ನ್ಯಾ. ಭಕ್ತವತ್ಸಲ ಆಯೋಗದ ವರದಿಯೂ ಸರಕಾರದ ನಿರ್ಧಾರವೂ

ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಕಟುವಾದ ಮಾತಿನಲ್ಲಿ ಹೇಳಿತ್ತು. ನ್ಯಾ.ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಈ ವಿಷಯದಲ್ಲಿ ಸರಕಾರ ಮಹಾಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಗ್ಗತ್ತಲೆಯಲ್ಲಿಟ್ಟು ಬಿಟ್ಟಿತು.

Update: 2023-10-15 08:06 GMT

ಮಾಜಿ ರಾಜ್ಯಪಾಲ ದಿ. ರಾಮ ಜೋಯಿಸರು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಿಗನುಸಾರ(ಅನುಚ್ಛೇದ 243-ಡಿ ಆ್ಯಂಡ್ 243-ಟಿ) ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿ ಕೋಟಾ ಶೇ.50 ಅನ್ನು ಮೀರಿ ಹೋಗಿದೆ(ಶೇ. 56) ಎಂಬ ವಿಷಯ ಮುಂದಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲಿ ಕೆ.ಕೃಷ್ಣಮೂರ್ತಿ ಎಂಬವರ ಮೂಲಕ ಪ್ರಶ್ನಿಸಿದರು. ಅಷ್ಟೇ ಅಲ್ಲ, ಖುದ್ದಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದವನ್ನೂ ಮಂಡಿಸಿದ್ದರು.(ಕೆ. ಕೃಷ್ಣಮೂರ್ತಿ v/s ಭಾರತ ಸರಕಾರ-(2010)7 ಎಸ್ಸಿಸಿ 202(183)

ಮೀಸಲಾತಿಯಲ್ಲಿ ಎರಡು ಬಗೆ. ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಮೀಸಲಾತಿ ಒಂದಾದರೆ, ರಾಜಕೀಯ ಕ್ಷೇತ್ರಗಳ ಸ್ಥಾನಗಳಿಗೆ ಅನ್ವಯಿಸುವ ಮೀಸಲಾತಿ ಮತ್ತೊಂದು. ಸಂವಿಧಾನದ ತಿದ್ದುಪಡಿಗಳಿಂದಾಗಿ ಸದ್ಯ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಮಾತ್ರ ಅಂತಹ ಮೀಸಲಾತಿ ಇದೆ. ಶೇ. 50ರಷ್ಟು ಮೀಸಲಾತಿ ಕೋಟಾವನ್ನು ಮೀರಬಾರದೆಂದು, ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುವಂತೆ ಮಾತ್ರ ಮಂಡಲ್ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪು ಇದು(ಇಂದ್ರಾ ಸಹಾನಿ v/s ಒಕ್ಕೂಟ ಸರಕಾರ-ಎಐಆರ್ 1993 ಎಸ್ಸಿ 477)

ದಿವಂಗತ ರಾಮ ಜೋಯಿಸರು ಬಹುಶಃ ಇದೇ ತೀರ್ಪಿನಿಂದ ಉತ್ತೇಜಿತರಾಗಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಕೊಟ್ಟಿರುವ ಮೀಸಲಾತಿಯ ಕೋಟಾ ಶೇ.50 ಅನ್ನು ಮೀರಿದೆ ಎಂದು ಹಠಕ್ಕೆ ಬಿದ್ದವರಂತೆ ಸರ್ವೋಚ್ಚ ನ್ಯಾಯಾಲಯದವರೆಗೂ ಸರಕಾರದ ಪ್ರಶ್ನಿತ ಮೀಸಲಾತಿ ವಿಷಯವನ್ನು ಒಯ್ಯುತ್ತಾರೆ. ಸರ್ವೋಚ್ಚ ನ್ಯಾಯಾಲಯ ಮನವಿದಾರರ ಕೋರಿಕೆಯಂತೆ ಕೋಟಾ ಮೇಲ್ಮಿತಿಯನ್ನು ಶೇ. 50ರಷ್ಟಕ್ಕೆ ಮಿತಗೊಳಿಸಬೇಕು ಎಂದು ಆಜ್ಞಾಪಿಸಿತು. ದುರಂತವೆಂದರೆ ಪ್ರತಿವಾದಿಗಳಲ್ಲಿ ಯಾರೊಬ್ಬರೂ ಕೂಡ ಮೀಸಲಾತಿ ಮೇಲ್ಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ವಿಧಿಸಿರುವುದು ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ; ಅದು ರಾಜಕೀಯ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂದು ರಕ್ಷಣಾತ್ಮಕ ವಾದ ಮಂಡಿಸಿರುವ ಹಾಗೇ ಕಂಡುಬಂದಿಲ್ಲ. ಸರ್ವೋಚ್ಚ ನ್ಯಾಯಾಲಯ ಇವುಗಳೆರಡರ ನಡುವಿನ ವ್ಯತ್ಯಾಸವನ್ನು ಹೀಗೆ ಹೇಳಿದೆ:

‘‘243-ಡಿ(6) ಮತ್ತು 243-ಟಿ(6) ಅನುಚ್ಛೇದಗಳ ಅಡಿಯಲ್ಲಿ ‘ಹಿಂದುಳಿದ ವರ್ಗಗಳ’ನ್ನು ಗುರುತಿಸುವಿಕೆಯೂ ಅನುಚ್ಛೇದ 15(4) ಮತ್ತು 16(4)ರ ಅಡಿಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ‘ಹಿಂದುಳಿದ ವರ್ಗ’ಗಳನ್ನು ಗುರುತಿಸುವಿಕೆಯೂ ಭಿನ್ನವಾಗಿರಬೇಕು.’’

ಹಿಂದುಳಿದ ವರ್ಗಗಳನ್ನು ರಾಜಕೀಯ ಉದ್ದೇಶಕ್ಕಾಗಿ ಗುರುತಿಸಿರುವ ಕಾರ್ಯವಿಧಾನವನ್ನು ಯಾವೊಬ್ಬ ಹಿಂದುಳಿದ ವರ್ಗಗಳ ಮುಖಂಡನೇ ಆಗಲಿ ಅಥವಾ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳೇ ಆಗಲಿ ಪ್ರಶ್ನಿಸದಿರುವುದು ಮಾತ್ರ ಆ ವರ್ಗಗಳ ರಾಜಕೀಯ ಹಿತದೃಷ್ಟಿಯಿಂದ ಯಾವ ಪ್ರಜ್ಞಾವಂತ ಹಿಂದುಳಿದ ವರ್ಗಗಳ ನಾಗರಿಕನೂ ಒಪ್ಪಲಾರ. ಈ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗೆ ಸೇರಿದ ರಾಜಕಾರಣಿಗಳ ಪಾತ್ರ ಮಹತ್ವದ್ದಿತ್ತು. ಅವರ ದಿವ್ಯ ನಿರ್ಲಕ್ಷ್ಯವೇ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಆಗಿರುವ ಪರಮ ಅನ್ಯಾಯ.

1993ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಲಾಗಾಯ್ತಿನಿಂದ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗಿದೆ. ಆದರೆ ಇಂತಹ ರಾಜಕೀಯ ಮೀಸಲಾತಿಗಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕ್ರಮ ದೋಷದಿಂದ ಕೂಡಿದೆ. ರಾಜಕೀಯ ಮೀಸಲಾತಿಗೂ, ಹಿಂದುಳಿದ ವರ್ಗಗಳನ್ನು ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಗುರುತಿಸಿ ನೀಡಿರುವ ಮೀಸಲಾತಿಯನ್ನೇ ಉಪಯೋಗಿಸಿಕೊಳ್ಳ ಲಾಗಿದೆ. ಇದು ಎಷ್ಟು ಮಾತ್ರಕ್ಕೂ ಸರಿ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿ, ತ್ರಿಸ್ತರ(ಣಡಿiಠಿಟe ಣesಣ) ಪರೀಕ್ಷಾ ಸೂತ್ರವೊಂದನ್ನು ನೀಡಿ ಅದರಂತೆ ಕ್ರಮ ತೆಗೆದುಕೊಳ್ಳಲು ರಾಜ್ಯಗಳಿಗೆ ಆದೇಶಿಸಿತು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಕರ್ನಾಟಕದ ಅಂದಿನ ಭಾಜಪ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ (ಕು)ತಂತ್ರದ ಭಾಗವಾಗಿ ಅತ್ಯಂತ ಕ್ಷಿಪ್ರಗತಿಯಲ್ಲಿ ಹಿಂದುಳಿದ ವರ್ಗಗಳ ಸಂಬಂಧ ಮೀಸಲಾತಿ ಕೋಟಾವನ್ನೇನೋ ಮಿತಿಗೆ ಒಳಪಡಿಸಿ ಕೈ ತೊಳೆದು ಕೊಂಡುಬಿಟ್ಟರು. ವಿಷಾದದ ಸಂಗತಿ ಎಂದರೆ ಇವರು ಹಿಂದುಳಿದ ವರ್ಗಕ್ಕೆ ಸೇರಿದವರೇ. ಈ ಕ್ರಮದಿಂದಾಗಿ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಸ್ಥಾನಗಳಲ್ಲಿ ಹಿಂದುಳಿದವರ ಕೋಟಾ ಗಣನೀಯವಾಗಿ ಕಡಿಮೆಯಾಯಿತು. ಅನೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅದರ ಪರಿಣಾಮವನ್ನು ತೀವ್ರ ಸಂಕಟದಿಂದ ಹಿಂದುಳಿದ ವರ್ಗ ಅನುಭವಿಸುವಂತೆ ಆಯಿತು. ಆದರೆ ಸರಕಾರ ತ್ರಿಸ್ತರ ಪರೀಕ್ಷೆ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳದೆ ಜಾಣ ಮೌನ ವಹಿಸಿತು. ಈ ಜಾಣ ಮೌನದಿಂದ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಬಲವಾದ ಬಹುಶಃ ಸಂವೇದನೆಗೆ ಸಿಗದ ಪೆಟ್ಟು ಬಿತ್ತು.

ಒಂದು ಸ್ವತಂತ್ರ ಮತ್ತು ಸಮರ್ಪಿತ ಆಯೋಗವನ್ನು ರಚಿಸಿ, ಪ್ರಾಯೋಗಿಕ ದತ್ತಾಂಶಗಳ ಸಹಾಯದಿಂದ ಕಟ್ಟುನಿಟ್ಟಿನ ಪರಿಶೀಲನಾ ಕಾರ್ಯ ಕೈಗೊಳ್ಳಬೇಕು ಮತ್ತು ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನ್ಯಾಯಾಲಯ ವಿಧಿಸಿದ ಮೇಲ್ಮಿತಿಯನ್ನು ಮೀರ ಕೂಡದು ಎಂಬುದೇ ತ್ರಿಸ್ತರ ಪರೀಕ್ಷೆ. ಇದಂತೂ ಕಾರ್ಯರೂಪಕ್ಕೆ ಬರಲೇ ಇಲ್ಲ. ಆದರೆ 2010 ಮತ್ತು 2015ರಲ್ಲಿ ಪಂಚಾಯತ್ ಚುನಾವಣೆಗಳು ಮಾತ್ರ ಯಾವುದೇ ಅಡೆ-ತಡೆ ಇಲ್ಲದೆ ನಡೆದೇ ಹೋದವು. ಅದು ಹಾಗಿರಲಿ.

2010ರಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತು. ಆದರೆ ಹಿಂದುಳಿದ ವರ್ಗಗಳ ಕೋಟಾ ಕಡಿಮೆಯಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ರಿಟ್ ಸಲ್ಲಿಸಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ತಡೆಯಾಜ್ಞೆ ಪ್ರಶ್ನಿಸಿ ಆಯೋಗ ರಿಟ್ ಮೇಲ್ಮನವಿ ಸಲ್ಲಿಸಿ, ಮೇಲ್ಮನವಿಯನ್ನು ವಿಚಾರಣೆಗೆ ಒಳಪಡಿಸಿ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ವಿಭಾಗೀಯ ಪೀಠ ಸಂವಿಧಾನ ಬದ್ಧವಾಗಿ ಚುನಾವಣೆಯನ್ನು ನಡೆಸಲೇಬೇಕು ಎಂದು ತೀರ್ಪನ್ನು ನೀಡಿತು. ಆದರೆ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಆದೇಶದಂತೆ ತ್ರಿಸ್ತರ ಪರೀಕ್ಷೆ ಜರುಗಿಸಿ ರಾಜಕೀಯವಾಗಿ ಮುಂದುವರಿದ ವರ್ಗಗಳನ್ನು ಮೀಸಲಾತಿಯಿಂದ ಹೊರಗಿಡಲು ಆದೇಶ ನೀಡಿತು. ಅದೇ ಆದೇಶದಲ್ಲಿ ರಾಜಕೀಯವಾಗಿ ಮೇಲ್ಮಟ್ಟದಲ್ಲಿರುವ ಸಮುದಾಯಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನೂ ನೀಡಿತ್ತು. ಆ ಪ್ರಕಾರವಾಗಿ 2010ರಲ್ಲಿ ಆ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ದತ್ತಾಂಶಗಳನ್ನು ದಾಖಲಿಸಿದೆ. ವಿಧಾನ ಸಭೆಯಲ್ಲಿ (ಒಟ್ಟು 224) ಲಿಂಗಾಯತ-57, ಒಕ್ಕಲಿಗ-43 ಸದಸ್ಯರನ್ನು, ವಿಧಾನ ಪರಿಷತ್ತಿನಲ್ಲಿ (ಒಟ್ಟು-75) ಲಿಂಗಾಯತ-24, ಒಕ್ಕಲಿಗ-13 ಸದಸ್ಯರನ್ನು ಹಾಗೂ ಜಿಲ್ಲಾ ಪಂಚಾಯತ್ಗಳಲ್ಲಿ(ಒಟ್ಟು-863) ಲಿಂಗಾಯತ-254 ಮತ್ತು ಒಕ್ಕಲಿಗ-187 ಸದಸ್ಯಗಳು ಸ್ಥಾನ ಪಡೆದು ಕೊಂಡಿದ್ದಾರೆ. ಈ ಸಮುದಾಯಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯ ಆಧಿಪತ್ಯ ಪಡೆದಿವೆ ಎಂಬ ವಿಷಯ ನಮೂದಿಸಿ ಉಚ್ಚ ನ್ಯಾಯಾಲಯ ಹೀಗೆ ತನ್ನ ಇಂಗಿತ ವ್ಯಕ್ತಪಡಿಸಿದೆ: ‘‘ಮುಂಬರುವ ಚುನಾವಣೆಗಳಲ್ಲಿ ಮೀಸಲಾತಿಯ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳ ಪಟ್ಟಿಯಿಂದ, ತಿಳಿದಿರುವ ಒಪ್ಪಲಾದ ಮತ್ತು ಘೋಷಿಸಿರುವ ‘ರಾಜಕೀಯವಾಗಿ ಮುಂದುವರಿದ’ ಜಾತಿಗಳನ್ನು ಹೊರಗಿಡುವುದು ರಾಜ್ಯ ಸರಕಾರಕ್ಕೆ ನ್ಯಾಯ ಸಮ್ಮತವಾಗಿರುತ್ತದೆ’’(ರಾಜ್ಯ ಚುನಾವಣಾ ಆಯೋಗ v/s ಕರ್ನಾಟಕ ರಾಜ್ಯ ಮತ್ತು ಇತರರು)

ಉಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದು ವರ್ಷಗಳೇ ಉರುಳಿದರೂ ನ್ಯಾಯಾಲಯದ ಆದೇಶವನ್ನಂತೂ ಸರಕಾರ ಜಾರಿ ಮಾಡಲು ರಾಜಕೀಯ ಕಾರಣದಿಂದಲೋ ಏನೋ ಸಿದ್ಧವಿರಲಿಲ್ಲ. ಈ ಮೊಕದ್ದಮೆಯಲ್ಲಿ ಪ್ರತಿವಾದಿಗಳ ಪರ ಹಾಜರಿದ್ದು ವಾದ ಮಂಡಿಸಿದ ಹಿರಿಯ ವಕೀಲರೊಬ್ಬರು ಮುಂದೆ ಸರಕಾರದ ಮುಖ್ಯ ಕಾನೂನು ಸಲಹೆಗಾರರಾಗಿದ್ದರೂ, ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸಬೇಕೆಂದು ಸರಕಾರಕ್ಕೆ ಸಲಹೆ ಕೊಡುವುದರಲ್ಲಿ ವಿಫಲರಾಗಿರುವುದು ಕಂಡು ಬಂದಿದೆ.

ಹೀಗಿರುವಲ್ಲಿ, ಕಳೆದೆರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಗೊತ್ತು ಮಾಡಿರುವ ಮೀಸಲಾತಿ ನೀತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು (ವಿಕಾಸ್ ಕೃಷ್ಣರಾವ್ ಗೌಳಿ v/s ಮಹಾರಾಷ್ಟ್ರ ಸರಕಾರ-2021ಎಸ್ಸಿಸಿ ಆನ್ಲೈನ್ ಎಸ್ಸಿ 170). 2010ರಲ್ಲಿ ಪಂಚನ್ಯಾಯ ಮೂರ್ತಿಗಳ ಸಾಂವಿಧಾನಿಕ ಪೀಠ ವಿಧಿಸಿರುವ ಮೂರು ಹಂತದ ಪರೀಕ್ಷೆಗಳನ್ನು ಪರಿಪಾಲಿಸುವಂತೆ ಖಡಕ್ ಆಜ್ಞೆಯನ್ನು ಇಡೀ ದೇಶಕ್ಕೆ ಅನ್ವಯಿಸುವಂತೆ ನೀಡಿತು (ಡಿಸೆಂಬರ್ 2021).

ಇಷ್ಟಾದರೂ ಕರ್ನಾಟಕ ಸರಕಾರ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಳ್ಳಲೇ ಇಲ್ಲ. ಹಿಂದುಳಿದ ವರ್ಗಗಳಿಗೆ ಆಗಿರುವ ಘನ ಘೋರ ಅನ್ಯಾಯವನ್ನು ಅಂತ್ಯಗೊಳಿಸುವ ದೆಸೆಯಲ್ಲಿ ಸರಕಾರ ಮುಂದಡಿ ಇಡಬೇಕಾಗಿತ್ತು. ಇಂತಹದೇ ಪ್ರಕರಣ ಒಂದರಲ್ಲಿ ಮಧ್ಯ ಪ್ರದೇಶದ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿದ ಮೇಲೆ(10.5.22) ರಾಜ್ಯವು ಎಚ್ಚೆತ್ತುಕೊಳ್ಳದೆ ವಿಧಿಯೇ ಇರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಆಗಿನ ಕರ್ನಾಟಕ ಸರಕಾರ ಸರ್ವೋಚ್ಚ ನ್ಯಾಯಾಲಯದ ಕಟ್ಟಾಜ್ಞೆ ಹೊರ ಬಿದ್ದ ಸರಿಸುಮಾರು 12ವರ್ಷಗಳ ನಂತರವಷ್ಟೇ ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗವೊಂದನ್ನು ರಚಿಸಿತು. ಮೂರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಆಯೋಗಕ್ಕೆ ವರದಿ ಸಲ್ಲಿಸಲು ಸರಕಾರ ಆದೇಶಿಸಿರುವುದು ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವುದೋ ಅಥವಾ ಹಿಂದುಳಿದ ವರ್ಗಗಳ ಮೂಗಿಗೆ ತುಪ್ಪ ಸವರುವುದೋ ಯಾವುದೋ ಒಂದು ಕಾರಣ ಸರಕಾರಕ್ಕೆ ಇರಬಹುದು. ಆಯೋಗ ತ್ರಿಸ್ತರ ಪರೀಕ್ಷಾ ಕಾರ್ಯವನ್ನು ಮುಗಿಸಿ 3 ತಿಂಗಳ ಅವಧಿಯಲ್ಲಿ ವರದಿ ನೀಡಲು ಸರಕಾರ ಅಪ್ಪಣೆ ವಿಧಿಸಿತ್ತು.

ಆದರೆ ಆಯೋಗ 90 ದಿನಗಳವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ(ಮಧ್ಯಂತರ?) ಸಲ್ಲಿಸಿ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿ ಬಿಟ್ಟಿತು! ಆಯೋಗಕ್ಕೆ ಪ್ರಾಯೋಗಿಕ ದತ್ತಾಂಶಗಳು ಸ್ವಲ್ಪವೇ ಅವಧಿಯಲ್ಲಿ ಎಲ್ಲಿ ಸಿಕ್ಕಿದವು ಎಂಬುದೇ ಆಶ್ಚರ್ಯ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಸರಕಾರವೂ ಅದನ್ನು ಬಹಿರಂಗಗೊಳಿಸಲಿಲ್ಲ. ಈ ಕುರಿತು ಯಾವುದೇ ರಾಜಕೀಯ ಪಕ್ಷಗಳೂ ಒತ್ತಾಯಿಸುವ ಗೊಡವೆಗೆ ಹೋಗಲಿಲ್ಲ. ಮಧ್ಯಂತರ (?) ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಂತಿಮ ವರದಿಯನ್ನೂ ಸರಕಾರಕ್ಕೆ ಆಯೋಗ ಸಲ್ಲಿಸಿತು. ಸರಕಾರವಂತೂ ನ್ಯಾ.ಭಕ್ತ ವತ್ಸಲ ವರದಿಯನ್ನು ಅಂಗೀಕರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಕೂಡ ಸಾರ್ವಜನಿಕರ ಗಮನಕ್ಕೆ ತರಲೇ ಇಲ್ಲ.

ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಕಟುವಾದ ಮಾತಿನಲ್ಲಿ ಹೇಳಿತ್ತು. ನ್ಯಾ. ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಈ ವಿಷಯದಲ್ಲಿ ಸರಕಾರ ಮಹಾಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಗ್ಗತ್ತಲೆಯಲ್ಲಿಟ್ಟು ಬಿಟ್ಟಿತು. ಪತ್ರಿಕೆಗಳಲ್ಲಿ ಬಂದ ವರದಿಯನ್ವಯ ರಾಜಕೀಯ ಮೀಸಲಾತಿಗಾಗಿ, ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಮೀಸಲಾತಿಗೆ ವಿಂಗಡಿಸಿದ್ದ ಪ್ರವರ್ಗಗಳನ್ನು 1996ರಲ್ಲಿಯೇ ಎ ಮತ್ತು ಬಿ ವರ್ಗಗಳೆಂದು ವಿಂಗಡಿಸಲಾಗಿತ್ತು. ಆ ಎರಡೂ ವರ್ಗಗಳನ್ನು 4 ವರ್ಗಗಳಾಗಿ ವಿಂಗಡಿಸಲಾಗಿದೆ ಎಂಬುದಷ್ಟೇ ಬೆಳಕಿಗೆ ಬಂತು.

ಆಯೋಗ ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಹೊಸ ಸರಕಾರ ಅಧಿಕಾರಕ್ಕೆ ಬಂದಿತು. ಹೊಸ ಸರಕಾರ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲೇ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸುವ ದಿಸೆಯಲ್ಲಿ ಕಾರ್ಯ ಮಗ್ನವಾಗಿ ಬಿಬಿಎಂಪಿ ವಾರ್ಡ್ ವಿಂಗಡಣೆಗಾಗಿ ಸಮಿತಿ ರಚಿಸಿತು. ಹಾಗೆಯೇ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡಣೆಗಾಗಿಯೂ ಸಮಿತಿ ರಚಿಸಿತು. ಬಿಬಿಎಂಪಿ ಮಾತ್ರ ಈಗಾಗಲೇ ಸರಕಾರಕ್ಕೆ ವಾರ್ಡ್ಗಳನ್ನು ವಿಂಗಡಿಸಿ ವರದಿ ನೀಡಿದೆ. ಜಿಲ್ಲಾ ಪಂಚಾಯತ್ ಕ್ಷೇತ್ರ ವಿಂಗಡಣಾ ಸಮಿತಿಯು, ಕರಡನ್ನು ಆಕ್ಷೇಪಣೆಗಾಗಿ ಅಧಿಸೂಚಿಸಿ, ಆಕ್ಷೇಪಣೆಗಳನ್ನು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ.

ಹೊಸ ಸರಕಾರವು ಕೂಡ ನ್ಯಾ.ಭಕ್ತವತ್ಸಲ ಆಯೋಗವು ನೀಡಿರುವ ವರದಿಯನ್ನು ಸಾರ್ವಜನಿಕ ಅವಗಾಹನೆಗೂ ತರಲಿಲ್ಲ ಹಾಗೂ ವರದಿ ಒಪ್ಪಿಗೆ ಬಗ್ಗೆಯೂ ಏನೂ ಹೇಳದೇ ಕಳೆದ 5ನೇ ತಾರೀಕಿನಂದು ಮಂತ್ರಿ ಮಂಡಲದಲ್ಲಿ ನ್ಯಾ.ಭಕ್ತವತ್ಸಲ ವರದಿ ಬಗ್ಗೆ ಕೆಲವು ನಿರ್ಣಯ ತೆಗೆದುಕೊಂಡಿರುವುದು ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿದೆ.

ಸ್ವೀಕೃತ ಮುಖ್ಯ ಶಿಫಾರಸು:

►ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ನೀಡಿದರೂ ಒಟ್ಟಾರೆ ಮೀಸಲಾತಿಯು ಶೇ.50 ಮೀರದಿರುವಂತೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಮುಂದುವರಿಸಿಕೊಂಡು ಹೋಗಬೇಕು.

ತಿರಸ್ಕೃತ ಮುಖ್ಯ ಶಿಫಾರಸುಗಳು:

►ಹಿಂದುಳಿದ ವರ್ಗಗಳ ಪ್ರವರ್ಗ ಎ ಮತ್ತು 2 ಬಿಯನ್ನು 4 ವರ್ಗಗಳಾಗಿ ವಿಂಗಡಿಸಿ ರಾಜಕೀಯ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ನೀಡಲು ಕ್ರಮ ಕೈಗೊಳ್ಳಬೇಕು.

►ರಾಜಕೀಯ ಮೀಸಲಾತಿ ನೀಡಿದ್ದರೂ ಅದು ಸಿಗದೇ ಇರುವ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಆಯೋಗದ ಶಿಫಾರಸ್ಸನ್ನು ಸರಕಾರ ಒಪ್ಪಿಕೊಂಡಿಲ್ಲ.

►ಹಿಂದುಳಿದ ಜಾತಿ ಮತ್ತು ಉಪಜಾತಿ ಸೇರಿ 802 ಜಾತಿಗಳಿದ್ದು ಅವುಗಳಲ್ಲಿ 156 ಜಾತಿಗಳು ಮಾತ್ರ ರಾಜಕೀಯ ಪ್ರಾತಿನಿಧ್ಯ ಪಡೆದಿವೆ ಎಂದು ಆಯೋಗವು ಹೇಳಿ, ಪ್ರವರ್ಗ-1 ಮತ್ತು ಪ್ರವರ್ಗ-2ಎ ಅನ್ನು 1,2,3,4 ಎಂದು ಮರು ವರ್ಗೀಕರಿಸಬೇಕು. ಶೇ. 33ರಷ್ಟು ಮೀಸಲಾತಿ ಪೈಕಿ ಮೊದಲ ಎರಡು ಪ್ರವರ್ಗಗಳಿಗೆ ತಲಾ ಶೇ. 9.9ರಂತೆ ಮತ್ತು ಪ್ರವರ್ಗ- 3 ಮತ್ತು 4ಕ್ಕೆ ತಲಾ ಶೇ. 6.6ರಂತೆ ಹಂಚಿಕೆ ಮಾಡಬಹುದು ಎಂಬುದಕ್ಕೆ ಅಸಮ್ಮತಿ.

ಸರಕಾರದ ಈ ತೀರ್ಮಾನಗಳನ್ನು ಗಮನಿಸಿದರೆ ಆಯೋಗ ಏನು ವರದಿ ಸಲ್ಲಿಸಿದೆ ಮತ್ತು ಸರಕಾರ ಯಾವುದನ್ನು ಸ್ವೀಕರಿಸಿದೆ ಎಂಬುದು ಸ್ಪಷ್ಟವಾಗಿ ಸಾರ್ವಜನಿಕರಿಗೆ ತಿಳಿಯುವುದಿಲ್ಲ. ಆಯೋಗದ ವರದಿ ಮತ್ತು ಸರಕಾರದ ತೀರ್ಮಾನವನ್ನು ತೌಲನಿಕವಾಗಿ ನೋಡಿದರಷ್ಟೇ ಗೊತ್ತಾಗುತ್ತದೆ. ಸರಕಾರವೇ ಹೇಳಿರುವ ಹಾಗೆ ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ಸಿಗುವುದಿಲ್ಲ. ಪರಿಶಿಷ್ಟ ವರ್ಗಗಳು ಹೆಚ್ಚಿರುವ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಶೇಕಡಾವಾರು ಮೀಸಲಾತಿ ತೀರಾ ಕಡಿಮೆಯಾಗುವ ಸಾಧ್ಯತೆ ಇದೆ.

ನ್ಯಾ. ಭಕ್ತವತ್ಸಲ ಆಯೋಗವು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಆದೇಶದಂತೆ, ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸದಿರುವುದು ಕಂಡು ಬರುತ್ತದೆ. ಪರಿಸ್ಥಿತಿ ಹೀಗಿರುವಲ್ಲಿ ಸರಕಾರವು, ನ್ಯಾಯಾಲಯದ ಆದೇಶದಂತೆ ಆಯೋಗವು ನಡೆದುಕೊಂಡಿಲ್ಲವೆಂದು ಆಯೋಗದ ವರದಿಯನ್ನು ತಿರಸ್ಕರಿಸಬಹುದಾಗಿತ್ತು. ಆದರೆ ಸರಕಾರವು ಈ ವಿಷಯವನ್ನು ಗಮನಿಸಿದೆಯೋ ಅಥವಾ ಇಲ್ಲವೋ ತಿಳಿಯದು. ಈಗಾಗಲೇ, ರಾಜಕೀಯವಾಗಿ ಹಿಂದುಳಿದವರು ಎಂದು ಹೇಳಲಾಗುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರುವ, ಸಮೂಹ ಬಿ ಯಲ್ಲಿರುವ ಹಾಗೂ ರಾಜಕೀಯವಾಗಿ ಮುಂದೆ ಬಂದಿರುವ ಸಮುದಾಯಗಳನ್ನು ಕೈ ಬಿಡುವ ಮನಸ್ಸಿಲ್ಲದೆ ಇಂತಹ ತೀರ್ಮಾನಗಳನ್ನು ಸರಕಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಒಂದು ವೇಳೆ ಸರಕಾರ ತನ್ನ ತೀರ್ಮಾನವೇ ಸರಿ ಎಂದು ಪ್ರತಿಪಾದಿಸ ಹೊರಟರೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದನ್ನು ಬಿಟ್ಟು ಬೇರಾವ ಮಾರ್ಗವೂ ನಿಜ ಅರ್ಥದಲ್ಲಿ ರಾಜಕೀಯವಾಗಿ ಹಿಂದುಳಿದವರಿಗೆ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಕೆ.ಎನ್. ಲಿಂಗಪ್ಪ

contributor

Similar News