ಸರಕಾರದ ಆದೇಶ ಉಲ್ಲಂಘಿಸಿ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿವಿಯಿಂದ ಸಿಬ್ಬಂದಿಗೆ ಮುಂಭಡ್ತಿ

Update: 2023-12-10 04:30 GMT

Photo: facebook

ಬೆಂಗಳೂರು: ಬೀದರ್‌ ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮನಸೋ-ಇಚ್ಚೆಯಿಂದ ತನ್ನ ನೌಕರರಿಗೆ ಮುಂಭಡ್ತಿ ನೀಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗವಾಗಿದೆ. ಸರಕಾರದ ಅನುಮತಿಯನ್ನು ಪಡೆಯದೆ ಈ ಮುಂಭಡ್ತಿ ಪ್ರಕ್ರಿಯೆಯು ನಡೆದಿದ್ದು, ಇದರ ಹಿಂದೆ ಬಾರಿ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಯಾವುದೇ ಇಲಾಖೆಗಳು, ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಹುದ್ದೆಗಳ ಸೃಜನೆ ಮತ್ತು ಹುದ್ದೆಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆಯಬೇಕು. ಹುದ್ದೆಗಳ ಸೃಜನೆ, ಹುದ್ದೆಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ತಮ್ಮ ಹಂತದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳದೆ ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಿ ಇಲಾಖೆಯ ಸಹಮತಿ ಪಡೆದ ನಂತರವೇ ಯೋಜನೆಯನ್ನು ಅನುಷ್ಟಾನ ಮಾಡಬೇಕು ಎಂದು ತಿಳಿಸಿದೆ.

ಸೂಚನೆಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದಲ್ಲಿ, ಸರಕಾರಕ್ಕೆ ಹೆಚ್ಚಿನ ಅರ್ಥಿಕ ಹೊರೆಯಾಗಲಿದೆ. ಅಲ್ಲದೆ ಆರ್ಥಿಕ ಶಿಸ್ತು ಸಡಿಲವಾಗುತ್ತದೆ. ಇದು ಹಲವಾರು ಅನಾವಶ್ಯಕ ಆಡಳಿತ ಸಮಸ್ಯೆಗಳಿಗೆ ಕಾರಣ ವಾಗುತ್ತದೆ. ಹೀಗಾಗಿ, ಆರ್ಥಿಕ ಇಲಾಖೆಯು ಇಂತಹದಕ್ಕೆ ಅನುದಾನವನ್ನು ಕಲ್ಪಿಸಲು ಕ್ರಮ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಈ ಆದೇಶವನ್ನು ಗಾಳಿಗೆ ತೂರಿ ಹುದ್ದೆ ಸೃಜನೆ ಮಾಡಿದೆ. ಹುದ್ದೆಗಳಿಗೆ ಎರಡು ಬಾರಿ ಮುಂಭಡ್ತಿ ನೀಡಿದ್ದು, ಆರ್ಥಿಕ ಇಲಾಖೆಯ ಅನುಮತಿಯನ್ನು ಒಮ್ಮೆಯೂ ಪಡೆಯದೆ ಇರುವುದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗವಾಗಿದೆ.

ನೌಕರರಿಗೆ ಮೊದಲಿದ್ದ ಹುದ್ದೆಗಳ ಶೀರ್ಷಿಕೆಗೆ ಹಿರಿಯ ಎಂಬ ಹೊಸ ಹುದ್ದೆಯನ್ನು ಸೃಜನೆ ಮಾಡಿ ವಿಶ್ವವಿದ್ಯಾನಿಲಯವು ಕಾನೂನು ಬಾಹಿರವಾಗಿ ಮುಂಭಡ್ತಿ ನೀಡಿದೆ. ಹಿಂದಿನ ಹುದ್ದೆಯಲ್ಲಿ ತೆಗೆದುಕೊಳ್ಳುತ್ತಿದ್ದ ಸಂಬಳಕ್ಕಿಂತ ಹೆಚ್ಚುವರಿಯಾಗಿ ಸುಮಾರು 7 ಸಾವಿರ ಹಣವನ್ನು ಸಿಬ್ಬಂದಿಗೆ ಪಾವತಿ ಮಾಡಲು ಮುಂಭಡ್ತಿ ಎಂಬ ನೆಪವನ್ನು ವಿವಿಯು ಮುಂದಿಟ್ಟಿದೆ. ವಿವಿಯ ಈ ವರ್ತನೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವುದಲ್ಲದೆ, ವಿವಿಯಲ್ಲಿರುವ ನೇಮಕಾತಿ ಪ್ರಾಧಿಕಾರವು ಇದನ್ನು ದಂಧೆಯನ್ನು ಮಾಡಿಕೊಂಡಿದೆ ಎಂಬುದು ಅನುಮಾನಗಳನ್ನು ಶೈಕ್ಷಣಿಕ ವಲಯದಲ್ಲಿ ಸೃಷ್ಟಿಸಿದೆ.

ದಾಖಲೆಗಳಿಂದ ಬಹಿರಂಗ

2019ರಲ್ಲಿ 60ಕ್ಕೂ ಅಧಿಕ ನೌಕರರಿಗೆ ಹಾಗೂ 2021ರಲ್ಲಿ 36 ನೌಕರರಿಗೆ ಈ ರೀತಿ ಸರಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ನೇಮಕಾತಿಯನ್ನು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ವಿವಿಯು ನೀಡುವ ದಾಖಲೆಗಳಿಂದ ತಿಳಿದು ಬಂದಿದೆ. ವಿವಿಯು ಮುಂಭಡ್ತಿಯನ್ನು ನೀಡಲು ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅನುಮತಿಯನ್ನು ಪಡೆದಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ವಿವಿಯು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - -ಅನಿಲ್ ಕುಮಾರ್ ಎಂ.

contributor

Similar News