ದೇಶದ ರಾಜಧಾನಿಯಲ್ಲಿ ಕಂಗೆಡುವ ಕಾರ್ಮಿಕರ ಬದುಕು

ರಾಜಧಾನಿಯ ಕಾರ್ಮಿಕರ ನೋವು ಕೇಳಿಸಿಕೊಳ್ಳುವವರು ಕಡಿಮೆ. ಒಂದು ರೀತಿಯಲ್ಲಿ ಅದು ಮುಗಿಯದ ಗೋಳು. ಬದುಕು ಮಾತ್ರ ಎಲ್ಲ ಅಡಚಣೆಗಳ ನಡುವೆ, ಹೊಯ್ದಾಟಗಳ ನಡುವೆ ಸಾಗುತ್ತಿರಲೇಬೇಕು. ಸಂಕಟ ಸಣ್ಣದಲ್ಲ.

Update: 2023-10-21 06:22 GMT

Photo: PTI

ದಿಲ್ಲಿಯಲ್ಲಿನ ಕಾರ್ಮಿಕರ ಕಾಲನಿಗಳ ಸಮಸ್ಯೆಗಳ ಬಗ್ಗೆ ಅಲ್ಲಿನ ಮಾಧ್ಯಮಗಳು ಹೇಳುವುದು ಬಹಳ ಕಡಿಮೆ. ಅವುಗಳನ್ನು ಗಮನಿಸುವುದೇ ಕಡಿಮೆ. ಆದರೆ ಅಲ್ಲಿನ ಸಮಸ್ಯೆ ಬಹಳ ಗಂಭೀರ ಎಂಬುದು ಅಂತಹ ಮೂರು ಕಾಲನಿಗಳನ್ನು ಪರಿಶೀಲಿಸಿದಾಗ ಕಂಡಿದೆ.

ಒಂದು ಸಾಮಾನ್ಯ ಸಂಗತಿಯೆಂದರೆ, ಹೆಚ್ಚಿನ ಮನೆಗಳಲ್ಲಿನ ಗಳಿಕೆ ಯಾವುದೇ ಉಳಿತಾಯವನ್ನು ಮಾಡಲು ಸಾಧ್ಯವಾಗದಷ್ಟು ಕಡಿಮೆ. ಅಂದಂದೇ ದುಡಿದು ಅಂದಂದಿನ ಜೀವನ ತೂಗಿಸಬೇಕಾದ ಸ್ಥಿತಿಯಲ್ಲಿಯೇ ಎಲ್ಲರೂ ಇರುವುದು ಇದಕ್ಕೆ ಕಾರಣ. ಇಂಥ ಸ್ಥಿತಿಯಲ್ಲಿ ಅನಾರೋಗ್ಯ, ಕೆಲಸದ ವೇಳೆ ಉಂಟಾಗಬಹುದಾದ ಅವಘಡ, ಲಾಕ್‌ಡೌನ್ ಅಥವಾ ಇನ್ನಾವುದೇ ಕಾರಣದಿಂದ ಕೆಲಸ ಇಲ್ಲವಾಗುವ ಸಂದರ್ಭದಲ್ಲಿ ಅವರು ಎದುರಿಸಬಹುದಾದ ಸ್ಥಿತಿ ಎಂಥದಿರಬಹುದು ಎಂಬುದನ್ನು ಊಹಿಸಬಹುದು. ಹಾಗಾಗಿ ಎಷ್ಟೋ ಸಲ ಹಸಿವು ಅವರ ಪಾಲಿನ ಅತಿ ದೊಡ್ಡ ಅನಿವಾರ್ಯತೆ.

ಕಟ್ಟಡ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಾರರು ಇಲ್ಲಿ ಸಾಮಾನ್ಯ. ಅವರಿಗೆ ದಿನಗೂಲಿ ರೂ. 300ರಿಂದ ರೂ. 500, ಆ ಕೆಲಸ ಕೂಡ ಸಾಮಾನ್ಯವಾಗಿ ತಿಂಗಳಲ್ಲಿ 10ರಿಂದ 15 ದಿನಗಳವರೆಗೆ ಇದ್ದರೆ ಹೆಚ್ಚು. ಅಂದರೆ, ಒಬ್ಬ ಕೆಲಸಗಾರನ ತಿಂಗಳ ಗಳಿಕೆ ಸಾಮಾನ್ಯ ತಿಂಗಳಲ್ಲಿ 5,000ರಿಂದ 7,000 ರೂ. ಮಾತ್ರ. ಸಣ್ಣ ಗುತ್ತಿಗೆದಾರರ ಆದಾಯ ತುಸು ಜಾಸ್ತಿಯಿರಬಹುದು. ಇಬ್ಬರು ಕೆಲಸಗಾರರ (ಸಾಮಾನ್ಯವಾಗಿ ಗಂಡ ಮತ್ತು ಹೆಂಡತಿ) ಕುಟುಂಬದ ಆದಾಯ ರೂ. 12,000 ಅಥವಾ ಅದಕ್ಕಿಂತ ಒಂದಿಷ್ಟು ಹೆಚ್ಚು, ಆದರೆ ಇಷ್ಟು ದುಡಿಯಲು ಅವರು ತಮ್ಮ ಮಕ್ಕಳ ಬಗ್ಗೆ ಸಮಯ ಕೊಡುವುದನ್ನು ಪೂರ್ತಿ ಕಡೆಗಣಿಸಬೇಕಿರುತ್ತದೆ. ಕೆಲ ಕುಟುಂಬಗಳಲ್ಲಿ ಪತ್ನಿ ಮನೆಗೆ ಸ್ವಲ್ಪ ಬೇಗ ಮರಳಬಹುದು ಎಂಬ ಕಾರಣಕ್ಕೆ ಮನೆಗೆಲಸದಂತಹ ಕೆಲಸಗಳನ್ನು ಆರಿಸಿಕೊಳ್ಳಬಹುದು, ಅದರಲ್ಲಿ ಗಳಿಕೆ ಕಡಿಮೆ. ಮನೆಗೆಲಸದ ಮಹಿಳೆಯರು ಬೆಳಗ್ಗೆ ಹೊರಟು ಕತ್ತಲಾದಾಗ ಹಿಂದಿರುಗುತ್ತಾರೆ, ದಿನವಿಡೀ 4 ಅಥವಾ 5 ಮನೆಗಳಲ್ಲಿ ದುಡಿದು ಅವರು ತಿಂಗಳಲ್ಲಿ 9,000ದಿಂದ 10,000 ರೂ. ಗಳಿಸಬಹುದು.

ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರೂ ಇದಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯುವುದಿಲ್ಲ. ಅಂತಹ ಒಬ್ಬ ಸಾಮಾನ್ಯ ಕೆಲಸಗಾರ ಗಳಿಸುವುದು ಕೇವಲ ರೂ. 6,000ದಿಂದ ರೂ. 7,000 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿರಬಹುದು. ಆದರೆ ಕೆಲಸದ ಸಮಯವೂ ಹೆಚ್ಚು. ಕಂಪೆನಿಯ ಜನರು ಸಾಮಾನ್ಯವಾಗಿ ಕಿರಿಯ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳಲು ಬಯಸುತ್ತಾರೆ.

ಇಲ್ಲಿನ ಜನರು ತಮ್ಮ ಕಡಿಮೆ ಸಂಬಳದ ಬಗ್ಗೆ ಮಾತನಾಡುವಾಗ, ಅವರ ಚಿಂತೆಯಿರುವುದು ತರಕಾರಿಗಳ ಬೆಲೆ ಮತ್ತು ಇತರ ದೈನಂದಿನ ಅಗತ್ಯಗಳ ಬಗ್ಗೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಸಾಮಾನ್ಯವಾಗಿ ಇವರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಿದೆ, ಆದರೆ ಪಡಿತರ ಸುಮಾರು 15 ದಿನಗಳವರೆಗಷ್ಟೇ ಸಾಲುತ್ತದೆ. ಉಳಿದ ದಿನಗಳಲ್ಲಿ ಗೋಧಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾದ ಸ್ಥಿತಿ. ಪಡಿತರ ಚೀಟಿ ಇಲ್ಲದ ಕುಟುಂಬಗಳ ಸ್ಥಿತಿಯಂತೂ ದುರ್ಭರ. ಅಂತಹವರಿಗೆ ಬದುಕುವುದೇ ಕಷ್ಟ. ಸಾಮಾನ್ಯವಾಗಿ ಬಾಡಿಗೆಯಲ್ಲಿ ವಾಸಿಸುವ ಈ ಕುಟುಂಬಗಳು ಪಡಿತರ ಚೀಟಿಯನ್ನು ಹೊಂದಿರುವುದಿಲ್ಲ. ಬಾಡಿಗೆ ಕಟ್ಟಬೇಕಾಗಿರುವುದು ಮತ್ತು ಪಡಿತರ ಚೀಟಿ ಇಲ್ಲದಿರುವುದು ಅವರ ಬದುಕನ್ನೇ ಹೈರಾಣಾಗಿಸುತ್ತವೆ. ಈ ಎರಡು ದೊಡ್ಡ ಖರ್ಚುಗಳಿಗಾಗಿ ದುಡ್ಡು ಹೊಂದಿಸುವುದು ಅವರ ಬದುಕನ್ನು ಅನಿಶ್ಚಿತ ಸ್ಥಿತಿಗೆ ನೂಕುತ್ತದೆ.

ಕಡಿಮೆ ಗಳಿಕೆ ಮತ್ತು ಹೆಚ್ಚಳವಾಗದ ಸಂಬಳದ ಕಾರಣದಿಂದ ಉಂಟಾಗುವ ತೀವ್ರ ಸಮಸ್ಯೆಗಳ ಹೊರತಾಗಿಯೂ, ಹಲವಾರು ಸಮಸ್ಯೆಗಳು ಅವರ ಎದುರಿಗೆ ಇವೆ. ಅವು ನೀರು, ಶೌಚಾಲಯದಂತಹ ಸಮಸ್ಯೆ. ಹಲವೆಡೆ ಒಳಚರಂಡಿ ಅಸ್ತಿತ್ವದಲ್ಲಿದ್ದರೂ ಸರಿಯಾಗಿ ಕಾರ್ಯನಿರ್ವಹಿಸದೆ ಇವರು ತೊಂದರೆ ಅನುಭವಿಸಬೇಕಿರುತ್ತದೆ. ದುರಸ್ತಿ ಕಾಣದ ನೀರಿನ ಹಳೆಯ ಪೈಪ್‌ಲೈನ್ ದುರಸ್ತಿ ಮಾಡಬೇಕಾದ ಸ್ಥಿತಿಯಿದೆ, ಎಷ್ಟೋ ಸಲ ಕೊಳಚೆಯಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಮೂಲಭೂತವಾಗಿ ಜನರಿಗೆ ಹೊಸ ನೀರಿನ ಪೈಪ್‌ಲೈನ್ ಅಗತ್ಯವಿದೆ, ಏಕೆಂದರೆ ಹಳೆಯದು ಹೆಚ್ಚು ಕಾಲ ಉಪಯೋಗಕ್ಕೆ ಬರುವ ಸಾಧ್ಯತೆಯಿಲ್ಲ. ಸುರಕ್ಷತೆ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಸುಧಾರಿಸಬೇಕಾಗಿದೆ.

ಇವೆಲ್ಲ ಒಂದೆಡೆಯಾದರೆ, ಹೆಣ್ಣುಮಕ್ಕಳು ಶಿಕ್ಷಣದಿಂದ ಹಿಂದೆ ಸರಿಯಬೇಕಾದ ಸ್ಥಿತಿಯೂ ಈ ಕುಟುಂಬಗಳಲ್ಲಿದೆ. ಹೆಣ್ಣುಮಕ್ಕಳಿದ್ದರೆ ಬೆಳೆಯುತ್ತಿದ್ದಂತೆ ಅವರ ಮದುವೆ ಮಾಡಬೇಕಾದ ಚಿಂತೆ. ಅದಕ್ಕಾಗಿ ಹಣ ಹೊಂದಿಸುವುದು ಮತ್ತೊಂದು ಹೊಸ ಸಮಸ್ಯೆ.

ಮಹಿಳಾ ಕೆಲಸಗಾರರು ಕೆಲಸದಿಂದ ಹಿಂದಿರುಗುವಾಗ ಕತ್ತಲಾಗಿರುತ್ತದೆ. ಆದ್ದರಿಂದ ಬಸ್ ನಿಲ್ದಾಣದಿಂದ ಜನವಸತಿಯವರೆಗೆ ಸರಿಯಾದ ಬೀದಿ ದೀಪ ಮತ್ತು ಸುರಕ್ಷತೆ ಇರಬೇಕು, ಬಸ್ ತಂಗುದಾಣಕ್ಕೆ ಸೂಕ್ತ ಬೆಳಕಿನೊಂದಿಗೆ ಶೆಲ್ಟರ್‌ನಂತೆ ನಿರ್ಮಿಸಬೇಕು ಎನ್ನುತ್ತಾರೆ ಈ ಮಹಿಳೆಯರು. ಈ ಸಲವಂತೂ ಮಳೆಗಾಲದಲ್ಲಿ ಬಸ್‌ಗಾಗಿ ಕಾಯುತ್ತಿರುವಾಗಲೇ ರಸ್ತೆಯಲ್ಲಿ ನೀರು ತುಂಬಿ ಹರಿಯುವ ಸ್ಥಿತಿಯನ್ನು ಅವರು ನೋಡಬೇಕಾಗಿ ಬಂತು. ಮಹಿಳೆಯರಿಗೆ ಬಸ್ ಸೇವೆ ಉಚಿತವಾಗಿರುವುದು ದೊಡ್ಡ ಮಟ್ಟದಲ್ಲಿ ಅನುಕೂಲ ಆಗಿದೆಯಾದರೂ, ಕೆಲವೊಮ್ಮೆ ಚಾಲಕರು ಬಸ್ ನಿಲ್ಲಿಸುವುದಿಲ್ಲ ಎಂಬ ದೂರುಗಳೂ ಇವೆ.

ರಾಜಧಾನಿಯ ಕಾರ್ಮಿಕರ ನೋವು ಕೇಳಿಸಿಕೊಳ್ಳುವವರು ಕಡಿಮೆ. ಒಂದು ರೀತಿಯಲ್ಲಿ ಅದು ಮುಗಿಯದ ಗೋಳು. ಬದುಕು ಮಾತ್ರ ಎಲ್ಲ ಅಡಚಣೆಗಳ ನಡುವೆ, ಹೊಯ್ದಾಟಗಳ ನಡುವೆ ಸಾಗುತ್ತಿರಲೇಬೇಕು. ಸಂಕಟ ಸಣ್ಣದಲ್ಲ.

(ಕೃಪೆ:countercurrents.org)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಭರತ್ ದೋಗ್ರಾ

contributor

Similar News