ಧಾರ್ಮಿಕ ಮೀಸಲಾತಿ ಸಂವಿಧಾನ ವಿರೋಧಿಯೇ?
ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ವಾಗಿ ಹಿಂದುಳಿದಿದ್ದಾರೆ ಎಂದು ಮೀಸಲಾತಿ ನೀಡಲು ಯಾವುದೇ ಬಾಧಕವಿಲ್ಲ ಮತ್ತು ಅದು ಸಂವಿಧಾನ ವಿರೋಧಿಯೂ ಅಲ್ಲ ಎಂದೂ ಇಷ್ಟೆಲ್ಲಾ ನ್ಯಾಯಾಲಯಗಳ ತೀರ್ಪಿನ ದೃಷ್ಟಾಂತಗಳಿದ್ದರೂ ಭಾಜಪದ ನೇತಾರರು ಮಾತ್ರ ಮುಸ್ಲಿಮರ ವಿರುದ್ಧ ದ್ವೇಷ ಭಾವನೆಯನ್ನು ಹೊಂದಿರುವುದು ಮತ್ತು ಸಮಯ ಬಂದಾಗಲೆಲ್ಲ ಮುಸ್ಲಿಮರ ಮೇಲೆ ಅನಿಷ್ಟಕಾರಕ ಮಾತುಗಳನ್ನು ಹೇಳಿ ಅವರನ್ನು ಘಾಷಿಗೊಳಿಸದೆ ಅವರು ನಿದ್ದೆಗೆ ಜಾರುವುದಿಲ್ಲ.
ಕೇಂದ್ರ ಗೃಹ ಸಚಿವರು ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ ಮುಖಂಡರೂ ಆಗಿರುವ ಅಮಿತ್ ಶಾ ಅವರು ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲಿ ತಮ್ಮ ಚುನಾವಣಾ ಭಾಷಣದಲ್ಲಿ ಭಾರತೀಯ ಜನತಾ ಪಕ್ಷವೂ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ನೀಡಿರುವ ಧಾರ್ಮಿಕ ಮೀಸಲಾತಿ ಕೋಟಾ ಶೇ.4 ಅನ್ನು ಕಿತ್ತು ಅದನ್ನು ಇತರ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ ಎಂದು ಮುದ್ರಣ ಮಾಧ್ಯಮಗಳಲ್ಲಿ ವರದಿ ಆಗಿದೆ.
ಗೃಹ ಸಚಿವರು ಮುಸ್ಲಿಮರ ಮೇಲಿರುವ ಕೇವಲ ದ್ವೇಷಕ್ಕಾಗಿ ಈ ಮಾತನ್ನು ಹೇಳಿರುವರೇ ಅಥವಾ ಅದಕ್ಕೆ ಸಾಂವಿಧಾನಿಕವಾಗಿ ನಿಜಕ್ಕೂ ವಿರೋಧ ವಿದೆಯೇ? ಎಂಬ ಪ್ರಶ್ನೆ ವಿಮರ್ಶೆಗೆ ಅರ್ಹವಾಗಿದೆ.
ಆಂಧ್ರ ಪ್ರದೇಶದ(ತೆಲಂಗಾಣ)ಮುಸ್ಲಿಮರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷ ಹಿರಿಯ ಐಎಎಸ್ ಅಧಿಕಾರಿ ದಿ. ಪಿ.ಎಸ್. ಕೃಷ್ಣನ್ ನೀಡಿರುವ ವರದಿಯಲ್ಲಿ, ಮುಸ್ಲಿಮರು ಭಾರತ, ದಕ್ಷಿಣ ಭಾರತ ಮತ್ತು ಆಂಧ್ರ ಪ್ರದೇಶಗಳಲ್ಲಿ ಅವರ ಹುಟ್ಟು ಮತ್ತು ಬೆಳವಣಿಗೆ ಕುರಿತು ವಿಸ್ತೃತವಾಗಿ ದಾಖಲಿಸಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲಾ, ಇಂಜಿನಿಯರಿಂಗ್, ಎಂಬಿಬಿಎಸ್, ಮೆಡಿಕಲ್ ಪಿ.ಜಿ., ಬಿಡಿಎಸ್ ಮುಂತಾದವುಗಳನ್ನು ವ್ಯಾಪಕವಾಗಿ ಮತ್ತು ಆಳವಾಗಿ ವಿಮರ್ಶಿಸಿದ್ದಾರೆ. ಅದೂ ಅಲ್ಲದೆ, ಕೆಲವು ಪ್ರಮುಖ ಹುದ್ದೆಗಳ ನೇಮಕಗಳ ತೌಲನಿಕ ಅಧ್ಯಯನದಲ್ಲಿ ಅವರ ಜನಸಂಖ್ಯೆಗೆ ಹೋಲಿಸಿದರೆ, ಅಜಗಜಾಂತರವಿರುವುದನ್ನು ಒತ್ತಿ ಹೇಳಿರುತ್ತಾರೆ. ಅಷ್ಟೇ ಅಲ್ಲ, ಅನೇಕ ಆಯೋಗಗಳ ವರದಿಗಳನ್ನೂ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದ್ದಾರೆ.
ಮುಸ್ಲಿಮರ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆಯೂ ಅನೇಕ ತಜ್ಞರು ಅಧ್ಯಯನ ಮಾಡಿ ದಾಖಲಿಸಿರುವ ದೃಷ್ಟಾಂತಗಳನ್ನು ಕೂಡ ಪರಿಗಣಿಸಿದ್ದಾರೆ. ತಜ್ಞರಲ್ಲಿ ಅತಿ ಮುಖ್ಯವಾಗಿ, ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ. ಇಕ್ಬಾಲ್ ಎ. ಅನ್ಸಾರಿ ಅವರು ಹೇಳಿರುವಂತೆ ಇಂದಿನ ದಿನಗಳಲ್ಲಿ ಭಾರತೀಯ ಬಹು ಸಂಖ್ಯಾತ ಮುಸ್ಲಿಮರಲ್ಲಿ ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳು ಮೂಲತಃ ಅವರ ಸಾಮಾಜಿಕ ಕಸುಬಿನ ಬಂಧ ಅವರ ಶಿಕ್ಷಣ ಹಿಂದುಳಿಯಲು ಮತ್ತು ಅದು ಶಾಶ್ವತವಾಗಿ ಸ್ಥಿರಗೊಳ್ಳಲು ಕಾರಣವಾಗಿದೆ. ಅಲ್ಲದೆ ಚಿಂತಕ ಅಶ್ಫಾಖ್ ಹುಸೇನ್ ಅನ್ಸಾರಿ ಅವರ ಪ್ರಕಾರ, ಅಲ್ಪಸಂಖ್ಯಾತರಲ್ಲಿ ಬಹುತೇಕರು ಹಿಂದೂ ಧರ್ಮದಿಂದ ಮತಾಂತರ ಹೊಂದಿದವರು. ಅವರನ್ನು ಸ್ಥಳ ಜನ್ಯ ಮುಸ್ಲಿಮ್, ಕ್ರೈಸ್ತರು ಅಥವಾ ಸಿಖ್ಖರು ಎಂದು ಕರೆಯುತ್ತಾರೆ. ಅವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಹಿಂದೂಗಳ ತಳ ಸಮುದಾಯಗಳಿಂದ ಮತಾಂತರವಾದವರು. ಕಡಿಮೆ ಜನಸಂಖ್ಯೆಯ ಕೆಲವರು ನೇರವಾಗಿ ಅರಬ್, ಇರಾನ್, ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ವಲಸೆ ಬಂದವರ ವಂಶಜರು ಎಂದು ಹೇಳಿಕೊಳ್ಳುತ್ತಾರೆ; ಮತ್ತೆ ಕೆಲವರು ಮೇಲ್ಜಾತಿಯ ಹಿಂದೂಗಳಿಂದ ಪರಿವರ್ತಿತರಾದವರು ಎಂದೂ ಹೇಳಿಕೊಳ್ಳುತ್ತಾರೆ.
ದಿ. ಪಿ.ಎಸ್. ಕೃಷ್ಣನ್ ಅವರು 2007ರಲ್ಲಿ ತಮ್ಮ ಅಧ್ಯಯನ ಆಧಾರಿತ ಶಿಫಾರಸಿನಲ್ಲಿ 14 ಮುಖ್ಯ ಜಾತಿಗಳು ಹಾಗೂ ಉಪ ಪಂಗಡಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮರ ಪಟ್ಟಿಯಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ಅತ್ತರ್ ಸಾಹೇಬಲು, ಅತ್ತರೊಳ್ಳು, ಚಕ್ಕೆಟಕರೆ, ಕುಕ್ಕುಕೊಟ್ಟೆ ಜಿಂಕಾ ಸಾಹೇಬಲು, ಧೋಬಿ ಮುಸ್ಲಿಮ್, ದುರ್ಗಾಚಕ್ಲ, ತುರ್ಕ ಸಕಲ, ಫಕೀರ್, ಫಕೀರ್ ಬುಡುಬುಡುಕಿ, ಗಾರುಡಿ ಮುಸ್ಲಿಮ್, ಗೋಸಾಂಗಿ ಮುಸ್ಲಿಮ್, ಹಜಮ್, ನವಿದ್ ಮುಸ್ಲಿಮ್, ಲಬ್ಬಿ, ಕಾಟಿಕ್, ಕಸಬ್ ಇತ್ಯಾದಿ. ನ್ಯಾಯಾಲಯದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಶೇ.4ರಷ್ಟು ಮೀಸಲಾತಿ ಕೋಟಾವನ್ನು ಶಿಫಾರಸು ಮಾಡಿರುತ್ತಾರೆ.
ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಂಡ ಈ ಮೀಸಲಾತಿಯನ್ನು ಕೂಡ ಫೆಬ್ರವರಿ 2010 ರಲ್ಲಿ ಆಂಧ್ರ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಮೀಸಲಾತಿಯು ಧಾರ್ಮಿಕತೆಯನ್ನು ಒಳಗೊಂಡಿದೆ ಎಂದು ತಳ್ಳಿ ಹಾಕುತ್ತದೆ. ಸರ್ವೋಚ್ಚ ನ್ಯಾಯಾಲಯ ಮೇಲ್ಮನವಿ ಯಲ್ಲಿ, ಅಂದಿನ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯ ಪೀಠ ತಡೆ ಆಜ್ಞೆ ನೀಡಿ, ಮುಂದಿನ ಕೊನೆಯ ತೀರ್ಪಿನವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಆಜ್ಞಾಪಿಸಿದೆ.
ಪ್ರಸಕ್ತ ಕರ್ನಾಟಕ ಮತ್ತು ಕೇಂದ್ರ ಸರಕಾರದ ಆಯೋಗಗಳು ಮತ್ತು ನ್ಯಾಯಾಲಯಗಳ ತೀರ್ಪುಗಳು ಮುಸ್ಲಿಮ್ ಮತ್ತು ಮುಸ್ಲಿಮ್ ಉಪ ಪಂಗಡಗಳ ಕುರಿತು ತಳೆದಿರುವ ಅಭಿಪ್ರಾಯಗಳ ಅವಲೋಕನ:
ಕಾಕಾ ಕಾಲೆಲ್ಕರ್ ಆಯೋಗ-ಮುಸ್ಲಿಮರನ್ನಾಗಲಿ ಅಥವಾ ಕ್ರೈಸ್ತರನ್ನಾಗಲಿ ಅಥವಾ ಯಾವುದೇ ಧರ್ಮದ ಅಲ್ಪಸಂಖ್ಯಾತ ಕೋಮುಗಳನ್ನು ಪೂರ್ಣವಾಗಿ ಹಿಂದುಳಿದವರು ಎಂದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಆದರೆ ಕೆಲವು ಉಪ ಪಂಗಡಗಳಲ್ಲಿ ಕೆಲವನ್ನು ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಿದೆ. ಅವೆಂದರೆ-ಅನ್ಸರ್, ಜುಲಹಾ, ಮೋಮಿನ್, ನದಾಫ್, ಮನ್ಸೂರಿ, ಕಸಬ್, ಚೂರಿಹಾರ್, ದರ್ಜಿ,ಮಿರಾಸಿ, ಹಲಾಲ್ ಕೋರ್ ಮುಂತಾದವು.
ಮಂಡಲ್ ಆಯೋಗವೂ ಕೂಡ ಕೆಲವು ಕಸುಬು ಆಧಾರಿತ ಮುಸ್ಲಿಮ್ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದೆ. ಮಾಪಿಳ್ಳ, ಲಭೈ, ದೂದೆಕುಲ, ಲಡಾಫ್, ಪಿಂಜಾರಿ, ಕಸಾಯಿ, ಚಪ್ಪರ್ ಬಂದ್, ಟಕರಾಸ್, ಜರ್ಗರ್ ಇತ್ಯಾದಿ.
ಕರ್ನಾಟಕದ ಆಯೋಗಗಳು:
ಡಾ.ನಾಗನಗೌಡ ಸಮಿತಿಯ ಅಭಿಪ್ರಾಯದಂತೆ ಮುಸ್ಲಿಮರು ಮತ್ತು ಕ್ರೈಸ್ತರು ಜಾತಿ ಪದ್ಧತಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಸಂಗತಿ ನಮಗೆ ತಿಳಿದಿದೆ. ಹಾಗಿದ್ದರೂ ಉಚ್ಚ ಮತ್ತು ನೀಚ ಎಂಬ ಪರಿಕಲ್ಪನೆಗಳು ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಇವೆ. ಹಾಗಾಗಿ ಸಮಿತಿಯು ಎಲ್ಲ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸದೆ ಕೆಲವು ಪಂಗಡಗಳನ್ನು ಹಿಂದುಳಿದವರು ಎಂದು ಪಟ್ಟಿಯಲ್ಲಿ ಸೇರಿಸಿದೆ.
ಹಾವನೂರು ಆಯೋಗ ಮುಸ್ಲಿಮರನ್ನು ಪ್ರತ್ಯೇಕವಾಗಿ ಮೀಸಲಾತಿಗೆ ಪರಿಗಣಿಸಬೇಕೆಂದೂ ಹೇಳಿತ್ತು. ಆದರೆ ಬಾಲಾಜಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮುಸ್ಲಿಮ್ ಸಮುದಾಯದಲ್ಲಿ ಇರುವ ಕೆಲವು ಪಂಗಡಗಳು, ವಿಮುಕ್ತ ಅಥವಾ ಅಲೆಮಾರಿ ಬುಡಕಟ್ಟುಗಳನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಲು ಯಾವುದೇ ಅಡ್ಡಿ-ಆತಂಕಗಳಿಲ್ಲ ಎಂದು ಹೇಳಿತ್ತಾದರೂ, ಹಾವನೂರು ಆಯೋಗ ತೆಗೆದುಕೊಂಡ ನಿರ್ಣಯ ಮಾತ್ರ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.
ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ (ವಸಂತ್ ಕುಮಾರ್ vs ಕರ್ನಾಟಕ) ಸರ್ವೋಚ್ಚ ನ್ಯಾಯಾಲಯವು, ಸರಕಾರದ ನಿಲುವನ್ನು ಪ್ರಶಂಸಿದೆ. 1982ರಲ್ಲಿ ಸಾಂವಿಧಾನಿಕ ನ್ಯಾಯ ಪೀಠದ ಮುಖ್ಯಸ್ಥರಾಗಿದ್ದ ಮುಖ್ಯ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ಅವರು ವಿಷಯವನ್ನು ಅವಲೋಕಿಸಿ ಜಾತಿರಹಿತರು ಮತ್ತು ಹಿಂದೂ ಅಲ್ಲದ ನಾಗರಿಕರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಬೆಂಬಲಿಸಿದ್ದಾರೆ.
ಆದರೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಹಾವನೂರು ಆಯೋಗದ ವರದಿಗೆ ಮಾನ್ಯತೆ ನೀಡದೆ ಮುಸ್ಲಿಮರನ್ನು ಇತರ ಹಿಂದೂ ಹಿಂದುಳಿದ ಜಾತಿಗಳೊಡನೆ ಸೇರಿಸಿ ಮೀಸಲಾತಿ ಕೊಟ್ಟಿರುವುದು ಚರಿತ್ರಾರ್ಹವಾಗಿ ಉಳಿಯುತ್ತದೆ. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಮ್ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ ಎಂದು ಹೇಳಿರುವುದು ಆಯೋಗದ ತೀರ್ಮಾನಕ್ಕೆ ಬಲವಾದ ಪೆಟ್ಟು ಕೊಟ್ಟಿದೆ.
ಟಿ. ವೆಂಕಟಸ್ವಾಮಿ ಆಯೋಗವು, ಮುಸ್ಲಿಮರಲ್ಲಿ ಈ ಕೆಳಕಂಡ ಕೆಲವು ಪರ್ಯಾಯ ಹೆಸರುಗಳು, ಉಪಜಾತಿಗಳು ಹಾಗೂ ಸಂಬಂಧಿಸಿದ ಜಾತಿ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದೆ. ಬಾಗಬಾನ್, ಚಪ್ಪರ್ ಬಂದ್, ಧರವೇಶ್, ಫಕೀರ, ಕಲಾಲ್, ಮದಾರಿ, ಬ್ಯಾರಿ ಮುಂತಾದವು.
ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿ ಆಯೋಗವು ಮುಸ್ಲಿಮರು ಸ್ವತಃ ವಾಸಿಸುವ ಸ್ಥಳಗಳಿಗೆ ಭೇಟಿಕೊಟ್ಟು ವ್ಯಾಪಕವಾದ ಅಧ್ಯಯನ ನಡೆಸಿರುತ್ತಾರೆ.
ಅದೂ ಅಲ್ಲದೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸರಕಾರಕ್ಕೆ ನೀಡಿರುವ ವರದಿಯನ್ನು ಗಮನಿಸಿ, ಇಡೀ ಮುಸ್ಲಿಮ್ ಸಮೂಹ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಪರಿಗಣಿಸಿದ್ದರು. ಹಿಂದೂ ಹಿಂದುಳಿದ ಕೆಲವು ಜಾತಿ ಗಳೊಡನೆ ಸೇರಿಸಿ ಮೀಸಲಾತಿ ಕೋಟಾ ನಿಗದಿ ಮಾಡಿದ್ದರು. ಆದರೆ ಸರಕಾರ ಹಿಂದೂ ಹಿಂದುಳಿದ ವರ್ಗಗಳಿಂದ ಬೇರ್ಪಡಿಸಿ ಮುಸ್ಲಿಮರನ್ನು ಪ್ರತ್ಯೇಕವಾಗಿಟ್ಟು ಮೀಸಲಾತಿ ಕೋಟಾ ನಿಗದಿ ಮಾಡಿದೆ. ಸರಕಾರ ಈ ರೀತಿ ಬೇರ್ಪಡಿಸಲು ಯಾವ ಮಾನದಂಡ ಅನುಸರಿಸಿದೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ.
ಕರ್ನಾಟಕದಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ, ಮುಸ್ಲಿಮರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಿದ್ದ ಪ್ರವರ್ಗ -2 ಬಿ ಅನ್ನು ರದ್ದುಗೊಳಿಸಿದರು. ಅದಕ್ಕೆ ಅವರು ಎರಡು ಕಾರಣವನ್ನು ನೀಡಿದ್ದಾರೆ. ಭಾರತದ ಜಾತ್ಯತೀತ ಸಂವಿಧಾನ ಧಾರ್ಮಿಕ ಮೀಸಲಾತಿಗೆ ಅವಕಾಶ ನೀಡುವುದಿಲ್ಲ; ಮತ್ತು ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯ ಧಾರ್ಮಿಕ ಮೀಸಲಾತಿಯನ್ನು ರದ್ದುಗೊಳಿಸಿದೆ. 2 ಬಿ ಪ್ರವರ್ಗವನ್ನು ಮುಸ್ಲಿಮರಿಗಾಗಿ ಸೃಜಿಸುವ ಸಂದರ್ಭದಲ್ಲಿ ಯಾವುದೇ ಆಯೋಗ ಅಥವಾ ಯಾವುದೇ ವ್ಯಕ್ತಿ ಶಿಫಾರಸು ಮಾಡಿರಲಿಲ್ಲ. ಯಾವುದೇ ಪ್ರಾಯೋಗಿಕ ಅಂಕಿ-ಅಂಶಗಳು ಅಥವಾ ಈ ಸ್ಥಾನಮಾನ-ನೀಡಲು ಯಾವುದೇ ವಿಷಯಿಕಗಳಿರಲಿಲ್ಲ; ಬದಲಾಗಿ ಮುಸ್ಲಿಮರನ್ನು ಇತರ ಹಿಂದುಳಿದ ವರ್ಗಗಳ ಗುಂಪಿನಲ್ಲಿ ಮೀಸಲಾತಿ ಉದ್ದೇಶಕ್ಕೆ ಸೇರಿಸಲಾಗಿತ್ತು.
ಮುಸ್ಲಿಮರಿಗೆ ಧಾರ್ಮಿಕ ಮೀಸಲಾತಿ ಕೊಡಲಾಗಿದೆ ಎಂಬುದು ವಾದ ಸಮರ್ಥನೆಯೇ ವಿನಃ ಮತ್ತೇನೂ ಅಲ್ಲ. ಆದರೆ ಎಲ್ಲಾ ಹಿಂದುಳಿದ ವರ್ಗಗಳ ವರದಿಗಳು, 1975ರ ಹಾವನೂರು ವರದಿಯನ್ನು ಹೊರತುಪಡಿಸಿದಂತೆ, ಮುಸ್ಲಿಮರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹಾಗೂ ಇತರ ಹಿಂದುಳಿದ ವರ್ಗಗಳ ಪ್ರವರ್ಗದ ಅಡಿಯಲ್ಲಿ ಬರುವ ಮುಸ್ಲಿಮರನ್ನು ನ್ಯಾಯಾಲಯಗಳು ಕೂಡ ಎತ್ತಿ ಹಿಡಿದಿವೆ.
2004ರಲ್ಲಿ ಮುರಳಿಧರರಾವ್ vs ಆಂಧ್ರ ಪ್ರದೇಶ್ ಪ್ರಕರಣದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರಿಸುವ ವಿಷಯದಲ್ಲಿ ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ನ್ಯಾ. ಬಿ.ಎಸ್ ಚಲಮೇಶ್ವರ್ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ-
‘‘ಧರ್ಮ ನಂಬಿಕೆ ಅಥವಾ ಭಾವನೆಯ ಆಧಾರದ ಮೇಲೆ ಯಾವುದೇ ಸಾಂವಿಧಾನಿಕ ಹಕ್ಕುದಾರರ ಬೇಡಿಕೆಗಳನ್ನು ರಾಜ್ಯವು ತನ್ನ ಪರಿಗಣನೆಯಿಂದ ಹೊರಗಿಡಲು ಸಾಧ್ಯವಿಲ್ಲ. ಒಂದು ಗುಂಪು, ಜಾತಿ ಅಥವಾ ವರ್ಗವು ಚಿಜಿಜಿiಡಿmಚಿಣive ಚಿಛಿಣioಟಿ ಗೆ ಅರ್ಹವಾಗಿದೆಯೇ ಎಂಬುದು ಧರ್ಮ, ನಂಬಿಕೆ ಅಥವಾ ಆರಾಧನೆಯ ಮೇಲೆ ಅವಲಂಬಿತವಾಗಿರುವುದಿಲ್ಲ.’’
ಅಂತಿಮವಾಗಿ ಇಂದ್ರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ನ್ಯಾಯ ಪೀಠದಲ್ಲಿ, ಬಲವಾದ ಸಂಶೋಧನೆಗಳ ಆಧಾರದ ಮೇರೆಗೆ ಹಿಂದುಳಿದ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಭಾಗವಾಗಿ, ಪರಿಗಣಿಸುವ ಅವಶ್ಯಕತೆ ಇದೆ ಎಂದು ಆಯೋಗದ ವರದಿಗಳಲ್ಲಿ ನಿಸ್ಸಂದಿಗ್ಧವಾಗಿ ದೃಢ ಪಡಿಸಲಾಗಿದೆ ಎಂದು ಹೇಳಿದೆ:
ಸಾಕಷ್ಟು ಪ್ರಾತಿನಿಧ್ಯವಿಲ್ಲದ ಯಾವುದೇ ನಿರ್ದಿಷ್ಟ ವರ್ಗದ ಜನರಿಗೆ ಸೀಮಿತವಾಗಿಲ್ಲವಿದು. ಆದರೆ ಹಿಂದೂ ಸಮುದಾಯದ ಶೂದ್ರರಾಗಲಿ ಅಥವಾ ಇತರ ಸಮುದಾಯದ ಇತರ ಹಿಂದುಳಿದ ವರ್ಗಗಳಾದ ಮುಸ್ಲಿಮ್, ಸಿಖ್ಖರು, ಕ್ರೈಸ್ತರು ಇತ್ಯಾದಿಯಾಗಿ ಸಾಮಾಜಿಕ ಹಿಂದುಳಿದ ವರ್ಗದ ಅಡಿಯಲ್ಲಿ ಇರುವ ಎಲ್ಲರೂ...
ರಾಜಕೀಯ ನಿರ್ಣಯವೇ?
ಕರ್ನಾಟಕದ ಅಂದಿನ ಬೊಮ್ಮಾಯಿ ಸರಕಾರವು ನೀಡುವ ಯಾವುದೇ ಸಮರ್ಥನೆಗಳು ನಿಷ್ಪಕ್ಷಪಾತ ನ್ಯಾಯಾಂಗ ಪರೀಕ್ಷೆಯಲ್ಲಿ ನಿಲ್ಲುವುದಿಲ್ಲ. ವಾಸ್ತವವಾಗಿ ಬಿಜೆಪಿ ಮತ್ತು ಆರೆಸ್ಸೆಸ್ಗೆ ಬಹುಶಃ ಇದು ಬೇರೆಯವರಿಗಿಂತ ಚೆನ್ನಾಗಿ ತಿಳಿದಿದೆ. ಆದರೂ ನ್ಯಾಯಾಲಯ ಈ ಕೋಮುವಾದಿ ಆದೇಶಕ್ಕೆ ತಡೆ ಆಜ್ಞೆ ನೀಡಿದಾಗಲೂ ಬಿಜೆಪಿ ತನ್ನನ್ನು ತಾನು ಹಿಂದೂ ಉದ್ದೇಶಕ್ಕಾಗಿ ಹುತಾತ್ಮನೆಂದು ಬಿಂಬಿಸುವ ಮೂಲಕ ತನ್ನ ರಾಜಕೀಯದ ಒಂದಂಶವನ್ನು ಹೊಂದಿರುತ್ತದೆ. ಬಿಜೆಪಿಗೆ ಕಾನೂನು ಸೋಲುಗಳು ಯಾವಾಗಲೂ ತನ್ನ ಕಾರ್ಯಸೂಚಿಗೆ ರಾಜಕೀಯ ಗೆಲುವುಗಳನ್ನು ಒದಗಿಸಿವೆ. ಏಕೆಂದರೆ ಅದು ಸಾರ್ವಜನಿಕ ಭಾಷಣದ ಮೇಲೆ ಪ್ರಾಬಲ್ಯ ಹೊಂದಿದೆ. ಹಾಗೆಯೇ ನಾಗರಿಕರನ್ನು ಹಿಂದುತ್ವದತ್ತ ಸೆಳೆಯುವಲ್ಲಿ ಬಹುತೇಕ ಸಫಲವಾಗಿರುವುದನ್ನು ಕಾಣಬಹುದು. ಯಾವುದೇ ಸೂತ್ರದ ಹಿಂದಿನ ಉದ್ದೇಶವೂ ರಾಜಕೀಯ ಮತ್ತು ಕೋಮುವಾದ ಇವೆರಡರಲ್ಲೇ ಗಿರಿಕಿ ಹೊಡೆಯುತ್ತದೆ ಮತ್ತು ಅದನ್ನು ರಾಜಕೀಯವಾಗಿಯೇ ಎದುರಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚಿದೆ.
ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ವಾಗಿ ಹಿಂದುಳಿದಿದ್ದಾರೆ ಎಂದು ಮೀಸಲಾತಿ ನೀಡಲು ಯಾವುದೇ ಬಾಧಕವಿಲ್ಲ ಮತ್ತು ಅದು ಸಂವಿಧಾನ ವಿರೋಧಿಯೂ ಅಲ್ಲ ಎಂದೂ ಇಷ್ಟೆಲ್ಲಾ ನ್ಯಾಯಾಲಯಗಳ ತೀರ್ಪಿನ ದೃಷ್ಟಾಂತಗಳಿದ್ದರೂ ಭಾಜಪದ ನೇತಾರರು ಮಾತ್ರ ಮುಸ್ಲಿಮರ ವಿರುದ್ಧ ದ್ವೇಷ ಭಾವನೆಯನ್ನು ಹೊಂದಿರುವುದು ಮತ್ತು ಸಮಯ ಬಂದಾಗಲೆಲ್ಲ ಮುಸ್ಲಿಮರ ಮೇಲೆ ಅನಿಷ್ಟಕಾರಕ ಮಾತುಗಳನ್ನು ಹೇಳಿ ಅವರನ್ನು ಘಾಸಿಗೊಳಿಸದೆ ಅವರು ನಿದ್ದೆಗೆ ಜಾರುವುದಿಲ್ಲ.