ಕೋವಿಶೀಲ್ಡ್ ಮಾತ್ರವಲ್ಲ, ಕೋವ್ಯಾಕ್ಸಿನ್ ನಿಂದಲೂ ಅಡ್ಡಪರಿಣಾಮಗಳು
ಬೆಂಗಳೂರು : ಕೋವಿಶೀಲ್ಡ್ ಅಡ್ಡಪರಿಣಾಮಗಳ ಕುರಿತು ಸ್ವತಃ ಆಸ್ಟ್ರಜೆನೆಕ ಕಂಪೆನಿಯು ಒಪ್ಪಿಕೊಂಡಿದ್ದರ ಬೆನ್ನಲ್ಲೇ ಇದೀಗ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮಗಳಾಗಿವೆ ಎಂಬ ಅಂಶವನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ಹೊರಗೆಡವಿದೆ. ಈ ಬೆಳವಣಿಗೆ ನಡುವೆಯೇ ರಾಜ್ಯದ ಸಾಗರ ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಬ್ಬರಿಗೂ ಕೋವ್ಯಾಕ್ಸಿನ್ ಲಸಿಕೆ ಅಡ್ಡ ಪರಿಣಾಮಗಳು ಆಗಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.
ಕೋವ್ಯಾಕ್ಸಿನ್ ಲಸಿಕೆ ಪಡೆದು 6 ದಿನಗಳವರೆಗೆ ಆರೋಗ್ಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮನುಚಂದ್ರ ಎಂಬ ವಿದ್ಯಾರ್ಥಿಗೆ ಏಳನೇ ದಿನಕ್ಕೆ ಕಾಲು ಬಾವು ಕಾಣಿಸಿಕೊಂಡಿತ್ತು. ಇದಾಗಿ 4 ದಿನಗಳ ನಂತರ ಮೂತ್ರ ವಿಸರ್ಜನೆಯೂ ನಿಂತಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕ (ಲಸಿಕೆ)ರು ನೀಡಿದ್ದ ವರದಿಗೆ ಈಗ ಮಹತ್ವ ಬಂದಂತಾಗಿದೆ.
ಕೈಕಾಲು ಸ್ವಾಧೀನ ಕಳೆದುಕೊಂಡಿರುವು ದಕ್ಕೆ ಕೋವ್ಯಾಕ್ಸಿನ್ ಲಸಿಕೆ ಪಡೆದಿರುವುದು ಕಾರಣವೇ ಅಥವಾ ಅಲ್ಲವೇ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಧರಿಸಿತ್ತು. ಹೀಗಾಗಿ ಲಸಿಕೆಯ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ರಾಜ್ಯದ ಪ್ರಕರಣವನ್ನು ಹಿಂದಿನ ಬಿಜೆಪಿ ಸರಕಾರವು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘the-file.in’ಗೆ ಲಭ್ಯವಾಗಿವೆ.
ಆದರೆ ಅಂತಿಮ ವರದಿಯನ್ನು ಹಿಂದಿನ ಬಿಜೆಪಿ ಸರಕಾರವು ಬಹಿರಂಗಗೊಳಿಸಲಿಲ್ಲ. ಈಗಿನ ಕಾಂಗ್ರೆಸ್ ಸರಕಾರವೂ ಸಹ ಈ ಬಗ್ಗೆ ಗಂಭೀರವಾಗಿ ಗಮನಹರಿಸಿಲ್ಲ. ಲಸಿಕೆ ಅಡ್ಡ/ವ್ಯತಿರಿಕ್ತ ಪರಿಣಾಮದಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯ ಮತ್ತು ವೈದ್ಯಕೀಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರಕಾರಕ್ಕೆ ಸೂಚಿಸಿತ್ತು.