ಕೊಡಗು: ಒಂದು ವಾರದೊಳಗೆ ಜಿಪಂ, ತಾಪಂ ಕ್ಷೇತ್ರ ಪುನರ್‌ವಿಂಗಡಣೆಗೆ ಅಧಿಸೂಚನೆ

Update: 2023-12-23 07:14 GMT

ಮಡಿಕೇರಿ, ಡಿ.22:ಕೊಡಗು ಜಿಲ್ಲೆ ಹೊರತುಪಡಿಸಿ ಡಿಸೆಂಬರ್ 19ರಂದು ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮತ್ತು 234 ತಾಲೂಕು ಪಂಚಾಯತ್‌ಗಳ ಸದಸ್ಯರ ಸಂಖ್ಯೆ, ವರ್ಗವಾರು ಮೀಸಲು ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಒಂದು ವಾರದೊಳಗೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡೆಣೆಯ ಅಧಿಸೂಚನೆ ಪ್ರಕಟಿಸಿ, ಇದಾದ ನಂತರ 7 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ, 10 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯದ ಜನರಲ್ ಅಡ್ವಕೇಟ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.

ಈ ಹಿಂದಿನ ಬಿಜೆಪಿ ಸರಕಾರವು ಅವಧಿ ಮುಗಿದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ತೀರ್ಮಾನ ಮಾಡಲು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿತ್ತು.

ಬಿಜೆಪಿ ಸರಕಾರ ಅವಧಿಯಲ್ಲಿ 2023 ಜನವರಿ ತಿಂಗಳಲ್ಲಿ ಸೀಮಾ ನಿರ್ಣಯ ಆಯೋಗವು ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಪ್ರಕಟಿಸಿತ್ತು. ಈ ವರ್ಷ ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ವಿಂಗಡಣೆಗೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಆಯೋಗವು ಪ್ರಕಟಿಸಿದ್ದ ಕರಡು ಪಟ್ಟಿಯನ್ನು ಬದಲಾಯಿಸಿ ಕಾಂಗ್ರೆಸ್ ಸರಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. 2023 ಸೆಪ್ಟೆಂಬರ್ 5 ರಂದು ಪ್ರಕಟಗೊಂಡಿದ್ದ ಕರಡು ಪಟ್ಟಿಯಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾ ವಣೆಯಾಗದೆ ಜಿಲ್ಲೆಯ ಜನತೆಗೆ ನಿರಾಸೆಯುಂಟಾಗಿತ್ತು.

ಒಟ್ಟು 29 ಕ್ಷೇತ್ರಗಳಿದ್ದ ಕೊಡಗಿನಲ್ಲಿ ಜನವರಿ ತಿಂಗಳಲ್ಲಿ ಪ್ರಕಟಗೊಂಡ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ 25 ಕ್ಷೇತ್ರಕ್ಕೆ ಇಳಿಸ ಲಾಗಿತ್ತು. ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಕಡಿತಗೊಳಿ ಸಲಾಗಿತ್ತು. ಸೆಪ್ಟೆಂಬರ್ ತಿಂಗಳ 5ರಂದು ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ವಿಂಗಡೆ ಪಟ್ಟಿಯಲ್ಲಿ ಮತ್ತೆ 25 ಜಿಲ್ಲಾ ಪಂಚಾಯತ್ ಏಕಸದಸ್ಯ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಸೀಮಾ ನಿರ್ಣಯ ಆಯೋಗದಲ್ಲಿ ಕೊಡಗು ಜಿಲ್ಲೆಯ 2016ರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿದ್ದ ಕ್ಷೇತ್ರಗಳ ಹೆಸರು, ಹಾಗೂ ಪಂಚಾಯತ್‌ಗಳು ಅದಲು-ಬದಲಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಬಹುತೇಕ 2016ರಲ್ಲಿ ಇದ್ದ ಕ್ಷೇತ್ರಗಳ ಮಾದರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ ಕೆಲವೊಂದು ಕ್ಷೇತ್ರಗಳನ್ನು ಪುನರ್ವಿಂಗಡಿಸುವಾಗ ಎಡವಟ್ಟು ಉಂಟಾಗಿದ್ದು, ಕ್ಷೇತ್ರಕ್ಕೆ ಹತ್ತಿರವಲ್ಲದ ಗ್ರಾಮಪಂಚಾಯತ್‌ಗಳನ್ನು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಲಾಗಿತ್ತು. ಸೆಪ್ಟಂಬರ್ 19 ಸಂಜೆ 5 ಗಂಟೆಯವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಕ್ಕೆ ಜಿಲ್ಲೆಯ ಜನರ ಮಧ್ಯೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗವು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಗೆ ಮತ್ತೆ 29 ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ನೀಡಿ ವಿಶೇಷವಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರು.

ಅಧಿವೇಶನದಲ್ಲಿ ಗಮನಸೆಳೆದಿದ್ದ ಕೊಡಗಿನ ಶಾಸಕದ್ವಯರು:

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೊಡಗಿನ ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾನಗಳನ್ನು 29 ರಿಂದ 25 ಕ್ಕೆ ಇಳಿಸಿರುವುದನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು.

18 ಸಾವಿರದ ಬದಲು 17 ಸಾವಿರಕ್ಕೆ ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರ ಎಂದು ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ, 29 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಮರಳಿ ಸ್ಥಾಪನೆ ಮಾಡಬೇಕೆಂದು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.

ಕೊಡಗಿನ ಶಾಸಕದ್ವಯರ ಪ್ರಸ್ತಾಪಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪೂರಕವಾಗಿ ಸ್ಪಂದಿಸಿದ್ದರು.

ಇದೀಗ ಜಿಲ್ಲೆಯ ಶಾಸಕದ್ವಯರ ಪ್ರಯತ್ನ ಫಲವಾಗಿ, ಕೊಡಗು ಜಿಲ್ಲೆಯನ್ನು ರಾಜ್ಯ ಸರಕಾರ ವಿಶೇಷವಾಗಿ ಪರಿಗಣಿಸಿದೆ. ಚಳಿಗಾಲದ ಅಧಿವೇಶನದಲ್ಲಿ 2023ನೇ ಸಾಲಿನ ಕರ್ನಾಣಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕವನ್ನು, ಸದನದಲ್ಲಿ ತಿದ್ದುಪಡಿ ತರಲಾಗಿತ್ತು. ಕೊಡಗು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ಹಾಗೂ ವರ್ಗವಾರು ಮೀಸಲು ಸಂಖ್ಯೆಯನ್ನು ಪ್ರಕಟಿಸಿದೆ.

ಒಂದು ವಾರದೊಳಗೆ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ಅಧಿಸೂಚನೆ ಪ್ರಕಟವಾಗಲಿದೆ. ಜಿಲ್ಲೆಯಲ್ಲಿ ಬಹುತೇಕ ಹಳೆಯ ಮಾದರಿಯಂತೆ 29 ಜಿಲ್ಲಾ ಪಂಚಾಯತ್ ಸ್ಥಾನಗಳು ಪ್ರಕಟವಾಗುವುದು ಖಚಿತಗೊಂಡಿದೆ.

ಕೊಡಗು ಜಿಲ್ಲೆಯ ಶಾಸಕದ್ವಯರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಗೆ 29 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಮರುಸ್ಥಾಪನೆ ಮಾಡುವಂತೆ ಮನವಿ ಮಾಡಲಾಗಿತ್ತು. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನೂ ತರಬೇಕಿತ್ತು. ಇದೀಗ ಕೊಡಗಿನ ಶಾಸಕರ ಪ್ರಯತ್ನದಿಂದ ವಿಧೇಯಕಕ್ಕೆ ತಿದ್ದುಪಡಿ ಕೂಡ ತರಲಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಯ ಆದ ಅನ್ಯಾಯವನ್ನು ಕೊಡಗಿನ ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಸರಿಪಡಿಸಿರುವುದು ಅಭಿನಂದನಾರ್ಹ ಹಾಗೂ ಶ್ಲಾಘನೀಯ ವಿಷಯವಾಗಿದೆ.

ವಿ.ಪಿ ಶಶಿಧರ್,

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News