ಡೆಲಿವರಿ ಏಜೆಂಟ್‌ಗಳ ಅಸುರಕ್ಷಿತ ಬದುಕು

ಯಾವುದೇ ಕಾಂಟ್ರ್ಯಾಕ್ಟ್ ಕೂಡ ಇರುವುದಿಲ್ಲ. ಮೇಲ್ನೋಟಕ್ಕೆ, ಇವರು ಯಾವ ಕಂಪೆನಿಗೆ ಬೇಕೋ ಆ ಕಂಪೆನಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾರೆ. ಒಂದೇ ಸಲಕ್ಕೆ ಬೇರೆ ಬೇರೆ ಕಂಪೆನಿಗಳಿಗೂ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು. ತಮಗೆ ಬೇಕಾದಾಗ ಮಾತ್ರ ಕೆಲಸ ಮಾಡಬಹುದು. ಒಂದು ಮುಖ್ಯ ಕೆಲಸದ ಜೊತೆ ಇದನ್ನು ಪಾರ್ಟ್ ಟೈಂ ಎಂದು ಮಾಡಿಯೂ ಹಣ ಗಳಿಸಬಹುದು ಎಂದೆಲ್ಲ ಕೇಳಿಸಿಕೊಳ್ಳಲು ಚಂದ ಇರುವ ಮಾತುಗಳಿವೆ. ಆದರೆ ಅಸಲೀಯತ್ತು ಹಾಗಿಲ್ಲ. ಇವಾವುದೂ ವಾಸ್ತವದಲ್ಲಿ ನಡೆಯಲಾರವು. ಈ ಗಿಗ್ ಕೆಲಸಗಾರರು ಎದುರಿಸುತ್ತಿರುವ ವಾಸ್ತವ ಅತ್ಯಂತ ಕಠೋರವಾಗಿದೆ.

Update: 2024-08-30 06:25 GMT

ಮಳೆಯಿರಲಿ, ಚಳಿಯಿರಲಿ, ಹಗಲಿರಲಿ, ರಾತ್ರಿಯಿರಲಿ, ನಮಗೆ ಕೂತಲ್ಲಿಗೆ ನಾವು ಆರ್ಡರ್ ಮಾಡಿದ್ದನ್ನು ತಂದು ಕೊಡುವ, ನಾವು ಆರ್ಡರ್ ಮಾಡಿದ್ದನ್ನು, ನಿಗದಿತ ಸಮಯದೊಳಗೆ ನಮಗೆ ಮುಟ್ಟಿಸುವುದರಲ್ಲಿಯೇ ದಿನವನ್ನೆಲ್ಲ ಸವೆಸುವ ಡೆಲಿವರಿ ಏಜೆಂಟ್ಗಳ ಪಾಡು ಎಂಥದೆಂದು ಅವರದೇ ಜಾಗದಲ್ಲಿ ನಿಂತು ಅವರ ದಾರುಣ ಸ್ಥಿತಿಯನ್ನು ಯಾವತ್ತಾದರೂ ನಾವು ಅರ್ಥ ಮಾಡಿಕೊಳ್ಳಲು ಯೋಚಿಸಿದ್ದೇವೆಯೇ?

ಗಿಗ್ ವರ್ಕರ್ಸ್ ಎಂದು ಅವರನ್ನೆಲ್ಲ ಸಾಮಾನ್ಯವಾಗಿ ಕರೆಯಲಾಗುತ್ತದೆ. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಇಕನಾಮಿಕ್ ರಿಸರ್ಚ್ ಸಮೀಕ್ಷೆ ಪ್ರಕಾರ, ಒಬ್ಬ ಗಿಗ್ ಕೆಲಸಗಾರ ಈ ದೇಶದಲ್ಲಿ ವಾರಕ್ಕೆ ಸರಾಸರಿ 69.3 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ. ಅಂದರೆ ರವಿವಾರದ ರಜೆಯೂ ಇಲ್ಲದೆ ನಿತ್ಯ 10 ಗಂಟೆಗಳ ಲೆಕ್ಕದಲ್ಲಿ ವಾರದ ಏಳೂ ದಿನವೂ ಕೆಲಸ ಮಾಡಿದ ಹಾಗೆ. ಅದೇ ಸಮೀಕ್ಷೆಯ ಪ್ರಕಾರ, ಉಳಿದ ಕೆಲಸಗಾರರು ವಾರದಲ್ಲಿ ಕೆಲಸ ಮಾಡುವ ಸರಾಸರಿ ಸಮಯ 56 ಗಂಟೆಗಳು.

8ರಂದ 12 ತಾಸು ಈ ಡೆಲಿವರಿ ಏಜೆಂಟ್ಗಳು ಬೈಕ್ ಓಡಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಗಿಗ್ ವರ್ಕರ್ಗಳ ವಿದ್ಯಾರ್ಹತೆ ಬೇರೆ ಕೆಲಸಗಾರರಿಗೆ ಹೋಲಿಸಿದರೆ ಉತ್ತಮ ಮಟ್ಟದ್ದಾಗಿರುತ್ತದೆ. ಆದರೆ ಅದೇ ವೇಳೆ ಶೇ.75ರಷ್ಟು ಗಿಗ್ ಕೆಲಸಗಾರರು ದೊಡ್ಡ ಮಟ್ಟದ ಆರ್ಥಿಕ ಸವಾಲನ್ನು ಎದುರಿಸುತ್ತಿದ್ದಾರೆ. ಈ ಕೆಲಸಗಾರರ ತಿಂಗಳ ಸರಾಸರಿ ಗಳಿಕೆ ಕೇವಲ 18,000 ರೂ.

ತಾತ್ಕಾಲಿಕ ಕೆಲಸಗಾರರಿಗೆ ಈ ಗಿಗ್ ಪದವನ್ನು ಮೊದಲು ಬಳಸಿದ್ದು 1952ರಲ್ಲಿ. ಜ್ಯಾಕ್ ಕರುವ್ಯಾಕ್ ಎಂಬ ಲೇಖಕ ಆ ಪದವನ್ನು ಬಳಸಿದ್ದ.

ಗಿಗ್ ಆರ್ಥಿಕತೆ ಎದ್ದು ಕಾಣಿಸತೊಡಗಿರುವುದು ಕೋವಿಡ್ ನಂತರದ ಕಳೆದ ನಾಲ್ಕು ವರ್ಷಗಳಲ್ಲಿ. ಗಿಗ್ ಆರ್ಥಿಕತೆಯನ್ನು ಎರಡು ಭಾಗಗಳಲ್ಲಿ ನೋಡುವುದಾದರೆ, ಒಂದು, ಸೇವೆಯನ್ನು ಆಧರಿಸಿದ್ದು ಇನ್ನೊಂದು, ಜ್ಞಾನವನ್ನು ಆಧರಿಸಿದ್ದು. ಡೆಲಿವರಿ ಏಜೆಂಟ್ಗಳಂಥ ಕಡಿಮೆ ಕೌಶಲ್ಯದ ಕೆಲಸಗಾರರು ಸೇವಾಧಾರಿತ ವರ್ಗದಲ್ಲಿ ಬರುತ್ತಾರೆ. ಸಲಹೆಗಾರರು, ಡೇಟಾ ವಿಜ್ಞಾನಿಗಳಂಥ ಉನ್ನತ ಕೌಶಲ್ಯವುಳ್ಳವರು ಜ್ಞಾನಾಧಾರಿತ ವರ್ಗದಲ್ಲಿ ಬರುತ್ತಾರೆ.

ಮೊದಲ ವರ್ಗದವರನ್ನು ಬ್ಲೂ ಕಾಲರ್ ಗಿಗ್ ಕೆಲಸಗಾರರು ಎಂದೂ, ಎರಡನೇ ವರ್ಗದವರನ್ನು ವೈಟ್ ಕಾಲರ್ ಗಿಗ್ ಕೆಲಸಗಾರರು ಎಂದೂ ಕರೆಯಲಾಗುತ್ತದೆ. ಹಾಗಿದ್ದರೂ, ಗಿಗ್ ಕೆಲಸಗಾರರು ಎಂದರೆ ಸಾಮಾನ್ಯವಾಗಿ ಮೊದಲ ವರ್ಗದವರೆಂದೇ ಭಾವಿಸಲಾಗುತ್ತದೆ.

ಊಬರ್, ಓಲಾ, ಜೊಮ್ಯಾಟೊ, ಸ್ವಿಗ್ಗಿ, ಅರ್ಬನ್ ಕಂಪೆನಿ, ಪೋರ್ಟರ್, ಝೆಪ್ಟೊ ಥರದ ಕಂಪೆನಿಗಳಿಗಾಗಿ ದುಡಿಯುವವರು ಅವರು. ಇವರನ್ನು ಬೇಕೆಂದಾಗ ಕರೆಸಿಕೊಳ್ಳಬಹುದು, ಯಾವಾಗ ಬೇಕಾದರೂ ಕೆಲಸದಿಂದ ತೆಗೆಯಬಹುದು.

ಯಾವುದೇ ಕಾಂಟ್ರ್ಯಾಕ್ಟ್ ಕೂಡ ಇರುವುದಿಲ್ಲ. ಮೇಲ್ನೋಟಕ್ಕೆ, ಇವರು ಯಾವ ಕಂಪೆನಿಗೆ ಬೇಕೋ ಆ ಕಂಪೆನಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾರೆ. ಒಂದೇ ಸಲಕ್ಕೆ ಬೇರೆ ಬೇರೆ ಕಂಪೆನಿಗಳಿಗೂ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು. ತಮಗೆ ಬೇಕಾದಾಗ ಮಾತ್ರ ಕೆಲಸ ಮಾಡಬಹುದು. ಒಂದು ಮುಖ್ಯ ಕೆಲಸದ ಜೊತೆ ಇದನ್ನು ಪಾರ್ಟ್ ಟೈಂ ಎಂದು ಮಾಡಿಯೂ ಹಣ ಗಳಿಸಬಹುದು ಎಂದೆಲ್ಲ ಕೇಳಿಸಿಕೊಳ್ಳಲು ಚಂದ ಇರುವ ಮಾತುಗಳಿವೆ.

ಆದರೆ ಅಸಲೀಯತ್ತು ಹಾಗಿಲ್ಲ. ಇವಾವುದೂ ವಾಸ್ತವದಲ್ಲಿ ನಡೆಯಲಾರವು. ಈ ಗಿಗ್ ಕೆಲಸಗಾರರು ಎದುರಿಸುತ್ತಿರುವ ವಾಸ್ತವ ಅತ್ಯಂತ ಕಠೋರವಾಗಿದೆ.

ನೀತಿ ಆಯೋಗದ 2022ರ ವರದಿ ಪ್ರಕಾರ,

ಕೋವಿಡ್ಗಿಂತ ಮೊದಲು ದೇಶದಲ್ಲಿ ಸುಮಾರು 30 ಲಕ್ಷ ಗಿಗ್ ಕೆಲಸಗಾರರಿದ್ದರು. ಆದರೆ 2021ರಲ್ಲಿ ಇವರ ಸಂಖ್ಯೆ 77 ಲಕ್ಷಕ್ಕೆ ಹೆಚ್ಚಿದೆ. 2030ರ ಹೊತ್ತಿಗೆ ಇವರ ಸಂಖ್ಯೆ 2.35 ಕೋಟಿಗೆ ಏರಬಹುದು ಎನ್ನಲಾಗಿದೆ. ಆಕ್ಸ್ಫರ್ಡ್ ಇಂಟರ್ನೆಟ್ ಇನ್ಸ್ಟಿಟ್ಯೂಟ್ನ ಆನ್ಲೈನ್ ಲೇಬರ್ ಇಂಡೆಕ್ಸ್ ಹೇಳುವ ಪ್ರಕಾರ, ಭಾರತದ ಆನ್ಲೈನ್ ಲೇಬರ್ ಮಾರುಕಟ್ಟೆ ಪಾಲು ಶೇ.24 ಇದೆ. ಈ ಲೆಕ್ಕದಲ್ಲಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ.

2024ರ ಇಪ್ಸೋಸ್ ರಿಸರ್ಚ್ ಸಮೀಕ್ಷೆ ಪ್ರಕಾರ, ಭಾರತದಲ್ಲಿನ ಶೇ.88ರಷ್ಟು ಗಿಗ್ ಕೆಲಸಗಾರರಿಗೆ ಅದೇ ಅವರ ಆದಾಯದ ಪ್ರಾಥಮಿಕ ಮೂಲ. ಫ್ಲೋರಿಷ್ ವೆಂಚರ್ಸ್ನ ಸೆಪ್ಟಂಬರ್ 2020ರ ಸಂಶೋಧನೆ ಪ್ರಕಾರ, ಲಾಕ್ಡೌನ್ನ 6 ತಿಂಗಳ ನಂತರ ಶೇ.90ರಷ್ಟು ಗಿಗ್ ಕೆಲಸಗಾರರಿಗೆ ಮೊದಲಿಗಿಂತಲೂ ಸಂಬಳ ಕಡಿಮೆಯಾಗಿದೆ. ಶೇ.47ರಷ್ಟು ಗಿಗ್ ಕೆಲಸಗಾರರು ಆ ಹೊತ್ತಲ್ಲಿ ತಮ್ಮ ಖರ್ಚನ್ನು ಕೂಡ ಆ ಸಂಬಳದಲ್ಲಿ ನಿಭಾಯಿಸಲಾರದೆ ಹೈರಾಣಾಗಿದ್ದರು. ಕೋವಿಡ್ ಸಮಯದಲ್ಲಂತೂ ಇವರು ಅಕ್ಷರಶಃ ಕೋವಿಡ್ ವಾರಿಯರ್ಗಳ ಹಾಗೆ ಕೆಲಸ ಮಾಡಿದ್ದರು.

ಇಲ್ಲಿ ಕೆಲಸ ಮಾಡುವ ಎಷ್ಟೋ ಮಂದಿ ಬೇರೆಲ್ಲ ದಾರಿಗಳು ಮುಚ್ಚಿದ ಬಳಿಕ ಅನಿವಾರ್ಯತೆಯಿಂದ ಇಲ್ಲಿಗೆ ಬಂದವರಾಗಿದ್ದಾರೆ. ‘ದಿ ಲಾಜಿಕಲ್ ಇಂಡಿಯನ್’ ಎಂಬ ಮಾಧ್ಯಮ ವೇದಿಕೆ ಕರಣ್ ಸಿಂಗ್ ಎಂಬ ಗಿಗ್ ಕೆಲಸಗಾರನ ಬಗ್ಗೆ ಬರೆದಿತ್ತು.

ದಿಲ್ಲಿಯ ಪಶ್ಚಿಮ ವಿಹಾರದಲ್ಲಿ ವಾಸವಿದ್ದ ಕರಣ್, ಕಟ್ಟಡ ನಿರ್ಮಾಣ ಕೆಲಸಗಾರನಾಗಿದ್ದ.ಕೋವಿಡ್ ಹೊತ್ತಲ್ಲಿ ಕಟ್ಟಡ ನಿರ್ಮಾಣ ಕೆಲಸ ನಿಂತುಹೋಯಿತು. ಕರಣ್ಗೆ ನಿತ್ಯದ ಹೊಟ್ಟೆಪಾಡಿನ ಮೂಲವೇ ಇಲ್ಲವಾಯಿತು. ಪತ್ನಿ, ಇಬ್ಬರು ಮಕ್ಕಳ ಕುಟುಂಬ ಆತನದಾಗಿತ್ತು. ಅಂಥ ಹೊತ್ತಲ್ಲಿ ಗೆಳೆಯನೊಬ್ಬ ಗಿಗ್ ಕೆಲಸದ ಬಗ್ಗೆ ಹೇಳಿದಾಗ, ತನ್ನ ಕಡೇ ಸಂಬಳ ಬಳಸಿ ಹಳೇ ಸ್ಕೂಟರ್ ಅನ್ನು ಲೀಸ್ ಮೇಲೆ ಪಡೆಯಲು ನಿರ್ಧರಿಸಿದ.ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡ. ಕೋವಿಡ್ ಹೊತ್ತಲ್ಲಿ ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ಪೂರೈಸುವ ಕೆಲಸ ಮಾಡುತ್ತ, ಕಡೆಗೆ ಅದೇ ಆತನ ಮುಖ್ಯ ಕೆಲಸವಾಗಿಬಿಟ್ಟಿತ್ತು.ಇಂದು ಆತ ಬೈಕ್-ಟ್ಯಾಕ್ಸಿ ಸರ್ವಿಸ್ ಪ್ಲ್ಯಾಟ್ಫಾರ್ಮ್ಗಾಗಿ ಕೆಲಸ ಮಾಡುತ್ತಿದ್ದಾನೆ. ಇಂಥ ಹಲವು ಕಥೆಗಳು ನಮಗೆ ಸಿಗುತ್ತವೆ.

ಗಿಗ್ ಕೆಲಸಗಾರರನ್ನು ಬೇರೆ ಬೇರೆ ಕಂಪೆನಿಗಳು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತವೆ. ಕ್ಯಾಪ್ಟನ್, ಎಕ್ಸ್ಪರ್ಟ್ ಎಂದೆಲ್ಲ ಕರೆಯಲಾಗುತ್ತಿದೆಯಾದರೂ, ಹೆಚ್ಚಿನ ಕಂಪೆನಿಗಳು ಅವರನ್ನು ಪಾರ್ಟ್ನರ್ ಎಂದು ಕರೆಯುತ್ತವೆ. ವ್ಯವಹಾರದಲ್ಲಿ ಪಾರ್ಟ್ನರ್ ಎಂದರೆ ಶೇ.50ರಷ್ಟು ಪಾಲು ಪಡೆಯುವವ. ಆದರೆ ಇಲ್ಲಿ ಇವರಿಗೆ ಹೆಸರು ಮಾತ್ರ ಪಾರ್ಟ್ನರ್.

ಗಿಗ್ ಕೆಲಸಗಾರನಾಗಲು ಬೈಕ್ ಅಥವಾ ಸ್ಕೂಟರ್ ಹೊಂದಿರಬೇಕು. ಪೆಟ್ರೋಲ್ ಖರ್ಚನ್ನೂ ಅವರೇ ನಿಭಾಯಿಸಬೇಕು. ಊಬರ್ ಅಥವಾ ಓಲಾ ಚಾಲಕರು ಒಬ್ಬ ಗ್ರಾಹಕನನ್ನು ಆತನ ಸ್ಥಳಕ್ಕೆ ತಲುಪಿಸಿ ಇನ್ನೊಬ್ಬರನ್ನು ಪಿಕ್ ಮಾಡಿಕೊಳ್ಳಲು ಆ ಜಾಗದಿಂದ 15ರಿಂದ 20 ಕಿ.ಮೀ. ಹೋಗಲೇಬೇಕಾಗುತ್ತದೆ. ಆದರೆ ಅದಕ್ಕಾಗುವ ಪೆಟ್ರೋಲ್ ಖರ್ಚಿನಲ್ಲಿ ಶೇ.50ರಷ್ಟನ್ನೂ ಕಂಪೆನಿ ಕೊಡುವುದಿಲ್ಲ.

ಕಂಪೆನಿಗಳು ಗಿಗ್ ಕೆಲಸಗಾರರನ್ನು ಪಾರ್ಟ್ನರ್ ಎಂದು ಕರೆಯುವುದು ಕಾನೂನಾತ್ಮಕ ತೊಂದರೆಗಳಿಂದ ತಪ್ಪಿಸಿಕೊಳ್ಳುವು ದಕ್ಕಾಗಿ ಮಾತ್ರ. ಉದ್ಯೋಗಿ ಎಂದು ಕರೆದರೆ ಕಂಪೆನಿ ತುಂಬಾ ಹೊಣೆ ಹೊರಬೇಕಾಗುತ್ತದೆ. ಆಗ ಆರೋಗ್ಯ ವಿಮೆ ಕೊಡಬೇಕಾಗುತ್ತದೆ.ಅಪಘಾತವಾದರೆ ಪರಿಹಾರ ಕೊಡಬೇಕಾಗಿರುತ್ತದೆ. ಕನಿಷ್ಠ ವೇತನ ನೀಡಬೇಕಾಗುತ್ತದೆ, ತೆರಿಗೆ ಕಟ್ಟಬೇಕಾಗುತ್ತದೆ.

ಆಕ್ಸ್ಫರ್ಡ್ ಇಂಟರ್ನೆಟ್ ಇನ್ಸ್ಟಿಟ್ಯೂಟ್ನ ಫೇರ್ ವರ್ಕ್ ರಿಸರ್ಚ್ ಪ್ರಾಜೆಕ್ಟ್ 2022ರ ಪ್ರಕಾರ,

ದೇಶದಲ್ಲಿನ ಅಂಥ 11 ಪ್ಲ್ಯಾಟ್ ಫಾರ್ಮ್ಗಳನ್ನು ಅಧ್ಯಯನ ಮಾಡಿದ್ದು, ಯಾವ ಕಂಪೆ ನಿಯೂ ಯಾವ ಸೌಲಭ್ಯವನ್ನು ಕೊಡ ದಿರುವುದು ಸಾಬೀತಾಗಿತ್ತು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಮತ್ತು ಮಾಂಟ್ ಫೋರ್ಟ್ ಸೋಷಿಯಲ್ ಇನ್ಸ್ಟಿಟ್ಯೂಟ್ ಜೊತೆಯಾಗಿ ಹೈದರಾಬಾದ್ನ ಓಲಾ ಮತ್ತು ಊಬರ್ ಚಾಲಕರನ್ನು ಗಮನದಲ್ಲಿರಿಸಿಕೊಂಡು ನಡೆಸಿದ್ದ ಅಧ್ಯಯನವೊಂದರ ಪ್ರಕಾರ,

ಚಾಲಕರ ಸರಾಸರಿ ಗಳಿಕೆ ತಿಂಗಳಿಗೆ 45,000ದಿಂದ 50,000 ರೂ. ಅದರಲ್ಲಿ ಸರಾಸರಿ ಶೇ.40ರಷ್ಟು ಪೆಟ್ರೋಲ್ ಅಥವಾ ಡೀಸೆಲ್ಗಾಗಿಯೇ ಖರ್ಚಾಗುತ್ತದೆ. ಬಹುತೇಕ ಚಾಲಕರು ನಿತ್ಯ ಸರಾಸರಿ 12ರಿಂದ 14 ಗಂಟೆ ಕೆಲಸ ಮಾಡುತ್ತಾರೆ. ಎಲ್ಲ ಕಳೆದರೆ ಉಳಿಯುವುದು ಕನಿಷ್ಠ ದಿನಗೂಲಿ ಮಾತ್ರ.

ಈ ಕಂಪೆನಿಗಳು ತಮ್ಮನ್ನು ಮೀಡಿಯೇಟರ್, ಫೆಸಿಲಿಟೇಟರ್ ಎಂದು ಕರೆದುಕೊಳ್ಳುತ್ತವೆಯೇ ಹೊರತು ಎಂಪ್ಲಾಯರ್ ಎಂದು ಅಪ್ಪಿತಪ್ಪಿಯೂ ಕರೆದುಕೊಳ್ಳುವುದಿಲ್ಲ. ಕೆಲಸಗಾರನ ಹೊಣೆ ಹೊರುವ ಯಾವುದೇ ರಗಳೆಗಳಲ್ಲಿ ಸಿಕ್ಕಿಹಾಕಿಕೊಳ್ಳಲು ಅವು ತಯಾರಿಲ್ಲ. ಈ ಕಂಪೆನಿಗಳು ಮಧ್ಯವರ್ತಿಯನ್ನು ಇಲ್ಲವಾಗಿಸಿದವು ಎಂದರೆ, ಸ್ವತಃ ತಾವೇ ಮಧ್ಯವರ್ತಿಗಳಾದವು.

ಮತ್ತೊಬ್ಬ ಗಿಗ್ ಕೆಲಸಗಾರನ ಕಥೆಯನ್ನು ‘ಫ್ರಂಟ್ಲೈನ್’ ಪ್ರಕಟಿಸಿದೆ.

ಇಬ್ಬರು ಮಕ್ಕಳ ತಂದೆ ದಿನವೂ 12ರಿಂದ 14 ಗಂಟೆ ಕೆಲಸ ಮಾಡುತ್ತಿದ್ದ. ಅರ್ಬನ್ ಕಂಪೆನಿಯ ಕ್ಲೀನರ್ ಆಗಿ ದುಡಿಯುತ್ತಿದ್ದ. ನಿತ್ಯವೂ ದಿಲ್ಲಿ ಮತ್ತು ಗುರ್ಗಾಂವ್ ನಡುವೆ ಪ್ರಯಾಣಿಸುತ್ತಿದ್ದ ಆತನಿಗೆ ಒಂದು ದಿನ ಅಪಘಾತವಾಗುತ್ತದೆ. ಚಿಕಿತ್ಸೆಗಾಗಿ ಆ ದಿನ ಕೆಲಸ ತಪ್ಪಿಸಬೇಕಾಗುತ್ತದೆ. ಮಾರನೇ ದಿನ ಆತ ತನ್ನ ಅಕೌಂಟ್ ಚೆಕ್ ಮಾಡಲು ಹೋದರೆ, ಕಂಪೆನಿ ಆತನನ್ನು ಶಾಶ್ವತವಾಗಿ ಬ್ಲಾಕ್ ಮಾಡಿರುವುದು ಗೊತ್ತಾಗುತ್ತದೆ. ಅನೇಕ ಗಿಗ್ ಕೆಲಸಗಾರರು ಇಂಥ ಸಮಸ್ಯೆ ಎದುರಿಸುತ್ತಾರೆ.

ಅಕೌಂಟ್ನಿಂದ ತೆಗೆದುಹಾಕಲು ದೊಡ್ಡ ಕಾರಣ ಬೇಕಿಲ್ಲ. ಯಾರಾದರೂ ದೂರು ನೀಡಿದ್ದರೆ, ರೇಟಿಂಗ್ಸ್ ಇಳಿದಿದ್ದರೆ ಅಥವಾ ರಜೆ ಹಾಕಿದರೆ ಅದೇ ಸಾಕಾಗುತ್ತದೆ.

ಕಳೆದ ವರ್ಷ ಡೆಲಿವರಿ ಕೆಲಸಗಾರರ ಮುಷ್ಕರದಿಂದಾಗಿ ದಿಲ್ಲಿಯಲ್ಲಿ ಜೊಮ್ಯಾಟೊ ಕಂಪೆನಿಯ 100 ಬ್ಲಿಂಕಿಟ್ ಡಾರ್ಕ್ ಸ್ಟೋರ್ಗಳು ಮುಚ್ಚಿದ್ದವು. ಬ್ಲಿಂಕಿಟ್ ಕೆಲಸಗಾರರ ಜೊತೆ ಹೊಂದಿದ್ದ ಒಪ್ಪಂದದ ಪ್ರಕಾರ, ಪ್ರತೀ ಆರ್ಡರ್ಗೆ 50 ರೂ. ಕೊಡಬೇಕಿತ್ತು. ಆದರೆ ಅದನ್ನು ಆನಂತರ 25 ರೂ.ಗೆ ಇಳಿಸಲಾಗಿತ್ತು. ಈಗ ಅದನ್ನು 15 ರೂ. ಗೆ ಇಳಿಸಲಾಗಿದೆ.

ಕಂಪೆನಿಗಳ ವಿರುದ್ಧ ಕೆಲಸಗಾರರು ದೂರು ಹೇಳಲು ಯಾವುದೇ ದಾರಿಗಳಿಲ್ಲ. ಇದರ ನಡುವೆ ದಾರಿಯಲ್ಲಿ ಡೆಲಿವರಿ ಏಜೆಂಟ್ಗಳ ಮೇಲೆ ಹಲ್ಲೆಗಳಾಗುವುದೂ ಇದೆ, ಗ್ರಾಹಕರಿಂದ ಬೈಸಿಕೊಳ್ಳುವುದು ಕೂಡ ಇದೆ. ಮುಹಮ್ಮದ್ ರಿಝ್ವಾನ್ ಎಂಬ ಡೆಲಿವರಿ ಏಜೆಂಟ್ ತನ್ನ ಮೇಲೆ ಗ್ರಾಹಕರ ನಾಯಿ ದಾಳಿ ಮಾಡಿದಾಗ ಬಚಾವಾಗಲು ಮೂರನೇ ಮಹಡಿಯಿಂದಲೇ ಕೆಳಕ್ಕೆ ಜಿಗಿದಿದ್ದರಿಂದ ಸಾವನ್ನಪ್ಪಿದ್ದ.

ಗ್ರಾಹಕರಿಗೇನೋ ದೂರು ಹೇಳಿ ದುಡ್ಡು ವಾಪಸ್ ಪಡೆಯುವ ಅವಕಾಶ ಇರಬಹುದು. ಆದರೆ ಗಿಗ್ ಕೆಲಸಗಾರರ ಪಾಲಿಗೆ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ. ಗ್ರಾಹಕರು ಕೊಡುವ ರೇಟಿಂಗ್ ಕುಸಿದರೂ ಅದು ಅವರ ಕೆಲಸಕ್ಕೆ ಕುತ್ತು ತರುತ್ತದೆ. ಹೊಟ್ಟೆಪಾಡಿಗೆ ಮತ್ತೆ ಬೇರೆ ದಾರಿ ಹುಡುಕಿಕೊಳ್ಳುವ ಸ್ಥಿತಿ ಎದುರಾಗುತ್ತದೆ.

ದೇಶದಲ್ಲಿನ ಕಾರ್ಮಿಕ ಕಾನೂನುಗಳಲ್ಲಿ ಗಿಗ್ ಕೆಲಸಗಾರರಿಗೆ ರಕ್ಷಣೆಯೊದಗಿಸುವ ಅವಕಾಶ ಇಲ್ಲ.

2020ರಲ್ಲಿ ಕೇಂದ್ರ ಸರಕಾರ ಸಾಮಾಜಿಕ ಭದ್ರತಾ ಸಂಹಿತೆಯನ್ನು ತಂದಿತ್ತು. ಅದರ ಪ್ರಕಾರ ಗಿಗ್ ಕೆಲಸಗಾರರಿಗೆ ಸಾಮಾಜಿಕ ಭದ್ರತೆಯ ಲಾಭಗಳು ಸಿಗಲಿದ್ದವು. ಆದರೆ ಅದಿನ್ನೂ ಅನುಷ್ಠಾನಗೊಂಡಿಲ್ಲ. ಕೇಂದ್ರ ಸರಕಾರ ಅದನ್ನು ಅನುಷ್ಠಾನಗೊಳಿಸಬೇಕಿದೆ. ಆ ಮೂಲಕ ಗಿಗ್ ಕೆಲಸಗಾರರ ಹಕ್ಕು ರಕ್ಷಿಸಲು ಮುಂದಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಎಸ್. ಸುದರ್ಶನ್

contributor

Similar News