ಮರಾಠಾ ಮೀಸಲಾತಿ ಬೇಡಿಕೆ ಸಾಧುವೇ?

ಮರಾಠರಿಗೆ ಮೀಸಲಾತಿಯ ಬೇಡಿಕೆ ಮಹಾ ರಾಷ್ಟ್ರದಾದ್ಯಂತ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು ಅದು ಸರ್ವೋಚ್ಚ ನ್ಯಾಯಾಲಯದೊಡನೆ ನ್ಯಾಯಾಂಗ ಕದನಕ್ಕೆ ದಾರಿ ಮಾಡಿಕೊಟ್ಟಿದೆ. ಅದರ ಫಲಿತಾಂಶವೆಂದರೆ: ನ್ಯಾಯಾಲಯ ಅದನ್ನು ಅಸಾಂವಿಧಾನಿಕ ಎಂದು ಬೆಟ್ಟು ಮಾಡಿದೆ. ಪರಿಹಾರ ರೂಪದ (curative) ಮನವಿಯನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಿದೆ. ಮನವಿ ಮುಖ್ಯ ನ್ಯಾಯಾಧೀಶರ ಪೀಠದ ಮುಂದೆ ತುರ್ತು ವಿಚಾರಣೆಗೆ ಬಂದಿತಾದರೂ ಅದನ್ನು ಕೈಗೆತ್ತಿಕೊಳ್ಳದೆ ಮುಂದಿನ ದಿನಗಳಲ್ಲಿ ವಿಚಾರಣೆಗಾಗಿ ಮುಂದೂಡಲ್ಪಟ್ಟಿದೆ. ಸದ್ಯ ಮರಾಠರಿಗೆ ಮೀಸಲಾತಿ ಬಯಸುವವರೆಲ್ಲರೂ, ಸರ್ವೋಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುವುದೊಂದೇ ದಾರಿ.

Update: 2023-11-13 06:00 GMT

Photo: PTI

ಮಹಾರಾಷ್ಟ್ರದಲ್ಲಿ ಶೇ. 33ಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಮರಾಠಿ ಸಮುದಾಯ ಮೀಸಲಾತಿಗಾಗಿ ಹಮ್ಮಿಕೊಂಡಿರುವ ಚಳವಳಿ ಉಗ್ರ ಸ್ವರೂಪ ತಾಳಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಮೀಸಲಾತಿ ಕೋಟಾ ಬಗ್ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಆದರೆ ಯಾವುದು ಈ ಮರಾಠಿ ಮೀಸಲಾತಿ ಕೋಟಾ ವಿಷಯ. ಇದರ ದಾರಿಗೆ ಅಡ್ಡಲಾಗಿ ನಿಂತಿರುವುದಾದರೂ ಏನು? ಈ ಕುರಿತು ಮೊದಲಿಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಸೂಕ್ತ. ಮರಾಠಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. ಅದೊಂದು ಬಹುದಿನದ ಬೇಡಿಕೆ. ಮನೋಜ್ ಜರಂಗೆ ಪಾಟೀಲ್ ಎಂಬ ತೀವ್ರವಾದಿಯೊಬ್ಬ ಒಂದು ವಾರಕ್ಕೂ ಹೆಚ್ಚು ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡದ್ದು ಮರಾಠಿಗರಿಗೆ ಹೊಸ ಶಕ್ತಿ ಬಂದಂತಾಗಿ ನವ ಸ್ವರೂಪವನ್ನೇ ನೀಡಿದೆ. ಚಳವಳಿಯಿಂದಾಗಿ ಹಿಂಸಾತ್ಮಕ ಘಟನೆಗಳು ನಡೆದು ಕೆಲವು ವಿಧಾನಸಭಾ ಸದಸ್ಯರ ನಿವಾಸಗಳಿಗೂ ಬೆಂಕಿ ಹಚ್ಚಲಾಗಿದೆ. ಆದರೆ ಮನೋಜ್ ಜರಂಗೆ ಪಾಟೀಲ್ ತಮ್ಮ ಎರಡನೇ ಆಮರಣಾಂತ ಉಪವಾಸವನ್ನು ಜನವರಿ 2,2024ರ ವರೆಗೆ ಮುಂದೂಡಿದ್ದಾರೆ. ಅಷ್ಟರಲ್ಲಿ ಸರಕಾರ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಅವಕಾಶ ಕೋರಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಐದು ಮಂದಿ ಸದಸ್ಯರ ಸಮಿತಿಯನ್ನು ನ್ಯಾಯಮೂರ್ತಿ ಸಂದೀಪ್ ಶಿಂದೆ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದಾರೆ. ಬಹುಶಃ ಅಷ್ಟರಲ್ಲಿ ಸಮಿತಿಯೂ ವರದಿ ನೀಡುವ ಸಂಭವ ಇದೆ.

ಮರಾಠರು ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 1/3 ಭಾಗದಷ್ಟಿದ್ದಾರೆಂದು ಹೇಳಲಾಗಿದೆ. ಅವರಲ್ಲಿ ಭೂ ಮಾಲಕರು, ರೈತರು ಮತ್ತು ಸೇನಾನಿಗಳು ಹೀಗೆ ಆ ಜಾತಿಯಲ್ಲಿರುವ ವೃತ್ತಿಪರರು. ಮರಾಠಾ ಕ್ಷತ್ರಿಯರಲ್ಲಿ, ದೇಶಮುಖ್, ಭೋಂಸ್ಲೆ, ಮೋರೆ, ಶಿರ್ಕೆ ಮತ್ತು ಜಾದವ್ ಮುಂತಾದ ಉಪನಾಮ ಹೊಂದಿದವರಿದ್ದಾರೆ. ಉಳಿದವರು ಕುಣಬಿಗಳಾಗಿದ್ದು ಅವರೆಲ್ಲರೂ ಪ್ರಮುಖವಾಗಿ ವ್ಯವಸಾಯಗಾರರು. ಮರಾಠಾ ಸಾಮ್ರಾಜ್ಯಗಳು ಪತನವಾಗುವ ತನಕವೂ ಕ್ಷತ್ರಿಯ-ಕುಣಬಿಗಳ ನಡುವಿನ ವ್ಯತ್ಯಾಸ ಇದ್ದೇ ಇತ್ತು. ಪ್ರಸಕ್ತ ಹೆಚ್ಚಿನ ಮರಾಠರೆಲ್ಲರೂ ವ್ಯವಸಾಯದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವವರು. ಎಲ್ಲಾ ಮರಾಠರು ಮರಾಠಿಗಳಾದರೆ, ಎಲ್ಲಾ ಮರಾಠಿಗಳು ಮರಾಠರಲ್ಲ. ಮರಾಠಾ ಎಂಬುದು ಜಾತಿಗಳ ಸಮೂಹವನ್ನು ಸೂಚಿಸುತ್ತದೆ. ಮರಾಠಿ ಒಂದು ಭಾಷೆಯಾಗಿದ್ದು, ಮಹಾರಾಷ್ಟ್ರದಲ್ಲಿ ಬಹಳಷ್ಟು ಜಾತಿಗಳು ಅದನ್ನು ಮಾತೃ ಭಾಷೆಯಾಗಿ ಬಳಸುತ್ತವೆ.

ಭಾರತದಲ್ಲಿ ಮರಾಠಾ ಬಹು ಸಂಖ್ಯಾತ ಜಾತಿ ಗಳಲ್ಲಿ ಒಂದಾಗಿದೆ. ಅದು ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಅಪಾರ ಪ್ರಭಾವ ಬೀರಿದೆ. ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದ ಮಹಾರಾಷ್ಟ್ರ ಸರಕಾರವನ್ನು ಈವರೆಗೂ ಸುಮಾರು 31 ವರ್ಷಗಳ ಕಾಲ ಮರಾಠರೇ ಮುಖ್ಯಮಂತ್ರಿಗಳಾಗಿ ಕಾರಭಾರ ನಡೆಸಿದ್ದಾರೆ(ಇದುವರೆಗಿನ 20 ಮಂದಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಲ್ಲಿ12 ಮಂದಿ ಮರಾಠಾ ಸಮುದಾಯದವರೇ ಇದ್ದಾರೆ). ನಾವು ನೆನಪಿಡಬೇಕಾದ ಅಂಶವೆಂದರೆ: ಮರಾಠರು ಪ್ರಧಾನವಾಗಿ ರೈತರು ಅದರಲ್ಲೂ ಎರಡು ಹೆಕ್ಟೇರ್‌ಗಿಂತ ಕಡಿಮೆ ಹಿಡುವಳಿಯನ್ನು ಹೊಂದಿರುವವರು. ಸಣ್ಣ ಹಿಡುವಳಿಯಿಂದಾಗಿ ಫಸಲು ತುಂಬಾ ಕಡಿಮೆ. ಜೊತೆಗೆ ಆ ಭಾಗ ಬರಪೀಡಿತ ಪ್ರದೇಶ. ಇದರಿಂದ ಬಹುತೇಕ ಮರಾಠಾ ರೈತರು ಸಂಕಷ್ಟಕ್ಕೆ ಒಳಗಾಗಿ ಮೀಸಲಾತಿಗಾಗಿ ಹಂಬಲಿಸುತ್ತಿದ್ದರು. ಈ ಕಾರಣದಿಂದ ಮರಾಠವಾಡ ಪ್ರಾಂತ ಜಾತಿ ಚಳವಳಿಯಲ್ಲಿ ಅಧಿ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿ ಒಂದು ಪ್ರಶ್ನೆ ಒಡಮೂಡುತ್ತದೆ. ಒಂದು ವೇಳೆ ಅವರಲ್ಲಿ ಬಡತನವಿದ್ದರೂ ಅದೊಂದೇ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿಗೆ ಅರ್ಹತೆ ಪಡೆಯಲಾರದು ಎಂಬುದು ಬಹು ಮುಖ್ಯ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಮರಾಠವಾಡ ಪ್ರಾಂತದಲ್ಲಿ ಮರಾಠರಿಗೆ ಕುಣಬಿ ಜಾತಿ ದೃಢೀಕರಣ ಪತ್ರ ನೀಡುವ ಉದ್ದೇಶವಿದೆ ಎಂದು ಹೇಳಲಾಗಿದೆ.ಆದರೆ ಮನೋಜ್ ಜಾರಂಗೆ ಪಾಟೀಲ್ ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವವರೆಗೆ ಚಳವಳಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ. ಈ ಸಮಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ನೇತಾರರೂ ಮರಾಠರ ಮೀಸಲಾತಿ ವಿರುದ್ಧ ತೀವ್ರ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಸರಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಮೀಸಲಾತಿಯ ಹೋರಾಟಗಳಂತೂ ಸದ್ಯ ಮಹಾರಾಷ್ಟ್ರದಲ್ಲಿ ರಾಜಕೀಯ ದಾಳವಾಗಿ ಪರಿವರ್ತಿತವಾಗಿವೆ.

ಮರಾಠಾ ಮೀಸಲಾತಿಗಾಗಿ ದೀರ್ಘ ಹೋರಾಟ

ಕಾರ್ಮಿಕ ಒಕ್ಕೂಟದ ಮುಖಂಡ ಅಣ್ಣಾಸಾಹೇಬ್ ಪಾಟೀಲ್ ಅವರ ನೇತೃತ್ವದಲ್ಲಿ 1982ರಷ್ಟರಲ್ಲಿಯೇ ಮರಾಠರ ಮೀಸಲಾತಿಯ ಮೊದಲನೇ ಹೋರಾಟ ಪ್ರಾರಂಭವಾಯಿತು. ಅವರ ಹೋರಾಟವಿದ್ದದ್ದು ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಕೋಟಾ ನೀಡಬೇಕೆಂಬುದು. ಅಣ್ಣಾ ಸಾಹೇಬ್ ಪಾಟೀಲ್ ಅವರ ಬೇಡಿಕೆ ಈಡೇರದಿದ್ದಲ್ಲಿ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಸರಕಾರಕ್ಕೆ ಬೆದರಿಕೆಯೊಡ್ಡಿದ್ದರು. ಅಂದಿನ ಕಾಂಗ್ರೆಸ್ ಸರಕಾರ ಅವರ ಬೇಡಿಕೆಯ ಬಗ್ಗೆ ಕಿವಿ ಕಿವುಡಾಗಿಸಿಕೊಂಡಿತು. ಅಣ್ಣಾಸಾಹೇಬ್ ಪಾಟೀಲರು ಅವರು ಹೇಳಿದಂತೆ ಆತ್ಮಾಹುತಿಗೆ ಶರಣಾದರು. ಈ ದಿಸೆಯಲ್ಲಿ ಅವರದು ಮೊತ್ತ ಮೊದಲನೇ ಆತ್ಮಾಹುತಿಯಾಗಿತ್ತು. ಮಂಡಲ್ ಆಯೋಗದ ವರದಿ 1990ರಲ್ಲಿ ಜಾರಿಗೆ ಬಂದಾಗ ಆರ್ಥಿಕ ಆಧಾರದ ಮೇಲೆ ಮೀಸಲಾತಿ ಬೇಡಿಕೆ ಇದ್ದದ್ದು ಆನಂತರ ಅದು ಜಾತಿಯಾಗಿ ಪರಿವರ್ತಿತವಾಯಿತು.

ಈ ನಡುವೆ ಮಹಾರಾಷ್ಟ್ರ ಸರಕಾರ ಮರಾಠಾ-ಕುಣಬಿ ಮತ್ತು ಕುಣಬಿ-ಮರಾಠರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿತಾದರೂ ಮರಾಠರು ಎಂದು ಗುರುತಿಸಿ ಕೊಂಡವರನ್ನು ಪಟ್ಟಿಯಿಂದ ಹೊರಗಿಟ್ಟಿತು. ಕುಣಬಿಗಳು ಅದಾಗಲೇ ಹಿಂದುಳಿದ ವರ್ಗವೆಂದು ವರ್ಗೀಕರಿಸಲ್ಪಟ್ಟಿದ್ದರು.

ಮರಾಠಾ ಮುಖಂಡರು ಅವರ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಬೇಡಿಕೆ ಇಟ್ಟರು. 2008ರ, ಜುಲೈನಲ್ಲಿ ಮರಾಠಾ ಸರಕಾರವು ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಬಾಪಟ್ ಸಮಿತಿ ನೇಮಿಸಿತು. ಆದರೆ ಸಮಿತಿಯು ಮರಾಠರ ಪರವಾಗಿ ವರದಿ ನೀಡಲಿಲ್ಲ. ಮುಂದೆ ಸರಕಾರವು 2014ರಲ್ಲಿ ನಾರಾಯಣರಾವ್ ರಾಣೆ ನೇತೃತ್ವದ ಸಮಿತಿ ಕೊಟ್ಟ ವರದಿ ಆಧಾರದ ಮೇಲೆ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮರಾಠರಿಗೆ ಶೇ.16ರಷ್ಟನ್ನು ಹಾಗೂ ಮುಸ್ಲಿಮರಿಗೆ ಶೇ. 5ರಷ್ಟನ್ನು ಮೀಸಲಾತಿ ಕೋಟ ನಿಗದಿ ಮಾಡಿ ಆದೇಶ ಹೊರಡಿಸಿದ್ದರು. ಮಹಾರಾಷ್ಟ್ರ ಸರಕಾರದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ವಿಧಿಸಿತು. ಸರ್ವೋಚ್ಚ ನ್ಯಾಯಾಲಯವೂ ಕೂಡ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮಧ್ಯ ಪ್ರವೇಶಿಸಲು ನಿರಾಕರಿಸಿತು. ಮರಾಠಾ ಮೀಸಲಾತಿಯ ಹೋರಾಟ 2016ರ ಹೊತ್ತಿಗೆ ವೇಗ ಪಡೆದುಕೊಂಡಿತು. 2018ರಲ್ಲಿ ಮರಾಠರ ಹೋರಾಟ ಹಿಂಸಾರೂಪ ತಾಳಿತು.

ಅದಾಗ ತಾನೆ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಹಿಡಿದಿದ್ದ ಬಿಜೆಪಿ-ಶಿವಸೇನಾ ನೇತೃತ್ವದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರು ಮರಾಠರ ನಿರಂತರ ಒತ್ತಡಕ್ಕೆ ತಲೆಬಾಗಿ ಜೂನ್, 2018ರಲ್ಲಿ ಎಂ.ಜಿ. ಗಾಯಕ್ವಾಡ್ ಅವರ ಅಧ್ಯಕ್ಷತೆಯ ಆಯೋಗವನ್ನು ಮರಾಠರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಕೇಳಿಕೊಂಡಿತು. ಆಯೋಗ ತನ್ನಲ್ಲಿರುವ ಅಂಕಿ ಅಂಶಗಳೊಡನೆ ನವೆಂಬರ್ 2018ರಲ್ಲಿ ವರದಿ ಸಲ್ಲಿಸಿ ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಶೇ.16ರಷ್ಟು ಕೋಟ ನಿಗದಿಪಡಿಸಿ ಮೀಸಲಾತಿಗಾಗಿ ಸರಕಾರಕ್ಕೆ ಶಿಫಾರಸು ಮಾಡಿತು. ಮಹಾರಾಷ್ಟ್ರ ವಿಧಾನಸಭೆ ಮರಾಠರ ಮೀಸಲಾತಿ ಸಂಬಂಧ ತಂದ ‘ಎಸ್.ಇ.ಟಿ.ಸಿ. ಮಸೂದೆ 2018’ನ್ನು ಅಂಗೀಕರಿಸಿದ ಫಲವಾಗಿ ಮರಾಠರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಅರ್ಹತೆ ಪಡೆದುಕೊಂಡರು. ಸಹಜವಾಗಿ ಈ ಕಾಯ್ದೆಯನ್ನೂ ಪ್ರಶ್ನಿಸಲಾಯಿತು.

ಉಚ್ಚ ನ್ಯಾಯಾಲಯವು ಮೀಸಲಾತಿಯ ಸಿಂಧುತ್ವವನ್ನು ಎತ್ತಿ ಹಿಡಿಯಿತು. ಆದರೆ ಮೀಸಲಾತಿ ಕೋಟಾವನ್ನು ಶೇ.16 ರಿಂದ ಶೇ.13ಕ್ಕೆ ಉದ್ಯೋಗಕ್ಕೂ ಶೇ.12ರಷ್ಟನ್ನು ಶಿಕ್ಷಣಕ್ಕೂ ಇಳಿಸಿತು. ಮುಂಬೈ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಮುಂಬೈ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ ಮೀಸಲಾತಿ ಅಸಿಂಧು ಎಂದಿತು. ಎಂ.ಜಿ. ಗಾಯಕ್ವಾಡ್ ಆಯೋಗ ಸಂಗ್ರಹಿಸಿರುವ ದತ್ತಾಂಶಗಳು ಮತ್ತು ಸಂಗತಿಗಳು ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಸಾಕ್ಷ ಸಮೇತ ರುಜುವಾತು ಪಡಿಸಲು ಪೂರಕವಾಗಿಲ್ಲ ಮತ್ತು ಅಳವಡಿಸಿಕೊಂಡಿರುವ ಮಾನದಂಡಗಳು ಕೂಡಾ ಪುಷ್ಟಿ ಕೊಡುವ ಹಾಗಿಲ್ಲ ಎಂದೂ ನ್ಯಾಯಾಲಯ ಹೇಳಿತು.

ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಮರಾಠಾ ಸಮುದಾಯವು ಯಾವುದೇ ಗುಂಪಿನ (ಎ,ಬಿ,ಸಿ,ಡಿ) ಹುದ್ದೆಗಳನ್ನು ಪಡೆದುಕೊಳ್ಳಲು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲೂ ಶಕ್ತವಾಗಿದೆ ಎಂದು ನ್ಯಾಯಾಲಯ ವಿಮರ್ಶಿಸಿದೆ. ಶೇ.30ರಿಂದ ಶೇ. 37ರಷ್ಟು ಹುದ್ದೆಗಳನ್ನು ಸಾಮಾನ್ಯ ವರ್ಗದಲ್ಲಿ ಪಡೆದುಕೊಂಡಿರುವ ದೃಷ್ಟಾಂತವನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ಹಾಗೆಯೇ ಐ.ಎಫ್.ಎಸ್., ಐ.ಪಿ.ಎಸ್. ಮತ್ತು ಐ.ಎ.ಎಸ್. ಹುದ್ದೆಗಳಿಗೆ ಸಾಮಾನ್ಯ ವರ್ಗದಲ್ಲಿ ಪ್ರಬಲ ಸ್ಪರ್ಧೆ ನೀಡಲೂ ಶಕ್ಯವಾಗಿದೆ. ಕೇಂದ್ರ ಸರಕಾರದ ಪ್ರತಿಷ್ಠಿತ ಸೇವೆಗಳಿಗೆ ಪ್ರವೇಶ ಪಡೆಯಲು ಇದು ಗಣನೀಯ ಪ್ರಾತಿನಿಧ್ಯ ಎಂದು ನ್ಯಾಯಾಲಯ ಎತ್ತಿ ತೋರಿಸಿದೆ.

ಮೀಸಲಾತಿ ಕೋಟಾವನ್ನು ಶೇ. 50ರ ಮಿತಿ ಮೀರಿ ಹೋಗಲು ಯಾವುದೇ ಅಸಾಧಾರಣ ಕಾರಣಗಳನ್ನು ಒದಗಿಸಿಲ್ಲ. ಅದೂ ಅಲ್ಲದೆ, ವ್ಯಾಪಕ ಪ್ರಭಾವವುಳ್ಳ ಮುಂದುವರಿದ ಜಾತಿ ಅದು ಹಾಗೂ ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿದೆ ಕೂಡ ಎಂದೂ ಹೇಳಿದೆ (ಡಾ. ಜಯಶ್ರೀ ಲಕ್ಷ್ಮಣರಾವ್ ಪಾಟೀಲ್, ಎಲ್ ಎಲ್ 2021 ಎಸ್‌ಸಿ 243). ಯಾವುದೇ ಜಾತಿಯೇ ಆಗಲಿ ಕೇವಲ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದ ಮಾತ್ರಕ್ಕೆ ಮೀಸಲಾತಿ ಪಡೆಯಲು ಅರ್ಹತೆ ಪಡೆಯುವುದಿಲ್ಲ. ಜೊತೆಗೆ ಸಂವಿಧಾನದ ಅನುಚ್ಛೇದ 16 (4)ರಲ್ಲಿ ಸ್ಪಷ್ಟಪಡಿಸಿರುವಂತೆ ಸರಕಾರದ ಹುದ್ದೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆಯದಿರುವುದನ್ನು ಹಾಗೂ ಸಾಮಾನ್ಯ ವರ್ಗದಲ್ಲಿಯೂ ಹುದ್ದೆಗಳನ್ನು ಗಳಿಸಲು ಶಕ್ತವಾಗದಿರುವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಈ ಅಂಶಗಳೆಲ್ಲವೂ ಒಳಗೊಂಡಿವೆ.

ಮರಾಠರಿಗೆ ಮೀಸಲಾತಿಯ ಬೇಡಿಕೆ ಮಹಾ ರಾಷ್ಟ್ರದಾದ್ಯಂತ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು ಅದು ಸರ್ವೋಚ್ಚ ನ್ಯಾಯಾಲಯದೊಡನೆ ನ್ಯಾಯಾಂಗ ಕದನಕ್ಕೆ ದಾರಿ ಮಾಡಿಕೊಟ್ಟಿದೆ. ಅದರ ಫಲಿತಾಂಶವೆಂದರೆ: ನ್ಯಾಯಾಲಯ ಅದನ್ನು ಅಸಾಂವಿಧಾನಿಕ ಎಂದು ಬೆಟ್ಟು ಮಾಡಿದೆ. ಪರಿಹಾರ ರೂಪದ (curative) ಮನವಿಯನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಿದೆ. ಮನವಿ ಮುಖ್ಯ ನ್ಯಾಯಾಧೀಶರ ಪೀಠದ ಮುಂದೆ ತುರ್ತು ವಿಚಾರಣೆಗೆ ಬಂದಿತಾದರೂ ಅದನ್ನು ಕೈಗೆತ್ತಿಕೊಳ್ಳದೆ ಮುಂದಿನ ದಿನಗಳಲ್ಲಿ ವಿಚಾರಣೆಗಾಗಿ ಮುಂದೂಡಲ್ಪಟ್ಟಿದೆ. ಸದ್ಯ ಮರಾಠರಿಗೆ ಮೀಸಲಾತಿ ಬಯಸುವವರೆಲ್ಲರೂ, ಸರ್ವೋಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುವುದೊಂದೇ ದಾರಿ.

ಇಂಥ ಪರಿಸ್ಥಿತಿಯಲ್ಲೂ ಚಂಡಿ ಹಿಡಿಯುವ ಮಕ್ಕಳಂತೆ, ಮೀಸಲಾತಿಗಾಗಿ ಕಾನೂನನ್ನು ಕೈಗೆತ್ತಿಕೊಂಡು ಹಿಂಸೆಗೆ ಅವಕಾಶ ಮಾಡಿಕೊಡುವುದು, ಸರಕಾರದ ಮೇಲೆ ಇನ್ನಿಲ್ಲದ ಅನಗತ್ಯ ಒತ್ತಡ ಹೇರುವುದು, ಅಮಾಯಕ ಜನರ ಪ್ರಾಣಕ್ಕೆ ಕುತ್ತು ತರುವುದು ಇವೇ ಮುಂತಾದ ಅನಿಷ್ಠ ಕಾರಕಗಳಿಗೆ ಪ್ರಚೋದಿಸುವವರನ್ನು ಸರಕಾರ ನಿಷ್ಕಾರುಣ್ಯವಾಗಿ ಸದೆ ಬಡಿಯಬೇಕಾಗಿದೆ. ನ್ಯಾಯಾಲಯದಲ್ಲಿ ವಿಷಯ ವಿಚಾರಣೆಗೆ ಬಾಕಿ ಇರುವಾಗ, ನ್ಯಾಯ ಸಮ್ಮತವಲ್ಲದ ಬೇಡಿಕೆಗೆ ಯಾವುದೇ ಪ್ರಜ್ಞ ನಾಗರಿಕನೂ ಹಿಂಸಾರೂಪದ ಹೋರಾಟಕ್ಕೆ ಇಳಿಯುವುದೂ ಸಾಧುವಲ್ಲ. ಸರಕಾರವೂ ಕೂಡ ಅಂತಹವರೊಡನೆ ರಾಜಕೀಯ ಚೆಲ್ಲಾಟವಾಡದೆ ಸಂವಿಧಾನದ ವಿಧಿಗಳನುಸಾರ ನಡೆದುಕೊಳ್ಳುವುದು ಪ್ರಜಾಸತ್ತಾತ್ಮಕ ರೀತಿ- ರಿವಾಜುಗಳನ್ನು ಗೌರವಿಸಿದಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News