ಮಧ್ಯ ಪ್ರದೇಶದಲ್ಲಿ 450 ರೂ. ಗೆ ಕೊಡುವಾಗ ಬೇರೆ ಕಡೆ ಸಾವಿರ ರೂ. ಏಕೆ ?
2024ರ ಲೋಕಸಭೆ ಚುನಾವಣೆಗೆ ಮೊದಲು ದೇಶಾದ್ಯಂತ ಅಡುಗೆ ಅನಿಲದ ಸಿಲಿಂಡರ್ ಬೆಲೆ 500 ರೂ. ಆಗಲಿದೆಯೇ?. ಹಾಗಾದರೆ, ಮೊನ್ನೆ ಚುನಾವಣೆ ನಡೆದ ರಾಜ್ಯಗಳಲ್ಲಿನ ರೇವಡಿ ರಾಷ್ಟ್ರಮಟ್ಟದಲ್ಲೂ ಬರಬಹುದೆ?. ಯಾರು ಗ್ಯಾರಂಟಿ ಯೋಜನೆಗಳನ್ನೆಲ್ಲ, ದಿವಾಳಿಯೆಬ್ಬಿಸುವ ಕ್ರಮ ಎಂದು ಜರೆದಿದ್ದರೊ, ಜನರನ್ನು ಸೋಮಾರಿಗಳನ್ನಾಗಿಸೋ ಯೋಜನೆಗಳು ಎಂದಿದ್ದರೊ ಅದೇ ಬಿಜೆಪಿಯವರು ಈಗ ಎಲ್ಲಿಗೆ ಬಂದು ನಿಂತಿದ್ದಾರೆ ನೋಡಿ.
ಕಾಂಗ್ರೆಸ್ ಉಚಿತ ಯೋಜನೆಗಳನ್ನು ಘೋಷಿಸಿದಾಗ ರೇವಡಿ ಎಂದರು, ಬಿಟ್ಟಿಭಾಗ್ಯ ಎಂದು ಜರೆದರು, ಇದರಿಂದ ದೇಶ ದಿವಾಳಿಯಾಗುತ್ತೆ ಎಂದರು. ಆದರೆ ಹೀಗೆಲ್ಲಾ ಹೀಗಳೆದ ಅವರೇ ಕಡೆಗೆ ಚುನಾವಣೆ ನಡೆದ ರಾಜ್ಯಗಳಲ್ಲಿ ಅದೇ ಕೊಡುಗೆಗಳನ್ನು ಮೋದಿ ಗ್ಯಾರಂಟಿಯ ಹೆಸರಲ್ಲಿ ಘೋಷಣೆ ಮಾಡಿದರು.
ಮೂರು ರಾಜ್ಯಗಳಲ್ಲಿ ಗೆದ್ದಿದ್ದೂ ಆಯಿತು. ಈಗ ಇರೋ ಕುತೂಹಲ ಏನೆಂದರೆ, ಗ್ಯಾಸ್ ಸಿಲಿಂಡರ್ ಗೆ ದೇಶಾದ್ಯಂತ 500 ರೂಪಾಯಿ ಆಗುತ್ತದೆಯೆ ಅನ್ನೋದು. ಯಾಕೆಂದರೆ, ಚುನಾವಣೆ ವೇಳೆ ಬಿಜೆಪಿ ಹಾಗು ಪ್ರಧಾನಿ ಮೋದಿ ಮಾಡಿದ ಹಲವಾರು ಘೋಷಣೆಗಳಲ್ಲಿ ಸಿಲಿಂಡರ್ ಗೆ 450 ರೂ. ಎಂಬುದೂ ಒಂದು. ಕಾಂಗ್ರೆಸ್ 500 ರೂಪಾಯಿಗೆ ಕೊಡ್ತೀವಿ ಎಂದಾಗ ಬಿಜೆಪಿ ಇನ್ನೂ 50 ರೂಪಾಯಿ ಕಡಿಮೆ ಮಾಡಿ ನಾವು 450ಕ್ಕೇ ಕೊಡ್ತೀವಿ ಎಂದು ಹೇಳಿತು.
ಈಗ ಚುನಾವಣೆ ಗೆದ್ದಿರುವ ಆ ಮೂರು ರಾಜ್ಯಗಳಲ್ಲಿ ಬಿಜೆಪಿ ತಾನು ಹೇಳಿದ ಹಾಗೆ ಕಡಿಮೆ ಬೆಲೆಗೆ ಸಿಲಿಂಡರ್ ಕೊಡಬೇಕು. ಪ್ರಶ್ನೆಯೇನೆಂದರೆ, ಅವ್ರಿಗೆ ಮಾತ್ರ ಯಾಕೆ?. ಉತ್ತರ ಪ್ರದೇಶದವರಿಗೆ ಯಾಕಿಲ್ಲ ?. ಬಿಹಾರದವರಿಗೆ ಯಾಕಿಲ್ಲ?. ಇಡೀ ದೇಶದ ಜನರಿಗೆ ಯಾಕಿಲ್ಲ?. ಕೆಲವೇ ರಾಜ್ಯಗಳ ಜನರಿಗೆ ಗ್ಯಾಸ್ ಸಿಲಿಂಡರ್ 450ರಿಂದ 500ಕ್ಕೆ ಸಿಗುತ್ತೆ. ಉಳಿದವರು 900ರಿಂದ ಸಾವಿರ ರೂ ವರೆಗೆ ಕೊಡಬೇಕು ಅನ್ನೋದು ಖಂಡಿತ ಸರಿಯಲ್ಲ.
ಗಮನಿಸಬೇಕಿರೋ ಒಂದು ಸಂಗತಿಯೆಂದರೆ, ಮೋದಿ ಪ್ರಧಾನಿಯಾಗುವ ಹೊತ್ತಲ್ಲೂ ಗ್ಯಾಸ್ ಸಿಲಿಂಡರ್ ಬೆಲೆ 400 ರೂ ಇತ್ತು. ಆಮೇಲೆ ಮೋದಿ ಮ್ಯಾಜಿಕ್ ಪರಿಣಾಮವಾಗಿ ಅದರ ಬೆಲೆ ಏರುತ್ತಲೇ ಹೋಗಿ ಈಗ ಸಾವಿರದ ನೂರಕ್ಕೆ ಬಂದು ಮುಟ್ಟಿದೆ. ಅಂಥದ್ದರಲ್ಲಿ ಎಲೆಕ್ಷನ್ ಹೊತ್ತಿನ ರೇವಡಿ ಪರಿಣಾಮವಾಗಿ ಕೆಲ ರಾಜ್ಯಗಳಿಗೆ 450 ಅಥವಾ 500ಕ್ಕೆ ಸಿಲಿಂಡರ್ ಭಾಗ್ಯ ಸಿಗಲಿದೆ.
ಈ ಭಾಗ್ಯ ದೇಶಾದ್ಯಂತ ವಿಸ್ತರಣೆಯಾಗಲಿದೆಯೆ?. ಹತ್ತು ವರ್ಷಗಳ ಮೋದಿ ಆಳ್ವಿಕೆಯಲ್ಲಿನ ಒಂದು ಕಟು ವಾಸ್ತವದ ಬಗ್ಗೆಯೂ ಇಲ್ಲಿ ಹೇಳಬೇಕು.
ಮೋದಿ 10 ವರ್ಷ ಆಡಳಿತ ಮಾಡಿದ ಮೇಲೆಯೂ ಜನರು ಒಂದು ಸಿಲಿಂಡರ್ ಖರೀದಿಸೋ ಸ್ಥಿತಿಯಲ್ಲಿ ಇಲ್ಲ. ಗ್ಯಾಸ್ ಸಿಲಿಂಡರ್ ಬದಿಗಿಟ್ಟು ಕಟ್ಟಿಗೆ ಒಲೆಯಲ್ಲಿಯೇ ಅಡುಗೆ ಮಾಡುವ ಸ್ಥಿತಿ ದೇಶದ ಎಷ್ಟೋ ಹಳ್ಳಿಗಳಲ್ಲಿದೆ. ಯಾಕೆಂದರೆ ಅಷ್ಟರ ಮಟ್ಟಿಗೆ ಈ ದೇಶದ ಬಡವರ ಆರ್ಥಿಕ ಸ್ಥಿತಿ ಅಯೋಮಯವಾಗಿದೆ.
ದೇಶ ವಿಶ್ವಗುರುವಾಗಿದೆ, ಜಾಗತಿಕವಾಗಿ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿದೆ ಎಂದು ಬಿಜೆಪಿ, ಮೋದಿ ಹಾಗು ಅವರ ಐಟಿ ಸೆಲ್ ಭಯಂಕರ ಪ್ರಚಾರ ಮಾಡುತ್ತಿರುವಾಗಲೇ ಕಳೆದ ತಿಂಗಳು ಪ್ರಧಾನಿ ಮೋದಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಕೊಡುವ ಯೋಜನೆಯನ್ನು ಇನ್ನೂ ಐದು ವರ್ಷಕ್ಕೆ ವಿಸ್ತರಿಸಿದರು.
ಈ ಮೊದಲು 80 ಕೋಟಿ ಜನರಿಗೆ ಈ ಉಚಿತ ಆಹಾರ ಧಾನ್ಯ ಸಿಗುತ್ತಿದ್ದರೆ ಇನ್ನು ಅದು 81.35 ಕೋಟಿ ಜನರಿಗೆ ಸಿಗಲಿದೆ. ಅಂದರೆ ಮೋದೀಜಿ ಆಡಳಿತದಲ್ಲಿ ಈ ದೇಶದಲ್ಲಿ ಇನ್ನೂ ಒಂದು ಕೋಟಿ ಬಡವರು ಹೆಚ್ಚಿದರೇ ?
ಜಾಗತಿಕ ಹಸಿವು ಸೂಚ್ಯಂಕ ಸುಳ್ಳು ಎಂದು ಹೇಳುತ್ತಲೇ ಇಲ್ಲಿ 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸುವ ಯೋಜನೆಯನ್ನು ವಿಸ್ತರಿಸಿದರು ಮೋದೀಜಿ.
ಹಾಗಾಗಿ, ಇದಾವುದೂ ಈಗ ರೇವಡಿ ಆಗಿ ಉಳಿಯದೆ, ಈ ದೇಶದ ಆರ್ಥಿಕ ವಾಸ್ತವವೇ ಆಗಿಬಿಟ್ಟಿದೆ. ಜನರು ಬೆಲೆ ಏರಿಕೆಯಿಂದ, ಆದಾಯ ಇಳಿಕೆಯಿಂದ ತತ್ತರಿಸಿ ಹೋಗಿರುವ ಹೊತ್ತು ಇದು. ಖರೀದಿ ಸಾಮರ್ಥ್ಯವೂ ಕಡಿಮೆಯಾದ ವರದಿಗಳಿವೆ. ಇದರ ಮಧ್ಯೆಯೇ ಹೇಗೂ ಚುನಾವಣೆ ಕೂಡ ಹತ್ತಿರ ಬರ್ತಾ ಇದೆ.
ಹೀಗಿರುವಾಗ, ಮೋದಿ ಗ್ಯಾರಂಟಿ ದೇಶಾದ್ಯಂತ 500 ರೂ ಗೆ ಸಿಲಿಂಡರ್ ಕೊಡಬಹುದೆ ಎಂಬ ಕುತೂಹಲವೂ ಸಹಜವಾಗಿ ಎದ್ದಿದೆ. ಈಗಾಗಲೇ ಕಳೆದ ರಕ್ಷಾ ಬಂಧನ ಸಮಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಸಿ ಮೋದಿ ಮಹಿಳೆಯರ ಸೋದರ ಎಂದು ಪೋಸು ಕೊಟ್ಟಿದ್ದರು.
ರಕ್ಷಾ ಬಂಧನದ ಹಬ್ಬ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಗ್ಯಾಸ್ ಬೆಲೆಯಲ್ಲಿನ ಇಳಿಕೆ ಕುಟುಂಬದಲ್ಲಿನ ಸಹೋದರಿಯರ ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ ಎಂದೆಲ್ಲ ಪ್ರಧಾನಿ ಹೇಳಿದ್ದರು. ಹಾಗೆಯೇ ಮಧ್ಯಪ್ರದೇಶದಲ್ಲಂತೂ ಕಾಂಗ್ರೆಸ್ ಗ್ಯಾರಂಟಿಗಳಿಗೆ ಪೈಪೋಟಿಯನ್ನೇ ನೀಡಿತ್ತು ಬಿಜೆಪಿ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ ಗೆಲುವನ್ನು ಕಂಡ ಬಳಿಕ ಎಚ್ಚೆತ್ತುಕೊಂಡಿದ್ದ ಮಧ್ಯಪ್ರದೇಶ ಸರ್ಕಾರ, ಅಂಥದೇ ಗ್ಯಾರಂಟಿಗಳ ನಕಲು ಮಾಡಿತ್ತು.
ಇಲ್ಲಿ ಬಿಜೆಪಿ ಬೆಂಬಲಿಗರು ಕರ್ನಾಟಕ ಗ್ಯಾರಂಟಿಗಳಿಂದಾಗಿ ಪಾಕಿಸ್ತಾನ ಆಗುತ್ತೆ, ಶ್ರೀಲಂಕಾ ಆಗುತ್ತೆ ಅಂತ ಅರಚಾಡುತ್ತಿರುವಾಗಲೇ ಅಲ್ಲಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರಕಾರ , ಲಾಡ್ಲಿ ಬೆಹೆನಾ ಯೋಜನೆ ಘೋಷಣೆ ಮಾಡಿ, ಮಹಿಳೆಯರ ಮತ ಸೆಳೆಯೋಕ್ಕೆ ಆಗಲೇ ವೇದಿಕೆ ನಿರ್ಮಿಸಿತ್ತು. ಕಳೆದ ಜೂನ್ನಿಂದಲೇ ಮಹಿಳೆಯರಿಗೆ ಪ್ರತಿ ತಿಂಗಳೂ 1,250 ರೂ ನೀಡುವುದು ಶುರುವಾಗಿತ್ತು.
ಗೆದ್ದರೆ ಈ ಮೊತ್ತವನ್ನು 3 ಸಾವಿರ ರೂ ಗೆ ಏರಿಸುವ ಭರವಸೆಯನ್ನೂ ಬಿಜೆಪಿ ಕೊಟ್ಟಿತ್ತು. ಹಾಗೆಯೇ 500ರೂ ಗೆ ಸಿಲಿಂಡರ್ ಎಂಬ ಕಾಂಗ್ರೆಸ್ ಘೋಷಣೆಗೆ ಪೈಪೋಟಿಯಾಗಿ, ಇನ್ನೂ 50 ರೂ ಇಳಿಸಿ 450 ರು ಗೆ ಸಿಲಿಂಡರ್ ಕೊಡೋದಾಗಿ ಬಿಜೆಪಿ ಹೇಳಿತ್ತು. ಮದುವೆ ವೇಳೆ ಹೆಣ್ಣು ಮಕ್ಕಳಿಗೆ 55 ಸಾವಿರ ರೂ. ಹಣ ನೀಡುವುದಾಗಿಯೂ, ಮಹಿಳಾ ಶಿಕ್ಷಣಕ್ಕೆ 25 ಸಾವಿರ ರೂ. ಹಣ ನೀಡೋದಾಗಿಯೂ ಬಿಜೆಪಿ ಹೇಳಿತ್ತು.
ಅಲ್ಲದೆ, ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುವ ಭರವಸೆಯನ್ನೂ ಬಿಜೆಪಿ ಕೊಟ್ಟಿತ್ತು. ಇವೆಲ್ಲವೂ ಕಾಂಗ್ರೆಸ್ ಪಕ್ಷದ ಭರವಸೆಗಳಿಗೆ ಪ್ರತಿಯಾಗಿಯೇ ಬಿಜೆಪಿ ಕೊಟ್ಟಿದ್ದ ಭರವಸೆಗಳಾಗಿದ್ದವು. ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ರೈತರನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೀಡಿರುವ ಸಹಾಯಧನ ವಿಚಾರ, ಭತ್ತ ಖರೀದಿ ಪ್ರಕ್ರಿಯೆಯಂಥ ಘೋಷಣೆಗಳಿಗೆ ಒತ್ತು ಕೊಟ್ಟಿತ್ತು.
ನೆನಪಿಡಬೇಕು, ಇವೆಲ್ಲವನ್ನೂ ಮಾಡಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡಿದ್ದಾಗ ಜರೆದವರೇ ಆಗಿದ್ದರು. ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ಹೀಗಳೆದವರೇ ಪೈಪೋಟಿಯಿಂದೆಂಬಂತೆ ಗ್ಯಾರಂಟಿ ಘೋಷಣೆ ಮಾಡಿ ಗೆದ್ದೂಬಿಟ್ಟರು. ಹಿಂದೂ ಮುಸ್ಲಿಂ ಎಂದು ದ್ವೇಷ ಹರಡಿ ಗೆಲ್ಲೋದಕ್ಕಿಂತ ಇದು ಅದೆಷ್ಟೋ ಉತ್ತಮ. ಕನಿಷ್ಠ ಓಟು ಹಾಕುವ ಜನರ ಕೈಗೆ ಒಂದಿಷ್ಟು ಕೊಡುಗೆಗಳಾದರೂ ಸಿಗುತ್ತೆ, ಅವರ ಜೇಬಿಗೆ ಒಂದಿಷ್ಟು ದುಡ್ಡಾದರೂ ಹೋಗಿ ಸೇರುತ್ತೆ.
ಹಾಗೆ ಗೆದ್ದವರು ಈಗ ಮೂರೂ ರಾಜ್ಯಗಳಲ್ಲಿ 450 ರೂಪಾಯಿಗೆ ಸಿಲಿಂಡರ್ ಕೊಡಬೇಕಿದೆ. ಮತ್ತು ಉಳಿದ ರಾಜ್ಯದವರಿಗೂ 500 ರೂ ಗೆ ಸಿಲಿಂಡರ್ ಕೊಡುವ ಮೂಲಕ 2024ರ ಚುನಾವಣೆಗೆ ಪ್ಲಾನ್ ಮಾಡುತ್ತಾರಾ ಮೋದಿಯವರು ಎಂಬುದನ್ನು ಈಗ ಕಾದು ನೋಡಬೇಕಾಗಿದೆ.