ರಫೆಲ್ ಒಪ್ಪಂದ ರಕ್ಷಿಸಲು ಮೋದಿ ಸರಕಾರ ಹೇಗೆಲ್ಲ ಎರಡು ದಶಕಗಳ ರಕ್ಷಣಾ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿದೆ ?

Update: 2023-11-04 07:26 GMT

Photo Credit: caravanmagazine.in

‘ದಿ ಕಾರವಾನ್‌ʼ ತನಿಖಾ ವರದಿ

ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಈಡಿ ವಿಚಾರಣೆ ಎದುರಿಸುತ್ತಿರುವ ಭಾರತೀಯ ಮೂಲದ ಉದ್ಯಮ ದಲ್ಲಾಳಿ ಸುಶೇನ್ ಗುಪ್ತಾಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಆಧರಿಸಿ The Caravan ಸುದೀರ್ಘ ವರದಿಯೊಂದನ್ನು ಪ್ರಕಟಿಸಿದೆ.

ಈಡಿ ಪ್ರಾಸಿಕ್ಯೂಷನ್ ದೂರುಗಳಲ್ಲಿ ಉಲ್ಲೇಖಿಸಲಾದ ದಾಖಲೆಗಳನ್ನು ಪರಿಶೀಲಿಸಿ ಸಿದ್ಧಪಡಿಸಲಾಗಿರುವ ಈ ವರದಿಯಲ್ಲಿ ಸುಶೇನ್ ಗುಪ್ತಾಗೆ ಸಂಬಂಧಿಸಿದ ದಾಖಲೆಗಳು, ಇಂಟರ್‌ಸ್ಟೆಲ್ಲರ್‌ನ ಕಂಪನಿ ದಾಖಲೆಗಳು, ಮಾರಿಷಸ್ ಸರ್ಕಾರ ಹಂಚಿಕೊಂಡ ಬ್ಯಾಂಕ್ ಸ್ಟೇಟ್ಮೆಂಟ್ಗಳು, ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದ ಹೊರತಾಗಿ, 1997 ಮತ್ತು 2003ರ ನಡುವೆ ಫ್ರೆಂಚ್ ಕಂಪನಿ ಟರ್ಬೊಮೆಕಾದಿಂದ ಹೆಲಿಕಾಪ್ಟರ್ ಇಂಜಿನ್‌ಗಳನ್ನು ಖರೀದಿಸಿದ ಅವಧಿಯಲ್ಲಿ ಯಶಸ್ವಿ ಬಿಡ್‌ದಾರರು ಸುಶೇನ್ ಗೆ ಪಾವತಿಸಿರುವ ಕುರಿತ ದಾಖಲೆಗಳು ಇಲ್ಲಿ ಸೇರಿವೆ.

ʼದಿ ಗುಪ್ತಾ ಪೇಪರ್ಸ್ʼ ಎಂಬ ಶೀರ್ಷಿಕೆಯಲ್ಲಿರುವ ನಿಲೀನಾ ಎಂ.ಎಸ್. ಅವರ ಈ ವರದಿ, 1990ರಿಂದ 2015ರವರೆಗಿನ ಡಝನ್ ಗಟ್ಟಲೆ ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕಥೆಯನ್ನು ವಿವರಿಸುತ್ತದೆ.

ಉದ್ಯಮ, ರಾಜಕಾರಣ, ಮಧ್ಯವರ್ತಿಗಳು ಕೂಡಿಕೊಂಡಲ್ಲಿ ನಡೆದಿರುವ ಭ್ರಷ್ಟಾಚಾರ, ದೇಶದ ಅತ್ಯಂತ ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿದ ವ್ಯವಹಾರಗಳು ಹೇಗೆ ಅತಿದೊಡ್ಡ ಉದ್ಯಮ ಕುಟುಂಬಗಳ ನಡುವಿನ ಕೂಡು ವ್ಯವಹಾರಗಳಂತೆ ಆಗಿಬಿಡಬಲ್ಲವು ಎಂಬುದು ಕಳವಳವನ್ನೂ ಮೂಡಿಸದೇ ಇರುವುದಿಲ್ಲ.

Caravan ಪ್ರಕಟಿಸಿರುವ ಗುಪ್ತಾ ಪೇಪರ್ಸ್ ವಿವರಗಳನ್ನು ಸಂಗ್ರಹಿಸಿ ಇಲ್ಲಿ ಕೊಡುತ್ತಿದ್ದೇವೆ.

ಇಟಲಿಯ ರಕ್ಷಣಾ ಉತ್ಪಾದನಾ ಕಂಪನಿ ಫಿನ್‌ಮೆಕಾನಿಕಾದ ಅಂಗಸಂಸ್ಥೆ ಅಗಸ್ಟಾ ವೆಸ್ಟ್ಲ್ಯಾಂಡ್‌ನಿಂದ ಭಾರತ ಸರ್ಕಾರ 2010ರಲ್ಲಿ 3,727 ಕೋಟಿ ಮೌಲ್ಯದ 12 ಹೆಲಿಕಾಪ್ಟರ್‌ಗಳ ಖರೀದಿಸುವ ಸಂಬಂಧ ಕಿಕ್ ಬ್ಯಾಕ್ ಪಾವತಿಗೆ ಸಂಬಂಧಿಸಿದಂತೆ ತನಿಖೆಯ ಸುಳಿಗೆ ಹಲವರು ಸಿಲುಕಿದ್ದಾರೆ. ಇಟಲಿ ಪೊಲೀಸರು ರಹಸ್ಯವಾಗಿ ರೆಕಾರ್ಡ್ ಮಾಡಿರುವ ಸಂಭಾಷಣೆಯಲ್ಲಿ ಬಯಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಟಲಿ ಮತ್ತು ಭಾರತ ಎರಡೂ ನಡೆಸಿದ ತನಿಖೆಗಳು ಕೇಂದ್ರೀಕೃತವಾದದ್ದು ಮಾರಿಷಸ್ ಶೆಲ್ ಕಂಪನಿ ಇಂಟರ್ ಸ್ಟೆಲ್ಲರ್‌ಗೆ. ಅದು ದುಬೈ ಮೂಲದ ರಾಜೀವ್ ಸಕ್ಸೇನಾ ಎಂಬ ಚಾರ್ಟರ್ಡ್ ಅಕೌಂಟೆಂಟ್ ಒಡೆತನದಲ್ಲಿದೆ ಎಂದು ಸಿಬಿಐ ಹೇಳಿದೆ.

2019ರ ಜನವರಿಯಲ್ಲಿ ಸಕ್ಸೇನಾ ಅವರನ್ನು ಭಾರತಕ್ಕೆ ಕರೆತರಲಾಯಿತು. ತನ್ನ ಮಾಲಕತ್ವವನ್ನು ತೋರಿಸುವ ಕಂಪನಿಯ ದಾಖಲೆಗಳನ್ನು ನಕಲಿ ಎಂದು ಆರೋಪಿಸಿದ ಸಕ್ಸೇನಾ, ಅಪ್ರೂವರ್ ಆದರು. ಮಾತ್ರವಲ್ಲ, ಈಡಿಗೆ ಎರಡು ಡೈರಿಗಳು, ಯುಎಸ್‌ಬಿ ಡ್ರೈವ್ ಮತ್ತು ಹಲವಾರು ಬಿಡಿ ಹಾಳೆಗಳ ದಾಖಲೆಗಳನ್ನು ನೀಡಿದರು. ಮತ್ತು ಅವು ದಿಲ್ಲಿ ಮೂಲದ ಉದ್ಯಮಿ ಸುಶೇನ್ ಗುಪ್ತಾ ಅವರಿಗೆ ಸೇರಿದವು ಎಂದರು.

ಈ ಸುಶೇನ್ ಗುಪ್ತಾ ಜಗತ್ತಿನಾದ್ಯಂತ ರಕ್ಷಣಾ ಉದ್ಯಮಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿ. ಡಿಜಿಟಲ್ ಫೋರೆನ್ಸಿಕ್ ಪರೀಕ್ಷೆ ಬಳಿಕ ಮತ್ತು ಮಾರಿಷಸ್ ಅಧಿಕಾರಿಗಳು ಹಂಚಿಕೊಂಡ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳೊಂದಿಗೆ ನಮೂದಿಸಲಾದ ಪಾವತಿಗಳನ್ನು ಹೋಲಿಸಿ ನೋಡಿದ ಬಳಿಕ ಈಡಿ ಅವುಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದೆ. ಪಾವತಿಗಳ ಸುಮಾರು ಐದು ನೂರು ನಮೂದುಗಳು ಇಂಟರ್‌ಸ್ಟೆಲ್ಲರ್‌ನ ಬ್ಯಾಂಕ್ ಸ್ಟೇಟ್ಮೆಂಟ್ ಗಳಿಗೆ ಹೊಂದಿಕೆಯಾಗಿವೆ.

ಗುಪ್ತಾ ಪೇಪರ್ಸ್ 1990ರಿಂದ 2015ರವರೆಗಿನ ಹಲವಾರು ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ಭ್ರಷ್ಟಾಚಾರದ ರಹಸ್ಯ ತೆರೆದಿಟ್ಟಿದೆ. ಸುಶೇನ್ ಗುಪ್ತಾ ಮತ್ತು ಅವರ ವಿವಿಧ ಕಂಪನಿಗಳು ದೇಶದ ರಕ್ಷಣಾ ಖರೀದಿ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ಕಿಕ್‌ಬ್ಯಾಕ್‌ ನೀಡುತ್ತಿದ್ದ ಶಸ್ತ್ರಾಸ್ತ್ರ ತಯಾರಕರ ಅಗತ್ಯಗಳಿಗೆ ತಕ್ಕಂತೆ ಬದಲಿಸಲು ಸಮರ್ಥವಾಗಿರುವುದನ್ನು ದಾಖಲೆಗಳು ಬಯಲು ಮಾಡಿವೆ.

ಅಂಥ ಹಂತಗಳೆಂದರೆ

1. ಪ್ರಸ್ತಾವನೆಗಳನ್ನು ಮಂಡಿಸುವ ಮೊದಲು ರಕ್ಷಣಾ ಸಚಿವಾಲಯದ ಕೋರಿಕೆಗಳ ವಿವರಗಳನ್ನು ತಿಳಿದುಕೊಳ್ಳುವುದು

2. ಭಾರತೀಯ ವಾಯುಪಡೆಯ (IAF) ನಿರ್ಣಾಯಕ ಅಗತ್ಯಗಳನ್ನು ಬದಲಾಯಿಸುವುದು

3. ರಕ್ಷಣಾ ಸಚಿವಾಲಯ ಮತ್ತು IAF ಜೊತೆ ಮಾತ್ರ ಹಂಚಿಕೊಳ್ಳಲಾದ ಸ್ಪರ್ಧಾತ್ಮಕ ಬಿಡ್‌ಗಳ ಮಾಹಿತಿ ಗಿಟ್ಟಿಸುವುದು

4. ವಿಮಾನಗಳ ಪ್ರಾಯೋಗಿಕ ಹಾರಾಟವನ್ನು ಕುಶಲತೆಯಿಂದ ನಿರ್ವಹಿಸುವುದು

5. ಡೀಲ್ ಗಳ ವೆಚ್ಚ ಭಾರತದ ಪಾಲಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚುವಂತೆ ಮಾಡುವುದು

6. ಬೆಲೆಗಳನ್ನು ನಿರ್ಧರಿಸಲು ಆಂತರಿಕ ರಕ್ಷಣಾ ಸಚಿವಾಲಯದ ಸಭೆಗಳ ನಿರ್ಣಯಗಳನ್ನು ತಿಳಿದುಕೊಳ್ಳುವುದು

7. ಯಾವ ಭಾರತೀಯ ತಯಾರಕರು ಆಫ್‌ಸೆಟ್ ಕಾಂಟ್ರ್ಯಾಕ್ಟ್ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುವುದು

8. ಅಂಥದೇ ಉತ್ಪನ್ನಗಳನ್ನು ತಯಾರಿಸುವ ಸರ್ಕಾರಿ ಸ್ವಾಮ್ಯದ ತಯಾರಕರ ಸಾಮರ್ಥ್ಯವನ್ನು ದುರ್ಬಲವಾಗಿಸುವುದು

9. ಅಂತಿಮವಾಗಿ ಬಿಡಿಭಾಗಗಳನ್ನು ಯಾರು ತಯಾರಿಸುತ್ತಾರೆ ಮತ್ತು ಈ ವಿಮಾನಗಳ ನವೀಕರಣವನ್ನು ನಿರ್ವಹಿಸುತ್ತಾರೆ ಎಂಬುದನ್ನು ನಿರ್ಧರಿಸುವುದು.

ಕಾರವಾನ್ ಈ ತನಿಖೆಯನ್ನು 15 ಡೀಲ್‌ಗಳಿಗೆ ಸೀಮಿತಗೊಳಿಸಿದೆ.

2000ರಲ್ಲಿ ಫ್ರೆಂಚ್ ಕಂಪನಿ ಡಸ್ಸಾಲ್ಟ್ ಏವಿಯೇಷನ್‌ನಿಂದ ಹತ್ತು ಮಿರಾಜ್ ಜೆಟ್‌ಗಳ ಖರೀದಿಯಿಂದ ಹಿಡಿದು ಡಸಾಲ್ಟ್ ಜೊತೆ 2016ರ ರಫೇಲ್ ಒಪ್ಪಂದದವರೆಗಿನ ಡೀಲ್ಗಳು ಇವುಗಳಲ್ಲಿ ಸೇರಿವೆ. ಸುಶೇನ್ ಗುಪ್ತಾ ಸತತವಾಗಿ ಸರ್ಕಾರಗಳ ಮೇಲೆ ಪ್ರಭಾವ ಹೊಂದಿದ್ದರು. ಏಕೆಂದರೆ ಅವರು ಎರಡೂ ಕಡೆಯ ನಾಯಕರೊಂದಿಗೆ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು.

ಸುಶೇನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ಎದ್ದು ಕಾಣುವವರು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಕುಮಗಳ ಪತಿ ರಂಜನ್ ಕಿಶೋರ್ ಭಟ್ಟಾಚಾರ್ಯ ಮತ್ತು ಜನವರಿ 2022ರಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡ ಬಿಜೆಪಿ ಪಂಜಾಬ್ ಘಟಕದ ಉಪಾಧ್ಯಕ್ಷ ಅರವಿಂದ್ ಖನ್ನಾ.

ತಜ್ಞರು ವಿಶ್ಲೇಷಿಸುವಂತೆ, ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸುಮಾರು ಶೇ.40ರಷ್ಟು ಭ್ರಷ್ಟಾಚಾರ ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿಯೇ ನಡೆಯುತ್ತದೆ. ಮಧ್ಯವರ್ತಿಗಳಿಗೆ ಇದು ಸುಲಭವಾದ ವ್ಯಾಪಾರವಾಗಿದೆ. ಭಾರತದಲ್ಲಿ ಇಂಥ ಭ್ರಷ್ಟಾಚಾರ ಸಾಮಾನ್ಯವಾಗಿ ನಿವೃತ್ತ ಮಿಲಿಟರಿ ಅಧಿಕಾರಿಗಳು ಲಾಬಿ ಪ್ರಯತ್ನಗಳ ನೇತೃತ್ವ ವಹಿಸುವ ಮೂಲಕ ನಡೆಯುತ್ತದೆ.

ʼಇಂಡಿಯಾ ಟುಡೆʼಯಲ್ಲಿನ 1986ರ ಲೇಖನದ ಪ್ರಕಾರ, ಅವರ ಕೆಲಸ ಸಾರ್ವಜನಿಕವಾಗಿ ಘೋಷಿಸುವ ಮೊದಲು ವಿವಿಧ ಸೇವೆಗಳ ಶಸ್ತ್ರಾಸ್ತ್ರ ಅವಶ್ಯಕತೆಗಳನ್ನು ಪತ್ತೆ ಮಾಡುವುದು, ಬಳಿಕ ಅಂಥ ಡೀಲ್ ಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಔತಣ, ಲಂಚ ನೀಡುವುದು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರ ಸೋದರಳಿಯರಾದ ರಾಜೀವ್ ಚೌದ್ರಿ ಮತ್ತು ಸುಧೀರ್ ಚೌದ್ರಿ ನೇತೃತ್ವದ ಯುರೇಕಾ ಕಂಪನಿ ಹಲವಾರು ಶಸ್ತ್ರಾಸ್ತ್ರ ತಯಾರಕರ ಹಿತಾಸಕ್ತಿಗಳನ್ನು ಮುಂದಿಟ್ಟಿರುವುದು ವರದಿಯಾಗಿದೆ. ಅವರು ನೌಕಾಪಡೆ ಮಾಜಿ ಮುಖ್ಯಸ್ಥ ಎಸ್‌ಎಂ ನಂದಾ ಮತ್ತು ಅವರ ಪುತ್ರ ಸುರೇಶ್ ಅವರೊಂದಿಗೆ ವ್ಯಾಪಾರ ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದರು.

ಇಬ್ಬರೂ ಭಾರತದ ಅನೇಕ ನೌಕೆಗಳು ಮತ್ತು ಟ್ಯಾಂಕ್‌ಗಳಿಗೆ ಎಂಜಿನ್‌ಗಳನ್ನು ಒದಗಿಸುವ ಜರ್ಮನ್ ಕಂಪನಿಯಾದ MTU ನ ಹಿತಾಸಕ್ತಿಗಳನ್ನು ಪ್ರತಿನಿಧಿಸಿದರು. ಮಾಜಿ ಲೆಫ್ಟಿನೆಂಟ್ ಕರ್ನಲ್ ವಿಪಿನ್ ಖನ್ನಾ ಮತ್ತು ಅವರ ಸಹೋದರ ವಿನೋದ್ ನೇತೃತ್ವದ ಖನ್ನಾ ಕುಟುಂಬ ಹಲವಾರು ಇತರ ಪ್ರಮುಖ ವಿದೇಶಿ ಉತ್ಪಾದಕರ ಪರ ವಹಿಸುವುದರ ಬಗ್ಗೆಯೂ ವರದಿಯಿದೆ.

 

ಈ ಕುಟುಂಬಗಳು ದೇಶದ ಅತ್ಯಂತ ಶಕ್ತಿಶಾಲಿ ರಾಜಕೀಯ ಕುಟುಂಬಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿವೆ. ಇನ್ನು, ಒಪ್ಪಂದದ ಪ್ರಸ್ತಾವನೆ ಸಿದ್ಧವಾದ ಕ್ಷಣದಿಂದ ಮಧ್ಯವರ್ತಿಗಳ ಪ್ರಭಾವ ಶುರುವಾಗುತ್ತದೆ. ಬಿಡ್‌ನಲ್ಲಿ ವಿವರಿಸಲಾದ ಮಾನದಂಡಗಳನ್ನು ತಮ್ಮ ಕಡೆಯವರು ಪೂರೈಸುವಂತೆ ಮಧ್ಯವರ್ತಿಗಳು ನೋಡಿಕೊಳ್ಳುತ್ತಾರೆ. ತಮ್ಮ ಕ್ಲೈಂಟ್ ಅನ್ನೇ ಬಿಡ್ ನಲ್ಲಿ ಗೆಲ್ಲಿಸಲು ವಿಮಾನಗಳ ಟ್ರಯಲ್ ಅನ್ನು ಕುಶಲತೆಯಿಂದ ನಿರ್ವಹಿಸಲಾಗುತ್ತದೆ. ಕ್ಲೈಂಟ್‌ಗೆ ಸಾಧ್ಯವಾದಷ್ಟೂ ಅನುಕೂಲವಾಗುವ ಹಾಗೆ ಮಾತುಕತೆಗಳನ್ನು ನಿಭಾಯಿಸಲಾಗುತ್ತದೆ. ರಾಜಕೀಯ ನಿರ್ಧಾರಗಳು ತಮ್ಮ ಕಡೆಗೇ ಆಗುವಂತೆ ಅವರು ಮಾಡಿಕೊಳ್ಳಬಲ್ಲರು.

ಇನ್ನು ಗುಪ್ತಾ ಕುಟುಂಬವಂತೂ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ಅಪಾರ ಪ್ರಭಾವವನ್ನು ಹೊಂದಿದೆ.

ಮೂಲತಃ ದೆಹಲಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಬ್ರಿಜ್ ಮೋಹನ್ ಗುಪ್ತಾ 1958ರಲ್ಲಿ ಇಂಡಿಯನ್ ಅವಿಟ್ರಾನಿಕ್ಸ್ (IA) ಸ್ಥಾಪಿಸುವ ಮೂಲಕ ವಾಯುಯಾನಕ್ಕೆ ಪ್ರವೇಶಿಸುವಲ್ಲಿಂದ ಅದು ಶುರುವಾಗುತ್ತದೆ. 1996ರಲ್ಲಿ, IA ಗುಪ್ತಾ ಕುಟುಂಬದ DMG ಫೈನಾನ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಎಂಬ ಕಂಪನಿಯ ಅಂಗಸಂಸ್ಥೆಯಾಯಿತು. ಬ್ರಿಜ್ ಮೋಹನ್ ಅವರ ಹಿರಿಯ ಮಗ ದೇವ್ ಮೋಹನ್ ಗುಪ್ತಾ. ದೇವ್ ಮೋಹನ್, ಅವರ ಪತ್ನಿ ಶುಭ್ರ ಮತ್ತು ಅವರ ಪುತ್ರರಾದ ಸುಶೇನ್ ಮತ್ತು ಸುಶಾಂತ್ ಅವರು IA ಮತ್ತು DMGFI ನ ಪ್ರಮುಖ ಷೇರುದಾರರಾಗಿದ್ದು, ನಿವ್ವಳ ಮೌಲ್ಯವು 350 ಕೋಟಿ ರೂ.

ಸುಶೇನ್‌ ಗುಪ್ತಾಗೆ ಸಂಬಂಧಿಸಿದ ದಾಖಲೆಗಳಲ್ಲಿ ಕಂಡುಬರುವ IA ಯ ಜಾಹೀರಾತು ಅದು ಹಲವಾರು ದೊಡ್ಡ ವ್ಯವಹಾರಗಳನ್ನು ನಿರ್ವಹಿಸಿರುವುದನ್ನು ತೋರಿಸುತ್ತದೆ. ಗುಪ್ತಾ ಕಂಪನಿಗಳಲ್ಲಿನ ಹಲವಾರು ಉನ್ನತ ಅಧಿಕಾರಿಗಳು ಈ ಹಿಂದೆ IAF, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದವರು.

2002ರಲ್ಲಿ ರೂಪಿಸಲಾದ ರಕ್ಷಣಾ ಖರೀದಿ ಪ್ರಕ್ರಿಯೆ ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ಮಧ್ಯವರ್ತಿಗಳ ಪ್ರಭಾವವನ್ನು ಕಡಿಮೆಯಾಗಿಸಲು ಏನನ್ನೂ ಮಾಡಲಿಲ್ಲ. ವಾಜಪೇಯಿ ಅವಧಿ ರಕ್ಷಣಾ ಭ್ರಷ್ಟಾಚಾರದ ಆರೋಪಗಳಿಂದ ತುಂಬಿಹೋಗಿತ್ತು.

ಹಿರಿಯ ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಸ್ತಿತ್ವದಲ್ಲೇ ಇದ್ದಿರದ ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿಯಿಂದ ರಕ್ಷಣಾ ಖರೀದಿ ವ್ಯವಹಾರಗಳಿಗಾಗಿ ಲಂಚ ಪಡೆದರು. ಲಂಚ ಪಡೆದವರಲ್ಲಿ ಆಗಿನ ರಕ್ಷಣಾ ಸಚಿವಾಲಯದ ಉಪ ಕಾರ್ಯದರ್ಶಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಶಸ್ತ್ರಾಸ್ತ್ರ ಮತ್ತು ಪೂರೈಕೆ ನಿರ್ದೇಶನಾಲಯದ ಉಪ ನಿರ್ದೇಶಕರು ಸೇರಿದ್ದರು. ವಾಜಪೇಯಿ ಅವರಿಗೆ ಹತ್ತಿರವಿದ್ದ ಇತರರು ರಕ್ಷಣಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಗುಪ್ತಾ ಪೇಪರ್ಸ್ ಬಹಿರಂಗಪಡಿಸಿದೆ.

ಆಗ ಪ್ರಧಾನಿ ಕಚೇರಿ ರಂಜನ್ ಭಟ್ಟಾಚಾರ್ಯ, ಅಧಿಕಾರಿ ಎನ್‌ಕೆ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಬ್ರಜೇಶ್ ಮಿಶ್ರಾ ಈ ಮೂವರಿಂದ ನಿಯಂತ್ರಿಸಲ್ಪಡುತ್ತಿತ್ತು ಎಂದು ಔಟ್‌ಲುಕ್‌ನ ಸಂಸ್ಥಾಪಕ ಸಂಪಾದಕ ವಿನೋದ್ ಮೆಹ್ತಾ ಬರೆದಿದ್ದಾರೆ.

ಗುಪ್ತಾ ನಡೆಸುತ್ತಿರುವ ಕಂಪನಿಗಳು ಮತ್ತು ಟ್ಯಾಲೆಂಟ್ ಮಾರ್ಕೆಟಿಂಗ್ ನಡುವಿನ ವಹಿವಾಟುಗಳನ್ನು ಗುಪ್ತಾ ಪೇಪರ್ಸ್ ಬಹಿರಂಗಪಡಿಸುತ್ತದೆ. ಟ್ಯಾಲೆಂಟ್ ಮಾರ್ಕೆಟಿಂಗ್ ಭಟ್ಟಾಚಾರ್ಯ ನಿರ್ದೇಶಕರಾಗಿರುವ ಕಂಪನಿ. ಅವರ ಪತ್ನಿ ನಮಿತಾ ಕೌಲ್ ಷೇರುದಾರರಾಗಿದ್ದಾರೆ. ಭಟ್ಟಾಚಾರ್ಯ ನಿರ್ದೇಶಕರಾಗಿರುವ ಟ್ರಾಯ್ಲಸ್ ಹಾಸ್ಪಿಟಾಲಿಟಿ ಎಂಬ ಇನ್ನೊಂದು ಕಂಪನಿ ಭಟ್ಟಾಚಾರ್ಯ ಮತ್ತು ಸುಶೇನ್ ಕಂಪನಿಗಳ ಪಾಲುದಾರಿಕೆಯಲ್ಲಿದೆ. ಇದು ಗುಪ್ತಾ ಕುಟುಂಬ ಮತ್ತು ಭಟ್ಟಾಚಾರ್ಯ ಕುಟುಂಬ ನಿಕಟ ಸಂಬಂಧ ಹೊಂದಿರುವುದನ್ನು ಸೂಚಿಸುತ್ತದೆ.

ವಾಜಪೇಯಿ ಅವಧಿಯಲ್ಲಿ ಗುಪ್ತಾ ಹಲವಾರು ಕಂಪನಿಗಳಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದನ್ನು ಮತ್ತು ಅನೇಕ ವ್ಯವಹಾರಗಳಲ್ಲಿ ಕಿಕ್‌ಬ್ಯಾಕ್‌ಗಳಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ದಾಖಲೆಗಳು ತೋರಿಸುತ್ತವೆ. ವಾಜಪೇಯಿ ಕಾಲದಲ್ಲಿಯೇ ಪ್ರಾರಂಭವಾದ ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದದಲ್ಲಿ ಕಿಕ್ಬ್ಯಾಕ್ ಪಾವತಿಯಾದುದನ್ನು ಸಿಬಿಐ ಮತ್ತು ಈಡಿ ತನಿಖೆಗಳು, ಹಾಗೆಯೇ ಗುಪ್ತಾ ಪೇಪರ್ಸ್ ತೋರಿಸುತ್ತವೆ. ಆಗ ಏರ್ ಚೀಫ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಎಸ್.ಪಿ. ತ್ಯಾಗಿ ಹೆಸರೂ ಅದರಲ್ಲಿ ಕೇಳಿಬಂದಿತ್ತು.

ಇಟಲಿ ನಡೆಸಿದ ತನಿಖೆಯ ಪ್ರಕಾರ, ಇಟಾಲಿಯನ್-ಅಮೆರಿಕನ್ ಉದ್ಯಮಿ ಗಿಡೋ ರಾಲ್ಫ್ ಹಾಶ್ಕೆಯ ಸ್ನೇಹಿತ ಮತ್ತು ಉದ್ಯಮ ಪಾಲುದಾರ ಕಾರ್ಲೋ ಗೆರೋಸಾ ತ್ಯಾಗಿ ಸಹೋದರರನ್ನು ಬಹಳ ಸಮಯದಿಂದ ತಿಳಿದಿದ್ದರು ಮತ್ತು ಅವರೇ ಹಾಶ್ಕೆಗೆ ಪರಿಚಯಿಸಿದರು. ಕಾಪ್ಟರ್ ಖರೀದಿ ವ್ಯವಹಾರ ಕುದುರಿಸಿದವರೇ ಅವರು ಎಂಬ ಆರೋಪಗಳಿವೆ.

ತನಿಖೆಯ ಪ್ರಕಾರ, ಅಗಸ್ಟಾ ವೆಸ್ಟ್ಲ್ಯಾಂಡ್ 28 ಮಿಲಿಯನ್ ಯೂರೋವನ್ನು ಹ್ಯಾಶ್ಕೆ ಮತ್ತು ಗೆರೋಸಾ ಮೂಲಕ ಕಿಕ್‌ಬ್ಯಾಕ್‌ಗೆಂದು ಕಳಿಸಿತು. ಕನ್ಸಲ್ಟೆನ್ಸಿ ಕಾಂಟ್ರಾಕ್ಟ್ಗಳ ನೆಪದಲ್ಲಿ ಭಾರತಕ್ಕೆ ಹಣವನ್ನು ಲಾಂಡರ್ ಮಾಡಲು, ಕಂಪನಿ ಹಲವಾರು ಘಟಕಗಳ ಮೂಲಕ ಅದನ್ನು ಕಳುಹಿಸಿದ್ದು, ಅದು ಮನಿ ಲಾಂಡರಿಂಗ್‌ಗಾಗಿ ನಕಲಿ ಇನ್‌ವಾಯ್ಸಿಂಗ್‌ನ ಸ್ಪಷ್ಟ ಪ್ರಕರಣ ಎಂದು ಈಡಿ ತೀರ್ಮಾನಿಸಿದೆ.

ಆಗಸ್ಟಾ ವೆಸ್ಟ್ಲ್ಯಾಂಡ್ ಹಣ ಕಳಿಸಿದ ಕಂಪನಿಗಳಲ್ಲಿ IDS ಇನ್ಫೋಟೆಕ್ ಎಂಬುದು ಮೊಹಾಲಿ ಮೂಲದ ಸಾಫ್ಟ್‌ವೇರ್ ಕನ್ಸಲ್ಟೆನ್ಸಿ. ಜೂನ್ 2008ರಲ್ಲಿ IDS ಇನ್ಫೋಟೆಕ್ ಟುನೀಶಿಯಾದಲ್ಲಿ IDS ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಎಂಬ ಅಂಗಸಂಸ್ಥೆಯನ್ನು ನೋಂದಾಯಿಸಿತು.

ತಿಂಗಳ ನಂತರ ಗೆರೋಸಾ ಮತ್ತು ಹಾಶ್ಕೆಗೆ ಅದನ್ನು ನೀಡಲಾಯಿತು. ಐಡಿಎಸ್ ಇನ್ಫೋಟೆಕ್‌ನ ಕಾನೂನು ಸಲಹೆಗಾರರೂ ಆಗಿದ್ದ ಗೌತಮ್ ಖೈತಾನ್ ಅವರೊಂದಿಗೆ ಇಬ್ಬರು ಇಟಾಲಿಯನ್ನರು ಚಂಡೀಗಢ ಮೂಲದ ಏರೋಮ್ಯಾಟ್ರಿಕ್ಸ್ ಇನ್ಫೋ ಸೊಲ್ಯೂಷನ್ಸ್ ಎಂಬ ಕನ್ಸಲ್ಟೆನ್ಸಿ ಸಂಸ್ಥೆಯ ನಿರ್ದೇಶಕರಾದರು. ಈ ಮೂರೂ ಕಂಪನಿಗಳು ಗುಪ್ತರ ಪರವಾಗಿ ಕೆಲಸ ಮಾಡುತ್ತಿದ್ದವು ಎಂದು ಈಡಿ ಪತ್ತೆ ಮಾಡಿದೆ.

ಆರೋಗ್ಯ ಸಂಬಂಧಿ ಲಿಪ್ಯಂತರ ಸೇವೆಗಳನ್ನು ನಿರ್ವಹಿಸುತ್ತಿದ್ದ IDS ಇನ್ಫೋಟೆಕ್, 2000ರ ದಶಕದ ಆರಂಭದಲ್ಲಿ ಇದ್ದಕ್ಕಿದ್ದಂತೆ ಡಸಾಲ್ಟ್ ಏವಿಯೇಷನ್‌ಗಾಗಿ ಸಾಫ್ಟ್ವೇರ್ ಕೆಲಸಕ್ಕೆ ತೊಡಗಿಕೊಂಡಿತು ಮತ್ತು ಬ್ರೆಝಿಲಿಯನ್ ವಿಮಾನ ತಯಾರಕ ಸಂಸ್ಥೆ ಎಂಬ್ರೇರ್‌ ಜೊತೆ ಒಪ್ಪಂದವನ್ನೂ ಮಾಡಿಕೊಂಡಿತು. ಆ ಕಂಪನಿಯು ಹಲವಾರು ರಿತೀಯಲ್ಲಿ ಗುಪ್ತಾ ಕಂಪನಿಗಳು ನೆರವಾದವು ಎಂಬುದು ತನಿಖೆಯಿಂದ ತಿಳಿದಿದೆ. ನವೆಂಬರ್ 2009ರಲ್ಲಿ ವ್ಯಾಪಾರ ವರ್ಗಾವಣೆ ಒಪ್ಪಂದದ ಮೂಲಕ, ಅಗಸ್ಟಾ ವೆಸ್ಟ್ಲ್ಯಾಂಡ್‌ನೊಂದಿಗಿನ IDS ನ ಒಪ್ಪಂದಗಳನ್ನು ಏರೋಮ್ಯಾಟ್ರಿಕ್ಸ್ಗೆ ವರ್ಗಾಯಿಸಲಾಯಿತು.

ಅನಂತರ, ಟುನೀಶಿಯಾದ ಅಂಗಸಂಸ್ಥೆ ಅಗಸ್ಟಾ ವೆಸ್ಟ್ಲ್ಯಾಂಡ್‌ನಿಂದ ಖರೀದಿ ಆದೇಶಗಳನ್ನು ಸರಣಿಯಾಗಿ ಪಡೆಯತೊಡಗಿತು. ಅದಕ್ಕಾಗಿ 20.8 ಮಿಲಿಯನ್ ಯೂರೋ ಪಾವತಿಸಲಾಯಿತು ಎಂದು ಈಡಿ ಗಮನಿಸಿದೆ. ಆದರೆ ಕಂಪನಿಯು ಈ ಹಣದಲ್ಲಿ 3.8 ಮಿಲಿಯನ್ ಯೂರೋ ಮಾತ್ರ ಪಡೆಯಿತು. ವಿಚಿತ್ರವೆಂದರೆ, 1.88 ಮಿಲಿಯನ್ ಯೋರೋವನ್ನು IDS ಇನ್ಫೋಟೆಕ್‌ಗೆ ವರ್ಗಾಯಿಸಲಾಯಿತು. ಹಾಗಾದರೆ, ಉಳಿದ 15.12 ಮಿಲಿಯನ್ ಯೂರೋ ಎಲ್ಲಿ ಹೋಯಿತು ಎಂಬ ಪ್ರಶ್ನೆ ಇದೆ.

ಇನ್ನು ಇಂಟರ್ ಸ್ಟೆಲ್ಲರ್ ವಿಚಾರಕ್ಕೆ ಬರುವುದಾದರೆ, ದುಬೈ ಮೂಲದ ಚಾರ್ಟರ್ಡ್ ಅಕೌಂಟೆಂಟ್ ರಾಜೀವ್ ಸಕ್ಸೇನಾ ಅವರು 2003ರಿಂದ ಇಂಟರ್‌ಸ್ಟೆಲ್ಲರ್‌ನ ಏಕೈಕ ನಿರ್ದೇಶಕರಾಗಿದ್ದರು ಎಂದು ಈಡಿ ಹೇಳಿದೆ. ಇಂಟರ್‌ಸ್ಟೆಲ್ಲರ್‌ನ ಇತಿಹಾಸ ಸಂಕೀರ್ಣವಾಗಿದ್ದರೂ, ದೇವ ಮೋಹನ್ ಗುಪ್ತಾ ಮತ್ತು ಸುಶೇನ್ ಮೋಹನ್ ಗುಪ್ತಾ ಅವರು ಈ ಕಂಪನಿಯೊಂದಿಗೆ ವಹಿವಾಟುಗಳನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟ ಎಂದು ಈಡಿ ತೀರ್ಮಾನಿಸಿದೆ.

ಸುಶೇನ್ ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಹಣ ವರ್ಗಾವಣೆಗೆ ಸೂಚನೆ ನೀಡಿರುವುದನ್ನು ಇಮೇಲ್‌ಗಳು ತೋರಿಸುತ್ತವೆ. ಕಿಕ್‌ಬ್ಯಾಕ್‌ಗಳನ್ನು ಸುಶೇನ್ ಗುಪ್ತಾ ನಿರ್ವಹಿಸುವ ಘಟಕಗಳಿಗೆ, ಸಂಬಂಧಿಕರು, ಸ್ನೇಹಿತರಿಗೆ, ರಜಾದಿನಗಳ ಮೋಜಿಗೆ ಅಥವಾ ಭಾರತ ಮತ್ತು ವಿದೇಶಗಳಲ್ಲಿ ಆಸ್ತಿ ಖರೀದಿಗೆ ವರ್ಗಾಯಿಸಲಾಗಿದೆ ಎಂಬುದೂ ತನಿಖೆಯಲ್ಲಿ ಕಂಡುಬಂದಿದೆ.

ಇಂಟರ್‌ಸ್ಟೆಲ್ಲರ್‌ನ ಖಾತೆಯಿಂದ ಬಂದ ಹಣವನ್ನು ಸುಶೇನ್ ವೈಯಕ್ತಿಕ ಖರ್ಚುಗಳಿಗೂ ಬಳಸಿರುವುದೂ ಪತ್ತೆಯಾಗಿದೆ. ಕೆಲ ತಿಂಗಳುಗಳಲ್ಲಿ ಆರು ಜನರ ಕುಟುಂಬ ವೈಯಕ್ತಿಕ ಖರ್ಚಿಗೆ ನಲವತ್ತು ಲಕ್ಷ ರೂ. ಖರ್ಚು ಮಾಡಿತ್ತು ಎಂಬುದನ್ನೂ ಕಂಡುಕೊಳ್ಳಲಾಗಿದೆ.

ಸೇನೆಯ ದಕ್ಷಿಣ ಕಮಾಂಡ್‌ನ ಮಾಜಿ ಮುಖ್ಯಸ್ಥರಾಗಿದ್ದ, ನಿವೃತ್ತಿ ಬಳಿಕ ಕೈರಾಲಿ ಕಾಫಿ ಎಸ್ಟೇಟ್ ಎಂಬ ಗುಪ್ತಾ ಕಂಪನಿಯೊಂದಕ್ಕೆ ಸೇರಿದ ಬಲರಾಜ್ ಸಿಂಗ್ ಠಕ್ಕರ್ ಅವರ ಪುತ್ರಿ ನಿಮ್ರತಾ ಠಕ್ಕರ್‌ಗೆ 28,000 ಡಾಲರ್ ವರ್ಗಾವಣೆ ಮಾಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ಈಡಿ ಪ್ರಕಾರ, ಸುಶೇನ್ ಇಂಟರ್ ಸ್ಟೆಲ್ಲರ್ ನಿಂದ ಮೂರು ಕಂಪನಿಗಳಿಗೆ ಹಣವನ್ನು ವರ್ಗಾಯಿಸಲು ಸೂಚನೆಗಳನ್ನು ನೀಡಿದರು: ಕ್ಯಾಪ್ಲೈನ್ ಗ್ಲೋಬಲ್, ಸಿಟೇಶನ್ ಮತ್ತು ಕ್ರೆಸೆಂಟ್ ಕಮರ್ಷಿಯಲ್ ಈ ಕಂಪನಿಗಳಿಗೆ ಇಂಟರ್‌ಸ್ಟೆಲ್ಲರ್‌ನಿಂದ ಹಣ ವರ್ಗಾವಣೆಯಾಗಿರುವುದನ್ನು ಪಟ್ಟಿ ಮಾಡಲಾಗಿದೆ.

ಈಡಿ ಪ್ರಕಾರ, ಸುಶೇನ್ ಈ ಕಂಪನಿಗಳಿಗೆ ವಾರ್ಷಿಕ ನವೀಕರಣ ಶುಲ್ಕ ಪಾವತಿಸುತ್ತಿದ್ದರು ಮತ್ತು ತೆರಿಗೆ ಸ್ವರ್ಗಗಳಲ್ಲಿ ನೆಲೆಸಿರುವ ಹಲವಾರು ಇತರ ಕಂಪನಿಗಳಿಗೂ ಹಣ ವರ್ಗಾಯಿಸುತ್ತಿದ್ದರು. ಇಂಟರ್‌ಸ್ಟೆಲ್ಲರ್ ಗುಪ್ತಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಣ ವರ್ಗಾಯಿಸಿದೆ. ಹಣ ವರ್ಗಾವಣೆಯಾಗುವ ಸಿಂಗಾಪುರದ ಇ-ಕಾಮರ್ಸ್ ಕಂಪನಿ ಇಂಟರ್‌ಡೆವ್‌, ಕನಿಷ್ಠ 2000ದಿಂದ ಅಸ್ತಿತ್ವದಲ್ಲಿದೆ. ಅದರ ನಿರ್ದೇಶಕ ಮತ್ತು ಬಹುಪಾಲು ಷೇರುದಾರರು ದೇವ್ ಇಂದರ್ ಭಲ್ಲಾ ಎಂಬ ವ್ಯಕ್ತಿ.

ಮಾರಿಷಸ್‌ನಲ್ಲಿ ಇಂಟರ್‌ಸ್ಟೆಲ್ಲರ್‌ನ ಅದೇ ವಿಳಾಸವನ್ನು ಹೊಂದಿರುವ ಸಭಾಹ್ ಇನ್ವೆಸ್ಟ್‌ಮೆಂಟ್ಸ್ ಎಂಬ ಇನ್ನೊಂದು ಕಂಪನಿಯನ್ನು ಭಲ್ಲಾ ನಿರ್ವಹಿಸುತ್ತಾರೆ. ಸಭಾ ಮತ್ತು ಸುಷೇನ್ ನಡುವೆ ವ್ಯಾಪಕ ಸಂಪರ್ಕಗಳಿವೆ.

ಪ್ರಾಥಮಿಕವಾಗಿ IDS ಮತ್ತು ಡಸ್ಸಾಲ್ಟ್ ಏವಿಯೇಷನ್ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಂಟರ್ಡೆವ್ ಸುಸೇನ್ ಗುಪ್ತಾ ಜೊತೆ ಕೆಲಸ ಮಾಡಿದ ಪುರಾವೆಗಳಿವೆ. ಸೆಪ್ಟೆಂಬರ್ 2014ರಲ್ಲಿ ದೆಹಲಿಯಲ್ಲಿರುವ ಗೌತಮ್ ಖೈತಾನ್ ಕಚೇರಿಯ ಮೇಲೆ ದಾಳಿ ಮಾಡಿದ ನಂತರ ಈ ಕಂಪನಿಗಳ ನಡುವೆ ಇಮೇಲ್‌ ವ್ಯವಹಾರಗಳಿರುವುದನ್ನು ಪತ್ತೆ ಹಚ್ಚಿದ ಈಡಿ, ಸುಶೇನ್ ತಮಗೆ ಪಾವತಿಯಾಗಬೇಕಿರುವ ಹಣದ ಬಗ್ಗೆ ಇಂಟರ್‌ಡೆವ್‌ಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದುದನ್ನು ಈಡಿ ಪತ್ತೆಹಚ್ಚಿದೆ.

ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದಕ್ಕೆ ಸಂಬಂಧಿಸಿದ ಲಂಚದ ಪಾವತಿ ಇನ್ನೊಂದು ಬಗೆಯಲ್ಲಿ ಆಗಿದ್ದು ಮೈಕೆಲ್ ಮೂಲಕ. ಇಟಲಿ ತನಿಖೆಯ ಆಧಾರದ ಮೇಲೆ ಈಡಿ ಮತ್ತು ಸಿಬಿಐ, ಮೈಕೆಲ್ ಕಂಪನಿಗಳಿಂದ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಮತ್ತು ಸಕ್ಸೇನಾ ಒಡೆತನದ ಕಂಪನಿಗಳಿಗೆ ಹಣ ಪಾವತಿಯಾಗಿರುವುದನ್ನು ಪತ್ತೆಹಚ್ಚಿವೆ. 1.24 ಮಿಲಿಯನ್ ಡಾಲರ್ ಹಣ 2011 ಮತ್ತು 2012ರಲ್ಲಿ ಬಂದಿದೆ.

ಹಲವಾರು ಅಂಶಗಳು ಮೈಕೆಲ್ ಮತ್ತು ಗುಪ್ತಾ ಈ ಒಪ್ಪಂದವನ್ನು ನಿಭಾಯಿಸಲು ನೆರವಾಗಿದ್ದವು. ಮುಖ್ಯವಾಗಿ, ಹಿರಿಯ ಅಧಿಕಾರಿಗಳೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು. ಈ ಪ್ರಕರಣದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ, ಮೈಕೆಲ್ ಹಲವಾರು ಅಧಿಕಾರಿಗಳನ್ನು ಭೇಟಿಯಾಗಿದ್ದುದು, ಅವರ ಸ್ನೇಹಿತರು ಸೇರಿದಂತೆ ಸೈನಿಕ್ ಫಾರ್ಮ್‌ನಲ್ಲಿರುವ ತ್ಯಾಗಿ ಕುಟುಂಬದ ಭವನದಲ್ಲಿ ಕಾರ್ಯಕ್ರಮಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದುದರ ಉಲ್ಲೇಖಗಳಿವೆ.

ರಕ್ಷಣಾ ಸಚಿವ ಎಕೆ ಆಂಟನಿ ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ನಂತರ, ಕಂಪನಿ ಪಾವತಿಸಿದೆ ಎನ್ನಲಾದ ಕಿಕ್ಬ್ಯಾಕ್ ವಿಚಾರಕ್ಕಾಗಿ ತ್ಯಾಗಿಸ್, ಹಾಶ್ಕೆ, ಗೆರೋಸಾ ಮತ್ತು ಮೈಕೆಲ್ ಸೇರಿದಂತೆ 11 ಜನರನ್ನು ಹೆಸರಿಸಿತು. ಇತ್ತ, ರಕ್ಷಣಾ ಸಚಿವಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೇಳಿತು.

ಮಾರ್ಚ್ 2013ರಲ್ಲಿ ಖೈತಾನ್ ಕಚೇರಿ ಮೇಲೆ ದಾಳಿ ನಡೆಸಲಾಯಿತು ಮತ್ತು ದಾಖಲೆಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಯಿತು. ನಂತರದ ಈಡಿ ಮತ್ತು ಸಿಬಿಐ ಚಾರ್ಜ್ ಶೀಟ್‌ಗಳಲ್ಲಿನ ಉಲ್ಲೇಖಗಳು ಖೈತಾನ್ ಮತ್ತು ಸುಶೇನ್ ನಡುವಿನ ಸ್ಪಷ್ಟವಾದ ಸಂಪರ್ಕವನ್ನು ತೋರಿಸುತ್ತವೆ. ಅನಂತರ ಖೈತಾನ್ ಬಂಧನವಾಯಿತು.

ನವೆಂಬರ್ 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಕೂಡಲೇ, 126 ರಫೇಲ್ ಜೆಟ್‌ಗಳಿಗೆ ವಿನಂತಿಗಳನ್ನು ಕಳುಹಿಸಿತು, ಒಪ್ಪಂದಕ್ಕೆ 42,000 ಕೋಟಿ ರೂ.ಗಳನ್ನು ಮೀಸಲಿಟ್ಟಿತು, ಇದು ಕೇವಲ ಭಾರತವಲ್ಲದೆ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಒಪ್ಪಂದ. ಐಎಎಫ್ ಮತ್ತು ರಾಯಭಾರ ಕಚೇರಿ ಹೊರತುಪಡಿಸಿ ಯಾರೂ ಹೊಂದಿರದ ಮಾಹಿತಿಗಳು ಸುಶೇನ್ ಗುಪ್ತಾ ಬಳಿ ಇದ್ದುದು ಡೈರಿಯಿಂದ ತಿಳಿಯುತ್ತದೆ.

ಜನವರಿ 2012ರಲ್ಲಿ ರಫೇಲ್ ಅನ್ನು L1 ಅಥವಾ MMRCA ಒಪ್ಪಂದಕ್ಕೆ ಕಡಿಮೆ ಬಿಡ್ಡರ್ ಎಂದು ಘೋಷಿಸಲಾಯಿತು. ಒಂದು ತಿಂಗಳ ನಂತರ, ಡಸ್ಸಾಲ್ಟ್ ತನ್ನ ಫಾಲ್ಕನ್ ವ್ಯಾಪಾರ ಜೆಟ್‌ಗಳಿಗೆ ರೆಕ್ಕೆಗಳನ್ನು ನಿರ್ಮಿಸಲು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು.

ಅದಕ್ಕೂ ಮೊದಲಿನಿಂದ ಸುಶೇನ್ ರಿಲಯನ್ಸ್ ಜೊತೆ ನಿಕಟವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಡಸಾಲ್ಟ್ ತಂಡದೊಂದಿಗೂ ಸುಶೇನ್ ಸಂಪರ್ಕಕ್ಕೆ ಬಂದಿದ್ದರು. ರಫೇಲ್‌ನ ಅಂತಿಮ ಪ್ರಮುಖ ತಯಾರಕರಾದ ಸಫ್ರಾನ್ ಕೂಡ ಗುಪ್ತರೊಂದಿಗೆ ಹಳೆಯ ಸಂಬಂಧವನ್ನು ಹೊಂದಿತ್ತು. ಸಫ್ರಾನ್ ಫ್ರಾನ್ಸ್‌ನ ಅತಿದೊಡ್ಡ ವಿಮಾನ ಎಂಜಿನ್ ತಯಾರಕರಾಗಿದ್ದು, ದೇಶದ ಅತ್ಯಂತ ಪ್ರಭಾವಶಾಲಿ ರಕ್ಷಣಾ ಕಂಪನಿಗಳಲ್ಲಿ ಒಂದಾಗಿದೆ. ಸುಶೇನ್ ಭಾರತದಲ್ಲಿನ ಮೂರು ದೊಡ್ಡ ಫ್ರೆಂಚ್ ರಕ್ಷಣಾ ಉತ್ಪಾದನಾ ಸಂಸ್ಥೆಗಳ ಪ್ರಾಥಮಿಕ ಏಜೆಂಟ್‌ಗಳಲ್ಲಿ ಒಬ್ಬರಾಗಿ ಬೆಳೆದರು.

ಮತ್ತೊಂದು ದಾಖಲೆ 2006ರ ವೇಳೆಗೆ ಗುಪ್ತಾ ಪ್ರತಿನಿಧಿಸುತ್ತಿದ್ದ ಒಂಬತ್ತು ಇತರ ಸಣ್ಣ ಫ್ರೆಂಚ್ ಕಂಪನಿಗಳನ್ನು ಪಟ್ಟಿಮಾಡುತ್ತದೆ. ಸುಶೇನ್ ಗುಪ್ತಾಗೆ ಸಂಬಂಧಿಸಿದ ದಾಖಲೆಗಳಲ್ಲಿ, ತಮ್ಮ ಹೆಸರಿನಲ್ಲಿ ಕಳುಹಿಸಲು ಬರೆದ ಹತ್ತಾರು ಪತ್ರಗಳು ಇವೆ. ಭಾರತ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುವ ಕಂಪನಿಗಳು, ರಕ್ಷಣಾ ತಯಾರಕರು ತಮ್ಮ ಸರ್ಕಾರಗಳನ್ನು ತ್ವರಿತ ಮಾತುಕತೆಗೆ ಒತ್ತಡ ಹೇರಲು ವಿನಂತಿಸುವ ಮತ್ತು ರಕ್ಷಣಾ ಸಂಸ್ಥೆಗಳು ಪ್ರತಿಸ್ಪರ್ಧಿ ಕಂಪನಿಗಳನ್ನು ಆರೋಪಿಸಿ ರಕ್ಷಣಾ ಸಚಿವಾಲಯಕ್ಕೆ ಅವರು ಪತ್ರ ಬರೆದದ್ದಿದೆ.

2013 ಮತ್ತು 2014ರಲ್ಲಿ ಭಾರತ ಸರ್ಕಾರದ ಒಪ್ಪಂದದ ಸಮಾಲೋಚನಾ ಸಮಿತಿಗೆ ಕಳಿಸಲು ಡಸಾಲ್ಟ್ಗೆ ಕನಿಷ್ಠ ಆರು ಪತ್ರಗಳನ್ನು ಸುಶೇನ್ ಗುಪ್ತಾ ಬರೆದಿದ್ದರು. ಆತಂಕಕಾರಿಯೆಂಬಂತೆ, ಒಪ್ಪಂದದ ಸಮಾಲೋಚನಾ ಸಮಿತಿಯ ಹಲವಾರು ಸಭೆಗಳ ನಿರ್ಣಯಗಳನ್ನು ಸುಶೇನ್ ಗುಪ್ತಾ ಪತ್ರ ಒಳಗೊಂಡಿತ್ತೆಂಬ ವರದಿಯಿದೆ.

ಪತ್ರದಲ್ಲಿ ಮೋದಿ ಸರ್ಕಾರದ ಅಂತರಾಷ್ಟ್ರೀಯ ಒಲವುಗಳನ್ನು ಸೂಚಿಸುವ ಸುಶೇನ್ ಗುಪ್ತಾ, ಇಸ್ರೇಲ್‌ಗೆ ಸಾಮೀಪ್ಯವನ್ನು ಎತ್ತಿ ತೋರಿಸಬೇಕು ಎಂದು ಹೇಳಿರುವುದಿದೆ. ತನ್ನ ಪತ್ರಗಳಲ್ಲಿ ಮೋದಿ ಸರ್ಕಾರದ ಆಕ್ರಮಣಕಾರಿ ಅಂತರಾಷ್ಟ್ರೀಯ ನಿಲುವುಗಳನ್ನು ತನ್ನ ಸ್ವಂತ ಉದ್ದೇಶಕ್ಕೆ ಬಳಸಿಕೊಳ್ಳಲು ಸುಶೇನ್ ಗುಪ್ತಾ ಸಮರ್ಥನಾಗಿದ್ದುದು ಕಂಡಿದೆ. ಮೋದಿ ಸರ್ಕಾರ ಜೆಟ್‌ಗಳ ಸಂಖ್ಯೆಯನ್ನು ಬದಲಾಯಿಸುವುದರ ಜೊತೆಗೆ, ಡಸಾಲ್ಟ್ ತನ್ನ ಜಂಟಿ ಸಹಭಾಗಿತ್ವವನ್ನು RIL ನಿಂದ ಮುಖೇಶ್ ಅಂಬಾನಿಯವರ ಕಿರಿಯ ಸಹೋದರ ಅನಿಲ್ ನೇತೃತ್ವದ ರಿಲಯನ್ಸ್ ಗ್ರೂಪ್‌ಗೆ ಬದಲಾಯಿಸಿತು. HAL ಹೊಸ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗುಳಿಯಿತು.

ಸುಶೇನ್ ಗುಪ್ತಾ ಜೊತೆ ಕೆಲಸ ಮಾಡಿದ ಹಲವು ಕಂಪನಿಗಳಲ್ಲಿ ಎಲಿಸ್ರಾ ಕೂಡ ಒಂದು. ಮಾರಿಷಿಯನ್ ದಾಖಲೆಗಳು ಇಂಟರ್ ಸ್ಟೆಲ್ಲರ್ ಎಲ್ಬಿಟ್, ಎಲಿಸ್ರಾ ಅವರ ಮೂಲ ಕಂಪನಿ ಮತ್ತು ಅದರ ಅಂಗಸಂಸ್ಥೆ ELOP ನಿಂದ ಹಣವನ್ನು ಸ್ವೀಕರಿಸುವುದನ್ನು ತೋರಿಸಿದೆ.

ಫೆಬ್ರವರಿ 2010ರಲ್ಲಿ, ಭಾರತೀಯ ನೌಕಾಪಡೆ ತನ್ನ ಡೋರ್ನಿಯರ್ ಡೊ 228-211 ವಿಚಕ್ಷಣ ವಿಮಾನಗಳಿಗೆ 11 ELOP ComPASS ಸಂವೇದಕಗಳನ್ನು ಅಳವಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಮೂರು ವರ್ಷಗಳ ನಂತರ, ನೌಕಾಪಡೆ 56 ನೌಕಾ ಹೆಲಿಕಾಪ್ಟರ್‌ಗಳಿಗೆ ಇದೇ ರೀತಿಯ CoMPASS ಸಂವೇದಕಗಳನ್ನು ಜೋಡಿಸಲು ಸುಮಾರು Rs 160 ಕೋಟಿ ಮೌಲ್ಯದ ಒಂದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿತು. ಈ ಅವಧಿಯಲ್ಲಿ, ಸುಶೇನ್ ಕಂಪನಿ ಗುತ್ತಿಗೆಗಳನ್ನು ಗೆಲ್ಲಲು ಹೆಚ್ಚು ಲಾಬಿ ನಡೆಸುತ್ತಿತ್ತೆಂಬುದು ಸ್ಪಷ್ಟವಾಗಿದೆ.

2018ರಲ್ಲಿ ಅದಾನಿ ಡಿಫೆನ್ಸ್ ಎಲ್ಬಿಟ್ ಜೊತೆಗೆ ಡ್ರೋನ್‌ಗಳನ್ನು ತಯಾರಿಸಲು ತನ್ನ ಮೊದಲ ದೊಡ್ಡ ಜಂಟಿ ಉದ್ಯಮಕ್ಕೆ ಸಹಿ ಹಾಕಿತು. ಈ ಕೆಲವು ವ್ಯವಹಾರಗಳಲ್ಲಿ ಭಾಗಿಯಾಗಿರುವ ಕಂಪನಿಗಳು ಸುಶೇನ್ ಗುಪ್ತಾಗೆ ಕಿಕ್‌ಬ್ಯಾಕ್‌ಗಳನ್ನು ಒದಗಿಸಿವೆ ಎಂಬುದಕ್ಕೆ ಈಡಿ ಮತ್ತು ಸಿಬಿಐ ಬಳಿ ಸಾಕಷ್ಟು ಪುರಾವೆಗಳಿವೆ.

ಈಡಿ ಮತ್ತು ಸಿಬಿಐ ಈಗ ಹತ್ತು ವರ್ಷಗಳಿಂದ ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದ ತನಿಖೆ ನಡೆಸುತ್ತಿವೆ. ಮತ್ತು ಆ ಸಮಯದಲ್ಲಿ ಅವು ಸಲ್ಲಿಸಿದ 14 ಚಾರ್ಜ್ ಶೀಟ್‌ಗಳಲ್ಲಿ ಸೇರಿಸಿದ್ದಕ್ಕಿಂತ ತನಿಖೆಯಲ್ಲಿ ತಪ್ಪಿಸಿದ್ದೇ ಹೆಚ್ಚು. ಅವುಗಳ ದಾಖಲಾತಿಗಳು ಅವು ಬಹಿರಂಗಪಡಿಸಿದ ಪುರಾವೆಗಳಿಗಿಂತಲು ರಾಜಕೀಯ ಪ್ರೇರಣೆಗಳಿಂದ ಹೆಚ್ಚು ಪ್ರಭಾವಿತವಾಗಿವೆ.

ಸಿಬಿಐ ಮತ್ತು ಈಡಿ ಎರಡೂ ಎಂಬ್ರೇರ್ ಪ್ರಕರಣದಲ್ಲಿ ಕಿಕ್‌ಬ್ಯಾಕ್‌ಗಳನ್ನು ಇಂಟರ್‌ಡೆವ್ ಮೂಲಕ ಕಳುಹಿಸಲಾಗಿದೆ ಎಂದು ಹೇಳಿಕೊಳ್ಳುತ್ತವೆ. ಅವು ಈಗಾಗಲೇ ಸುಶೇನ್‌ ಗುಪ್ತಾಗೆ ಸೇರಿದ ಕಂಪನಿಯಾಗಿವೆ ಎಂದು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಆದರೆ ಪ್ರಕರಣದಲ್ಲಿ ಭಲ್ಲಾ ಮತ್ತು ಖೈತಾನ್ ಹೆಸರಿಸಲ್ಪಟ್ಟಾಗ ಸುಶೇನ್ ಮತ್ತೊಮ್ಮೆ ಪರಿಶೀಲನೆಯಿಂದ ತಪ್ಪಿಸಿಕೊಂಡರು.

ಮೈಕೆಲ್ ಪ್ರಾಯಶಃ ಈ ಪ್ರಕರಣದಲ್ಲಿ ಅತ್ಯಂತ ದೊಡ್ಡ ಸೋತ ವ್ಯಕ್ತಿ. ಹಸ್ತಾಂತರದ ನಂತರ ಸುಮಾರು ಐದು ವರ್ಷಗಳ ಕಾಲ ಜೈಲಿನಲ್ಲಿ ಸಿಲುಕಿಕೊಂಡಿದ್ದು, ಸುಶೇನ್ ಎರಡು ತಿಂಗಳ ಕಾಲ ಜೈಲಿನಲ್ಲಿದ್ದ. ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಆಸ್ಟ್ರಿಯಾ, ಥೈಲ್ಯಾಂಡ್, ಮಾಲ್ಡೀವ್ಸ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಗೆ ಕಳೆದ ವರ್ಷ ಹೋಗಲು ನ್ಯಾಯಾಲಯ ಅನುಮತಿ ನೀಡಿತು.

ಅಪರಾಧದ ಆದಾಯದಿಂದ ಆಸ್ತಿಯನ್ನು ಖರೀದಿಸಲಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರೂ ಸಹ, ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲು ತುದಿಗಾಲ ಮೇಲಿರುವ ಈಡಿ, ಸುಶೇನ್ ಗುಪ್ತಾಗೆ ಸಂಬಂಧಿಸಿದ ಯಾವುದೇ ಆಸ್ತಿಯನ್ನು ಮುಟ್ಟಿಲ್ಲ ಎಂದು ವರದಿಯಾಗಿದೆ.

ಕೃಪೆ: caravanmagazine.in

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News