ಅಲ್ಪಸಂಖ್ಯಾತರ ನಿಂದನೆಗೆ ಈಗ ಸಂಸತ್ತಿನಲ್ಲಿಯೂ ಜಾಗ?

Update: 2023-09-27 08:03 GMT

ದಾನಿಶ್ ಅಲಿ-ರಮೇಶ್ ಬಿದೂರಿ

‘‘ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ಮಾತನಾಡಬೇಕು.’’

-ಜೋಸೆಫ್ ಗೋಬೆಲ್ಸ್

‘‘ರಾಜಕಾರಣಿಯ ಭಾಷಣವನ್ನು ನಾನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮೇಲೆ ಅದು ಬೀರುವ ಪ್ರಭಾವದಿಂದ ಅಳೆಯುವು ದಿಲ್ಲ. ಆದರೆ ಅದು ಜನರ ಮೇಲೆ ಬೀರುವ ಪರಿಣಾಮದಿಂದ ಅಳೆಯುತ್ತೇನೆ.’’

-ಅಡಾಲ್ಫ್ ಹಿಟ್ಲರ್

‘‘ಮುಂಬರುವ ದಿನಗಳಲ್ಲಿ ನಾವು ಇಲ್ಲಿ ಹೇಗೆ ನಡೆದುಕೊಳ್ಳಬೇಕು, ಯಾರು ಮನೆಯ ಈ ಬದಿಯಲ್ಲಿ ಮತ್ತು ಯಾರು ಆ ಬದಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾನು ತೀರ್ಮಾನಿಸುತ್ತೇನೆ.’’

-ನರೇಂದ್ರ ಮೋದಿ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮುಸ್ಲಿಮ್ ಸಂಸದ ದಾನಿಶ್ ಅಲಿಯನ್ನು ನಿಂದಿಸಿದ ಬಿಜೆಪಿ ಸಂಸದ ರಮೇಶ್ ಬಿದೂರಿ ಈ ಮೂವರ ಮಾತುಗಳನ್ನೂ ತಿಳಿದೇ ಇರುತ್ತಾರೆ.

ಐತಿಹಾಸಿಕ ಎಂದು ಪ್ರಚಾರ ಮಾಡಲಾದ ವಿಶೇಷ ಅಧಿವೇಶನ ಹೀಗೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ದಾನಿಶ್ ಅಲಿಯವರನ್ನು ಕೋಮು ದೂಷಣೆಗಳ ಮೂಲಕ ಬಿದೂರಿ ನಿಂದಿಸಿದ್ದು ಅನೇಕರಲ್ಲಿ ಆಘಾತವನ್ನು ಉಂಟುಮಾಡಿತು.

ಈ ಘಟನೆ ಅತ್ಯಂತ ವಿಷಾದಕರ ಎಂಬುದು ನಿಜವಾದರೂ, ಇದರಲ್ಲಿ ಆಶ್ಚರ್ಯಪಡುವಂಥದ್ದು ಇದೆಯೇ? 2014ರಲ್ಲಿ ಶುರು ಮಾಡಿದ ಪ್ರಯಾಣ ದಲ್ಲಿ ನಾವು ಇಲ್ಲಿಗೆ ತಲುಪಲೇಬೇಕಿತ್ತು. ಈ ಸರಕಾರದ ಅಸಭ್ಯತೆಗೆ ನಾವು ಸಾಕ್ಷಿಯಾಗಲೇಬೇಕಿತ್ತು. ಅದನ್ನೀಗ ಮರೆಮಾಚಲು ನಾವು ಯತ್ನಿಸುವಂತಿಲ್ಲ.

ದಾನಿಶ್ ಅಲಿ ಮಾಧ್ಯಮಗಳ ಮುಂದೆ ಆ ನಿಂದನೀಯ ಪದಗಳನ್ನು ಪುನರಾವರ್ತಿಸಿದರು. ಇದು ಮುಸ್ಲಿಮರ ಬಗ್ಗೆ ಬಿಜೆಪಿ ಬಳಸುವ ಭಾಷೆ ಎಂದು ಮುಸ್ಲಿಮ್ ಸಂಸದರೊಬ್ಬರು ಹೇಳುತ್ತಿದ್ದಾರೆ. ನಾವು ಬಹುಶಃ ಅದನ್ನು ಮತ್ತೆ ಮತ್ತೆ ಕೇಳಬೇಕಾಗಿದೆ ಮತ್ತು ಇದು ಈ ದೇಶದ ನಿಜವಾದ ಮುಖ ಎಂದುಕೊಳ್ಳಬೇಕಾಗಿದೆ. ಅದರಿಂದ ಪಾರಾಗಲು ದಾರಿಯೇ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಸದ ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದರ ಬಗ್ಗೆ ಮೌನವಾಗಿಯೇ ಇದ್ದಾರೆ. ಅದರಲ್ಲಿಯೂ ಆಶ್ಚರ್ಯವೇನಿಲ್ಲ. ಅತ್ಯಂತ ಕ್ಷುಲ್ಲಕ ಕಾರಣಕ್ಕೆ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸುತ್ತಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಅವಹೇಳನಾಕಾರಿ ಮಾತುಗಳನ್ನಾಡಿದ ಬಿಜೆಪಿ ಸಂಸದರಿಗೆ ಬರೀ ಎಚ್ಚರಿಕೆ ನೀಡಿರುವುದರಲ್ಲಿಯೂ ಆಶ್ಚರ್ಯಪಡಬೇಕಾದದ್ದು ಏನಿಲ್ಲ. ಮೋದಿ ನಾಯಕತ್ವದಲ್ಲಿ ಬಿಜೆಪಿ ಮುಸ್ಲಿಮ್ ವಿರೋಧಿ ನಿಂದನೆಯ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿರುವುದು ಹೊಸದೂ ಅಲ್ಲ.

ಹಾಗಾಗಿ, ಮುಸ್ಲಿಮರ ವಿರುದ್ಧದ ಬಿದೂರಿ ನಿಂದನೆಯನ್ನು ಬಿಜೆಪಿ ಸಂಸದರಾದ ಹರ್ಷವರ್ಧನ್ ಮತ್ತು ರವಿಶಂಕರ್ ಪ್ರಸಾದ್ ಅವರು ಮೋಜಿನದ್ದೆಂಬಂತೆ ಆನಂದಿಸಿದ್ದರಲ್ಲಿ ಕೂಡ ಆಶ್ಚರ್ಯವಿಲ್ಲ. ಅವರಿಬ್ಬರಿಗೂ ಬಿದೂರಿ ಮಾತಿನಿಂದ ಆದ ಸಂತಸವನ್ನು ಮರೆಮಾಡಲು ಸಾಧ್ಯವಾಗಲಿಲ್ಲ. ಇಬ್ಬರೂ ನಗುತ್ತಿರುವುದು ವೀಡಿಯೊದಲ್ಲಿ ಕಂಡಿತ್ತು. ಆದರೆ ಬಿದೂರಿ ಹೇಳಿಕೆಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಇಬ್ಬರೂ ಹೇಳಿಕೊಂಡರು. ಅವರೆಲ್ಲರ ಮನಃಸ್ಥಿತಿ ಏನೆಂಬುದನ್ನು ಗ್ರಹಿಸುವುದು ಸುಲಭ.

ಬಿಜೆಪಿಗೆ- ಅದೂ ಮೋದಿ ನೇತೃತ್ವದ ಬಿಜೆಪಿಗೆ - ಈ ದೇಶದ ಹಿಂದೂಗಳ ದೊಡ್ಡ ವರ್ಗವು ತನ್ನ ಆಶಯಗಳನ್ನು ಈಡೇರಿಸಲು ಸರಕಾರವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಿದ ಬಳಿಕ ದೇಶದ ಸಂಸತ್ತು ಮುಸ್ಲಿಮರ ವಿರುದ್ಧ ನಿಂದನೆ ಮತ್ತು ದ್ವೇಷದ ವೇದಿಕೆಯಾಗದಿರುವುದು ಹೇಗೆ ಸಾಧ್ಯ?. 2002ರ ಮುಸ್ಲಿಮ್ ವಿರೋಧಿ ಗಲಭೆಯ ಕುಖ್ಯಾತಿಯಿದ್ದ ಮೋದಿಯನ್ನು ದೇಶದ ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ಬುದ್ಧಿಜೀವಿಗಳು ದೇಶದ ಭರವಸೆ ಎಂದು ಉತ್ತೇಜಿಸಿದರು ಮತ್ತು ಅದನ್ನು ಸಂಸತ್ತು ಮತ್ತು ಸರಕಾರದವರೆಗೂ ಕೊಂಡೊಯ್ದರು.

ಹಿಂಸಾಚಾರ ಮತ್ತು ಅಸಭ್ಯ ಭಾಷೆಯ ಬಗ್ಗೆ ಮೋದಿ ತಿರಸ್ಕಾರವನ್ನೇನೂ ಹೊಂದಿಲ್ಲ. ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲಿನ ದ್ವೇಷವನ್ನು ಮರೆಮಾಚಿಲ್ಲ. ಮುಸ್ಲಿಮರ ವಿರುದ್ಧದ ಅವರ ‘‘ಹಮ್ ಪಾಂಚ್ ಹಮಾರೆ ಪಚೀಸ್’’ ಹೇಳಿಕೆಯನ್ನು ಯಾರು ಮರೆಯಬಹುದು ಅಥವಾ ಮುಸ್ಲಿಮರ ಪರಿಹಾರ ಶಿಬಿರಗಳು ನಿಜವಾಗಿಯೂ ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ ಎಂದು ಪ್ರಚೋದಿಸುವುದನ್ನು ಯಾರು ಮರೆಯಬಹುದು? ತಮ್ಮ ರಾಜಕೀಯವು ಮುಸ್ಲಿಮ್ ವಿರೋಧಿ ದ್ವೇಷವನ್ನು ಆಧರಿಸಿದೆ ಎಂಬುದನ್ನು ಮೋದಿ ಸ್ಪಷ್ಟವಾಗಿಯೇ ತೋರಿಸಿಕೊಂಡಿದ್ದಾರೆ ಮತ್ತು ಅವರು ಆ ನಿಲುವನ್ನು ನಿರಾಕರಿಸುವ ಪ್ರಯತ್ನ ಮಾಡಿಲ್ಲ. ಈ ಕಾರಣಕ್ಕಾಗಿಯೇ ತನ್ನ ಬೆಂಬಲಿಗರ ಅಭಿಮಾನಕ್ಕೆ ಪಾತ್ರನಾಗಿರುವುದು ಅವರಿಗೆ ಗೊತ್ತಿದೆ.

ಮುಸ್ಲಿಮ್ ವಿರೋಧಿ ಹಿಂಸೆ ಅಥವಾ ದ್ವೇಷ ಮತ್ತು ಅಸಭ್ಯತೆಯ ನಡುವೆ ನೇರ ಸಂಬಂಧವಿದೆ. ಒರಟುತನ ಮತ್ತು ಅಶ್ಲೀಲತೆಯನ್ನು ಅದರಿಂದ ಬೇರ್ಪಡಿಸಲಾಗುವುದಿಲ್ಲ. ನಿಂದನೆಗಳು ಕೊಲೆಗೆ ಮುಂಚಿನ ಹಂತವಾಗಿರುತ್ತವೆ ಅಥವಾ ಜೊತೆಯೇ ಇರುತ್ತವೆ.

ನಿಂದನೆಗಳು ದ್ವೇಷ ಮತ್ತು ಹಿಂಸೆಯ ಸ್ಪಷ್ಟ ಅಭಿವ್ಯಕ್ತಿಗಳು. ಭಾರತದ ದಲಿತರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿಂದನೆಗೆ ಒಳಗಾದವನು ಎದುರು ಉತ್ತರಿಸಲಾರ ಎಂಬುದು ನಿಂದಿಸುವವನಿಗೆ ತಿಳಿದಿದೆ. ನಿಂದನೆಯು ಪದೇ ಪದೇ ಅವಮಾನಿಸಲು, ದುರ್ಬಲಗೊಳಿಸಲು ಮತ್ತು ಕೀಳರಿಮೆ ಮೂಡಿಸಲು ಪರಿಣಾಮಕಾರಿ ಅಸ್ತ್ರವಾಗಿದೆ.

ಮುಸ್ಲಿಮರನ್ನು ನಿಂದಿಸುವುದು ಬೀದಿಗಳಲ್ಲಿ, ಶಾಲೆಗಳಲ್ಲಿ ಮತ್ತು ಎಲ್ಲೆಡೆ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಚೆನ್ನಾಗಿ ತಿಳಿದಿರುವವರು ಮುಸ್ಲಿಮರನ್ನು ಕೆಟ್ಟದಾಗಿ ನಿಂದಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಅದಕ್ಕೆ ಮುಸ್ಲಿಮರು ಸ್ಪಂದಿಸುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತು.

ಬಿಜೆಪಿ ಸಂಸದರೊಬ್ಬರು ಮುಸ್ಲಿಮ್ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯಿಂದ ಹಿಂದೂ ಸಮಾಜ ಬೇರೆಯಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ಪದಗಳನ್ನು ಈಗ ಹಾಡುಗಳು, ಘೋಷಣೆಗಳನ್ನು ಅನೇಕ ಹಬ್ಬಗಳಲ್ಲಿ ಹಿಂದೂಗಳನ್ನು ಖುಷಿಪಡಿಸಲು ಬಳಸಲಾಗುತ್ತದೆ. ಧ್ವನಿವರ್ಧಕಗಳಲ್ಲಿ ಕೇಳಿಸುವ ಇಂತಹ ನಿಂದನೆಗಳನ್ನು ಹಿಂದೂಗಳು ವಿರೋಧಿಸಿದ್ದಾಗಲಿ ಅಥವಾ ತಡೆದಿದ್ದಾಗಲಿ ಇಲ್ಲ. ಮುಸ್ಲಿಮರನ್ನು ನಿಂದಿಸುವ ಮತ್ತು ಅವರ ವಿರುದ್ಧದ ಹಿಂಸೆಯನ್ನು ಪ್ರಚೋದಿಸುವ ಬಾಬಾಗಳು ಮತ್ತು ಸಾಧ್ವಿಗಳ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಿದೆ.

ಪದೇ ಪದೇ ಇಂತಹ ನಿಂದನೆಗಳಿಗೆ ಒಳಗಾಗಿ ಮೌನವಾಗಿರಬೇಕಾದ ಅವಮಾನ ಎಂಥದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಇಡೀ ಸಮುದಾಯವು ಅದನ್ನು ಸಹಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಆ ಸಮುದಾಯದ ಅಸ್ಮಿತೆಗೆ ಅರ್ಥವೇನು?

ಈ ನಿಂದನೆಗಳು ಹೊಸದಲ್ಲ, ಹಿಂದೂಗಳ ಬಾಯಿಂದ ಮುಸ್ಲಿಮರು ಅವುಗಳನ್ನು ಪ್ರತಿದಿನ ಕೇಳುತ್ತಾರೆ, ಅದಕ್ಕೇಕೆ ಆಘಾತಗೊಳ್ಳಬೇಕು ಎಂದು ಹೇಳುವ ಮೂಲಕ ನಾವು ಬಿದೂರಿಯಂಥವರ ನಡವಳಿಕೆಯ ಗಂಭೀರತೆಯನ್ನು ಅಲಕ್ಷಿಸುತ್ತಿದ್ದೇವೆ.

ಸಂಸದರ ವಿಶೇಷಾಧಿಕಾರವನ್ನು ಮುಸ್ಲಿಮ್ ವಿರೋಧಿ ನಿಂದನೆಗೆ ಬಳಸಿಕೊಳ್ಳಬಹುದು ಎನ್ನುವ ಮಟ್ಟಕ್ಕೆ ಬಂದಿದೆ. ಸಂಸತ್ತನ್ನು ಮುಸ್ಲಿಮರನ್ನು ಅವಮಾನಿಸುವ ಸ್ಥಳವನ್ನಾಗಿ ಮಾಡಬಹುದಾದ ಸನ್ನಿವೇಶ ಕಾಣಿಸುತ್ತಿದೆ. ಸಂಸತ್ತಿನಲ್ಲಿ ಹಿಂದೂ ಶಕ್ತಿಯ ಪ್ರತೀಕವಾದ ಸೆಂಗೋಲ್ ಪ್ರತಿಷ್ಠಾಪನೆಯ ಸಂಪೂರ್ಣ ಅರ್ಥ, ಈಗ ಬಿಜೆಪಿ ಸಂಸದರ ಮುಸ್ಲಿಮ್ ವಿರೋಧಿ ನಿಂದೆಗಳಿಂದ ಬಯಲಾಗಿದೆ. ಇದು ತನ್ನನ್ನು ತಾನು ಸುಸಂಸ್ಕೃತ ಎಂದು ಹೇಳಿಕೊಳ್ಳುವ ನಿಂದಕನ ನಿಜಬಣ್ಣವನ್ನು ಬಯಲು ಮಾಡುತ್ತದೆ.

ಬಿಜೆಪಿಯಲ್ಲಿ ಮೇಲೇರಬೇಕಾದರೆ ಇಂಥ ಒರಟುತನ ಮತ್ತು ಕೆಟ್ಟತನ ಇರಲೇಬೇಕು. ಅದಕ್ಕೆ ಸೇರುವ ಎಲ್ಲಾ ನಾಯಕರು ಪರಸ್ಪರ ಪೈಪೋಟಿ ನಡೆಸುತ್ತಿರುವುದು ಮತ್ತು ಮೋದಿ ಮತ್ತು ಆದಿತ್ಯನಾಥ್ ಅವರಂಥವರ ಬೆನ್ನಿಗಿರುವುದು ತಾವೇನೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸುವುದಕ್ಕಾಗಿ. ಪ್ರತಿಪಕ್ಷಗಳನ್ನು ಅಥವಾ ಮುಸ್ಲಿಮರನ್ನು ಅವಮಾನಿಸುವ ಮೂಲಕ ಬಿಜೆಪಿ ನಾಯಕರೆಂದು ಪರಿಗಣಿಸಲು ಅವರು ಅರ್ಹರು ಎಂದು ಸಾಬೀತುಪಡಿಸಬೇಕು. ಹಿಮಂತ ಬಿಸ್ವಾ ಶರ್ಮಾ ಇದಕ್ಕೆ ಉದಾಹರಣೆ.

ಕೊರಗುವಂತಿಲ್ಲ. ಬಿಜೆಪಿ ಮತ್ತು ಪ್ರಧಾನಿ ಯಾವಾಗಲೂ ಈ ಮುಸ್ಲಿಮ್ ವಿರೋಧಿ ದ್ವೇಷವನ್ನು ಕಾನೂನುಬದ್ಧಗೊಳಿಸುವವರು ಮತ್ತು ಸಕ್ರಿಯಗೊಳಿಸು ವವರು. ಹಾಗಾಗಿ, ಗೆರೆ ಎಳೆದಂತೆ ಕೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ಅದು ಬರೀ ವ್ಯರ್ಥ.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಅಪೂರ್ವಾನಂದ

contributor

Similar News