ಸೈಬರ್ ವಂಚಕರಿಂದ ಎಇಪಿಎಸ್ ದುರ್ಬಳಕೆ
ಆಧಾರ್ ಬಯೋಮೆಟ್ರಿಕ್ ಲಾಕ್ ಹೇಗೆ? ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವುದರ ಬಗ್ಗೆ ರಾಜ್ಯ ಸರಕಾರ ಮಾಹಿತಿಯನ್ನು ಒದಗಿಸಿದ್ದು, ಸಾರ್ವಜನಿಕರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ಯೂಟ್ಯೂಬ್ ಚಾನೆಲ್ https://www.youtube.com/watch?v=Jtq6nTtpu5A ಗೆ ಭೇಟಿ ಇದರ ಪ್ರಯೋಜನ ಪಡೆಯಬಹುದು.
ಮಂಗಳೂರು: ಸೈಬರ್ ವಂಚನಾ ಜಾಲವು ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ (ಎಇಪಿಎಸ್)ಯಡಿ ಜನಸಾಮಾನ್ಯರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಆರೋಪಗಳು ತೀವ್ರಗೊಳ್ಳುತ್ತಿದ್ದು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು ಎರಡು ತಿಂಗಳ ಅವಧಿಯಲ್ಲಿ ಎಇಪಿಎಸ್ ಮೂಲಕ ಸುಮಾರು ಒಂದು ಕೋಟಿ ರೂ.ಗಳನ್ನು ದೇಶದ ವಿವಿಧ ಕಡೆಗಳಿಂದ ಸೈಬರ್ ವಂಚಕರು ಲೂಟಿ ಮಾಡಿದ್ದಾರೆ.
ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಗೆ ಈ ಸಂಬಂಧ ಈಗಾಗಲೇ 13 ದೂರುಗಳು ಬಂದಿದ್ದು, ಒಂದು ಪ್ರಕರಣದಲ್ಲಿ ಎಫ್ಐಆರ್ ಕೂಡಾ ಆಗಿದೆ. ಮಂಗಳೂರಿನಲ್ಲಿ ಆಸ್ತಿ ನೋಂದಣಿ ಕಚೇರಿಯಲ್ಲಿ (ಸಬ್ ರಿಜಿಸ್ಟ್ರಾರ್) ಆಸ್ತಿಯ ನೋಂದಣಿಯ ಬಳಿಕ ಎಇಪಿಎಸ್ ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾಗಿರುವುದಾಗಿ ಸಂತ್ರಸ್ತರು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಬೆಂಗಳೂರು ನಗರ, ಚನ್ನರಾಯಪಟ್ಟಣ ತಾಲೂಕಿನಲ್ಲಿಯೂ ಈ ತೆರನಾದ ಪ್ರಕರಣಗಳು ದಾಖಲಾಗಿದ್ದು, ಸಿಮ್ ಕಾರ್ಡ್, ವಾಹನ ಖರೀದಿ, ಆಸ್ತಿ ನೋಂದಣಿ, ಕೆವೈಸಿ ನೀಡುವ ಸಂದರ್ಭ ಮಾಹಿತಿಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬಯೋಮೆಟ್ರಿಕ್ ಡೇಟಾ ಮತ್ತು ಬೆರಳಚ್ಚು ಮಾಹಿತಿ ಕದ್ದು ಎಇಪಿಎಸ್ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಮಂಗಳೂರು ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಬಳಿಕ ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವ ಕುರಿತಂತೆ 13 ದೂರುಗಳು ಬಂದಿವೆ. ಆದರೆ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಾರಣಕ್ಕೆ ಈ ವಂಚನೆ ನಡೆದಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಸಂಬಂಧ ಪಟ್ಟ ಇಲಾಖೆಗಳ ಜತೆ ಸಂಪರ್ಕವಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಪ್ರಬಲ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರು ಕೂಡಾ ಸೈಬರ್ ವಂಚನೆ ಬಗ್ಗೆ ಜಾಗರೂಕರಾಗಿರುವುದು ಅತೀ ಅಗತ್ಯ. ಆಧಾರ್ ಸಂಬಂಧಿತ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಬೇಕು.
ಅನುಪಮ್ ಅಗ್ರವಾಲ್, ಪೊಲೀಸ್ ಆಯುಕ್ತರು, ಮಂಗಳೂರು
ಆಧಾರ್ ಬಯೋಮೆಟ್ರಿಕ್ ಡಿಸೇಬಲ್ ಅತ್ಯಗತ್ಯ
ಎಂ ಆಧಾರ್ ಆ್ಯಪ್ ಅಥವಾ ಮೈ ಆಧಾರ್ ಪೋರ್ಟಲ್ ಮೂಲಕ ಆಧಾರ್ ಸಂಖ್ಯೆಯ ಬಯೋಮೆಟ್ರಿಕ್ ಲಾಕ್ ಮಾಡುವುದು ಅತೀ ಅಗತ್ಯ. ಅಗತ್ಯವಿದ್ದಾಗ ಮಾತ್ರವೇ ಅದನ್ನು ಸಕ್ರಿಯಗೊಳಿಸಿ ಬಳಿಕ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವುದರಿಂದ ಎಇಪಿಎಸ್ ಮೂಲಕ ನಡೆಯುತ್ತಿರುವ ವಂಚನೆಯಿಂದ ಪಾರಾಗಲು ಸಾಧ್ಯ. ಮೈಕ್ರೋ ಎಟಿಎಂ ವ್ಯವಸ್ಥೆಯಡಿ ಹಣ ಪಡೆಯುವ ಸಂದರ್ಭ ಜಿಪಿಎಸ್ ಮೂಲಕ ಲೊಕೇಶನ್ ಗುರುತು ಹಾಗೂ ಯಾರು ಹಣ ನೀಡಲು ಬರುತ್ತಾರೋ ಅವರ ಫೋಟೊ ತೆಗೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.
ಡಾ. ಅನಂತ ಪ್ರಭು, ಸೈಬರ್ ತಜ್ಞ
ಒಟಿಪಿ, ಪಾಸ್ ವರ್ಡ್ ಇಲ್ಲದೆಯೂ ಬ್ಯಾಂಕ್ ಖಾತೆಗೆ ಕನ್ನ!
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತ್ರಸ್ತರೊಬ್ಬರು ಅಸಮಾಧಾನ ತೋಡಿಕೊಂಡಿದ್ದು, ‘ಮಂಗಳೂರಿನ ಸಬ್ ರಿಜಿಸ್ಟ್ರಾರ್ ನಲ್ಲಿ ಆಗಸ್ಟ್ ನಲ್ಲಿ ನಮ್ಮ ಕುಟುಂಬ ಆಸ್ತಿ ಮಾರಾಟ ನೋಂದಣಿ ಮಾಡಿಸಿತ್ತು. ಸೆಪ್ಟಂಬರ್ 19ಕ್ಕೆ ‘Adhaar Authentification successful’ ಎಂಬ ಇಮೇಲ್ ಸಂದೇಶ ನನಗೆ ಮತ್ತು ಅಣ್ಣನಿಗೆ ಬಂದಿದೆ. ಇದು ಹ್ಯಾಕಿಂಗ್ ಎಂದು ನಮಗೆ ತಿಳಿಯಲಿಲ್ಲ. ಈ ಮೂಲಕ ನಮ್ಮ ಬ್ಯಾಂಕ್ ಖಾತೆಗಳಿಂದ ಹಣ ಕಳವಾಗಿದೆ. ಇದಕ್ಕೆ ಒಟಿಪಿ ಅಥವಾ ಪಾಸ್ವರ್ಡ್ ಕೂಡಾ ಕೇಳಲಾಗಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.
ಸೈಬರ್ ವಂಚಕರು ಅತ್ಯಂತ ಗುಪ್ತವಾಗಿ ಫೇಕ್ ಐಡಿಯ ಮೂಲಕ ದೇಶ, ವಿದೇಶದ ಅದ್ಯಾವುದೋ ಮೂಲೆಯಲ್ಲಿ ಕುಳಿತು ಇಂತಹ ವಂಚನೆಗಳನ್ನು ನಡೆಸುತ್ತಿರುವುದರಿಂದ ಸೈಬರ್ ಅಪರಾಧಗಳಲ್ಲಿ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವು ಮಾತ್ರವಲ್ಲ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತಿದೆ. ಕೆಲ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ಆರೋಪಿಯ ಮೂಲ ಪತ್ತೆಯಾದರೂ ಅದಕ್ಕಾಗಿ ಸಿಬ್ಬಂದಿ ನಿಯೋಜಿಸಿ, ಹೊರ ರಾಜ್ಯ ಅಥವಾ ದೇಶಗಳಿಗೆ ಕಳುಹಿಸಿ ತನಿಖೆ ನಡೆಸಿದಾಗ ಅದು ನಕಲಿಯಾಗಿರುವುದು ಪೊಲೀಸರ ಶ್ರಮದ ಜತೆಗೆ ಲಕ್ಷಾಂತರ ರೂ. ನಷ್ಟಕ್ಕೆ ಕಾರಣವಾಗುತ್ತಿದೆ.
ಇಂತಹ ಪ್ರಕರಣಗಳಲ್ಲಿ ಪತ್ತೆ ಸಾಧ್ಯವಿಲ್ಲವೇ?
ಇದೆ ಎನ್ನುತ್ತಾರೆ ಸೈಬರ್ ತಜ್ಞರು. ಇಂತಹ ಪ್ರಕರಣ ಕೇವಲ ಕರ್ನಾಟಕ ಅಥವಾ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದೆಲ್ಲೆಡೆ ನಡೆಯುತ್ತಿದೆ. ಈ ತೆರನಾದ ಸೈಬರ್ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿ, ಸಂತ್ರಸ್ತರಿಗೆ ಹಣ ಮರು ಪಾವತಿಯಾಗಿರುವುದೂ ಇದೆ ಎನ್ನುತ್ತಾರೆ ಸೈಬರ್ ತಜ್ಞ ಡಾ. ಅನಂತ ಪ್ರಭು.
ಪಶ್ಚಿಮ ಬಂಗಾಲದ ಲ್ಯಾಂಡ್ ರೆಕಾರ್ಡ್ ಸರ್ವರ್ ಹ್ಯಾಕ್!
ಸೈಬರ್ ವಂಚಕರು ಪಶ್ಚಿಮ ಬಂಗಾಲದ ಭೂಮಿ ದಾಖಲೆ (ಲ್ಯಾಂಡ್ ರೆಕಾರ್ಡ್)ಗಳ ಸರ್ವರ್ ಹ್ಯಾಕ್ ಮಾಡಿದ್ದು, ಅಲ್ಲಿಂದ ಪಡೆದ ಬಯೋಮೆಟ್ರಿಕ್ ಡೇಟಾಗಳ ಮೂಲಕ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಕೃತ್ಯ ನಡೆದಿದೆ. ಭೂ ದಾಖಲೆಗಳ ನೋಂದಣಿ ಸಂದರ್ಭ ಬಯೋಮೆಟ್ರಿಕ್ ಡೇಟಾ, ಆಧಾರ್ ನಂಬರ್ ಲಿಂಕ್ ಮಾಡಲಾಗಿರುತ್ತದೆ. ಆ ಸರ್ವರ್ ಹ್ಯಾಕ್ ಆಗಿರುವುದರಿಂದ ಭಾರೀ ಪ್ರಮಾಣದಲ್ಲಿ ವಂಚನೆ ನಡೆಯುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಆಗಿರುವ ರೀತಿಯಲ್ಲಿ ಬೇರೆ ಕಡೆಯಲ್ಲೂ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸೈಬರ್ ತಜ್ಞರು.
ಕರ್ನಾಟಕದಲ್ಲಿ ಎಇಪಿಎಸ್ನಡಿ ನಡೆದಿರುವ ವಂಚನೆ ಪ್ರಕರಣಗಳು ಹೊರ ರಾಜ್ಯವೊಂದರಿಂದ (ಪ್ರಕರಣಗಳು ತನಿಖೆ ಹಂತದಲ್ಲಿರುವುದರಿಂದ ರಾಜ್ಯದ ಹೆಸರನ್ನು ಉಲ್ಲೇಖಿಸಲಾಗಿಲ್ಲ) ನಡೆದಿರುವ ಮಾಹಿತಿ ಲಭ್ಯವಾಗಿದ್ದು, ಹಾಗಾಗಿ ಅದು ಸರ್ವರ್ ಹ್ಯಾಕ್ ಆಗಿರುವ ಸಂಶಯವನ್ನು ಬಲಪಡಿಸಿದೆ.
ಮೈಕ್ರೋ ಎಟಿಎಂ ಬಳಕೆ ಬಗ್ಗೆ ಇರಲಿ ಎಚ್ಚರ
ಮೈಕ್ರೋ ಎಟಿಎಂ ಎಂಬ ವ್ಯವಸ್ಥೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಕಷ್ಟು ವಂಚನೆ ಪ್ರಕರಣಗಳು ನಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ಹಣ ಪಡೆಯಲು ತೊಂದರೆಯಾಗದಂತೆ ನಿಟ್ಟಿನಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಇದೆ. ತುರ್ತು ಸಂದರ್ಭಗಳಲ್ಲಿ ಹಣ ಅಗತ್ಯವಿದ್ದಾಗ ಖಾತೆದಾರ ತಮ್ಮ ಮನೆ ಸಮೀಪದಲ್ಲಿ ಮೈಕ್ರೋ ಎಟಿಎಂ ಹೊಂದಿರುವ ವ್ಯಕ್ತಿಯ ಮೈಕ್ರೋ ಎಟಿಎಂ (ಮಾಲ್ಗಳಲ್ಲಿ, ಅಂಗಡಿಗಳಲ್ಲಿ ಲಭ್ಯವಿರುವ ಎಟಿಎಂ ಸ್ವೈಪಿಂಗ್ ಯಂತ್ರ)ನಲ್ಲಿ ಆಧಾರ್ ನಂಬರ್ ಹಾಗೂ ಬೆರಳಚ್ಚು ಪಡೆದು ಹಣ ಒದಗಿಸುತ್ತಾನೆ. ಈ ರೀತಿಯಾಗಿ ಬ್ಯಾಂಕ್ ಖಾತೆದಾರ ನೀಡುವ ಬೆರಳಚ್ಚು ಹಾಗೂ ಆಧಾರ್ ಸಂಖ್ಯೆಯೂ ಸೋರಿಕೆಯಾಗಿ ವಂಚನೆಗೆ ಕಾರಣವಾಗಿರಬಹುದು ಎನ್ನುವುದು ಸೈಬರ್ ತಜ್ಞರ ಅನಿಸಿಕೆ.
***
‘ಬಯೋಮೆಟ್ರಿಕ್ ಡೆಟಾ ಮತ್ತು ಬೆರಳಚ್ಚು ಮೂಲಕ ಖಾತೆಗಳಿಂದ ಹಣ ವರ್ಗಾವಣೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಗ್ರಾಹಕರಿಂದ ನಮಗೆ ಯಾವುದೇ ದೂರು ಬಂದಿಲ್ಲ.’
- ಕವಿತಾ, ಲೀಡ್ ಬ್ಯಾಂಕ್ ಮ್ಯಾನೇಜರ್, ದ.ಕ.