‘ಆಹಾರ ಭದ್ರತೆ v/s ಆಹಾರ-ಪರಿಸರ’: ಸಾರ್ವಭೌಮತೆ ಎಂಬ ದುರಂತದ ಕುರಿತು...

ಭಾರತದ ಹಸಿರುಕ್ರಾಂತಿಯ ಹರಿಕಾರ, ಪ್ರಾಮಾಣಿಕ ರೈತ ಮಿತ್ರ ಸ್ವಾಮಿನಾಥನ್ ಅವರಿಗೆ ಅಂತಿಮ ನಮನ ಸಲ್ಲಿಸುವ ಈ ಹೊತ್ತಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಜಾಗತಿಕ ಆಹಾರ ಭದ್ರತೆಯ ಹೆಸರಿನಲ್ಲಿ ಭಾರತದ ಕೃಷಿ ವ್ಯವಸ್ಥೆಯ ಮೇಲೆ ಮತ್ತೊಂದು ಯೋಜಿತ ದಾಳಿಗೆ ಸಿದ್ಧವಾಗುತ್ತಿವೆ. ಆದ್ದರಿಂದ ಹಸಿರುಕ್ರಾಂತಿಯನ್ನು ಒಂದು ಉತ್ಪಾದನಾ ಹೆಚ್ಚಳದ ತಂತ್ರಜ್ಞಾನವನ್ನಾಗಿ ಮಾತ್ರವಲ್ಲದೆ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳ ಹಾಗೂ ಅದರ ಬೆಂಬಲಕ್ಕಿರುವ ಪಾಶ್ಚಿಮಾತ್ಯ ಸರಕಾರಗಳ ರಾಜಕೀಯ ಆರ್ಥಿಕ ಸಾಧನವನ್ನಾಗಿ ಅರ್ಥಮಾಡಿಕೊಂಡರೆ ಮಾತ್ರ ಪ್ರಸಕ್ತ ಸಂದರ್ಭದ ರಾಜಕೀಯ-ಆರ್ಥಿಕತೆಯೂ ಅರ್ಥವಾದೀತು.

Update: 2023-10-04 06:50 GMT

ಭಾಗ-1

ಇತೀಚಿನ ದಿನಗಳಲ್ಲಿ ಭಾರತೀಯ ರೈತಾಪಿಯ ಹಿತಾಸಕ್ತಿಯನ್ನು ಕಾಪಾಡಲು ತಮ್ಮ ವಿದ್ವತ್ತನ್ನು ಧಾರೆ ಎರೆದಿದ್ದ ಭಾರತದ ಹೆಸರಾಂತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಸೆಪ್ಟ್ಟಂಬರ್ 28ರಂದು ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು. ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಭಾರತದ ರೈತಾಪಿ ನಿರಂತರವಾಗಿ ನಡೆಸುತ್ತಿದ್ದ ಹೋರಾಟದಲ್ಲಿ ಡಾ. ಎಂ.ಎಸ್. ಸ್ವಾಮಿನಾಥನ್ ಸೂತ್ರವೆಂಬುದು ರೈತಾಪಿಯ ಉಳಿವಿನ ಘೋಷಣೆಯಾಗಿಯೇ ಮಾರ್ಪಟ್ಟಿತ್ತು.

ಸ್ವಾಮಿನಾಥನ್ ಅವರು ತಮ್ಮ ನೇತೃತ್ವದ ಕೃಷಿ ಆಯೋಗದ ಮೂಲಕ ರೈತರ ಬೆಳೆಗಳ ಬೆಲೆಯನ್ನು ಅಂದಾಜು ಮಾಡಲು ಮುಂದಿಟ್ಟ ಸಿ2+50 ಶೇ. (ರೈತರ ಒಳಸುರಿ ವೆಚ್ಚ+ರೈತ ಕುಟುಂಬದ ಶ್ರಮ+ಭೂಮಿಯ ಬಾಡಿಗೆ+ ಭೂಮಿಯ ಸವಕಳಿ..ಇತ್ಯಾದಿಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ರೈತರ ಕೃಷಿ ವೆಚ್ಚದ ಲೆಕ್ಕಾಚಾರ ಮಾಡುವ ಸೂತ್ರ) ಸೂತ್ರ ಅತ್ಯಂತ ವೈಜ್ಞಾನಿಕವಾಗಿತ್ತು ಮತ್ತು ರೈತರ ಬದುಕನ್ನು ಸಹನೀಯಗೊಳಿಸುವಂತಿತ್ತು.

ಈ ಸೂತ್ರವನ್ನು 2008ರಲ್ಲೇ ಯುಪಿಎ-1 ಸರಕಾರದ ಮುಂದಿಟ್ಟರೂ ಯುಪಿಎ-1, ಯುಪಿಎ-2 ಸರಕಾರಗಳು ಅದರ ಬಗ್ಗೆ ಸ್ಮಶಾನ ಮೌನ ಅನುಸರಿಸಿದವು.

ಇನ್ನು ಮೋದಿ ಸರಕಾರವಂತೂ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂ ಕೋರ್ಟಿನಲ್ಲೇ ಯಾವ ಕಾರಣಕ್ಕೂ ಸ್ವಾಮಿನಾಥನ್ ಸೂತ್ರ ಪಾಲಿಸಲು ಸಾಧ್ಯ ಇಲ್ಲ ಎಂದು ಘೋಷಿಸಿಬಿಟ್ಟಿತು..

ಅದೇನೇ ಇರಲಿ.

ರೈತರ ಒಟ್ಟಾರೆ ಕಷ್ಟವನ್ನು ಸಮಗ್ರವಾಗಿ ಪರಿಗಣಿಸಿ ಪರಿಣಾಮಕಾರಿಯಾಗಿ ಸರಕಾರ ಹಾಗೂ ಜಗತ್ತಿನ ಮುಂದಿಟ್ಟಿದ್ದಕ್ಕೆ ರೈತ ಸಮುದಾಯ ಸ್ವಾಮಿನಾಥನ್ ಅವರಿಗೆ ಋಣಿಯಾಗಿದೆ.

ಇದಲ್ಲದೆ ಸದ್ಯ ಇರುವ ‘ಮಾರುಕಟ್ಟೆ ಅವಲಂಬಿತ ಕೃಷಿ ವ್ಯವಸ್ಥೆಯ ಚೌಕಟ್ಟಿನೊಳಗೆ’ ಸ್ವಾಮಿನಾಥನ್ ಅವರು ಕೃಷಿ ಬದುಕು ಹಾಗೂ ಸಣ್ಣ ರೈತಾಪಿಯ ಹಿತಾಸಕ್ತಿಯ ಬಗ್ಗೆ ಹಲವು ರೈತ ಪರ ಸಲಹೆಗಳನ್ನು ಕೊಟ್ಟಿದ್ದರು.

ವಿಪರ್ಯಾಸವೆಂದರೆ.

ರೈತಾಪಿಯನ್ನು ಅದರಲ್ಲೂ ಸಣ್ಣ ರೈತಾಪಿಯನ್ನು ಇಂತಹ ಮಾರುಕಟ್ಟೆ ಚಕ್ರದೊಳಗೆ ತಂದದ್ದೂ ಸ್ವಾಮಿನಾಥನ್ ಅವರ ತಾಂತ್ರಿಕ ನೇತೃತ್ವದ ಹಾಗೂ ಅಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಅಮೆರಿಕ ನಿರ್ದೇಶಿತ ಹಸಿರು ಕ್ರಾಂತಿಯೇ.

ಹೀಗಾಗಿ ಹಸಿರು ಕ್ರಾಂತಿ ಎಂಬುದು ಆಹಾರ ಭದ್ರತೆಯ ಹೆಸರಲ್ಲಿ ಆಹಾರ ಮತ್ತು ಭಾರತವು ಆಹಾರ ಮತ್ತು ಕೃಷಿ ಸಾರ್ವಭೌಮತೆಯನ್ನು ಕಳೆದುಕೊಂಡ ದುರಂತ ಕಥೆಯೂ ಹೌದು.

ಮತ್ತೊಂದು ವಿಪರ್ಯಾಸವೆಂದರೆ ಭಾರತದ ಹಸಿರುಕ್ರಾಂತಿಯ ಹರಿಕಾರ, ಪ್ರಾಮಾಣಿಕ ರೈತ ಮಿತ್ರ ಸ್ವಾಮಿನಾಥನ್ ಅವರಿಗೆ ಅಂತಿಮ ನಮನ ಸಲ್ಲಿಸುವ ಈ ಹೊತ್ತಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಜಾಗತಿಕ ಆಹಾರ ಭದ್ರತೆಯ ಹೆಸರಿನಲ್ಲಿ ಭಾರತದ ಕೃಷಿ ವ್ಯವಸ್ಥೆಯ ಮೇಲೆ ಮತ್ತೊಂದು ಯೋಜಿತ ದಾಳಿಗೆ ಸಿದ್ಧವಾಗುತ್ತಿವೆ. ಆದ್ದರಿಂದ ಹಸಿರುಕ್ರಾಂತಿಯನ್ನು ಒಂದು ಉತ್ಪಾದನಾ ಹೆಚ್ಚಳದ ತಂತ್ರಜ್ಞಾನವನ್ನಾಗಿ ಮಾತ್ರವಲ್ಲದೆ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳ ಹಾಗೂ ಅದರ ಬೆಂಬಲಕ್ಕಿರುವ ಪಾಶ್ಚಿಮಾತ್ಯ ಸರಕಾರಗಳ ರಾಜಕೀಯ ಆರ್ಥಿಕ ಸಾಧನವನ್ನಾಗಿ ಅರ್ಥಮಾಡಿಕೊಂಡರೆ ಮಾತ್ರ ಪ್ರಸಕ್ತ ಸಂದರ್ಭದ ರಾಜಕೀಯ-ಆರ್ಥಿಕತೆಯೂ ಅರ್ಥವಾದೀತು.

ಹಸಿರು ಕ್ರಾಂತಿಯೋ? ಅಮೆರಿಕದ ಹೊಸ ಉರುಳೋ?

ವಾಸ್ತವವಾಗಿ ಹಸಿರು ಕ್ರಾಂತಿಯು ದೇಶದ ಆಹಾರ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಿದರೂ, ಜನರ ಹಸಿವನ್ನು ಸಂಪೂರ್ಣವಾಗಿ ನಿವಾರಿಸಲಿಲ್ಲ. ಏಕೆಂದರೆ ಹಸಿವು ಉತ್ಪಾದನೆಯ ಕೊರತೆಗಿಂತ ಹೆಚ್ಚು ವಿತರಣೆಯಲ್ಲಿನ ಅಸಮಾನತೆಯಿಂದಾಗಿ ಏರ್ಪಡುವ ರಾಜಕೀಯ ಸಮಸ್ಯೆ.

ಆದರೆ ಆ ವಿತರಣಾ ಅಸಮಾನತೆಯ ಜೊತೆಜೊತೆಗೆ ಹಸಿರು ಕ್ರಾಂತಿ ತನ್ನ ಉತ್ಪಾದನಾ ಹಾಗೂ ತಂತ್ರಜ್ಞಾನ ಮಾದರಿಯ ಕಾರಣದಿಂದಾಗಿಯೂ ಭಾರತದ ಕೃಷಿ ವ್ಯವಸ್ಥೆಯನ್ನು ಕೃಷಿ ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಅಮೆರಿಕ ನೇತೃತ್ವದ ಶ್ರೀಮಂತ ದೇಶಗಳ ಅವಲಂಬಿತ ವಸಾಹತುವಾಗಿಸಿಬಿಟ್ಟಿತು..

ಹಾಗೂ ನಿಧಾನವಾಗಿ ರೈತರನ್ನು ದಿವಾಳಿಯಾಗಿಸಿ, ಪರಿಸರವನ್ನು ವಿನಾಶದತ್ತ ತಳ್ಳಿತು... ಹೀಗಾಗಿ ಹಸಿರು ಕ್ರಾಂತಿ ಎಂಬುದು ಆಗ ವರವಂತೆ ಭಾಸವಾಗಿದ್ದರೂ ಈಗ ಶಾಪದಂತೆ ಕಾಡುತ್ತಿದೆ. ಆಗ ವರ ಎಂದು ಭಾವಿಸಿದ ಹಲವರು ಈಗ ಅದರ ಹಿಂದಿನ ಘೋರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಡಾ. ಸ್ವಾಮಿನಾಥನ್ ಅದರ ಬಗ್ಗೆ ಆಗಾಗ ಕೆಲವು ಮರುಯೋಚನೆಗಳ ಉದ್ಗಾರವನ್ನು ಮಾಡಿದ್ದರೂ ಸಮಗ್ರವಾಗಿ ಪುನರಾವಲೋಕನದಲ್ಲಿ ತೊಡಗಿಕೊಂಡಂತೆ ಕಾಣುವುದಿಲ್ಲ...

ನಾರ್ಮನ್ ಬೊರ್ಲಾಗ್ ಕಂಡುಹಿಡಿದ ಎರಡಲಗಿನ ಹಸಿರು ಶಸ್ತ್ರ!

ಈ ‘ಹಸಿರು ಕ್ರಾಂತಿ’ಯ ಅಧ್ವರ್ಯು ನಾರ್ಮನ್ ಬೊರ್ಲಾಗ್. ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ಗ್ರಾಮೀಣ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ ನಾರ್ಮನ್ ಬೊರ್ಲಾಗ್ ಎಂಬ ಕೃಷಿ ವಿಜ್ಞಾನಿ 2009 ಸೆಪ್ಟಂಬರ್ 13ರಂದು ತನ್ನ 95ನೇ ವಯಸ್ಸಿನಲ್ಲಿ ಮೃತರಾದರು. ನಾರ್ಮನ್ ಬೊರ್ಲಾಗ್ ಯಾರು ಎಂದು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

‘ಹಸಿರು ಕ್ರಾಂತಿ’ಯ ಹರಿಕಾರ ಎಂದು ಬಣ್ಣಿಸಲಾಗುವ ಈ ವಿಜ್ಞಾನಿ ಯಾರ ಸ್ನೇಹಿತ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಪಡೆಯಬೇಕೆಂದರೆ ನಮ್ಮ ದೇಶದ ಅಭಿವೃದ್ಧಿ ಮಾದರಿಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಮತ್ತು ನಿಲುವುಗಳು ಬೇಕಾಗುತ್ತವೆ. ಏಕೆಂದರೆ ನಮ್ಮ ದೇಶದ ರೈತಾಪಿ ಇಂದು ತಲುಪಿರುವ ಸ್ಥಿತಿಗೆ ಈ ಮಹಾಶಯರು ಪರಿಚಯಿಸಿದ ಹಸಿರುಕ್ರಾಂತಿ ಮತ್ತು ಕೃಷಿ ಪದ್ಧತಿಯೇ ಕಾರಣ. ಹೀಗಾಗಿ ನಾರ್ಮನ್ ಬೊರ್ಲಾಗ್ ಭಾರತದ ರೈತಾಪಿಯ ಸ್ನೇಹಿತನೋ ಅಥವಾ ಶತ್ರುವೋ ಎಂಬ ತೀರ್ಮಾನವು ಭಾರತದ ರೈತಾಪಿಯ ಪರಿಸ್ಥಿತಿ ಮತ್ತು ಭಾರತದ ಆಹಾರ ಭದ್ರತೆಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಮ್ಮ ನಮ್ಮ ಅಭಿಪ್ರಾಯಗಳನ್ನೇ ಆಧರಿಸಿರುತ್ತದೆ.

ಭಾರತ ಸರಕಾರದ ಪ್ರಕಾರ ಭಾರತದ ಆಹಾರ ಭದ್ರತೆ ಮೊದಲಿಗಿಂತ ಉತ್ತಮಗೊಂಡಿದೆ. ಭಾರತದ ರೈತಾಪಿ ಮೊದಲಿಗಿಂತ ಹೆಚ್ಚು ಸುಖವಾಗಿದ್ದಾರೆ. ಆದ್ದರಿಂದಲೇ ಭಾರತದ ಬಡವರ ಸಂಖ್ಯೆ ಹಸಿರು ಕ್ರಾಂತಿ ಪರಿಚಯಿಸುವ ಮೊದಲು ಶೇ. 50 ಇದ್ದದ್ದು ಈಗ ಶೇ. 27ಕ್ಕೆ ಇಳಿದಿದೆ. ಗ್ರಾಮೀಣ ರೈತಾಪಿಯ ಕೊಳ್ಳುವ ಶಕ್ತಿ ಹೆಚ್ಚಿದೆ, ಇತ್ಯಾದಿ, ಇತ್ಯಾದಿ.

ಇದಕ್ಕೆಲ್ಲಾ ಭಾರತದ ಕೃಷಿ ಪದ್ಧತಿಯಲ್ಲಿ ಸರಕಾರ ನಾರ್ಮನ್ ಬೊರ್ಲಾಗ್ ಕಂಡುಹಿಡಿದ ಇಳುವರಿ ಪದ್ಧತಿಯನ್ನು ಜಾರಿಗೆ ತಂದಿದ್ದೇ ಕಾರಣ. ಆ ಪದ್ಧತಿಯಲ್ಲಿ ಹೆಚ್ಚು ಇಳುವರಿ ಕೊಡುವ ಎಚ್‌ವೈವಿ ಬೀಜಗಳನ್ನು, ಅದಕ್ಕೆ ತಕ್ಕಂತೆ ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನು ಬಳಸುತ್ತಾ ಮೊದಲಿಗಿಂತ ಹತ್ತಾರುಪಟ್ಟು ಹೆಚ್ಚು ಇಳುವರಿಯನ್ನು ಹೆಚ್ಚಿಸಿಕೊಂಡಿದ್ದೇ ಕಾರಣ ಎಂಬ ವಾದವನ್ನು ಮಂಡಿಸಲಾಗುತ್ತದೆ. ಈ ವಾದವನ್ನು ಕೇವಲ ಭಾರತ ಸರಕಾರ ಮಾತ್ರವಲ್ಲ, ಏಶ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಎಲ್ಲಾ ಬಡ ದೇಶಗಳ ಸರಕಾರಗಳು ಮಂಡಿಸುತ್ತವೆ.

ಈ ವಾದದ ಒಟ್ಟು ಸಾರಾಂಶವೇನೆಂದರೆ ಆಹಾರ ಉತ್ಪಾದನೆಯ ಕುಸಿತದಿಂದ ಆಹಾರಕ್ಕೂ ಅಮೆರಿಕ ಮತ್ತಿತರ ದೇಶಗಳ ಸರಕಾರವನ್ನೇ ಅವಲಂಬಿಸುವಂತಹ ದೈನೇಸಿ ಪರಿಸ್ಥಿತಿಯಲ್ಲಿದ್ದ ದೇಶಗಳನ್ನು ಆಹಾರ ಸ್ವಾವಲಂಬಿ ಮಾಡಿದ್ದೇ ನಾರ್ಮನ್ ಬೊರ್ಲಾಗ್‌ನ ಹಸಿರುಕ್ರಾಂತಿ. ಅದಕ್ಕೆ ಪೂರಕವಾಗಿ ಅವರು 1965ರಲ್ಲಿ ಭಾರತ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಮತ್ತು 1950ರಲ್ಲಿ ಮೆಕ್ಸಿಕೋ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಉದಾಹರಿಸಿ ಹಸಿರು ಕ್ರಾಂತಿಯ ನಂತರ ಭಾರತ ಮತ್ತು ಮೆಕ್ಸಿಕೋದಂತಹ ದೇಶಗಳು ಹೇಗೆ ಕೆಲವೇ ವರ್ಷಗಳಲ್ಲಿ ಆಹಾರ ಸ್ವಾವಲಂಬಿಯಾಗಿದ್ದು ಮಾತ್ರವಲ್ಲದೆ ಹೆಚ್ಚುವರಿ ಉತ್ಪಾದನೆ ಮಾಡಿ ವಿದೇಶಕ್ಕೂ ರಫ್ತು ಮಾಡುವಂತಾಯಿತು ಎಂದು ಅಂಕಿಅಂಶಗಳನ್ನು ಮಂಡಿಸುತ್ತಾರೆ.

ಆಹಾರ ಅಭಾವ ತೀರಿದರೂ, ಹಸಿವು ತೀರದ ಪವಾಡ

ಭಾರತದ ಗೋಡೌನುಗಳಲ್ಲಿ ಅಪಾರ ಆಹಾರ ಧಾನ್ಯ ಸಂಗ್ರಹಣೆ ಇರುವುದು ನಿಜ. ಈ ಪ್ರಮಾಣದ ಆಹಾರ ಉತ್ಪಾದನೆ ಸಾಧ್ಯವಾದದ್ದು ಹಸಿರುಕ್ರಾಂತಿಯಿಂದ ಎಂಬುದೂ ಸತ್ಯವೇ. ಆದರೆ ಈ ಅಪಾರ ಪ್ರಮಾಣದ ಆಹಾರ ಉತ್ಪಾದನೆಯಿಂದ ರೈತಾಪಿಯ ಬಾಳು ಮೊದಲಿಗಿಂತ ಹಸನು ಆಗಿದೆಯೇ ಎಂಬ ಪ್ರಶ್ನೆಗೆ ಸರಕಾರವೂ ಉತ್ತರ ಕೊಡುವುದಿಲ್ಲ. ಬೊರ್ಲಾಗ್‌ಕೂಡ ಸಾಯುವವರೆಗೆ ಉತ್ತರ ಕೊಡಲಿಲ್ಲ.

ಭಾರತದ ಕೃಷಿಯ ಕಥೆ ಈ ದೇಶದ ಅಭಿವೃದ್ಧಿ ಮಾದರಿಯಂತೆ ಉಳ್ಳವರಿಗೆ ಅಮೃತವನ್ನೂ ಇಲ್ಲದವರಿಗೆ ಹಾಲಾಹಲವನ್ನೂ ಉಣಿಸುತ್ತಾ ಬರುತ್ತಿದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಆಹಾರ ಸಮೃದ್ಧಿಯಿದೆ. ಆದರೆ ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಪ್ರಮಾಣದ ಬಳಕೆ ಮಾತ್ರ ಕಡಿಮೆಯಾಗುತ್ತಲೇ ಬರುತ್ತಿದೆ.

ಹಸಿರುಕ್ರಾಂತಿ ಪರಿಚಯವಾಗುವ ಮುನ್ನ - ಅಂದರೆ 1970ರಲ್ಲಿ - ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಬಳಕೆ ವಾರ್ಷಿಕ 175 ಕೆಜಿ ಇದ್ದದ್ದು ಈಗ 160ಕೆಜಿಗೆ ಕುಸಿದಿದೆ. ಇದಾದದ್ದು ಆಹಾರದ ಉತ್ಪಾದನೆಯ ಕೊರತೆಯಿಂದಲ್ಲ. ಹೀಗಾಗಿ ಹಸಿರುಕ್ರಾಂತಿಯು ಏಕಕಾಲದಲ್ಲಿ ಆಹಾರ ಉತ್ಪಾದನೆಯನ್ನು ಜಾಸ್ತಿ ಮಾಡಿದ್ದು ನಿಜವಾದರೂ ಜನತೆಯ ಬಡತನವನ್ನೂ ಜಾಸ್ತಿ ಮಾಡಿದ್ದು ನಿಜ.

ಈ ಪ್ರಕ್ರಿಯೆ ಹಸಿರು ಕ್ರಾಂತಿಯ ತಂತ್ರಜ್ಞಾನದಲ್ಲೇ ಅಡಕವಾಗಿದೆ. ಅಧಿಕ ಇಳುವರಿ ಬೀಜವನ್ನು ಬಿತ್ತನೆ ಮಾಡಿದ ನಂತರ ಅದು ಅಧಿಕ ಇಳುವರಿ ಕೊಡಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕು. ಇದಕ್ಕೆ ಕಾಸು ಖರ್ಚಿಲ್ಲದೆ ಕೊಟ್ಟಿಗೆಯಲ್ಲಿ ಸಿಗುತ್ತಿದ್ದ ಸಗಣಿ ಗೊಬ್ಬರ ಸಾಕಾಗುವುದಿಲ್ಲ. ಅಲ್ಲದೆ ಈ ಬೀಜಗಳು ಸಹಜವಾಗಿಯೇ ಹಲವಾರು ಹೊಸ ಬಗೆಯ ಕ್ರಿಮಿ ಮತ್ತು ಕೀಟಗಳನ್ನು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನೂ ಆಹ್ವಾನಿಸುತ್ತವಾದ್ದರಿಂದ ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನೂ ಕೊಳ್ಳಬೇಕು. ಅಲ್ಲದೆ ಸಾಂಪ್ರದಾಯಿಕ ಬೀಜಗಳಿಗಿಂತ ಈ ಹೈಬ್ರಿಡ್ ಬೀಜಗಳು ಹೆಚ್ಚು ನೀರನ್ನೂ ಕಬಳಿಸುತ್ತವೆ. ಹೀಗಾಗಿ ಇಳುವರಿ ಮೊದಲಿಗಿಂತ ಐದು ಪಟ್ಟು ಹೆಚ್ಚಾದರೂ ಒಂದು ಕ್ವಿಂಟಾಲ್ ಇಳುವರಿಗೆ ರೈತ ಹೂಡುತ್ತಿದ್ದ ಹೂಡಿಕೆಯೂ ಐದು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಸಾರಾಂಶದಲ್ಲಿ ರೈತನ ಆರ್ಥಿಕತೆಯಲ್ಲಿ ಏರಿಕೆಗಿಂತ ಇಳಿಕೆ ಮತ್ತು ಬರ್ಬಾದಿಯೇ ಹೆಚ್ಚಾಗುತ್ತದೆ.

ಹಸಿರುಕ್ರಾಂತಿಯ ಪ್ರಾರಂಭದ ದಿನಗಳಲ್ಲಿ ಸರಕಾರವೇ ಸಬ್ಸಿಡಿ ದರದಲ್ಲಿ ಇವೆಲ್ಲವನ್ನೂ ಪೂರೈಸುತ್ತಿತ್ತು. ಆದರೆ ಉದಾರೀಕರಣದ ಪ್ರಕ್ರಿಯೆಯಲ್ಲಿ ಸರಕಾರ ಎಲ್ಲಾ ಜನಕಲ್ಯಾಣ ಕಾರ್ಯಕ್ರಮಗಳಿಂದ ಹಿಂದೆಗೆಯುತ್ತಿದ್ದಂತೆ ರೈತಾಪಿ ಇನ್ನಷ್ಟು ಅನಾಥನಾಗಿ ಮಾರುಕಟ್ಟೆಯಲ್ಲಿ ಭಿಕ್ಷುಕನಾದ.

ಅಲ್ಲದೆ ಹಸಿರುಕ್ರಾಂತಿಯನ್ನು ಭಾರತದಂತಹ ದೇಶಗಳಲ್ಲಿ ಅಳವಡಿಸಲು ಸರಕಾರಗಳು ಕೊಡುತ್ತಿದ್ದ ಮತ್ತೊಂದು ಅತಿ ಮುಖ್ಯ ಕಾರಣ ಸ್ವಾವಲಂಬನೆ. ಆದರೆ ಹಸಿರುಕ್ರಾಂತಿ ಜಾರಿಯಾದ ನಾಲ್ಕು ದಶಕಗಳ ನಂತರ ಹಿಂದಿರುಗಿ ನೋಡಿದರೆ ಭಾರತ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿರಬಹುದು. ಆದರೆ ಕೃಷಿ ಪದ್ಧತಿಯ ವಿಷಯದಲ್ಲಿ ಸ್ವಾವಲಂಬಿಯಾಗಿದೆಯೇ? ಖಂಡಿತಾ ಇಲ್ಲ.

ಅದರಲ್ಲೂ ಜಾಗತೀಕರಣವೆಂಬ ಸಾಮ್ರಾಜ್ಯಶಾಹಿ ನೀತಿಗಳನ್ನು ಭಾರತವೂ ಒಳಗೊಂಡಂತೆ ಪ್ರಪಂಚದ ಎಲ್ಲಾ ಬಡದೇಶಗಳು ಜಾರಿಗೆ ತರಲು ಪ್ರಾರಂಭಿಸಿದ ಮೇಲೆ ಭಾರತದ ರೈತಾಪಿ ಬೀಜ, ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳ ವಿಷಯದಲ್ಲೂ ಅಮೆರಿಕದಂತಹ ದೇಶಗಳನ್ನು ಸಂಪೂರ್ಣವಾಗಿ ಅವಲಂಬಿಸಬೇಕಾಗಿದೆ.

ಹೀಗಾಗಿ ಹಸಿರುಕ್ರಾಂತಿ ನಮ್ಮ ಪರಾವಲಂಬನೆಯನ್ನೇನೂ ತಪ್ಪಿಸಲಿಲ್ಲ. ಆದರೆ ಹಸಿರುಕ್ರಾಂತಿಯ ಸಂಪೂರ್ಣ ಲಾಭ ಅನುಭವಿಸಿದ್ದು ಮಾತ್ರ ಅಮೆರಿಕದ ಮಾನ್ಸಾಂಟೋ, ಡು-ಪಾಂಟ್, ಫೋರ್ಡ್, ರಾಕ್‌ಫೆಲ್ಲರ್, ಸಿಬಾ-ಗೈಗಿ, ಕಾರ್ಗಿಲ್‌ನಂತಹ ಗೊಬ್ಬರ, ಬೀಜ ಮತ್ತು ಕ್ರಿಮಿನಾಶಕ ಕಂಪೆನಿಗಳು.

ಎರಡನೇ ಮಹಾಯುದ್ಧದಲ್ಲಿ ಇದೇ ಕಂಪೆನಿಗಳೇ ಹಿಟ್ಲರ್‌ಗೂ ಮತ್ತು ಆತನ ವಿರುದ್ಧ ಯುದ್ಧ ಮಾಡುತ್ತಿದ್ದ ಬ್ರಿಟನ್‌ನಂತಹ ದೇಶಗಳಿಗೂ ಶಸ್ತ್ರಾಸ್ತ್ರಗಳನ್ನೂ, ರಾಸಾಯನಿಕಗಳನ್ನೂ ಸರಬರಾಜು ಮಾಡುತ್ತಿದ್ದವು. ಯುದ್ಧದ ನಂತರ ಅದೇ ಕಂಪೆನಿಗಳೇ ಇದ್ದಕ್ಕಿದ್ದಂತೆ ಕೃಷಿ ವಲಯಕ್ಕೆ ಕಾಲಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿ ಯುದ್ಧಾನಂತರವೂ ತಮ್ಮ ಮಾರುಕಟ್ಟೆಯನ್ನು ಬೇರೊಂದು ರೂಪದಲ್ಲಿ ಉಳಿಸಿಕೊಂಡವು.

ಅದಕ್ಕೆ ಮಾರುಕಟ್ಟೆ ಸೃಷ್ಟಿಸುವ ಹಸಿರು ಕ್ರಾಂತಿ ಜಗತ್ತಿನಾದ್ಯಂತ ಜಾರಿಗೆ ಬಂದದ್ದು ಕಾಕತಾಳೀಯವೇನಲ್ಲ. ಏಕೆಂದರೆ ನಾರ್ಮನ್ ಬೊರ್ಲಾಗ್ ಕೆಲಸ ಮಾಡುತ್ತಿದ್ದದ್ದು ಕೆಮಿಕಲ್ ಸಂಸ್ಥೆಯಾಗಿದ್ದ ಡು-ಪಾಂಟ್‌ನಲ್ಲಿ. ಆತನಿಗೆ ಫೆಲೋಶಿಪ್ ನೀಡಿ ಮೆಕ್ಸಿಕೋದಲ್ಲಿ ತಾವು ನಡೆಸುತ್ತಿದ್ದ ಕೃಷಿ ಸಂಶೋಧನೆಯಲ್ಲಿ ಸಹಾಯ ಮಾಡುವಂತೆ ಆಹ್ವಾನಿಸಿದ್ದು ಇದೇ ರಾಕ್‌ಫೆಲ್ಲರ್ ಕಂಪೆನಿಯೇ!

ಈಗ ಭಾರತ ಮತ್ತೆ ಆಹಾರ ಕೊರತೆಯನ್ನು ಅನುಭವಿಸಲು ಪ್ರಾರಂಭಿಸಿದ್ದು ನಾರ್ಮನ್ ಬೊರ್ಲಾಗ್ ಆದಿಯಾಗಿ ಎಲ್ಲರೂ ಅದಕ್ಕೆ ಜನಸಂಖ್ಯಾ ಸ್ಫೋಟವನ್ನು ಹೊಣೆ ಮಾಡುತ್ತಿದ್ದಾರೆ ಮತ್ತು ಅದನ್ನು ಎದುರಿಸಲು ಎರಡನೇ ಹಸಿರುಕ್ರಾಂತಿಯನ್ನು ಅಂದರೆ ಜೆನಿಟಿಕಲ್ ಮಾಡಿಫೈಡ್ ಕೃಷಿಯೆಂಬ ಅತ್ಯಂತ ವಿನಾಶಕಾರಿ ಪದ್ಧತಿಯನ್ನು ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಜೆನಿಟಿಕಲ್ ಮಾಡಿಫೈಡ್ ಕೃಷಿಯ ಪ್ರಧಾನ ಫಲಾನುಭವಿಗಳೆಲ್ಲಾ ಮತ್ತೆ ಇದೇ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳೇ!

ಹೀಗಾಗಿ ನಾರ್ಮನ್ ಬೊರ್ಲಾಗ್ ಎಂಬ ಒಬ್ಬ ವಿಜ್ಞಾನಿ ಹೇಗೆ ಸರಕಾರಗಳ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಹೊಣೆಗಾರನಾಗುತ್ತಾನೆ ಎಂಬ ಪ್ರಶ್ನೆಯೇ ಅಸಂಬದ್ಧವಾಗುತ್ತದೆ.

ನಾರ್ಮನ್ ಬೊರ್ಲಾಗ್‌ರನ್ನೂ ಒಳಗೊಂಡಂತೆ ಹಸಿರು ಕ್ರಾಂತಿಯೆಂಬ ಯೋಜನೆಯೇ ಎರಡನೇ ಮಹಾಯುದ್ಧದ ನಂತರ ಇಡೀ ಜಗತ್ತನ್ನೇ ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಬೇಕೆಂಬ ಅಮೆರಿಕನ್ ಸಾಮ್ರಾಜ್ಯಶಾಹಿ ಆಸಕ್ತಿಯಿಂದ ಹುಟ್ಟಿಕೊಂಡಿದ್ದು ಎಂಬುದನ್ನು ಗಮನಿಸಿದಾಗ ಹಸಿರುಕ್ರಾಂತಿಯ ಅಸಲಿ ಸ್ವರೂಪ ಇನ್ನಷ್ಟು ಸ್ಪಷ್ಟವಾಗುತ್ತದೆ.

ಹಸಿರುಕ್ರಾಂತಿಯ ನೈಜ ಕಥೆ 1943ರಲ್ಲಿ ರಾಕ್‌ಫೆಲ್ಲರ್ ಸಂಸ್ಥೆಯು ಕೃಷಿ ಪರಿಣಿತರ ಒಂದು ತಂಡವನ್ನು ಮೆಕ್ಸಿಕೋಗೆ ಅಲ್ಲಿನ ಸ್ಥಳೀಯ ಧಾನ್ಯಗಳ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಲು ಕಳಿಸುವುದರ ಮೂಲಕ ಪ್ರಾರಂಭವಾಗುತ್ತದೆ.

ನಾರ್ಮನ್ ಬೊರ್ಲಾಗ್ ಈ ತಂಡಕ್ಕೆ 1944ರಲ್ಲಿ ಸೇರ್ಪಡೆಯಾಗುತ್ತಾರೆ. ರಾಕ್‌ಫೆಲ್ಲರ್ ಈ ಅಧ್ಯಯನವನ್ನು ಕೈಗೆತ್ತಿಕೊಳ್ಳಲು ಪ್ರಧಾನ ಕಾರಣ 1939 ರಲ್ಲಿ ಮೆಕ್ಸಿಕೋದಲ್ಲಿ ಅಧಿಕಾರಕ್ಕೆ ಬಂದಿದ್ದ ಅಧ್ಯಕ್ಷ ಲಜಾರ್ದೋ ಕಾರ್ಡೆನೇಜ್‌ನ ರಾಷ್ಟ್ರೀಯವಾದಿ ಸರಕಾರ ರಾಕ್‌ಫೆಲ್ಲರ್‌ನ ಸ್ಟ್ಯಾಂಡರ್ಡ್ ಆಯಿಲ್ ಕಂಪೆನಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಮತ್ತು ಎರಡನೆಯದಾಗಿ ಆ ದಕ್ಷಿಣಾರ್ಧ ಗೋಳದಲ್ಲಿ ನಾಝಿಗಳ ಕಾಲದಿಂದಲೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಬೇಕೆಂಬ ಸತತ ಪ್ರಯತ್ನ ನಡೆಯುತ್ತಿದ್ದದ್ದು.

ಯುದ್ಧಕ್ಕಿಂತ ಅಭಿವೃದ್ಧಿಪರರೆಂಬ ಮುಖವಾಡ ತಮ್ಮ ಹೂಡಿಕೆಯನ್ನು ಮತ್ತು ಪ್ರಭಾವವನ್ನು ವಿಸ್ತರಿಸಲು ಸಹಾಯ ಮಾಡುತ್ತದೆಂದು ಎರಡನೇ ಮಹಾಯುದ್ಧ ಅವರಿಗೆ ಕಲಿಸಿಕೊಟ್ಟಿತ್ತು.

1956ರ ಸುಮಾರಿಗೆ ಬೊರ್ಲಾಗ್ ತಂಡ ಈ ವಿಶೇಷ ಇಳುವರಿ ಪದ್ಧತಿಯನ್ನು ಕಂಡುಹಿಡಿದಿದ್ದರು. ಅದನ್ನು ನಾಲ್ಕು ವರ್ಷಗಳ ಕಾಲ ಮೆಕ್ಸಿಕೋದ ಮಣ್ಣಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಅಗತ್ಯಗಳೇನೆಂದು ಗುರುತಿಸಲಾಯಿತು. ಈ ಹೈಬ್ರಿಡ್ ಕೃಷಿ ಹೊಸಬಗೆಯ ಬೀಜವನ್ನು ಮಾತ್ರವಲ್ಲದೆ ಬಡದೇಶಗಳ ಸ್ವಾವಲಂಬಿ ಕೃಷಿ ಪದ್ಧತಿಯನ್ನೇ ಸಂಪೂರ್ಣವಾಗಿ ನಾಶಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕಗಳೆಲ್ಲವಕ್ಕೂ ತಮ್ಮ ಮೇಲೆ ಅಂದರೆ ಬಂಡವಾಳಶಾಹಿ ಜಗತ್ತಿನ ಮೇಲೆ ಅವಲಂಬಿಸುವಂತೆ ಮಾಡುತ್ತದೆಂದು ಖಾತ್ರಿ ಪಡಿಸಿಕೊಳ್ಳಲಾಯಿತು.

ಪ್ರಪಂಚವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಯುದ್ಧದ ಅಗತ್ಯವೇ ಇಲ್ಲದ ಮತ್ತೊಂದು ಸಾಧನವಾಗಿ ಹಸಿರುಕ್ರಾಂತಿಯು ಸಾಮ್ರಾಜ್ಯಶಾಹಿಗಳಿಗೆ ದಕ್ಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಶಿವಸುಂದರ್

contributor

Similar News