ಮೋದಿಯವರ ಅಮೃತ ಕಾಲದಲ್ಲಿ ಹಸಿವು ಮತ್ತು ನಿರುದ್ಯೋಗ
2028ರ ವೇಳೆಗೆ ಭಾರತ ವಿಶ್ವದ ಮೂರನೇ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 125 ದೇಶಗಳಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ ಎಂಬ ವರದಿಯನ್ನೂ ಮೋದಿ ಸರಕಾರ ನಿರಾಕರಿಸುತ್ತದೆ. ಇದರ ನಡುವೆಯೇ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ವಿತರಿಸುವ ಯೋಜನೆಯನ್ನು ಇನ್ನೂ ಐದು ವರ್ಷ ವಿಸ್ತರಿಸುವುದಾಗಿಯೂ ಮೋದಿ ಘೋಷಿಸುತ್ತಾರೆ. ಇದೆಂಥ ವಿರೋಧಾಭಾಸ ಅಲ್ಲವೇ?
ಚುನಾವಣಾ ರಾಜಕೀಯ ರಂಗೇರುತ್ತಿರು ವಾಗ, ಪ್ರಧಾನಿ ನರೇಂದ್ರ ಮೋದಿಯವರ ಅಬ್ಬರದ ಮಾತುಗಳಲ್ಲಿ ವಿರೋಧಾಭಾಸಗಳೂ ಢಾಳಾಗಿಯೇ ಕಾಣಿಸುತ್ತಿವೆ.
ಛತ್ತೀಸ್‌ಗಡದಲ್ಲಿ ಪ್ರಚಾರ ಭಾಷಣ ಮಾಡುತ್ತ ಮೋದಿ ಕೋವಿಡ್ ಪ್ರಭಾವವನ್ನು ತಗ್ಗಿಸಲು ಪ್ರಾರಂಭಿಸಲಾಗಿದ್ದ 80 ಕೋಟಿ ಬಡ ಭಾರತೀಯರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಯೋಜನೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದರು. ಇದು ಭಾರತದ ಜನರಿಗೆ ಮೋದಿಯವರ ಗ್ಯಾರಂಟಿ ಎಂದೂ ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.
ಮೋದಿಯವರು ಇತ್ತೀಚೆಗೆ ತಮ್ಮ ಭಾಷಣಗಳಲ್ಲಿ ಹೆಚ್ಚು ಅಬ್ಬರದಿಂದ ಹೇಳುತ್ತಿರುವ ಮತ್ತೂ ಒಂದು ವಿಚಾರವಿದೆ. ಅದೇನೆಂದರೆ, ಅವರು ಮೂರನೇ ಅವಧಿಗೆ ಪ್ರಧಾನಿಯಾದಾಗ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು. ತಾವು ಮೂರನೇ ಅವಧಿಗೆ ಪ್ರಧಾನಿಯಾಗುವುದು ಖಚಿತ ಎಂಬ ರೀತಿಯಲ್ಲಿಯೇ ಅವರು ಜನರೆದುರು ಮಾತನಾಡುತ್ತಿದ್ದಾರೆ.
ಆದರೆ, ಇಲ್ಲಿಯೇ ರಾಜಕೀಯ ಆರ್ಥಿಕ ವಿರೋಧಾಭಾಸವೂ ಇದೆ.
2028ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿರುವ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆಯು 80 ಕೋಟಿ ಜನರಿಗೆ ಉಚಿತ ಆಹಾರವನ್ನು ವಿತರಿಸಬೇಕಾದ ಅಗತ್ಯವೇನಿರುತ್ತದೆ ಎಂಬುದನ್ನು ಪ್ರಧಾನಿ ಮೋದಿ ವಿವರಿಸಲು ಸಾಧ್ಯವಿಲ್ಲ. ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ ಮತ್ತು ಅಮೃತ ಕಾಲಕ್ಕೆ ಪ್ರವೇಶಿಸುತ್ತಿರುವಾಗ ಇನ್ನೂ ಐದು ವರ್ಷಗಳವರೆಗೆ ಉಚಿತ ಪಡಿತರವನ್ನು ಏಕೆ ನೀಡಬೇಕಾಗುತ್ತದೆ?
ಇನ್ನೊಂದು ವಿಚಾರ. ಭಾರತವು ವೇಗವಾಗಿ ಬೆಳೆಯುತ್ತಿದ್ದರೆ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಅದು ಏಕೆ ಮತ್ತಷ್ಟು ಕುಸಿಯುತ್ತಿದೆ? 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ದೇಶಗಳಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಮೋದಿ ಸರಕಾರ ಮಾತ್ರ ಜಾಗತಿಕ ಸೂಚ್ಯಂಕ ವರದಿಯನ್ನು ನಿರಾಕರಿಸುತ್ತಿದೆ. ಆದರೆ ಇನ್ನೊಂದೆಡೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಯೋಜನೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವ ಮೂಲಕ ಅದನ್ನು ಒಪ್ಪಿಕೊಂಡಂತೆಯೂ ಆಗುತ್ತದೆ.
ವಾಸ್ತವವಾಗಿ, ಸುಮಾರು 10 ವರ್ಷಗಳಿಂದ ಪ್ರಧಾನಿ ಮೋದಿಯವರ ಆಡಳಿತದಲ್ಲಿ ರಾಜಕೀಯ ಆರ್ಥಿಕತೆಯನ್ನು ನಿರೂಪಿಸುವ ಇಂತಹ ಹಲವು ವಿರೋಧಾಭಾಸಗಳೇ ಕಾಣಿಸುತ್ತವೆ. ಬೆಳವಣಿಗೆ ದರ, ಉದ್ಯೋಗ, ಉಳಿತಾಯ ದರ, ಖಾಸಗಿ ಹೂಡಿಕೆ, ಹೆಚ್ಚಿದ ವಿದೇಶಿ ಹೂಡಿಕೆ, ರಫ್ತು ಹೀಗೆ ಹಲವು ವಿಚಾರಗಳಲ್ಲಿ ಅಂಕಿಅಂಶಗಳು ತೀರಾ ಕಟುವಾದ ವಾಸ್ತವವನ್ನು ತೋರಿಸುತ್ತವೆ. ಮೋದಿ ಸರಕಾರದ ಸಾಧನೆ ಕಳಪೆ ಎಂಬುದು ಅವುಗಳ ಮೂಲಕ ಬಯಲಾಗಿದೆ. ಆದರೆ ಇದು ಪ್ರಧಾನ ಮಂತ್ರಿ ಮತ್ತು ಅವರ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ ಅತಿರಂಜಿತ ಮಾತುಗಳಲ್ಲಿ ಮಾತ್ರ ಬೇರೆಯೇ ಇದೆ. ಅಲ್ಲಿ ಭಾರತವು ವಿಶ್ವ ಆರ್ಥಿಕತೆಯಲ್ಲಿ ಗಮನಾರ್ಹವಾಗಿ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲಾಗುತ್ತದೆ. ಚುನಾವಣಾ ಕಾಲದಲ್ಲಿ ಇಂಥ ಮಾತುಗಳನ್ನು ಇನ್ನೂ ರಂಗುರಂಗಾಗಿ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿವಾಹಿನಿಗಳ ಮೂಲಕ ಬಿತ್ತರಿಸಲಾಗುತ್ತದೆ.
ಆದರೆ ಆಗೊಮ್ಮೆ ಈಗೊಮ್ಮೆ ವಿರೋಧಾಭಾಸಗಳು ಅವರ ಇಂಥದೇ ಮಾತುಗಳ ಮೂಲಕ ಬಯಲಾಗು ತ್ತವೆ. ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತ, ಇನ್ನೂ ಐದು ವರ್ಷಗಳವರೆಗೆ ಉಚಿತ ಆಹಾರವನ್ನು ನೀಡುವ ಯೋಜನೆ ವಿಸ್ತರಣೆ ಬಗ್ಗೆ ಘೋಷಿಸಿದ ಹಾಗೆ. ಮೋದಿಯವರು ಅಧಿಕಾರಕ್ಕೆ ಬಂದಾಗ ಸಾರಾಸಗಟಾಗಿ ತಿರಸ್ಕರಿಸಿದ ಮತ್ತೊಂದು ಯೋಜನೆ ಎಂದರೆ ನರೇಗಾ(ಎಂಜಿಎನ್‌ಆರ್‌ಇಜಿಎ). ಇದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾಗಿದೆ. ಇದನ್ನು ‘‘ಕಾಂಗ್ರೆಸ್‌ನ ವೈಫಲ್ಯದ ಸ್ಮಾರಕ’’ ಎಂದು ಮೋದಿ ಜರೆದಿದ್ದರು. ಇಂದು, ಗ್ರಾಮೀಣ ಉದ್ಯೋಗ ಖಾತ್ರಿ ಬಜೆಟ್‌ನ ಶೇ.93ರಷ್ಟು ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲೇ ಖರ್ಚು ಮಾಡಿರುವುದರಿಂದ ಮೋದಿ ಸರಕಾರದಲ್ಲಿನ ಒಂದು ವ್ಯಂಗ್ಯ. ಇದು ಬೇಡಿಕೆ ಚಾಲಿತ ಕಾರ್ಯಕ್ರಮವಾಗಿದ್ದು, ವೆಚ್ಚವು ಬಜೆಟ್‌ನ 60 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ.
10 ವರ್ಷಗಳಲ್ಲಿ ಮೋದಿಯವರು ಹೆಚ್ಚಿನ ಜಿಡಿಪಿ ಬೆಳವಣಿಗೆಯನ್ನು ಖಾತರಿಪಡಿಸಲಿಲ್ಲ. ಅದು ಕಳೆದ ಒಂಭತ್ತು ವರ್ಷಗಳಲ್ಲಿ ಸುಮಾರು ಶೇ.5.7 ಆಗಿದೆ. ಅವರು 2014ರಲ್ಲಿ ಭರವಸೆ ನೀಡಿದಂತೆ ವಾರ್ಷಿಕವಾಗಿ 2 ಕೋಟಿ ಉದ್ಯೋಗಗಳನ್ನು ನೀಡುವ ವಿಚಾರದಲ್ಲಿಯೂ ಶೋಚನೀಯವಾಗಿ ವಿಫಲರಾಗಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿಯೂ ಅವರ ವೈಫಲ್ಯ ಕಂಡಿದೆ. ಇದು 10 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದೊಂದಿಗೆ ಕೃಷಿ ಉತ್ಪಾದನೆ ವೆಚ್ಚದ ಹೆಚ್ಚಳವನ್ನು ಸರಳವಾಗಿ ಹೋಲಿಸಿದಾಗ ಸ್ಪಷ್ಟವಾಗುತ್ತದೆ.
ಹಾಗಾಗಿ ಇದೀಗ ಇನ್ನೂ ಐದು ವರ್ಷಗಳ ಕಾಲ ಉಚಿತ ಆಹಾರ ಧಾನ್ಯಗಳ ಭರವಸೆಯನ್ನು ಮೋದಿ ನೀಡುತ್ತಿದ್ದಾರೆ.
ಮೋದಿ ಸರಕಾರದ ಆರ್ಥಿಕ ಸಾಧನೆಯ ಮಾತು ಹುರುಳಿಲ್ಲದ್ದು ಎಂಬುದನ್ನು, ಅದರ ಕೊರತೆಯನ್ನು ಹಲವು ಅಂಕಿಅಂಶಗಳು ಬಯಲು ಮಾಡುತ್ತವೆ. ಕಳೆದ ತಿಂಗಳು ಅಂಕಿಅಂಶಗಳ ಇಲಾಖೆಯು ಬಿಡುಗಡೆ ಮಾಡಿದ ಜುಲೈ 2022ರಿಂದ ಜುಲೈ 2023ರವರೆಗಿನ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯಲ್ಲಿ ಇದು ಸ್ಪಷ್ಟವಾಗಿದೆ. ಸಮೀಕ್ಷೆಯು ಸ್ವಯಂ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವನ್ನು ತೋರಿಸುತ್ತದೆ, ಸ್ವಯಂ ಉದ್ಯೋಗಿಗಳ ಪ್ರಮಾಣ 2022-23ರಲ್ಲಿ ಒಟ್ಟು ಉದ್ಯೋಗಿಗಳ ಶೇ.58 ಆಗಿದೆ.
ಸ್ವಯಂ ಉದ್ಯೋಗಿಗಳ ದೊಡ್ಡ ಹೆಚ್ಚಳವು ಕಡಿಮೆ ಗುಣಮಟ್ಟದ ಉದ್ಯೋಗದ ಹೆಚ್ಚಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಏಕೆಂದರೆ ಸ್ವಯಂ ಉದ್ಯೋಗಿಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಯಾವುದೇ ವೇತನವಿಲ್ಲದೆ ಸಣ್ಣ ಕುಟುಂಬ ನಡೆಸುವ ಉದ್ಯಮ ಘಟಕಗಳಿಗೆ ಸೇರುವ ವೇತನರಹಿತ ಕೆಲಸಗಾರರಾಗಿದ್ದಾರೆ. ಆದ್ದರಿಂದ ಸ್ವಯಂ ಉದ್ಯೋಗಿಗಳ ಪ್ರಮಾಣ ಮತ್ತು ಅದರೊಳಗೆ ವೇತನವಿಲ್ಲದ ಕಾರ್ಮಿಕರ ಅನುಪಾತವು ಕಳೆದ 5 ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಾಗಿದೆ, ವಿಶೇಷವಾಗಿ ನೋಟ್ ಬ್ಯಾನ್ ಮತ್ತು ಕೋವಿಡ್ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.
ಅರ್ಥಶಾಸ್ತ್ರಜ್ಞ ಸಂತೋಷ್ ಮೆಹ್ರೋತ್ರಾ ಅವರ ಪ್ರಕಾರ, ಸ್ವಯಂ ಉದ್ಯೋಗಿ ವರ್ಗದಲ್ಲಿ ವೇತನ ಪಡೆಯದ ಕಾರ್ಮಿಕರ ಸಂಖ್ಯೆ 2017-18ರಲ್ಲಿ ಸುಮಾರು 4 ಕೋಟಿ ಇದ್ದದ್ದು 2022-23ರಲ್ಲಿ 9.5 ಕೋಟಿಗೆ ಏರಿದೆ. ಇಂದು 92 ದೇಶಗಳು ಅನುಸರಿಸುತ್ತಿರುವ ಇಂಟರ್‌ನ್ಯಾಶನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ಮಾನದಂಡದ ಪ್ರಕಾರ ಅಂತಹ ವೇತನವಿಲ್ಲದ ಕಾರ್ಮಿಕರನ್ನು ಉದ್ಯೋಗಿಗಳು ಎಂದು ಪರಿಗಣಿಸಲಾಗುವುದಿಲ್ಲ.
2017-18ರಿಂದ 2022-23ರ ಅವಧಿಯಲ್ಲಿ ಸರಾಸರಿ ನಿಯಮಿತ ಮಾಸಿಕ ವೇತನ ಶೇ.20ಕ್ಕಿಂತ ಹೆಚ್ಚು ಕುಸಿದಿದೆ ಎಂದು ಕಾರ್ಮಿಕ ಬಲ ಸಮೀಕ್ಷೆಯು ತೋರಿಸಿದೆ. ಇದು ಬಹುಶಃ ಆರ್ಥಿಕತೆಯ ಅತಿದೊಡ್ಡ ದೌರ್ಬಲ್ಯ.
ಐದು ವರ್ಷಗಳಲ್ಲಿ ಸರಾಸರಿ ವೇತನದಲ್ಲಿ ಕಾಣದ ಯಾವುದೇ ಬೆಳವಣಿಗೆಯು ಉದ್ಯೋಗದ ಹದಗೆಟ್ಟ ಗುಣಮಟ್ಟವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ನಿರ್ಮಾಣ ಅಥವಾ ಸಾರಿಗೆಯಲ್ಲಿ ವೈಯಕ್ತಿಕ ಸೇವಾ ಪೂರೈಕೆದಾರರಂತಹ (ಉಬರ್ ಅಥವಾ ಓಲಾ ಚಾಲಕರು) ಸ್ವಯಂ ಉದ್ಯೋಗಿಗಳನ್ನು ಕೇಳಿದಾಗ, ಜೀವನ ವೆಚ್ಚ ಹೆಚ್ಚಾದಾಗಲೂ ಅವರ ವೇತನವು ನಿಜವಾಗಿ ಇದ್ದಲ್ಲೇ ಇದೆ ಎಂಬುದು ಗೊತ್ತಾಗುತ್ತದೆ.
ಹೀಗೆ ಸ್ಥಿರವಾಗಿರುವ ವೇತನವು ಜನಸಾಮಾನ್ಯರ ಕೊಳ್ಳುವ ಶಕ್ತಿಯ ಕೊರತೆಗೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂಸ್ತಾನ್ ಲಿವರ್, ಬಜಾಜ್ ಆಟೋ ಮುಂತಾದ ಕಂಪೆನಿಗಳಿಗೆ ಗ್ರಾಮೀಣ ಭಾಗಗಳ ಗ್ರಾಹಕರ ಬೇಡಿಕೆಯಲ್ಲಿ ಬೆಳವಣಿಗೆ ಕಾಣಿಸುತ್ತಿಲ್ಲ. ಬಜಾಜ್ ಆಟೋದಂತಹ ದ್ವಿಚಕ್ರ ವಾಹನ ತಯಾರಕರು ಐದಾರು ವರ್ಷಗಳ ಹಿಂದೆ ಮಾರಾಟ ಮಾಡಿದ್ದಕ್ಕಿಂತ ಇಂದು ಶೇ.30ರಿಂದ ಶೇ.40ರಷ್ಟು ಕಡಿಮೆ ಯೂನಿಟ್‌ಗಳನ್ನು ಮಾರಾಟ ಮಾಡುತ್ತಿರುವುದು ಹಿಂದೆಂದೂ ಕಂಡಿರದ ಸನ್ನಿವೇಶ. ಅದೇ ವೇಳೆ, ಐಷಾರಾಮಿ ವಲಯದಲ್ಲಿನ ಆದಾಯ ಮಾತ್ರ ಏರುತ್ತಲೇ ಇದೆ. ದೊಡ್ಡ ಕಾರುಗಳು, ಆಭರಣಗಳು, ಇಲೆಕ್ಟ್ರಾನಿಕ್ಸ್, ಹೊಟೇಲ್‌ಗಳು, ವಿಮಾನ ಪ್ರಯಾಣ ಇತ್ಯಾದಿ ವಲಯಗಳನ್ನು ಉದಾಹರಿಸಬಹುದು. ಆದರೆ ಕೆಳ ಮಧ್ಯಮ ವರ್ಗದವರ ಕೊಳ್ಳುವ ಸಾಮರ್ಥ್ಯದಲ್ಲಿ ಸಾರ್ವಕಾಲಿಕ ಕುಸಿತ ಕಂಡುಬಂದಿದೆ.
ಕಾರ್ಮಿಕ ಬಲದ ಸಮೀಕ್ಷೆಯಲ್ಲಿನ ವೇತನ ನಿಶ್ಚಲತೆಗೆ ತುತ್ತಾಗಿರುವವರು ಹೆಚ್ಚಾಗಿ ಜನಸಂಖ್ಯೆಯ ಕೆಳಭಾಗದ ಶೇ.60ರಿಂದ ಶೇ.70ರಷ್ಟು ಜನರು. ಅಮೃತ ಕಾಲದ ಬಗ್ಗೆ ವರ್ಣರಂಜಿತವಾಗಿ ಭಾಷಣ ಮಾಡುವ ಮೋದಿಯವರು ಅದೇ ಅಮೃತ ಕಾಲದಲ್ಲಿನ ಈ ಸ್ಥಿತಿಯನ್ನು ಹೇಗೆ ವಿವರಿಸಬಲ್ಲರು? ಒಂದು ಸರಳವಾದ, ಸಾಮಾನ್ಯವಾದ ಸಂವೇದನಾಶೀಲ ಪ್ರಶ್ನೆಯನ್ನು ಮೋದಿಯವರಿಗೆ ಕೇಳಲೇಬೇಕು. ಅಮೃತ ಕಾಲದಲ್ಲಿ 80 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಖರೀದಿಸಲು ಏಕೆ ಸಾಧ್ಯವಾಗುವುದಿಲ್ಲ?
(ಕೃಪೆ:thewire.in)