ಇಂಡಿಯಾಗೆ ಬೇಕಿದೆ ಇಂದಿರಾ ಚಿಂತನೆ
ಭುವನೇಶ್ವರದ ಕಾರ್ಯಕ್ರಮವೊಂದರಲ್ಲಿ ಇಂದಿರಾಗಾಂಧಿ ಮಾಡಿದ ಕೊನೆಯ ಭಾಷಣದ ಒಂದು ಸಾಲು ಹೀಗಿದೆ: ‘‘ನಾನು ಇಂದು ಇಲ್ಲಿದ್ದೇನೆ, ನಾಳೆ ಇರದೇ ಹೋಗಬಹುದು. ಆದರೆ ರಾಷ್ಟ್ರದ ಹಿತಾಸಕ್ತಿಯನ್ನು ಕಾಯುವ ಜವಾಬ್ದಾರಿ ಪ್ರತೀ ಭಾರತೀಯರ ಹೆಗಲ ಮೇಲಿದೆ.’’ ದೇಶದ ಘನತೆ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ಬದುಕಿದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ನಾವೆಲ್ಲರೂ ಈ ಮಾತನ್ನು ಸ್ಮರಿಸಿಕೊಳ್ಳಬೇಕು.
ರಾಜಕಾರಣಿಗೆ ಯಾವುದೇ ಸಮಯದ ತಿರುವಿನಲ್ಲಿ ದಿಢೀರನೆ ಅಧಿಕಾರ ಬಂದುಬಿಡಬಹುದು. ಹಾಗೆ ಬಂದ ಅಧಿಕಾರ, ನಿರ್ದಿಷ್ಟ ಹೊಣೆಯನ್ನೂ ಹೊತ್ತುಕೊಂಡು ಬಂದುಬಿಡುತ್ತದೆ. 1966ರಲ್ಲಿ ಓರ್ವ ಮಹಿಳೆ ಪ್ರಧಾನಿಯಾದಾಗ ನಿಜಕ್ಕೂ ಈ ದೇಶ ನಿರೀಕ್ಷೆಯಂತೆ ಪ್ರಗತಿ ಸಾಧಿಸುವುದೇ ಎಂಬ ಅನುಮಾನ ಅನೇಕರಲ್ಲಿತ್ತು. ನಂತರದ ಹದಿನೆಂಟು ವರ್ಷ, ತಮ್ಮ ಕೊನೆಯ ಉಸಿರವರೆಗೂ ಈ ಮಹಿಳಾ ಪ್ರಧಾನಿ ಭಾರತದ ಸಾರ್ವಭೌಮತೆ, ಸಮಗ್ರತೆ ಹಾಗೂ ಪ್ರಜಾಸತ್ತಾತ್ಮಕ ಆಶಯಗಳನ್ನು ಈಡೇರಿಸಿ ಸುಭದ್ರ ದೇಶ ಕಟ್ಟಿದರು.
ಅವರೇ ಇಂದಿರಾ ಪ್ರಿಯದರ್ಶಿನಿ ಗಾಂಧಿ! ಈ ಹೆಸರು ಯಾವ ಮಟ್ಟಿಗೆ ಪ್ರಭಾವಶಾಲಿಯಾಗಿತ್ತು ಎಂದರೆ, ‘ಇಂಡಿಯಾ ಎಂದರೆ ಇಂದಿರಾ’ ಘೋಷವಾಕ್ಯ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಭಾರತೀಯರು ಹಾಗೂ ಜಗತ್ತು ಇಂದಿರಾಗಾಂಧಿಯನ್ನು ಕೇವಲ ಪಂಡಿತ್ ಜವಹರಲಾಲ್ ನೆಹರೂ ಅವರ ಮಗಳಾಗಿ ನೋಡಲಿಲ್ಲ. ತಾನು ಮಾಜಿ ಪ್ರಧಾನಿಯ ಪುತ್ರಿ ಎನ್ನುವ ಚಿತ್ರಣವನ್ನು ಇಂದಿರಾಗಾಂಧಿ ಮೂಡಿಸಿಕೊಳ್ಳಲಿಲ್ಲ. ಬದಲಾಗಿ, ಸ್ವತಂತ್ರ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ದಿಟ್ಟ ರಾಜಕಾರಣಿ ಎನ್ನುವುದನ್ನು ಕಾಯಕದಿಂದಲೇ ಸ್ಪಷ್ಟಪಡಿಸಿದರು.
ತಂದೆ ಪ್ರಧಾನಿಯಾಗಿದ್ದಾಗಲೇ ಇಂದಿರಾಗಾಂಧಿ ಅವರ ಜೊತೆ ಒಡನಾಡಿ ರಾಜಕೀಯದ ಪಟ್ಟುಗಳನ್ನು, ಜನರ ಆಕಾಂಕ್ಷೆಗಳನ್ನು, ದೇಶಕ್ಕೆ ಬೇಕಿರುವ ಅಭಿವೃದ್ಧಿಯ ಅರ್ಥವನ್ನು ಅರಿತುಕೊಂಡರು. ಲಾಲ್‌ಬಹಾದ್ದೂರ್‌ಶಾಸ್ತ್ರಿಯವರ ನಂತರ ಇಂದಿರಾಗಾಂಧಿ ಅವರಿಗೆ ಪ್ರಧಾನಿಯಾಗುವ ಸುಯೋಗ ದೊರೆತರೂ, ಪಿತೃಪ್ರಧಾನ ಮನಸ್ಥಿತಿ, ಪಕ್ಷದ ಒಳಕಲಹ, ದೇಶಕ್ಕೆ ಸಮರ್ಥ ನಾಯಕರ ಕೊರತೆ ಇದೆ ಎಂಬ ಮನೋಭಾವ ಮೊದಲಾದ ಸವಾಲುಗಳು ಎದುರಿಗಿತ್ತು. ಕೆಲವೇ ವರ್ಷಗಳಲ್ಲಿ ಈ ಸವಾಲುಗಳನ್ನು ಮೆಟ್ಟಿ ನಿಂತ ಅವರು, ಮಹಿಳೆಯೂ ದೇಶವನ್ನು ಆಳಬಲ್ಲಳು ಎಂದು ತೋರಿಸಿಕೊಟ್ಟರು.
ಕೃಷಿಗೆ ಹಸಿರು, ಆರ್ಥಿಕತೆಗೆ ಉಸಿರು
ಕೃಷಿಯೇ ದೇಶದ ಆಧಾರ ಎಂದು ಅರಿತಿದ್ದ ಇಂದಿರಾಗಾಂಧಿ, ಹಸಿರು ಕ್ರಾಂತಿಗೆ ಚುರುಕು ನೀಡಿ ಅದನ್ನೇ ಸರಕಾರದ ಆದ್ಯತೆಯಾಗಿಸಿದರು. ಹ್ರೈಬ್ರಿಡ್ ಬೀಜ, ಕೃಷಿ ಆದಾಯಕ್ಕೆತೆರಿಗೆ ವಿನಾಯಿತಿ, ಸಹಾಯಧನ, ಸಾಲ, ಗೊಬ್ಬರ ಪೂರೈಕೆ, ವಿದ್ಯುತ್‌ಹಾಗೂ ನೀರಾವರಿ ಮೂಲಕ ಕೃಷಿ ಉತ್ಪಾದನೆ ಗಣನೀಯ ಏರಿಕೆ ಕಂಡಿತು. 1967-68 ಹಾಗೂ 1970-71ನೇ ಸಾಲಿನ ನಡುವೆ ಆಹಾರ ಬೆಳೆಗಳ ಉತ್ಪಾದನೆ ವಾಡಿಕೆಗಿಂತ ಶೇ. 37ಕ್ಕೆ ಏರಿಕೆಯಾಯಿತು. 1966ರಲ್ಲಿ 1.03 ಕೋಟಿ ಟನ್‌ನಷ್ಟಿದ್ದ ಆಹಾರ ಉತ್ಪನ್ನಗಳ ಆಮದು 1970ರ ವೇಳೆಗೆ 36 ಲಕ್ಷ ಟನ್‌ಗೆ ಇಳಿಯಿತು ಎಂದರೆ ಅದೊಂದು ಐತಿಹಾಸಿಕ ಸುಧಾರಣೆ.
2008ರಲ್ಲಿ ಜಗತ್ತಿನಲ್ಲಿ ಆರ್ಥಿಕ ಕುಸಿತ ಉಂಟಾದಾಗ ದೇಶಕ್ಕೆ ಹೆಚ್ಚು ಹಾನಿ ಉಂಟಾಗಲಿಲ್ಲ. ಇದಕ್ಕೆ ಕಾರಣವನ್ನು ನೋಡಲು ಹೊರಟರೆ ಸಿಗುವುದು 1969ರಲ್ಲಿ ಇಂದಿರಾಗಾಂಧಿ ಮಾಡಿದ್ದ ಬ್ಯಾಂಕ್‌ಗಳ ರಾಷ್ಟ್ರೀಕರಣ. ಈ ಕ್ರಮದಿಂದ ರೈತರು ಹಾಗೂ ಸಣ್ಣ ಉದ್ಯಮಿಗಳು ಆರ್ಥಿಕ ನೆರವು ಪಡೆಯುವಂತಾಯಿತು. ಕುಗ್ರಾಮದಲ್ಲಿರುವ ವ್ಯಕ್ತಿ ಕೂಡ ಬ್ಯಾಂಕ್‌ನ ಲಾಭ ಪಡೆಯುವಂತಾಯಿತು. ಇಂದು ಆರ್ಥಿಕ ಸುಧಾರಣೆಯ ಹೆಸರಲ್ಲಿ ದೇಶದಲ್ಲಿ ಜಾರಿಯಾಗುತ್ತಿರುವ ನೀತಿಗಳು, ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶದ ಹತ್ತಿರಕ್ಕೂ ನಿಲ್ಲುತ್ತಿಲ್ಲ ಎಂಬುದು ಖೇದದ ಸಂಗತಿ.
ವನ್ಯಜೀವಿ ಸಂರಕ್ಷಣೆ ಹೆಸರಲ್ಲಿ ಚೀತಾಗಳನ್ನು ಅವೈಜ್ಞಾನಿಕವಾಗಿ ಸಲಹಿ ಫೋಟೊಶೂಟ್‌ಮಾಡುವ ಟ್ರೆಂಡ್ ಹೆಚ್ಚಿದೆ. ಆದರೆ ಇಂದಿರಾಗಾಂಧಿಯವರು 60-70ರ ದಶಕದಲ್ಲೇ ಇಂಟರ್‌ನ್ಯಾಷನಲ್‌ಕನ್ಸರ್ವೇಶನ್‌ಯೂನಿಯನ್ ಆಯೋಜನೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ರಚನೆಗೆ ಕ್ರಮ, ಪ್ರಾಜೆಕ್ಟ್ ಟೈಗರ್ ಜಾರಿ, ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಕ್ರಮ ಮೊದಲಾದ ಕ್ರಮಗಳನ್ನು ವಹಿಸಿದ್ದರು. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಸಂರಕ್ಷಣೆ ಸೇರಿದಂತೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಹೆಚ್ಚು ಅರಿವು ಬರುತ್ತಿದೆ. ಆದರೆ ಇಂದಿರಾಗಾಂಧಿ ಬಹಳ ಹಿಂದೆಯೇ ಈ ಚಿಂತನೆಯನ್ನು ಹರಿಬಿಟ್ಟಿದ್ದರು.
ಭಾರತವನ್ನು ಶಕ್ತಿಯುತವಾಗಿಸಲು ಪರಮಾಣು ಶಕ್ತಿ ಕಾರ್ಯಕ್ರಮ, ಕ್ಷಿಪಣಿ ತಯಾರಿಕಾ ಕಾರ್ಯಕ್ಕೆ ಬೆಂಬಲ, ಹಣದುಬ್ಬರ ನಿಯಂತ್ರಣ, 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಅವರ ಹಲವಾರು ಜನಸ್ನೇಹಿ, ದೇಶ ಸಬಲೀಕರಣದ ಕಾರ್ಯಗಳು ವಿರೋಧಿಗಳ ಮೆಚ್ಚುಗೆಯನ್ನೂ ಪಡೆದಿತ್ತು. ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿಯವರು ಕೂಡ ದಿಟ್ಟ ಮನಸ್ಸಿನ ಇಂದಿರಾಗಾಂಧಿಯವರನ್ನು ‘ದುರ್ಗೆ’ ಎಂದು ಹೊಗಳಿದ್ದು ಇಲ್ಲಿಸ್ಮರಣಾರ್ಹ.
ಇಂದಿರಾಗಾಂಧಿಯವರು ‘ಬಡತನ ನಿರ್ಮೂಲನೆ’ ಕಾರ್ಯಕ್ರಮದ ಮೂಲಕ ಜನರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್‌ಸರಕಾರ,ಹಿಂದಿನ ಅವಧಿಯಲ್ಲಿ ‘ಇಂದಿರಾ ಕ್ಯಾಂಟೀನ್’ ಯೋಜನೆ ಜಾರಿ ಮಾಡಿ ಅದು ಯಶಸ್ವಿಯಾಗಿ ನಡೆಯುತ್ತಿದೆ. ಈ ಅವಧಿಯಲ್ಲಿ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿಯಂತಹ ಗ್ಯಾರಂಟಿ ಕಾರ್ಯಕ್ರಮಗಳು ಜನಪ್ರಿಯತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಇಂತಹ ನವ ಚಿಂತನೆಯ ಕಾರ್ಯಕ್ರಮಗಳಿಗೆ ಇಂದಿರಾಗಾಂಧಿಯವರ ಬಡತನ ನಿರ್ಮೂಲನೆಯ ಕಾರ್ಯಕ್ರಮವೇ ಪ್ರೇರಣೆಯಾಗಿ ಕೆಲಸ ಮಾಡಿದೆ.
ಕಠಿಣ, ನೇರ, ನಿಷ್ಠುರ
1971 ರಲ್ಲಿ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದ ನಡುವೆ ಯುದ್ಧ ಆರಂಭವಾದಾಗ ಮಧ್ಯಪ್ರವೇಶಿಸಿದ ಭಾರತ, ಬಾಂಗ್ಲಾದೇಶದ ರಚನೆಗೆ ನಾಂದಿ ಹಾಡಿತು. ಈ ಯುದ್ಧದಲ್ಲಿ 93 ಸಾವಿರ ಪಾಕ್‌ಯೋಧರು ಭಾರತ ಸೇನೆಗೆ ಶರಣಾಗಿದ್ದು, ಮಹಾಯುದ್ಧದ ಬಳಿಕ ಇತಿಹಾಸದಲ್ಲೇ ದೊಡ್ಡ ದಾಖಲೆ ಎಂದು ಹೆಸರಾಯಿತು. ಅಂದು ಇಂದಿರಾಗಾಂಧಿ ಕೈಗೊಂಡ ಮುಲಾಜಿಲ್ಲದ ತೀರ್ಮಾನದಿಂದ ಭಾರತದ ಪೂರ್ವ ಭಾಗದಲ್ಲಿ ಶಾಂತಿ ನೆಲೆಯಾಯಿತು. ಅಲ್ಲಿಗೆ ದೇಶದ ಮಗ್ಗುಲು ಮುಳ್ಳೊಂದನ್ನು ಚಿವುಟಿ ಬಿಸಾಡಿದಂತಾಗಿತ್ತು.
ಇದೇ ರೀತಿ ದೇಶದ ಸಮಗ್ರತೆಗೆ ಧಕ್ಕೆ ಬಂದಾಗ ಇಂದಿರಾಗಾಂಧಿಯವರು ಅಮೃತಸರದ ಸ್ವರ್ಣಮಂದಿರಕ್ಕೆ ಅನಿವಾರ್ಯವಾಗಿ ಸೇನೆ ನುಗ್ಗಿಸಿ ಭಯೋತ್ಪಾದಕರನ್ನು ಸದೆಬಡಿದರು. ಬಾಹ್ಯ ಶಕ್ತಿಗಳಿಂದ ತೊಂದರೆಯಾದಾಗ ತೀವ್ರವಾದಿ ನಿಲುವು ತಳೆಯುವಲ್ಲಿ ಇಂದಿರಾಗಾಂಧಿಯನ್ನು ಸರಿಗಟ್ಟುವ ನಾಯಕರು ದೇಶಕ್ಕೆ ಈವರೆಗೂ ದೊರೆತಿಲ್ಲ. ಅಂತಹ ಉಕ್ಕಿನ ಮನಸ್ಥಿತಿಯಿಂದಲೇ ಅವರು ‘ಸರ್ವಾಧಿಕಾರಿ’ ಎಂಬ ಸುಳ್ಳು ಆರೋಪ ಹೊತ್ತುಕೊಳ್ಳಬೇಕಾಗಿ ಬಂದಿದ್ದು ಮಾತ್ರ ದುರದೃಷ್ಟ!
ಅಷ್ಟೆಲ್ಲ ದಿಟ್ಟತನ ತೋರಿದ್ದ ಇಂದಿರಾಗಾಂಧಿ ತಮ್ಮ ಪ್ರಾಣದ ಬಗ್ಗೆ ಅಸಡ್ಡೆ ತೋರಿದ್ದು ಏಕೆ ಎನ್ನುವುದು ನಿಗೂಢ. ಪ್ರಾಣಾಪಾಯ ಇರುವುದರಿಂದ ಅಂಗರಕ್ಷಕರನ್ನು ಬದಲಿಸಬೇಕು ಎನ್ನುವ ಸಲಹೆಯನ್ನು ಅವರಿಗೆ ನೀಡಿದ್ದಾಗ, ಇಂತಹ ಹೇಡಿ ಕೆಲಸ ತಾನು ಮಾಡಲಾರೆ ಎಂದು ಉತ್ತರಿಸಿದ್ದರಂತೆ!
ಭುವನೇಶ್ವರದ ಕಾರ್ಯಕ್ರಮವೊಂದರಲ್ಲಿ ಇಂದಿರಾಗಾಂಧಿ ಮಾಡಿದ ಕೊನೆಯ ಭಾಷಣದ ಒಂದು ಸಾಲು ಹೀಗಿದೆ: ‘‘ನಾನು ಇಂದು ಇಲ್ಲಿದ್ದೇನೆ, ನಾಳೆ ಇರದೇ ಹೋಗಬಹುದು. ಆದರೆ ರಾಷ್ಟ್ರದ ಹಿತಾಸಕ್ತಿಯನ್ನು ಕಾಯುವ ಜವಾಬ್ದಾರಿ ಪ್ರತೀ ಭಾರತೀಯರ ಹೆಗಲ ಮೇಲಿದೆ.’’
ದೇಶದ ಘನತೆ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ಬದುಕಿದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ನಾವೆಲ್ಲರೂ ಈ ಮಾತನ್ನು ಸ್ಮರಿಸಿಕೊಳ್ಳಬೇಕು. ಅವರ ದಾರಿಯಲ್ಲಿ ಸಾಗಿ ಆಡಳಿತ ನಡೆಸುವುದೇ ಅವರ ಜನ್ಮದಿನಕ್ಕೆ ನಾವು ಕೊಡಬಹುದಾದ ಉಡುಗೊರೆ.