಮುಂದೆ ಇಡುವ ಈ ಕಳವಳಕಾರಿ ಸತ್ಯಾಂಶವನ್ನು ಗಮನಿಸುತ್ತಲೇ 20ನೇ ಶತಮಾನದಲ್ಲಿ ಭಾರತ ಕಂಡ ಪ್ರಖರ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಮಹಾತ್ಮಾ ಗಾಂಧೀಜಿಯವರ ಒಂದು ಮಾತನ್ನು ನೆನಪಿಸಿಕೊಳ್ಳೋಣ. ಅವರು, ಒಂದು ಸಮಾಜದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಎಷ್ಟರ ಮಟ್ಟಿಗೆ ಧೈರ್ಯವನ್ನು ತುಂಬಲಾಗುತ್ತಿದೆ; ಅವರನ್ನು ಎಷ್ಟರ ಮಟ್ಟಿಗೆ ಸಮಾನತೆಯಿಂದ ಕಾಣಲಾಗುತ್ತಿದೆ ಎಂಬುದರ ಆಧಾರದಲ್ಲಿ ಆ ಸಮಾಜವು ಎಷ್ಟರ ಮಟ್ಟಿಗೆ ನಾಗರಿಕವಾಗಿದೆ ಎಂಬುದನ್ನು ಅರಿತುಕೊಳ್ಳಬಹುದು ಎಂದಿದ್ದರು.

ಭಾರತವು ಸ್ವಾತಂತ್ರ್ಯ ಪಡೆದುಕೊಂಡಾಗ ಶೈಕ್ಷಣಿಕವಾಗಿ ಮುಸ್ಲಿಮರು ಹಿಂದುಳಿದಿದ್ದರು; ಸ್ವಾತಂತ್ರ್ಯ ಬಂದ ಈ 75 ವರ್ಷಗಳಲ್ಲೂ ಅವರು ಶೈಕ್ಷಣಿಕವಾಗಿ ಹಿಂದೆಯೇ ಉಳಿದಿದ್ದಾರೆ.

2006ರಲ್ಲಿ ದೇಶದ ಮುಸ್ಲಿಮರ ಸ್ಥಿತಿ-ಗತಿ ಅಧ್ಯಯನ ಮಾಡಲು ಕೇಂದ್ರ ಸರಕಾರದಿಂದ ನೇಮಕಗೊಂಡ ಜಸ್ಟಿಸ್ ರಾಜಿಂದರ್ ಸಾಚಾರ್ ಸಮಿತಿ ವರದಿ ನೀಡಿತು. ಅದು, ಮುಸ್ಲಿಮರು ಶೈಕ್ಷಣಿಕವಾಗಿ ಅತಿ ಕನಿಷ್ಟ ಮಟ್ಟದಲ್ಲಿ ಇದ್ದಾರೆ. ಪ.ಜಾತಿ/ಪ.ಪಂಗಡಗಳಿಗೆ ಸೇರಿರುವ ಜನರು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ್ದಾರೆ. ಆದರೆ, ಮುಸ್ಲಿಮರು ಆ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿಲ್ಲ ಎಂಬ ಅಂಶವನ್ನು ಬಯಲಿಗಿಟ್ಟಿತು.

ಈ ವರದಿಗೂ 17 ವರ್ಷಗಳಾದವು. ಈ ಅವಧಿಯಲ್ಲಿ ಎಷ್ಟೋ ಸರಕಾರಗಳು ಬಂದವು; ಹೋದವು. ಆದರೆ, ಮುಸ್ಲಿಮರ ಶೈಕ್ಷಣಿಕ ಪರಿಸ್ಥಿತಿ ಮಾತ್ರ ಶೋಚನೀಯವಾಗಿಯೇ ಉಳಿದಿದೆ.

ಶಾಲೆ ಬಿಡುವಿಕೆ

ಪ್ರಾಥಮಿಕ ಶಿಕ್ಷಣ ಮುಗಿಸುವ ಹಂತದಲ್ಲೇ ಶಾಲೆಯನ್ನು ಬಿಡುವ ಮಕ್ಕಳ ಪ್ರಮಾಣ ದೇಶ ಮಟ್ಟದಲ್ಲಿ ಶೇ.5.1ರಷ್ಟಿದೆ. ಸರ್ವ ಶಿಕ್ಷಣ ಅಭಿಯಾನ ನಡೆಸಿರುವ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಶಾಲೆಯನ್ನು ಪ್ರಾಥಮಿಕ ಶಿಕ್ಷಣ ಮುಗಿಸುವ ಹಂತದಲ್ಲಿ ಶೇ. 6.23ರಷ್ಟಿದೆ. ಎಸೆಸೆಲ್ಸಿ ಹಂತದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಮೊಟಕುಗೊಳಿಸುವಿಕೆ ಕಂಡು ಬರುತ್ತದೆ.

2008-09ರಲ್ಲಿ ಒಮ್ಮೆ ಸಮೀಕ್ಷೆ ಆಗಿತ್ತು; 2011-12ರಲ್ಲಿ ಇನ್ನೊಮ್ಮೆ ಸಮೀಕ್ಷೆ ನಡೆಸಲಾಯಿತು. ಎರಡೂ ಬಾರಿ, ಬಹುತೇಕವಾಗಿ ಇದೇ ಪ್ರಮಾಣದಲ್ಲಿ ಶಾಲೆ ಬಿಡುವ ಅಂಶವು ತಿಳಿದು ಬಂತು.

ಪ್ರಧಾನ ಕಾರಣಗಳು

ಬಡತನವು ಮೊದಲನೇ ಕಾರಣವಾಗಿದೆ; ರಾಜ್ಯದಲ್ಲಿ 2,411 ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆಗಳು ಇವೆ. ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇವು ಹೆಚ್ಚು. ಪ್ರತಿ ವರ್ಷ 14 ಲಕ್ಷದಷ್ಟು ಮಕ್ಕಳು 522 ಉರ್ದು ಮಾಧ್ಯಮ ಪ್ರೌಢಶಾಲೆಗಳಿದ್ದು, ಇವರು ಪಿಯು ಕಾಲೇಜು ಪ್ರವೇಶಿಸಲು ಸಮಸ್ಯೆ ಎದುರಿಸುತ್ತಿರುವುದು ಎರಡನೇ ಕಾರಣವಾಗಿದೆ.

ಮಾಜಿ ಶಿಕ್ಷಣ ಮಂತ್ರಿ ಪ್ರೊ. ಬಿ.ಕೆ.ಚಂದ್ರಶೇಖರ್ ಅವರು ಸೂಚಿಸುವಂತೆ, ಮುಸ್ಲಿಮರಲ್ಲಿ ಶಿಕ್ಷಣವು ಕಡಿಮೆ ಪ್ರಮಾಣದಲ್ಲಿ ಪ್ರಸಾರ ಆಗಿರುವುದರ ಹಿಂದೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳೇ ಪ್ರಧಾನವಾಗಿವೆ ಎಂದಿರುವುದರಲ್ಲಿ ಸತ್ಯಾಂಶ ಇದೆ.

ಸಮಸ್ಯೆ ನಿವಾರಣೆಗೆ ಪ್ರಯತ್ನಗಳು

ಮುಸ್ಲಿಮ್ ಸಮುದಾಯದಲ್ಲಿ ಶಿಕ್ಷಣ ಪಡೆದುಕೊಳ್ಳುವ ಕುರಿತು ಒಂದೆಡೆ ಜಾಗೃತಿಯನ್ನು ಮೂಡಿಸಬೇಕು; ಇನ್ನೊಂದು ಕಡೆ, ಶಿಕ್ಷಣ ಪಡೆಯಲು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಅಗತ್ಯ ಇರುವಷ್ಟು ಮತ್ತು ಸಕಾಲದಲ್ಲಿ ಒದಗಿಸಬೇಕು. ಈ ವಿಷಯದಲ್ಲಿ ಸಮುದಾಯದಲ್ಲೇ ಹೆಚ್ಚಿನ ಕ್ರಿಯಾಶೀಲತೆ ಕಂಡು ಬರಬೇಕು. ಇದಕ್ಕೆ ಸರಕಾರ ಮತ್ತು ಸಮಾಜದಿಂದ ವಿಶೇಷ ಪ್ರೋತ್ಸಾಹ ದೊರಕಬೇಕು.

ಹಿಂದೊಮ್ಮೆ, ಈ ವಿಷಯದಲ್ಲಿ ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮುಹಮ್ಮದ್ ಮೊಹಸಿನ್, ಅಂದಿನ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ್ ಈ ವಿಷಯವನ್ನು ಮುಸ್ಲಿಮ್ ಶಾಸಕರ, ಧಾರ್ಮಿಕ ಮುಖಂಡರ ಮತ್ತು ಸಂಘ-ಸಂಸ್ಥೆಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೂ ಉಂಟು. ಇದಕ್ಕೆ ಆಶಾದಾಯಕ ಪ್ರತಿಕ್ರಿಯೆ ಕೂಡ ಬಂದಿತು. ಇಂಥ ಪ್ರಯತ್ನಗಳು ಮೇಲಿಂದ ಮೇಲೆ ಆಗುವ ಅವಶ್ಯಕತೆ ಇದೆ.

ಲಿಂಗಾಧಾರಿತ ಪ್ರಗತಿ

ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರು ಕಡಿಮೆ ಪ್ರಮಾಣದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ; ಶಾಲಾ ಬಿಡುವಿಕೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಅಂಶಗಳನ್ನು ಇನ್ನಷ್ಟು ವಿಶ್ಲೇಷಣೆಗೆ ಒಳಪಡಿಸಿದಾಗ, ಮುಸ್ಲಿಮ್ ಬಾಲಕರು ಮತ್ತು ಬಾಲಕಿಯರು ಸಮ ಪ್ರಮಾಣದಲ್ಲಿ ಶಿಕ್ಷಣ ಪ್ರವೇಶ ಪಡೆಯುತ್ತಿಲ್ಲ ಮತ್ತು ಸಮ ಪ್ರಮಾಣದಲ್ಲಿ ಶಾಲೆ ಬಿಡುತ್ತಿಲ್ಲ; ಮುಸ್ಲಿಮ್ ಬಾಲಕರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಪ್ರವೇಶ ಮಾಡುತ್ತಿದ್ದಾರೆ ಮತ್ತು ಮುಸ್ಲಿಮ್ ಬಾಲಕಿಯರು ಹೆಚ್ಚಿನ ಪ್ರಮಾಣದಲ್ಲಿ ಶಾಲೆ ಬಿಡುತ್ತಿದ್ದಾರೆ ಎಂಬುದು ಕಂಡು ಬರುತ್ತದೆ.


ಐ.ಐ.ಟಿ.ಗಳಲ್ಲಿ ಮುಸ್ಲಿಮರ ಪ್ರವೇಶ

ದೇಶದ ಐ.ಐ.ಟಿ.ಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರಮಾಣ ಶೇ. 1.51ರಷ್ಟು ಇದೆ. ಅಂದರೆ, ಒಟ್ಟು ಅಲ್ಲಿ 1,000 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡರೆ, ಅಲ್ಲಿ 9 ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮತ್ತು ಒಬ್ಬ ಮುಸ್ಲಿಮ್ ವಿದ್ಯಾರ್ಥಿನಿಗೆ ಪ್ರವೇಶ ದೊರಕಿರುತ್ತದೆ.

ಪರಿಹಾರ ಏನು?

ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಅಭಿವೃದ್ಧಿ ತಜ್ಞರು ಯಾವುದೇ ಸಮುದಾಯವು ಇಂದಿನ ವಿಶ್ವದಲ್ಲಿ ತನಗೆ ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ಬಯಸಿದಲ್ಲಿ, ಮೊದಲು ಅದು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದು ಅತ್ಯಗತ್ಯ ಎಂದು ನಿರಂತರವಾಗಿ ಹೇಳಿಕೊಂಡು ಬಂದಿರುವರು. ಇದನ್ನು ಮುಸ್ಲಿಮ್ ಸಮುದಾಯ ಕೂಡ ಅರ್ಥ ಮಾಡಿಕೊಳ್ಳಬೇಕು. ಇದು ಇತರ ಅವಕಾಶವಂಚಿತ ಮತ್ತು ಅನ್ಯಾಯಕ್ಕೆ ಒಳಗಾದ ಎಲ್ಲಾ ಸಮುದಾಯಗಳಿಗೂ ಅನ್ವಯ ಆಗುವಂಥ ಸಂಗತಿ.


ಮೊದಲ ಹಂತ

ಈ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆಯು ಮೊದಲು ನಡೆಯಬೇಕಿರುವುದು ಮುಸ್ಲಿಮ್ ಸಮುದಾಯದ ಒಳಗೆ. ಅಲ್ಲಿನ ಪ್ರಾಜ್ಞರು, ವಿಚಾರವಂತರು, ಶಿಕ್ಷಣವೇತ್ತರು, ಸಮಾಜ ಸುಧಾರಕರು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು, ಸಂಘ-ಸಂಸ್ಥೆಗಳ ಮುಖಂಡರು, ಗ್ರಾಮ-ತಾಲೂಕು-ಜಿಲ್ಲಾ-ರಾಜ್ಯ ಮಟ್ಟದ ಜನಪ್ರತಿನಿಧಿಗಳು ಒಗ್ಗೂಡಿ ಸಮುದಾಯವನ್ನು ಕಾಡುತ್ತಿರುವ ಈ ಪಿಡುಗನ್ನು ನಿರ್ಮೂಲನೆಮಾಡಲು ದೃಢ ನಿರ್ಧಾರ ಮಾಡಬೇಕು.

ಒಂದು ಕಡೆ, ಈ ವಿಷಯದಲ್ಲಿ ಅಗತ್ಯ ಹಕ್ಕೊತ್ತಾಯಗಳನ್ನು ಸರಕಾರದ ಮುಂದೆ ಇಡಬೇಕು. ಇನ್ನೊಂದು ಕಡೆ, ದೇಶದ ಪ್ರಜೆಗಳೇ ಆಗಿರುವ ಒಂದು ಸಮುದಾಯವು ಶಿಕ್ಷಣದಿಂದ ವಂಚಿತಗೊಳ್ಳುತ್ತಿರುವುದು ಮುಂದುವರಿದರೆ, ಆ ದೇಶ ಕೂಡ ಪೂರ್ಣ ಪ್ರಗತಿಯನ್ನು ಸಾಧಿಸಲು ಆಗುವುದಿಲ್ಲ ಎಂಬುದನ್ನು ಇಡೀ ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು.

ಎರಡನೇ ಹಂತ

ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ ಸಮುದಾಯವು ರೂಪಿಸಿರುವ ನೀಲಿ ನಕ್ಷೆಯನ್ನು ಸರಕಾರದ ಮುಂದೆ ಇಟ್ಟು, ನಿರಂತರವಾಗಿ-ಹಂತಹಂತವಾಗಿ-ಪರಿಣಾಮಕಾರಿಯಾಗಿ ಮಧ್ಯಪ್ರವೇಶ ಮಾಡುತ್ತಿರಬೇಕು. ಸರಕಾರಕ್ಕೆ ಈ ವಿಷಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ಸರ್ವರ ಸಹಕಾರವನ್ನು ಪಡೆದುಕೊಳ್ಳುವುದು ಸಾಧ್ಯವಾಗಬೇಕು.

ದು:ಖಪಡುವುದರಿಂದ, ಇನ್ನೊಬ್ಬರನ್ನು ದೂಷಿಸುವುದರಿಂದ ಯಾವುದೇ ಸಮಸ್ಯೆಯನ್ನು ಅರ್ಥಪೂರ್ಣವಾಗಿ ಬಗೆಹರಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಈ ಅಂಶವನ್ನು ಹೃದಯದಲ್ಲಿಟ್ಟುಕೊಂಡು, ನಮ್ಮ ವಿಮೋಚನೆಯನ್ನು ನಾವೇ ಮಾಡಿಕೊಳ್ಳಲು, ಈ ಪ್ರಕ್ರಿಯೆಯಲ್ಲಿ ಸಮಾಜದಲ್ಲಿನ ಸಮಸ್ತ ಪ್ರಜ್ಞಾವಂತರ ಸಲಹೆ, ಸಹಕಾರಗಳನ್ನು ಪಡೆದುಕೊಳ್ಳಲು ನಾವೇ ಮುಂದಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಮಂಗ್ಳೂರ ವಿಜಯ

contributor

Similar News