ಮಳೆ ಆಶ್ರಿತ ಕೃಷಿ ಸಚಿವಾಲಯ ಕರ್ನಾಟಕಕ್ಕೆ ಬೇಕು
ಕರ್ನಾಟಕದ 2/3 ಜನಸಂಖ್ಯೆಯ ಬದುಕನ್ನು ನಿರ್ಧರಿಸುವ ಕೃಷಿ ಪ್ರದೇಶದ ಬಗ್ಗೆ ಸರಕಾರ ಆದ್ಯತೆ ನೀಡಬೇಕಾಗಿದೆ. ಈ ವರ್ಷದ ಮಳೆ ಅಭಾವ ಸೃಷ್ಟಿಸಿರುವ ಗಂಭೀರ ಸಂಕಷ್ಟ ಈ ಪ್ರದೇಶಗಳ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಸ್ಥಿತಿಯಲ್ಲಿ ಸರಕಾರ ಫೋಕಸ್ಡ್ ಆಗಿ ಈ ಪ್ರದೇಶದ ಅಭಿವೃದ್ಧಿಗೆ ಸಂಕಲ್ಪ ಪೂರ್ವಕ ಚೌಕಟ್ಟನ್ನು ನೀಡುವ ಸಂಕೇತವಾಗಿ ಈ ಸಚಿವಾಲಯ ಸೃಷ್ಟಿಯಾದರೆ ಮುಂದಿನ ವರ್ಷಗಳಲ್ಲಿ ಮಳೆ ಆಶ್ರಿತ ಕೃಷಿಗೆ ಉತ್ತರದಾಯಿತ್ವ ಮತ್ತು ಅನುದಾನದ ವಿಷಯದಲ್ಲೂ ನಿರ್ದಿಷ್ಟತೆ ಒದಗುತ್ತದೆ.
ಭಾರತದ ಮಳೆ ಆಧಾರಿತ ಕೃಷಿಯ ಸನ್ನಿವೇಶ, ಸ್ಥಿತಿ-ಗತಿ: ಭಾರತದ ಒಟ್ಟಾರೆ ಕೃಷಿಭೂಮಿಯಲ್ಲಿ ಶೇ.60ರಷ್ಟು ಮಳೆ ಆಶ್ರಿತ ಪ್ರದೇಶವಾಗಿದೆ. ಭಾರತದ ಒಟ್ಟಾರೆ ಆಹಾರೋತ್ಪಾದನೆಯ ಶೇ. 40ರಷ್ಟು ಮಳೆ ಆಶ್ರಿತ ಪ್ರದೇಶದ ಕೊಡುಗೆ. ಹಾಗೆಯೇ ಶೇ. 40 ಮಾನವ ಮತ್ತು ಶೇ. 60 ಪಶು ಜೀವ ರಾಶಿ ಈ ಪ್ರದೇಶವನ್ನು ಅವಲಂಬಿಸಿದೆ. ಮಳೆ ಆಶ್ರಿತ ಪ್ರದೇಶದ ವಿಸ್ತೀರ್ಣ ಗಮನಿಸಿದರೆ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಆದರೆ ಹೆಕ್ಟೇರುವಾರು ಉತ್ಪಾದಕತೆಯಲ್ಲಿ ಭಾರತದ ಸ್ಥಾನ ತೀರಾ ಕೆಳ ಮಟ್ಟದಲ್ಲಿದೆ. ಇಷ್ಟಾಗಿಯೂ ಭಾರತದ ದ್ವಿದಳ ಧಾನ್ಯ ಮತ್ತು ಒರಟು ಧಾನ್ಯಗಳ ಶೇ. 87, ಶೇ. 77 ಎಣ್ಣೆಕಾಳು, ಶೇ. 50 ಏಕದಳ ಧಾನ್ಯ, ಶೇ. 66 ಹತ್ತಿ, ಶೇ. 80 ಮಾವು ಈ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿದೆ.
ಹಾಗೆ ಬೆಳೆ ವೈವಿಧ್ಯತೆಯೂ ಮಳೆ ಆಶ್ರಿತ ಪ್ರದೇಶದಲ್ಲಿ ಜಾಸ್ತಿ. ನೀರಾವರಿ ಪ್ರದೇಶದಲ್ಲಿ ಐದಾರು ಬೆಳೆಗಳಷ್ಟೇ ಸ್ಥಾನ ಪಡೆದಿದ್ದರೆ ಮಳೆ ಆಶ್ರಿತ ಪ್ರದೇಶದಲ್ಲಿ 34ಕ್ಕೂ ಹೆಚ್ಚು ಬೆಳೆ ಪ್ರಭೇದಗಳನ್ನು ಬೆಳೆಸಲಾಗುತ್ತಿದೆ. ಕೃಷಿ ಪೂರಕ ಜೀವನೋಪಾಯಗಳಾದ ಪಶು ಸಂಗೋಪನೆ, ತೋಟಗಾರಿಕೆ, ಕೃಷಿ ಅರಣ್ಯ, ಸಂಬಾರ ಬೆಳೆಗಳು, ಜೇನು ಸಾಕಣೆ, ಔಷಧೀಯ ಗಿಡಮೂಲಿಕೆಗಳು ಮಳೆ ಆಶ್ರಿತ ಪ್ರದೇಶದಲ್ಲೇ ಜಾಸ್ತಿ.
ಪಶು ಸಂಗೋಪನೆ ಮತ್ತು ಕೃಷಿ ವ್ಯವಸ್ಥೆ ಅತ್ಯಂತ ಆಪ್ತವಾಗಿ ಹೆಣೆದುಕೊಂಡಿರುವುದು ಮಳೆ ಆಶ್ರಿತ ಪ್ರದೇಶದಲ್ಲಿ. ಶೇ.70ರಷ್ಟು ಕೃಷಿ ಉಳಿಕೆ/ ತ್ಯಾಜ್ಯಗಳನ್ನು ಪಶು ಆಹಾರವಾಗಿ ಬಳಸಲಾಗುತ್ತಿದೆ. ಇದು ಉತ್ಕೃಷ್ಟ ತಿಪ್ಪೆ ಗೊಬ್ಬರವಾಗಿ ಮಾರ್ಪಾಡಾಗಿ ಮಣ್ಣಿನ ಜೈವಿಕ ಸಾರ ಸಂವರ್ಧನೆಗೆ ಸಹಾಯ ಮಾಡುತ್ತಿದೆ.
ಕುರಿ ಸಂಗೋಪನೆಯೂ ಮಳೆ ಆಶ್ರಿತ ಪ್ರದೇಶದಲ್ಲೇ ಜಾಸ್ತಿ. ಸ್ಥಳ ನಿರ್ದಿಷ್ಟ ವಿಶಿಷ್ಟ ಬೆಳೆಗಳೂ ಮಳೆ ಆಶ್ರಿತ ಪ್ರದೇಶದಲ್ಲಿ ಕಾಣಬಹುದು.
ಮಳೆ ಆಶ್ರಿತ ಪ್ರದೇಶದ ಬಿಕ್ಕಟ್ಟುಗಳು: ಕಳೆದ ಮೂರು ದಶಕಗಳಲ್ಲಿ ಕೃಷಿಯ ಪ್ರಗತಿ ದರ ಕುಂಠಿತವಾಗಿದ್ದು ಈ ಪ್ರಮಾಣ ಮಳೆ ಆಶ್ರಿತ ಪ್ರದೇಶದಲ್ಲಿ ಆತಂಕಕಾರಿ ಮಟ್ಟಕ್ಕಿಳಿದಿದೆ. ದೇಶದ ಅತೀ ಹೆಚ್ಚು ಗ್ರಾಮೀಣ ಬಡವರು ಮತ್ತು ಅತೀ ಸಣ್ಣ ರೈತರೂ ಮಳೆ ಆಶ್ರಿತ ಪ್ರದೇಶದಲ್ಲೇ ಇದ್ದಾರೆ.
ನೀರಾವರಿ ಪ್ರದೇಶದ ಲೆಕ್ಕಾಚಾರಕ್ಕೆ ಕೊಳವೆ ಬಾವಿ ಆಧಾರಿತ ಪ್ರದೇಶವನ್ನೂ ಸೇರಿಸಿಕೊಳ್ಳಲಾಗಿದೆ. ಈ ಪ್ರದೇಶ ಒಟ್ಟಾರೆ ‘ನೀರಾವರಿ’ ಎಂದು ಘೋಷಿಸಲ್ಪಟ್ಟ ಪ್ರದೇಶದ ಶೇ. 60ರಷ್ಟಿದೆ. ನಿಜಕ್ಕೂ ಇದನ್ನು ಮಳೆ ಅವಲಂಬಿ ನೀರಾವರಿ ಎಂದು ಕರೆಯಬೇಕಾಗಿದೆ.
ಬಹುತೇಕ ಈ ನೀರಾವರಿ ಖಾಸಗಿ ಒಡೆತನಕ್ಕೆ ಸೇರಿದ್ದು, ಸರಕಾರದ ಉಚಿತ ವಿದ್ಯುತ್ ನೀತಿಯಿಂದಾಗಿ ಆತಂಕಕಾರಿ ಮಟ್ಟದಲ್ಲಿ ನೀರನ್ನು ಹೊರತೆಗೆದು ಬಳಸಲಾಗುತ್ತಿದೆ.
ಮಣ್ಣಿನ ಸಾವಯವ ಮಟ್ಟ ತೀರಾ ಅಪಾಯಕಾರಿ ಸ್ಥಿತಿಗೆ ಕುಸಿದಿರುವುದೂ ಇದೇ ಪ್ರದೇಶದಲ್ಲಿ. ಮಣ್ಣಿನ ಸವಕಳಿ, ಮಣ್ಣು ಬರಡಾಗಿರುವ ಪ್ರಮಾಣವೂ ಇಲ್ಲಿ ಅತೀ ಹೆಚ್ಚು.
ಹವಾಮಾನ ಬದಲಾವಣೆಗೆ ತೀವ್ರವಾಗಿ ಪಕ್ಕಾಗುವ ಮಳೆ ಆಶ್ರಿತ ಪ್ರದೇಶದಲ್ಲಿ ಉತ್ಪಾದನೆಯ ಪ್ರಮಾಣವೂ ಕಡಿಮೆ. ಸರಕಾರಿ ಬಂಡವಾಳವೂ ಕಡಿಮೆ. ಇದೇ ಕಾರಣಕ್ಕಾಗಿ ಇತರ ಮೂಲ ಸಂರಚನೆ ಮತ್ತಿತರ ಅಭಿವೃದ್ಧಿ ಸೂಚಿಗಳಲ್ಲೂ ಈ ಪ್ರದೇಶ ಹಿಂದುಳಿದಿದೆ.
ಕೃಷಿ ತಂತ್ರಜ್ಞಾನದ ಅಳವಡಿಕೆ, ಮಾರುಕಟ್ಟೆ ಸೌಲಭ್ಯ ಇತ್ಯಾದಿಗಳಲ್ಲೂ ಮಳೆ ಆಶ್ರಿತ ಪ್ರದೇಶ ಹಿಂದುಳಿದಿದೆ.
ಪ್ರಾಯೋಗಿಕ ಪ್ರದರ್ಶನ ತಾಕುಗಳಲ್ಲಿ ದೊರಕಿದ ಇಳುವರಿಯ ಕಾಲು ಭಾಗವೂ ರೈತನ ಹೊಲಗಳಲ್ಲಿ ದೊರಕುತ್ತಿಲ್ಲ ಎಂಬುದು ಈ ಕಂದರವನ್ನು ಎತ್ತಿ ತೋರಿಸಿದೆ.
ಕರ್ನಾಟಕದ ಮಳೆ ಆಶ್ರಿತ
ಪ್ರದೇಶದ ಸ್ಥಿತಿ-ಗತಿ
ರಾಜಸ್ಥಾನ ಬಿಟ್ಟರೆ ಅತ್ಯಂತ ಹೆಚ್ಚು ಮಳೆ ಆಶ್ರಿತ ಪ್ರದೇಶ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದ ಹತ್ತು ಕೃಷಿ ಪರಿಸರ ವಲಯಗಳಲ್ಲಿ ಐದು ಒಣ ವಲಯಗಳಾಗಿವೆ. ಇನ್ನೆರಡು ಮಳೆನಾಡಿನ ಅಂಚಿನ ಮಳೆ ಆಶ್ರಿತ ವಲಯಗಳೇ.
ರಾಜ್ಯದ ಬಹುಪಾಲು ಭೂಪ್ರದೇಶ ಅರೆ ಒಣ ಸ್ಥಿತಿಯ ಭೂಮಿ. ಇವು ತೀವ್ರ ಮಟ್ಟದ ಕೃಷಿ ಹವಾಮಾನ ವೈಪರೀತ್ಯಗಳನ್ನೂ ಸಂಪನ್ಮೂಲಗಳ ಕೊರತೆಯನ್ನೂ ಎದುರಿಸುತ್ತಿವೆ. ಅನಿಶ್ಚಿತ ಮಳೆ ಮತ್ತು ಮಳೆಯ ಅಸಮರ್ಪಕ ವಿತರಣೆಯ ಪ್ರಾಕೃತಿಕ ಸ್ಥಿತಿಯನ್ನೂ ಗಮನಿಸಬೇಕು. ಈ ಕಾರಣಕ್ಕೇ ಕೃಷಿಯ ಉತ್ಪಾದಕತೆ ತೀವ್ರ ಪ್ರಭಾವಕ್ಕೊಳಗಾಗಿದೆ. ರಾಜ್ಯದ ಕೇವಲ ಶೇ. 30 ಪ್ರದೇಶ ಮಾತ್ರ ನೀರಾವರಿಗೊಳಗಾಗಿದೆ. ಆರು ಜಿಲ್ಲೆಗಳಲ್ಲಿ ಮಾತ್ರ ನೀರಾವರಿಯ ಪ್ರಮಾಣ ಶೇ. 50 ಇದೆ.
ಮಳೆ ಆಶ್ರಿತ ಕೃಷಿ ಪ್ರದೇಶದ
ಮುಖ್ಯ ಲಕ್ಷಣಗಳು
* ನೀರಾವರಿ ಸೌಲಭ್ಯ ಸೀಮಿತ. ಬಹುತೇಕ ನೀರಾವರಿ ಖಾಸಗಿ ಕೊಳವೆ ಬಾವಿ ಮೂಲದ್ದು. ಒಂದೇ ಬೆಳೆ, ತಪ್ಪಿದರೆ ಎರಡು ಬೆಳೆಗೆ ಸೀಮಿತವಾಗಿರುವ ಕಾರಣ ಕೃಷಿ ಕಾರ್ಮಿಕರಿಗೆ ಉದ್ಯೋಗಾವಕಾಶ ತೀರಾ ಸೀಮಿತ. ಉತ್ಪಾದಕತೆಯೂ ಕಡಿಮೆಯಿರುವ ಕಾರಣ ಬಡತನದ ಪ್ರಮಾಣ ಮತ್ತು ಬಿಕ್ಕಟ್ಟು ಮಳೆ ಆಶ್ರಿತ ಪ್ರದೇಶದಲ್ಲಿ ಜಾಸ್ತಿ.
* ಮಳೆ ಆಶ್ರಿತ ಪ್ರದೇಶದ ರೈತರಿಗೆ ದೊರಕುವ ಸಾಲದ ಪ್ರಮಾಣ, ಮಾರುಕಟ್ಟೆ ಸಂಪರ್ಕ, ಮೌಲ್ಯ ವರ್ಧನೆಯ ಅವಕಾಶ ಮತ್ತು ಮಾರ್ಗದರ್ಶನಗಳೂ ಕಡಿಮೆ.
* ರೈತರ ಆದಾಯ ಗಮನಿಸಿದರೆ ಮಳೆ ಆಶ್ರಿತ ರೈತರು ಶೇ. 43ರಷ್ಟು ಮಾತ್ರ ಆದಾಯವನ್ನು ಬೇಸಾಯದಿಂದ ಗಳಿಸುತ್ತಾರೆ. ಉಳಿದ ಆದಾಯ ಕೃಷಿಯೇತರ ಮೂಲದ್ದು. ಅಂದರೆ ಕೂಲಿ, ಪಶು ಸಂಗೋಪನೆ ಇತ್ಯಾದಿ ಮೂಲಗಳು.
* ಬೆಳೆ ಆಧಾರಿತ ಜೀವನೋಪಾಯಗಳಲ್ಲಿ ಹೆಚ್ಚು ಅವಕಾಶವಿಲ್ಲದ ಕಾರಣ ಸಮೀಪದ ಅರಣ್ಯ, ಹುಲ್ಲುಗಾವಲುಗಳ ಮೇಲೆ ಈ ರೈತರು ಹೆಚ್ಚು ಅವಲಂಬಿತರಾಗಿದ್ದು, ಈ ಪ್ರದೇಶಗಳೂ ತೀವ್ರ ಸಂಪನ್ಮೂಲ ಕೊರತೆಯ ಒತ್ತಡಕ್ಕೊಳಗಾಗಿವೆ.
* ತೋಟಗಾರಿಕಾ ಬೆಳೆಗಳು ಮಳೆ ಆಶ್ರಿತ ಪ್ರದೇಶದಲ್ಲಿ ಹೆಚ್ಚಿದ್ದರೂ ಖಚಿತ ನೀರಿನ ಮೂಲವಿರುವ ಪ್ರದೇಶ ತೀರಾ ಸೀಮಿತವಾಗಿರುವ ಕಾರಣ ಉತ್ಪಾದಕತೆ ಕಡಿಮೆ ಪ್ರಮಾಣದಲ್ಲಿದೆ.
* ಪಶು ಸಂಗೋಪನೆಯ ಉತ್ಪಾದಕತೆಯೂ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ 1/3ರಷ್ಟು ಮಾತ್ರ.. ಪಶು ಸಂಗೋಪನೆಗೆಂದೇ ಮೇವು ಬೆಳೆಯುವ ಅವಕಾಶ ಮಳೆ ಆಶ್ರಿತ ಪ್ರದೇಶದಲ್ಲಿ ಕಡಿಮೆ.
* ಹವಾಮಾನ ಬದಲಾವಣೆಯ ಸಂಕಷ್ಟ ಮಳೆ ಆಶ್ರಿತ ಪ್ರದೇಶಕ್ಕೆ ಶಾಪವಾಗಿ ಪರಿಣಮಿಸಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ತೀವ್ರ ಏಕಾಏಕಿ ಮಳೆ( 50ಮಿ.ಮೀ.- 100ಮಿ.ಮೀ.) ಪ್ರಮಾಣದ ಸಾಧ್ಯತೆ ಎರಡರಿಂದ ನಾಲ್ಕು ಪಟ್ಟು ಹೆಚ್ಚಿದೆ. ಈ ಕಾರಣಕ್ಕೆ ಸರಕಾರವು ದೊಡ್ಡ ಮಟ್ಟದಲ್ಲಿ ಪರಿಹಾರ ಒದಗಿಸಬೇಕಾದ ಒತ್ತಡಕ್ಕೆ ಒಳಗಾಗುತ್ತಲೇ ಇದೆ.
ಮಳೆ ಆಶ್ರಿತ ಪ್ರದೇಶದ ಅಭಿವೃದ್ಧಿಗೆ ಸ್ಪಂದಿಸಲು ಕರ್ನಾಟಕ ಸರಕಾರವು 2000ನೇ ಇಸವಿಯಲ್ಲಿ ಜಲಾನಯನ ಪ್ರದೇಶ ಇಲಾಖೆಯನ್ನು ಸ್ಥಾಪಿಸಿತು. ಈ ಇಲಾಖೆಯ ಅಂಕಿ-ಅಂಶಗಳ ಪ್ರಕಾರವೇ ಶೇ. 75 ಕೃಷಿ ಪ್ರದೇಶವು ಮಳೆ ಆಶ್ರಿತವಾಗಿದೆ. ರಾಜ್ಯದ 190 ಲಕ್ಷ ಹೆಕ್ಟೇರುಗಳಲ್ಲಿ ಜಲಾನಯನ ಅಭಿವೃದ್ಧಿಗೆ ಲಭ್ಯವಿರುವ ಪ್ರದೇಶದ ವಿಸ್ತೀರ್ಣ ಅಂದಾಜು 130 ಲಕ್ಷ ಹೆಕ್ಟೇರ್. 22 ವರ್ಷಗಳ ಬಳಿಕ ಈ ಇಲಾಖೆಯ ಅಂಕಿ ಅಂಶಗಳ ಪ್ರಕಾರ 71 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಅಂದಾಜು 60 ಲಕ್ಷ ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ ಬಾಕಿ ಇದೆ
ಹಾಗೆಯೇ ಭೂ ಚೇತನ ಮತ್ತು ಸುಜಲಾ ಯೋಜನೆಗಳ ಮೂಲಕವೂ ಸಾಕಷ್ಟು ಪ್ರದೇಶದಲ್ಲಿ ಭೂಸಾರ ಸಂರಕ್ಷಣೆ, ಜಲ ಸಂವರ್ಧನೆ, ಹವಾಮಾನ ವಲಯಗಳಿಗೆ ಒಗ್ಗುವ ತಳಿಗಳ ಆಯ್ಕೆ ಇತ್ಯಾದಿ ಉಪಕ್ರಮಗಳನ್ನು ಜಾರಿಗೊಳಿಸಲಾಯಿತು.
ಈಗಿರುವಂತೆ ಕೇಂದ್ರ ಸರಕಾರವೂ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಅನುದಾನ ಕಡಿಮೆಗೊಳಿಸಿದೆ ಮತ್ತು ಮಳೆ ಆಶ್ರಿತ ಪ್ರದೇಶದ ಭೌತಿಕ ಅಭಿವೃದ್ಧಿಯನ್ನು ಉದ್ಯೋಗ ಖಾತರಿ ಯೋಜನೆಯ ಮೂಲಕ ಮಾಡಿಸಲಾಗುತ್ತಿದೆ. ಈ ಭೌತಿಕ ಅಭಿವೃದ್ಧಿಯಲ್ಲಿ ಹೊಲಗಳ ಅಭಿವೃದ್ಧಿ, ಕೃಷಿ ಹೊಂಡಗಳೂ ಸೇರಿವೆ.
ಈ ಭೌತಿಕ ಅಭಿವೃದ್ಧಿಯ ಹೊರತಾಗಿಯೂ ಈ ಪ್ರದೇಶದ ರೈತರ ಸಮಸ್ಯೆ ಸಂಕಷ್ಟಗಳು ಕಡಿಮೆಯಾದಂತಿಲ್ಲ. ಹಲವಾರು ಯೋಜನೆಗಳ ಅನುಷ್ಠಾನದ ಬಳಿಕ, ಪರಿಣಾಮದ ಅಧ್ಯಯನದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಗಳೆರಡೂ ಜಾಸ್ತಿಯಾಗಿವೆ ಎಂಬ ಉಲ್ಲೇಖಗಳಿದ್ದರೂ ಈ ಹೆಚ್ಚಳಗಳು ರೈತರ ಜೀವನ ಮಟ್ಟ ಸುಧಾರಣೆಗೆ ಯಾಕೆ ಸಹಾಯ ಮಾಡಿಲ್ಲ ಎಂಬ ಪ್ರಶ್ನೆ ಏಳುತ್ತದೆ.
ಹಲವಾರು ಅಧ್ಯಯನಗಳು ತೋರಿಸಿಕೊಟ್ಟ ಹಾಗೆ ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯ ಏರಿಳಿತಗಳು ಪ್ರತೀ ವರ್ಷ ಅಪಾರ ಪ್ರಭಾವ ಬೀರುತ್ತಿವೆ. ಆದ್ದರಿಂದಲೇ ಸತತವಾದ ಮತ್ತು ನಿಯಮಿತವಾದ ಸಮೃದ್ಧಿ ಕಾಣಿಸುತ್ತಿಲ್ಲ.
ಪ್ರಸಕ್ತ ಜಲಾನಯನ ಅಭಿವೃದ್ಧಿ ಇಲಾಖೆಯು ಜೀವನೋಪಾಯಗಳ ಕುರಿತಂತೆ ಪರಿಣತಿ ಹೊಂದಿಲ್ಲ. ಜೊತೆಗೆ ಗ್ರಾಮಮಟ್ಟದಲ್ಲಿ ಈ ಇಲಾಖೆಗೆ ಋತುಮಾನಕ್ಕೆ ಸಂಬಂಧಿಸಿದ ಮಾಹಿತಿ ಮಾರ್ಗದರ್ಶನಗಳನ್ನು ನೀಡುವ ಸಿಬ್ಬಂದಿಯೂ ಇಲ್ಲ.
ಮಳೆ ಆಶ್ರಿತ ಕೃಷಿ ಪ್ರದೇಶವನ್ನು ಸಮಗ್ರವಾಗಿ ಪರಿಗಣಿಸಿ ಆಯಾ ಕೃಷಿ ವಲಯಗಳಿಗೆ ಸಂಬಂಧಿಸಿದ ವಿಶಿಷ್ಟ ಸ್ಪಂದನೆಗಳನ್ನು ಸಾಧ್ಯಗೊಳಿಸಲು ಮತ್ತು ಜೀವನೋಪಾಯಗಳ ವೈವಿಧ್ಯ, ಕೌಶಲ್ಯ ವರ್ಧನೆ, ಸಂಪನ್ಮೂಲಗಳ ಸುಸ್ಥಿರ ಬಳಕೆ ಬಗ್ಗೆ ಸಾಮುದಾಯಿಕವಾಗಿ ಕೆಲಸ ಮಾಡಲು ಒಂದು ಸಚಿವಾಲಯದ ಅವಶ್ಯಕತೆ ಇದ್ದು ಈ ಸಚಿವಾಲಯದ ಕೆಳಗೆ ಈ ಕೆಳಕಂಡ ಇಲಾಖೆಗಳನ್ನು ಒಗ್ಗೂಡಿಸಬಹುದು.
1. ಭೌತಿಕ ಅಭಿವೃದ್ಧಿಗೆ ಜಲಾನಯನ ಪ್ರದೇಶಾಭಿವೃದ್ಧಿ.
3. ಉದ್ಯೋಗ ಖಾತರಿ ಯೋಜನೆ.
4. ಜಲ ಮೂಲಗಳ ಅಭಿವೃದ್ಧಿ. ನಿರ್ವಹಣೆಗೆ ಪಂಚಾಯತ್ ಮಟ್ಟದ ಅತೀ ಸಣ್ಣ ನೀರಾವರಿ ಘಟಕ ಸ್ಥಾಪನೆ. (ತಾಲೂಕು ಮಟ್ಟದಲ್ಲಿ)
5. ಜೀವನೋಪಾಯಗಳ ಸಂತುಲಿತ, ಸೃಷ್ಟಿಗೆ ಗ್ರಾಮೀಣ ಜೀವನೋಪಾಯ ಅಭಿಯಾನ.
6. ಕೃಷಿ ಪೂರಕ ಜೀವನೋಪಾಯಗಳ ಪ್ರೋತ್ಸಾಹಕ್ಕಾಗಿ ಸೆಕೆಂಡರಿ ಕೃಷಿ ನಿರ್ದೇಶನಾಲಯದ ಪೂರ್ಣ ಸಹಭಾಗಿತ್ವ.
ಇದರೊಂದಿಗೆ ಒಗ್ಗೂಡಿಸುವಿಕೆಯ ಮೂಲಕ ಮಳೆ ಆಶ್ರಿತ ಕೃಷಿಯನ್ನೇ ಫೋಕಸ್ ಮಾಡಿ ನಿರ್ವಹಿಸಬಹುದಾದ ಸಂಪನ್ಮೂಲಗಳಿಗಾಗಿ:
ಎ) ಕೃಷಿ ಇಲಾಖೆ- ತೋಟಗಾರಿಕೆ- ಅರಣ್ಯ ಇಲಾಖೆಗಳು (ತಳಿ, ಬೀಜ ಪೂರೈಕೆ ಇತ್ಯಾದಿ).
ಬಿ) ಪಶು ಸಂಗೋಪನೆ, ಮೇವು ಮತ್ತು ಪಶು ಗೊಬ್ಬರ ಇತ್ಯಾದಿ ಸಹಾಯ ಮಾರ್ಗದರ್ಶನಕ್ಕೆ ಕೆ.ಎಂ.ಎಫ್.
ಸಿ) ಕೌಶಲ್ಯಾಭಿವೃದ್ಧಿ.
ಈ ಇಲಾಖೆಗಳನ್ನು ಸಮರ್ಪಕವಾಗಿ, ಸಮರ್ಥವಾಗಿ ಒಟ್ಟಾರೆ ಈ ಉದ್ದೇಶಿತ ಸಚಿವಾಲಯದ ಗುರಿ ಮತ್ತು ಕಾಣ್ಕೆಗೆ ತಕ್ಕಂತೆ ಬಳಸಿಕೊಳ್ಳಬೇಕು.
ಕರ್ನಾಟಕದ 2/3 ಜನಸಂಖ್ಯೆಯ ಬದುಕನ್ನು ನಿರ್ಧರಿಸುವ ಕೃಷಿ ಪ್ರದೇಶದ ಬಗ್ಗೆ ಸರಕಾರ ಆದ್ಯತೆ ನೀಡಬೇಕಾಗಿದೆ. ಈ ವರ್ಷದ ಮಳೆ ಅಭಾವ ಸೃಷ್ಟಿಸಿರುವ ಗಂಭೀರ ಸಂಕಷ್ಟ ಈ ಪ್ರದೇಶಗಳ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಸ್ಥಿತಿಯಲ್ಲಿ ಸರಕಾರ ಫೋಕಸ್ಡ್ ಆಗಿ ಈ ಪ್ರದೇಶದ ಅಭಿವೃದ್ಧಿಗೆ ಸಂಕಲ್ಪ ಪೂರ್ವಕ ಚೌಕಟ್ಟನ್ನು ನೀಡುವ ಸಂಕೇತವಾಗಿ ಈ ಸಚಿವಾಲಯ ಸೃಷ್ಟಿಯಾದರೆ ಮುಂದಿನ ವರ್ಷಗಳಲ್ಲಿ ಮಳೆ ಆಶ್ರಿತ ಕೃಷಿಗೆ ಉತ್ತರದಾಯಿತ್ವ ಮತ್ತು ಅನುದಾನದ ವಿಷಯದಲ್ಲೂ ನಿರ್ದಿಷ್ಟತೆ ಒದಗುತ್ತದೆ.