ಹುಬ್ಬಳ್ಳಿ: ವಿದ್ಯಾರ್ಥಿನಿಯರ ಅಸಭ್ಯ ಚಿತ್ರ ಇನ್ಸ್ಟಾಗ್ರಾಂ ನಲ್ಲಿ ಹಾಕಿದ ರಜನಿಕಾಂತ್

Update: 2023-08-22 16:16 GMT
Editor : Ismail | Byline : ಆರ್. ಜೀವಿ

ಹುಬ್ಬಳ್ಳಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಇನ್ ಸ್ಟಾ ಗ್ರಾಂ ನಲ್ಲಿ ವಿದ್ಯಾರ್ಥಿನಿಯರ ಮಾರ್ಫ್ ಮಾಡಿದ ಅಶ್ಲೀಲ ಪೊಟೋ‌ ಅಪ್ಲೋಡ್ ಮಾಡಿದ್ದ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಬಂಧಿತ ಆರೋಪಿ. ರಜನಿಕಾಂತ್ ಇನ್ ಸ್ಟಾ ಗ್ರಾಂ ನಲ್ಲಿ ಸಮರ್ಥ ಕಾಲೇಜ್ ವಿದ್ಯಾರ್ಥಿನಿಯ ಪೊಟೋ ಅಶ್ಲೀಲವಾಗಿ ಎಡಿಟ್ ಮಾಡಿ‌ ಅಪ್ಲೋಡ್ ಮಾಡಿದ್ದ. Kashmira1990_0 ಹೆಸರಿನ ಫೇಕ್ ಅಕೌಂಟ್ ಕ್ರೀಯೇಟ್ ಮಾಡಿ, ಫೊಟೋ ಅಪ್ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ರಜನಿಕಾಂತ್ ಸಮರ್ಥ ಕಾಲೇಜ್ ನ ಹಳೇ ವಿದ್ಯಾರ್ಥಿ ಯಾಗಿದ್ದು, ಕಳೆದ ವರ್ಷ ದಾಖಲಾತಿ ಕಡಿಮೆ ಇರೋ ಕಾರಣ ಪರೀಕ್ಷೆಗೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಕಾಲೇಜ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ರಜನೀಕಾಂತ್, ವಿದ್ಯಾರ್ಥಿನಿಯರ ಫೋಟೋವನ್ನು ಎಡಿಟ್ ಮಾಡಿ, ಫೇಕ್ ಅಕೌಂಟ್ ನಲ್ಲಿ ಪ್ರಚಾರ ಮಾಡಿದ್ದ. ಇದರಿಂದ ಗಾಬರಿಗೆ ಒಳಗಾದ ವಿದ್ಯಾರ್ಥಿನಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.

ಇತ್ತ ವಿದ್ಯಾರ್ಥಿನಿಯರು ಸಹ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ರು. ದೂರು ದಾಖಲಾದ ಬಳಿಕ ಇನ್ ಸ್ಟಾ ದಲ್ಲಿ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿ ನಾಪತ್ತೆಯಾಗಿದ್ದವನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಶಿರೂರ ಪಾರ್ಕ್ ಬಳಿ ಇರೋ ಸಮರ್ಥ ಖಾಸಗಿ ಕಾಲೇಜ್ ನಲ್ಲಿ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗಿದೆ. ಇನ್ ಸ್ಟಾ ಗ್ರಾಂ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಾಲೇಜ್ ಹುಡುಗಿಯರ ಮುಖಕ್ಕೆ ನಗ್ನ ಮೈಯ ಫೋಟೋ ಸೇರಿಸಿ ಅವಾಚ್ಯ ಶಬ್ದಗಳಿಂದ ಬರೆಯಲಾಗಿದೆ.

ಕಾಶ್ಮೀರಿ 1990_0 ನೇಮ್ ನ ಇನ್ ಸ್ಟಾ ಅಕೌಂಟ್ ನಲ್ಲಿ ಇಂತಹ ಫೋಟೋಗಳು ಹರಿದಾಡುತ್ತಿದ್ದವು. ಆ ಅಕೌಂಟ್ ನಲ್ಲಿ ಸಮರ್ಥ ಕಾಲೇಜ್ ಲೋಗೋ ಕೂಡಾ ಬಳಸಲಾಗಿದೆ. ಕಾಲೇಜ್ ಹುಡುಗಿಯರ ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡಿದ ಕಿಡಿಗೇಡಿ ಅದನ್ನೇ ಇನ್ ಸ್ಟಾ ದಲ್ಲಿ ಅಪ್ಲೋಡ್ ಮಾಡಿದ್ದಾನೆ. ಜೊತೆಗೆ ಕೆಟ್ಟದಾಗಿ ಬರೆದಿದ್ದಾನೆ. ಪೊಲೀಸರಿಗೆ, ರಾಜಕಾರಣಿಗಳಿಗೆ ಸವಾಲ್ ಹಾಕಿದ್ದಾನೆ. ಇದಲ್ಲದೆ ಕಿಡಿಗೇಡಿ ನೆಕ್ಸ್ಟ್ ಟಾರ್ಗೆಟ್ ಏನು, ಅವನ ಬಳಿ ಇರೋ ಫೋಟೋ ಬಗ್ಗೆನೂ ಪೋಸ್ಟ್ ಮಾಡಿದ್ದಾನೆ.

ಈ ಪೋಸ್ಟ್ ಗಳನ್ನು ನೋಡಿದ ಕಾಲೇಜ್ ವಿದ್ಯಾರ್ಥಿಗಳು ಗಾಬರಿ ಆಗ್ತಾರೆ. ಇನ್ನಷ್ಟು ಫೋಟೋಗಳಿವೆ ಎಂದು ಹೇಳಿರುವುದು ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗುತ್ತದೆ. ಕೆಲವರು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳು ಕಳೆದ ರವಿವಾರವೇ ಈ ವಿಷಯವನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರ್ತಾರೆ. ಆದ್ರೆ, ವಿದ್ಯಾರ್ಥಿಗಳು ದೂರು ಕೊಡಲು‌ ಮುಂದೆ ಬರಲ್ಲ. ಕೊನೆಗೂ ನಾಲ್ವರು ವಿದ್ಯಾರ್ಥಿಗಳು ಹುಬ್ಬಳ್ಳಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾರೆ. ಅದರ ಬೆನ್ನಿಗೇ ಕಾಲೇಜ್ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಆಮೇಲೆ ಸಿಕ್ಕಿಬಿದ್ದಿದ್ದೇ ಈ ರಜನಿಕಾಂತ ತಳವಾರ. ಈತ ಆ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಹಾಜರಾತಿ ಕಡಿಮೆ ಇದ್ದುದರಿಂದ ಕಾಲೇಜಿನಿಂದ ಹೊರ ಬಿದ್ದಿದ್ದಾನೆ. ಈತ ಸುಮಾರು 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿದ್ದಾನೆ. ಅವರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿ ಕೆಲವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾನೆ. ಇನ್ನೂ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ.

ಈತನಿಂದಾಗಿ ಈ ವಿದ್ಯಾರ್ಥಿನಿಯರು ತಲೆ ಎತ್ತಿ ನಡೆಯಲು ಆಗದ ಪರಿಸ್ಥಿತಿ ಉಂಟಾಯಿತು. ಅವರಿಗಾಗಿರುವ ಮಾನಸಿಕ ಹಿಂಸೆಯನ್ನು ಊಹಿಸಿದರೇ ಸಂಕಟ ಆಗುತ್ತೆ. ಅಂತಹ ದುಷ್ಟ ಕೆಲಸ ಮಾಡಿ ಹಾಕಿದ್ದಾನೆ ಈ ದುರುಳ. ಈತನೊಂದಿಗೆ ಈ ಕೆಲಸದಲ್ಲಿ ಇನ್ನೂ ಒಂದಿಬ್ಬರು ಇರೋ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಹುಬ್ಬಳ್ಳಿ ಪೊಲೀಸರು. ಅಲ್ಲಿನ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಅವರ ನೇತೃತ್ವದ ತಂಡ ಕೂಡಲೇ ತನಿಖೆ ನಡೆಸಿ ಈತನ ಹೆಡೆಮುರಿ ಕಟ್ಟಿದೆ. ಇನ್ನಷ್ಟು ಅವಘಡ ಆಗುವುದರಿಂದ ತಪ್ಪಿಸಿದೆ.

ಆದರೆ ವಿಶೇಷ ಅಂದ್ರೆ ಈ ರಜನೀಕಾಂತ್ ತಳವಾರನ ಇಷ್ಟು ದೊಡ್ಡ ದುಷ್ಟ ಕೆಲಸದ ಬಗ್ಗೆ ಬಿಜೆಪಿಯ ಒಬ್ಬೇ ಒಬ್ಬ ಜನಪ್ರತಿನಿಧಿಯಾಗಲಿ, ನಾಯಕರಾಗಲಿ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಹುಬ್ಬಳ್ಳಿಯಲ್ಲಿ ಬಿಜೆಪಿ, ಎಬಿವಿಪಿ, ವಿಹಿಂಪ, ಬಜರಂಗದಳದ ಒಂದೇ ಒಂದು ಪ್ರತಿಭಟನೆಯಿಲ್ಲ. ಯಶ್ ಪಾಲ್ ಸುವರ್ಣ ಇಲ್ಲ, ಯತ್ನಾಳ್ ಇಲ್ಲ, ಸಿಟಿ ರವಿ ಇಲ್ಲ, ಶರಣ್ ಪಂಪ್ ವೆಲ್ ಇಲ್ಲ, ರಶ್ಮಿ ಸಾಮಂತ್ ಇಲ್ಲ, ಪ್ರಚೋದನಕಾರಿ ಭಾಷಣ ಇಲ್ಲ, ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ ಎಂಬ ಹೇಳಿಕೆ ಇಲ್ಲ, ಸುಳ್ಳು ಸುಳ್ಳು ಟ್ವೀಟ್ ಇಲ್ಲ, ಟಿವಿ ಚಾನಲ್ ಗಳು ಇಡೀ ಪ್ರಕರಣದಲ್ಲಿ ಪತ್ತೆಯೇ ಇಲ್ಲ, ಅಲ್ಲಿ ಯಾವುದೇ ಚರ್ಚೆ, ಬೊಬ್ಬೆ ಇಲ್ಲವೇ ಇಲ್ಲ.

ರಜನೀಕಾಂತ್ ತಳವಾರನ ಹಿಂದೆ ಅದ್ಯಾವ ಷಡ್ಯಂತ್ರ ಇರಬಹುದು ಎಂದು ಕೇಳುವವರೇ ಇಲ್ಲ. ಒಟ್ಟಾರೆ ಹಿಂದೂ ಹೆಣ್ಣುಮಕ್ಕಳ ಫೋಟೋಗಳನ್ನು ವಿಕೃತವಾಗಿ ಎಡಿಟ್ ಮಾಡಿ ಅವರ ಮಾನ ಹರಾಜು ಹಾಕಿದ ರಜನೀಕಾಂತ್ ತಳವಾರನ ಬಗ್ಗೆ , ಆತನಿಂದ ಹಿಂದೂ ಹೆಣ್ಣು ಮಕ್ಕಳಿಗೆ ಆಗಿರುವ ಘೋರ ಅನ್ಯಾಯದ ಬಗ್ಗೆ, ಅದರ ಹಿಂದೆ ಇರಬಹುದಾದ ಅಪಾಯ, ಷಡ್ಯಂತ್ರಗಳ ಬಗ್ಗೆ ಬಿಜೆಪಿ, ಸಂಘ ಪರಿವಾರ ಹಾಗು ಟಿವಿ ಚಾನಲ್ ಗಳಿಗೆ ಒಂದಿಷ್ಟೂ ಕಾಳಜಿ ಇಲ್ಲ.

ಯಾಕೆ ? ಆರೋಪಿ ರಜನೀಕಾಂತ್ ತಳವಾರ ಆಗಿದ್ದಕ್ಕಾ ? . ಆರೋಪಿಗಳ ಹೆಸರು ನೋಡಿಯೇ ಅನ್ಯಾಯ ಆಗಿದೆ ಎಂದು ನಿರ್ಧರಿಸುವ ಬಿಜೆಪಿ , ಸಂಘ ಪರಿವಾರದ ಈ ಜಾಯಮಾನ ಬದಲಾಗುವುದು ಎಂದು ?. ಹುಬ್ಬಳ್ಳಿಯ ಆ ಹಿಂದೂ ಹೆಣ್ಣು ಮಕ್ಕಳಿಗೆ ಆದ ಅನ್ಯಾಯದ ಬಗ್ಗೆ ಬಿಜೆಪಿ ಮಾತನಾಡುವುದು ಎಂದು ?. ಹುಬ್ಬಳ್ಳಿಯಲ್ಲಿ ರಜನೀಕಾಂತ್ ತಳವಾರ ನಿಂದ ಆ ಘೋರ ಅನ್ಯಾಯಕ್ಕೆ ಒಳಗಾದ ಹಿಂದೂ ಹೆಣ್ಣು ಮಕ್ಕಳಿಗೆ ಬಿಜೆಪಿ ಉತ್ತರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News