ಹೈದರಾಬಾದ್ ಡೆಕ್ಕನ್‌ನ ಜಾತಿ ರಾಜಕೀಯ: ಹಿಂದೂ-ಮುಸ್ಲಿಮ್ ದ್ವೈತವನ್ನು ಅದು ಭಂಗಿಸುವ ಬಗೆ

‘ಡೇಂಜರ್ಸ್ ಆಫ್ ಎ ಸಿಂಗಲ್ ಸ್ಟೋರಿ’ ಈ ಸರಣಿಯು 1948ರ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆಯನ್ನು ಪರ್ಯಾಯ ದೃಷ್ಟಿಕೋನದಿಂದ ನೋಡುತ್ತದೆ. ಈ ದೃಷ್ಟಿಕೋನಗಳು, ಹೈದರಾಬಾದ್ ವಿಲೀನವನ್ನು ‘ವಿಮೋಚನೆ’ ಎಂಬುದಾಗಿ ಬಿಂಬಿಸುವ ಪ್ರಧಾನವಾಹಿನಿಯ ವ್ಯಾಖ್ಯಾನವನ್ನು ಪ್ರಶ್ನಿಸುತ್ತವೆ, ಮಾರ್ಪಡಿಸುತ್ತವೆ ಮತ್ತು ಅದಕ್ಕೆ ಸೂಕ್ಷ್ಮ ಅಂಶಗಳನ್ನು ಸೇರಿಸುತ್ತವೆ. ಚಾಲ್ತಿಯಲ್ಲಿರುವ ವ್ಯಾಖ್ಯಾನವನ್ನು ವಿಭಜನವಾದಿ ರಾಜಕೀಯವನ್ನು ಇನ್ನಷ್ಟು ಬಲಪಡಿಸಲು ಬಳಸಲಾಗುತ್ತಿದೆ. ‘ಖಿಡ್ಕಿ ಕಲೆಕ್ಟಿವ್’ನ ಸ್ವಾತಿ ಶಿವಾನಂದ್, ಯಾಮಿನಿ ಕೃಷ್ಣ ಮತ್ತು ಪ್ರಮೋದ್ ಮಂಡಾಡೆ ಈ ಸರಣಿಯನ್ನು ನಿರೂಪಿಸಿದ್ದಾರೆ. ‘ಖಿಡ್ಕಿ ಕಲೆಕ್ಟಿವ್’, ಇತಿಹಾಸ, ರಾಜಕೀಯ ಮತ್ತು ಸಂಸ್ಕೃತಿ ಕುರಿತು ಸಾರ್ವಜನಿಕ ಸಂವಾದವನ್ನು ರೂಪಿಸುವುದಕ್ಕೆ ಬದ್ಧವಾಗಿರುವ ವಿದ್ವಾಂಸರ ಬಳಗವಾಗಿದೆ.

Update: 2023-09-20 05:52 GMT

ವಿದ್ಯಾಧರ ಗುರೂಜಿ

ಸರಣಿ-5

ಹಿಂದೂ-ಮುಸ್ಲಿಮ್ ಎಂಬ ಎರಡು ಭಾಗವಾಗಿ ನೋಡುವ ಬಗೆ ಭಾರತದ ರಾಜಕೀಯವನ್ನು ಕನಿಷ್ಠ ಒಂದು ಶತಮಾನದಿಂದ ಕಾಡಿದೆ. ಧರ್ಮದ ಚೌಕಟ್ಟಿನಿಂದಾಚೆ ರಾಜಕೀಯವನ್ನು, ಚರಿತ್ರೆಯನ್ನೂ ನೋಡುವ ಬಗೆ ಜಾತಿಯ ಪ್ರವೇಶದಿಂದ ಶುರುವಾಗುತ್ತದೆ. ಇದೇ ರೀತಿ ಹೈದರಾಬಾದ್ ಡೆಕ್ಕನ್‌ನ ಕಥನ ಬಹುಕಾಲ ‘ಪಾಳೇಗಾರಿ ಇಸ್ಲಾಮಿಕ್ ಪ್ರಭುತ್ವದಡಿಯಲ್ಲಿ ಹಿಂದೂಗಳ ಶೋಷಣೆ’ ಎಂಬ ಪ್ರತಿಮೆಯನ್ನೇ ಇಟ್ಟುಕೊಂಡಿದ್ದು, ಜಾತಿಯ ಕುರಿತು ಮಾತಾಡುವುದರ ಮೂಲಕ ಇದನ್ನು ಭಂಗಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ ಆರ್ಯಸಮಾಜದ ಸುಧಾರಣೆಗಳ ವಿವರಗಳ ಮೂಲಕ.

ಸಮಾಜವನ್ನು ಹೊಸ ಅಲೆಯ ಕೋಮುವಾದಕ್ಕೆ ತಳ್ಳುವ ಯತ್ನಗಳಾಗುತ್ತಿರುವ ಈ ದಿನಗಳಲ್ಲಿ (ರಾಜಕಾರಣಿಗಳನ್ನು ರಝಾಕಾರರೆಂದು ಆರೋಪಿಸುವುದು, ಸೆಪ್ಟಂಬರ್ 17ನ್ನು ಹೈದರಾಬಾದ್ ವಿಮೋಚನಾ ದಿನ ಎಂದು ಕರೆಯುವುದು ಇತ್ಯಾದಿ) ಈ ಹಿಂದೂ-ಮುಸ್ಲಿಮ್ ಎಂದು ನೋಡುವುದನ್ನು ಭಂಗಿಸುವ ಪ್ರಯತ್ನಗಳಿಗೊಂದು ತುರ್ತು ಒದಗಿದೆ.

ಹೈದರಾಬಾದಿನ ಕುರಿತಾದ ಆರ್ಯಸಮಾಜದ ಕಥನಗಳ ಚರಿತ್ರೆ (ಭಾರತದ್ದು ಕೂಡಾ) ಹಿಂದೂ-ಮುಸ್ಲಿಮ್ ಎಂಬುದು ಕಾಲಾತೀತ ವರ್ಗೀಕರಣ ಎಂದೇ ಭಾವಿಸಿವೆ. ಜಾತಿ, ವರ್ಗ, ಪ್ರಾದೇಶಿಕತೆಯ ಪ್ರಭಾವಕ್ಕೊಳಪಡದ ಏಕರೂಪೀ ಸಂಗತಿಗಳೆಂಬಂತೆ ಬಿಂಬಿತಗೊಂಡಿದೆ.

ಈ ಜನಪ್ರಿಯ ಗ್ರಹಿಕೆಯನ್ನು ಹಲವಾರು ಜೀವನಾನುಭವಗಳು ಮತ್ತು ಸಂಶೋಧನೆಗಳು ಪ್ರಶ್ನಿಸಿವೆ.

ಈ ಏಕರೂಪಿ ಹಿಂದೂ ಮತ್ತು ಅದು ಹೈದರಾಬಾದ್‌ನಲ್ಲಿ ಶೋಷಣೆಗೊಳಗಾಗಿತ್ತು ಎಂಬ ಕಥನ ಇಷ್ಟು ಚಲಾವಣೆಗೆ ಹೇಗೆ ಬಂತು ಎಂಬುದನ್ನು ನೋಡೋಣ. ಈ ಕಥನ ಇಷ್ಟು ಪ್ರಮಾಣದಲ್ಲಿ ಚಲಾವಣೆಯಾಗಲು ಪ್ರಮುಖ ಕಾರಣ ಆರ್ಯಸಮಾಜ. ಅದರ ಕೆಲಸ ಕಾರ್ಯಗಳ ಬಗ್ಗೆ ಅಂದಿನ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಎಂ.ಎಸ್. ಆಣೆಯಂಥವರೇ ಮೆಚ್ಚುಗೆ ತೋರಿದ್ದರು. ‘‘ಮಹಮ್ಮದೀಯರು ಮುಕ್ತ ಮತ್ತು ಗುಪ್ತ ಸಂಘಟನೆಗಳ ಮೂಲಕ ನಡೆಸುತ್ತಿರುವ ಮತಾಂತರದ ವಿರುದ್ಧ ಇದೊಂದು ಪರಿಣಾಮಕಾರಿ ಪ್ರತಿವಿಷ’’ ಎಂದು ಅವರು ಕೊಂಡಾಡಿದ್ದರು.

ಈ ಸಂಸ್ಥೆಯ ಆರಂಭಿಕ ಕೆಲಸಗಳು ಜಾತಿ ಸುಧಾರಣೆಯದ್ದೇ ಆಗಿತ್ತು. ಅದರಲ್ಲೂ ಕೆಳ ಜಾತಿಗಳ ಸುಧಾರಣೆ. ಆದರೆ ಈ ಸಂಸ್ಥೆಯ ವಿಸ್ತೃತ ಲೋಕದೃಷ್ಟಿ ಹಾಗೂ ಅದರ ಮೂಲಕ ಹೈದರಾಬಾದ್ ಡೆಕ್ಕನ್‌ನ ಸಮಾಜ, ರಾಜಕೀಯವನ್ನು ಅರ್ಥ ಮಾಡಿಕೊಂಡಿದ್ದನ್ನು ತಿಳಿಯಲು, ಈ ರಾಜ್ಯದಿಂದಾಚೆ ಅದರ ಚರಿತ್ರೆ ನೋಡಬೇಕು.

1872ರ ಜನಗಣತಿಯ ಕಾರಣದಿಂದ ಈ ಸಂಸ್ಥೆಯ ಶುದ್ಧಿ ಕಾರ್ಯಕ್ರಮ ಪ್ರೇರಿತವಾಯಿತು ಎಂದು ಡೇವಿಡ್ ಹಾರ್ಡಿಮನ್ ತಮ್ಮ ಸಂಶೋಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಕಾಲಕಳೆದಂತೆ ಮತಾಂತರದ ಕಾರಣಕ್ಕೆ ಹಿಂದೂಧರ್ಮ ಅಪಾಯದಲ್ಲಿದೆ ಎಂಬ ಹಿಂದೂ ಗ್ರಹಿಕೆಯ ಭಾಗವಾಯಿತು. ಈ ಸಂಸ್ಥೆಯ ಬಹುಪಾಲು ಚಟುವಟಿಕೆ ಕ್ರಿಶ್ಚಿಯನ್ ಮತಾಂತರವನ್ನು ಎದುರಿಸಲು ವ್ಯಯವಾದರೂ, ‘ಆಕ್ರಮಣಶೀಲ ಮುಸ್ಲಿಮ್’ ಬೇತಾಳದ ಭಯವೂ ಇದರ ಲೋಕ ದೃಷ್ಟಿಯನ್ನು ಪ್ರಭಾವಿಸುತ್ತದೆ. ಪಂಜಾಬಿನ ಬಹುಪಾಲು ಮರುಮತಾಂತರ ಇಸ್ಲಾಮಿನಿಂದಾಯಿತು ಎಂದು ಕೆನೆತ್ ಡಬ್ಲ್ಯು. ಜೋನ್ಸ್ ಬರೆಯುತ್ತಾರೆ. ಇದು ಆರ್ಯರನ್ನು ಮುಸ್ಲಿಮರ ಎದುರಾಗಿಸಿತು. ಹೀಗೆ ಆಗಲೇ ಅಸ್ತಿತ್ವದಲ್ಲಿದ್ದ ಕೋಮು ಭೇದವನ್ನು ಇದು ಇನ್ನಷ್ಟು ಆಳವಾಗಿಸಿತು. ಪಂಡಿತ್ ಲೇಖಿರಾಮ್ ನೇತೃತ್ವದ ಆರ್ಯಸಮಾಜದ ರಾಜಕೀಯ ಪ್ರಸ್ತುತಿ ತೀವ್ರ ಮುಸ್ಲಿಮ್ ವಿರೋಧಿಯಾಗಿತ್ತು. ‘‘ಈ ಧರ್ಮ ಭಾರತದಲ್ಲಿ ತಲೆ ಎತ್ತಿದ್ದೇ ಕೊಲೆ ಮತ್ತು ನಾಶದ ಮೂಲಕ’’ ಎಂದೂ ಅವರು ಹೇಳಿದರು.

ಆರ್ಯಸಮಾಜದ ಚಟುವಟಿಕೆಗಳಿಗೆ ಬನಿಯಾ, ಬ್ರಾಹ್ಮಣ ಜಾತಿಗಳು ಧನಸಹಾಯ, ಬೆಂಬಲ ನೀಡಿದರೂ, ಅದರ ಕೆಲಸ ಬಹುಪಾಲು ಕೆಳಜಾತಿಗಳ ಸಂಗಡ ಇತ್ತು. ಇವರನ್ನೆಲ್ಲಾ ‘ಶುದ್ಧಿ’ ಆಚರಣೆಯ ಮೂಲಕ ಶುದ್ಧ ಮಾಡಲಾಗುತ್ತಿತ್ತು. ಹೈದರಾಬಾದ್ ಡೆಕ್ಕನ್‌ನಲ್ಲಿ ಈ ಸುಧಾರಣೆಗಳ ಕಾರಣಕ್ಕೆ ಸಾಕಷ್ಟು ಕೆಳ ಜಾತಿಗಳವರು ತಾವು ಹಿಂದೂ ತೆಕ್ಕೆಗೆ ಸೇರಿದವರೆಂದೇ ಗುರುತಿಸಿಕೊಂಡರು. ಆರ್ಯಸಮಾಜದ ಪ್ರಭಾವಕ್ಕೆ ಒಳಗಾಗಿ ತನ್ನ ಬದುಕೇ ನಾಟಕೀಯವಾಗಿ ಬದಲಾದ ವ್ಯಕ್ತಿ ಎಂದರೆ ವಿದ್ಯಾಧರ ಗುರೂಜಿ.

ಹೈದರಾಬಾದ್ ಕರ್ನಾಟಕದ ಬಹುಮಾನ್ಯ ಸ್ವಾತಂತ್ರ್ಯ ಹೋರಾಟಗಾರರಾಗಿ ಮನ್ನಣೆ ಪಡೆದಿದ್ದವರು ವಿದ್ಯಾಧರ ಗುರೂಜಿ. ನಾನವರನ್ನು 2017ರಲ್ಲಿ ಸಂದರ್ಶಿಸಿದಾಗ ಅವರ ವಯಸ್ಸು 104. ಅವರ ಶ್ರವಣಶಕ್ತಿಯೂ ಉಡುಗಿತ್ತು. ಆದರೆ ತನ್ನ ಬಾಲ್ಯ, ತಾರುಣ್ಯದ ದಿನಗಳು, ‘ಸ್ವಾತಂತ್ರ್ಯ ಹೋರಾಟ’ದಲ್ಲಿ ಭಾಗವಹಿಸಿದ ನೆನಪುಗಳೆಲ್ಲ ಸ್ಫುಟವಾಗಿದ್ದವು. ಭಿಕ್ಷಪ್ಪನೆಂಬ ಮೂಲ ಹೆಸರಿನ ಗುರೂಜಿಯನ್ನು ಅವರ ಗೆಳೆಯರೊಬ್ಬರು ಆರ್ಯ ಸಮಾಜಕ್ಕೆ ಪರಿಚಯಿಸಿದರು. ಅಲ್ಲಿಯವರೆಗೆ ಗುರೂಜಿಗೆ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಇರಲಿಲ್ಲ. ಅಷ್ಟೇಕೆ, ಕಾವಿಧಾರಿಗಳ ಬಗ್ಗೆ ಗುಮಾನಿಯೂ ಇತ್ತು.

‘‘ನನ್ನ ಗೆಳೆಯ ನನ್ನನ್ನು ಸ್ವಾಮಿ ರಾಮ್‌ಜಿ ಅವರಿಗೆ ಒಳ್ಳೆಯ ವಿದ್ಯಾರ್ಥಿ ಎಂದು ಪರಿಚಯಿಸಿದ. ನಾನು ಧೋಬಿ ಸಮಾಜದವನೆಂದೂ ನನ್ನ ಗೆಳೆಯ ಹೇಳಿದ. ‘ಧೋಬಿ ಅಂತ ಕರೆಯಬೇಡ, ವಸಿಷ್ಠ ಕುಲ ಸಂಜಾತ ಈತ ಬಟ್ಟೆ ಒಗೆಯಲ್ಲ, ವ್ಯಕ್ತಿಗಳನ್ನು ತೊಳೆದು ಶುಭ್ರಗೊಳಿಸುತ್ತಾನೆ’ ಎಂದರು. ಅದು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ನಾನು ಮಂತ್ರ, ಹೋಮ-ಹವನ ಕಲಿಯತೊಡಗಿದೆ. ನನ್ನ ಮೊಹಲ್ಲಾದ ಯುವಕರನ್ನು ಸೇರಿಸಿ ಅವರಿಗೂ ಮಂತ್ರ ಕಲಿಸತೊಡಗಿದೆ. ಜನರಿಗೆ ಓದಲು ಬರೆಯಲು ಹೇಳಿಕೊಟ್ಟೆ.’’

ಕೆಳಜಾತಿಯ ಯುವಕರಿಗೆ ಆರ್ಯಸಮಾಜದ ಬಗ್ಗೆ ಇದ್ದ ಆಕರ್ಷಣೆ ಎಂದರೆ ಅದರ ಮೂಲಕ ಉತ್ತಮ ಸ್ಥಾನಮಾನ ದಕ್ಕೀತು ಎಂಬ ಆಸೆ. ಬ್ರಾಹ್ಮಣ ವಿರೋಧಿ ಪರಂಪರೆಗಳನ್ನು ಅಳವಡಿಸಿಕೊಂಡ ಕಾರಣಕ್ಕೆ ಪಂಜಾಬಿನ ಜಾಟರು ಆರ್ಯಸಮಾಜದ ಪ್ರಭಾವಕ್ಕೊಳಗಾದರು. ಹಲವಾರು ಜಾಟರು ತಮ್ಮನ್ನು ಕ್ಷತ್ರಿಯರು ಎಂದು ಹೇಳಿಕೊಂಡರು

ಗುರೂಜಿಗೂ ಅಷ್ಟೇ, ಜಾತಿ ಏಣಿಯಲ್ಲಿ ಭಡ್ತಿ ಸಿಕ್ಕ ಕಾರಣಕ್ಕೆ (ವಸಿಷ್ಠ ಕುಲ) ಅವರು ಪೂರ್ತಿಯಾಗಿ ಆರ್ಯಸಮಾಜದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಗುರೂಜಿ ಆರ್ಯಸಮಾಜದ ದೀಕ್ಷೆಯನ್ನೂ ಪಡೆದರು. ಜನಿವಾರವನ್ನೂ ಧರಿಸಿದರು. ಈ ಹೆಸರು ಬದಲಾವಣೆಯೂ ಗೌರವ, ಮನ್ನಣೆ ಪಡೆವ ಒಂದು ಪ್ರಕ್ರಿಯೆ. ಆರ್ಯ ಸಮಾಜದ ಗುರುವಾಗಿ, ಗುರೂಜಿಯವರು ಉಳಿದವರಿಗೂ ಈ ಹೆಸರು ಬದಲಾವಣೆಯ ಆಚರಣೆ ರೂಢಿ ಮಾಡಿದರು.

ತನ್ನ ಯಾತ್ರೆಯ ಮೊದಮೊದಲು ಗುರೂಜಿ ಅಸ್ಪಶ್ಯತೆ ನಿವಾರಣೆ, ದೇಗುಲ ಪ್ರವೇಶ, ಸಹಪಂಕ್ತಿ ಭೋಜನದ ಅಗತ್ಯದ ಬಗ್ಗೆ ಮಾತಾಡಿದರು. ಆದರೆ 1930ರ ವೇಳೆಗೆ ಆರ್ಯ ಸಮಾಜವು ‘ಬಲಾತ್ಕಾರದ ಮತಾಂತರ’ದ ವಿಷಯವನ್ನು ಹೈದರಾಬಾದ್- ಡೆಕ್ಕನ್‌ನಲ್ಲೂ ಚಾಲ್ತಿಗೆ ತಂದಿತು. ಗುರೂಜಿ ಕೂಡಾ ಇಂತಹ ಮತಾಂತರಗಳನ್ನು ಪ್ರತಿರೋಧಿಸುವ ಕೆಲಸಕ್ಕಿಳಿದರು. ಹಳ್ಳಿಗಳಿಗೆ ಹೋದಾಗ ಹೇಗೆ ಮುಸ್ಲಿಮ್ ಪ್ರಭುತ್ವ ಬಲಾತ್ಕಾರದ ಮತಾಂತರಗಳನ್ನು ಪ್ರೋತ್ಸಾಹಿಸುತ್ತಿರುವುದರ ಬಗ್ಗೆ ಜನ ಅರಿಯಬೇಕೆಂದು ಹೇಳುತ್ತಾ ಬಂದರು.

‘‘ನಾವು ಮುಗ್ಧ ಹಿಂದೂಗಳನ್ನು ಕೇಂದ್ರೀಕರಿಸಿ ಅವರು ಮುಸ್ಲಿಮರಾಗದಂತೆ ರಕ್ಷಿಸುತ್ತಿದ್ದೆವು. ಎಲ್ಲೆಲ್ಲಿ ಹಿಂದೂಗಳನ್ನು ಮುಸ್ಲಿಮರಾಗಿಸಿದ್ದಾರೆ, ಅಲ್ಲೆಲ್ಲ ನಾವು ಅವರನ್ನು ಮರು ಮತಾಂತರಗೊಳಿಸುತ್ತಿದ್ದೆವು.

ಇತ್ತೇಹಾದುಲ್-ಮುಸ್ಲಿಮೀನ್ ನಾಯಕ ಬಹಾದೂರ್ ಯಾರ್ ಜಂಗ್ ಮತ್ತು ದಲಿತ ನಾಯಕ ಶ್ಯಾಮ್‌ಸುಂದರ್ ಅವರ ಆತ್ಮೀಯ ಸಂಬಂಧ ಆರ್ಯ ಸಮಾಜದ ಕಳವಳಕ್ಕೆ ಕಾರಣವಾಗಿತ್ತು.

ಅವರಿಬ್ಬರೂ ಸೇರಿ ಜನರನ್ನು ಅದರಲ್ಲೂ ಕೆಳಜಾತಿಯವರನ್ನು ಬೆದರಿಸಿ, ಒತ್ತಡ ಹೇರಿ, ಆಮಿಷ ಒಡ್ಡಿ ಇಸ್ಲಾಮಿಗೆ ಮತಾಂತರ ಗೊಳಿಸುತ್ತಿದ್ದರು. ಈ ದಲಿತರು ಪುಡಿ ಕ್ರಿಮಿನಲ್ ಗಳಾಗಿದ್ದರು. ಅವರೀಗ ಮುಸ್ಲಿಮರಾದ ಕಾರಣ ಅವರಿಗೆ ಸರಕಾರದ ರಕ್ಷಣೆ ಇತ್ತು. ಅವರೇನಾದರೂ ಅಪರಾಧವೆಸಗಿದರೆ ಪೊಲೀಸರು ಸುಮ್ಮನಿರುತ್ತಿದ್ದರು. ಇಂತಹ ಅಪರಾಧಗಳಿಂದ ಅವರು ಸಾಕಷ್ಟು ಹಣ ಸಂಪಾದನೆ ಮಾಡಿದ್ದರು.’’

ಆರ್ಯಸಮಾಜದ ಕಳವಳಕ್ಕೆ ಕಾರಣವಾದ ಇನ್ನೊಂದು ಸಂಗತಿ ಎಂದರೆ ತೀವ್ರವಾಗಿ ಬೆಳೆಯುತ್ತಿದ್ದ ದೀನ್ ದಾರ್ ಚನ್ನಬಸವೇಶ್ವರ ಸಿದ್ದೀಕಿ ನೇತೃತ್ವದ ಪಂಥ.

‘‘ಈ ಮನುಷ್ಯ ಎದೆಯಲ್ಲಿ ತ್ರಿಶೂಲದ ಹಚ್ಚೆ ಹಾಕಿಸಿಕೊಂಡಿದ್ದ. ತಾನು ಚೆನ್ನಬಸವೇಶ್ವರರ ಅವತಾರವೆಂದು ಹೇಳಿಕೊಳ್ಳುತ್ತಿದ್ದ. ಅವನ ಶಿಷ್ಯರು ವಚನಗಳನ್ನು ಪಠಿಸುತ್ತಿದ್ದರು. ಲಿಂಗಾಯತರೆಲ್ಲಾ ವಚನಗಳನ್ನು ಭಕ್ತಿಭಾವದಿಂದ ನೋಡುತ್ತಾರೆ. ಹಾಗೆಯೇ ಇವರನ್ನು ಗುರುಗಳಾಗಿ ಗೌರವಿಸುತ್ತಿದ್ದರು. ಆದರೆ ಇದು ನಿಜಕ್ಕೂ ಮೇಲ್ಜಾತಿಯ ಲಿಂಗಾಯತರನ್ನು ಇಸ್ಲಾಮಿಗೆ ಮತಾಂತರಗೊಳಿಸುವ ಸಂಚಾಗಿತ್ತು. ಜಾತಿಶ್ರೇಣಿಯ ಕೆಳ ಭಾಗದಲ್ಲಿದ್ದವರನ್ನು ಮತಾಂತರಗೊಳಿಸುವುದು ಅವರಿಗೆ ಸುಲಭ. ಆದರೆ ಮೇಲ್‌ಜಾತಿಯವರನ್ನು ಮತಾಂತರಗೊಳಿಸಲು ಅವರು ಕಂಡುಕೊಂಡ ಉಪಾಯ ಇದು’’ ಎಂದು ಗುರೂಜಿ ಹೇಳಿದರು.

ದೀನ್‌ದಾರ್ ಪಂಥ ಇನ್ನೊಂದು ರೀತಿಯಲ್ಲಿ ಆರ್ಯ ಸಮಾಜಕ್ಕೆ ಬೆದರಿಕೆ ಒಡ್ಡಿತ್ತು. ಎರಡೂ ಧರ್ಮಗಳು ಒಂದೇ ಪಂಥವಾಗಿ ಬಾಳಬಹುದು ಎಂದು ಈ ಪಂಥ ಹೇಳುತ್ತಿತ್ತು. ಆರ್ಯಸಮಾಜದ ಕೇಂದ್ರ ಚಟುವಟಿಕೆಯಾಗಿದ್ದ ‘ಶುದ್ಧಿ ಯೋಜನೆ’ಗೆ ಇದು ಅಪಾಯವೊಡ್ಡಿತ್ತು.

ಪೊಲೀಸ್ ಕಾರ್ಯಾಚರಣೆ

ಬ್ರಾಹ್ಮಣೀಯ ಜಾತಿ ಏಣಿಯಲ್ಲಿ ಗೌರವ ಪಡೆಯುವ ಕಾರ್ಯಕ್ರಮದ ಸಂಸ್ಥೆಯಾಗಿ ಆರಂಭವಾದ ಆರ್ಯಸಮಾಜ 1940ರ ವೇಳೆಗೆ ಗುರೂಜಿಯಂಥವರನ್ನು, ಮುಸ್ಲಿಮ್ ಪ್ರಭುತ್ವದ ವಿರುದ್ಧ ಹಿಂದೂ ವ್ಯವಸ್ಥೆ/ಸಮಾಜವನ್ನು ರಕ್ಷಿಸುವ ಯೋಧರನ್ನಾಗಿ ರೂಪಾಂತರಗೊಳಿಸಿತು.

1940ರ ಆರಂಭದಲ್ಲಿ ತನ್ನ ವಿರುದ್ಧ ಹೊರಡಿಸಿದ ಬಂಧನದ ವಾರಂಟಿನಿಂದ ತಪ್ಪಿಸಿಕೊಳ್ಳಲು ಹೈದರಾಬಾದ್ ಬಿಡಬೇಕಾಯಿತು. ಹೈದರಾಬಾದ್-ಡೆಕ್ಕನ್ ರಾಜ್ಯದ ಹೊರಗೆ, ಅಂಚಿನಲ್ಲಿದ್ದ ಬಾಂಬೆ ಪ್ರೆಸಿಡೆನ್ಸಿಯ ಶೋಲಾಪುರದಲ್ಲಿ ನೆಲೆಸಿದ ಗುರೂಜಿ ನಿಝಾಮ್ ರಾಜ್ಯದ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡುವ ಅನಧಿಕೃತ ಸೈನ್ಯದ ಭಾಗವಾದರು. ಸ್ಥಳೀಯ ಕಲೆಕ್ಟರ್ ಮತ್ತು ವ್ಯಾಪಾರಿಗಳು ಈ ಸೈನ್ಯಕ್ಕೆ ರಕ್ಷಣೆ, ಆಶ್ರಯ, ಆಹಾರ ಒದಗಿಸಿ ಸಹಾಯ ಮಾಡುತ್ತಿದ್ದರು. ಈ ದಾಳಿ- ಮರುದಾಳಿಗಳು ಕ್ರಮೇಣ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ ಎಂಬ ಕಥನಕ್ಕೆ ಕಾರಣವಾಯಿತು. ಹೈದರಾಬಾದ್‌ನ್ನು ವಿಲೀನಗೊಳಿಸಲು ಪೊಲೀಸ್ ಕಾರ್ಯಾಚರಣೆಯ ಮೂಲಕ ಕ್ರಮ ಕೈಗೊಳ್ಳಲು ಭಾರತ ಸರಕಾರ ಮುಂದಿಟ್ಟ ತರ್ಕ ಇದು.

1930-40ರ ಅವಧಿಯಲ್ಲಿ ಹೈದರಾಬಾದ್ ಡೆಕ್ಕನ್ ನ್ನು ಕೋಮು ಪ್ರಭುತ್ವ ಎಂಬ ಹಣೆಪಟ್ಟಿ ಕಟ್ಟಲು ಕೆಲಸ ಮಾಡಿದ ಹಲವಾರು ಸಂಘಟನೆಗಳಲ್ಲಿ ಆರ್ಯ ಸಮಾಜ ಕೂಡಾ ಒಂದು. ಆರ್ಯಸಮಾಜ-ಹೈದರಾಬಾದ್ ಪ್ರದೇಶ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ನಡುವೆ ಆತ್ಮೀಯ ಸಂಬಂಧ ಇತ್ತು. ಅಸಫ್ ಜಾಹಿ ಸರಕಾರದ ವಿರುದ್ಧ ಈ ಮೂರೂ ಸಂಘಟನೆಗಳಿಗೂ ಆಗ್ರಹ ಇತ್ತು. ಈ ಸಂಘಟನೆಗಳ ರಾಜಕೀಯದ ಮೇಲಷ್ಟೇ ಗಮನ ಹರಿಸಿದರೆ, ಈ ಸಂಘಟನೆಗಳು ಸಾಮಾಜಿಕವಾಗಿ ಜನರನ್ನು ಎತ್ತಿ ಕಟ್ಟಲು ಸಾಧ್ಯವಾದ ಬಗೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಗುರೂಜಿ ಆರ್ಯಸಮಾಜದ ಉನ್ನತ ಸಾಮಾಜಿಕ ಸ್ಥಾನಮಾನದ ಸಾಧ್ಯತೆಯಿಂದ ಆಕರ್ಷಿತರಾಗಿ ಅದರಲ್ಲಿ ಉತ್ಕಟವಾಗಿ ಕೆಲಸ ಮಾಡಿದರು. ಆದರೆ ಹೈದರಾಬಾದ್- ಡೆಕ್ಕನ್‌ನ ವಿಲೀನದ ಬಳಿಕ ಅವರೂ ಇತರರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಈ ರಾಜ ಪ್ರಭುತ್ವದ ಸಂಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳು ಹೇಗೆ ಒಟ್ಟಾಗಿ ದುಡಿದವು ಎಂಬುದನ್ನು ಇದು ಅನಾವರಣಗೊಳಿಸುತ್ತದೆ.

ವಿಸ್ಮತಿಯ ರಾಜಕೀಯ

ಹೈದರಾಬಾದ್-ಡೆಕ್ಕನ್‌ನಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಬ್ಬಾಳಿಕೆ ಎಂಬ ಕಥನ ಇಂದಿಗೂ ಹಿಡಿತ ಹೊಂದಿರುವುದಕ್ಕೆ ಮುಖ್ಯ ಕಾರಣವೆಂದರೆ ಎಲ್ಲಾ ರಾಜಕೀಯ ಪಾತ್ರಧಾರಿಗಳೂ ಹೊಂದಿರುವ ಒಮ್ಮತ. ಆದರೆ ಮೌಖಿಕ ಚರಿತ್ರೆಗಳು ಈ ಒಳ ಒಪ್ಪಂದವನ್ನು ತಲೆ ಕೆಳಗೆ ಮಾಡುವ ಶಕ್ತಿ ಹೊಂದಿವೆ. ಪೊಲೀಸ್ ಕಾರ್ಯಾಚರಣೆಯ ವೇಳೆ ಮತ್ತು ತರುವಾಯ ಮುಸ್ಲಿಮರು ಎದುರಿಸಿದ ಹಿಂಸೆಯ ಬಗ್ಗೆ ಗುರೂಜಿಯವರಲ್ಲಿ ಕೇಳಿದಾಗ ಅದು ನಡೆದಿತ್ತು ಎಂದು ಒಪ್ಪಿಕೊಳ್ಳಲು ಅವರು ಹಿಂಜರಿಯಲಿಲ್ಲ.

‘‘ತಮಗೇನಾಯಿತು ಅದರ ವಿರುದ್ಧ ಹಿಂದೂಗಳು ಸೇಡು ತೀರಿಸಲು ಇಚ್ಛಿಸಿದ್ದರು. ಪೋಲಿಸ್ ಕಾರ್ಯಾಚರಣೆಯ ಬಳಿಕ ಆರು ತಿಂಗಳು ನಾನು ಸೋಲಾಪುರದಲ್ಲೇ ಉಳಿದಿದ್ದೆ. ಹೊರಗಿನ ನಾಯಕರು ಯಾರಾದರೂ ಬಂದರೆ ದೊಡ್ಡ ವಿಜೃಂಭಣೆ ಇರುತ್ತಿತ್ತು. ಆ ಕಾಲದಲ್ಲಿ ಈ ಗೂಂಡಾಗಳು ಮುಸ್ಲಿಮರನ್ನು ಲೂಟಿ ಮಾಡುತ್ತಿದ್ದರು. ಆದ್ದರಿಂದಲೇ ನಾನು ಬೇಗ ಮರಳಲಿಲ್ಲ. ನನ್ನ ಹೆಸರು ಕೆಡುವುದು ನನಗೆ ಬೇಕಿರಲಿಲ್ಲ.’’

ಮತ್ತೇಕೆ ಇದು ಚರಿತ್ರೆಯ ಸಾಮಾನ್ಯ ಮಾಹಿತಿಯಾಗಲಿಲ್ಲ. ಮುಖ್ಯ ದಾಖಲೆ ಮೂಲವಾಗಿರುವ ರಾಜ್ಯ/ ಜಿಲ್ಲಾ ಗೆಜೆಟಿಯರ್‌ಗಳಲ್ಲೂ ಪೊಲೀಸ್ ಕಾರ್ಯಾಚರಣೆಯ ತರುವಾಯದ ಹಿಂಸೆಯ ವಿವರಗಳಿಲ್ಲ. ಅದರ ಬದಲಿಗೆ ಆರ್ಯ ಸಮಾಜ ಮತ್ತು ಅದರ ನಾಯಕರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಲಾಗಿದೆ. ಈ ವಿಸ್ಮತಿಯ ರಾಜಕಾರಣದಲ್ಲಿ ಮುಸ್ಲಿಮರ ಮೇಲಾದ ಹಿಂಸೆಯನ್ನು ಅಳಿಸಿ ಹಾಕಲಾಗಿದೆಯಷ್ಟೇ ಅಲ್ಲ, ಒಂದು ಸಂಸ್ಥಾನವನ್ನು ವಿಲೀನಗೊಳಿಸಲು ಏಕಶಿಲಾ ರೂಪದ ಹಿಂದೂ ಪರಿಕಲ್ಪನೆಯನ್ನು ಸೃಷ್ಟಿಸಲಾಗಿದೆ.

(ಸ್ವಾತಿ ಶಿವಾನಂದ್ ಮಣಿಪಾಲದ ‘ಮಾಹೆ’ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದಾರೆ.)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸ್ವಾತಿ ಶಿವಾನಂದ್

contributor

Contributor - ಅನುವಾದ: ಕೆ.ಪಿ. ಸುರೇಶ

contributor

Similar News