ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಕಳೆದ ಎರಡು ಚುನಾವಣೆಗಳಲ್ಲಿ ಮತಗಳಿಕೆಯ ಅಂಕಿ-ಅಂಶಗಳು
ಮಡಿಕೇರಿ, ಮಾ.24: ಇಡೀ ದೇಶದ ಗಮನ ಸೆಳೆದಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಣಕ್ಕಿಳಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವುದರಿಂದ ಗೆಲುವು ಅವರಿಗೆ ಪ್ರತಿಷ್ಠೆಯಾಗಿದೆ. ಏತನ್ಮಧ್ಯೆ ಹಾಲಿ ಸಂಸದ ಪ್ರತಾಪ ಸಿಂಹ ಅವರಿಗೆ ಕೊಕ್ ಕೊಟ್ಟಿರುವುದರಿಂದ ಒಕ್ಕಲಿಗ ಜನಾಂಗದ ಮತಗಳು ಕೈ ಕೊಡುವ ಆತಂಕದಲ್ಲಿ ಬಿಜೆಪಿ ಪಾಳಯವಿದೆ.
2019ರ ಲೋಕಸಭಾ ಚುನಾವಣೆಗೂ ಈ ಬಾರಿಯ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಇದೀಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿವೆ. ನಾಯಕರ ಮಧ್ಯೆ ಮೈತ್ರಿಯಾಗಿದ್ದರೂ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೊಂದಾಣಿಕೆ ಇದುವರೆಗೆ ಕಂಡುಬಂದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ ಒಬ್ಬ ಶಾಸಕ ಮಾತ್ರ ಗೆಲುವು ಸಾಧಿಸಿದ್ದರು.ಆದರೆ ಈ ಬಾರಿ ಐವರು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ನಾಲ್ವರು ಬಿಜೆಪಿ ಶಾಸಕರಿದ್ದ ಸಂಖ್ಯೆ ಇದೀಗ ಕೇವಲ ಒಂದಕ್ಕೆ ಬಂದಿಳಿದಿದೆ. ಮೂರು ಶಾಸಕರಿದ್ದ ಜೆಡಿಎಸ್ ಸಂಖ್ಯೆ ಎರಡಕ್ಕೆ ಕುಸಿದಿದೆ. ಅದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಗಳಿವೆ.
ಬಿಜೆಪಿಗೆ ಕಳೆದ ಎರಡು ಚುನಾವಣೆಗಳಲ್ಲಿ ದೊಡ್ಡ ಅಂತರದ ಮುನ್ನಡೆ ತಂದುಕೊಟ್ಟಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಇಬ್ಬರೂ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರು ಅಭಿವೃದ್ಧಿ ಕಾರ್ಯಗಳ ಮೂಲಕ ವೈಯಕ್ತಿಕ ನೆಲೆಗಟ್ಟಿನಲ್ಲಿ ಮತದಾರರನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.
ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳು, ಮುನ್ನಡೆ ಎಲ್ಲ ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.