ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನ್ಯಾಯ; ಪದವಿ ವಿದ್ಯಾರ್ಥಿಗಳ ಆರೋಪ

Update: 2023-11-18 11:16 GMT

ಬೆಂಗಳೂರು: ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರಕ್ಕೆ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2023-24ರ ಅರ್ಜಿಯನ್ನು ಸೆ.6ರಿಂದ 16ರೊಳಗೆ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ವಿಶೇಷ ಎಂದರೆ ಅಂದು ಕುವೆಂಪು, ದಾವಣಗೆರೆ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪದವಿ ಪರೀಕ್ಷೆ ಫಲಿತಾಂಶ ಹೊರ ಬರುವುದರೊಳಗೆ ಅರ್ಜಿ ಸಲ್ಲಿಕೆಗೆ ದಿನಾಂಕ ಮುಕ್ತಾಯ ಗೊಂಡಿತ್ತು. ಅದರಲ್ಲೂ ಕೇವಲ 10 ದಿನದ ಕಾಲಾವಕಾಶ ನೀಡಲಾಗಿದೆ.

ಇದರಿಂದ ಸಾವಿರಾರು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗೆ ಉಚಿತ ತರಬೇತಿ ಪಡೆಯಲಿಚ್ಛಿಸಿದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಶಿವಮೊಗ್ಗದ ಕುವೆಂಪು ವಿವಿ,ದಾವಣಗೆರೆ ವಿವಿ ಹಾಗೂ ಕಲಬುರಗಿ ವಿವಿಯಲ್ಲೂ ಅಕ್ಟೋಬರ್ ತಿಂಗಳಿನಲ್ಲಿ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಮುಖ್ಯವಾಗಿ ಸರಕಾರದ ವಿದ್ಯಾರ್ಥಿ ವೇತನ ನೀಡುವ ಯೋಜನೆಗಳಲ್ಲಿ ಕನಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದು ಮುಗಿದ ಬಳಿಕವೂ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಿಸಿ ಮತ್ತಷ್ಟು ಅವಕಾಶ ನೀಡುವುದು ಸಾಮಾನ್ಯ. ಆದರೆ ಪ್ರಸ್ತುತ ಸರಕಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಅರ್ಜಿ ಸಲ್ಲಿಸಲು ಕೇವಲ 10 ದಿನ ಕಾಲಾವಕಾಶ ನೀಡಿರುವುದು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರ ಈ ಅವ್ಯವಸ್ಥೆ ಕುರಿತು ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಎಚ್.ಮೊಕಾಶಿಯವರು ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಮೂಲಕ ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್, ವಿಶೇಷ ಕರ್ತವ್ಯಧಿಕಾರಿ ಹಸನ್ ಸಾಹೇಬ್ ರವರ ಗಮನಕ್ಕೆ ತರಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಲಾಗಿದೆ.

ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಅರ್ಜಿ ಆಹ್ವಾನಕ್ಕೆ 10 ದಿನದ ಕಾಲಾವಕಾಶ ನೀಡಿದ್ದು ಅನ್ಯಾಯ. ಹಲವು ವಿವಿಗಳಲ್ಲಿ ಪರೀಕ್ಷೆ ಫಲಿತಾಂಶ ಬರುವುದರೊಳಗೆ ಅರ್ಜಿ ಸಲ್ಲಿಕೆ ಮುಗಿಸಿರುವುದು ಬಡ ಅಲ್ಪಸಂಖ್ಯಾತರಿಗೆ ಮಾಡಿದ ಮೋಸ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಲಾವಕಾಶ ನೀಡಬೇಕು.

-ಸಾದಿಕ್ ಕಾರ್ಗಲ್, ಸಾಮಾಜಿಕ ಕಾರ್ಯಕರ್ತರು ಶಿವಮೊಗ್ಗ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಇಮ್ರಾನ್ ಸಾಗರ್

contributor

Similar News