ಬಡಜನರ ಹಸಿವು ನೀಗಿಸುತ್ತಿರುವ ‘ಮಮತೆಯ ಮಡಿಲು’

Update: 2023-12-11 07:35 GMT

ಮಂಡ್ಯ: ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಟ್ಟಿಕೊಂಡು ಹತ್ತಾರು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಮಂಡ್ಯ ಜಿಲ್ಲೆಯ ಮಂಗಲ ಎಂ.ಯೋಗೇಶ್ ಅವರು ಮಂಡ್ಯ ಜಿಲ್ಲಾಸ್ಪತ್ರೆ(ಮಿಮ್ಸ್) ಆವರಣದಲ್ಲಿ ಆರಂಭಿಸಿದ ‘ಮಮತೆಯ ಮಡಿಲು’ ಯೋಜನೆ ಯಶಸ್ವಿ ೫ನೇ ವರ್ಷದಲ್ಲಿ ಸಾಗುತ್ತಿದೆ.

ವಿದ್ಯಾರ್ಥಿ ದಿಸೆಯಲ್ಲೇ ಪ್ರಗತಿಪರ, ಸಾಮಾಜಿಕ ಹೋರಾಟ, ಕಾರ್ಯ ಕ್ರಮಗಳಲ್ಲಿ ತೊಡಗಿಕೊಂಡ ಯೋಗೇಶ್, ಪದವಿ ಪಡೆದಿದ್ದರೂ ಸರಕಾರಿ ಉದ್ಯೋಗದ ಕನಸು ಕಾಣಲಿಲ್ಲ. ಕೃಷಿಯಲ್ಲಿ ತೊಡಗಿಕೊಂಡರು.

ತನ್ನ ಪೋಷಕರು ನಡೆಸಿಕೊಂಡು ಬಂದ ಕೃಷಿಯನ್ನೇ ಅಪ್ಪಿಕೊಂಡ ಯೋಗೇಶ್, ತಾನು ವಿದ್ಯಾರ್ಥಿಯಾಗಿದ್ದಾಗ ತೊಡಗಿಸಿಕೊಂಡಿದ್ದ ಸಾಮಾಜಿಕ ಕಾರ್ಯಗಳನ್ನು ಮರೆಯಲಿಲ್ಲ. ಅದಕ್ಕಾಗಿ ‘ಪರಿಸರ ರೂರಲ್ ಡೆವಲಪ್ಮೆಂಟ್’ ಸಂಸ್ಥೆ ಕಟ್ಟಿಕೊಂಡು ಪರಿಸರ ಕಾರ್ಯಕ್ರಮಗಳನ್ನು ನಡೆಸಿದರು.

ಒಮ್ಮೆ ತನ್ನ ತಾಯಿಯನ್ನು ಸರಕಾರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾಗ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಮತ್ತವರ ಪೋಷಕರು ಊಟಕ್ಕೆ ಪರಿತಪಿಸುತ್ತಿದ್ದುದು ಮೃದು ಹೃದಯದ ಯೋಗೇಶ್ ಅವರನ್ನು ಕದಡಿತು. ಈ ಹಿನ್ನೆಲೆಯಲ್ಲಿ ತನ್ನ ಸ್ವಯಂಸೇವಾ ಸಂಸ್ಥೆ ಅಡಿಯಲ್ಲಿ ಅಸ್ತಿತ್ವಕ್ಕೆ ತಂದದ್ದೇ ‘ಮಮತೆಯ ಮಡಿಲು’.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗೂ ಮಿಗಿಲಾದ ವಿಭಾಗವೆಂದರೆ ಹೆರಿಗೆ ವಿಭಾಗ. ಸುಸಜ್ಜಿತ ಉಪಕರಣ, ತಜ್ಞ ಮತ್ತು ಸೇವಾಪರತೆಯ ವೈದ್ಯರು ಈ ವಿಭಾಗದ ಘನತೆಗೆ ಸಾಕ್ಷಿಯಾಗಿದ್ದಾರೆ. ಹಾಗಾಗಿ ಜಿಲ್ಲೆ ಮಾತ್ರವಲ್ಲದೆ ಪಕ್ಕದ ರಾಮನಗರ, ಮೈಸೂರು, ತುಮಕೂರು ಜಿಲ್ಲೆಗಳಿಂದಲೂ ಹೆರಿಗೆಗೆ ಇಲ್ಲಿ ದಾಖಲಾಗುತ್ತಾರೆ.

ಈ ವಿಭಾಗದಲ್ಲಿ ಹೆರಿಗೆಯಾದವರು ಮೂರು ನಾಲ್ಕುದಿನ, ವಾರಗಟ್ಟಲೇ ಇರಬೇಕು. ಅವರ ಜತೆಯಲ್ಲಿ ಪೋಷಕರೂ ಇರಬೇಕು. ಇಲ್ಲಿಗೆ ಬರುವವರು ಬಡವರು. ಇಂತಹವರು ವಾರಗಳ ಕಾಲ ಹೊಟೇಲ್ಗಳಲ್ಲಿ ಊಟ ತಿನ್ನುವುದು ದುಬಾರಿ. ಇಂತಹವರಿಗೆ ಅನುಕೂಲ ಕಲ್ಪಿಸಲು ಯೋಗೇಶ್ ‘ಮಮತೆಯ ಮಡಿಲು’ ಬ್ಯಾನರ್ ಅಡಿಯಲ್ಲಿ ಈ ವಾರ್ಡ್ ಮುಂಭಾಗ ಉಪಹಾರ, ಊಟ ಕೊಡುವ ವ್ಯವಸ್ಥೆ ಮಾಡಿದರು.

ಆರಂಭದಲ್ಲಿ ಬೆಳಗಿನ ವೇಳೆ ಮಾತ್ರ ತನ್ನ ಸ್ವಂತ ವೆಚ್ಚದಲ್ಲಿ ತಿಂಡಿ, ಗಂಜಿ ನೀಡಿದರು. ನಂತರ, ಹಲವರು ಇದಕ್ಕೆ ಕೈಜೋಡಿಸಿದರು. ಕ್ರಮೇಣ ಸಾರ್ವಜನಿಕರು ಇದಕ್ಕೆ ಕೈಜೋಡಿಸಿದರು. ತಮ್ಮ ಕೈಲಾದ ಸಹಾಯ ಮಾಡಿದರು. ಈಗ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ಪ್ರತಿದಿನ ಸುಮಾರು ೬೦೦ ಮಂದಿಗೆ ಶುಚಿಯಾದ, ಪೌಷ್ಠಿಕಯುಕ್ತ ಆಹಾರವನ್ನು ಯೋಗೇಶ್ ಒದಗಿಸುತ್ತಿದ್ದಾರೆ.

ಪ್ರಚಾರದ ಮೊರೆ ಹೋಗದೆ ಯೋಗೇಶ್ ತನ್ನ ಕಾಯಕ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಶಾಸಕರು, ಜನಪ್ರತಿನಿಧಿಗಳೂ ಶ್ಲಾಘಿಸಿ ಬೆನ್ನುತಟ್ಟಿದ್ದಾರೆ. ಯೋಗೇಶ್ ಅವರ ಈ ಕಾಯಕಕ್ಕೆ ಮತ್ತಷ್ಟು ಕೈಗಳು ಜೋಡಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News