ವಾಹನಗಳ ನೋಂದಣಿಯಲ್ಲಿ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ
ಬೆಂಗಳೂರು: ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ ಮಾಡಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟಾಗಿರುವ ಪ್ರಕರಣದಲ್ಲಿ ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ ಐಪಿಎಸ್ ಅಧಿಕಾರಿ ಶಿವಕುಮಾರ್ (ನಿವೃತ್ತ) ಅವರು ಭಾಗಿಯಾಗಿದ್ದಾರೆ ಎನ್ನಲಾಗಿರುವ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರಕಾರವು ಸಿಐಡಿ ತನಿಖೆಗೆ ವಹಿಸಲು ಮುಂದಾಗಿದೆ.
ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಇತರ ಕಾರ್ಡ್ಗಳನ್ನು ಪೂರೈಸುವ ರೋಸ್ಮೆರ್ಟಾ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ಗೆ ಐಪಿಎಸ್ ಅಧಿಕಾರಿ ಶಿವಕುಮಾರ್ ಅವರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಸಲ್ಲಿಕೆಯಾಗಿದ್ದ
ದೂರನ್ನಾಧರಿಸಿ ಇಲಾಖೆ ವಿಚಾರಣೆ ನಡೆದಿತ್ತು. ಈ ಪ್ರಕರಣವು ಹಿಂದಿನ ಬಿಜೆಪಿ ಸರಕಾರದ ಗಮನದಲ್ಲಿತ್ತಾದರೂ ಯಾವುದೇ ಕ್ರಮ ವಹಿಸಿರಲಿಲ್ಲ. ಈ ಕುರಿತು ‘the-file.in’ 2022ರ ಎಪ್ರಿಲ್ 7ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಇದೀಗ ವರ್ಷದ ಬಳಿಕ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವಹಿಸಲು ಸಾರಿಗೆ ಇಲಾಖೆಯು ಗೃಹ ಇಲಾಖೆಗೆ ಕಡತವನ್ನು ರವಾನಿಸಿದೆ. ಈ ಸಂಬಂಧ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘the-file.in’ಗೆ ಖಚಿತಪಡಿಸಿದ್ದಾರೆ.
ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಸರಕಾರವು ಇದೀಗ ಲಿಂಗಾಯತ ಸಮುದಾಯಕ್ಕೆ ಸೇರಿದ ಹಿರಿಯ ಐಪಿಎಸ್ ಅಧಿಕಾರಿ ಶಿವಕುಮಾರ್ ಅವರ ವಿರುದ್ಧದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಮುಂದಾಗಿರುವುದು ಲಿಂಗಾಯತ ಶಾಸಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಬೆಳವಣಿಗೆ ನಡುವೆಯೇ ಇದೇ ರೋಸ್ಮೆರ್ಟಾ ಟೆಕ್ನಾಲಾಜೀಸ್ ಸಂಸ್ಥೆಯ ಅಕ್ರಮ ಅವ್ಯವಹಾರದಲ್ಲಿ ಭಾಗಿ ಆಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಸರಕಾರದ ಕಾರ್ಯದರ್ಶಿಯು ಸಾರಿಗೆ ಆಯುಕ್ತರಿಗೆ (ಸಾರಿಗೆ-ರಸ್ತೆ ಸುರಕ್ಷತೆ) 2023ರ ಅಕ್ಟೋಬರ್ 17ರಂದು ಪತ್ರ (ಟಿಡಿ 33 ಟಿಡಿಎಸ್ 2022 (ಭಾಗ-1) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.