ಕಿದ್ವಾಯಿಯಲ್ಲಿ ತಜ್ಞರಲ್ಲದ ಸಿಬ್ಬಂದಿಯಿಂದ ಪೆಟ್- ಸಿಟಿ ಸ್ಕ್ಯಾನ್ ಯಂತ್ರದ ನಿರ್ವಹಣೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಾಲಿ ನಿರ್ದೇಶಕರು 2022ರ ಅ.17ರಂದು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ದಿನದಂದು ಪೂರ್ವ ದಿನಾಂಕ ನಮೂದಿಸಿ ಪೆಟ್ ಸಿಟಿ ಸ್ಕ್ಯಾನ್ ಸೇವೆ ಒದಗಿಸಲು ನಿಯಮಬಾಹಿರವಾಗಿ ಬೆಂಗಳೂರು ಮೆಡಿಕಲ್ ಸೆಂಟರ್ ಅವರಿಗೆ ಕಾರ್ಯಾದೇಶ ನೀಡಿದ್ದರು ಎಂಬುದು ತನಿಖೆ ವೇಳೆಯಲ್ಲಿ ದೃಢಪಟ್ಟಿರುವುದು ಗೊತ್ತಾಗಿದೆ.
ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸೂಕ್ತ ತಜ್ಞತೆ ಇಲ್ಲದ ವೈದ್ಯರು, ಸಿಬ್ಬಂದಿ ಪೆಟ್ ಸಿಟಿ ಸ್ಕ್ಯಾನ್ ಯಂತ್ರದ ನಿರ್ವಹಣೆ ಮಾಡುತ್ತಿದ್ದು, ಇದರಿಂದ ರೋಗಿಗಳಿಗೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಸಂಗತಿಯನ್ನು ತನಿಖಾ ತಂಡವು ಬಹಿರಂಗಗೊಳಿಸಿದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಸ್ವೀಕೃತವಾದ ಎಲ್ಲ ದೂರುಗಳ ಬಗ್ಗೆ ಪರಿಶೀಲಿಸಿರುವ ಖಜಾನೆ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯ ತನಿಖಾ ವರದಿಯು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕರಾಳತೆಯನ್ನು ತೆರೆದಿಟ್ಟಿದೆ.
ಪೆಟ್ ಸಿಟಿ ಸ್ಕ್ಯಾನ್ ಖರೀದಿ, ನಿರ್ವಹಣೆ, ಕಾರ್ಯಕ್ಷಮತೆಯೂ ಸೇರಿದಂತೆ ಹಲವು ರೀತಿಯ ಆಡಳಿತಾತ್ಮಕ ಲೋಪದೋಷಗಳನ್ನು ತನಿಖಾ ತಂಡವು ಪತ್ತೆ ಹಚ್ಚಿದೆ. ಈ ತನಿಖಾ ವರದಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲ್ಲಿಸಿದೆ. ಇದರ ಪ್ರತಿಯು ( ಸಂಖ್ಯೆ; ಎಂಇಡಿ 162 ಕೆಯುಎಂ 2023 (ಭಾ-2) ‘The-file.in’ಗೆ ಲಭ್ಯವಾಗಿದೆ.
‘ಟೆಂಡರ್ ಕರಾರಿನಂತೆ ಶುಶ್ರೂಷಕ ಸಿಬ್ಬಂದಿ ಹಾಗೂ ವಾರ್ಡ್ ಬಾಯ್‌ಗಳನ್ನು ನೇಮಿಸಿಲ್ಲ. ಕಿದ್ವಾಯಿ ಸಂಸ್ಥೆಯ ಸಿಬ್ಬಂದಿಯನ್ನೇ ನಿಯೋಜಿಸಿದೆ. ಇದು ಟೆಂಡರ್ ನಿಯಮಗಳ ಉಲ್ಲಂಘನೆ. ಸೂಕ್ತ ತಜ್ಞತೆ ಇಲ್ಲದ ವೈದ್ಯರು, ಸಿಬ್ಬಂದಿ ನೀಡುವ ವರದಿಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ.
ಹಾಗೂ ಸೂಕ್ತ ಅನುಭವವಿಲ್ಲದ ಸಿಬ್ಬಂದಿ ಪೆಟ್ ಸಿಟಿ ಸ್ಕ್ಯಾನ್ ಯಂತ್ರದ ನಿರ್ವಹಣೆ ಮಾಡುತ್ತಿರುವುದರಿಂದ ರೋಗಿಗಳಿಗೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ’ ಎಂಬ ಆಘಾತಕಾರಿ ಸಂಗತಿಯನ್ನೂ ಬಯಲಿಗೆಳೆದಿದೆ. ಈ ವರದಿಯನ್ನು ಇದೀಗ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮಂಡಿಸಲಾಗಿದೆ ಎಂದು ಗೊತ್ತಾಗಿದೆ.
‘ಪೆಟ್ ಸಿಟಿ ಸ್ಕ್ಯಾನ್ ಯಂತ್ರವನ್ನು ಖರೀದಿಸುವ ಸಂಬಂಧ ಕೆಟಿಪಿಪಿ ನಿಯಮಾನುಸಾರ ಹಾಗೂ ಸರಕಾರದ ಆದೇಶ ಸಂಖ್ಯೆ (ಆಇ908 ವೆಚ್ಚ/12/2019 ದಿ.21.07.2020) ಟೆಂಡರ್‌ನ ಅಂದಾಜು ಮೊತ್ತದಷ್ಟೇ ಸರಾಸರಿ ವಾರ್ಷಿಕ ವಹಿವಾಟಿನಲ್ಲಿ ಈ ನಿಬಂಧನೆಯನ್ನು ಮೂರು ಪಟ್ಟು ಅಧಿಕವಾಗಿ ನಿಗದಿಪಡಿಸಿರುವುದರಿಂದ ಅರ್ಥಿಕ ಸಾಮರ್ಥ್ಯವುಳ್ಳ ಎಲ್ಲ ಸಂಸ್ಥೆಗಳು ಭಾಗವಹಿಸುವುದನ್ನು ತಪ್ಪಿಸಿದಂತಾಗುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಭಾರತದೊಂದಿಗೆ ಗಡಿ ಹಂಚಿಕೆ ಮಾಡಿಕೊಂಡ ದೇಶಗಳೊಂದಿಗೆ ಯಾವುದೇ ಸಂಗ್ರಹಣೆ ಅಥವಾ ಸೇವೆಯನ್ನು ಪಡೆಯುವ ಮುನ್ನ ಸರಕಾರದಿಂದ ಅಧಿಕೃತಗೊಳಿಸಲಾದ ಸಮಿತಿಯಿಂದ (ಸರಕಾರದ ಆದೇಶ ಸಂಖ್ಯೆ; ಆಇ 455 ವೆಚ್ಚ-12/2020 ದಿ.25.08.2020) ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ, ಈ ಸಂಗ್ರಹಣೆಯಲ್ಲಿ ಈ ಆದೇಶದಂತೆ ರಚಿಸಲಾದ ಸಮಿತಿಯಿಂದ ಅನುಮೋದನೆ ಪಡೆದ ಕುರಿತು ವಿವರಗಳೇ ಇಲ್ಲ’ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.
ಸಮಿತಿಯ ಪರಿಶೀಲನೆ ವೇಳೆ ಸ್ವೀಕೃತವಾಗಿದ್ದ ದೂರಿನಲ್ಲಿ ಈ ವಿಷಯದ ಕುರಿತು ನಮೂದಾಗಿದೆ. ಕಡತದಲ್ಲಿನ ಲಭ್ಯವಿರುವ ದಾಖಲೆಗಳಿಂದ ಈ ವಿಷಯವು ಸತ್ಯಾಂಶದಿಂದ ಕೂಡಿರುವುದು ಕಂಡು ಬಂದಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಇಂತಹ ಪ್ರಮುಖ ಉಪಕರಣದ ಸಂಗ್ರಹಣೆಗೆ ಪೂರ್ವ ಸಿದ್ಧತೆ ಇಲ್ಲದೇ ತಾಂತ್ರಿಕ ಪರಿಣಿತರ ಅಭಿಪ್ರಾಯ ಪಡೆಯದೇ ಪ್ರಕ್ರಿಯೆ ಆರಂಭಿಸಿ ನಂತರದಲ್ಲಿ ತಾಂತ್ರಿಕ ಪರಿಣಿತರನ್ನು ಗುರುತಿಸಲು ಕ್ಲಿಷ್ಟಕರವಾಗಿರುತ್ತದೆ ಎಂದು ತನಿಖಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.