ಮುಂಗಾರು ಅಧಿವೇಶನ: ಅಧಿಕಾರಸ್ಥರ ನಡವಳಿಕೆ ಬಿಂಬಿಸಿದ್ದೇನು?

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬದಿಗೆ ತಳ್ಳಲಾಗುತ್ತಿರುವುದು, ಸಾಂವಿಧಾನಿಕ ಸಂಸ್ಥೆಗಳ ವ್ಯವಸ್ಥಿತ ಸ್ವಾಧೀನ, ಸಂಸತ್ ಅಧಿವೇಶನದ ಪ್ರಕ್ರಿಯೆಗಳು ನಡೆಯುವ ರೀತಿ ಇವೆಲ್ಲವನ್ನೂ ಗಮನಿಸಿದರೆ, ಈಗಿನ ಸರಕಾರದಲ್ಲಿ ವಸಾಹತುಶಾಹಿ ರಾಜ್‌ನ್ನು ಹೋಲುವ ಅಂಶಗಳು ಹೇಗೆ ಇವೆ ಎಂಬುದನ್ನು ಕಾಣಬಹುದಾಗಿದೆ. ಚರ್ಚೆಯೇ ಇಲ್ಲದ, ವಿಮರ್ಶೆಗೆ ಎಡೆಯನ್ನೇ ಮಾಡಿಕೊಡದ ಅಥವಾ ಅದನ್ನೆಲ್ಲ ನಿರ್ಲಕ್ಷಿಸುವ ಧೋರಣೆಯೊಂದು ತೀವ್ರವಾಗುತ್ತಿದೆ.

Update: 2023-08-19 05:06 GMT

ಎಲ್ಲವೂ ವಿಭಜಿತವಾಗುತ್ತಿರುವ ಕಾಲದಲ್ಲಿ, ದೇಶದ ಪ್ರಜಾಸತ್ತಾತ್ಮಕ ಕಾರ್ಯಗಳು ಕೂಡ ಜೊತೆಯಾಗಿ ನಡೆಯದ ಸ್ಥಿತಿಯನ್ನು ಸಂಸದೀಯ ಅಧಿವೇಶನಗಳು ವ್ಯಾಖ್ಯಾನಿಸುತ್ತಿವೆಯೇ ಎಂಬ ಪ್ರಶ್ನೆಯೇಳುತ್ತದೆ. ಅಧಿವೇಶನದ ಕಲಾಪಗಳು ಮತ್ತೆ ಮತ್ತೆ ಮುಂದೂಡಿಕೆಯಾಗುವುದು, ಅವ್ಯವಸ್ಥೆ ತಲೆದೋರಿದ ಹಾಗಿರುವುದು, ಪ್ರತಿಪಕ್ಷಗಳ ದನಿಗೆ, ಪ್ರತಿಭಟನೆಗೆ ಕಿವಿಗೊಡದಂತಿರುವುದು, ವಿರೋಧ ಪಕ್ಷದ ಸಂಸದರ ವಿರುದ್ಧದ ಧೋರಣೆ ಇವೆಲ್ಲವೂ ವಾಡಿಕೆಗೆ ಹೊರತಾದ ರೂಢಿಯ ಭಾಗವಾಗುತ್ತಿವೆ.

ಈ ರೂಢಿಯು ವಿಮರ್ಶಾತ್ಮಕ ಚರ್ಚೆಯೇ ಇಲ್ಲದೆ ಸರಕಾರ ತನಗೆ ಬೇಕಾದ ಮಸೂದೆಗಳನ್ನು ಬೇಕಾದಂತೆ ಅತಿ ವೇಗದಲ್ಲಿ ಅಂಗೀಕರಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿವೆ.

ಉದಾಹರಣೆಗೆ, ಆಗಸ್ಟ್ ೧೦ರಂದು ಗದ್ದಲದ ನಡುವೆಯೇ ರಾಜ್ಯಸಭಾ ಅಧ್ಯಕ್ಷ, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಫಾರ್ಮಸಿ (ತಿದ್ದುಪಡಿ) ಮಸೂದೆಯನ್ನು ಮತಕ್ಕೆ ಹಾಕಿದ ಮೂರೇ ನಿಮಿಷಗಳಲ್ಲಿ ಅಂಗೀಕರಿಸಿದರು.

ಇನ್ನು, ಹೊಸದಾಗಿ ಮಂಡಿಸಲಾದ ಚುನಾವಣಾ ಆಯುಕ್ತರ ಮಸೂದೆಯ ವಿವರಗಳನ್ನು ಗಮನಿಸಬೇಕು. ಆಯುಕ್ತರ ಆಯ್ಕೆಗಾಗಿ ಸುಪ್ರೀಂ ಕೋರ್ಟ್ ಈ ವರ್ಷದ ಆರಂಭದಲ್ಲಿ ಆಯ್ಕೆ ಸಮಿತಿಯೊಂದನ್ನು ರಚಿಸಿತ್ತು. ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿದ್ದ ಆ ಸಮಿತಿ, ಹೊಸ ಕಾನೂನು ಬರುವವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಅದರ ನಡುವೆಯೇ ಈಗ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಕೇಂದ್ರೀಕೃತ ಮತ್ತು ಏಕೀಕೃತ ನಿಯಂತ್ರಣ ಸ್ಥಾಪಿಸುವ ತನ್ನ ಅಜೆಂಡಾವನ್ನು ಮುಂದುವರಿಸಲು ಈಗಿನ ಸರಕಾರ ಶಾಸಕಾಂಗ ಮತ್ತು ಇತರ ಸಾಂಸ್ಥಿಕ ಸಾಧನಗಳನ್ನು ಬಳಸಿದ ಒಂದು ಕಪಟ ಮಾರ್ಗ ಇದಾಗಿದೆ. ಕಾನೂನಿನ ಅನುಪಸ್ಥಿತಿ, ಸರಕಾರದ ಹಾದಿಯನ್ನು ಸುಲಭಗೊಳಿಸಿತು ಎಂದೇ ಹೇಳಬೇಕಾಗಿದೆ.

ಈ ಮುಂಗಾರು ಅಧಿವೇಶನದಲ್ಲಿ ಮೂರು ಮುಖ್ಯ ವಿಚಾರಗಳು ಗಮನ ಸೆಳೆದವು. ಅವೆಲ್ಲವೂ ಹೊಣೆಗಾರಿಕೆಯ ಬಿಕ್ಕಟ್ಟನ್ನು ಮತ್ತು ಕಾರ್ಯಾಂಗದ ಅತಿ ಕೇಂದ್ರೀಕೃತ ನಿಲುವನ್ನೇ ತೋರಿಸುತ್ತವೆ.

ಮೊದಲನೆಯದು, ಮಣಿಪುರದಲ್ಲಿನ ಜನಾಂಗೀಯ ಸಂಘರ್ಷದ ವಿಚಾರದಲ್ಲಿ ತೋರಿಸಿದ ನಡೆ. ಅದರ ಹೊಣೆಗಾರಿಕೆ ಪೂರ್ತಿಯಾಗಿ ಸರಕಾರದ್ದು ಎಂದು ಆರೋಪಿಸಿದ ಪ್ರತಿಪಕ್ಷಗಳು, ಕೇಂದ್ರ ಗೃಹ ಸಚಿವರು ಮತ್ತು ಪ್ರಧಾನಿಯ ಪ್ರತಿಕ್ರಿಯೆಗೆ ಆಗ್ರಹಿಸಿದವು. ‘ಹೊಣೆಗಾರಿಕೆ’ ಎಂಬುದು ಈಗಿನ ಸರಕಾರದಲ್ಲಿ ಅಷ್ಟಾಗಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬಳಕೆಯಲ್ಲಿರದ ಪದವಾಗಿದೆ. ಆದರೆ ಅದು ಮುಖ್ಯವಾಗಿದೆ. ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಏನಾಗಿದೆ ಎಂದು ಬಿರೇನ್ ಸಿಂಗ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಸರಕಾರ ಸೂಕ್ತ ಕ್ರಮ ಜರುಗಿಸುವುದಕ್ಕೆ ಒತ್ತಾಯಿಸಿದವು.

ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷ ಬಹುಶಃ ಈ ಮುಂಗಾರು ಅಧಿವೇಶನದಲ್ಲಿ ಮುಖ್ಯವಾಗಿ ಚರ್ಚೆಗೆ ಬರಬೇಕಿತ್ತು. ಬಿಜೆಪಿ ಆಡಳಿತದ ರಾಜ್ಯದಲ್ಲಿ ಆಡಳಿತದ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿರುವಾಗ, ಕೇಂದ್ರ ಸರಕಾರ ತನ್ನದೇ ಆದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳನ್ನು ಉತ್ತರಿಸಬೇಕಾಗಿತ್ತು.

ಎರಡನೆಯದಾಗಿ, ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-೨೦೨೩ರ ಅಂಗೀಕಾರ. ಈ ಶಾಸನ ಅಗಾಧವಾದ ಕವಲುಗಳನ್ನು ಹೊಂದಿದೆ. ಉದಾಹರಣೆಗೆ, ರಾಷ್ಟ್ರೀಯ ಭದ್ರತೆಯಂತಹ ಆಧಾರದ ಮೇಲೆ ಸರಕಾರ ಡೇಟಾ ಪ್ರಕ್ರಿಯೆಗೆ ಒದಗಿಸಿದ ವಿನಾಯಿತಿಗಳು ಮಸೂದೆಯ ಪ್ರಮುಖ ಮಿತಿಗಳಲ್ಲಿ ಒಂದು. ಇದು ಡೇಟಾ ಸಂಗ್ರಹಣೆ, ಸಂಸ್ಕರಣೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಸ್ವಾಧೀನಕ್ಕೆ ಕಾರಣವಾಗಬಹುದು. ಇದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ.

ಕಾರ್ನೆಗೀ ಇಂಡಿಯಾದ ಸುಯಾಶ್ ರೈ ಮತ್ತು ಅನಿರುದ್ಧ್ ಬರ್ಮನ್ ತಮ್ಮ ಇತ್ತೀಚಿನ ಪ್ರಬಂಧದಲ್ಲಿ, ೨೦೨೩ರ ಡಿಪಿಡಿಪಿ (ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್) ಮಸೂದೆ, ೨೦೧೮ರ ಮಸೂದೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿವರಿಸುತ್ತಾರೆ, ಆ ಮೂಲಕ ಪ್ರಸ್ತುತ ಮಸೂದೆಯ ಅಂಶಗಳು, ಹಿಂದಿನ ಮಸೂದೆಯ ಪರಿಣಾಮಕಾರಿ ಸಾಧ್ಯತೆಗಳನ್ನು ಮಿತಿಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

‘‘ಮೊದಲನೆಯದಾಗಿ, ಮಸೂದೆಯಲ್ಲಿ ನೀಡಲಾದ ವಿನಾಯಿತಿಗಳು ಮತ್ತು ಹೆಚ್ಚಿನ ವಿನಾಯಿತಿಗಳನ್ನು ನೀಡುವ ಅಧಿಕಾರ ಎಷ್ಟು ವಿಸ್ತಾರವಾಗಿದೆ ಎಂದರೆ ಪ್ರಾಯೋಗಿಕವಾಗಿ ಯಾರಾದರೂ ಮತ್ತು ಯಾವುದೇ ಸಂಸ್ಕರಣಾ ಚಟುವಟಿಕೆಗಳಿಗೆ ವಿನಾಯಿತಿ ನೀಡಬಹುದು. ಸರಕಾರಿ ಸಂಸ್ಥೆಗಳಿಗೆ ಬಹುತೇಕ ಸಂಪೂರ್ಣ ವಿನಾಯಿತಿ ಜೊತೆಗೆ, ಮಸೂದೆ ಇತರ ಘಟಕಗಳಿಗೆ ವಿನಾಯಿತಿ ನೀಡಲು ವ್ಯಾಪಕ ಅಧಿಕಾರವನ್ನೂ ಒದಗಿಸುತ್ತದೆ. ಸರಕಾರ ಅಂತಹ ವಿನಾಯಿತಿಯ ಆಧಾರದ ಮೇಲೆ ಶಾಸನದಲ್ಲಿ ಯಾವುದೇ ಮಾರ್ಗದರ್ಶನವಿಲ್ಲದೆ ಯಾವುದೇ ಘಟಕಕ್ಕೆ ಸಂಪೂರ್ಣವಾಗಿ ವಿನಾಯಿತಿ ನೀಡಬಹುದು. ಅಂತಹ ಅಧಿಕಾರಗಳನ್ನು ಸರಕಾರಕ್ಕೆ ನೀಡಿದಾಗ, ವಿನಾಯಿತಿ ನೀಡುವ ನಿರ್ಧಾರವನ್ನು ಮಾರ್ಗದರ್ಶನ ಮಾಡಲು ಕಾನೂನಿನಲ್ಲಿ ಕನಿಷ್ಠ ಕೆಲವು ಮಾನದಂಡಗಳಿರಬೇಕು. ಆದರೆ ಅಂಥ ಯಾವುದೇ ಮಾನದಂಡಗಳನ್ನು ಈ ಮಸೂದೆಯಲ್ಲಿ ಒದಗಿಸಲಾಗಿಲ್ಲ.’’

‘‘ಎರಡನೆಯದಾಗಿ, ಪ್ರಸ್ತಾವಿತ ಡೇಟಾ ಸಂರಕ್ಷಣಾ ಮಂಡಳಿ ಯಾವುದೇ ನಿಯಂತ್ರಕ ಅಥವಾ ಮೇಲ್ವಿಚಾರಣಾ ಅಧಿಕಾರಗಳನ್ನು ಹೊಂದಿರುವುದಿಲ್ಲ ಮತ್ತು ಬಹುತೇಕ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಸರಕಾರವೇ ಮಾಡುತ್ತದೆ. ಸರಕಾರದ ಸಚಿವಾಲಯಕ್ಕೆ ಅಂತಹ ಜವಾಬ್ದಾರಿಗಳನ್ನು ನೀಡುವುದು ಪ್ರಶ್ನಾರ್ಹ ಕ್ರಮವಾಗಿದೆ. ಮತ್ತೊಂದೆಡೆ, ಡೇಟಾ ಸಂರಕ್ಷಣಾ ದೃಷ್ಟಿಕೋನದಿಂದ ಡಿಜಿಟಲ್ ಆರ್ಥಿಕತೆಯನ್ನು ನಿಯಂತ್ರಿಸಲು ಉಪಯುಕ್ತವಾದ ತಾಂತ್ರಿಕ ಸಾಮರ್ಥ್ಯಗಳನ್ನು ನಿರ್ಮಿಸಲು ಮಂಡಳಿಗೆ ಕಡಿಮೆ ಅವಕಾಶವಿದೆ. ಮಂಡಳಿ ಭಾರತದ ಇತರ ಸಾರ್ವಜನಿಕ ಪ್ರಾಧಿಕಾರಗಳಿಗಿಂತ ಕಡಿಮೆ ಸ್ವಾತಂತ್ರ್ಯವನ್ನು ಹೊಂದಿರುತ್ತದೆ. ಉದಾಹರಣೆಗೆ, ಅಧ್ಯಕ್ಷರು ಮತ್ತು ಸದಸ್ಯರನ್ನು ಎರಡು ವರ್ಷಗಳ ಕಾಲ ನೇಮಿಸಲಾಗುತ್ತದೆ ಮತ್ತು ನಂತರ ಮರುನೇಮಕ ಮಾಡಬಹುದು, ಆದರೆ ಅಂತಹ ಅಧಿಕಾರಿಗಳನ್ನು ಮೂರು ಅಥವಾ ಐದು ವರ್ಷಗಳವರೆಗೆ ನೇಮಿಸುವುದು ಪ್ರಮಾಣಿತ ಅಭ್ಯಾಸವಾಗಿದೆ. ನೇಮಕಾತಿಯ ಅಲ್ಪಾವಧಿ ಸಾಮಾನ್ಯವಾಗಿ ಅದರ ಮೇಲಿನ ಸರಕಾರದ ಹತೋಟಿಯನ್ನೇ ಸೂಚಿಸುತ್ತದೆ.’’

‘‘ಮೂರನೆಯದಾಗಿ, ಕೆಲವು ರೀತಿಯಲ್ಲಿ, ವೈಯಕ್ತಿಕ ಡೇಟಾವನ್ನು ರಕ್ಷಿಸುವುದಕ್ಕೆ, ಸಮಂಜಸವಾದ ಭದ್ರತಾ ರೂಢಿಗಳು ಮತ್ತು ಕಾರ್ಯವಿಧಾನಗಳನ್ನು ಜಾರಿಗೊಳಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ನಿರ್ಲಕ್ಷ್ಯದಿಂದಾಗಿ, ವ್ಯಕ್ತಿಗೆ ಅನ್ಯಾಯವಾದಾಗ, ಬಾಧಿತ ವ್ಯಕ್ತಿಗೆ ಪರಿಹಾರ ಒದಗಿಸುವ ನಿಬಂಧನೆಯನ್ನು ತೆಗೆದುಹಾಕಲು, ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೦ ಅನ್ನು ತಿದ್ದುಪಡಿಗೆ ಮಸೂದೆ ಪ್ರಯತ್ನಿಸುತ್ತದೆ. ಡಿಪಿಡಿಪಿ ಮಸೂದೆ ಅಂತಹ ಸಂತ್ರಸ್ತ ವ್ಯಕ್ತಿಗಳಿಗೆ ಯಾವುದೇ ಪರಿಹಾರವನ್ನು ಒದಗಿಸುವುದಿಲ್ಲ. ಬದಲಾಗಿ, ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸಲು ಮಾಹಿತಿ ಹಕ್ಕು ಕಾನೂನನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ, ಇದು ಕಾನೂನಿನ ಗಣನೀಯ ದುರ್ಬಲಗೊಳಿಸುವಿಕೆಯಾಗಿದೆ.’’

ಇವುಗಳು ಗಂಭೀರ ಸಮಸ್ಯೆಗಳಾಗಿದ್ದು, ಮಸೂದೆಯನ್ನು ಅಂಗೀಕರಿಸುವ ಮೊದಲು ಈ ಸಮಸ್ಯೆಗಳೆಲ್ಲ ಈ ಮುಂಗಾರು ಅಧಿವೇಶನದ ಗಮನಕ್ಕೆ ಬಂದಿಲ್ಲ. ಮಸೂದೆ ಕಾನೂನಾಗಿ ಮಾರ್ಪಟ್ಟ ನಂತರ, ಕೇಂದ್ರ ಸರಕಾರ ಅದರ ಅನ್ವಯದ ವ್ಯಾಪ್ತಿ ಮತ್ತು ಡೇಟಾ ಸಂರಕ್ಷಣಾ ನಿಯಮಗಳ ಸಾರವನ್ನು ವ್ಯಾಖ್ಯಾನಿಸಲು ಮತ್ತು ಚಲಾಯಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತದೆ.

ಮೂರನೆಯದು, ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರದ (ತಿದ್ದುಪಡಿ) ಮಸೂದೆ-೨೦೨೩ರ ಅಂಗೀಕಾರವಾಗಿದೆ. ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರವಾಗಿ ಚರ್ಚಿಸಲ್ಪಟ್ಟಂತೆ, ತ್ರಿವಳಿ ಸರಪಳಿಯನ್ನು ಮುರಿಯಬಹುದಾದ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವೆಗಳ ಪ್ರಾಧಿಕಾರಕ್ಕೆ (ಮುಖ್ಯಮಂತ್ರಿ, ದಿಲ್ಲಿಯ ಮುಖ್ಯ ಕಾರ್ಯದರ್ಶಿ ಮತ್ತು ದಿಲ್ಲಿಯ ಪ್ರಧಾನ ಗೃಹ ಕಾರ್ಯದರ್ಶಿಯನ್ನು ಒಳಗೊಂಡಿರುವ) ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕ ಮಾಡುವ ಅಧಿಕಾರವನ್ನು ನೀಡುತ್ತದೆ. ನಾಗರಿಕ ಸೇವೆಗಳು, ಮಂತ್ರಿಗಳು, ಶಾಸಕಾಂಗ ಮತ್ತು ನಾಗರಿಕರನ್ನು ಸಂಪರ್ಕಿಸುವ ಹೊಣೆಗಾರಿಕೆಯೂ ಅದರ ಪಾಲಾಗುತ್ತದೆ. ಇದು ಸಂಸದೀಯ ಪ್ರಜಾಪ್ರಭುತ್ವದ ತತ್ವವನ್ನು ಉಲ್ಲಂಘಿಸುತ್ತದೆ, ಇದು ಮೂಲಭೂತ ರಚನೆಯ ಸಿದ್ಧಾಂತದ ಭಾಗವಾಗಿದೆ.

ಲೆಫ್ಟಿನೆಂಟ್ ಗವರ್ನರ್ ಅವರನ್ನು ‘ಸೂಪರ್ ಸಿಎಂ’ ಎಂಬಂತೆ ಮಾಡಲು ಅಧಿಕಾರ ನೀಡುವ ಮಸೂದೆಯ ಅಸಾಂವಿಧಾನಿಕತೆಯ ಬಗ್ಗೆ ಬಹಳಷ್ಟು ಚರ್ಚೆಯಾಗಿದೆ. ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವೆಗಳ ಪ್ರಾಧಿಕಾರ ಶಿಫಾರಸು ಮಾಡುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಸ್ವಂತ ವಿವೇಚನೆಯನ್ನು ಚಲಾಯಿಸುವ ಅಧಿಕಾರವನ್ನು ಹೊಂದಿದೆ.

ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರದೊಂದಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಯಾವುದೇ ವಿಷಯವನ್ನು ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲು ಇಲಾಖೆ ಕಾರ್ಯದರ್ಶಿಗಳಿಗೆ ಇದು ಅಧಿಕಾರ ನೀಡುತ್ತದೆ.

ಮಸೂದೆಯ ಅಂಗೀಕಾರ ಮತ್ತು ಅದು ಕಾನೂನಾಗುವುದರಿಂದ, ದಿಲ್ಲಿಯಲ್ಲಿ ಚುನಾಯಿತ ಸರಕಾರ ಮತ್ತು ಅದರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಗತ್ಯ ಸರಕಾರಿ ವ್ಯವಹಾರಗಳನ್ನು ನಡೆಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ಅಥವಾ ಅಧಿವೇಶನ ಕರೆಯುವ ಅಧಿಕಾರ ಕಳೆದುಕೊಳ್ಳುತ್ತಾರೆ.

ಹೆಚ್ಚಿನ ಇಲಾಖೆ ಕಾರ್ಯದರ್ಶಿಗಳು ಈಗ ಕೆಲ ವಿಷಯಗಳನ್ನು ನೇರವಾಗಿ ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ಅಥವಾ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರುವುದರಿಂದ, ಸಂಬಂಧಪಟ್ಟ ಸಚಿವರನ್ನು ಸಂಪರ್ಕಿಸದೆ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಬಳಸಬಹುದಾಗಿದೆ. ಇದು ಚುನಾಯಿತ ರಾಜ್ಯ ಸಚಿವ ಸಂಪುಟದ ಸಾಮೂಹಿಕ ಜವಾಬ್ದಾರಿಗೆ ವಿರುದ್ಧವಾಗಿದೆ. ಏಕೆಂದರೆ ಸಂಬಂಧಪಟ್ಟ ಸಚಿವರು ತಮ್ಮ ಅಭಿಪ್ರಾಯ ಹೇಳಲು ಸಾಧ್ಯವಿಲ್ಲ.

ಸಂಸತ್ತಿನಲ್ಲಿ ಮಸೂದೆಯನ್ನು ವಿರೋಧಿಸುವ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೀಗೆ ಹೇಳಿದ್ದರು:

‘‘ಈ ಮಸೂದೆ ಚುನಾಯಿತ ಮುಖ್ಯಮಂತ್ರಿಯ ಮೇಲೆ ಅಧಿಕಾರ ಚಲಾಯಿಸಲು ಮತ್ತು ಲೆಫ್ಟಿನೆಂಟ್ ಗವರ್ನರ್ ಅವರನ್ನು ‘ಸೂಪರ್ ಸಿಎಂ’ ಆಗಿ ಮಾಡಲು ಇಬ್ಬರು ಅಧಿಕಾರಶಾಹಿಗಳಿಗೆ ಅಧಿಕಾರ ನೀಡುತ್ತದೆ. ಮತ್ತು ಹೆಚ್ಚಿನ ಸಂಖ್ಯೆಯ ನಿಯಂತ್ರಕ ಏಜೆನ್ಸಿಗಳ ಮುಖ್ಯಸ್ಥರನ್ನು ನೇಮಿಸಲು ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ನೀಡುತ್ತದೆ. ಇದರೊಂದಿಗೆ, ೩೦ ವರ್ಷಗಳ ಹಿಂದೆ ದಿಲ್ಲಿಯ ಜನರಿಗೆ ಖಾತರಿಪಡಿಸಲಾಗಿದ್ದ ಜನರ ಸರಕಾರಕ್ಕೆ ಉದ್ದೇಶಪೂರ್ವಕ ಹಿನ್ನಡೆಯಾಗಿದೆ. ಮತ್ತು ಇದರಿಂದ ಅತ್ಯಂತ ಮೂಲಭೂತ ಸಾಂವಿಧಾನಿಕ ಮೌಲ್ಯಗಳು ಕ್ಷೀಣಿಸಿದಂತಾಗಿದೆ.

ಆಯ್ದ ಕೆಲವು ಘಟನೆಗಳನ್ನು ಪರಿಶೀಲಿಸುವ ಮೂಲಕ ಮತ್ತು ಈ ಮುಂಗಾರು ಅಧಿವೇಶನದ ಪ್ರಕ್ರಿಯೆಗಳು ನಡೆದ ರೀತಿಯನ್ನು ಗಮನಿಸುವ ಮೂಲಕ, ಈಗಿನ ಸರಕಾರದಲ್ಲಿ ವಸಾಹತುಶಾಹಿ ರಾಜ್‌ಗೆ ಹೋಲುವ ಅಂಶಗಳು ಹೇಗೆ ಇವೆ ಎಂಬುದನ್ನು ಕಾಣಬಹುದಾಗಿದೆ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ವಸಾಹತುಶಾಹಿ ಬ್ರಿಟಿಷ್ ಆಡಳಿತ (ಮೊದಲು ಕಂಪೆನಿಯಿಂದ ಮತ್ತು ನಂತರ ರಾಣಿಯ ಆಳ್ವಿಕೆಯಿಂದ), ಕಾನೂನು, ಭಾಷೆ ಮತ್ತು ಜ್ಞಾನದ ಮೂಲಕ ಅಧಿಕಾರವನ್ನು ಕೇಂದ್ರೀಕರಿಸುವಲ್ಲಿ ಮತ್ತು ಕ್ರೋಡೀಕರಿಸುವಲ್ಲಿ ಸಾಮ್ರಾಜ್ಯಶಾಹಿತ್ವವನ್ನು ಸ್ಥಾಪಿಸಿತು.

ಪ್ರಜಾಸತ್ತಾತ್ಮಕ ಮೌಲ್ಯಗಳ ತೀವ್ರ ಹಿಮ್ಮೆಟ್ಟುವಿಕೆ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿಸಲ್ಪಟ್ಟ ಅಧಿಕಾರದ ಪ್ರತ್ಯೇಕತೆಯ ನಡುವೆ ಸಂಸ್ಥೆಗಳ ವ್ಯವಸ್ಥಿತ ಸ್ವಾಧೀನವನ್ನು ಕಾಣಬಹುದು. ಭಾರತದಲ್ಲಿನ ಪ್ರಸ್ತುತ ಸ್ಥಿತಿ ವಸಾಹತುಶಾಹಿ ಆಡಳಿತದ ಜೀವಂತ ಅನುಭವವನ್ನು ಹೇಗೆ ಹೋಲುತ್ತದೆ ಎಂಬುದನ್ನು ಮಾತ್ರ ಯಾರೇ ಆದರೂ ತಿಳಿಯಬಹುದಾಗಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ದೀಪಾಂಶು ಮೋಹನ್

contributor

Similar News