ಸಹ್ಯಾದ್ರಿ ಕಾಲೇಜಿನಲ್ಲಿಅತಿಥಿ ಉಪನ್ಯಾಸಕರ ಕೊರತೆ: ಬೀದಿಗಿಳಿದ ವಿದ್ಯಾರ್ಥಿಗಳು

ಒಂ ದೆಡೆ ವಿಶ್ವವಿದ್ಯಾ ನಿಲಯದಲ್ಲಿ ಹೊಸ ಶಿಕ್ಷಣ ನೀತಿಯಡಿ ಹೊಸ ಪಠ್ಯ ಹಾಗೂ ವಿಷಯಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಿದೆ. ಆದರೆ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳಾದರೂ ಅತಿಥಿ ಉಪನ್ಯಾಸಕರ ಕೊರತೆಯಿಂದ ತರಗತಿಗಳು ನಡೆಯದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನೆರಡು ತಿಂಗಳಲ್ಲಿ ಸೆಮ್ ಎಕ್ಸಾಂ ಆರಂಭವಾದರೆ ನಮ್ಮ ಶಿಕ್ಷಣದ ಕಥೆಯೇನು. -ಮಧು, ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿ

Update: 2023-11-27 08:17 GMT

ಶಿವಮೊಗ್ಗ, ನ.26: ರಾಜ್ಯದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಮಲೆನಾಡು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ತರಗತಿಗಳಲ್ಲಿ ಕುಳಿತು ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರ ಕೊರತೆಯಿಂದ ಕುವೆಂಪು ವಿಶ್ವವಿದ್ಯಾನಿಲಯದ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಕಳೆದ ಎರಡು ತಿಂಗಳಿಂದ ಯಾವುದೇ ಪಾಠ ನಡೆಯುತ್ತಿಲ್ಲ ಎನ್ನಲಾಗಿದ್ದು. ತರಗತಿಗಳಲ್ಲಿ ಪಾಠ ಕೇಳ ಬೇಕಾದ ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತದ ವಿರುದ್ಧ ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

2022-23 ಸಾಲಿನ ಶೈಕ್ಷಣಿಕ ವರ್ಷ ಮುಗಿದಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸೆ. 19ರಂದು ತರಗತಿಗಳು ಆರಂಭವಾಗಿವೆ. ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತ ಈವರೆಗೆ ಅತಿಥಿ ಉಪನ್ಯಾಸಕರ ನೇಮಕ ಮಾಡದೇ ಬೇಜವಾಬ್ದಾರಿ ತೋರಿದೆ ಎಂದು ವಿದ್ಯಾರ್ಥಿಗಳ ಆರೋಪವಾಗಿದೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿವಿಯ ಎಲ್ಲ ಡಿಗ್ರಿ ಕಾಲೇಜುಗಳ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳು ಆಗಸ್ಟ್ 23ಕ್ಕೆ ಮುಗಿದಿದೆ. ಸೆಪ್ಟೆಂಬರ್ 23ರ ವರೆಗೆ ಪರೀಕ್ಷಾ ಕಾರ್ಯ ಸೇರಿದಂತೆ ಎಲ್ಲ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಸೇವೆ ಪಡೆದು ಸೆಪ್ಟೆಂಬರ್ 23 ಕ್ಕೆ ಅವರನ್ನು ರಿಲೀವ್ ಮಾಡಲಾಗಿದೆ. ಇದರ ನಡುವೆ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಬೇಕಾಗಿದ್ದ ಖಾಯಂ ಉಪನ್ಯಾಸಕರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯ ಮೌಲ್ಯಮಾಪನಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಾಠವೇ ಇಲ್ಲದೆ ಪರಿತಪಿಸುವಂತಾಗಿದೆ.ಇದರ ನಡುವೆ ಹಬ್ಬ ಹರಿದಿನಗಳ ರಜೆ. ಪ್ರತಿನಿತ್ಯ 2-3 ತರಗತಿಯೂ ನಡೆಯುತ್ತಿಲ್ಲ. ದೂರದಿಂದ ನೂರಾರು ರೂ. ವ್ಯಯಿಸಿ, ಕಾಲೇಜಿಗೆ ಬಂದು ಉಪನ್ಯಾಸಕರಿಲ್ಲದೇ ವಾಪಸ್ ಹೋಗುವಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಉಪನ್ಯಾಸಕರ ಕೊರತೆ

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ 28, ವಿಜ್ಞಾನ ಕಾಲೇಜಿನಲ್ಲಿ 98, ವಾಣಿಜ್ಯ ಕಾಲೇಜಿನಲ್ಲಿ 40 ಅತಿಥಿ ಉಪನ್ಯಾಸಕರ ಕೊರತೆಯಿದೆ. ಪ್ರಸಕ್ತ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ 21, ವಾಣಿಜ್ಯ ಕಾಲೇಜಿನಲ್ಲಿ 8 ಹಾಗೂ ವಿಜ್ಞಾನ ಕಾಲೇಜಿನಲ್ಲಿ 40 ಖಾಯಂ ಉಪನ್ಯಾಸಕರಿದ್ದು, ದಿನಕ್ಕೆ 1 ರಿಂದ 2 ತರಗತಿ ಮಾತ್ರ ನಡೆಸುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದಿಗ್ಗಜರು ಓದಿದ ಕಾಲೇಜು

ನಾಡಿನ ಹೆಸರಾಂತ ಕವಿ, ಸಾಹಿತಿಗಳಾದ ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಸೇರಿದಂತೆ ಹಲವು ದಿಗ್ಗಜರು ವ್ಯಾಸಂಗ ಮಾಡಿದ ಹಾಗೂ ರಾಷ್ಟ್ರಕವಿ ಕುವೆಂಪು ಅವರು ಪಾಠ ಮಾಡಿದ್ದಾರೆ. ಇಂತಹ ಹೆಸರಾಂತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅತಿಥಿ ಶಿಕ್ಷಕರಿಲ್ಲದೇ ಇರುವುದು ದುರಂತವೇ ಸರಿ.

ಒಟ್ಟಾರೆ, ಆಡಳಿತಾತ್ಮಕ ವಿಚಾರಗಳು ವಿದ್ಯಾರ್ಥಿಗಳಿಗೆ ತಿಳಿಯದೇ, ಅತಿಥಿ ಉಪನ್ಯಾಸಕರು ಬಾರದೇ ಶೈಕ್ಷಣಿಕ ತರಗತಿಗಳಿಗೆ ನಷ್ಟವುಂಟಾಗುತ್ತಿದ್ದು, ಕೂಡಲೇ, ವಿವಿ ಆಡಳಿತ ಮಂಡಳಿ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕಿದೆ. ಈ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿ ಕಾಪಾಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶರತ್ ಪುರದಾಳ್

contributor

Similar News