2020ನೇ ಸಾಲಿನಲ್ಲಿ ರಾಜ್ಯಮಟ್ಟದ ಸಮಿತಿಯಿಂದ ಆಯ್ಕೆಯಾದ ಕನ್ನಡ ಪುಸ್ತಕಗಳು -ಒಂದಿಷ್ಟು ಕುತೂಹಲಕರ ಅಂಕಿ ಅಂಶಗಳು!!
2020ರ ಸಾಲಿನಲ್ಲಿ ಆಯ್ಕೆಯಾದ 4,791 ಪುಸ್ತಕಗಳ, 436ಪುಟಗಳ ಆಯ್ಕೆ ಪಟ್ಟಿಯ ಮೇಲೆ ನಿನ್ನೆ ಹಾಗೇ ಕಣ್ಣಾಡಿಸಿದೆ. ಹಲವು ಕುತೂಹಲಕರ ಸಂಗತಿಗಳು ಕಾಣಿಸಿದ್ದರಿಂದ ಸ್ವಲ್ಪ ಗಂಭೀರವಾಗಿ ಪರಿಶೀಲಿಸಿದೆ.
ನಾನು ಗಮನಿಸಿದ ವಿವರಗಳು ಇಲ್ಲಿವೆ:
* ಮೊದಲು,ಯಾವ ಪ್ರಕಾಶನದ ಅತೀ ಹೆಚ್ಚು ಪುಸ್ತಕಗಳು ಆಯ್ಕೆಯಾಗಿವೆ ಎಂದು ನೋಡಿದರೆ, ಸಪ್ನ ಬುಕ್ ಹೌಸಿನ ಒಟ್ಟು 109 ಪುಸ್ತಕಗಳು ಆಯ್ಕೆಯಾಗಿವೆ.
ಎರಡನೇ ಸ್ಥಾನ ನವಕರ್ನಾಟಕ ಪ್ರಕಾಶನ ಇರಬಹುದೇನೋ ಅಂದುಕೊಂಡರೆ, ಉಹುಂ..ಸಿವಿಜಿ ಬುಕ್ಸ್ ಮತ್ತು ಸಿವಿಜಿ ಪಬ್ಲಿಕೇಶನ್ ಹೆಸರಿನಲ್ಲಿ ಜಂಟಿಯಾಗಿ 97 ಪುಸ್ತಕಗಳು ಆಯ್ಕೆಯಾಗಿವೆ.
ಮೂರನೇ ಸ್ಥಾನದಲ್ಲಿ ವಸಂತ ಪ್ರಕಾಶನದ 52ಪುಸ್ತಕಗಳು ಆಯ್ಕೆಯಾಗಿವೆ. ಇವು ಮೂರೂ ಬೆಂಗಳೂರು ಕೇಂದ್ರಿತ ಪ್ರಕಾಶನಗಳು. ನಾಲ್ಕನೇ ಸ್ಥಾನದಲ್ಲಿ ಕಲಬುರಗಿಯ ಬಸವ ಪ್ರಕಾಶನದ 40 ಪುಸ್ತಕಗಳು ಆಯ್ಕೆಯಾಗಿವೆ.
36 ಪುಸ್ತಕಗಳ ಆಯ್ಕೆಯೊಂದಿಗೆ ಪ್ರತಿಷ್ಠಿತ ನವಕರ್ನಾಟಕ ಪ್ರಕಾಶನ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
* ಇನ್ನು ಯಾವ ಲೇಖಕರ ಅತೀ ಹೆಚ್ಚು ಪುಸ್ತಕಗಳು ಆಯ್ಕೆಯಾಗಿವೆ ಎಂದರೆ ಮಂಡ್ಯದ ಡಾ.ಪ್ರದೀಪ್ ಕುಮಾರ್ ಹೆಬ್ರಿಯವರ 17 ಪುಸ್ತಕಗಳು ಆಯ್ಕೆಯಾಗಿದ್ದು ಮೊದಲ ಸ್ಥಾನದಲ್ಲಿ ಇದ್ದಾರೆ.
14 ಪುಸ್ತಕಗಳ ಆಯ್ಕೆಯೊಂದಿಗೆ ರಾಮ ಮೊಗೇರ ಎಂಬವರು ಎರಡನೇ ಸ್ಥಾನದಲ್ಲಿದ್ದರೆ, ರತ್ನ ಕಾಳೇಗೌಡ ಎಂಬವರು 12 ಪುಸ್ತಕಗಳ ಆಯ್ಕೆಯೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ. ಬಹಳಷ್ಟು ಲೇಖಕರ 10-12 ಪುಸ್ತಕಗಳು ಆಯ್ಕೆಯಾಗಿವೆ.!
ಈ ಪಟ್ಟಿಯಲ್ಲಿ ಸರಣಿ ಪುಸ್ತಕಗಳು ಆಯ್ಕೆಯಾದ ಲೇಖಕರನ್ನು ಹೆಸರಿಸಿಲ್ಲ. ಉದಾಹರಣೆಗೆ ಟಿ.ಎಸ್.ರಾಮಚಂದ್ರ ರಾವ್ ಅವರು ಶೇಕ್ಸ್‌ಪಿಯರನ 13 ನಾಟಕಗಳನ್ನು ಮಕ್ಕಳಿಗಾಗಿ ಕಥಾ ಸಂಪುಟದಲ್ಲಿ ಪ್ರಕಟಿಸಿದ್ದಾರೆ.
ಹಾಗಿದ್ದರೆ, ಇವರೆಲ್ಲ ಒಂದೇ ವರ್ಷದಲ್ಲಿ ಅಷ್ಟೊಂದು ಪುಸ್ತಕ ಬರೆದಿದ್ದರೇ ಅಂತಲೋ ಒಂದೇ ವರ್ಷದಲ್ಲಿ ಅಷ್ಟೊಂದು ಪುಸ್ತಕ ಮೊದಲ ಮುದ್ರಣವಾಯಿತೇ ಅಂತ ನೀವು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ..!!
* ಆಯ್ಕೆ ಪಟ್ಟಿಯ ಮೊದಲಲ್ಲೇ 2020ನೇ ಸಾಲಿನಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿ ಎಂದು ಬರೆಯಲಾಗಿದೆ. ಆದರೆ ಹಲವು ಪುಸ್ತಕಗಳ ಎದುರಲ್ಲಿ ಎರಡನೇ, ಮೂರನೇ, ನಾಲ್ಕನೇ ಮುದ್ರಣ ಎಂದು ಬರೆಯಲಾಗಿದೆ.
ಹಾಗಿದ್ದರೆ ಪ್ರಥಮ ಮುದ್ರಣದ ಆಯ್ಕೆ ಪಟ್ಟಿಯ ಅರ್ಥವೇನು? ಯಾರಿಗ್ಗೊತ್ತು!!
* ಆಯ್ಕೆ ಪಟ್ಟಿಗೆ ಸಹಿ ಹಾಕಿರುವ ಆಯ್ಕೆ ಸಮಿತಿಯ ನಾಲ್ವರಲ್ಲಿ ಒಬ್ಬರು, ಅತೀ ಹೆಚ್ಚು ಪುಸ್ತಕಗಳು ಆಯ್ಕೆಯಾಗಿರುವ ಸಪ್ನ ಬುಕ್ ಹೌಸಿನ ಉದ್ಯೋಗಿ. ಪುಸ್ತಕ ಆಯ್ಕೆಗೆ ಪುಸ್ತಕ ಕಳಿಸುವ ಸಂಸ್ಥೆಯ ಸಿಬ್ಬಂದಿಯನ್ನೇ ಆಯ್ಕೆ ಸಮಿತಿಗೆ ನೇಮಕ ಮಾಡುವುದು ನೈತಿಕವಾಗಿ ಸರಿಯೇ?
*ಅಷ್ಟು ಮಾತ್ರವಲ್ಲ, ಇದೇ ಆಯ್ಕೆ ಸಮಿತಿ ಸದಸ್ಯರ ಎರಡು ಪುಸ್ತಕಗಳು ಸಹ ಆಯ್ಕೆಯಾಗಿವೆ.
ಮತ್ತು ಇದೇ ಸದಸ್ಯ/ಲೇಖಕರ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಈಚೆಗೆ ಕೃತಿ ಚೌರ್ಯದ ಆಪಾದನೆಯನ್ನು ಕೂಡಾ ಮಾಡಿದೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಯವರು ಏನನ್ನುತ್ತಾರೆ?
* ಒಬ್ಬರೇ ಪ್ರಕಾಶಕರು ಒಂದೇ ಹೆಸರಿನ ಮುಂದೆ- ಪ್ರಕಾಶನ, ಪಬ್ಲಿಕೇಶನ್, ಪಬ್ಲಿಷಿಂಗ್ ಹೌಸ್, ಎಂಟರ್ ಪ್ರೈಸಸ್, ಬುಕ್ ಹೌಸ್ ಅಂತೆಲ್ಲ ಬೇರೆ ಬೇರೆ ಹೆಸರಲ್ಲಿ ದೊಡ್ಡ ಸಂಖ್ಯೆಯಲ್ಲಿ ಪುಸ್ತಕ ಆಯ್ಕೆಯಾಗಿರುವುದು ಪ್ರಕಾಶಕರೊಬ್ಬರ ಪ್ರಕಾರ ತೀರಾ ಮಾಮೂಲಿ ಸಂಗತಿಯಂತೆ!!
* ಇನ್ನು, ಆಯ್ಕೆಯಾದ ಪುಸ್ತಕಗಳ ಪಟ್ಟಿಯಲ್ಲಿ FDA/SDA ಪರೀಕ್ಷಾ ಗೈಡು, ಅಬಕಾರಿ, ಪೊಲೀಸ್ ಪರೀಕ್ಷಾ ಗೈಡು ಹೀಗೆ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಪರೀಕ್ಷಾ ಗೈಡುಗಳೂ ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿವೆ.
* ಆಯ್ಕೆಯಾದ ಪುಸ್ತಕಗಳ ಹೆಸರಿನ ಮೇಲೆ ಕಣ್ಣಾಡಿಸಿದರೆ 4,791 ಪುಸ್ತಕಗಳ ಅಷ್ಟೂ ಹೆಸರುಗಳು ವೈವಿಧ್ಯಮಯವಾಗಿವೆ. 710 ಪುಟಗಳ ಒಂದು ಪುಸ್ತಕದ ಹೆಸರು: ಹೋಟೆಲ್ ಮೆನು!!
ಇಷ್ಟೆಲ್ಲ ಬರೆದ ಮೇಲೆ, ಪರಿಚಯದ ಒಬ್ಬರು ಪ್ರಕಾಶಕರ ಹತ್ತಿರ ಮಾತಾಡಿ, ಈ ಪುಸ್ತಕ ಆಯ್ಕೆಗೆ ಮಾನದಂಡಗಳೇನು, ಒಬ್ಬರೇ ಲೇಖಕರ, ಒಂದೇ ಪ್ರಕಾಶನದ ಪುಸ್ತಕಗಳ ಆಯ್ಕೆಗೆ ಸಂಖ್ಯಾ ಮಿತಿ ಇದೆಯೇ ಅಂತೆಲ್ಲ ಕೇಳಿದೆ. ‘‘ಅದೆಲ್ಲ ಏನೂ ಇಲ್ಲ, ಒಬ್ಬರು ಲೇಖಕರ/ಪ್ರಕಾಶನದ ಆಯ್ಕೆಯಾದ ಪುಸ್ತಕಗಳ ಮೊತ್ತ ರೂ. ಎರಡೂವರೆ ಲಕ್ಷದೊಳಗಿರಬೇಕು ಅಷ್ಟೇ’’ ಅಂತಾರೆ.
ರಾಜ್ಯದಾದ್ಯಂತ ಏನಿಲ್ಲವೆಂದರೂ 30-40ಸಾವಿರ ಲೇಖಕರಾದರೂ ಇರಬಹುದೇನೋ. ಹಾಗಿರುವಾಗ, ಆಯ್ಕೆ ಸಮಿತಿಗೆ, ಪುಸ್ತಕ ಆಯ್ಕೆಗೆ ಒಂದಿಷ್ಟು ಮಾನದಂಡಗಳು, ಸ್ಪಷ್ಟ ಆಯ್ಕೆ ನೀತಿಯೊಂದಿರಬೇಕು ಅನಿಸುವುದಿಲ್ಲವೇ? ನಿಯಮ ಮೀರುವ ಲೇಖಕ/ಪ್ರಕಾಶನ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ನೀತಿಯೂ ಇರಬೇಕಲ್ಲವೇ?
ಏನಂತಾರೆ ನಮ್ಮ ಲೇಖಕರು?
ಅಂದಹಾಗೆ, ಆಯ್ಕೆಯಾದ ಪುಸ್ತಕಗಳ ಪಟ್ಟಿಯಲ್ಲಿ ಒಂದು ಪುಸ್ತಕದ ಹೆಸರು ‘ಡೇಂಜರ್ ಫೆಲೋಸ್’ !! ಇದು ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ಈ ಆಯ್ಕೆ ಕರ್ಮಕಾಂಡದಲ್ಲಿ ಭಾಗಿಯಾದವರ ಕುರಿತು ಬರೆದದ್ದಿರಬಹುದಾ? ಗೊತ್ತಿಲ್ಲ!!