ಸುಳ್ಯ ಗಡಿಗ್ರಾಮಗಳಲ್ಲಿ ನಿರಂತರ ಆನೆಗಳ ಉಪಟಳ

Update: 2023-12-04 04:47 GMT

ಸುಳ್ಯ: ದ.ಕ. ಜಿಲ್ಲೆಯ ಹಲವೆಡೆ ಕಾಡಾನೆಗಳ ಹಾವಳಿ ವಿಪರೀತವಾಗುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಹಾಗಿದ್ದರೂ ಅರಣ್ಯ ಇಲಾಖೆ ಸಕಾಲಕ್ಕೆ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂಬುದು ಸಂತ್ರಸ್ತರ ಅಳಲು.

ಪಕ್ಕದ ರಾಜ್ಯ ಕೇರಳದಲ್ಲಿ ಅರಣ್ಯ ಇಲಾಖೆ ರೈತರ ಸಂಕಷ್ಟಕ್ಕೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಈ ಭಾಗದ ರೈತರ ಪ್ರಶ್ನೆ. ಕೇರಳದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ಟೀಂ (ಆರ್‌ಆರ್‌ಪಿ) ಎಂಬ ತಂವವೊಂದು ಸರಕಾರದ ವತಿಯಿಂದಲೇ ಕಾರ್ಯಾಚರಿಸುತ್ತಿದ್ದು, ಈ ತಂಡದ ಸದಸ್ಯರು ಆನೆಗಳು ರೈತರ ಕೃಷಿ ತೋಟಕ್ಕೆ ನುಗ್ಗಲೆತ್ನಿಸುವಾಗಲೇ ಸ್ಥಳಕ್ಕೆ ಧಾವಿಸಿ ಅವುಗಳನ್ನು ಮತ್ತೆ ಕಾಡಿಗೆ ಅಟ್ಟುತ್ತಾರೆ. ಕೇರಳದಲ್ಲಿ ಆನೆಗಳು ಕೃಷಿ ಬೆಳೆಗಳನ್ನು ನಾಶ ಪಡಿಸುವಾಗ ರೈತರಿಗಿಂತಲೂ ಮುಂದೆ ನಿಂತು ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದರೆ ಕರ್ನಾಟಕದಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ರೈತರು. ಕೇರಳದ ಗಡಿ ಹಂಚಿಕೊಂಡಿರುವ ಆಲೆಟ್ಟಿ, ಮಂಡೆಕೋಲು ಗ್ರಾಮಗಳಲ್ಲಿ ಕೃಷಿಕರು ಆನೆಗಳನ್ನು ತಮ್ಮ ತೋಟದಿಂದ ಅಟ್ಟಿ ಕೇರಳಕ್ಕೆ ಹಾಗೂ ಕೇರಳ ಭಾಗದ ರೈತರು ಕರ್ನಾಟಕದ ಗಡಿಯಂಚಿಗೆ ಅಟ್ಟುವುದರಿಂದ ಆನೆಗಳು ಒಂದರ್ಥದಲ್ಲಿ ಕಾಲ್ಚೆಂಡಿನಂತಾಗಿವೆ. ಹಾಗಿದ್ದರೂ ಇಲ್ಲಿನ ಅರಣ್ಯ ಇಲಾಖೆ ಹೆಚ್ಚು ಮುತುವರ್ಜಿ ವಹಿಸದ ಕಾರಣ ವರ್ಷದ ಹೆಚ್ಚಿನ ಸಮಯದಲ್ಲಿ ಆನೆಗಳು ಕರ್ನಾಟಕದ ರೈತರಿಗೇ ಹೆಚ್ಚು ತೊಂದರೆ ಕೊಡುತ್ತಿರುವುದು ಸುಳ್ಳಲ್ಲ. ದ.ಕ ಜಿಲ್ಲೆಯ ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕಿನ ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ರೈತರ ಕೃಷಿ ತೋಟಕ್ಕೆ ದಾಂಗುಡಿ ಇಡುತ್ತಲೇ ಇರುತ್ತವೆ. ಅದೆಷ್ಟೋ ವರ್ಷಗಳಿಂದ ಜತನವಾಗಿ ಕಾದು ಅಡಿಕೆ, ತೆಂಗು, ಬಾಳೆಗಳನ್ನು ಬೆಳೆಸುವ ರೈತರಿಗೆ ಕಾಡಾನೆಗಳ ದಾಂಧಲೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುವ ಪರಿಸ್ಥಿತಿ ಇದೆ. ಹೆಚ್ಚಿನ ಕೃಷಿ ತೋಟಗಳು ಅರಣ್ಯ ಭಾಗಕ್ಕೆ ತಾಗಿಕೊಂಡೇ ಇರುವ ಕಾರಣ ಈ ಉಪಟಳ ಸರ್ವೇ ಸಾಮಾನ್ಯ ಎಂಬಂತಾಗಿದೆ. ಕಾಡುಪ್ರಾಣಿಗಳ ಉಪಟಳದ ಬಗೆಗಿನ ರೈತರ ಮೊರೆಗೆ ಶೀಘ್ರ ಸ್ಪಂದಿಸಬೇಕೆಂಬ ಸರಕಾರದ ಆದೇಶ ಇದ್ದರೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಕೆಳಸ್ತರದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಆದರೆ ದೂರು ಬಂದ ರೈತರ ತೋಟದ ಸನಿಹಕ್ಕೆ ಸುಳಿಯದ ಅಧಿಕಾರಿಗಳು, ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸುತ್ತಾರೆ. ಆದರೆ, ಆನೆಗಳನ್ನು ಅಟ್ಟಲು ರಾತ್ರಿ ವೇಳೆ ಒಬ್ಬಂಟಿ ಅರಣ್ಯ ವೀಕ್ಷಕರು ಸ್ಥಳಕ್ಕೆ ತೆರಳಲು ಹಿಂಜರಿಯುತ್ತಾರೆ. ಜೊತೆಗೆ ಆನೆಗಳನ್ನು ಹಿಮ್ಮೆಟ್ಟಿಸಲು ಇಲಾಖೆಯಲ್ಲಿ ಇರಲೇ ಬೇಕಾದ ಸೌಲಭ್ಯಗಳ ಕೊರತೆಯೂ ಇದಕ್ಕೆ ಪ್ರಮುಖ ಕಾರಣ.

► ಶಾಶ್ವತ ಪರಿಹಾರಕ್ಕೆ ರೈತರ ಮೊರೆ

ಹಾಗೆಂದು ರೈತರ ಕೂಗಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಲೇ ಇಲ್ಲ ಎಂಬುದು ಸರಿಯಲ್ಲ. ಅರಣ್ಯ ಇಲಾಖೆಯ ವತಿಯಿಂದ ಆನೆ ನಿರೋಧಕ ಸೋಲಾರ್ ಬೇಲಿ, ಕಾಂಕ್ರಿಟ್ ಬೇಲಿ, ಕಂದಕಗಳ ನಿರ್ಮಾಣ, ರೈಲ್ವೆ ಹಳಿಯ ಬೇಲಿ .., ಹೀಗೆ ಹತ್ತು ಹಲವು ಯೋಜನೆಗಳ ಮುಖಾಂತರ ರೈತರ ನೆರವಿಗೆ ಧಾವಿಸಿದೆ. ಜೊತೆಗೆ ಬೆಳೆ ನಾಶಗೊಂಡರೆ ಅದಕ್ಕೆ ಸಣ್ಣ ಮೊತ್ತದ ಪರಿಹಾರಧನವನ್ನೂ ವಿತರಿಸುತ್ತದೆ. ಇವಿಷ್ಟೇ ಅಲ್ಲ ಕಾಡಾನೆಗಳ ಉಪಟಳ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.

► ಅರಣ್ಯ ಇಲಾಖೆ ಯಲ್ಲಿ ಸಿಬ್ಬಂದಿ ಕೊರತೆ: ಮಂಗಳೂರು ಅರಣ್ಯ ವಲಯಕ್ಕೆ ಸಂಬಂಧಪಟ್ಟಂತೆ ಮಂಜೂರಾಗಿರುವ ಒಟ್ಟು 62 ಅರಣ್ಯ ವೀಕ್ಷಕರ(ವಾಚರ್) ಪೈಕಿ ಖಾಯಂಗೊಂಡ ವೀಕ್ಷಕರಿರುವುದು ಇಬ್ಬರು ಮಾತ್ರ. ಮಂಜೂರಾಗಿರುವ ಒಟ್ಟು ಗಾರ್ಡ್‌ಗಳ ಪೈಕಿ ಇಲಾಖೆಯಿಂದ ನೇಮಕಗೊಂಡಿರುವ ಗಾರ್ಡ್ ಗಳು ಇರುವುದು ಕೇವಲ 85 ಮಾತ್ರ. ಈ ಸಿಬ್ಬಂದಿ ಕೊರತೆಯ ಕಾರಣ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ಸೂಕ್ತ ಸ್ಪಂದನ ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು. ಸರಕಾರ ರೈತರ ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ರೈತರ ಆಗ್ರಹವಾಗಿದೆ.

ಪಕ್ಕದ ಕೇರಳ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ರಾಪಿಡ್ ರೆಸ್ಪಾನ್ಸ್ ಟೀಂ ನಂತಹ ಪರಿಣಾಮಕಾರಿ ತಂಡ ಇಲ್ಲ ನಿಜ. ಹಾಗಿದ್ದರೂ ಲಭ್ಯವಿರುವ ವ್ಯವಸ್ಥೆಯಡಿ ಆನೆ ಮುಂತಾದ ವನ್ಯ ಮೃಗಗಳಿಂದ ರೈತರ ಕೃಷಿ ಬೆಳೆಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಳಿದಂತೆ ಆನೆಗಳ ಉಪಟಳ ತಡೆಯಲು ಸೋಲಾರ್ ಬೇಲಿ, ಕಂದಕಗಳ ನಿರ್ಮಾಣ, ಕಾಂಕ್ರಿಟ್ ಬೇಲಿಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಆನೆಗಳು ರೈತರ ಕೃಷಿ ಭೂಮಿಗೆ ದಾಳಿ ಇಡುವ ಸಂದರ್ಭ ಅರಣ್ಯ ಇಲಾಖಾ ಅಧಿಕಾರಿಗಳು ಇತರ ಸಿಬ್ಬಂದಿ ಜೊತೆ ಸ್ಥಳಕ್ಕೆ ಅಗತ್ಯ ತೆರಳುವಂತೆ ಸೂಚನೆ ನೀಡಲಾಗುವುದು.

► ಅಂತೋನಿ ಎಸ್. ಮರಿಯಪ್ಪ,

ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

ಆನೆಗಳ ನಿರಂತರ ಉಪಟಳದಿಂದಾಗಿ ಇತ್ತೀಚೆಗೆ ಕೃಷಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಹಗಲು ಮಂಗಗಳ ಹಾವಳಿಯಾದರೆ, ರಾತ್ರಿ ಆನೆಗಳ ದಾಳಿ ತಡೆಯಲು ನಿದ್ದೆಗೆಡುವ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕೂಡಲೇ ಸಮರ್ಪಕ ಸಿಬ್ಬಂದಿಯನ್ನು ನೇಮಕಗೊಳಿಸಿ ರೈತರ ನೆರವಿಗೆ ಬಂದರಷ್ಟೇ

ಬಡ ರೈತರು ಬದುಕಲು ಸಾಧ್ಯ.

► ಧನಂಜಯ ಪಡ್ಪು, ಕೃಷಿಕ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಿರೀಶ್ ಅಡ್ಪಂಗಾಯ, ಸುಳ್ಯ

contributor

Similar News