ಸರಕಾರಕ್ಕೆ ಸ್ಥಿರಾಸ್ತಿಗಳ ಮಾಹಿತಿ ನೀಡದ ಐಎಎಸ್ ಅಧಿಕಾರಿಗಳು

Update: 2023-11-07 03:29 GMT

Photo: PTI

ಬೆಂಗಳೂರು, ನ.6: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾರ್ಯದರ್ಶಿ ಪಿ .ರಾಜೇಂದ್ರ ಚೋಳನ್, ಬಿಬಿಎಂಪಿಯ ಆರೋಗ್ಯ ಆಯುಕ್ತ ಕೆ.ವಿ.ತ್ರಿಲೋಕ್‌ಚಂದ್ರ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳು ಸ್ಥಿರಾಸ್ತಿ ವಿವರ, ಜಮೀನು, ನಿವೇಶನಗಳ ಸೇಲ್‌ಡೀಡ್ ಮತ್ತು ಪಡೆಯುತ್ತಿರುವ ಬಾಡಿಗೆ ವಿವರಗಳನ್ನು ಸರಕಾರಕ್ಕೆ ಸಲ್ಲಿಸದೇ ಮಾಹಿತಿಗಳನ್ನು ಮುಚ್ಚಿಡುತ್ತಿರುವುದು ಇದೀಗ ಬಹಿರಂಗವಾಗಿದೆ.

ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪ್ರತಿ ಅಧಿಕಾರಿಯ ಆಸ್ತಿ ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೆನಪೋಲೆಗಳನ್ನು ಬರೆದಿದ್ದರೂ ಹಲವು ಅಧಿಕಾರಿಗಳು ಮಾಹಿತಿಗಳನ್ನೇ ಸಲ್ಲಿಸುತ್ತಿಲ್ಲ.

ಈ ಸಂಬಂಧ ‘ಣhe-ಜಿiಟe.iಟಿ’ಗೆ ಕೆಲ ದಾಖಲೆಗಳು ಲಭ್ಯವಾಗಿವೆ. ಕೆಲ ಅಧಿಕಾರಿಗಳು 2011ರಿಂದ 2022ನೇ ಸಾಲಿನವರೆಗೆ ವಾರ್ಷಿಕ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ನಿಯಮಬದ್ಧವಾಗಿ ಮಾಹಿತಿ ಸಲ್ಲಿಸುತ್ತಿಲ್ಲ. ಮಾಹಿತಿ, ದಾಖಲೆಗಳನ್ನು ಸಲ್ಲಿಸಬೇಕು ಎಂದು ಕಳೆದೆರಡು ವರ್ಷಗಳಿಂದ ಇಲಾಖೆಯು ಬರೆದಿರುವ ಪತ್ರಗಳನ್ನು ಅನೇಕ ಅಧಿಕಾರಿಗಳು ಕಸದಬುಟ್ಟಿಗೆ ಎಸೆದಿರುವುದು ತಿಳಿದು ಬಂದಿದೆ.

ಹಲವು ಅಧಿಕಾರಿಗಳು ಸ್ಥಿರಾಸ್ತಿಗಳನ್ನು ಮಾರಾಟ ಮಾಡದೇ ಇದ್ದರೂ ಸಹ ಸ್ಥಿರಾಸ್ತಿ ವರದಿಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಮಾರಾಟ ಮಾಡುತ್ತಿದ್ದಾರೆ. ಸ್ಥಿರಾಸ್ತಿಗಳಿಂದ ವಾರ್ಷಿಕವಾಗಿ 10ಸಾವಿರ ರೂ.ಗೂ ಹೆಚ್ಚುಗಳಿಸುತ್ತಿರುವ ಬಾಡಿಗೆ ಮೊತ್ತವನ್ನು ಸರಕಾರಕ್ಕೆ ವರದಿ ಮಾಡುತ್ತಿಲ್ಲ. 2014, 2015, 2016ನೇ ಸಾಲಿನ ವಾರ್ಷಿಕ ಸ್ಥಿರಾಸ್ತಿ ವರದಿಗಳನ್ನು ಭೌತಿಕವಾಗಿ ಸರಕಾರಕ್ಕೆ ಸಲ್ಲಿಸುತ್ತಿಲ್ಲ ಎಂಬುದು ಗೊತ್ತಾಗಿದೆ.

ಎರಡು ತಿಂಗಳ ಮೂಲ ವೇತನ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಚರಾಸ್ತಿ ವ್ಯವಹಾರವನ್ನು, ಚರಾಸ್ತಿ ವ್ಯವಹಾರ ನಡೆಸಿದ ಒಂದು ತಿಂಗಳೊಳಗಾಗಿ ಮಾಹಿತಿ ನೀಡಬೇಕಿದ್ದರೂ ಕೆಲ ಅಧಿಕಾರಿಗಳು ಸರಕಾರಕ್ಕೆ ನೀಡಿಲ್ಲ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯದರ್ಶಿ ಪಿ.ರಾಜೇಂದ್ರ ಚೋಳನ್ ಅವರು ತಮಿಳುನಾಡಿನಲ್ಲಿ ಹೊಂದಿರುವ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಸೇಲ್ ಡೀಡ್ ನೀಡಿಲ್ಲ. ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ತಾಲೂಕಿನ ಕಲ್ಲಿಕುಡಿ ಕೆ ವೆಲಕುಳಂನಲ್ಲಿ ಸರ್ವೇ ನಂಬರ್ 75ರಲ್ಲಿ 2 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಇದರ ವಾರ್ಷಿಕ ಆದಾಯ 75ಸಾವಿರ ರೂ. ಎಂದು ವರದಿ ಮಾಡಿದ್ದಾರೆ. ಆದರೆ ಈ ಕುರಿತಾದ ದಾಖಲೆಯನ್ನು ಸರಕಾರಕ್ಕೆ ಒದಗಿಸಿಲ್ಲ.

ಈ ಸಂಬಂಧ ದಾಖಲೆಗಳನ್ನು ಒದಗಿಸಬೇಕು ಎಂದು ಡಿಪಿಎಆರ್ 2021ರ ಸೆ.20, 2022ರ ಜೂನ್ 28 ರಂದು ಪತ್ರ ಬರೆದಿತ್ತು. ಪತ್ರ ಬರೆದು 2 ವರ್ಷಗಳಾದರೂ ರಾಜೇಂದ್ರ ಚೋಳನ್ ಅವರು ದಾಖಲೆಯನ್ನು ಒದಗಿಸಿಲ್ಲ. ಹೀಗಾಗಿ 2023ರ ನವೆಂಬರ್ 2ರಂದು ಮತ್ತೊಂದು ಪತ್ರವನ್ನು (ಸಂಖ್ಯೆ; ಸಿಆಸುಇ 39 ಎಸ್‌ಎಪಿ 2010, ದಿನಾಂಕ 02.11.2023) ಬರೆದಿದೆ. ಈ ಪತ್ರದ ಪ್ರತಿಯು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ.

ಮತ್ತೊಬ್ಬ ಐಎಎಸ್ ಅಧಿಕಾರಿ ಹಾಗೂ ಬಿಬಿಎಂಪಿ ಆರೋಗ್ಯ ವಿಭಾಗದ ಆಯುಕ್ತರಾಗಿರುವ ಡಾ.ಕೆ.ವಿ.ತ್ರಿಲೋಕ್‌ಚಂದ್ರ ಅವರು ಸಲ್ಲಿಸಿರುವ ವಾರ್ಷಿಕ ಸ್ಥಿರಾಸ್ತಿ ವರದಿಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ತಿಳಿದು ಬಂದಿದೆ.

ಜಕ್ಕೂರಿನ ಎಂಸಿಎಚ್‌ಎಸ್ ಬಡಾವಣೆಯಲ್ಲಿ ಹೊಂದಿರುವ ನಿವೇಶನದಲ್ಲಿ (ಸಂಖ್ಯೆ 6- ನಿವೇಶನ ವೆಚ್ಚ 35.41 ಲಕ್ಷ ರೂ. ನಿರ್ಮಾಣ ವೆಚ್ಚ 1,10,72,000) ಮನೆ ನಿರ್ಮಾಣ ಮಾಡಿರುವುದಾಗಿ ವರದಿ ಮಾಡಿದ್ದಾರೆ. ಇದೇ ನಿವೇಶನದಲ್ಲಿ ನಿರ್ಮಾಣ ಮಾಡಲಾದ ಮೂರು ಭಾಗಗಗಳನ್ನು ಕ್ರಮವಾಗಿ ಮಾಸಿಕ 1.76 ಲಕ್ಷ ರೂ., 2.33 ಲಕ್ಷ ರೂ.ಹಾಗೂ 1.80 ಲಕ್ಷ ರೂ.ಗಳಿಗೆ ಬಾಡಿಗೆ ನೀಡಲಾಗಿದೆ ಎಂದು 2021ರ ಡಿಸೆಂಬರ್ 5ರಂದು ಪತ್ರ ಬರೆದಿದ್ದರು.

ಆದರೆ ಬಾಡಿಗೆ ಕರಾರು ಪತ್ರಗಳನ್ನು ಸರಕಾರಕ್ಕೆ ಸಲ್ಲಿಸಿಲ್ಲ. ಬಾಡಿಗೆ ಕರಾರು ಪತ್ರಗಳನ್ನು ಒದಗಿಸಬೇಕು ಎಂದು ಡಿಪಿಎಆರ್ 2022ರ ಜನವರಿ 20 ಮತ್ತು ಜೂನ್ 30ರಂದು ಕೋರಿತ್ತು. ಆದರೆ ಮನೆಯನ್ನು ಬಾಡಿಗೆ ನೀಡಿರುವ ಕುರಿತು ಐಪಿಎಆರ್ 2022ರಲ್ಲಿ ವರದಿ ಮಾಡಿಲ್ಲ. ಮತ್ತು ವಾರ್ಷಿಕ ಆದಾಯ ಕಾಲಂನ್ನು ಭರ್ತಿ ಮಾಡಿಲ್ಲ ಎಂಬುದು ಟಿಪ್ಪಣಿ (ಸಿಆಸುಇ 96 ಎಸ್‌ಎಪಿ 2008) ಹಾಳೆಯಿಂದ ಗೊತ್ತಾಗಿದೆ.

ಸ್ಥಿರಾಸ್ತಿಗಳಿಂದ ಬಾಡಿಗೆ ಮೊತ್ತ ವಾರ್ಷಿಕವಾಗಿ ಪಡೆಯುವ 10ಸಾವಿರ ರೂ.ಗಳಿಗಿಂತ ಹೆಚ್ಚಾದಲ್ಲಿ ಐಪಿಎಆರ್‌ನಲ್ಲಿ ವರದಿ ಮಾಡಬೇಕು. ಹಾಗೂ ವಾರ್ಷಿಕ ಬಾಡಿಗೆ ಮೊತ್ತ 15ಸಾವಿರ ರೂ.ಗಳಿಗಿಂತ ಹೆಚ್ಚಾಗಿದ್ದಲ್ಲಿ ಸರಕಾರಕ್ಕೆ ವರದಿ ಮಾಡಬೇಕು. ಆದರೆ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಬಾಡಿಗೆ ಕರಾರು ಪತ್ರ ಮತ್ತು ಬಾಡಿಗೆ ಆದಾಯವನ್ನು ನವೂದಿಸಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು 2022ನೇ ಸಾಲಿನ ತಮ್ಮ ವಾರ್ಷಿಕ ಸ್ಥಿರಾಸ್ತಿ ವರದಿ ಸಲ್ಲಿಸಿದ್ದರೂ ಸಹ ಮೂರು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಕಾರಕ್ಕೆ ಒದಗಿಸಿಲ್ಲ ಎಂಬುದು ತಿಳಿದು ಬಂದಿದೆ.

ಆಂದ್ರದ ಕಡಪ ಮುನ್ಸಿಪಾಲಿಟ್ಟಿ, ಉತಕೂರು ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 597/1-5, 13/1-6, 13/1-06ರಲ್ಲಿ ಹೊಂದಿರುವ ನಿವೇಶನಗಳನ್ನು ಹೊಂದಿದ್ದಾರೆ. ಆದರೆ ಈ ದಾಖಲೆಗಳು ಸರಕಾರಕ್ಕೆ ಸ್ವೀಕೃತವಾಗಿಲ್ಲ. ಈ ಎಲ್ಲ ದಾಖಲೆಗಳು 2011ನೇ ಸಾಲಿಗೆ ಸಂಬಂಧಿಸಿವೆ. ಆದರೆ ಈ ಯಾವ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಡಿಪಿಎಆರ್ ಅಧಿಕಾರಿಗಳು ಪೊಮ್ಮಲ ಸುನೀಲ್ ಕುಮಾರ್ ಅವರಿಗೆ 2023ರ ನವೆಂಬರ್‌ನಲ್ಲಿ ಪತ್ರವನ್ನು (ಸಿಆಸುಇ 56 ಎಸ್‌ಎಪಿ 2012) ಬರೆದಿದ್ದಾರೆ.

ಅಲ್ಲದೇ 2012ನೇ ಸಾಲಿನ ವಾರ್ಷಿಕ ಸ್ಥಿರಾಸ್ತಿ ವರದಿಯ ಕ್ರಮ ಸಂಖ್ಯೆ (3)ರಲ್ಲಿ ಸರ್ವೇ ನಂಬರ್ 13/1ರಲ್ಲಿ (ಸಿಕೆ ದಿನ್ನೆ, ಉತಕೂರು, ಕಡಪ) ಸ್ಥಿರಾಸ್ತಿ ವರದಿ ಮಾಡಿದ್ದರು. ಈ ನಿವೇಶನವನ್ನು 2.00 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ನಮೂನೆ 2ರಲ್ಲಿ ಮಾಹಿತಿ ಸಲ್ಲಿಸಿದ್ದರು. ಇದನ್ನು ಕಾರಣಾಂತರಗಳಿಂದ ಮಾರಾಟ ಮಾಡಿಲ್ಲ ಎಂದು 2021ರ ಅಕ್ಟೋಬರ್ 12ರಂದು ಮಾಹಿತಿ ಒದಗಿಸಿದ್ದರು. ಆದರೆ 2013ರಿಂದ 2021ರವರೆಗಿನ ವಾರ್ಷಿಕ ಸ್ಥಿರಾಸ್ತಿ ವರದಿಗಳಲ್ಲಿ ಈ ಸ್ಥಿರಾಸ್ತಿಯನ್ನು 2.00 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದ್ದರು.

ಈ ಸ್ಥಿರಾಸ್ತಿಯನ್ನು ಮಾರಾಟ ಮಾಡದೇ ಇದ್ದರೂ ಸಹ ಸ್ಥಿರಾಸ್ತಿಯ ಕುರಿತು ವರದಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಮಾರಾಟ ಮಾಡಿರುವುದಾಗಿ ವರದಿ ಮಾಡಿದ್ದರು. ಈ ಕುರಿತು ಇಲಾಖೆಯು ಕೇಳಿದ್ದ ಸ್ಪಷ್ಟೀಕರಣಕ್ಕೆ ಉತ್ತರ ನೀಡಿಲ್ಲ. ಹೀಗಾಗಿ 2013ನೇ ಸಾಲಿನಿಂದ 2020ನೇವರೆಗೆ ಪರಿಷ್ಕೃತ ಸ್ಥಿರಾಸ್ತಿ ವರದಿಗಳನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವುದು ಗೊತ್ತಾಗಿದೆ.

ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ.ಶೆಟ್ಟೆಣ್ಣವರು 2014ನೇ ಸಾಲಿನ ವಾರ್ಷಿಕ ಸ್ಥಿರಾಸ್ತಿ ವರದಿಯ ಭೌತಿಕ ಪ್ರತಿಯನ್ನು ಸಲ್ಲಿಸಿಲ್ಲ. ಈ ಸಂಬಂಧ ದಾಖಲೆ ಸಲ್ಲಿಸಿ ಎಂದು 2023ರ ಅಕ್ಟೋಬರ್ 25ರಂದು ಪತ್ರ (ಸಿಆಸುಇ 15 ಎಸ್‌ಎಪಿ 2018) ಬರೆದಿರುವುದು ಗೊತ್ತಾಗಿದೆ.

ಇನ್ನು ಸುಷ್ಮಾ ಗೋಡಬೋಲೆ ಅವರು ಐಎಎಸ್ ವೃಂದಕ್ಕೆ ಆಯ್ಕೆಯಾದ ನಂತರ 2014, 2015, 2016ನೇ ಸಾಲಿನನವರೆಗೆ ವಾರ್ಷಿಕ ಸ್ಥಿರಾಸ್ತಿ ವರದಿಗಳನ್ನು ಭೌತಿಕವಾಗಿ ಸಲ್ಲಿಸಿಲ್ಲ. ವಾರ್ಷಿಕ ಸ್ಥಿರಾಸ್ತಿ ವರದಿಗಳನ್ನು ಸಲ್ಲಿಸಬೇಕು ಎಂದು 2019ರ ಜನವರಿ 11, ಜನವರಿ 13, 2020ರ ನವೆಂಬರ್ 26, 2021ರ ಸೆ.2ರಂದು ಡಿಪಿಎಆರ್ ಪತ್ರ(ಸಿಆಸುಇ 35 ಎಸ್‌ಎ ಪಿ 2016) ಬರೆದಿತ್ತು. ಆದರೂ ಸುಷ್ಮಾ ಗೋಡಬೋಲೆ ಅವರು ಯಾವುದೇ ಮಾಹಿತಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರತೀಕ್ ಬಾಯಲ್ ಅವರು 2023ರ ಸೆ.5ರಂದು ಕಾರನ್ನು 9.14 ಲಕ್ಷ ರೂ. ಆಟೊ ಲೋನ್ ಮೂಲಕ ಖರೀದಿಸಿದ್ದರು. ಈ ಸಂಬಂಧ ಚರಾಸ್ತಿ ವ್ಯವಹಾರವನ್ನು 2023ರ ಸೆ.29ರಂದು ಸಲ್ಲಿಸಿದ್ದರು. ಇವರ ಮೂಲ ವೇತನವು 71,800 ರೂ.,ಇದ್ದು ಆಟೊ ಲೋನ್ ಇಎಂಐ ಮೊತ್ತ 19,662 ರೂ.ಗಳನ್ನು ಯಾವ ಮೂಲದಿಂದ ಭರಿಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿಲ್ಲ. ಅಲ್ಲದೇ ಕಾರು ಖರೀದಿ ಮೊತ್ತ 9.90 ಲಕ್ಷ ರೂ.ಗಳಾಗಿದ್ದು ಬಾಕಿ ಮೊತ್ತ 76ಸಾವಿರ ರೂ.ಗಳನ್ನು ಯಾವ ಮೂಲದಿಂದ ಭರಿಸಲಾಗಿದೆ ಎಂಬ ಮಾಹಿತಿಯನ್ನು (ಡಿಪಿಎಆರ್ 8 ಎಸ್‌ಎಪಿ 2020) ಸರಕಾರಕ್ಕೆ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರೂ ಸಹ ತಮ್ಮ ಪತಿಯ ಜಂಟಿ ಹೆಸರಿನಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಸ್ಥಿರಾಸ್ತಿ (ಮನೆ ನಂ 42, 6ನೇ ಅಡ್ಡ ರಸ್ತೆ, ಮಾರುತಿ ಬಡಾವಣೆ) ವಾರ್ಷಿಕ ಆದಾಯ 1.86 ಲಕ್ಷ ರೂ. ಎಂದು ಮಾಹಿತಿ ಒದಗಿಸಿದ್ದಾರೆ. ಆದರೆ ಬಾಡಿಗೆಯ ಕರಾರು ಪ್ರತಿಗಳನ್ನು ಸರಕಾರಕ್ಕೆ ಒದಗಿಸಿಲ್ಲ.

ಅಲ್ಲದೇ ಇವರು ಕೆಎಎಸ್ ಅಧಿಕಾರಿಯಾಗಿದ್ದಾಗ 2010ರ ಸೆ.19ರಂದು ತಮ್ಮ ಪತಿ ಕೆ.ಎಸ್. ಲೋಕೇಶ್ ಸಂಜಯ್ ಫಾರ್ಮಾ ಡಿಸ್ಟ್ರಿಬ್ಯೂಟರ್ಸ್ ಹಾಗೂ ಸ್ಪಂದನಾ ಅಸೋಸಿಯೇಟ್ಸ್ ಎಂಬ ಕಂಪೆನಿ ನಡೆಸುತ್ತಿದ್ದರು. ಈ ವಿಷಯದ ಕುರಿತು ಅಖಿತ ಭಾರತ ಸೇವಾ (ನ253) ನಿಯಮಗಳು 1968 ನಿಯಮ 1968ರ ನಿಯಮ 13(3)ರ ಟಿಪ್ಪಣಿ ಮಾಡಿಕೊಳ್ಳುವ ಸಲುವಾಗಿ ಉದ್ಯಮದ ಹೆಸರು, ಉದ್ಯಮ ಕಾರ್ಯನಿರ್ವಹಿಸುವ ಸ್ಥಳ, ಉದ್ಯಮದ ವಿವರ, ಉದ್ಯಮದಲ್ಲಿ ಇರುವ ಪಾಲುದಾರರು ಕುರಿತಾದ ಮಾಹಿತಿ, ಬಂಡವಾಳ ಹೂಡಿರುವ ಮೊತ್ತ, ಈ ಬಂಡವಾಳ ಮೊತ್ತವನ್ನು ಯಾವ ಸಂಪನ್ಮೂಲದಿಂದ ಭರಿಸಲಾಗಿದೆ ಎಂಬ ದಾಖಲೆಗಳನ್ನು ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಯು 2023ರ ಸೆ.22ರಂದೇ ಪತ್ರ (ಸಂಖ್ಯೆ ಸಿಆಸುಇ 46 ಎಸ್‌ಎಪಿ 2018) ಬರೆದಿದ್ದರು ಎಂದು ಗೊತ್ತಾಗಿದೆ.

ಐಎಎಸ್ ಅಧಿಕಾರಿ ನಿತೇಶ್ ಪಾಟೀಲ್ ಅವರು ಆನೇಕಲ್ ತಾಲೂಕಿನ ಲಿಂಗಪುರ ಗ್ರಾಮದಲ್ಲಿ ನಿವೇಶನ (ಸಂಖ್ಯೆ 689-108 ಚ.ಮೀ ಅಳತೆ), ವಿಜಯಪುರ ತಾಲೂಕಿನ ಮಹಾಳಭಾಗ್ಯಾತ ಗ್ರಾಮದಲ್ಲಿ ನಿವೇಶನ (ಸಂಖ್ಯೆ 33- 30ಘಿ40 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ತಮ್ಮದೇ ಹೆಸರಿನಲ್ಲಿ ಹೊಂದಿದ್ದಾರೆ. ಆದರೆ ’ವಾರ್ಷಿಕ ಸ್ಥಿರಾಸ್ತಿ ವರದಿಯಲ್ಲಿ ತಮ್ಮ ಹೆಸರಿನಲ್ಲಿ ವರದಿ ಮಾಡಿದ ಸ್ಥಿರಾಸ್ತಿಗಳ ದಾಖಲೆ ಹಾಗೂ ಪ್ರಥಮ ನೇಮಕಾತಿ ಚರಾಸ್ತಿ ಮಾಹಿತಿಯನ್ನು ಒದಗಿಸಬೇಕು,’ ಎಂದು ಪತ್ರವೊಂದನ್ನು (ಸಿಆಸುಇ 20 ಎಸ್‌ಎಪಿ 2013) ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ನಿವೃತ್ತರಾಗಿರುವ ಜಿ.ಕುಮಾರ್‌ನಾಯಕ್ (ಬಿಡಿಎ ಆಯುಕ್ತ) ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮನೆಯ ಅಡಮಾನ ಸಾಲ 50.00 ಲಕ್ಷ ರೂ.ಮೊತ್ತದಿಂದ ತಮ್ಮ ಪತ್ನಿ ಶೀಲಾ ಕುಮಾರ ಅವರಿಂದ ಹೊಸದಾಗಿ ಖರೀದಿಸುತ್ತಿರುವ ಸ್ಥಿರಾಸ್ತಿ ಹಾಗೂ ಅದರಿಂದ ಲಭ್ಯವಾಗುವ ಬಾಡಿಗೆ ಮೊತ್ತದ ಮಾಹಿತಿಯನ್ನು ದಾಖಲೆಗಳ ಸಮೇತ ಒದಗಿಸಿಲ್ಲ. ಅದೇ ರೀತಿ 2019ನೇ ಸಾಲಿನ ವಾರ್ಷಿಕ ಸ್ಥಿರಾಸ್ತಿ ವರದಿಯ್ಲ ತುಮಕೂರು ಜಿಲ್ಲೆಯ ಕಸಬ ಹೋಬಳಿ ಊರು ಕೇರಿ ಪಂಚಾಯತ್‌ನಲ್ಲಿರುವ ನಿವೇಶನ ಸಂಖ್ಯೆ 31 ಮತ್ತು 32ನ್ನು 2020ನೇ ಸಾಲಿನಲ್ಲಿ ಸರಕಾರಕ್ಕೆ ವರದಿ ಮಾಡಿಲ್ಲ ಎಂಬುದು (ಸಂಖ್ಯೆ ಸಿಆಸುಇ 01 ಎಸ್‌ಎಪಿ 1992) ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News