ಬೆಳೆ ಹಾನಿ ಸಬ್ಸಿಡಿ ಪಾವತಿಸಲು ಅನುದಾನ ಕೊರತೆ: ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ

Update: 2023-09-22 04:23 GMT

ಬೆಂಗಳೂರು : ಟ್ಯಾಂಕರ್ ಮತ್ತು ಬಾಡಿಗೆ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಸೇರಿದಂತೆ ಬರ ಪರಿಹಾರಕ್ಕೆ ೫ ಸಾವಿರ ಕೋಟಿ ರೂ. ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವ ರಾಜ್ಯದಲ್ಲೀಗ ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇರುವುದು ಇದೀಗ ಬಹಿರಂಗವಾಗಿದೆ.

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ೪೦ ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು ಬೆಳೆ ಹಾನಿ ಪರಿಹಾರಕ್ಕೆ ಎಲ್ಲ ರೀತಿಯಿಂದಲೂ ಸ್ಪಂದಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇದೆ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಕೋಶದ ಅಧಿಕಾರಿಗಳು ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತಂದಿದ್ದಾರೆ. ನೈರುತ್ಯ ಮುಂಗಾರು ೨೦೨೩ರಲ್ಲಿ ಮಳೆಯ ಕೊರತೆಯಿಂದಾಗಿ ತುತ್ತಾಗಿರುವ ತಾಲೂಕುಗಳನ್ನು ಬರ ಘೋಷಣೆ ಮಾಡುವ ಸಂಬಂಧ ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿಯೂ (ಸಂಖ್ಯೆ; ಕಂಇ ೪೪೯ ಟಿಎನ್‌ಆರ್ ೨೦೨೩) ಈ ಅಂಶವನ್ನೂ ಪ್ರಸ್ತಾವಿಸಲಾಗಿದೆ. ಈ ಸಂಬಂಧ ಕೆಲ ದಾಖಲೆಗಳು ’ದಿ ಫೈಲ್’ಗೆ ಲಭ್ಯವಾಗಿವೆ.

’ಬೆಳೆಹಾನಿ ಇನ್ಪುಟ್ ಸಬ್ಸಿಡಿ ಪಾವತಿಸಲು ಎಸ್ಡಿಆರ್‌ಎಫ್ ಅಡಿ ೯೩೦.೧೪ ಕೋಟಿ ಲಭ್ಯವಿದ್ದು ಅನುದಾನ ಕಡಿಮೆ ಇರುವುದರಿಂದ ಬರ ಘೋಷಣೆ ನಂತರ ಬರ ಕೈಪಿಡಿ ೨೦೨೦ರ ಪ್ರಕಾರ ಸಮಗ್ರ ಜ್ಞಾಪಕ ಪತ್ರವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್‌ಎಫ್) ಹಂಚಿಕೆಗಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಲಾಗುವುದು. ಎನ್ಡಿಆರ್‌ಎಫ್ ಹಂಚಿಕೆಯನ್ನು ರೈತರಿಗೆ ಇನ್ಫುಟ್ ಸಬ್ಸಿಡಿ/ ಬೆಳೆ ನಷ್ಟ ಪರಿಹಾರವನ್ನು ವಿತರಿಸಲು ಬಳಸಲಾಗುತ್ತದೆ,’ ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ಸಚಿವ ಸಂಪುಟ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಟ್ಯಾಂಕರ್ ಮತ್ತು ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮುಂತಾದ ತಕ್ಷಣದ ಬರ ಪರಿಹಾರದ ವೆಚ್ಚವನ್ನು ಪ್ರಾಥಮಿಕವಾಗಿ ರಾಜ್ಯ ಸರ್ಕಾರದ ಬಳಿ ಲಭ್ಯವಿರುವ ಎಸ್ಡಿಆರ್‌ಎಫ್ ನಿಧಿಯಿಂದ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮಾನದಂಡಗಳ ಪ್ರಕಾರ ಮಾಡಲಾಗುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚುವರಿಯಾಗಿ ೧೩೪ ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ವರದಿ ಪಡೆದಿದೆ. ಒಟ್ಟು ೧೩೪ ತಾಲೂಕುಗಳಲ್ಲಿ ೨,೬೨೫ ಗ್ರಾಮಗಳನ್ನು ರ್ಯಾಂಡಮ್ ಆಗಿ ಗುರುತಿಸಿ ಇವುಗಳಲ್ಲಿ ಒಟ್ಟು ೧೯,೦೭೫ ಪ್ಲಾಟ್‌ಗಳಲ್ಲಿ ಆಪ್ ಮೂಲಕ ಬೆಳೆ ದೃಢೀಕರಣ ಮಾಡಲಾಗಿದೆ. ಮೊದಲು ಸಾಧಾರಣವೆಂದು ಗುರುತಿಸಲಾಗಿದ್ದ ೫೧ ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ದೃಢೀಕರಣ ಕೈಗೊಳ್ಳಲಾಗಿತ್ತು. ನಂತರ ೪೧ ತಾಲೂಕುಗಳು ತೀವ್ರ ಬರ ವರ್ಗದಲ್ಲಿ ಹಾಗೂ ಉಳಿದ ೧೦ ತಾಲೂಕುಗಳನ್ನು ಸಾಧಾರಣ ಬರ ವರ್ಗದಲ್ಲಿ ಗುರುತಿಸಲಾಗಿತ್ತು.

ಹೊಸದಾಗಿ ಬರ ಪರಿಸ್ಥಿತಿ ಕಂಡು ಬಂದ ೮೩ ತಾಲೂಕುಗಳಲ್ಲಿ ಯಳಂದೂರು ತಾಲೂಕು ಶೇ.೩೩ಕ್ಕಿಂತ ಕಡಿಮೆ ಬೆಳೆ ಹಾನಿಯಾಗಿರುವುದರಿಂದ ಬರ ಎಂದು ಘೋಷಿಸಲು ಅರ್ಹತೆ ಪಡೆದಿರಲಿಲ್ಲ. ಆದ್ದರಿಂದ ಈ ತಾಲೂಕನ್ನು ಹೊರತುಪಡಿಸಿ ೮೨ ತಾಲೂಕುಗಳ ಪೈಕಿ ೫೮ ತಾಲೂಕುಗಳು ತೀವ್ರ ಬರ ಹಾಗೂ ೨೪ ತಾಲೂಕುಗಳು ಸಾಧಾರಣ ಬರ ಎಂದು ನಿರ್ಣಯಿಸಿದೆ ಎಂಬ ಅಂಶವನ್ನು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬರ ಕೈಪಿಡಿ ೨೦೨೦ರ ಪ್ರಕಾರ ಕಡ್ಡಾಯ ಮತ್ತು ಪರಿಣಾಮ ಸೂಚಕಗಳಲ್ಲಿ ಒಟ್ಟು ೨೩೬ ತಾಲೂಕುಗಳಲ್ಲಿ ಬೆಳೆ ಹಾನಿ ದೃಢೀಕರಣ ನಂತರ ಅರ್ಹತೆ ಪಡೆದ ೧೯೫ ತಾಲೂಕುಗಳ ಪೈಕಿ ೧೬೧ ತೀವ್ರ ಬರ ಹಾಗೂ ೩೪ ಸಾಧಾರಣ ಬರ ತಾಲೂಕುಗಳಲ್ಲಿ ಕಾಲ ಕಾಲಕ್ಕೆ ಅರ್ಹತೆ ಪಡೆಯುವ ಆಧಾರದ ಮೇಲೆ ಬರ ಘೋಷಿಸಿರುವ ಸರ್ಕಾರದ ಆದೇಶಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಕೋರಿದೆ.

ಕೇಂದ್ರ ಸರಕಾರಕ್ಕೆ ಬರ ಕೈಪಿಡಿ ೨೦೨೦ರಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳಿಂದ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದಿದೆ. ತುರ್ತು ನಿರ್ವಹಣೆಗಾಗಿ ಅಗತ್ಯವಿರುವ ಅನುದಾನದ ವಿವರವನ್ನು ಪಡೆದು ರಾಜ್ಯ ಸರಕಾರದಿಂದ ಬರ ನಿರ್ವಹಣೆಗಾಗಿ ಕೇಂದ್ರ ಸರಕಾರದಿಂದ ಎನ್‌ಡಿಆರ್‌ಎಫ್ ಅಡಿ ಆರ್ಥಿಕ ನೆರವು ಕೋರಲು ಮೆಮೆರಾಂಡಮ್ ತಯಾರಿಸಲಾಗಿದೆ. ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ೫,೨೮೩.೩೨ ಕೋಟಿ ರು.ಗಳನ್ನು ಕೋರಲಾಗಿದೆ ಎಂದು ಸಚಿವ ಸಂಪುಟ ಟಿಪ್ಪಣಿಯ ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಜಿ.ಮಹಾಂತೇಶ್,

contributor

Similar News