ಬೈಕ್ ಸ್ಟಂಟ್‌ನಲ್ಲಿ ರಾಷ್ಟ್ರಮಟ್ಟದ ಸಾಧನೆಗೈದ ಗ್ರಾಮೀಣ ಯುವಕ ನೌಮಾನ್ ಪಜೀರ್

Update: 2023-12-18 04:30 GMT
Editor : Thouheed | Byline : ಹಂಝ ಮಲಾರ್

ಮಂಗಳೂರು: ರಾಷ್ಟ್ರಮಟ್ಟದಲ್ಲಿ ನಡೆದ ಬೈಕ್ ಸ್ಟಂಟ್ ಸ್ಪರ್ಧೆಯೊಂದರಲ್ಲಿ ಉಳ್ಳಾಲ ತಾಲೂಕಿನ ಪಜೀರ್ ಗ್ರಾಮದ ಯುವಕನೋರ್ವ ವಿಜೇತನಾಗುವ ಮೂಲಕ ಗಮನ ಸೆಳೆದಿದ್ದಾರೆ.

ಉಳ್ಳಾಲ ತಾಲೂಕಿನ ಪಜೀರ್ ಗ್ರಾಮದ ಅಬ್ದುರ‌್ರಹ್ಮಾನ್-ಆಯಿಶಾ ದಂಪತಿಯ ಪುತ್ರ 24ರ ಹರೆಯದ ನೌಮಾನ್ ಪಜೀರ್ ಈ ಸಾಧಕ. ಇವರು ಬಜಾಜ್ ಆಟೋ ಲಿ. ಕಂಪೆನಿಯು ಮುಂಬೈಯಲ್ಲಿ ಡಿ.15ರಂದು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪಲ್ಸರ್ ಮೇನಿಯಾ 2.0 (ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲಗಳ ಪ್ರದರ್ಶನ)ದ ಮಾಸ್ಟರ್ಸ್ ಆವೃತ್ತಿಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

ಕೊಣಾಜೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ಕಲಿತ ನೌಮಾನ್ ಪಜೀರ್ ಬಳಿಕ ಐಟಿಐ (ಎಸಿ ಮೆಕ್ಯಾ ನಿಕ್) ಮಾಡಿ ಉದ್ಯೋಗ ಅರಸುವುದರ ಮಧ್ಯೆ ಬೈಕ್ ಸ್ಟಂಟ್ ಹವ್ಯಾಸ ಬೆಳೆಸಿಕೊಂಡಿದ್ದರು. ಆ ಹವ್ಯಾಸವು ಇಂದು ರಾಷ್ಟ್ರದ 25 ಸಾವಿರ ಸ್ಪರ್ಧಾಳುಗಳ ಪೈಕಿ ಅಂತಿಮ ಹಂತದಲ್ಲಿ 28 ಮಂದಿಯನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಅವರಿಗೆ ಸಹಕಾರಿಯಾಗಿದೆ.

ಬೈಕ್ ಸ್ಟಂಟ್ ಪ್ರಶಸ್ತಿ ವಿಜೇತ ನೌಮಾನ್ ಶನಿವಾರ ತಡರಾತ್ರಿ ಮುಂಬೈಯಿಂದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದು, ಅವರನ್ನು ಪಜೀರ್ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹುಟ್ಟೂರು ಪಜೀರ್‌ವರೆಗೂ ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ದು ವಿಶೇಷ ಗೌರವ ಸಲ್ಲಿಸಿದರು.

ಈ ಸಂದರ್ಭ ಪಜೀರ್ ಗ್ರಾಪಂ ಅಧ್ಯಕ್ಷ ಕೆ.ಮುಹಮ್ಮದ್ ರಫೀಕ್ ಪಜೀರ್, ಸ್ಥಳೀಯರಾದ ತಾಜುದ್ದೀನ್ ಕೊಣಾಜೆ, ನಾಸಿರ್ ಪಜೀರ್, ಹಮೀದ್ ಪಜೀರ್, ಅಬೂ ಸಮೀರ್, ಹಸನ್ ಅಶ್ರಫ್, ಅಬ್ದುರ‌್ರಹ್ಮಾನ್, ಫೈಝಲ್, ಉಮರ್, ಹನೀಫ್ ಸಿ.ಎಚ್., ಮುಹಮ್ಮದ್ ಖಾನ್, ಹಮೀದ್ ಪಾಡಿ, ಹಾರಿಸ್, ಮೆಹರೂಫ್ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ನೌಮಾನ್‌ರನ್ನು ಪಂಪ್‌ವೆಲ್ ಬಳಿ ಬರಮಾಡಿಕೊಂಡು ಶುಭ ಹಾರೈಸಿದರು. ಗ್ರಾಮೀಣ ಭಾಗದ ಯುವಕ ಗ್ರಾಮ, ತಾಲೂಕು ಮಾತ್ರವಲ್ಲ ತನ್ನ ವಿಧಾನಸಭಾ ಕ್ಷೇತ್ರಕ್ಕೂ ಕೀರ್ತಿ ತಂದುಕೊಟ್ಟಿದ್ದಾರೆ. ಗ್ರಾಮದ ಜನರೆದುರು ನೌಮಾನ್‌ಅವರ ಪ್ರತಿಭೆ ಪ್ರದರ್ಶಿಸಲು ತನ್ನ ಜಾಗದಲ್ಲೇ ತಾನೇ ಖುದ್ದು ಕಾರ್ಯಕ್ರಮ ಆಯೋಜಿಸುವುದಾಗಿ ಅವರು ಭರವಸೆ ನೀಡಿದರು.

ಸಣ್ಣ ವಯಸ್ಸಿನಿಂದಲೇ ಸ್ಟಂಟ್ ಮಾಡುವ ಕ್ರೇಜ್ ಹೊಂದಿದ್ದ ನೌಮಾನ್ ಮನೆ ಮಂದಿಯ ಕಣ್ತಪ್ಪಿಸಿ ಅಕ್ಕಪಕ್ಕದಲ್ಲಿರುವ ಜಾಗದಲ್ಲಿ ಸೈಕಲ್‌ನಲ್ಲೇ ಸ್ಟಂಟ್ ನಡೆಸುತ್ತಿದ್ದರು. ಬಳಿಕ ಬೈಕ್ ಸ್ಟಂಟ್‌ನತ್ತ ಗಮನಹರಿಸಿದ್ದರು. ಆದರೆ ಅದಕ್ಕೆ ಸೂಕ್ತ ಜಾಗ ಸಿಗದಿದ್ದಾಗ ಮನೆಯ ಆಸುಪಾಸಿನ ರಸ್ತೆಗಳಲ್ಲಿ ಅಥವಾ ಇತರ ಕಡೆ ಪ್ರಯಾಣ ಬೆಳೆಸುವಾಗ ಬೈಕ್ ಸ್ಟಂಟ್ ಮಾಡುತ್ತಿದ್ದರು. ತನ್ನೆಲ್ಲಾ ಸ್ಟಂಟ್‌ಗಳನ್ನು ‘ನೌಮಾನ್ ಸ್ಟಂಟ್ಸ್’ ಎಂಬ ಇನ್‌ಸ್ಟ್ರಾಗ್ರಾಂ ಪೇಜ್ ನಲ್ಲಿ ವೀಡಿಯೊ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಇನ್‌ಸ್ಟ್ರಾಗ್ರಾಂನಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮಧ್ಯೆ ಬಜಾಜ್ ಆಟೋ ಲಿ. ಕಂಪೆನಿಯು ಮುಂಬೈನಲ್ಲಿ ಆಯೋ ಜಿಸಿದ್ದ ಪಲ್ಸರ್ ಮೇನಿಯದಲ್ಲಿ ಭಾಗವಹಿಸಲು ನೌಮಾನ್ ಪಜೀರ್‌ನನ್ನು ಆಹ್ವಾನಿಸಿತ್ತು. ಅದರಂತೆ ಮುಂಬೈಗೆ ತೆರಳಿದ್ದ ನೌಮಾನ್ ಸ್ಟಂಟಿಂಗ್ ಮಾತ್ರವಲ್ಲದೆ ವಿವಿಧ ರೀತಿಯ ಸುತ್ತುಗಳಲ್ಲಿ ಸ್ಪರ್ಧಿಸಿ ವಿಜಯದ ಪತಾಕೆ ಹಾರಿಸಿದ್ದರು. ಸುಮಾರು 25,000ಕ್ಕೂ ಅಧಿಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಎಲ್ಲಾ ರೌಂಡ್ಸ್‌ಗಳಲ್ಲಿ ಗೆದ್ದು ಮೊದಲ ಬಹುಮಾನವಾಗಿ 4.5 ಲಕ್ಷ ರೂ. ಮೊತ್ತದ ಬೈಕನ್ನು ಪಡೆದುಕೊಂಡಿದ್ದಾರೆ.

ಇವರ ತಂದೆ ಅಬ್ದುರ‌್ರಹ್ಮಾನ್ ಬಾಡಿಗೆ ವಾಹನ ಚಾಲಕರಾಗಿ ದುಡಿಯುತ್ತಿದ್ದರೆ, ತಾಯಿ ಆಯಿಶಾ ಗೃಹಿಣಿಯಾಗಿದ್ದುಕೊಂಡು ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದ ಈ ಕುಟುಂಬದಲ್ಲಿ ಬೆಳೆದ ನೌಮಾನ್ ರಾಷ್ಟ್ರಮಟ್ಟದ ಬೈಕ್ ಸ್ಟಂಟ್ ಸ್ಪರ್ಧೆಯಲ್ಲಿ ಗೆದ್ದು ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದ್ದಾರೆ.

ಶಾಲಾ ದಿನಗಳಲ್ಲೇ ಅವನು ಸೈಕಲ್‌ನಲ್ಲಿ ಸ್ಟಂಟ್ ಮಾಡುತ್ತಿದ್ದ. ಆಗೆಲ್ಲ ನಾವು ಗದರುತ್ತಿದ್ದೆವು. ಇದೀಗ ಬೈಕ್ ಸ್ಟಂಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿ ನಮ್ಮನ್ನು ಅಚ್ಚರಿಗೊಳಿಸಿದ್ದಾನೆ. ಮಗನ ಸಾಧನೆಯ ಬಗ್ಗೆ ತನಗೆ ಹೆಮ್ಮೆಯಿದೆ.

► ಅಬ್ದುರ‌್ರಹ್ಮಾನ್,

ನೌಮಾನ್‌ರ ತಂದೆ

ನೌಮಾನ್‌ರ ಸಾಧನೆ ಖುಷಿ ತಂದಿದೆ. ಗ್ರಾಮದ ಹೆಸರಿಗೆ ಕೀರ್ತಿ ತಂದ ನೌಮಾನ್‌ರಿಗೆ ಮುಂದಿನ ದಿನಗಳಲ್ಲಿ ತಮ್ಮಿಂದ ಎಲ್ಲಾ ಸಹಕಾರಗಳನ್ನು ನೀಡುತ್ತೇವೆ

► ರಫೀಕ್ ಪಜೀರ್,

ಅಧ್ಯಕ್ಷರು, ಪಜೀರು ಗ್ರಾಪಂ

► ‘‘ಕಿರಿಯ ವಯಸ್ಸಿನಿಂದಲೇ ನನಗೆ ಸ್ಟಂಟಿಂಗ್ ಹವ್ಯಾಸವಿತ್ತು. ನಿತ್ಯವೂ ರಸ್ತೆಗಳಲ್ಲಿ ಅಭ್ಯಾಸ ನಡೆಸುತ್ತಿದ್ದೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಿಗುವ ಬಗ್ಗೆ ಕಲ್ಪನೆಯೇ ಇರಲಿಲ್ಲ. ಆದರೆ ಉತ್ತಮ ಸಾಧನೆ ಮಾಡುವ ವಿಶ್ವಾಸವಿತ್ತು. ಅದಕ್ಕಾಗಿ ಸಿಕ್ಕ ಎಲ್ಲ ರೌಂಡ್ಸ್‌ಗಳಲ್ಲೂ ಶ್ರಮ ವಹಿಸಿ ಗೆಲುವು ಸಾಧಿಸಿರುವೆ. ಹೆತ್ತವರ, ಹಿರಿಯರ ಹಾರೈಕೆ ಮತ್ತು ಸ್ನೇಹಿತರ ಪ್ರೋತ್ಸಾಹಕ್ಕೆ ಅಭಾರಿಯಾಗಿರುವೆ. ಈ ಗೆಲುವು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು ತಂದುಕೊಟ್ಟಿದೆ’’ ಎಂದು ನೌಮಾನ್ ಪಜೀರ್ ಸಂತಸ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹಂಝ ಮಲಾರ್

contributor

Similar News