ಪ್ರಧಾನಿಗೆ ಕೇಳಲೇಬಾರದ ಪ್ರಶ್ನೆ ಯಾವುದು ಎಂದು ಹೇಳಿದ ಕರಣ್ ಥಾಪರ್!

ರವೀಶ್ ಕುಮಾರ್ ಅಥವಾ ಕರಣ್ ಥಾಪರ್ ರಂತಹ ವಸ್ತುನಿಷ್ಠ, ನೇರ ನಿಷ್ಠುರ ಪತ್ರಕರ್ತರು ಮೋದಿ ಇಂಟರ್ವ್ಯೂ ಮಾಡಿದ್ರೆ ಹೇಗಿರಬಹುದು ಎಂಬ ಚರ್ಚೆ ಜೋರಾಗಿರುವಾಗಲೇ ಕರಣ್ ಥಾಪರ್ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಒಂದು ಲೇಖನ ಬರೆದಿದ್ದಾರೆ.

Update: 2024-05-26 17:29 GMT

ಒಂದು ಕಡೆ ಪ್ರಧಾನಿ ಮೋದಿಯವರು ಮಡಿಲ ಮೀಡಿಯಾಗಳಿಗೆ ಕೊಡುತ್ತಿರುವ ಡಝನ್ ಗಟ್ಟಲೆ ಸ್ಕ್ರಿಪ್ಟೆಡ್ ಇಂಟರ್ವ್ಯೂಗಳು, ಇನ್ನೊಂದು ಕಡೆ ಬಿಜೆಪಿಯೇ ಭಾರೀ ಬಹುಮತದಿಂದ ಗೆದ್ದೇ ಗೆಲ್ಲುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳುವ ಹತ್ತಾರು ಇಂಟರ್ವ್ಯೂ ಗಳು. ಆದರೆ ಇವೆಲ್ಲಕ್ಕೆ ಸೆಡ್ಡು ಹೊಡೆಯುವಂತೆ ಬಂದ ಖ್ಯಾತ ಸಂದರ್ಶಕ ಕರಣ್ ಥಾಪರ್ ನಡೆಸಿದ ಒಂದೇ ಒಂದು ಇಂಟರ್ವ್ಯೂ. ಆ ಇಂಟರ್ವ್ಯೂ ನಲ್ಲಿ ಕರಣ್ ಥಾಪರ್ ಕೇಳಿದ ನೇರ, ನಿಷ್ಠುರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ ಪ್ರಶಾಂತ್ ಕಿಶೋರ್ ವಿಚಲಿತರಾಗಿಬಿಟ್ಟರು. ಸಮರ್ಥ ಉತ್ತರವಿಲ್ಲದೆ ಸಿಟ್ಟಾಗಿ ಎಗರಾಡಿಬಿಟ್ಟರು. ಕೊನೆಗೆ ನೀರೂ ಕುಡಿದರು.

ಆಗಲೇ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದು - ಇಂಟರ್ವ್ಯೂ ಅಂದ್ರೆ ಹೀಗಿರ್ಬೇಕು, ಪ್ರಶ್ನೆ ಕೇಳೋದು ಅಂದ್ರೆ ಹೀಗೆ ಕೇಳ್ಬೇಕು. ಎಲ್ಲೆಲ್ಲೋ ಕೆಲಸಕ್ಕೆ ಬಾರದ ಡಝನ್ ಗಟ್ಟಲೆ ಇಂಟರ್ವ್ಯೂ ಕೊಡೋದಕ್ಕಿಂತ ಪ್ರಧಾನಿ ಮೋದಿ ಕರಣ್ ಥಾಪರ್ ಒಬ್ಬರಿಗೇ ಇಂಟರ್ವ್ಯೂ ಕೊಟ್ಟರೆ ಸಾಕಿತ್ತು ಅಂತ.

ಈಗ ರವೀಶ್ ಕುಮಾರ್ ಅಥವಾ ಕರಣ್ ಥಾಪರ್ ರಂತಹ ವಸ್ತುನಿಷ್ಠ, ನೇರ ನಿಷ್ಠುರ ಪತ್ರಕರ್ತರು ಮೋದಿ ಇಂಟರ್ವ್ಯೂ ಮಾಡಿದ್ರೆ ಹೇಗಿರಬಹುದು ಎಂಬ ಚರ್ಚೆ ಜೋರಾಗಿರುವಾಗಲೇ ಕರಣ್ ಥಾಪರ್ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಒಂದು ಲೇಖನ ಬರೆದಿದ್ದಾರೆ.

ಪ್ರಧಾನಿಯ ಸಂದರ್ಶನದಲ್ಲಿ ಕೇಳಲೇಬೇಕಾದ ಪ್ರಶ್ನೆಗಳೇನು ಎಂಬುದೇ ಆ ಲೇಖನದ ಶೀರ್ಷಿಕೆ.

ಈಗ ಬಿಬಿಸಿಯ ಅಧ್ಯಕ್ಷರಾಗಿರುವ ಸಮೀರ್ ಶಾ ಅವರು ಬಹಳ ಹಿಂದೆ ಲಂಡನ್ ವೀಕೆಂಡ್ ಟೆಲಿವಿಷನ್ ನಲ್ಲಿರುವಾಗಲೇ ನನಗೆ ಟಿವಿ ಸಂದರ್ಶನಗಳಲ್ಲಿ ಏನೇನನ್ನು ಕೇಳಬೇಕು ಎಂದು ಹೇಳಿಕೊಟ್ಟವರು ಎಂದು ಕರಣ್ ಥಾಪರ್ ಸ್ಮರಿಸಿದ್ದಾರೆ.ತಾನು ವೀಕ್ಷಕರ ಅಥವಾ ಜನರ ಪರವಾಗಿ ಪ್ರಶ್ನೆ ಕೇಳುತ್ತಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ನಾನು ಕಲಿತ ಮುಖ್ಯ ಪಾಠ ಎಂದಿದ್ದಾರೆ ಕರಣ್ ಥಾಪರ್.

ನಿಮ್ಮ ಪ್ರಶ್ನೆ ವಿಷಯಕ್ಕೆ ಸಂಬಂಧಿಸಿದ್ದಾಗಿರಬೇಕು ಹಾಗು ನಿಮಗೆ ಉತ್ತರ ಸಿಗುವವರೆಗೂ ಅಥವಾ ಅವರು ಉತ್ತರ ಕೊಡೋದಿಲ್ಲ ಎಂದು ಖಚಿತ ಆಗುವವರೆಗೂ ನೀವು ಅದಕ್ಕಾಗಿ ಆಗ್ರಹಿಸಬೇಕು.

ನಾನು ಒಬ್ಬ ಪ್ರಧಾನಿಯ ಸಂದರ್ಶನ ಮಾಡುವಾಗ ಅವರಲ್ಲಿ ನಾನು ಏನನ್ನು ಕೇಳಲು ಬಯಸುತ್ತೇನೆ ಅಥವಾ ನನ್ನ ಪರವಾಗಿ ಪ್ರಶ್ನೆ ಕೇಳೋದಿದ್ರೆ ಯಾವ ರೀತಿಯ ಪ್ರಶ್ನೆ ಕೇಳಬೇಕು ಎಂದು ಪಟ್ಟಿ ಮಾಡಿದ್ದಾರೆ ಕರಣ್ ಥಾಪರ್ .

ಮೊದಲು ಪ್ರಧಾನಿ ಅವರ ಸಾಧನೆಗಳನ್ನು ಹೇಳಲು ನಾನು ಅವಕಾಶ ಕೊಡುತ್ತೇನೆ. ಆದರೆ ಅದರ ಜೊತೆಗೇ ಅವರು ಎದುರಿಸಿದ ಸವಾಲುಗಳು, ಅವರ ಅವಧಿಯಲ್ಲಿ ಬಯಲಾದ ಅಕ್ರಮಗಳು, ಅವರು ಮಾಡಿರುವ ತಪ್ಪುಗಳು ಹಾಗು ಅವುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಬಗ್ಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ಬಯಸುತ್ತೇನೆ.

ಹಾಗೇ , ನಮ್ಮ ಸಂದರ್ಶನ ಸಂಭಾಷಣೆಯ ರೂಪದಲ್ಲಿರಬೇಕೇ ಹೊರತು ಏಕ ಮುಖ ಭಾಷಣದ ಹಾಗೆ ಇರಬಾರದು. ಹಾಗಾಗಿ , ಅವರು ಮಾತಾಡುವಾಗ ಅವರನ್ನು ನಡುವೆ ತಡೆದು ಉಪಪ್ರಶ್ನೆ ಕೇಳೋದು ನಿರೀಕ್ಷಿತ ಮಾತ್ರವಲ್ಲ ಅದು ಅಗತ್ಯ ಕೂಡ.

ಎರಡನೆಯದು, ಸಂದರ್ಶನ ಪ್ರಧಾನಿಗೆ ಅವರ ವಿರೋಧಿಗಳನ್ನು ಹಣಿಯಲು ವೇದಿಕೆಯಾಗಬಾರದು. ಅವರ ವಿರೋಧಿಗಳ ಮಾನ್ಯ ಟೀಕೆಗಳಿಗೆ ಪ್ರಧಾನಿ ಉತ್ತರಿಸುವ ಹಾಗೆ ಮಾಡಬೇಕು. ಇಲ್ಲಿ "ಮಾಡಬೇಕು" ಎಂಬುದು ಬಹಳ ಮುಖ್ಯ. ಏಕೆಂದರೆ ಸಂದರ್ಶಕ ಹಾಗೆ ಉತ್ತರಿಸುವಂತೆ ಮಾಡದಿದ್ದರೆ ಯಾವುದೇ ಪ್ರಧಾನಿ ಅದರಿಂದ ನುಣುಚಿಕೊಳ್ಳುತ್ತಾರೆ. ಹಾಗೆ ಅವರು ತಪ್ಪಿಸಿಕೊಳ್ಳದ ಹಾಗೆ ನೋಡಿಕೊಳ್ಳುವುದು ಹಾಗು ಉತ್ತರಿಸುವ ಹಾಗೆ ಮಾಡುವುದು ಸಂದರ್ಶಕನ ಜವಾಬ್ದಾರಿ.

ಮೂರನೆಯದು, ಸಂದರ್ಶನ ಮಾಡುವಾಗ ಸಂದರ್ಶಕ ಹಾಗು ಪ್ರಧಾನಿ ಇಬ್ಬರೂ ಸಮಾನರು. ಹಾಗಿದ್ದರೆ ಮಾತ್ರ ಸಂದರ್ಶಕ ಪ್ರಧಾನಿಗೆ ಸರಿಯಾದ ಪ್ರಶ್ನೆ ಕೇಳಬಲ್ಲ. ಹಾಗಾಗಿ ಪ್ರಧಾನಿಯನ್ನು ' ಸರ್ ' ಎಂದು ಕರೆಯುವಂತಿಲ್ಲ. ಹಾಗೆ ಕರೆದ ಕೂಡಲೇ ಅವರನ್ನು ನಾವು ಎತ್ತರದಲ್ಲಿಟ್ಟಂತೆ. ಸಂದರ್ಶಕ ಅಂಜುಬುರುಕನ ಹಾಗೆ ಅಥವಾ ಸಂದರ್ಭಕ್ಕೆ ತಕ್ಕಂತೆ ಒಗ್ಗಿಕೊಳ್ಳುವವನ ಹಾಗೆ ಕೂಡ ಕಾಣಬಾರದು. ತಾನು ಕಠಿಣ ಪ್ರಶ್ನೆಗಳನ್ನೂ ಕೇಳಬಲ್ಲೆ ಎಂದು ಸಂದರ್ಶಕ ತನ್ನ ವೀಕ್ಷಕರಿಗೆ ವಿಶ್ವಾಸ ಮೂಡಿಸುವಂತಿರಬೇಕು.

ನಾಲ್ಕನೆಯದು, ಸಂದರ್ಶಕ ಕೇಳಿದ ಪ್ರಶ್ನೆಗೆ ಪ್ರಧಾನಿ ಉತ್ತರಿಸುವ ಹಾಗೆ ನೋಡಿಕೊಳ್ಳಬೇಕು. ಒಂದು ಸ್ವಲ್ಪ ಆಚೀಚೆ ಹೋದರೆ ಪರವಾಗಿಲ್ಲ. ಆದರೆ ತೀರಾ ಕೇಳಿದ ಪ್ರಶ್ನೆಯನ್ನು ಬಿಟ್ಟು ಏನೇನೋ ಉದ್ದಕ್ಕೆ ಮಾತಾಡುತ್ತಾ ಹೋಗೋದಕ್ಕೆ ಬಿಡಲೇಬಾರದು. ಪ್ರಧಾನಿ ಹಾಗೆ ಮಾಡಿದರೆ ವಿನಯದಿಂದಲೇ ಸ್ಪಷ್ಟವಾಗಿ ಅದಕ್ಕೆ ಅವಕಾಶ ನಿರಾಕರಿಸಬೇಕು. ಮತ್ತೆ ಮತ್ತೆ ಪ್ರಧಾನಿ ಹಾಗೆ ಹಳಿ ತಪ್ಪಿದರೆ ಮತ್ತೆ ಮತ್ತೆ ಅವರನ್ನು ತಡೆಯಬೇಕು.

ಐದನೆಯದು, ಸಂದರ್ಶಕನಿಗೆ ತಾನೇನು ಕೇಳಲು ಬಯಸಿದ್ದೇನೆ ಎಂಬುದು ಸ್ಪಷ್ಟ ಇರಬೇಕು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿರಬೇಕು. ಸುಮ್ಮನೆ ಕೇಳೋದಕ್ಕಾಗಿ ಏನೋ ಪ್ರಶ್ನೆ ಕೇಳೋದಲ್ಲ. "ನೀವು ಈ ಬಾರಿ ಹೇಗೂ ಖಚಿತವಾಗಿ ಗೆಲ್ತೀರಿ, 2029 ರಲ್ಲೂ ಗೆಲ್ತೀರಾ " ಎಂಬಂತಹ ಪ್ರಶ್ನೆಗಳನ್ನು ಎಂದೂ ಕೇಳಲೇಬಾರದು.

ಇನ್ನು ನಿರ್ದಿಷ್ಟ ಪ್ರಧಾನಿಯ ವ್ಯಕ್ತಿತ್ವ ಹಾಗು ವರ್ತನೆಗೆ ತಕ್ಕಂತೆ ಪ್ರತಿಕ್ರಿಯಿಸಲು ಸಂದರ್ಶಕ ಸಜ್ಜಾಗಿರಬೇಕು. ಉದಾಹರಣೆಗೆ, ಒಬ್ಬ ಪ್ರಧಾನಿ ತಾನು ಮಾಡುತ್ತಿರೋದು ಎಲ್ಲವೂ ದೇಶಕ್ಕಾಗಿ, ನನ್ನ ಪ್ರತಿಯೊಂದು ಕೆಲಸವೂ ದೇಶದ ಉದ್ದಾರಕ್ಕಾಗಿ ಎಂದು ತುಂಬಾ ದೇಶಭಕ್ತಿಯ ಡೋಲು ಬಾರಿಸತೊಡಗಿದರೆ ಕೂಡಲೇ ಈ ಹಿಂದಿನ ಎಲ್ಲ ಪ್ರಧಾನಿಗಳೂ ದೇಶಕ್ಕಾಗಿಯೇ ಕೆಲಸ ಮಾಡಿದವರು ಎಂಬುದನ್ನು ಅವರಿಗೆ ನೆನಪಿಸಬೇಕು. ಅವರೊಬ್ಬರೇ ದೇಶಕ್ಕಾಗಿ ಕೆಲಸ ಮಾಡಿದವರಲ್ಲ ಎಂಬುದು ಅವರಿಗೆ ಗೊತ್ತಾಗಬೇಕು.

ಇನ್ನು, ಪ್ರಧಾನಿ ಏನಾದರೂ ಹೇಳಿದ್ದು ಅಥವಾ ಮಾಡಿದ್ದು ಎಲ್ಲರಿಗೂ ಗೊತ್ತಿದ್ದು ಅದರ ಬಗ್ಗೆಯೇ ಅವರನ್ನು ಪ್ರಶ್ನಿಸಿದಾಗ ಪ್ರಧಾನಿ ತಾನು ಹಾಗೆ ಮಾಡೇ ಇಲ್ಲ ಅಥವಾ ಹೇಳೇ ಇಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದರೆ, ಅಂತಹ ಹೇಳಿಕೆಯನ್ನು ಎಲ್ಲಿ ಯಾವಾಗ ಹೇಳಿದ್ರಿ ಅಥವಾ ಮಾಡಿದ್ದೀರಿ ಎಂದು ಉಲ್ಲೇಖಿಸಲು ಸಂದರ್ಶಕ ಸಿದ್ಧವಾಗಿರಬೇಕು. ಹೀಗೆ ಮಾಡೋದು ಪ್ರಧಾನಿಗೆ ಸವಾಲು ಹಾಕಿದ ಹಾಗೆ ಆಗೋದೇ ಇಲ್ಲ. ಸಂದರ್ಶನ ಎಂದ ಮೇಲೆ ಸಂದರ್ಶಕ ಮಾಡಲೇಬೇಕಾದ ಕೆಲಸ ಅದು.

ಕೆಲವೊಮ್ಮೆ ನಿರ್ದಿಷ್ಟ ಪ್ರಧಾನಿಗೆ ಸಂಬಂಧಿಸಿದ ಕೇಳಲೇಬೇಕಾದ ಪ್ರಶ್ನೆಗಳಿರುತ್ತವೆ. ಅವುಗಳನ್ನು ಕೇಳಲೇಬೇಕು. ಅವುಗಳನ್ನು ಬಿಡಬಾರದು. ಉದಾಹರಣೆಗೆ ಪ್ರಧಾನಿ ತಾನು ದೇವರ ಪ್ರತಿನಿಧಿಯಾಗಿ ಬಂದವನು ಎಂದು ಹೇಳಿದ್ದರೆ ಅದು ಅವರಿಗೆ ಹೇಗೆ ಗೊತ್ತಾಯಿತು? ಹಾಗೆ ಹೇಳಿಕೊಳ್ಳುವುದು ವೈಜ್ಞಾನಿಕವೇ ಎಂದು ಸಂಶಯ ವ್ಯಕ್ತಪಡಿಸಿಯೇ ಕೇಳಬೇಕು. ಅಥವಾ ಪ್ರಧಾನಿ ಎದುರು ಸ್ಪರ್ಧಿಸಲು ಒಬ್ಬ ಕಾಮಿಡಿಯನ್ ಗೆ ಅವಕಾಶ ನಿರಾಕರಿಸಲ್ಪಟ್ಟಿದ್ದರೆ ಹಾಗೆ ಮಾಡಿದ್ದು ಸರಿಯೇ ಎಂದು ಪ್ರಧಾನಿಯನ್ನು ಕೇಳಬೇಕು. ಅದು ಪ್ರಧಾನಿಗೆ ಇರಿಸು ಮುರಿಸು ತಂದರೂ ಸರಿ ಅದಕ್ಕೆ ಉತ್ತರ ಕೊಡುವಂತೆ ಕೇಳಬೇಕು.

 

PHOTO : Hindustan Times

ಪ್ರಧಾನಿ ಯಾವಾಗಲೂ ಮಾತಾಡುವಾಗ ತನ್ನನ್ನು ತಾನೇ ಯಾವಾಗಲೂ ಮೂರನೇ ವ್ಯಕ್ತಿಯ ಹಾಗೆ ಸಂಬೋಧಿಸುವುದು ಯಾಕೆ? ಹೀಗೆ ಮಾಡುವ ಮೂಲಕ ಅವರು ತನ್ನನ್ನು ತಾನೇ ವೈಭವೀಕರಿಸಿಕೊಳ್ಳುತ್ತಿದ್ದಾರಾ ಎಂದು ಕೇಳಲೇಬೇಕು. ಅಂತಿಮವಾಗಿ, ಒಬ್ಬ ನ್ಯಾಯಯುತ ಮನಸ್ಸಿನ ಒಬ್ಬ ಗೌರವಾನ್ವಿತ ಪ್ರಧಾನಿ ನಾನು ಇಲ್ಲಿ ಹೇಳಿದ್ದನ್ನು ಖಂಡಿತ ಒಪ್ಪಬಹುದು. ನೆನಪಿಟ್ಟುಕೊಳ್ಳಿ. ಅವರು ಆ ಸಂದರ್ಶನವನ್ನು ವೀಕ್ಷಕರ ಮೇಲೆ ಪ್ರಭಾವ ಬೀರಲು ಬಳಸಿಕೊಳ್ಳಲು ಬಯಸುತ್ತಾರೆಯೇ ಹೊರತು ಅವರನ್ನು ಅಸಮಾಧಾನಗೊಳಿಸಲು ಬಯಸುವುದಿಲ್ಲ.

ಇವಿಷ್ಟು ಪ್ರಧಾನಿಯ ಇಂಟರ್ವ್ಯೂ ಮಾಡಲು ಸಿಕ್ಕಿದರೆ ಕರಣ್ ಥಾಪರ್ ಹೇಳಲು ಬಯಸುವ ಪ್ರಶ್ನೆಗಳು ಮತ್ತು ಇಂಟರ್ವ್ಯೂ ಮಾಡಲು ಅನುಸರಿಸುವ ಶೈಲಿ. ಆದರೆ ಕರಣ್ ಥಾಪರ್ ರಂತಹ ಸಂದರ್ಶಕರಿಗೆ ಪ್ರಧಾನಿ ಮೋದಿ ಇಂಟರ್ವ್ಯೂ ಕೊಡೋದು ಸಾಧ್ಯವೇ?

ಅದು ಈ ಹೊತ್ತಿನ ಬಹುಮುಖ್ಯ ಪ್ರಶ್ನೆ.

ಮಾಹಿತಿ ಕೃಪೆ : Hindustan Times

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News