ಸೈಕಲ್ ಬಳಕೆ ಹೆಚ್ಚಲಿ

Update: 2023-12-05 07:25 GMT

ಪ್ರತೀ ವರ್ಷದ ಚಳಿಗಾಲ ಆರಂಭ ರಾಷ್ಟ್ರ ರಾಜಧಾನಿ ದಿಲ್ಲಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗುತ್ತದೆ, ಜನರ ಆರೋಗ್ಯವೂ ಹದಗೆಡುತ್ತದೆ. ವಾಯು ಮಾಲಿನ್ಯದಿಂದ ಶ್ವಾಸಕೋಶ, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ದಿಲ್ಲಿಯ ಮಾಲಿನ್ಯಕ್ಕೆ ವಾಹನಗಳ ಹೊಗೆ ಹೊರಸೂಸುವಿಕೆ, ಕಟ್ಟಡ ನಿರ್ಮಾಣದ ಧೂಳು, ನೆರೆರಾಜ್ಯ ಹರ್ಯಾಣ ಮತ್ತು ಪಂಜಾಬ್‌ನ ಕೃಷಿ ಭೂಮಿಯಲ್ಲಿ ಕೃಷಿ ತ್ಯಾಜ್ಯ ಸುಡುವುದು ಸೇರಿದಂತೆ ಇನ್ನಿತರ ಕಾರಣಗಳಿವೆ. ಆದರೆ, ಈ ಎಲ್ಲಾ ಸಮಸ್ಯೆಗಳ ಪೈಕಿ ವಾಹನಗಳಿಂದ ಉಂಟಾಗುವ ಮಾಲಿನ್ಯವು ಅತೀ ಮುಖ್ಯವಾದುದು. ದಿಲ್ಲಿಯಲ್ಲಿ ಒಟ್ಟಾರೆ 79 ಲಕ್ಷ ನೋಂದಣಿಯಾಗಿರುವ ವಾಹನಗಳು ಸದ್ಯಕ್ಕೆ ಬಳಕೆಯಲ್ಲಿವೆ. ವಾಯು ಮಾಲಿನ್ಯಕ್ಕೆ ವಾಹನಗಳ ಅತಿಯಾದ ಬಳಕೆಯು ಕೊಡುಗೆ ನೀಡುತ್ತಾ ಬಂದಿದೆ. ದೇಶದ ಮಹಾನಗರಗಳ ಪೈಕಿ ಬೆಂಗಳೂರು, ಮುಂಬೈ, ದಿಲ್ಲಿ, ಕೋಲ್ಕತಾ, ಪುಣೆ, ಹೈದರಾಬಾದ್, ಚೆನ್ನೈ ಹಾಗೂ ಅಹ್ಮದಾಬಾದ್ ಅತೀ ಹೆಚ್ಚು ವಾಹನ ಸಂಚಾರ ಸಮಸ್ಯೆ ಎದುರಿಸುತ್ತಿದೆ, ಈ ಮಹಾನಗರಗಳ ಪೈಕಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲೇ ಮೊದಲು. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಜೀವನದ ಒಂದಷ್ಟು ಭಾಗ ಟ್ರಾಫಿಕ್‌ನಲ್ಲೇ ಕಳೆದಂತೆ. ಲಂಡನ್ ಮಹಾನಗರ ನಂತರ ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಮನೆಯಲ್ಲಿ ದ್ವಿಚಕ್ರ ವಾಹನ, ಕಾರು ಇದ್ದರೆ ಪ್ರತಿಷ್ಠೆಯ ಸಂಕೇತವಾಗಿತ್ತು. ಜನಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ಸೈಕಲ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರು. ಅಂದಿನ ಜನ ಅಷ್ಟೇ ಆರೋಗ್ಯವಾಗಿದ್ದರು. ಕಾಲ ಬದಲಾದಂತೆಲ್ಲಾ ದ್ವಿಚಕ್ರ ವಾಹನ, ಕಾರುಗಳ ಸಂಖ್ಯೆ ಹೆಚ್ಚಾಗಿ, ಇಂದು ಸೈಕಲ್ ಅನ್ನು ಉಪಯೋಗಿಸುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ನಮ್ಮ ಬಾಲ್ಯದಲ್ಲಿ ನೆನಪಿರುವ ಹಾಗೇ ದಿನನಿತ್ಯ ಅಗತ್ಯ ವಸ್ತುಗಳನ್ನು ಕೊಳ್ಳಲು ನಾವೆಲ್ಲಾ ನಡೆದುಕೊಂಡೇ ಹೋಗುತ್ತಿದ್ದೆವು. ಆದರೆ, ಕಾಲ ಬದಲಾದಂತೆ ಇಂದು ಅಕ್ಕ-ಪಕ್ಕದ ಬೀದಿಗೂ ದ್ವಿಚಕ್ರ ವಾಹನ, ಕಾರನ್ನು ಬಳಸುತ್ತೇವೆ. ಬೈಸಿಕಲ್ ಅನ್ನು ಬಳಸುವುದು ಒಂಥರಾ ಕೀಳರಿಮೆ ಎನ್ನುವ ಹಾಗಿದೆ. ದೇಶದಲ್ಲಿ ವಿಐಪಿ ಸಂಸ್ಕೃತಿ/ಸಂಪ್ರದಾಯ ಇನ್ನೂ ಜೀವಂತವಾಗಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಅತೀ ಪ್ರಮುಖರು ಸಂಚರಿಸಿದರೆ, ಭದ್ರತೆ ನೆಪವೊಡ್ಡಿ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರವರು ಬೆಂಗಳೂರು ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣ ಮಾಡಿದ್ದು ಜನಪ್ರತಿನಿಧಿಯೊಬ್ಬರ ಮಾದರಿ ನಡೆಯಾಗಿದೆ. ಈ ನಿಟ್ಟಿನಲ್ಲಿ ಸಚಿವ ಕೃಷ್ಣ ಬೈರೇಗೌಡರವರ ನಡೆ ಇತರ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಹೆಚ್ಚಿನದಾಗಿ ಸಾರ್ವಜನಿಕರು ಅನುಸರಿಸುವಂತಾಗಲಿ.

ನೆದರ್‌ಲ್ಯಾಂಡ್ಸ್‌ನಲ್ಲಿ ಪ್ರತೀ ಮನೆಗಳಲ್ಲಿ ಸೈಕಲ್‌ಗಳನ್ನು ಹೊಂದುವುದು ಪ್ರತಿಷ್ಠೆಯ ಸಂಕೇತ. ನೆದರ್‌ಲ್ಯಾಂಡ್ಸ್‌ನ ಪ್ರಧಾನಿ, ಕಚೇರಿಗೆ ಹೋಗುವಾಗಲು ಸೈಕಲ್ ಬಳಸುತ್ತಾರೆಂದರೆ ಆ ದೇಶದಲ್ಲಿ ಸೈಕಲ್‌ಗೆ ಎಷ್ಟು ಮಹತ್ವ ಇದೆ ಎಂದು ತಿಳಿಯಬಹುದು. ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪಿ.ಎಸ್. ವಸ್ತ್ರದ್ ಅವರು ವಾರದಲ್ಲಿ ಒಂದು ದಿನ ಸೈಕಲ್‌ನಲ್ಲಿ ಕಚೇರಿಗೆ ಬರುತ್ತಿದ್ದರು ಹಾಗೂ ಇತರರೂ ಅನುಸರಿಸುವಂತೆ ಸೂಚಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಹನ ಬಳಕೆಯಿಂದಾಗಿ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ವಾಹನ ದಟ್ಟಣೆ, ಸುಗಮ ಸಂಚಾರಕ್ಕೆ ತೊಂದರೆಯಾಗುವುದಲ್ಲದೆ ವಾಯು ಮಾಲಿನ್ಯವೂ ಉಂಟಾಗುತ್ತಿರುವುದರಿಂದ ನಿತ್ಯಜೀವನದಲ್ಲಿ ಸಾಧ್ಯವಾದಷ್ಟು ನಾವೆಲ್ಲರೂ ಸೈಕಲ್ ಬಳಸುವುದನ್ನು ರೂಢಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ನಮ್ಮ ಧೋರಣೆ ಬದಲಾಗಬೇಕು. ಸಾರ್ವಜನಿಕ ಸಾರಿಗೆ, ಮೆಟ್ರೋ ಹಾಗೂ ಸೈಕಲ್ ಬಳಕೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೆಚ್ಚಾಗಿ ವಾಯು ಮಾಲಿನ್ಯ ಕಡಿಮೆಯಾಗಲಿದೆ. ಆರೋಗ್ಯ ವೃದ್ಧಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಸಾದ್ ಜಿ.ಎಂ. ಮೈಸೂರು

contributor

Similar News